Tag: ಕಾರ ಹುಣ್ಣಿಮೆ

  • ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

    ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಕರಿಹರಿಯುವ ಹಬ್ಬದ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

    ಕೋವಿಡ್-19 ಹಿನ್ನೆಲೆ ಕಾರಹುಣ್ಣಿಮೆ ದಿನ ಎತ್ತುಗಳನ್ನು ಓಡಿಸುವ ಹಬ್ಬ ಆಚರಣೆ ಮಾಡಬಾರದು ಎಂದು ತಾಲೂಕಾಡಳಿತ, ಪೊಲೀಸ್ ಮತ್ತು ಗ್ರಾ.ಪಂ ನವರು ಸೂಚಿಸಿದ್ದರು. ಸರ್ಕಾರದ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಗುರುವಾರ ಸಂಜೆ ಕರಿ ಹರಿಯುವ ಹಬ್ಬ ಆಚರಣೆ ಮಾಡಿದ್ದರು. ಈ ವೇಳೆ ರಭಸದಿಂದ ಓಡಿ ಬಂದ ಎತ್ತೊಂದು ಗ್ರಾಮದ ಯುವಕ ಕಿರಣಕುಮಾರ್ ಮಲಕಾಜಪ್ಪ ನೆರ್ತಿ (22) ಎಂಬಾತನಿಗೆ ಬಲವಾಗಿ ಗುದ್ದಿದೆ. ತೀವ್ರ ಗಾಯಗೊಂಡ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

    ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೈನ್ಯ ಸೇವೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಆದರೆ ವಿಧಿಯ ಆಟಕ್ಕೆ ಸೈನಿಕನಾಗುವ ಕನಸು ಹೊತ್ತ ಯುವಕ ಮಸನ ಸೇರಿದ್ದು ವಿಪರ್ಯಾಸ. ಯುವಕನ ಸಾವಿನ ಸುದ್ದಿ ತಿಳಿದು ಇಡೀ ಊರಿಗೆ ಊರೆ ಶೋಕಸಾಗರದಲ್ಲಿ ಮುಳುಗಿದಂತಿದೆ.

    ಸೂರಣಗಿ ಗ್ರಾಮದ ದೊಡ್ಡ ಆಂಜನೇಯ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿನ್ನೆ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಯುವಕ ಕಿರಣ್ ಕುಮಾರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ, ಯುವಕ ಗಂಭೀರವಾಗಿ ಗಾಯಗೊಂಡಿದ್ದ.

    ಯುವಕ ಸಾವನ್ನಪ್ಪಿದ್ದರಿಂದ ನಿಯಮ ಮೀರಿ ಕರಿ ಹರಿಯುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಗ್ರಾಮದ 21 ಜನರ ವಿರುದ್ಧ ಕೋವಿಡ್ ನಿಯಮಾನುಸಾರ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ ಹುಣ್ಣಿಮೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರಹ

    ಕಾರ ಹುಣ್ಣಿಮೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರಹ

    ಗದಗ: ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಕಾಂಗ್ರೆಸ್‍ನಲ್ಲಿ ಮುಂದಿನ ಸಿಎಂ ಕಚ್ಚಾಟ ಜೋರಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಕಾರ ಹುಣ್ಣಿಮೆಗೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬರೆದು ಅಭಿಮಾನ ತೋರಿಸಿದ್ದಾರೆ.

    ರಾಜ್ಯದ ವಿವಿಧ ಭಾಗಗಳಲ್ಲಿ ಕಾರ ಹುಣ್ಣಿಮೆಯನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆಚರಿಸಲಾಗಿದೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವ ಪ್ರತೀತಿ ಇದೆ. ಈ ಬಾರಿ ಕೂಡ ಸರಳವಾಗಿ ಗ್ರಾಮಸ್ಥರು ಕಾರ ಹುಣ್ಣಿಮೆ ಆಚರಿಸಿದ್ದಾರೆ. ಈ ಬಾರಿ ಎತ್ತಿಗೆ ಸಿಂಗರಿಸುವ ವೇಳೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕ್ಯಾಂಪೇನ್ ಮಾಡಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

    ಗ್ರಾಮದಲ್ಲಿ ಕಾರ ಹುಣ್ಣಿಮೆ ದಿನ ಕರಿ ಹರಿಯುವ ಸಂಪ್ರದಾಯಕ್ಕೆ ತಕ್ಕಂತೆ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ಮೆರವಣಿಗೆಗೆ ಸಿದ್ಧಗೊಳಿಸಿದ್ದ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರವಣಿಗೆಯೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಇದೀಗ ಸಿಎಂ ಕ್ಯಾಪೇನ್‍ನ ಎತ್ತಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

    ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

    ಗದಗ: ಗಾಳಿಪಟದ ದಾರ ಸಿಲುಕಿ ವ್ಯಕ್ತಿಯೋರ್ವನ ಕೈ ಬೆರಳು ಹಾಗೂ ಕುತ್ತಿಗೆಗೆ ಗಾಯವಾದ ಘಟನೆ ನಗರದ ಟಾಂಗಾ ಕೂಟ ಬಳಿ ನಡೆದಿದೆ. ಕಾರಹುಣ್ಣಿಮೆ ನಿಮಿತ್ತ ಮಕ್ಕಳು, ಯುವಕರು ಗಾಳಿಪಟ ಹಾರಿಸುವುದೇ ಒಂದು ಸಂಭ್ರಮ. ಇಂದು ಸಾಕಷ್ಟು ಬ್ರಹತ್ ಗಾತ್ರದ ಬಣ್ಣ ಬಣ್ಣದ ಪಟಗಳು ಬಾನಂಗಳದಲ್ಲಿ ಹಾರಾಡುತ್ತವೆ. ಅನೇಕ ಪಟಗಳು ಹರಿದು ಎಲ್ಲಂದರಲ್ಲಿ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿಸುತ್ತಿವೆ.

    ಇಂದು ಸಹ ಗಾಳಿಪಟವೊಂದು ಹರಿದು ವೇಗವಾಗಿ ಬಂದಿದೆ. ಅದನ್ನು ಗಮನಿಸದ ಬೈಕ್ ಸವಾರನ ಕೈ ಹಾಗೂ ಕುತ್ತಿಗೆಗೆ ಏಕಾಏಕಿ ದಾರ ಸಿಲುಕಿದೆ. ಪ್ಲಾಸ್ಟಿಕ್ ಹಾಗೂ ಗಾಜಿನ ಪುಡಿ ಮಿಶ್ರಿತದಿಂದ ತಯಾರಿಸಿದ ದಾರ ಇದಾಗಿದೆ. ಜೋರಾಗಿ ಎಳೆದುಕೊಂಡಿದ್ದರಿಂದ ಕೈ ಬೆರಳು ಹಾಗೂ ಕತ್ತು ಹರಿದು ನೆತ್ತರು ನೆಲಕ್ಕೆ ಚಿಮ್ಮಿದೆ.

    ಗಾಯಾಳು ವ್ಯಕ್ತಿ ಬೈಕ್ ನಿಂದ ಕೆಳಗೆ ಬಿದ್ದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಎಬ್ಬಿಸಿದ್ದಾರೆ. ನಂತರ ಕೈ ಹಾಗೂ ಕೊರಳಿಗೆ ಸಿಲುಕಿದ ದಾರಿ ಬೀಡಿಸಿದ್ದಾರೆ. ಸಾಕಷ್ಟು ರಕ್ತ ಹರಿಯುತ್ತಿರುವುದರಿಂದ ಕೈ ತೊಳೆದು, ಬಟ್ಟೆಕಟ್ಟಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ್ರು.

    ಗಾಳಿಪಟದ ಮಾಂಜಾ ದಾರದಿಂದಾಗಿ ಮನುಷ್ಯರಷ್ಟೆ ಅಲ್ಲದೇ ಪ್ರಾಣಿ ಪಕ್ಷಿಗಳ ಜೀವ ಹಾನಿಗೊಳಗಾಗುತ್ತಿವೆ. ಪ್ಲಾಸ್ಟಿಕ್ ಹಾಗೂ ಗಾಜಿನ ಪುಡಿ ಮಿಶ್ರಣದಿಂದ ತಯಾರಿಸಿದ ಪಟದ ಮಾಂಜಾ ಬಳಕೆ ಬಂದ್ ಮಾಡಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

  • ರಾಯಚೂರಲ್ಲಿ ಕಳೆಕಟ್ಟಿದ ಕಾರಹುಣ್ಣಿಮೆ ಸಂಭ್ರಮ..!

    ರಾಯಚೂರಲ್ಲಿ ಕಳೆಕಟ್ಟಿದ ಕಾರಹುಣ್ಣಿಮೆ ಸಂಭ್ರಮ..!

    ರಾಯಚೂರು: ಮುಂಗಾರು ಸಾಂಸ್ಕೃತಿಕ ಹಬ್ಬ ಕಾರಹುಣ್ಣಿಮೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಾರಹುಣ್ಣಿಮೆ ನಿಮಿತ್ಯ ಜೋಡೆತ್ತುಗಳಿಗೆ ಆಯೋಜಿಸಿದ್ದ ಸ್ಪರ್ಧೆ ಹಬ್ಬದ ಸಂಭ್ರಮಕ್ಕೆ ಕಳೆಕಟ್ಟಿತ್ತು.

    ಜಿಲ್ಲೆಯಾದ್ಯಂತ ಕಾರಹುಣ್ಣಿಮೆ ಮುಂಗಾರು ಸಾಂಸ್ಕೃತಿಕ  ಹಬ್ಬದ ಸಂಭ್ರಮ ಮನೆ ಮಾಡಿದೆ. ಮುನ್ನೂರು ಕಾಪು ಸಮಾಜದವರು ಆಚರಿಸುವ ಮುಂಗಾರು ಹಬ್ಬದಿಂದ ನಗರದಲ್ಲಿ ಸಾಂಸ್ಕೃತಿಕ ಲೋಕವೇ ಅನಾವರಣಗೊಂಡಿತ್ತು.

    ಜೂನ್ 27 ರಿಂದ 29ರ ವರೆಗೆ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಒಟ್ಟಿನಲ್ಲಿ ಕಾರ ಹುಣ್ಣಿಮೆ ಬಳಿಕ ಬರುವ ಮುಂಗಾರು ನಮ್ಮ ಕೈ ಹಿಡಿಯಲಿ ಎನ್ನುವುದು ಅನ್ನದಾತರ ಆಶಯ. ಇದು ಕೇವಲ ಜಿಲ್ಲೆಯ ಉತ್ಸವವಾಗದೆ ರಾಜ್ಯದ ಉತ್ಸವವಾಗಬೇಕು ಎನ್ನುವ ಉದ್ದೇಶದಿಂದ ವರ್ಷದಿಂದ ವರ್ಷಕ್ಕೆ ಅತೀ ಸಡಗರದಿಂದ ಆಚರಿಸಲಾಗುತ್ತಿದೆ.

    ಪ್ರತಿ ವರ್ಷದಂತೆ ಈ ಬಾರಿಯೂ ಕಾರಹುಣ್ಣಿಮೆಯನ್ನ ಮುಂಗಾರು ಹಬ್ಬವಾಗಿ ಸಡಗರದಿಂದ ಆಚರಿಸಲಾಗುತ್ತಿದೆ. ವರುಣದೇವ ರೈತರ ಮೇಲೆ ಕರುಣೆ ತೋರಲಿ ಅನ್ನೋದು ಹಬ್ಬದ ಉದ್ದೇಶ. ಆನೆ ಗಾತ್ರದ ಎತ್ತುಗಳು ಭಾರದ ಕಲ್ಲನ್ನ ಎಳೆಯುವ ಸ್ಪರ್ಧೆ ಈ ಹಬ್ಬಕ್ಕೆ ನಿಜವಾಗಿಯೂ ಕಳೆಕಟ್ಟುತ್ತದೆ.

    ಒಂದೂವರೆ ಟನ್, ಎರಡು ಟನ್, ಎರಡು ವರೆ ಟನ್ ತೂಕದ ಕಲ್ಲುಗಳನ್ನು ಎಳೆಯುವ ಸ್ಪರ್ಧೆಯನ್ನು ಎತ್ತುಗಳಿಗೆ ಏರ್ಪಡಿಸಲಾಗಿದೆ. ಒಟ್ಟು 6 ಲಕ್ಷ ರೂಪಾಯಿಯ ಬಹುಮಾನಗಳನ್ನ ವಿಜೇತ ಎತ್ತಿನ ಜೋಡಿಗಳಿಗೆ ನೀಡಲಾಗುತ್ತೆ. ಈ ಬಾರಿ ಒಟ್ಟು 60 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

    ಈ ಹಬ್ಬದ ನಿಮಿತ್ಯವಾಗಿ ಮೊದಲ ದಿನ ರಾಜ್ಯದ ಎತ್ತುಗಳ ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 18 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪಶುಸಂಗೋಪನಾ ಸಚಿವರಾದ ವೆಂಕಟರಾವ್ ನಾಡಗೌಡ ರವರು ಉತ್ಸವಕ್ಕೆ ಚಾಲನೆ ನೀಡಿದರು.

     

    ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸ್ಪರ್ಧೆಗೆ ಈ ಬಾರಿಯೂ ಬೃಹದಾಕಾರದ ಎತ್ತುಗಳು ಆಗಮಿಸಿದ್ದವು. ರಾಜ್ಯ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜೋಡಿ ಎತ್ತುಗಳ ಪೈಪೋಟಿ ನೋಡುಗರನ್ನ ಮೂಕವಿಸ್ಮಿತಗೊಳಿಸುತ್ತದೆ. ಮುಂಗಾರು ಸಾಂಸ್ಕೃತಿಕ ಹಬ್ಬ ವೀಕ್ಷಣೆಗೆ ಆಂಧ್ರಪ್ರದೇಶ, ತೆಲಂಗಾಣದಿಂದಲೂ ಜನ ಆಗಮಿಸುತ್ತಿದ್ದಾರೆ.