Tag: ಕಾಲ್ನಡಿಗೆ

  • ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

    ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

    ರಾಯಚೂರು: ನಗರದ ಹತ್ತಿ ಮಿಲ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶದ ಕಾರ್ಮಿಕರು ಲಾಕ್‍ಡೌನ್ ಹಿನ್ನೆಲೆ ನಡೆದುಕೊಂಡೇ ತಮ್ಮ ಊರುಗಳಿಗೆ ಹೊರಟಿದ್ದಾರೆ.

    ಲಾಕ್‍ಡೌನ್ ನಿಂದ ಕಂಗಾಲಾದ ಸುಮಾರು 70 ಜನ ಕಾರ್ಮಿಕರು ಕೆಲಸವಿಲ್ಲದೆ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾರೆ. ಕುಟುಂಬ ಸಮೇತ ಗಂಟುಮೂಟೆ ಕಟ್ಟಿಕೊಂಡು ರಾಯಚೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ. ಮಕ್ಕಳು, ಮಹಿಳೆಯರು, ವಸ್ತುಗಳನ್ನು ಹೊತ್ತು ನಡೆದುಕೊಂಡೇ ಹೊರಟಿದ್ದಾರೆ.

    ಸರ್ಕಾರ ಸೇವಾಸಿಂಧು ವೈಬ್‍ಸೈಟ್ ಆರಂಭಿಸಿದ್ದರೂ ಇವರಿಗೆ ಅನುಕೂಲವಾಗಿಲ್ಲ. ಸಮಪರ್ಕ ಮಾಹಿತಿ ಇಲ್ಲದೆ ಕಂಗಾಲಾಗಿ ನಡೆದುಕೊಂಡೇ ಸ್ವಗಾಮಕ್ಕೆ ಹೊರಟಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಕೆಲಸವಿಲ್ಲದ ಕಾರಣಕ್ಕೆ ಊಟಕ್ಕೂ ತೊಂದರೆಯಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ನಡೆದುಕೊಂಡೇ ಹೊರಟಿರುವುದರಿಂದ ಸದ್ಯ ರಾಯಚೂರು ಜಿಲ್ಲಾಡಳಿತ ಕಾರ್ಮಿಕರನ್ನು ತಡೆದಿದೆ.

    ಸದ್ಯ ಊಟದ ವ್ಯವಸ್ಥೆ ಮಾಡಿದ್ದು, ಊರಿಗೆ ತೆರಳಲು ಅನುಕೂಲ ಮಾಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ಕಾರ್ಮಿಕರು ರಾಯಚೂರಿನ ಚಿಕ್ಕಸುಗೂರು ಬಳಿ ಉಳಿದಿದ್ದಾರೆ. ಜಿಲ್ಲಾಡಳಿತ ಕೂಡಲೇ ವ್ಯವಸ್ಥೆ ಮಾಡದಿದ್ದರೆ ನಡೆದುಕೊಂಡೇ ಹೋಗಲು ಕಾರ್ಮಿಕರು ನಿರ್ಧರಿಸಿದ್ದಾರೆ.

  • ಮಡಿಕೇರಿ To ಉತ್ತರಪ್ರದೇಶ – ಸಾರಿಗೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

    ಮಡಿಕೇರಿ To ಉತ್ತರಪ್ರದೇಶ – ಸಾರಿಗೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

    ಮಡಿಕೇರಿ: ಕೋವಿಡ್-19 ಪರಿಣಾಮ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಕೂಲಿ ಕೆಲಸಕ್ಕೆ ಕೊಡಗಿಗೆ ಬಂದಿದ್ದ ಉತ್ತರ ಪ್ರದೇಶದ ಕಾರ್ಮಿಕರು ಹುಟ್ಟೂರಿಗೆ ವಾಪಸ್ ಹೋಗಲು ಆಗದೇ ಸಂಕಷ್ಟದಲ್ಲಿದ್ದರು. ಈಗ ಬಸ್ ವ್ಯವಸ್ಥೆ ಕೂಡ ಇಲ್ಲದ ಹಿನ್ನೆಲೆ ಕಾಲ್ನಡಿಗೆಯಲ್ಲಿಯೇ ಹುಟ್ಟೂರಿನತ್ತ ಕಾರ್ಮಿಕರು ಪ್ರಯಾಣ ಬೆಳೆಸಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರದಿಂದ ಮೂಲ ನೆಲೆಗಳಿಗೆ ಸುಮಾರು 50ಕ್ಕು ಹೆಚ್ಚು ಕೂಲಿ ಕಾರ್ಮಿಕರು ಗಂಟು, ಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಜಿಲ್ಲೆಯಿಂದ ಪಾಸ್ ಹಾಗೂ ಯಾವುದೇ ಸಾರಿಗೆ ವ್ಯವಸ್ಥೆ ಲಭ್ಯವಾಗದೇ ಇರುವುದರಿಂದ ಕೊಡಗಿನಿಂದ ಉತ್ತರಪ್ರದೇಶಕ್ಕೆ 2,800 ಕಿ.ಮೀ ನಡದೇ ಹೋಗಲು ನಿರ್ಧರಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿರುವ ಕಾರ್ಮಿಕರು ಈಗಾಗಲೇ 18 ಕಿ.ಮೀ ನಡೆದಿದ್ದು, ಸುಂಟಿಕೊಪ್ಪದ 7ನೇ ಹೊಸಕೋಟೆ ತಲುಪಿದ್ದಾರೆ.

    ನಾವೆಲ್ಲರೂ ಉತ್ತರ ಪ್ರದೇಶದಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದೆವು. ನಮ್ಮೂರಿಗೆ ಹೋಗಲು ನಮ್ಮ ಬಳಿ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ನಮ್ಮ ಕಂಪನಿ ವ್ಯವಸ್ಥಾಪಕರು ನಮ್ಮನ್ನು ನಮ್ಮೂರಿಗೆ ಹೋಗಲು ಬಿಡುತ್ತಿಲ್ಲ. ಹಲವು ದಿನಗಳಿಂದ ನಮಗೆ ಸರಿಯಾಗಿ ಊಟ, ತಿಂಡಿ ವ್ಯವಸ್ಥೆಯೂ ಇಲ್ಲದಂತೆ ಆಗಿದೆ. ಉತ್ತರ ಪ್ರದೇಶದಿಂದ ಕೊಡಗಿಗೆ ಬಂದು 5 ತಿಂಗಳು ಕಳೆದಿವೆ. ಲಾಕ್‍ಡೌನ್ ಘೊಷಿಸಿದ ಪರಿಣಾಮ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಎಲ್ಲವನ್ನು ತೆಗೆದುಕೊಂಡು ಊರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದೇವೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

  • ಸಂಸ್ಕೃತಿ ಅರಿಯಲು ಪಾಂಡಿಚೇರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಹೊರಟ ಯುವಕ, ಯುವತಿ

    ಸಂಸ್ಕೃತಿ ಅರಿಯಲು ಪಾಂಡಿಚೇರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಹೊರಟ ಯುವಕ, ಯುವತಿ

    – ಹಣ, ಮೊಬೈಲ್ ಇಲ್ಲದೇ 1400 ಕಿ.ಮೀ ಪಯಣ

    ರಾಮನಗರ: ದೇಶವು ಸಾಕಷ್ಟು ವಿಭಿನ್ನ ಸಂಸ್ಕೃತಿಯನ್ನ ಒಳಗೊಂಡಿದ್ದು, ರಾಜ್ಯದಿಂದ ರಾಜ್ಯಕ್ಕೆ ಸಂಸ್ಕೃತಿ, ಕಲೆ, ಭಾಷೆಗಳು ವಿಭಿನ್ನವಾಗಿದೆ. ಇದನ್ನು ತಿಳಿಯಲು ಯುವಕ, ಯುವತಿ ಪಾಂಡೀಚೆರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಪಯಣ ಬೆಳೆಸಿದ್ದು, ಮೊಬೈಲ್ ಇಲ್ಲದೇ, ಹಣವೂ ಇಲ್ಲದೆ 70 ದಿನಗಳು 1400 ಕಿ.ಮೀ ಪಯಣ ನಡೆಸುತ್ತಿದ್ದಾರೆ.

    ಉತ್ತರಾಖಂಡ್ ರಾಜ್ಯದ ಸಮಾಜ ಸೇವಕ ಅಂಕಿತ್ ದಾಸ್ ಹಾಗೂ ಮಹಾರಾಷ್ಟ್ರದ ಲೇಖಕಿ ನೈನಿಕ ಭಟ್ಯ ಕಾಲ್ನಡಿಗೆಯಲ್ಲಿ ಪಯಣ ನಡೆಸುತ್ತಿದ್ದಾರೆ. ಈಗಾಗಲೇ ನೈನಿಕ ಭಟ್ಯ ಹಾಗೂ ಅಂಕಿತ್ ದಾಸ್ 550 ಕಿ.ಮೀ ಪಯಣ ಮುಗಿಸಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಹಾದು ಬಂದು ಕರ್ನಾಟಕ ತಲುಪಿದ್ದಾರೆ. ತಮಿಳುನಾಡು ಮತ್ತು ಆಂಧ್ರದಲ್ಲಿ ಇವರಿಗೆ ಉತ್ತಮ ಸ್ಪಂದನೆ ಜನಗಳಿಂದ ಸಿಕ್ಕಿದ್ದು, ಈಗ ಕರ್ನಾಟಕದಿಂದ ಪಯಣ ಆರಂಭ ಮಾಡಿರುವ ಜೋಡಿ ಬೆಂಗಳೂರಿನಿಂದ ಮಾಗಡಿಗೆ ಆಗಮಿಸಿ ಕುಣಿಗಲ್ ಮಾರ್ಗದ ಮೂಲಕ ಪಯಣ ಬೆಳೆಸಿದ್ದಾರೆ.

    1400 ಕಿಲೋ ಮೀಟರ್ ಪಯಣ ನಡೆಸುತ್ತಿರುವ ಅಂಕಿತ್ ದಾಸ್ ಹಾಗೂ ನೈನಿಕ ಭಟ್ಯ ಬಳಿ ನಯಾಪೈಸೆ ಹಣವಿಲ್ಲ. ಮೊಬೈಲ್ ಸಹ ಇಲ್ಲ. ಯಾವುದೇ ಮ್ಯಾಪ್ ಇಲ್ಲದೆ, 2 ಬ್ಯಾಗ್, ನೀರಿನ ಬಾಟಲಿ, ಹಾಕಿಕೊಳ್ಳಲು ಕೆಲವು ಬಟ್ಟೆಗಳು, 2 ತಟ್ಟೆಯನ್ನು ಹಿಡಿದು ಪಯಣ ಬೆಳೆಸಿದ್ದಾರೆ. ಪಯಣದ ದಾರಿಯಲ್ಲಿ ಯಾರು ಇವರಿಗೆ ಊಟ ಹಾಕುತ್ತಾರೋ ಅಲ್ಲೆ ಇವರಿಗೆ ಊಟ, ಕತ್ತಲಾದ ಮೇಲೆ ಯಾರು ಇವರಿಗೆ ಮಲಗಲು ಜಾಗ ಕೊಡುತ್ತಾರೋ ಅಲ್ಲೆ ಇವರ ನಿದ್ರೆ. ಯಾರೂ ಇವರಿಗೆ ಆಶ್ರಯ ಕೊಡದಿದ್ದರೆ ದೇವಸ್ಥಾನ, ಶಾಲೆಗಳಲ್ಲಿ ಮಲಗಿ ಬೆಳಗ್ಗೆ ಎದ್ದು ತಮ್ಮ ಪಯಣ ಆರಂಭಿಸುತ್ತಾರೆ.

    ನಾವು ಪಯಣಿಸಿರುವ ಎಲ್ಲಾ ಕಡೆಯು ಸಾರ್ವಜನಿಕರು ಅತಿಥಿಗಳನ್ನು ಸ್ವಾಗತಿಸುವಂತೆ ಸ್ವಾಗತಿಸಿದ್ದು, ಪ್ರತಿ ದಿನವು 3 ಹೊತ್ತು ಊಟ ಸಿಕ್ಕಿದೆ. ಒಂದೊಂದು ದಿನ ಹೆಚ್ಚಿಗೆ ಊಟ ಸಿಕ್ಕಿ ಅದನ್ನು ನಾವು ಎತ್ತುಕೊಂಡು ಹೋದ ಪ್ರಸಂಗವು ಇದೆ ಎಂದು ಅಂಕಿತ್ ದಾಸ್ ತಿಳಿಸುತ್ತಾರೆ.

    ಕರ್ನಾಟಕದ ಕನ್ನಡಿಗರು ವಿಶಾಲ ಹೃದಯದವರು ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಕರ್ನಾಟಕದಲ್ಲಿ ಪಯಣ ಆರಂಭಿಸಿರುವ ಅಂಕಿತ್, ನೈನಿಕ ಕರ್ನಾಟಕ ಜನತೆಯ ಪ್ರೀತಿ, ಇಲ್ಲಿನ ಸಂಸ್ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೇಪರ್, ಟಿವಿಗಳಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ ಎಂಬ ಸುದ್ದಿಗಳನ್ನು ಕೇಳುತ್ತಿದ್ದೆವು. ಆದರೆ ನಮಗೆ ಎಲ್ಲೂ ಕೂಡ ಅಪಾಯ ಬಂದಿಲ್ಲ. ಇಲ್ಲಿನ ಜನತೆ ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ. ಜನಗಳು ಈ ಪ್ರದೇಶ ಅಪಾಯಕಾರಿ ಎಂದು ಹೇಳಿದರೆ ನಾವು ಅಲ್ಲಿಗೆ ಹೋಗುವುದಿಲ್ಲ. ಎಲ್ಲಾ ಕಡೆಯೂ ನಮ್ಮನ್ನು ಪ್ರೀತಿಯಿಂದಲೇ ಕಾಣುತ್ತಿದ್ದಾರೆಂದು ನೈನಿಕ ಹೇಳಿದ್ದಾರೆ.

    ಅಂಕಿತ್ ಅವರು ತಮ್ಮ ಗೆಳತಿ ಪ್ರಿಯಾನ್ಷಾರವರಿಗೆ ತಾವು ಹೋಗುವ ಸ್ಥಳದಿಂದ ಬೇರೆಯವರ ಮೊಬೈಲ್‍ನಿಂದ ವಾಟ್ಸಾಪ್ ಮೂಲಕ ಎಲ್ಲಿ ಇದ್ದೇವೆಂದು ತಿಳಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಬೇರೆಯವರ ಮೊಬೈಲ್​ನಲ್ಲಿ ರೂಟ್ ಮ್ಯಾಪ್‍ನ್ನು ನೋಡಿ ಪಯಣ ಬೆಳೆಸುತ್ತಿರುವುದು ವಿಶೇಷವಾಗಿದೆ.

    ಇದರ ಜೊತೆಗೆ ತಾವು ಹೋಗುವ ಸ್ಥಳಗಳ ಸಂಸ್ಕೃತಿ, ವಿಶೇಷತೆಗಳ ಚಿತ್ರಗಳನ್ನು ಸೆರೆಹಿಡಿದು ಡೈರಿಯಲ್ಲಿ ಮಾಹಿತಿ ದಾಖಲಿಸಿಕೊಳ್ತಿದ್ದಾರೆ. ಇವರ ಜೊತೆ ಇರುವ ಸಾರ್ವಜನಿಕರ ಫೋಟೋಗಳನ್ನು ಬೇರೆಯವರ ಮೊಬೈಲ್‌ನಿಂದ ವಾಟ್ಸಾಪ್ ಮಾಡಿಸಿಕೊಂಡು ಪಯಣ ಮುಂದುವರೆಸಿದ್ದಾರೆ. ಇಂಗ್ಲೀಷ್, ಹಿಂದಿ ಬಿಟ್ಟರೆ ಇವರಿಗೆ ಬೇರೆ ಭಾಷೆ ಗೊತ್ತಿಲ್ಲ. ಕರ್ನಾಟಕಕ್ಕೆ ಬಂದಿರುವ ನೈನಿಕ ಭಟ್ಯ ಸ್ವಲ್ಪ ಸ್ವಲ್ಪ ಕನ್ನಡವನ್ನು ಕಲಿತು ಜನಗಳ ಜೊತೆ ಸಂಪರ್ಕ ಮಾಡಿ ತಮ್ಮ ಉದ್ದೇಶವನ್ನು ತಿಳಿಸಿ, ಊಟ ಮತ್ತು ಮಲಗಲು ಆಶ್ರಯ ಪಡೆಯುತ್ತಿದ್ದಾರೆ. ಆದರೆ ಕೆಲವೇ ದಿನಗಳಿಂದ ಕರ್ನಾಟಕದ ಸಂಪರ್ಕವನ್ನು ಹೊಂದಿರುವ ನೈನಿಕ ಭಟ್ಯ ಕನ್ನಡ ಕಲಿತಿರುವುದು ಹೆಮ್ಮೆಯ ವಿಚಾರವಾಗಿದೆ.

  • ಮದ್ಯ ನಿಷೇಧ ಆಗ್ರಹಿಸಿ ವಿಧಾನಸೌಧದತ್ತ ಲಗ್ಗೆಯಿಡಲಿದ್ದಾರೆ ಸಾವಿರಾರು ಮಹಿಳೆಯರು..!

    ಮದ್ಯ ನಿಷೇಧ ಆಗ್ರಹಿಸಿ ವಿಧಾನಸೌಧದತ್ತ ಲಗ್ಗೆಯಿಡಲಿದ್ದಾರೆ ಸಾವಿರಾರು ಮಹಿಳೆಯರು..!

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮದ ದಿನವೇ ಮದ್ಯ ನಿಷೇಧ ಹೋರಾಟ ಶುರುವಾಗಿದ್ದು, ಚಿತ್ರದುರ್ಗದಿಂದ ಜನವರಿ 19ರಂದು ಕಾಲ್ನಡಿಗೆ ಮೂಲಕ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಮಹಿಳೆಯರು ಮಂಗಳವಾರ ಮಧ್ಯಾಹ್ನ ರಾಜ್ಯ ರಾಜಧಾನಿಗೆ ಲಗ್ಗೆಯಿಟ್ಟಿದ್ದಾರೆ.

    ಮದ್ಯಪಾನ ನಿಷೇಧಿಸಬೇಕು ಎಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಕಾಲ್ನಡಿಯಲ್ಲೇ ಬೆಂಗಳೂರಿಗೆ ಬಂದಿದ್ದಾರೆ. ಸತತ 10 ದಿನಗಳ ಕಾಲ ನಡೆದುಕೊಂದು ಬಂದು ನಿನ್ನೆ ರಾಜಧಾನಿಯನ್ನು ತಲುಪಿದ್ದಾರೆ. ಸದ್ಯ ಮಲ್ಲೇಶ್ವರಂನ ಗ್ರೌಂಡ್‍ನಲ್ಲಿ ವಾಸ್ತವ್ಯ ಹೂಡಿರುವ ಮಹಿಳೆಯರು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದು, ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ಆದ್ರೆ ಪ್ರತಿಭಟನಾನಿರತ ಮಹಿಳೆಯರನ್ನು ಫ್ರೀಡಂ ಪಾರ್ಕ್ ಬಳಿಯೇ ತಡೆಯಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.

    ಮದ್ಯಪಾನ ನಿಷೇಧ ಮಾಡಿ ಅಂತ ಒಂದೆಡೆ ಮಹಿಳೆಯರು ಹೋರಾಟ ಮಾಡಲು ಮುಂದಾಗಿದ್ದರೆ, ಇನ್ನೊಂದೆಡೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಈಗಾಗಲೆ 40 ಕಡೆ ಶೌಚಾಲಯ ವ್ಯವಸ್ಥೆ ಮಾಡಿದ್ದಾರೆ. ಆದ್ರೆ ಅದು ಸರಿ ಹೊಂದುತ್ತಿಲ್ಲ. ಉಚಿತ ವ್ಯವಸ್ಥೆ ಎಂದು ಹೇಳಿ ಹಣ ಪಡೆಯುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಟಿಟಿಡಿಯಿಂದ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್

    ಟಿಟಿಡಿಯಿಂದ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್

    ತಿರುಪತಿ: ತಿಮ್ಮಪ್ಪನ ಹೆಸರು ಹೇಳುತ್ತಲೇ ಭಕ್ತರಿಗೆ ಮೊದಲು ನೆನಪಿಗೆ ಬರೋದು ಲಡ್ಡು ಪ್ರಸಾದ. ತಿರುಪತಿ ಲಡ್ಡುಗಿರೋ ಡಿಮಾಂಡ್ ಎಲ್ರಿಗೋ ಗೊತ್ತೇ ಇದೆ. ಇದೀಗ ಈ ಲಡ್ಡು ಕಾರಣದಿಂದಾಗಿ ವೆಂಕಟೇಶ್ವರನ ಭಕ್ತರಿಗೆ ಬಿಗ್ ಶಾಕ್ ಸಿಗುವ ಪರಿಸ್ಥಿತಿ ಏರ್ಪಟ್ಟಿದೆ.

    ಇಷ್ಟು ದಿನ ಕಾಲ್ನಡಿಗೆ ಮೂಲಕ ತಿರುಮಲಕ್ಕೆ ಬರೋ ಭಕ್ತರಿಗೆ ಇದ್ದ ದಿವ್ಯ ದರ್ಶನವನ್ನು ಶೀಘ್ರದಲ್ಲೇ ರದ್ದು ಮಾಡಲಿದ್ದಾರೆ. ಸದ್ಯ ರಶ್ ಇರೋ ದಿನಗಳಲ್ಲಿ ಮಾತ್ರ ಅಂತಾ ಹೇಳ್ತಿದೆ ಟಿಟಿಡಿ. ಆದ್ರೆ ಮುಂದಿನ ದಿನಗಳಲ್ಲಿ ದಿವ್ಯ ದರ್ಶನವೇ ಇಲ್ಲವಾದರೂ ಅಚ್ಚರಿಯಿಲ್ಲ.

    ದಿವ್ಯ ದರ್ಶನ ರದ್ದತಿಗೆ ಕಾರಣ ಲಡ್ಡು ಎಂಬುದು ಇಲ್ಲಿ ವಿಪರ್ಯಾಸ. ಕಾಲ್ನಡಿಗೆ ಮೂಲಕ ದಿವ್ಯದರ್ಶನಕ್ಕೆ ಬರೋ ಭಕ್ತರಿಗೆ ಎರಡು ಲಡ್ಡು ಉಚಿತವಾಗಿ ವಿತರಿಸಲಾಗ್ತಿದೆ. ಇದ್ರಿಂದ ಟಿಟಿಡಿಗೆ ನಷ್ಟ ಆಗ್ತಿದೆಯಂತೆ. ಆದ್ರೆ ದಿನಕ್ಕೆ ಏನಿಲ್ಲ ಅಂದ್ರೂ ತಿಮ್ಮಪ್ಪನ ಹುಂಡಿಗೆ 2 ಕೋಟಿ ರೂಪಾಯಿ ಹರಕೆ ರೂಪದಲ್ಲಿ ಬಂದು ಬೀಳುತ್ತೆ. ಜೊತೆಗೆ ಕಾಣಿಕೆಗಳೂ ಬೇರೆ ಬರುತ್ವೆ. ಆದ್ರೂ ಸಹ ಆಡಳಿತ ಮಂಡಳಿ ಮಾತ್ರ 2 ಲಡ್ಡು ಉಚಿತವಾಗಿ ಕೊಡೋದ್ರಿಂದ ಭಾರೀ ನಷ್ಟ ಆಗ್ತಿದೆ ಅಂತ ಹೇಳ್ತಿದೆ.

    ಕಾಲ್ನಡಿಗೆಯಲ್ಲಿ ಹೋದ್ರೂ ಸಾಮಾನ್ಯ ಸಾಲಿನಲ್ಲೇ ದರ್ಶನ: ಜುಲೈ 7 ರಿಂದ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾಲ್ನಡಿಗೆಯಲ್ಲಿ ಬರೋ ಭಕ್ತರಿಗೆ ದಿವ್ಯ ದರ್ಶನ ಇರೋದಿಲ್ಲ ಎನ್ನಲಾಗ್ತಿದೆ. ಬದಲಿಗೆ ಸಾಮಾನ್ಯರ ದೊಡ್ಡ ಸಾಲಿನಲ್ಲೇ ಸಾಗಬೇಕಾಗಿದೆ. ರಾತ್ರಿಯೆಲ್ಲಾ ಬೆಟ್ಟ ಹತ್ತಿ ಮತ್ತೆ ಕ್ಯೂನಲ್ಲಿ ನಿಲ್ಲಬೇಕು ಅಂದ್ರೆ ಭಕ್ತರಿಗೆ ಕಷ್ಟವಾಗಲಿದೆ.