Tag: ಕಾಲಾ

  • ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಬೆಂಗಳೂರು: ನಗರದ ಜಾಲಹಳ್ಳಿಯ ಭಾರತಿ ಚಿತ್ರಮಂದಿರದಲ್ಲಿ ಕಾಳಾ ಸಿನಿಮಾ ನೋಡಿದ ಕೆಲವರಿಗೆ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕು ಪ್ರದರ್ಶನ ಮಾಡಿದ್ದಾರೆ.

    ಕನ್ನಡಪರ ಸಂಘಟನೆಗಳ ಸಾಕಷ್ಟು ವಿರೋಧದ ನಡುವೆಯು ಕೆಲವು ಚಿತ್ರ ಮಂದಿರಗಳಲ್ಲಿ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಪ್ರದರ್ಶನಗೊಂಡಿದೆ. ಪ್ರತಿಭಟನೆ ಮಾಡಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಚಿತ್ರ ನೋಡಿ ಹೊರ ಬಂದ ಕೆಲವರಿಗೆ ಮೈಸೂರು ಪೇಟಾ, ಶಾಲು, ಹೂವಿನ ಹಾರ ಹಾಕಿ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕವಾಡಿದ್ದಾರೆ.

    ಸನ್ಮಾನ ಮಾಡಿದ ನಂತರ ಮಾತನಾಡಿದ ಹೋರಾಟಗಾರರು, ಕನ್ನಡ ದ್ರೋಹಿಗಳನ್ನು ಹುಡುಕುತ್ತಾ ಇದ್ದೀವಿ, ಅದು ನೀವೆ ಅಂತಾ ಸನ್ಮಾನ ಮಾಡಿದ್ದೇವೆ, ಸ್ವಾಭಿಮಾನಕ್ಕಿಂತ ಸಿನಿಮಾನೇ ಜಾಸ್ತಿ ಆಯಿತಾ ಅಂತಾ ಪ್ರಶ್ನಿಸಿದ್ದೇವೆ. ಸನ್ಮಾನ ಸ್ವೀಕರಿಸಿದ ಕೆಲ ಪ್ರೇಕ್ಷಕರು ಕ್ಷಮೆಯಾಚಿಸಿದರು. ಪೊಲೀಸರು ಸನ್ಮಾನ ಮಾಡುತ್ತಾರೆ ಎಂದು ಹೋರಾಟಗಾರರಿಗೆ ಅನುವು ಮಾಡಿಕೊಟ್ಟರು ಅಂತಾ ಹೇಳಿದರು.

    ಜ್ಯುರಾಸಿಕ್ ವಲ್ರ್ಡ್ ಹಾಲಿವುಡ್ ಸಿನಿಮಾ ಟಿಕೆಟ್ ನೀಡಿ ಕಾಳಾ ಚಿತ್ರವನ್ನು ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಿನ್ನೆ ಪ್ರದರ್ಶನ ಮಾಡಿದ್ದು ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನೂ ಓದಿ:ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

  • ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

    ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

    ಬೆಂಗಳೂರು: ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ ಮಾಡಿದ್ದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ ಘಟನೆ ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಡೆದಿದೆ.

    ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಥಿಯೇಟರ್ ನಲ್ಲಿ ಕಾಲ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿ, ಜ್ಯುರಾಸಿಕ್   ವರ್ಲ್ಡ್  ಸಿನಿಮಾವನ್ನು ಹಾಕಲಾಗಿತ್ತು. ಅಲ್ಲದೆ ಸಿನಿಮಾದ ಪೋಸ್ಟರ್ ಗಳನ್ನು ಥಿಯೇಟರ್ ನ ತುಂಬಾ ಹಾಕಲಾಗಿತ್ತು.

     

    ಇಂದು ಚಿತ್ರ ವೀಕ್ಷಿಸಲು ಬಂದ ಜನರಿಗೆ ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ವಿತರಣೆ ಮಾಡಿತ್ತು. ಇನ್ನೆನೂ ಚಿತ್ರ ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲಿ ತಮಿಳಿನ ಕಾಲಾ ಚಿತ್ರ ಪ್ರದರ್ಶನವಾಗಿದೆ. ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲಾ ಚಿತ್ರವನ್ನು ಪ್ರದರ್ಶನ ಮಾಡಿದ್ದಕ್ಕೆ ಪೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದಾರೆ.

    ಊರ್ವಶಿ ಚಿತ್ರಮಂದಿರ ಬುಕ್‍ಮೈ ಶೋನಲ್ಲಿಯೂ ಕೂಡ ಜ್ಯುರಾಸಿಕ್ ವರ್ಲ್ಡ್ ಪ್ರಕಟಿಸಿತ್ತು.

  • ಪ್ರಕಾಶ್ ರೈ ಚೌ ಚೌ ಬಾತ್, ಅತ್ತ ಕನ್ನಡಿಗನೂ ಅಲ್ಲ ತಮಿಳಿಗನೂ ಅಲ್ಲ : ವಾಟಾಳ್ ನಾಗರಾಜ್

    ಪ್ರಕಾಶ್ ರೈ ಚೌ ಚೌ ಬಾತ್, ಅತ್ತ ಕನ್ನಡಿಗನೂ ಅಲ್ಲ ತಮಿಳಿಗನೂ ಅಲ್ಲ : ವಾಟಾಳ್ ನಾಗರಾಜ್

    ಬೆಂಗಳೂರು: ಕಾಲಾ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಿನಿಮಾ ಪ್ರದರ್ಶನ ಮಾಡದಂತೆ ರಾಜ್ಯದ್ಯಾಂತ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ ಎಂದು ಕನ್ನಡ ಸಂಘ ಒಕ್ಕೂಟ ಸಂಘದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಇಂದು ನಗರದ ಮೇಖ್ರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ರಜನಿಕಾಂತ್ ಕನ್ನಡ ನಾಡಿನ ದ್ರೋಹಿ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರ ಸಿನಿಮಾಗಳನ್ನು ಕರ್ನಾಟದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಈ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ರೈ ವಿರುದ್ಧ ವಾಗ್ದಾಳಿ: ತಮಿಳು ಕಾಲಾ ಚಿತ್ರಕ್ಕೂ ಕಾವೇರಿಗೂ ಏನು ಸಂಬಂಧ ಎಂದು ಈ ಹಿಂದೆ ಪ್ರಶ್ನೆ ಮಾಡಿದ್ದ ಬಹು ಭಾಷಾ ನಟ ಪ್ರಕಾಶ್ ರೈ ಅವರ ಮಾತಿಗೆ ತಿರುಗೇಟು ನೀಡಿದ ವಾಟಾಳ್ ಅವರು, ಪ್ರಕಾಶ್ ರೈ ಚೌ ಚೌ ಬಾತ್ ಅತ್ತ ಕನ್ನಡಿನೂ ಅಲ್ಲ ತಮಿಳಿಗನೂ ಅಲ್ಲ. ಪ್ರಕಾಶ್ ರೈ ಯಾರು? ಅವನು ಈ ರೀತಿ ವಿರೋಧ ಮಾತಾನಾಡಿಯೇ ದೊಡ್ಡ ಮನುಷ್ಯನಾಗಿದ್ದು. ಪ್ರಕಾಶ್ ರೈ ಹುಟ್ಟುವ ಮೊದಲು ನಾನು ಹೋರಾಟ ಮಾಡಿದ್ದೇನೆ. ರಜನಿಗೆ ಬೆಂಬಲ ಕೊಡಲು ಅವನು ಯಾರು ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಕನ್ನಡ ನಟರ ವಿರುದ್ಧ ವಾಗ್ದಾಳಿ: ಕಾವೇರಿ ಪರ ಪ್ರತಿಭಟನೆ ನಡೆಸುತ್ತಿರುವ ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಸಿನಿಮಾ ಮಂದಿ ಬೆಂಬಲ ನೀಡಲ್ಲ. ಕನ್ನಡಿಗ ಸಿನಿಮಾ ರಂಗದವರು ಎಲ್ಲಿ ಹೋದರು? ಎಲ್ಲ ಬೆಳ್ಳಿತಟ್ಟೆಯಲ್ಲಿ ಊಟ ಮಾಡುವವರು. ಇದೇ ರೀತಿ ನಡೆದರೆ ಮುಂದಿನ ದಿನಗಳಲ್ಲಿ ಕನ್ನಡ ನಟರ ಮನೆ ಮುಂದೆಯೇ ಸತ್ಯಾಗ್ರಹ ಮಾಡುತ್ತೇವೆ. ಒಬ್ಬರು ರಜನಿ ಬಗ್ಗೆ ಧ್ವನಿಯೆತ್ತಿಲ್ಲ. ಎಲ್ಲಾ ಸೇಫ್ ಗೇಮ್ ಆಡುತ್ತಿದ್ದಾರೆ ಎಂದು ಆರೋಪಿಸಿದರು.

    ಕಳೆದ ಕೆಲ ದಿನಗಳ ಹಿಂದೆ ನಟ ಕಮಲ್ ಹಾಸನ್ ಕದ್ದು ಮುಚ್ಚಿ ಸಿಎಂ ಭೇಟಿಯಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಯಾಕೆ ಕನ್ನಡ ವಿರೋಧಿಗಳನ್ನು ಭೇಟಿಯಾಗಬೇಕು. ಈ ಹಿಂದೆ ಕಾವೇರಿ ಸಮಸ್ಯೆ ಚರ್ಚೆ ನಡೆಸಲು ಜಯಲಲಿತಾ, ಡಿಎಂಕೆ ಕರುಣಾನಿಧಿ ಬಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಾತ್ರ ಈ ರೀತಿ ನಡೆ ನಡೆಸುವುದು ಉತ್ತಮವಲ್ಲ. ರಜನಿಕಾಂತ್, ಕಮಲ್ ಹಾಸನ್ ರನ್ನು ಕನ್ನಡದ ನೆಲಕ್ಕೆ ಕಾಲಿಡಕ್ಕೆ ಬಿಡಲ್ಲ ಎಂದರು.

    ಹೋರಾಟ ವೇಳೆ ಪೊಲೀಸರು ಬಂಧನ ಮಾಡಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದರೆ, ಕರ್ನಾಟಕ ಎಲ್ಲಾ ಭಾಗಗಳಲ್ಲೂ ಸಿನಿಮಾ ವಿರುದ್ಧ ಹೋರಾಟ ಮುಂದುವರೆಸುತ್ತೇವೆ. ಹೋರಾಟ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ. ಯಾವುದೇ ಕಾರಣಕ್ಕೂ ಸಿನಿಮಾ ಪ್ರದಶನಕ್ಕೆ ಅವಕಾಶ ನೀಡಲ್ಲ ಎಂದರು.

     

  • ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

    ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

    ಬೆಂಗಳೂರು: ರಾಜ್ಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಕಾಲಾ’ ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಚಿತ್ರ ಪ್ರದಶನಕ್ಕೆ ಪೊಲೀಸ್ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚಿಸಿದೆ.

    ಕರ್ನಾಟಕದಲ್ಲಿ ‘ಕಾಲಾ’ ಸಿನಿಮಾ ಬಿಡುಗಡೆ ವಿಚಾರವಾಗಿ ರಜನಿ ಅಳಿಯ ಧನುಷ್ ಹೈಕೋರ್ಟ್ ನಲ್ಲಿ ಜೂ.4 ರಂದು ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕ ಸದಸ್ಯ ಪೀಠ ಸಿನಿಮಾದ ಬಿಡುಗಡೆ ಮಧ್ಯಂತರ ಆದೇಶ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ಭದ್ರತೆಯೊಂದಿಗೆ ಚಿತ್ರ ಬಿಡುಗಡೆ ಅವಕಾಶ ನೀಡಿದ್ದು, ಚಲನಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗುತ್ತೆ ಎನ್ನುವ ವರದಿಯನ್ನು ಚಿತ್ರತಂಡ ಕೂಡಲೇ ಸರ್ಕಾರಕ್ಕೆ ನೀಡಬೇಕು ಎಂದು ಸೂಚನೆ ನೀಡಿದೆ.

    ವಾದ-ಪ್ರತಿವಾದ ಹೇಗಿತ್ತು?
    ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಬೆದರಿಕೆಯಿದ್ದು, ಚಿತ್ರ ಬಿಡುಗಡೆಗೆ ಸರಿಯಾದ ಭದ್ರತೆಯನ್ನು ನೀಡಬೇಕು ಎಂದು ಚಿತ್ರ ತಂಡದ ಪರ ವಕೀಲರು ಮನವಿ ಮಾಡಿಕೊಂಡರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕೊಲೆ ಬೆದರಿಕೆ ಇದೆ ಅಂತಾ ಹೇಳುತ್ತಿರುವಿರಿ, ಎಲ್ಲಿ ಬೆದರಿಕೆ ಇದೆ? ಯಾವುದಾದರೂ ಪ್ರದೇಶ ಬಗ್ಗೆ ತಿಳಿಸಿ. ಗಾಂಧಿನಗರದಲ್ಲಿ ಬೆದರಿಕೆ ಇದೆ ಎನ್ನುತ್ತಿರಾ ಅಥವಾ ನಿಮ್ಮ ಭಯ ಊಹೆ ಮೇಲೆ ನಿಂತಿದೆಯೇ? ಚಿತ್ರ ಬಿಡುಗಡೆಗೆ ಭಯ ಇದ್ದರೆ ಪೊಲೀಸ್ ರಕ್ಷಣೆ ಪಡೆದುಕೊಳ್ಳಬಹುದು. ನೀವು ಯಾರೊಬ್ಬರ ಮೇಲೂ ನೇರವಾಗಿ ಆರೋಪ ಮಾಡುತ್ತಿಲ್ಲ. ಆದರೆ ಬೆದರಿಕೆ ಇದೆ ಅಂತ ಆರೋಪ ವ್ಯಕ್ತ ಪಡಿಸುತ್ತಿರುವಿರಿ. ನಿಮಗೆ ಭಯ ಇರುವುದು ಸ್ಪಷ್ಟವಾಗಿದ್ದರೆ ಅದು ಯಾರಿಂದ ಇರುವುದೆಂದು ತಿಳಿಸಿ ಎಂದು ಪ್ರಶ್ನಿಸಿದರು.

    ಈ ಪ್ರಶ್ನೆಗಳಿಗೆ ಉತ್ತರಿಸಿದ ವಕೀಲರು, ಸಾಕಷ್ಟು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಬಿಡುಗಡೆಯ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು. ಅವರ ಭಯವನ್ನು ಅರಿತ ನ್ಯಾಯಾಧೀರು, ಚಿತ್ರ ಬಿಡುಗಡೆಯಾದರೆ ಸರ್ಕಾರ ಭದ್ರತೆಯನ್ನು ನೀಡಲು ಯಾವುದೇ ತೊಂದರೆಗಳಿಲ್ಲವಲ್ಲ ಎಂದು ಎಎಜಿ ಶಿವಣ್ಣ ಅವರನ್ನು ಪ್ರಶ್ನಿಸಿದರು.

    ಚಿತ್ರ ಬಿಡುಗಡೆಗೆ ತೊಂದರೆಯಿಲ್ಲ. ಆದರೆ ಚಿತ್ರತಂಡವು ಎಲ್ಲಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಬಗ್ಗೆ ನಮಗೆ ಇದುವರೆಗೂ ಮಾಹಿತಿ ನೀಡಿಲ್ಲವೆಂದು ಉತ್ತರಿಸಿದರು. ಹಾಗಾದರೆ ಚಿತ್ರತಂಡ ಸೂಕ್ತ ಮಾಹಿತಿ ಒದಗಿಸಿದರೆ ಬಿಡುಗಡೆಗೆ ನಿಮ್ಮ ಕಡೆಯಿಂದ ತೊಂದರೆ ಇಲ್ಲವಲ್ಲಾ ಎಂದು ಈ ವೇಳೆ ಜಡ್ಜ್ ಮರುಪ್ರಶ್ನೆ ಹಾಕಿದರು. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಎಎಜಿ ಉತ್ತರಿಸಿದರು.

    ಚಿತ್ರ ಬಿಡುಗಡೆಗೆ ನಾವು ಯಾವುದೇ ನಿರ್ಬಂಧ ಹೇರಲು ಬರುವುದಿಲ್ಲ. ಅದರೆ ಈ ಕುರಿತು ಕನ್ನಡ ಪರ ಸಂಘಟನೆಗಳು ಹೇಳಿಕೆ ನೀಡಿವೆ. ಸಂಘಟನೆಗಳು ಫಿಲಂ ಚೇಂಬರ್ ಅಧೀನದಲ್ಲಿವೆ, ಹೀಗಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ಫಿಲಂ ಚೇಂಬರ್ ಪರ ವಕೀಲರು ತಮ್ಮ ವಾದವನ್ನು ಮುಂದಿಟ್ಟರು.

    ಚೇಂಬರ್ ಪರ ವಕೀಲರ ವಾದಕ್ಕೆ, ಪ್ರತಿಭಟನೆ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ ಎಂದು ಜಡ್ಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಈ ವೇಳೆ ಕರ್ನಾಟಕದಲ್ಲಿ ಹಿಂದಿ ಮತ್ತು ತೆಲುಗು ಚಿತ್ರಗಳಿಗೆ ಈ ತೊಂದರೆ ಆಗುವುದಿಲ್ಲ. ಆದರೆ ತಮಿಳು ಚಿತ್ರಕ್ಕೆ ಮಾತ್ರ ಇಂತಹ ಸಮಸ್ಯೆ ಎದುರಾಗುತ್ತದೆ ಎಂದು ಕಾಲಾ ಪರ ವಕೀಲರು ವಾದಿಸಿದರು. ಜನಾಭಿಪ್ರಾಯ, ಜನರ ಇಚ್ಛೆಯನ್ನು ಬದಲಿಸುವಂತೆ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಏನು ಬೇಕು ಅದನ್ನು ಸ್ವೀಕರಿಸ್ತಾರೆ ಅಷ್ಟೇ ಎಂದು ಜಡ್ಜ್ ಉತ್ತರಿಸಿದರು.

    ದಯಮಾಡಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ, ನಿರ್ಮಾಪಕರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಕಾಳಾ ಪರ ವಕೀಲರು ನ್ಯಾಯಾಧೀಶರಿಯಲ್ಲಿ ಮನವಿ ಮಾಡಿಕೊಂಡರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಕರ್ನಾಟಕದಲ್ಲಿ ಜನರ ಶಾಂತಿಗೆ ಭಂಗ ಆಗದಂತೆ ಪೊಲೀಸ್ ಕಣ್ಗಾವಲಿನಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಿ. ಯಾವುದೇ ತೊಂದರೆ ಆಗಬಾರದು. ಅಲ್ಲದೇ ಸರ್ಕಾರ ಯಾವ ಮಾಹಿತಿ ಕೇಳುತ್ತದೋ ಅದನ್ನು ನೀಡಿ ಎಂದು ಚಿತ್ರತಂಡಕ್ಕೆ ಆದೇಶ ನೀಡಿದರು.

    ಹೈಕೋರ್ಟ್‍ನಲ್ಲಿ ಚಿತ್ರ ಬಿಡುಗಡೆ ಏನಾಗುತ್ತದೆ ಎಂದು ಕಾತುರದಲ್ಲಿ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳು ಆದೇಶದ ಬರುತ್ತಿದ್ದಂತೆ ಪಟಾಕಿ ಹೊಡೆದು ಸಂಭ್ರಮಿಸಿದರು.

  • ರಾಜ್ಯದಲ್ಲಿ ‘ಕಾಲಾ’ ಚಿತ್ರ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿಗೆ ಮನವಿ

    ರಾಜ್ಯದಲ್ಲಿ ‘ಕಾಲಾ’ ಚಿತ್ರ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿಗೆ ಮನವಿ

    ಬೆಂಗಳೂರು: ಕರ್ನಾಟಕದಲ್ಲಿ ತಮಿಳು ಚಿತ್ರ ‘ಕಾಲಾ’ ಬಿಡುಗಡೆ ಮಾಡದಂತೆ ಕರುನಾಡ ಸೇವಕರ ಸಂಘ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದೆ.

    ರಜನಿಕಾಂತ್ ಕನ್ನಡಿಗರಿಗೆ ಮೋಸ ಮಾಡಿದ್ದಾರೆ. ಅವರು ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. ನಮ್ಮ ನಾಡಲ್ಲಿ ನೀರಿಲ್ಲ ಎಂದರೂ ತಮಿಳುನಾಡಿಗೆ ನೀರು ಬಿಡುವಂತೆ ರಜಿನಿಕಾಂತ್ ಆಗ್ರಹಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕ್ಕೆ ಅನ್ಯಾಯವಾಗಲಿದೆ. ಆದರೆ ಇದು ಅರಿವಿದ್ದರು ಕೂಡ ನಿರ್ವಹಣಾ ಸಮಿತಿಯ ರಚನೆ ಮಾಡುವಂತೆ ಆಗ್ರಹಿಸಿದ್ದಾರೆ ಎಂದು ಸಂಘ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

    ಕನ್ನಡಿಗರ ನಿಲುವನ್ನು ವಿರೋಧಿಸಿದ್ದರಿಂದ ರಜನಿಕಾಂತ್ ಅವರ ಕಾಲಾ ಚಿತ್ರ ಬಿಡುಗಡೆ ಮಾಡಬಾರದು. ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿಗೂ ಕರುನಾಡ ಸೇವಕರ ಸಂಘ ಮನವಿ ಮಾಡಿದೆ.

  • ಕರಿ`ಕಾಲಾ’ನ ಬೀದಿ ನಾಯಿ `ಮಣಿ’ಗೆ ಕೋಟಿ ಕೋಟಿ ಬೆಲೆ!

    ಕರಿ`ಕಾಲಾ’ನ ಬೀದಿ ನಾಯಿ `ಮಣಿ’ಗೆ ಕೋಟಿ ಕೋಟಿ ಬೆಲೆ!

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ `ಕಾಲಾ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬೀದಿ ನಾಯಿ `ಮಣಿ’ ಗೆ ಈಗ ಕೋಟಿ ಕೋಟಿ ಬೆಲೆ ಬಂದಿದೆ.

    ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ `ಕಾಲಾ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಣಿ ಹೆಸರಿನ ಬೀದಿ ನಾಯಿ ಸದ್ಯ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿದೆ. ನಾಯಿಯನ್ನು ಪಡೆಯಲು ಸೂಪರ್ ಸ್ಟಾರ್ ಅಭಿಮಾನಿಗಳು ಪ್ರಯತ್ನಿಸುತ್ತಿದ್ದು, ಕೋಟಿ ಗಟ್ಟಲೇ ಹಣ ನೀಡಿ ಖರೀದಿಸಲು ಮುಂದಾಗಿದ್ದಾರೆ ಎನ್ನುವ ವಿಚಾರ ಕಾಲಿವುಡ್ ಅಂಗಳದಿಂದ ಕೇಳಿ ಬಂದಿದೆ.

    ಪ್ರಸ್ತುತ `ಮಣಿ’ ಮಾಲೀಕರಾಗಿರುವ ಪ್ರಾಣಿಗಳ ತರಬೇತುದಾರ ಸೈಮನ್ ಈ ನಾಯಿ ಯನ್ನು ಚೆನ್ನೈನ ಬೀದಿಯಿಂದ ಹಿಡಿದು ತಂದು ತರಬೇತಿಯನ್ನು ನೀಡುತ್ತಿದ್ದರು. ಈ ವೇಳೆ ರಜಿನಿಕಾಂತ್ ಅವರ ಸಿನಿಮಾಗಾಗಿ ನಾಯಿ ಆಯ್ಕೆ ಮಾಡಲು ಆಡಿಷನ್ ನಡೆಸಲಾಗುತಿತ್ತು. ಚಿತ್ರದ ಆಡಿಷನ್ ಗೆ ಬಂದಿದ್ದ 30 ಕ್ಕೂ ಹೆಚ್ಚು ನಾಯಿಗಳನ್ನು ರಜನಿಕಾಂತ್ ನಿರಾಕರಿಸಿದ್ದರು.

    ಹಲವು ನಾಯಿಗಳನ್ನು ತೋರಿಸಿದರೂ ಯಾವ ನಾಯಿಯೂ ಆಯ್ಕೆಯಾಗದಿರುವುದು ಕಂಡ ಸೈಮನ್ ಅವರಿಗೆ ರಜನಿ ಅವರ ಜೊತೆ ಸಿನಿಮಾದಲ್ಲಿ ಭಾಗವಹಿಸುವ ಅವಕಾಶ ಕೈ ತಪ್ಪುವ ಭಯ ಉಂಟಾಗಿತ್ತು. ಆದರೆ ಮಣಿಯನ್ನು ಅವರಿಗೆ ತೋರಿಸಿದ ನಂತರ ಅದನ್ನು ಆಯ್ಕೆ ಮಾಡಲಾಯಿತು. ಚಿತ್ರೀಕರಣದ ವೇಳೆ ರಜನಿ ಹಾಗೂ ಮಣಿ ಅವರ ನಡುವೆ ಉತ್ತಮ ಸ್ನೇಹ ಏರ್ಪಟಿದೆ ಎಂದು ಸೈಮನ್ ಹೇಳಿದ್ದಾರೆ.

    ಸಿನಿಮಾದಲ್ಲಿ ರಜನಿ ಅವರ ಪಕ್ಕ ಕಾಣಿಸಿಕೊಳ್ಳುವ ನಾಯಿಯಾದ ಕಾರಣ ಇದರ ಆಯ್ಕೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅಲ್ಲದೇ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡದ ಇತರೇ ನಟರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಅಂಶಗಳ ನಡುವೆ ಮಣಿ ನಾಯಿಯನ್ನು ಚಿತ್ರಕ್ಕೆ ಆಯ್ಕೆ ಮಾಡಲಾಯಿತು ಎಂದು ಸೈಮನ್ ವಿವರಿಸಿದ್ದಾರೆ.

    ಸೈಮನ್ ಇದುವರೆಗೆ ಸುಮಾರು 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರಾಣಿಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ರಜನಿ ಅವರ ಕಾಲಾ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮಣಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಸುಮಾರು 2 ರಿಂದ 3 ಕೋಟಿ ರೂ. ನೀಡುವುದಾಗಿ ಹಲವು ಅಭಿಮಾನಿಗಳು ಮುಂದೆ ಬಂದಿದ್ದಾರೆ. ಆದರೆ ಮಣಿಯನ್ನು ಮಾರಾಟ ಮಾಡುವ ಯಾವುದೇ ಯೋಚನೆಯನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಅಂದಹಾಗೇ ಮಣಿಗೆ 2.6 ವರ್ಷ ವಯಸ್ಸಾಗಿದ್ದು, ಈಗಾಗಲೇ ತಮಿಳಿನ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಮಣಿಯನ್ನ ಖರೀದಿಸಲು ಭಾರತದಿಂದ ಅಲ್ಲದೇ ಮಲೇಷಿಯಾ ಸೇರಿದಂತೆ ಹಲವು ದೇಶಗಳಿಂದ ಅಭಿಮಾನಿಗಳು ಕರೆ ಮಾಡಿದ್ದಾರೆ ಎಂದು ಸೈಮನ್ ಹೇಳಿದ್ದಾರೆ.