Tag: ಕಾರ್ಯಚರಣೆ

  • ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ಮಡಿಕೇರಿ: ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಬ್ಬರು ನಾಪತ್ತೆಯಾಗಿ 15 ದಿನಗಳೇ ಕಳೆದಿವೆ. ಈ ಇಬ್ಬರ ಹುಡುಕಾಟಕ್ಕಾಗಿ ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದಂತೆ 100ಕ್ಕೂ ಹೆಚ್ಚು ಜನರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ.

    ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಶ್ರೀನಿವಾಸ್ ಮತ್ತು ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಈ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿರುವ ಎನ್.ಡಿ.ಆರ್.ಎಫ್ ತಂಡದ ಕಮಾಂಡರ್ ಇದುವರೆಗೆ ಎಷ್ಟು ಸಾಧ್ಯವೋ ಅಷ್ಟು ಹುಡುಕಿದ್ದೇವೆ. ಮಳೆ ಕೂಡ ಬಿಟ್ಟು ಬಿಟ್ಟು ಬರುತ್ತಲೇ ಇದ್ದು, ಭಾರೀ ಪ್ರಮಾಣದ ಮಂಜು ಸುರಿಯುತ್ತಿದೆ. ಹೀಗಾಗಿ ಇನ್ನೂ ಹುಡುಕಾಡುವುದು ಸವಾಲಿನ ಕೆಲಸ ಎನ್ನುತ್ತಿದ್ದಾರೆ.

    ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತದಲ್ಲಿ ಕಣ್ಮರೆ ಆಗಿರುವವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ರೀತಿಯಲ್ಲಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬ್ರಹ್ಮಗಿರಿ ಬೆಟ್ಟ ಕುಸಿದು ಐದು ಜನರು ಕಣ್ಮರೆಯಾಗಿದ್ದರು. ಬಳಿಕ ಅರ್ಚಕ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಮತ್ತು ಸಹಾಯಕ ಅರ್ಚಕ ರವಿಕಿರಣ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇನ್ನುಳಿದ ಇಬ್ಬರಿಗಾಗಿ ರಕ್ಷಣಾ ತಂಡಗಳು ನಿರಂತರ ಹುಡುಕಾಟ ನಡೆಸುತ್ತಿದ್ದವು. ಅದರೆ ಇಂದಿಗೂ ಮೃತ ದೇಹ ದೊರಕ್ಕಿಲ್ಲ. ಹೀಗಾಗಿ ಬಹುತೇಕ ಇಂದು ಸಂಜೆಯಿಂದ ಕಾರ್ಯಚರಣೆ ಸ್ಥಗಿತ ಮಾಡುವುದಾಗಿ ಎನ್.ಡಿ.ಆರ್.ಎಫ್ ತಿಳಿಸಿದೆ.

  • ಕಟ್ಟಡ ಕುಸಿತ ದುರಂತಕ್ಕೆ 7 ಮಂದಿ ಬಲಿ- 61 ಮಂದಿಯ ರಕ್ಷಣೆ

    ಕಟ್ಟಡ ಕುಸಿತ ದುರಂತಕ್ಕೆ 7 ಮಂದಿ ಬಲಿ- 61 ಮಂದಿಯ ರಕ್ಷಣೆ

    ಧಾರಾವಾಡ: ಧಾರವಾಡದ ಕಟ್ಟಡ ಕುಸಿತ ದುರಂತ 7 ಮಂದಿಯ ಜೀವ ಬಲಿ ಪಡೆದಿದ್ದು, 2 ದಿನಗಳ ಕಾರ್ಯಾಚರಣೆ ಬಳಿಕ 61 ಮಂದಿಯನ್ನು ಸುರಕ್ಷಿತವಾಗಿ ಹೊರಗಡೆ ತೆಗೆಯಲಾಗಿದೆ. ಎಲ್ಲರೂ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    6 ಅಂತಸ್ಥಿನ ಕಟ್ಟಡದಲ್ಲಿ ಪೇಂಟಿಂಗ್ ಅಂಗಡಿ ಇಟ್ಟುಕೊಂಡಿದ್ದ ತಂದೆ- ಮಗ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಧಾರವಾಡದ ತಪೋವನ ಸಮೀಪದ, ಹಳಿಯಾಳ ರಸ್ತೆ ಡಿ.ಬಿ ಕಾಲೋನಿಯ ನಿವಾಸಿಗಳಾದ ತಂದೆ ಮಹೇಶ್ವರ ಹಿರೇಮಠ ಹಾಗೂ ಅವರ ಮಗ ಅಶೀತ್ ಹಿರೇಮಠ ಮರಣ ಹೊಂದಿದ ದುರ್ದೈವಿಗಳು.

    ಕಟ್ಟಡದ ನೆಲಮಹಡಿಯಲ್ಲಿ ತಾಯಿ- ಮಗಳು ಸಿಲುಕಿ ಹಾಕಿಕೊಂಡಿದ್ದು, ತಾಯಿ ಪ್ರೇಮಾ ಉಣಕಲ್ ಅವರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಅವರ ಮಗಳು ದಿವ್ಯಾ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

    ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿ ಕಂಪ್ಯೂಟರ್ ಸೆಂಟರ್ ಇಟ್ಟುಕೊಂಡಿದ್ದ ಅನುಪ್ ಕುಡತಾರಕರ್ ಜೊತೆಗೆ ಅಂಗಡಿಗೆ ಹೋಗಿದ್ದ, 3 ಮಂದಿ ವಿದ್ಯಾರ್ಥಿನಿಯರು ಇದ್ದಾರೆ ಎನ್ನುವ ಮಾಹಿತಿ ರಕ್ಷಣಾ ಸಿಬ್ಬಂದಿಗೆ ಇದೆ. ಕಲಘಟಗಿ ನಿವಾಸಿ ನಬೀಸಾಬ ನದಾಫ ಪ್ರಣಾಪಾಯದಿಂದ ಪಾರಾಗಿದ್ದಾನೆ. ಎನ್.ಡಿ.ಆರ್.ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

  • ಯೋಧರ ಬಲಿಗೆ ಕಾರಣನಾದ ಮಾಸ್ಟರ್ ಮೈಂಡ್ ಫಿನಿಶ್!

    ಯೋಧರ ಬಲಿಗೆ ಕಾರಣನಾದ ಮಾಸ್ಟರ್ ಮೈಂಡ್ ಫಿನಿಶ್!

    – ಸೇನಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ

    ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿ ಬಳಿಕ ಸೈನಿಕರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

    ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ತ ರಕ್ಕಸ ಅಬ್ದುಲ್ ರಶೀದ್ ಘಾಸಿಯನ್ನು ಯೋಧರು ಇಂದು ಹತ್ಯೆ ಮಾಡಿದ್ದಾರೆ. ಅಬ್ದುಲ್ ರಶೀದ್ ಜೊತೆ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕರಮ್‍ ನನ್ನು ಸಹ ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಪುಲ್ವಾಮಾ ಜಿಲ್ಲೆಯ ಪಿಂಗ್ಲಾನ್ ಪ್ರದೇಶದಲ್ಲಿ ಯೋಧರ ಹಾಗೂ ಉಗ್ರರ ನಡುವೆ ಅಹೋರಾತ್ರಿ ಭೀಕರ ಕಾಳಗ ನಡೆಯುತ್ತಿತ್ತು. 40 ಯೋಧರ ಬಲಿ ಪಡೆದ ಆದಿಲ್ ದಾರ್ ಗೆ ನೆರವು ನೀಡಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೈನಿಕರು ಆ ಪ್ರದೇಶವನ್ನು ಸುತ್ತುವರಿದು ದಾಳಿ ನಡೆಸಿದಾಗ ಉಗ್ರರು ಪ್ರತಿ ದಾಳಿ ನಡೆಸಿದ್ದರು. ಈ ವೇಳೆ ಓರ್ವ ನಾಗರಿಕ ಸಹಿತ ನಾಲ್ವರು ಯೋಧರು ಇಂದು ಕೂಡ ಹುತಾತ್ಮರಾಗಿದ್ದಾರೆ.

    ಬಳಿಕ ಭರ್ಜರಿ ಕಾರ್ಯಾಚರಣೆ ನಡೆಸಿದ ಯೋಧರು, 40 ಯೋಧರ ಬಲಿ ಪಡೆದ ಮಾಸ್ಟರ್ ಮೈಂಡ್ ಆದ ಅಬ್ದುಲ್ ರಶೀದ್ ಹಾಗೂ ಕರಮ್‍ನನ್ನು ಇದೀಗ ಹತ್ಯೆ ಮಾಡಿದ್ದಾರೆ. ಇನ್ನೂ 6 ಜನ ಉಗ್ರರು ಪಿಂಗ್ಲಾನ್ ಪ್ರಾಂತ್ಯದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಯೋಧರು ಪಿಂಗ್ಲಾನ್‍ನ ಪ್ರತಿ ಮನೆಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಂಡಿದ್ದು ಹೇಗೆ?
    ಆತ್ಮಾಹುತಿ ದಾಳಿ ನಡೆದ ಆವಂತಿಪೂರದಿಂದ ಕೇವಲ 10 ಕಿ.ಮೀ ದೂರದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ 8.30ರ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಸೇನೆಗೆ ಸಿಕ್ಕಿದೆ. ಬಳಿಕ ಮಧ್ಯರಾತ್ರಿ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಆ ಕಟ್ಟಡವನ್ನು ಸೇನೆ ಸುತ್ತುವರಿದಿತ್ತು. 55 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಪೊಲೀಸ್ ಮತ್ತು ಸಿಆರ್ ಪಿಎಫ್ ಒಳಗೊಂಡು ಭಾರತೀಯ ಸೇನೆ ಈ ಕಾರ್ಯಚರಣೆ ನಡೆಸಿ ಮೊದಲು ಉಗ್ರರಿಗೆ ಶರಣಾಗಲು ಸೂಚಿಸಿದ್ದರು. ಆದರೆ ಉಗ್ರರು ಶರಣಾಗುವ ಬದಲು ಯೋಧರಿಗೆ ಗುಂಡಿನ ದಾಳಿ ನಡೆಸಿದ್ದರು. ಇಂದು ಬೆಳಗ್ಗಿನ ಜಾವದವರೆಗೂ ನಿರಂತರವಾಗಿ ಭೀಕರ ಗುಂಡಿನ ಚಕಮಕಿ ನಡೆದಿದೆ. ಆಗ ಗುಂಡಿನ ಚಕಮಕಿ ವೇಳೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಆದರೂ ಎದೆಗುಂದದೆ ಯೋಧರು ಕಾರ್ಯಾಚರಣೆ ಮುಂದುವರಿಸಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿದ್ದ ಇಡೀ ಕಟ್ಟಡವನ್ನೇ ಉಡಾಯಿಸಿದ್ದಾರೆ.

    https://www.youtube.com/watch?v=N6ra83ZHCWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಕಾಡಂಚಿನ ಗ್ರಾಮಕ್ಕೆ ಕಾಲಿಟ್ಟ ಹುಲಿರಾಯ – ವ್ಯಾಘ್ರನನ್ನು ಕಂಡು ಬೆಚ್ಚಿಬಿದ್ದ ಜನ

    ಮತ್ತೆ ಕಾಡಂಚಿನ ಗ್ರಾಮಕ್ಕೆ ಕಾಲಿಟ್ಟ ಹುಲಿರಾಯ – ವ್ಯಾಘ್ರನನ್ನು ಕಂಡು ಬೆಚ್ಚಿಬಿದ್ದ ಜನ

    ಚಾಮರಾಜನಗರ: ಕಳೆದ ಒಂದು ವಾರದಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಸುತ್ತ ಮುತ್ತ ಕಾಣಿಕೊಳ್ಳುತ್ತಿರುವ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿ ಬೀಳಿಸಿದೆ.

    ಬೇಸಿಗೆ ಕಾಲ ಸಮೀಸುತ್ತಿರುವ ಕಾರಣಕ್ಕೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮದ ಗ್ರಾಮಸ್ಥರಿಗೆ ಹುಲಿ ಭಯ ಹೆಚ್ಚಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಬಳಿ ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದೆ. ಕಳೆದ ರಾತ್ರಿ ಹುಂಡಿಪುರದ ಬಳಿ ನಾಯಿಯೊಂದನ್ನು ಹುಲಿ ತಿಂದು ಹೋಗಿದ್ದು, ಹುಲಿಯ ಹೆಜ್ಜೆ ಗುರುತು ಗ್ರಾಮದ ಸುತ್ತ ಮುತ್ತ ಕಾಣಿಸಿಕೊಂಡಿದೆ. ಇದನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಒಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಹಂಗಳ ಗ್ರಾಮದ ಬಳಿ ಅಭಿಮನ್ಯು, ಜಯಪ್ರಕಾಶ ಮತ್ತು ಕೃಷ್ಣ ಆನೆಗಳನ್ನು ಬಳಸಿಕೊಂಡು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಇದೀಗ ಹುಂಡಿಪುರ ಗ್ರಾಮದಲ್ಲಿ ಮತ್ತೊಂದು ಹುಲಿ ಕಾಣಿಸಿಕೊಂಡಿರುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆ ನೋವು ತಂದಿದೆ.

    ಬೇಸಿಗೆ ಕಾಲದಲ್ಲಿ ಆಹಾರ ಹಾಗೂ ನೀರಿನ ಸಮಸ್ಯೆ ಇರುವ ಕಾರಣಕ್ಕೆ ಹುಲಿಗಳು ಕಾಡಂಚಿನ ಗ್ರಾಮಗಳಿಗೆ ಬರುತ್ತಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾಡಾನೆ ಕಾರ್ಯಚರಣೆ- ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯ

    ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾಡಾನೆ ಕಾರ್ಯಚರಣೆ- ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯ

    ಚಾಮರಾಜನಗರ: ಬೇಸಿಗೆ ಆರಂಭವಾಗುತ್ತಿದ್ದಂತೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಿಂದ ನಾಡಿನತ್ತ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾಡಿಗೆ ಓಡಿಸಲು ಕಾರ್ಯಚರಣೆ ಮಾಡಿದ್ದಾರೆ. ಈ ಅದ್ಭುತ ವಿಡಿಯೋ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ನೋಡುಗರ ಮನ ಗೆದ್ದಿದೆ.

    ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತದೆ. ಹಾಗೆಯೇ ಆಹಾರ ಅರಸಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಓಂಕಾರ ವಲಯದತ್ತ ಲಗ್ಗೆ ಇಟ್ಟ ಕಾಡಾನೆಗಳ ಗುಂಪೊಂದನ್ನು ಅರಣ್ಯ ಇಲಾಖೆ ಅವರು ಹರಸಾಹಸ ಪಟ್ಟು ಕಾಡಿಗಟ್ಟಿದ್ದಾರೆ. ಈ ಕಾರ್ಯಚರಣೆಯ ಒಂದು ಅದ್ಭುತ ನೋಟವನ್ನು ಡ್ರೋನ್ ಕ್ಯಾಮೆರಾದ ಸಹಾಯದಿಂದ ಸೆರೆಹಿಡಿಯಲಾಗಿದ್ದು, ಈ ವಿಡಿಯೋ ನೋಡಿದವರು ಅಬ್ಬಾ! ಎಂಥ ನೋಟ ಅಂತ ಪ್ರಕೃತಿಯ ಸೌದರ್ಯವನ್ನು ಹೊಗಳಿದ್ದರೆ.

    ಡ್ರೋನ್‍ನ ಶಬ್ಧಕ್ಕೆ ಕಾಡಿನತ್ತ ಆನೆಗಳ ಹಿಂಡು ಹೆಜ್ಜೆ ಹಾಕುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಒಂದೆಡೆ ಹಿಂಡು ಹಿಂಡಾಗಿ ಬರುತ್ತಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯಿಂದ ಹರಸಾಹಸ ಪಡುತ್ತಿರುವ ದೃಶ್ಯವಾದರೆ, ಇನ್ನೊಂದೆಡೆ ಪ್ರಕೃತಿಯ ಸೌಂದರ್ಯದ ಚಿತ್ರಣವನ್ನು ಡ್ರೋನ್ ಕ್ಯಾಮೆರಾ ಸೆರೆಹಿಡಿದಿದೆ.

    https://www.youtube.com/watch?v=bmWfLrrF47s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಏಕಾಂಗಿಯಾಗಿ ಕಾರ್ಯಾಚರಣೆ- ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ಹಿಡಿದ ಆರ್​ಟಿಒ ಅಧಿಕಾರಿ

    ಮಧ್ಯರಾತ್ರಿ ಏಕಾಂಗಿಯಾಗಿ ಕಾರ್ಯಾಚರಣೆ- ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ಹಿಡಿದ ಆರ್​ಟಿಒ ಅಧಿಕಾರಿ

    ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಏಕಾಂಗಿಯಾಗಿ ತಮ್ಮ ಖಾಸಗಿ ವಾಹನದಲ್ಲಿ ಆರ್​ಟಿಒ ಅಧಿಕಾರಿಯೊಬ್ಬರು ಕಾರ್ಯಾಚರಣೆಗೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ ಅವರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಅಧಿಕ ಭಾರ ಹೊತ್ತು ಅತಿವೇಗದಿಂದ ಸಾಗುತ್ತಿದ್ದ ಮೂರು ಟಿಪ್ಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಚಾಲಕ ಟಿಪ್ಪರ್ ನಿಲ್ಲಿಸದೇ ಪರಾರಿಯಾಗುತ್ತಿದ್ದ. ಈ ವೇಳೆ ನಾಗಿರೆಡ್ಡಿ ತಮ್ಮ ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ತಡೆದರು. ಆರ್​ಟಿಒ ಚೇಸ್ ಮಾಡುವಾಗ ಚಾಲಕ ಟಿಪ್ಪರ್ ನಿಲ್ಲಿಸದೇ ಆರ್​ಟಿಒ ಅಧಿಕಾರಿಗೆ ಸೈಡ್ ಕೊಡಲಿಲ್ಲ. ಕೊನೆಗೆ ನಾಗಿರೆಡ್ಡಿ ಅವರು ಹರಸಾಹಸ ಪಟ್ಟು ಚೇಸ್ ಮಾಡಿ ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.

    ದಾಳಿ ವೇಳೆ ನೀವು ಆರ್​ಟಿಒ ಆದರೆ ದಾಖಲೆ ಕೊಡಿ ಎಂದು ಚಾಲಕ ನಾಗಿರೆಡ್ಡಿ ಅವರನ್ನು ಪ್ರಶ್ನಿಸಿದ್ದಾನೆ. ಆಗ ನಾಗಿರೆಡ್ಡಿ ಐಡಿ ಕಾರ್ಡ್ ತೋರಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ನಾಗಿರೆಡ್ಡಿ ಟಿಪ್ಪರ್ ವಶಕ್ಕೆ ಪಡೆದ ಬಳಿಕ ಚಾಲಕ ಟಿಪ್ಪರ್ ಬಿಟ್ಟು ಎಸ್ಕೇಪ್ ಆಗಿದ್ದಾನೆ.

    ಇದಾದ ಬಳಿಕ ಆರ್​ಟಿಒ ಕಾರ್ಯಾಚರಣೆ ನಡೆಸಿ ಮತ್ತೆರೆಡು ಟಿಪ್ಪರ್ ಲಾರಿ ವಶಕ್ಕೆ ಪಡೆದರು. ಟಿಪ್ಪರ್ ಮಾಲೀಕರ ಕಡೆಯವರಿಂದ ಆರ್​ಟಿಒ ಕಾರ್ಯಾಚರಣೆಗೆ ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಯಾಕೆ ಟಿಪ್ಪರ್ ಮಾತ್ರ ಹಿಡಿತೀರಾ ಎಲ್ಲಾ ವಾಹನಗಳ ಪರಿಶೀಲನೆ ನಡೆಸಿ ಅಂತ ಅಗ್ರಹಿಸಿದರು. ಟಿಪ್ಪರ್ ವಶಕ್ಕೆ ಪಡೆದ ಬಳಿಕ ನಾಗಿರೆಡ್ಡಿ ಆರ್​ಟಿಒ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ: ಮಾಹಿತಿ ನೀಡಿದ್ರು ಡಿಜಿಪಿ

    ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ: ಮಾಹಿತಿ ನೀಡಿದ್ರು ಡಿಜಿಪಿ

    ಮಡಿಕೇರಿ: ಕೊಡಗಿನಲ್ಲಿ ಆಗುತ್ತಿರುವ ರಕ್ಷಣಾ ಕಾರ್ಯಚರಣೆಯ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ್ದಾರೆ.

    ಸುದ್ದಿಗೋಷ್ಠಿಯ ಹೈಲೈಟ್ಸ್:
    ಕೊಡಗಿನಲ್ಲಿ ಪ್ರವಾಹ ಶುರುವಾಗಿ ಇಂದಿಗೆ 10 ದಿನವಾಗಿದೆ. ಆಗಸ್ಟ್ 15ರ ರಾತ್ರಿಯಿಂದ ಪ್ರವಾಹ ಶುರುವಾಗಿದೆ ಎಂಬ ಸುದ್ದಿ ಬಂತ್ತು. 16ರ ಬೆಳಗ್ಗೆಯಿಂದ ಎಲ್ಲ ರಕ್ಷಣಾ ಕಾರ್ಯ ಆರಂಭಗೊಂಡು ನಂತರ ಮಧ್ಯಾಹ್ನ ಎಲ್ಲಾ ಹಿರಿಯ ಅಧಿಕಾರಿಗಳನ್ನು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಕೊಡಗಿಗೆ ಕಳುಹಿಸಲಾಗಿದೆ. ಪ್ರವಾಹಕ್ಕೆ 10 ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈಗ ಅವರ ಮೃತದೇಹವನ್ನು ಹುಡುಕಿ ಅವರ ಅಂತ್ಯಸಂಸ್ಕಾರ ಕೂಡ ಆಗಿದೆ. ಅಲ್ಲದೇ ಮತ್ತೆ 10 ಜನರು ಕಾಣೆಯಾಗಿದ್ದಾರೆ ಎನ್ನುವ ದೂರು ದಾಖಲಾಗಿದೆ.

    ಗುರುವಾರ ಸಂಜೆ ಕಾಲೂರಿನಿಂದ ದಂಪತಿ ಬಂದು 7 ವರ್ಷದ ಮಗು ಕಣ್ಣ ಮುಂದೆಯೇ ನೀರಿನಲ್ಲಿ ಜಾರಿ ಬಿತ್ತು ಎಂದು ದೂರು ನೀಡಿದರು. ಬೆಳಗ್ಗೆಯಿಂದ ಆ ಮಗುವನ್ನು ಹುಡುಕುವ ಕಾರ್ಯ ನಡೆಯುತ್ತಿದೆ. ಅಪರಿಚಿತ ಶವ ಹಾಗೂ ಕಾಣೆಯಾಗಿದವರನ್ನು ಹುಡುಕಲು ದಿನಕ್ಕೆ 5 ರಕ್ಷಣಾ ತಂಡ ಹೋಗುತ್ತಿದೆ. ಸದ್ಯ ಕಾಣೆಯಾದವರನ್ನು ಹುಡುಕುವತ್ತ ನಮ್ಮ ಗಮನವಿದೆ. ಮೂರು ದಿನಗಳಿಂದ ಡ್ರೋನ್ ಮೂಲಕ ಮೃತದೇಹವನ್ನು ಹುಡುಕುತ್ತಿದ್ದೇವೆ. ಆದರೆ ಹವಾಮಾನ ಸರಿಯಿಲ್ಲದ ಕಾರಣ ಡ್ರೋನ್ ಬಳಸಲು ಸಾಧ್ಯವಾಗುತ್ತಿಲ್ಲ.

    ಸದ್ಯ ಎಲ್ಲ ರಕ್ಷಣಾ ಸಿಬ್ಬಂದಿ ರಸ್ತೆ ಮೂಲಕ ಕೂಡ ಹೋಗಿ ಜನರನ್ನು ಹುಡುಕುತ್ತಿದ್ದಾರೆ. ಅಲ್ಲದೇ ಯೋಧರ ತಂಡದಿಂದ ಶ್ವಾನವನ್ನು ಕರೆಸಿಕೊಂಡಿದ್ದೇವೆ. ಆ ಶ್ವಾನಕ್ಕೆ ಮೃತದೇಹ ಹುಡುಕುವ ಅಭ್ಯಾಸವಿಲ್ಲ. ಆದರೂ ನಾವು ಪ್ರಯತ್ನಿಸುತ್ತಿದ್ದೇವೆ. ನದಿಯಲ್ಲಿ ಬೋಟ್ ಮೂಲಕವೂ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಸದ್ಯ ಈಗ 43 ಪರಿಹಾರ ಕೇಂದ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಸದ್ಯ ಈಗ ಅವರಿಗೆ ಅಗತ್ಯ ವಸ್ತುಗಳು ಬಹಳಷ್ಟು ದೊರೆತಿದೆ. ಅವರು ಈಗ ತಮ್ಮವರನ್ನು ಹಾಗೂ ಆಸ್ತಿ, ಮನೆ ಕಳೆದುಕೊಂಡ ದುಃಖದಲ್ಲಿ ಇದ್ದಾರೆ. ಹಾಗಾಗಿ ಒಂದು ವೈದ್ಯರ ತಂಡ ಹಾಗೂ ಮನೋವಿಜ್ಞಾನಿಗಳ ತಂಡವನ್ನು ಕರೆಸಿ ಅವರ ಜೊತೆ ಮಾತನಾಡಿಸಿ ಅವರ ದುಃಖವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.

    ಈಗ ಬಹಳ ಕಡೆ ಗುಡ್ಡಗಳು ಅಲ್ಲಲ್ಲಿ ಕುಸಿಯುತ್ತಿದೆ. ಈಗ ಮತ್ತೆ ಮಳೆ ಶುರುವಾಗಿದರಿಂದ ನಾವು ಹುಷಾರಾಗಿ ಇರಬೇಕಿದೆ. ಯಾವುದೇ ಮನೆಗಳು ಸ್ವಲ್ಪ ಅಪಾಯದಲ್ಲಿ ಇರುವುದು ಕಂಡು ಬಂದರೆ, ಅಲ್ಲಿದ್ದವರನ್ನು ಮನೆಯಿಂದ ಖಾಲಿ ಮಾಡಿಸಲಾಗುತ್ತಿದೆ. ರಕ್ಷಣಾ ತಂಡ ಎಲ್ಲವನ್ನೂ ನೋಡಿಕೊಳ್ಳುತ್ತಿದೆ. ಈಗ ಮತ್ತೆ ಗುಡ್ಡ ಕುಸಿತ ಶುರುವಾದರೆ, ಅದಕ್ಕೆ ನಾವು ಎಲ್ಲ ತಯಾರಿಗಳನ್ನು ನಡೆಸಿಕೊಂಡಿದ್ದೇವೆ. ಸದ್ಯ ನಾವು ಯಾವುದೇ ರಕ್ಷಣಾ ತಂಡವನ್ನು ವಾಪಸ್ ಕಳುಹಿಸಿಲ್ಲ. ಎಲ್ಲ ತಂಡ ತಮ್ಮ ಕಾರ್ಯಾಚರಣೆ ನಡೆಸುತ್ತಿದೆ.

    ಭೂ ಕುಸಿತಗೊಂಡ ಜೋಡುಪಾಲ ಭಾಗದಲ್ಲಿ ಮಂಗಳೂರಿನ ಎನ್‍ಡಿಆರ್‍ಎಫ್ ತಂಡ 200ಕ್ಕೂ ಹೆಚ್ಚು ಮಂದಿ ರಕ್ಷಿಸಿ ಸಂಪಾಜೆ ಪರಿಹಾರ ಕೇಂದ್ರದಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ. ಪೊಲೀಸರಿಗೆ ಹಾಗೂ ರಕ್ಷಣಾ ಸಿಬ್ಬಂದಿಗೆ ವಾಹನ ಹಾಗೂ 17 ಸೀಟ್‍ನ ವ್ಯಾನ್ ಹಾಗೂ ಜೀಪ್‍ಗಳ ಅಗತ್ಯವಿತ್ತು. ಆ ವಾಹನಗಳನ್ನೆಲ್ಲಾ ನಾವು ಕಳುಹಿಸಿಕೊಟ್ಟಿದ್ದೇವೆ.

    ರಾಜ್ಯ ವಿಪತ್ತು ನಿರ್ವಹಣ ತಂಡ(ಎಸ್‍ಡಿಆರ್‍ಎಫ್) ತಂಡ ಕೂಡ ಆಗಸ್ಟ್ 16ರಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪೊಲೀಸರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಮಾಧ್ಯಮ ಪ್ರತಿನಿಧಿಗಳು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಠಡಿಗೆ ನುಗ್ಗಿ ವೃದ್ಧನ ಮೇಲೆ ಚಿರತೆ ದಾಳಿ- ನೋಡಲು ಇಣುಕಿದ ಯುವಕನಿಗೆ ಗಾಯ

    ಕೊಠಡಿಗೆ ನುಗ್ಗಿ ವೃದ್ಧನ ಮೇಲೆ ಚಿರತೆ ದಾಳಿ- ನೋಡಲು ಇಣುಕಿದ ಯುವಕನಿಗೆ ಗಾಯ

    ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ರೇಷ್ಮೆ ಸಾಕಾಣಿಕೆ ಕೊಠಡಿಯಲ್ಲಿ ಬಂಧಿಸಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬೇಲಿಕೊತ್ತನೂರು ಗ್ರಾಮದಲ್ಲಿ ನಡೆದಿದೆ.

    ಜಗದೀಶ್ ಎಂಬವರಿಗೆ ರೇಷ್ಮೆ ಸಾಕಾಣಿಕೆ ಕೊಠಡಿ ಸೇರಿದೆ. ತಮ್ಮಯ್ಯ ಎಂಬವರು ಕೊಠಡಿಯಲ್ಲಿದ್ದ ಸಂದರ್ಭದಲ್ಲಿ ಚಿರತೆ ಬಂದು ನುಗ್ಗಿ ಎಕಾಏಕಿ ತಮ್ಮಯ್ಯರ ಮೇಲೆ ದಾಳಿ ಮಾಡಿದೆ. ಈ ವೇಳೆ ಅಲ್ಲೇ ಇದ್ದ ಜಗದೀಶ್ ತಿಮ್ಮಯ್ಯರನ್ನು ಚಿರತೆಯಿಂದ ಪಾರು ಮಾಡಿದ್ದಾರೆ. ಅಲ್ಲದೇ ಚಿರತೆ ಹೊರಬಾರದಂತೆ ಕೊಠಡಿ ಲಾಕ್ ಮಾಡಿದ್ದಾರೆ.

    ಹೀಗೆ ಕೂಡಿ ಹಾಕಿದ ಚಿರತೆಯನ್ನು ನೋಡಲು ಸಾಗರ್ ಎಂಬ ಯುವಕ ಕಿಟಕಿ ಮೂಲಕ ನೋಡಲು ಮುಂದಾದರು. ಈ ವೇಳೆ ಚಿರತೆ ಸಾಗರ್ ಮೇಲೂ ದಾಳಿ ನಡೆಸಿದೆ. ಸದ್ಯ ಗಾಯಾಳುಗಳನ್ನು ಕನಕಪುರ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸದ್ಯ ಚಿರತೆಯನ್ನು ಸೆರೆ ಹಿಡಿಯಲು ಸ್ಥಳಕ್ಕೆ ಬನ್ನೇರುಘಟ್ಟ ಅಧಿಕಾರಿಗಳು ಭೇಟಿ ನೀಡಿ, ಕಾರ್ಯಚರಣೆ ನಡೆಸಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನವನದ ವೈದ್ಯ ಉಮಾಶಂಕರ್ ತಂಡ ಭೇಟಿ ನೀಡಿ ವೈದ್ಯರು ಚಿರತೆಗೆ ಅರವಳಿಕೆ ನೀಡಿದ್ದಾರೆ.