Tag: ಕಾಲೇಜ್

  • ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

    ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

    – ಕಲಬುರಗಿಯ ಸಿದ್ಧಾರೂಢ ಇವತ್ತಿನ ಪಬ್ಲಿಕ್ ಹೀರೋ

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮನ್ನಹಳ್ಳಿ ಗ್ರಾಮಪಂಚಾಯ್ತಿ ವಿದ್ಯಾರ್ಥಿನಿಯರಿಗಾಗಿ ಉಚಿತ ಬಸ್ ಸೇವೆಯನ್ನು ಒದಗಿಸಿದೆ. ಗ್ರಾಮದ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಪಂಚಾಯ್ತಿ ಹೊಸ ಬಸ್ ಖರೀದಿಸಿದೆ.

    ಈ ಬಸ್ ಸೌಕರ್ಯದಿಂದ ಶಿಕ್ಷಣ ವಂಚಿತರಾಗಿದ್ದ ವಿದ್ಯಾರ್ಥಿನಿಯರು ಇದೀಗ ಇದೀಗ ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆ. ಗ್ರಾಮಪಂಚಾಯ್ತಿ ಅಧ್ಯಕ್ಷ ಸಿದ್ದಾರೂಢರು ವಿಶೇಷ ಆಸ್ಥೆ ವಹಿಸಿ ಪಂಚಾಯತ್ ಅನುದಾನದಲ್ಲಿ 2 ತಿಂಗಳ ಹಿಂದೆ ಈ ಬಸ್ ವ್ಯವಸ್ಥೆ ಮಾಡಿಸಿ ಕೊಟ್ಟಿದ್ದಾರೆ. ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇದರಿಂದಾಗಿ ಇಲ್ಲಿನ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಿರಾಳರಾಗಿ ಆಳಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿ ಬರುತ್ತಿದ್ದಾರೆ.

    ಸದ್ಯ ಮೂರು ತಿಂಗಳ ಮಟ್ಟಿಗೆ ಈ ಬಸ್‍ನ ಸೌಕರ್ಯವನ್ನು ವಿದ್ಯಾರ್ಥಿನಿಯರಿಗೆ ಕಲ್ಪಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕರೆ ಮುಂಬರುವ ದಿನಗಳಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗಲು ಪಂಚಾಯ್ತಿ ಸದಸ್ಯರು ಚಿಂತನೆ ನಡೆಸಿದ್ದಾರೆ.

  • ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ

    ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ

    ರಾಯಚೂರು: ವಿದ್ಯಾರ್ಥಿಗಳ ಜಗಳಕ್ಕೆ ಪಂಚಾಯತಿ ಮಾಡಿ ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತರೊಂದಿಗೆ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿ ಮೇಲೆ ವಿದ್ಯಾರ್ಥಿಯಿಂದ ಹಲ್ಲೆಯಾಗಿದೆ.

    ಕಾಲೇಜಿನ ಬಿಸಿಎ ವಿದ್ಯಾರ್ಥಿ ರಂಜಿತ್ ಕುಮಾರ್ ಇನ್ನೋರ್ವ ಬಿಎ ವಿದ್ಯಾರ್ಥಿ ಆಂಜಿನೇಯನ ಮೇಲೆ ತನ್ನ ಸ್ನೇಹಿತರೊಂದಿಗೆ ಕಾಲೇಜು ಬಳಿ ಹಲ್ಲೆ ಮಾಡಿದ್ದನು. ಈ ಘಟನೆ ಹಿನ್ನೆಲೆ ಕಾಲೇಜಿನ ಉಪನ್ಯಾಸಕರು ರಂಜಿತ್‍ನನ್ನ ಕರೆದು ತಿಳಿ ಹೇಳಿದ್ದರು. ಆ ವೇಳೆಯೂ ತನ್ನ ಸ್ನೇಹಿತರನ್ನ ಕರೆದುಕೊಂಡು ಬಂದಿದ್ದ ರಂಜಿತ್ ಉಪನ್ಯಾಸಕರ ಮಾತಿಗೂ ಬೆಲೆಕೊಟ್ಟಿರಲಿಲ್ಲ. ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿ ರಂಜಿತ್ ವರ್ತನೆಯನ್ನ ಖಂಡಿಸಿ ಬೈದಿದ್ದರು. ಇದೇ ಸಿಟ್ಟನ್ನ ಇಟ್ಟುಕೊಂಡು ಕೃಷಿ ವಿವಿ ಹತ್ತಿರ ಬುಲೆಟ್ ನಲ್ಲಿ ಕಾಲೇಜಿಗೆ ಬರುತ್ತಿದ್ದ ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿಯನ್ನ ತಡೆದು ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ.

    ಘಟನೆ ಹಿನ್ನೆಲೆ ರಂಜಿತ್ ಸೇರಿ ಆರು ಜನರ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡು ಪ್ರಜ್ಞೆತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಉಪನ್ಯಾಸಕ ಪ್ರಾಣೇಶ್ ನನ್ನ ಕಂಡು ಅವರ ಹಳೆಯ ವಿದ್ಯಾರ್ಥಿ ಸಮೀರ್ ಪಾಶಾ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಉಪನ್ಯಾಸಕ ಪ್ರಾಣೇಶ್ ಚೇತರಿಸಿಕೊಂಡಿದ್ದಾರೆ.

    ಈ ಹಿಂದೆ ವಿದ್ಯಾರ್ಥಿ ರಂಜಿತ್ ಕಾಲೇಜು ಶುಲ್ಕ ಕಟ್ಟದಿದ್ದಾಗ ಪ್ರಾಣೇಶ್ ಸ್ವತಃ ಶುಲ್ಕ ಕಟ್ಟಿ ಪರೀಕ್ಷೆ ಬರೆಯಲು ಅನುಮಾಡಿಕೊಟ್ಟಿದ್ದರಂತೆ. ಆದ್ರೆ ಅದೇ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ್ದಾನೆ. ಅದೃಷ್ಟವಶಾತ್ ಬಸ್ ನಲ್ಲಿ ರಾಯಚೂರಿಗೆ ಬರುತ್ತಿದ್ದ ಹಳೆಯ ವಿದ್ಯಾರ್ಥಿ ಸಮೀರ್ ಪಾಶಾ ಕೂಡಲೇ ಬಸ್ ಇಳಿದು ಪ್ರಜ್ಞೆತಪ್ಪಿ ಬಿದ್ದಿದ್ದ ಉಪನ್ಯಾಸಕರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ.

  • ಪ್ರಾಂಶುಪಾಲರಿಗೆ ಕತ್ತರಿಯಿಂದ ಚುಚ್ಚಿದ ವಿದ್ಯಾರ್ಥಿ

    ಪ್ರಾಂಶುಪಾಲರಿಗೆ ಕತ್ತರಿಯಿಂದ ಚುಚ್ಚಿದ ವಿದ್ಯಾರ್ಥಿ

    ಗಾಂಧಿನಗರ: ವಿದ್ಯಾರ್ಥಿಯೋರ್ವ ಪ್ರಾಂಶುಪಾಲರ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿರುವ ಘಟನೆ ಗುಜರಾತಿನ ಜಾಮನಗರದ ವಿಎಂ ಮಹ್ತಾ ಕಾಲೇಜಿನಲ್ಲಿ ನಡೆದಿದೆ.

    ಸೌರಾಷ್ಟ್ರ ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಆರಂಭಗೊಂಡಿದ್ದು, ಗುರುವಾರ ಬಿಎ ಪ್ರಥಮ ಸೆಮಿಸ್ಟರ್ ಎಕ್ಸಾಂ ನಡೆಯುತ್ತಿತ್ತು. ಮಧ್ಯಾಹ್ನ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಧರ್ಮರಾಜ್ ಸಿಂಗ್ ಎಂಬಾತ ಮೊಬೈಲ್ ಬಳಸಿ ನಕಲು ಮಾಡುವಾಗ ಸಿಕ್ಕಿ ಬಿದ್ದಿದ್ದನು. ಇದನ್ನೂ ಓದಿ: ಎಕ್ಸಾಂ ಹಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಸೂಪರ್ ಸ್ಮಾರ್ಟ್ ನಕಲು

    ಕೊಠಡಿಯ ಮೇಲ್ವಿಚಾರಕರು ವಿದ್ಯಾರ್ಥಿಯನ್ನು ಕರೆದುಕೊಂಡು ಪ್ರಾಂಶುಪಾಲರ ಬಳಿ ತೆರಳಿದ್ದಾರೆ. ಪ್ರಾಂಶುಪಾಲರು ನಕಲು ಕೇಸ್ ದಾಖಲಿಸಿಕೊಳ್ಳುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿ ಉತ್ತರ ಪತ್ರಿಕೆ ತೆಗೆದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ವಿದ್ಯಾರ್ಥಿಯನ್ನು ತಡೆಯಲು ಪ್ರಿನ್ಸಿಪಾಲರು ಮುಂದಾಗಿದ್ದಾರೆ. ಭಯಗೊಂಡಿದ್ದ ವಿದ್ಯಾರ್ಥಿ ಟೇಬಲ್ ಮೇಲಿದ್ದ ಕತ್ತರಿಯಿಂದ ಹಲ್ಲೆ ಮಾಡಿದ್ದಾನೆ.

    ಕೂಡಲೇ ಎಚ್ಚೆತ್ತ ಕಾಲೇಜು ಸಿಬ್ಬಂದಿ ಪ್ರಾಂಶುಪಾಲ ಡಾ.ಜೆ.ಬಿ.ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಾಂಶುಪಾಲರ ಎದೆ ಮತ್ತು ತೋಳುಗಳಿಗೆ ಗಾಯವಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಒಂದೇ ಉತ್ತರ, ಒಂದೇ ರೀತಿ ತಪ್ಪು – 959 ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು

  • ಡ್ಯಾನ್ಸ್ ಮಾಡುತ್ತಲೇ ಕುಸಿದ ವಿದ್ಯಾರ್ಥಿನಿ

    ಡ್ಯಾನ್ಸ್ ಮಾಡುತ್ತಲೇ ಕುಸಿದ ವಿದ್ಯಾರ್ಥಿನಿ

    ಕಲಬುರಗಿ: ವಿದ್ಯಾರ್ಥಿನಿ ಡ್ಯಾನ್ಸ್ ಮಾಡುತ್ತಲೇ ಕುಸಿದ ಬಿದ್ದ ಘಟನೆ ಕಲಬುರಗಿ ವಿವಿಯ ಲಿಂಗಸೂರಿನ ಎಸ್.ಎಂ.ಎಲ್.ಬಿ ಕಾಲೇಜಿನನಲ್ಲಿ ನಡೆದಿದೆ.

    ಬಿಎ ವಿದ್ಯಾರ್ಥಿನಿ ಪ್ರಿಯಾಂಕ ಅಸ್ವಸ್ಥಗೊಂಡ ವಿದ್ಯಾರ್ಥಿನಿ. ಕೂಡಲೇ ಕಾಲೇಜಿನ ಸಿಬ್ಬಂದಿ ಪ್ರಿಯಾಂಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ವಿವಿ ಕುಲಪತಿ ಪರಿಮಳ ಅಂಬೇಡ್ಕರ್ ಭೇಟಿ ನೀಡಿ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು.

    ಒಂದು ತಿಂಗಳ ಹಿಂದೆ ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿನಿ ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಕಾಲೇಜ್ ಫ್ರೆಶರ್ಸ್ ಡೇಗೆ ರ‍್ಯಾಂಪ್ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಎಂಬಿಎ ವಿದ್ಯಾರ್ಥಿನಿ ಶಾಲಿನಿ ಮೃತಪಟ್ಟಿದ್ದಳು.

  • ಭಾರೀ ಮಳೆ- ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ

    ಭಾರೀ ಮಳೆ- ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ

    -ಉಡುಪಿ ಜಿಲ್ಲಾ ಶಾಲೆಗಳಿಗೆ ರಜೆ

    ಮಂಗಳೂರು/ಉಡುಪಿ: ಮಂಗಳವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

    ಇತ್ತ ಉಡುಪಿಯಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮುನ್ನೇಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲಾ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮಾತ್ರ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ರಜೆ ಘೋಷಿಸಿದ್ದಾರೆ. ಮುಂದಿನ ಮೂರ್ನಾಲ್ಕು ದಿನ ಉಡುಪಿ ಪರಿಸರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

    ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿತ್ತು. ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದ ಜನ ಹೈರಾಣಾಗಿದ್ದರು. ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು, ಜುಲೈ 22ರಿಂದ 25ರ ವರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತೆ ವಹಿಸಿಕೊಂಡಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಬೆಳ್ತಂಗಡಿ, ಪುತ್ತೂರಿನಲ್ಲಿ ನಿರಂತರ ತುಂತುರು ಮಳೆಯಾಗುತ್ತಿದೆ.

  • ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಕಾಮುಕರಿಗೆ ಲಾಠಿ ರುಚಿ

    ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಕಾಮುಕರಿಗೆ ಲಾಠಿ ರುಚಿ

    ಮಡಿಕೇರಿ: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಕೇರಳ ಮೂಲದ ಇಬ್ಬರಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆದಿದೆ. ಕೇರಳದ ಮಲಪುರಂ ಮಹಮ್ಮದ್ ಫುತಾಲಿಕ್ (32), ಶರೀಫ್ (30) ಇಬ್ಬರಿಗೂ ಪೊಲೀಸರು ಚೆನ್ನಾಗಿ ಥಳಿಸಿದ್ದಾರೆ. ಜೂ. 18 ರಂದು ಪಾಲಿಬೆಟ್ಟದ ಪದವಿ ಪೂರ್ವ ಕಾಲೇಜಿನ ಮುಂಭಾಗ ಇಬ್ಬರು ಕೇರಳದಿಂದ ಕಾರಿನಲ್ಲಿ ಬಂದು ನಿಂತಿದ್ದರು.

    ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ್ದರು. ಕಾಲೇಜು ಪ್ರಾಂಶುಪಾಲರು ದೂರಿನ ಮೇರೆಗೆ ಪಾಲಿಬೆಟ್ಟ ಉಪಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಲಾಠಿ ರುಚಿ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯಲ್ಲಿದ್ದ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಇದೀಗ ಆ ವಿಡಿಯೋ ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ವೈರಲ್ ಆಗಿದೆ.

    ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ಕೇರಳ ಮೂಲದ ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

    ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

    ಹುಬ್ಬಳ್ಳಿ/ಧಾರವಾಡ: ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಕೂಗಿದ್ದಾರೆ.

    ಹುಬ್ಬಳ್ಳಿಯ ಖಾಸಗಿ ಕಾಲೇಜ್‍ನಲ್ಲಿ ಅಮರ್ ಚಿತ್ರ ತಂಡದ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಈ ಸಂವಾದ ಕಾರ್ಯಕ್ರಮಕ್ಕೆ ಸುಮಲತಾ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ. ಈ ವೇಳೆ ಸುಮಲತಾ ಅವರು ವೇದಿಕೆಯ ಮೇಲೆ ಬರುತ್ತಿದ್ದಂತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೆಲ್ಲರೂ ‘ನಿಖಿಲ್ ಎಲ್ಲಿದ್ದೀಯಪ್ಪ, ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ. ಆಗ ಸುಮಲತಾ ಅವರು ವೇದಿಕೆಯ ಮೇಲೆಯೇ ನಕ್ಕಿದ್ದಾರೆ.

    ವಿಧ್ಯಾರ್ಥಿಗಳು ‘ನಿಖಿಲ್ ಎಲ್ಲಿದಿಯಪ್ಪಾ’ ಎಂದು ಕೂಗುತ್ತಿದ್ದಂತೆ ಅಭಿಷೇಕ್ ಅವರು, ಯಾರಾದ್ರು ಎಲ್ಲಾದರೂ ಹೋಗಲಿ ನಾವು ಇಲ್ಲಿದ್ದೀವಿ. ಅದನ್ನ ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಇಂದು ಅಭಿಷೇಕ್ ಅಭಿನಯದ ‘ಅಮರ್’ ಚಿತ್ರ ಪ್ರಚಾರಕ್ಕಾಗಿ ಚಿತ್ರತಂಡ ಅವಳಿ ನಗರಕ್ಕೆ ಆಗಮಿಸಿದೆ. ಸುಮಲತಾರಿಗೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ಅಮರ್ ಚಿತ್ರ ನಿರ್ದೇಶಕ ನಾಗಶೇಖರ್ ಸಾಥ್ ನೀಡಿದ್ದಾರೆ.

    ಅಷ್ಟೇ ಅಲ್ಲದೇ ಇಂದು ಬೆಳಗ್ಗೆ ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನದಲ್ಲಿ ತುಪ್ಪ ಮತ್ತು ಹಾಲಿನ ತುಲಾಭಾರ ಮಾಡಿಸಿದ್ದಾರೆ. ಸುಮಲತಾ ಅವರಿಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಾಭಾರ ಮಾಡಿದ್ದು, ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15 ಕೆಜಿ ತುಪ್ಪದಲ್ಲಿ ತುಲಾಭಾರ ಮಾಡಿಸಲಾಗಿದೆ. ಅಭಿಮಾನಿ ನಾರಾಯಣ್ ಕಲಾಲ್ ಅಪೇಕ್ಷೆ ಮೇರೆಗೆ ಈ ತುಲಾಭಾರ ನಡೆದಿದೆ.

  • ಕಾಲೇಜಿನ 4ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಕಾಲೇಜಿನ 4ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಭೋಪಾಲ್: ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಎರಡನೇ ವರ್ಷ ಓದುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯ ಮಹೂ ಸಮೀಪದ ಕಿಶಗಂಜ್ ಬಂಸಲ್ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಆಯುಷಿ ಮಿಶ್ರಾ ಎಂದು ಗುರುತಿಸಲಾಗಿದೆ. ಕಾಲೇಜಿನ ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮೃತ ಆಯುಷಿಗೆ ಕಳೆದ ಕೆಲವು ದಿನಗಳಿಂದ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಆಯುಷಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ವಿದ್ಯಾರ್ಥಿನಿಯ ಸಹಪಾಠಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

  • ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ನೆನಪುಗಳನ್ನು ಹಿಡಿಯುವ ಹಂಬಲ. ಆದರೆ ಕೈ ಸಿಗದೇ ಓಡಿ ಹೋಗುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ನೆನಪುಗಳು ಸದಾ ಇರುತ್ತವೆ. ಕೆಲವರಿಗೆ ಸಿಹಿ ನೆನಪುಗಳಾದ್ರೆ ಇನ್ನೂ ಕೆಲವರಿಗೆ ಕಹಿ ನೆನಪುಗಳು ಅಚ್ಚಳಿಯದೇ ಉಳಿದಿವೆ. ಆದರೆ ಮನುಷ್ಯನ ಜೀವನ ಮಾತ್ರ ನೆನಪು ಮತ್ತು ಕನಸಿನ ಮಧ್ಯೆ ಸಾಗುತ್ತದೆ.

    ನನ್ನ ಬದುಕಿನಲ್ಲಿ ಸದಾ ಹಸಿರಾಗಿ ಉಳಿದುಕೊಂಡಿರುವ ಒಂದು ಸಿಹಿ ನೆನಪಿನ ಪುಟ್ಟ ಕಥೆ ನಿಮಗಾಗಿ….

    ನಾನು ಹಳ್ಳಿಯ ಹೊಲ-ಗದ್ದೆ, ಸ್ನೇಹಿತರು, ಜಾತ್ರೆ, ಹಬ್ಬ-ಹರಿದಿನಗಳ ಮಧ್ಯೆ ಅಲೆದಾಡಿ ಬೆಳೆದಿದ್ದೆ. ಆದರೆ ಹುಟ್ಟೂರಿನಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಾಲಿಟ್ಟಿದ್ದೆ. ಪಟ್ಟಣಕ್ಕಿಂತ ನಮಗೆ ಪಟ್ಟಣದ ಹಾಸ್ಟೆಲ್ ಒಂದು ಜೈಲು ಎಂದು ಅನ್ನಿಸುತ್ತಿತ್ತು. ಆದರೆ ಮೊದ ಮೊದಲು ಹೊಸ ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುವಾಗ ದಿನಗಳು ವರ್ಷಗಳೇ ಕಳೆದಂತೆ ಭಾಸವಾಗುತ್ತಿತ್ತು. ಕಾಲಕ್ರಮೇಣ ದಿನ ಕಳೆದಂತೆ ತರಗತಿಯಲ್ಲಿನ ಸಹಪಾಠಿಗಳು ಮತ್ತು ಹಾಸ್ಟೆಲ್ ನ ಸ್ನೇಹಿತರು ಹತ್ತಿರವಾದರು. ಬಳಿಕ ನಮ್ಮದೇ ಆದ ಗುಂಪು ಮಾಡಿಕೊಂಡು ಕಾಲೇಜ್, ಸುತ್ತಾಟ, ತರಲೆ ಮತ್ತು ಆಟವಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದವು.

    ಆರಂಭದಲ್ಲಿ ಹಾಸ್ಟೆಲ್ ಗೆ ಬಂದಾಗ ಭಾನುವಾರ ಬಂದರೆ ಸಾಕು ಊರಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಆದರೆ ಕೆಲವು ದಿನಗಳ ನಂತರ ಯಾಕಾದರೂ ರಜೆ ಬರುತ್ತದೋ ಎಂದು ಹೇಳುವಂತಾಯಿತು. ಅಷ್ಟರ ಮಟ್ಟಿಗೆ ಸ್ನೇಹಿತರೆಲ್ಲರೂ ಹತ್ತಿರವಾಗಿದ್ದೆವು.

    ಕದ್ದ ಹಣ್ಣು ತುಂಬಾ ರುಚಿ:
    ರಜೆಯ ಒಂದು ದಿನ ಹಾಸ್ಟೆಲ್ ನಲ್ಲಿ ಕ್ರಿಕೆಟ್ ಆಡಿ ಮುಗಿದ ಬಳಿಕ ವರಾಂಡದಲ್ಲಿ ಕುಳಿತು ಸ್ನೇಹಿತರೆಲ್ಲರೂ ಹರಟೆ ಹೊಡೆಯುತ್ತಿದ್ದೆವು. ಈ ಸಮಯದಲ್ಲಿ ನಮ್ಮಲ್ಲೊಬ್ಬ ಗೆಳೆಯ ಹಾಸ್ಟೆಲ್ ಹಿಂದಿನ ತೋಟದಲ್ಲಿರುವ ಹಲಸಿನ ಹಣ್ಣಿನ ಬಗ್ಗೆ ಹೇಳಿದ್ದ. ಮೊದಲೇ ಕಾಲೇಜ್- ಹಾಸ್ಟೆಲ್ ನ ಜೀವನ. ನಮಗೆ ಆ ರಾತ್ರಿಯೇ ಹಲಸಿನ ಹಣ್ಣನ್ನು ಕದಿಯುವ ಯೋಚನೆಯಾಯಿತು.

    ಕೊನೆಗೆ ತಡರಾತ್ರಿಯೇ ಹಣ್ಣು ಕದಿಯಲು ನಿಪುಣ ಕಳ್ಳರಂತೆ ಯೋಜನೆ ರೂಪಿಸಿದೆವು. ಯಾರು ಮರ ಹತ್ತುವರು? ಹಣ್ಣನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವುದು ಯಾರು? ಹಾಗೂ ತೋಟದ ಮಾಲೀಕ ಬರುವುದೊಳಗೆ ಹಿಂದಿರುಗಬೇಕು ಎಂದು ಪಿಸುಗುಟ್ಟುತ್ತಾ ತೋಟಕ್ಕೆ ನುಗ್ಗಿದೆವು. ಶಬ್ದ ಬರದಂತೆ ಹಣ್ಣನ್ನು ಕೀಳಲು ಪ್ರಯತ್ನಿಸುತ್ತಿದ್ದೆವು. ಆದರೆ ಕೆಲ ಹೊತ್ತಿನಲ್ಲಿ ತೋಟದೊಳಗೆ ಜೋರಾದ ಶಬ್ದ ಕೇಳಿಸಿತು. ಎಲ್ಲರು ತೋಟದ ಮಾಲೀಕ ಬಂದನೆಂದು ಹೆದರಿ ತೋಟದಿಂದ ಕಾಲ್ಕಿತ್ತೆವು.

    ನಾವು ಓಡಿ ಹೋಗುತ್ತಿದ್ದಂತೆ ನಮ್ಮ ಹಿಂದೆಯೇ ಯಾರೋ ಇದ್ದಾರೆಂದು ಭಾಸವಾಯಿತು. ಒಮ್ಮೆ ಎಲ್ಲರೂ ಧೈರ್ಯ ಮಾಡಿ ಹಿಂದೆ ತಿರುಗಿ ನೋಡಿದರೆ ಗುಟುರಾಕುತ್ತಿದ್ದ ಹಂದಿಗಳು. ನಕ್ಕರೇ ತೋಟದ ಮಾಲೀಕ ಬರುತ್ತಾರೆ ಎಂದು ಮನಸಿನಲ್ಲೇ ನಕ್ಕು ಅವುಗಳನ್ನು ಓಡಿಸಿದೆವು. ಬಳಿಕ ಹಲಸಿನ ಹಣ್ಣಿನ ಜೊತೆ ಸಪೋಟ ಹಣ್ಣನ್ನು ಕಿತ್ತು ತೋಟದಿಂದ ಬಂದೆವು. ‘ಕದ್ದು ತಿನ್ನುವ ರುಚಿಯೇ ಬೇರೆ’ ಎಂಬ ಗಾದೆಯಂತೆ ತಂದಿಟ್ಟ ಹಣ್ಣುಗಳು ಕೇವಲ ಮೂರು ದಿನಗಳಲ್ಲಿ ಖಾಲಿಯಾಗುತ್ತಿದ್ದವು. ಯಾರನ್ನು ಕೇಳಿದರು ‘ತಿಂದವರ್ಯಾರು’ ಎಂಬ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು.

    ಹಾಸ್ಟೆಲ್ ನ ಸಪ್ಪೆ ಊಟ ತಿಂದು ಮರಗಟ್ಟಿದ್ದ ನಾಲಗೆಗೆ ರುಚಿ ಬೇಕೆನಿಸಿದಾಗ ಕೋಳಿ ಸುಟ್ಟು ತಿನ್ನುವ ಖಯಾಲಿ. ಉಪ್ಪು-ಖಾರ ಸರಿಯಾಗಿಲ್ಲ ಎಂದರೂ ಹಾಸ್ಟೆಲ್ ಊಟಕ್ಕಿನ್ನ ಮೋಸವಿಲ್ಲ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವಾಗ ಬಿಸಿ ಕೋಳಿ ತುಟಿ ಸುಟ್ಟ ನೆನಪು. ಆದರೆ ಹಳ್ಳಿಯಿಂದ ಕಾಲೇಜಿಗೆ ಈಗ ಬಂದಂತೆ ಭಾವನೆ, ನೋಡಿದರೆ ಕಾಲೇಜು ಜೀವನವೇ ಮುಗಿದು ಹೋಯಿತು.

    ಕದ್ದು ತಿಂದ ಹಣ್ಣು, ತುಟಿ ಸುಟ್ಟ ಕೋಳಿ, ಕಾಲೇಜಿನಲ್ಲಿ ಸ್ನೇಹಿತರ ಕೋಳಿ ಜಗಳ, ಸೆಂಡಾಫ್ ದಿನದ ಹುಚ್ಚು ಕುಣಿತ, ಪಕ್ಕದ ಡಿಪಾರ್ಟ್ ಮೆಂಟಿನ ಊಟ, ಜೂನಿಯರ್ ಗಳ ಹರಟೆ… ಇವೆಲ್ಲವೂ ಈಗ ಬರೀ ನೆನಪು ಮಾತ್ರ…

     – ಪವನ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಸರ್ಕಾರಿ ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಮೇಲೆ ವಿದ್ಯಾರ್ಥಿಯಿಂದ ಅತ್ಯಾಚಾರ

    ಸರ್ಕಾರಿ ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಮೇಲೆ ವಿದ್ಯಾರ್ಥಿಯಿಂದ ಅತ್ಯಾಚಾರ

    ಜೈಪುರ: ಸರ್ಕಾರಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ನಾಗಾರ್ ಜಿಲ್ಲೆಯಲ್ಲಿ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಖಾಸಗಿ ಕಾಲೇಜಿನ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಆತನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಆರೋಪಿ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಆತನಿಗೆ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯೂ ವಿದ್ಯಾರ್ಥಿಯಾಗಿದ್ದು, ಸರ್ಕಾರಿ ಕಾಲೇಜಿಗೆ ಬಂದು ತರಗತಿಯ ಕೊಠಡಿಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯಕ್ಕೆ ಅತ್ಯಾಚಾರ ನಡೆದಿದೆ ಎನ್ನಲಾಗಿರುವ ಕಾಲೇಜು ಕೊಠಡಿಯನ್ನು ತನಿಖೆಯ ಉದ್ದೇಶಕ್ಕಾಗಿ ಪೊಲೀಸರು ಲಾಕ್ ಮಾಡಿದ್ದಾರೆ.

    ಈ ಘಟನೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದ ಜಲ್ವಾರ್ ಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಈ ಘಟನೆಯ ಬಳಿಕವೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

    12 ವರ್ಷದ ಒಳಗಡೆ ಇರುವ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜಸ್ಥಾನದ ವಿಧಾನಸಭೆ ಮಾರ್ಚ್ ತಿಂಗಳಿನಲ್ಲಿ ಅಂಗಿಕರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv