Tag: ಕಾರ್ಯಾಧ್ಯಕ್ಷ

  • ಕಾರ್ಯಾಧ್ಯಕ್ಷರ ಪ್ರಸ್ತಾಪಕ್ಕೆ ಮೂಲ ಕೈ ನಾಯಕರು ತೀವ್ರ ವಿರೋಧ

    ಕಾರ್ಯಾಧ್ಯಕ್ಷರ ಪ್ರಸ್ತಾಪಕ್ಕೆ ಮೂಲ ಕೈ ನಾಯಕರು ತೀವ್ರ ವಿರೋಧ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕದ ಜೊತೆಗೆ ಕಾರ್ಯಾಧ್ಯಕ್ಷರ ನೇಮಕಕ್ಕೆ ಮೂಲ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಬಣ ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೆಪಿಸಿಸಿಗೆ ಕಾರ್ಯಾಧ್ಯಕ್ಷರ ನೇಮಕವೇ ಅಗತ್ಯವಿಲ್ಲ ಎಂದಿದ್ದಾರೆ.

    ಕಾರ್ಯಾಧ್ಯಕ್ಷ ವಿಚಾರದಲ್ಲೂ ಬಹಳಷ್ಟು ಗೊಂದಲ ಸೃಷ್ಟಿಯಾಗಿಬಿಟ್ಟಿದೆ. ನನ್ನ ಅನುಭವದ ಪ್ರಕಾರ ಅಧ್ಯಕ್ಷರಿಗೆ ಸಹಕಾರಿಯಾಗಿ ಉಪಾಧ್ಯಕ್ಷರು ಇರಬಹುದು. ಅದೇ ರೀತಿ ನಾಲ್ಕು ಜನ ಕಾರ್ಯಾಧ್ಯಕ್ಷ ಅವಶ್ಯಕತೆ ಇಲ್ಲ ಅನಿಸುತ್ತದೆ. ನಾಲ್ಕು ಜನ, ಇಬ್ಬರಾಗಲಿ ಕಾರ್ಯಾಧ್ಯಕ್ಷರ ಅವಶ್ಯಕತೆ ಇಲ್ಲ. ದೇಶದಲ್ಲಿ ಎಲ್ಲಿಯೂ ಇಲ್ಲ. ನನ್ನ ಪ್ರಕಾರ ನಾಲ್ಕಲ್ಲ, ಒಂದೂ ಕಾರ್ಯಾಧ್ಯಕ್ಷರ ಅವಶ್ಯಕತೆಯೂ ಇಲ್ಲ ಎಂದು ಸಿದ್ದರಾಮಯ್ಯ ಕಾರ್ಯಧ್ಯಕ್ಷ ನೇಮಕ ಪಟ್ಟಿಗೆ ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಯಾಧ್ಯಕ್ಷರ ಬದಲು ಹಿರಿಯ ಉಪಾಧ್ಯಕ್ಷರ ನೇಮಕವಾಗಲಿ. ಆಗ ಸೀನಿಯಾರಿಟಿ ಪ್ರಶ್ನೆ ಬರುವುದಿಲ್ಲ. ಉಪಾಧ್ಯಕ್ಷರುಗಳನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಿ. ಇಲ್ಲದೇ ಹೋದರೆ ಕಾರ್ಯಾಧ್ಯಕ್ಷರ ನಡುವೆಯೇ ಗೊಂದಲ ಸೃಷ್ಟಿಯಾಗುತ್ತದೆ ಎಂದಿದ್ದಾರೆ.

    ಸ್ಥಾನ ಪ್ರತ್ಯೇಕವಾಗಲಿ:
    ಪಕ್ಷದ ಹಿತದೃಷ್ಟಿಯಿಂದ ಸಿಎಲ್‍ಪಿ, ಎಲ್‍ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್‍ಪಿ ಹೆಚ್ಚಿನದಲ್ಲ, ಎಲ್‍ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಹಾಗೇ ಮಾಡುವುದು ಸೂಕ್ತ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

    ಎರಡು ದಿನದ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಒಬ್ಬರಿಗೆ ಕೊಡಬೇಕು ಅದನ್ನ ಪ್ರತ್ಯೇಕಿಸಬಾರದು ಎಂದಿದ್ದರು. ಈ ಹೇಳಿಕೆಗೆ ತಿರುಗೇಟು ಎನ್ನುವಂತೆ ಪರಮೇಶ್ವರ್, ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ನಾಯಕ ಸ್ಥಾನ ಬೇರೆ ಬೇರೆಯವರಿಗೆ ಕೊಟ್ಟರೆ ತಪ್ಪಲ್ಲ ಎಂದಿದ್ದಾರೆ. ಇಬ್ಬರು ಪ್ರತ್ಯೇಕವಾದರೆ ಏನು ಸಮಸ್ಯೆ ಆಗುವುದಿಲ್ಲ. ಸಮಸ್ಯೆ ಆಗುತ್ತದೆ ಎನ್ನುವುದು ಆಯಾ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ. ಹೊಂದಿಕೊಳ್ಳುವ ಮನಸ್ಥಿತಿ ಇರಬೇಕು ಎಂದಿದ್ದಾರೆ.

    ಪ್ರತ್ಯೇಕ ಮಾಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರದಲ್ಲೂ ಮಾಡಿದ್ದಾರೆ. ಇಲ್ಲೂ ಮಾಡಿದರೆ ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ, ಹಾಗಂತ ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ನನ್ನ ಅಭಿಪ್ರಾಯವನ್ನು ನಾನು ಹಂಚಿಕೊಂಡಿದ್ದೇನೆ. ಅಂದರೆ ನಾನು ಒಂದು ಗುಂಪಾ ಎಂದು ಪ್ರಶ್ನಿಸಿದ್ದಾರೆ.

  • ಅಧ್ಯಕ್ಷ ಸ್ಥಾನ ಪಕ್ಕಾ ಆದ್ರೂ ‘ಬಂಡೆ’ಗೆ ಬೇಸರ

    ಅಧ್ಯಕ್ಷ ಸ್ಥಾನ ಪಕ್ಕಾ ಆದ್ರೂ ‘ಬಂಡೆ’ಗೆ ಬೇಸರ

    ಬೆಂಗಳೂರು: ಕನಸಿನ ಹುದ್ದೆ ಒಲಿದು ಬರುತ್ತಿದ್ದರೂ, ಏನೋ ಅಸಹನೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನ ಕಾಡತೊಡಗಿದೆ. ತಮ್ಮ ದಶಕದ ಕನಸು ನನಸಾಗುವ ಹಂತದಲ್ಲಿ ಆ ಒಂದು ಕಾರಣಕ್ಕೆ ಬೇಸರಗೊಂಡಿದ್ದಾರೆ. ಬೇರೆಲ್ಲಾ ವಿಷಯದಲ್ಲಿ ಹೈಕಮಾಂಡ್ ನಿಲುವಿಗೆ ಓಕೆ ಅಂದ ಟ್ರಬಲ್ ಶೂಟರ್ ಕಾರ್ಯಧ್ಯಕ್ಷರ ನೇಮಕಕ್ಕೆ ನನ್ನ ಸಮ್ಮತಿ ಇಲ್ಲಾ ಎಂದು ಉಲ್ಟಾ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕ ಖಚಿತವಾದರು. ಅಧ್ಯಕ್ಷರ ಜೊತೆಗೆ ಕಾರ್ಯಾಧ್ಯಕ್ಷರ ನೇಮಕಕ್ಕೆ ಡಿಕೆಶಿಗೆ ಒಲವಿಲ್ಲ. ಕೆಲವು ನಾಯಕರುಗಳು ಒಂದೇ ಕಾರ್ಯಾಧ್ಯಕ್ಷ ಹುದ್ದೆ ಅಂದರೆ ಮತ್ತೆ ಕೆಲವು ನಾಯಕರುಗಳು ಪ್ರದೇಶವಾರು ಹಾಗೂ ಜಾತಿ ಸಮೀಕರಣ ಸರಿದೂಗಿಸಲು 4 ಕಾರ್ಯಾಧ್ಯಕ್ಷ ಹುದ್ದೆ ಬೇಕು ಎನ್ನುತ್ತಿದ್ದಾರೆ.

    ಅಧ್ಯಕ್ಷರಾದ ಮೇಲೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಬೇಕು ಅನ್ನೋ ಹಠಕ್ಕೆ ಬಿದ್ದ ಡಿಕೆಶಿ ಮಾತ್ರ ಕಾರ್ಯಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕೊನೆ ಗಳಿಗೆಯಲ್ಲಿ ಡಿ.ಕೆ.ಶಿವಕುಮಾರ್ ಹಠಕ್ಕೆ ಹೈಕಮಾಂಡ್ ಮಣಿಯುತ್ತಾ ಅಥವಾ ಕಾರ್ಯಾಧ್ಯಕ್ಷರ ನೇಮಕಾತಿ ಮಾಡಿ ಹೈಕಮಾಂಡ್ ಡಿಕೆಶಿ ಕೈ ಕಟ್ಟಿ ಹಾಕುತ್ತ ಅನ್ನೋದೆ ಸದ್ಯದ ಕುತೂಹಲ.

  • ಕಾಂಗ್ರೆಸ್‍ನಲ್ಲಿ 3 ಕಾರ್ಯಾಧ್ಯಕ್ಷ ಸ್ಥಾನ ಸಿದ್ದರಾಮಯ್ಯ ಹೊಸ ಗೇಮ್

    ಕಾಂಗ್ರೆಸ್‍ನಲ್ಲಿ 3 ಕಾರ್ಯಾಧ್ಯಕ್ಷ ಸ್ಥಾನ ಸಿದ್ದರಾಮಯ್ಯ ಹೊಸ ಗೇಮ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿಗೆ ರೇಸ್ ಜೋರಾಗಿ ನಡೆಯುತ್ತಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ದಾಳವೊಂದನ್ನು ಪ್ರಯೋಗಿಸಿದ್ದಾರೆ.

    ಸಿದ್ದರಾಮಯ್ಯ ಬಣ, ಮೂಲ ಕಾಂಗ್ರೆಸ್ ಬಣ, ಜೊತೆ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದೆ. ನಿನ್ನೆ ಕೂಡಾ ಕೆಪಿಸಿಸಿ ಸೇರಿದಂತೆ ಹಲವು ಹುದ್ದೆಗಳಿಗೆ ಸಾರಥಿ ನೇಮಕ ಸಂಬಂಧ ಪರಮೇಶ್ವರ್ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ.

    ಸಿದ್ದರಾಮಯ್ಯ ಬಣ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಲಿಂಗಾಯತರಿಗೆ ಕೊಡಬೇಕು ಅಂತ ದಾಳ ಉದುರಿಸಿದೆ. ಅದರಲ್ಲೂ ತಮ್ಮ ಶಿಷ್ಯ, ಮಾಜಿ ಸಚಿವ ಎಂಬಿ ಪಾಟೀಲ್ ಪರ ಸಿದ್ದರಾಮಯ್ಯ ಪ್ರಬಲವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮೂಲ ಕಾಂಗ್ರೆಸ್ ನಾಯಕರು ಮೂಲ ಕಾಂಗ್ರೆಸ್ ನಲ್ಲಿ ಯಾರಿಗಾದ್ರು ಅಧ್ಯಕ್ಷ ಸ್ಥಾನ ಕೊಡಿ ಅಂತ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದ್ದೆ. ಮತ್ತೊಂದು ಕಡೆ ಕನಕಪುರ ಬಂಡೆ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಅಧ್ಯಕ್ಷ ಸ್ಥಾನ ಪಡೆಯೋಕೆ ಕಸರತ್ತು ಮಾಡುತ್ತಿದ್ದಾರೆ. ಈಗ ಹೊಸ ವಿಷಯ ಅಂದ್ರೆ ಅಧ್ಯಕ್ಷ ಸ್ಥಾನದ ಲಾಬಿ ಮಾಡ್ತಿರೋ ಸಿದ್ದರಾಮಯ್ಯ ಬಣ 3 ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಹೊಸ ಗೇಮ್ ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ಒಂದು ವೇಳೆ ಅಧ್ಯಕ್ಷ ಸ್ಥಾನ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಹೋದರೆ ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಅನ್ನೋದು ಅರಿತಿರುವ ಸಿದ್ದರಾಮಯ್ಯ ತಮ್ಮ ಶಿಷ್ಯರ ಮೂಲಕ 3 ಕಾರ್ಯಾಧ್ಯಕ್ಷ ಸ್ಥಾನದ ಪ್ರಸ್ತಾಪ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಮೂರು ಕಂದಾಯ ವಲಯಗಳಿಗೆ ಮೂವರು ಕಾರ್ಯಾಧ್ಯಕ್ಷ ನೇಮಕ ಮಾಡಿದರೆ ಅನುಕೂಲ ಆಗುತ್ತೆ. ಪಕ್ಷ ಸಂಘಟನೆಗೆ ಅನುಕೂಲ ಆಗುತ್ತೆ ಅನ್ನೋ ಮೂಲಕ ಕಾರ್ಯಾಧ್ಯಕ್ಷ ಸ್ಥಾನದ ದಾಳ ಉದುರಿಸಿದ್ದಾರೆ ಎನ್ನಲಾಗಿದೆ.

    ಒಂದು ವೇಳೆ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಆದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮಹತ್ವ ಇರೋದಿಲ್ಲ. ಆಗ ಅನುಕೂಲ ಆಗುತ್ತೆ ಅನ್ನೋದು ಸಿದ್ದರಾಮಯ್ಯ ಪ್ಲಾನ್. ಹೀಗಾಗಿ ಹೈಕಮಾಂಡ್ ಮೇಲೆ ಕಾರ್ಯಾಧ್ಯಕ್ಷ ಸ್ಥಾನದ ಒತ್ತಡ ಹಾಕೋಕು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ತಂತ್ರ ಫಲಿಸುತ್ತಾ? ಹೈಕಮಾಂಡ್ ಸಿದ್ದರಾಮಯ್ಯ ಮಾತಿಗೆ ಓಕೆ ಅನ್ನುತ್ತಾ ಅನ್ನೋದು ನೋಡಬೇಕು.

  • ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಎದುರೇ ಭುಗಿಲೆದ್ದ ಸಮ್ಮಿಶ್ರ ಸರ್ಕಾರದ ಅಸಮಾಧಾನದ ಹೊಗೆ

    ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಎದುರೇ ಭುಗಿಲೆದ್ದ ಸಮ್ಮಿಶ್ರ ಸರ್ಕಾರದ ಅಸಮಾಧಾನದ ಹೊಗೆ

    ಚಿತ್ರದುರ್ಗ: ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮೊಟ್ಟ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಈಶ್ವರ ಖಂಡ್ರೆ ಎದುರಲ್ಲೇ ಸಮ್ಮಿಶ್ರ ಸರ್ಕಾರದ ಅಸಮಧಾನದ ಹೊಗೆ ಭುಗಿಲೆದ್ದಿದೆ.

    ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ಸನ್ನು ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಕೂಗು ಸಭೆಯಲ್ಲಿ ಎದ್ದಿತ್ತು. ಇದನ್ನು ಶಮನಗೊಳಿಸಲು ನೂತನ ಕಾರ್ಯಧ್ಯಕ್ಷ ಖಂಡ್ರೆ ಅವರು, ನಮ್ಮ ಕ್ಷೇತ್ರ, ನಮ್ಮ ಪಕ್ಷ ಅದನ್ನು ಹೇಗೆ ಬಿಟ್ಟು ಕೊಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈಜೊಡಿಸುವ ಮಾತೇ ಇಲ್ಲ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

    ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಆದರೂ ಸಮ್ಮಿಶ್ರ ಸರ್ಕಾರದಲ್ಲಿ ಬಹುಪಾಲು ನಮ್ಮದಾಗಿದೆ. ನಾವು 2019ರ ಲೋಕಸಭೆ ಚುನಾವಣೆಯಲ್ಲಿ ಪುಟಿದೇಳಬೇಕು. ರಾಜ್ಯದ 28 ಲೋಕಸಭೆ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲಬೇಕೆಂಬ ಉದ್ದೇಶದಿಂದ ಚುನಾವಣೆ ಮೈತ್ರಿ ಬಗ್ಗೆ ಕಾಂಗ್ರೆಸ್ ವರಿಷ್ಠರು ಶೀಘ್ರದಲ್ಲಿಯೇ ತೀರ್ಮಾನ ಮಾಡಲಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಅನ್ನಭಾಗ್ಯ ಯೋಜನೆ ಅಡಿ 7 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಮಾಜಿ ಸಚಿವ ಆಂಜನೇಯ ಅವರನ್ನು ಕಡೆಗಣಿಸಲಾಗಿದೆ ಅಂತಾ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಶವಂತ್ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಟಿಕೆಟ್ ನೀಡುಬೇಕು ಎಂದು ಮಾಜಿ ಜಿಲ್ಲಾಧ್ಯಕ್ಷ ಸೇತುರಾಂ ಕೂಡ ಆಗ್ರಹಿಸಿದರು.