Tag: ಕಾರ್ಯಕ್ರಮ

  • ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ವೇದಿಕೆ ಹಂಚಿಕೊಂಡ ಈಶ್ವರಪ್ಪ

    ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ವೇದಿಕೆ ಹಂಚಿಕೊಂಡ ಈಶ್ವರಪ್ಪ

    ಬೆಂಗಳೂರು: ಸಿಲಿಕಾನ್ ಸಿಟಿಯ ಕುಖ್ಯಾತ ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಖಾತೆಯ ಸಚಿವ ಕೆ.ಎಸ್. ಈಶ್ವರಪ್ಪ ವೇದಿಕೆ ಹಂಚಿಕೊಂಡಿದ್ದಾರೆ.

    ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಶ್ರೀರಾಮ ಸೇನಾ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯಪುರದ ರೌಡಿಶೀಟರ್ ಆಗಿರುವ ಯಶಸ್ವಿಗೌಡ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈಶ್ವರಪ್ಪ ಹಿಂದೆ ಯಶಸ್ವಿನಿ ಗೌಡ ನಿಂತಿದ್ದರು. ನಂತರ ಆಕೆಯನ್ನು ಈಶ್ವರಪ್ಪ ಮುಂದೆ ಕರೆದು ಅವರಿಂದ ದೀಪ ಬೆಳಗಿಸಿದ್ದಾರೆ. ಹೀಗಾಗಿ ಈಕೆಯ ಬಗ್ಗೆ ಈಶ್ವರಪ್ಪಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:   ಹಣ ಕೊಟ್ಟು ಡಾಕ್ಟರೇಟ್ ಪಡೆದ ರೌಡಿಶೀಟರ್ ಯಶಸ್ವಿನಿ ಗೌಡ?

    ಈ ಹಿಂದೆಯೇ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಯಶಸ್ವಿನಿ ಗೌಡಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಆಕೆಗೂ ಹಾರ, ಶಾಲು ಹಾಕಿ ಸ್ವಾಗತ ಕೋರಲಾಗಿದೆ. ವೇದಿಕೆಯಲ್ಲಿ ಸಚಿವ ಈಶ್ವರಪ್ಪ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ:  ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಈಶ್ವರಪ್ಪ ಪ್ರತಿಕ್ರಿಯೆ: ದೇಶಭಕ್ತರು ಎಂದು ಬಂದಿದ್ದೆ, ಆದರೆ ರೌಡಿಶೀಟರ್, ಪೌಡಿಶೀಟರ್ ಗೊತ್ತಿಲ್ಲ. ನಿಮ್ಮಲ್ಲೇ ರೌಡಿಶೀಟರ್ ಇದ್ದರೆ ಯಾರಿಗೆ ಗೊತ್ತು. ನನಗೆ ರೌಡಿಶೀಟರ್ ಬಗ್ಗೆ ಮಾಹಿತಿ ಇರಲಿಲ್ಲ. ಸೌಜನ್ಯವಾಗಿ ಕರೆದಿದ್ದರು, ಹೀಗಾಗಿ ಬಂದು ಹೋಗುತ್ತೀದ್ದೇನೆ ಎಂದು ರೌಡಿಶೀಟರ್ ಜೊತೆಗೆ ವೇದಿಕೆ ಹಚ್ಚಿಕೊಂಡ ಬಗ್ಗೆ ಸ್ಪಷ್ಟನೆ ಕೊಡುವಾಗ ಈಶ್ವರಪ್ಪ ಗರಂ ಆದರು.

    ಯಶಸ್ವಿನಿ ಗೌಡ ಸ್ವತಃ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈಕೆಯ ಎರಡನೇ ಪತಿ ದಡಿಯಾ ಮಹೇಶ್ ಕೂಡ ರೌಡಿಶೀಟರ್ ಆಗಿದ್ದನು. ಯಶಸ್ವಿಗೌಡ ಮೀಟರ್ ಬಡ್ಡಿ ದಂಧೆಯನ್ನು ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ರಾಬರಿ, ಧಮ್ಕಿ ಕೊಲೆಯತ್ನ ಸೇರಿ ಹಲವು ಪ್ರಕರಣಗಳು ಈಕೆಯ ಮೇಲಿವೆ.

  • ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ

    ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ

    ಮುಂಬೈ: ಇಂಟರ್‌ನೆಟ್‌ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡು ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ.

    ರಾನು ಅವರು ಗಾಯಕ ಹಿಮೇಶ್ ರೇಶ್ಮಿಯಾ ನಟಿಸಿದ ‘ಹ್ಯಾಪಿ ಹಾರ್ಡಿ ಹಾಗೂ ಹೂರ್’ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ರಾನು ಅವರು ಹಾಡುತ್ತಿದ್ದ ವಿಡಿಯೋವನ್ನು ಹಿಮೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    ಇತ್ತೀಚೆಗೆ ತೇರಿ ಮೇರಿ ಕಹಾನಿ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿತ್ತು. ಈ ವಿಡಿಯೋ ಸಾಕಷ್ಟು ಹಿಟ್ ಕೂಡ ಆಗಿತ್ತು. ಜನರು ಈ ವಿಡಿಯೋವನ್ನು ಶೇರ್ ಮಾಡುವುದರ ಮೂಲಕ ರಾನು ಅವರಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದರು.

    ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಅವರು ಹಾಡಿದ ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಲ್ಲದೆ ಚಿತ್ರದ ನಿರ್ಮಾಪಕರಾದ ದೀಪ್ಷಿಕಾ ದೇಶ್‍ಮುಖ್ ಹಾಗೂ ಸಬಿತಾ ಮನಕ್ಚಂದ್ ಅವರು ಮೊದಲು ಚಿತ್ರದ ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಿ ನಂತರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿಮೇಶ್ ರೇಶ್ಮಿಯಾ ಅವರು, “ಹ್ಯಾಪಿ, ಹಾರ್ಡಿ ಹಾಗೂ ಹೀರ್ ಚಿತ್ರಕ್ಕೆ ಜನರು ಪ್ರೀತಿ ತೋರಿಸುತ್ತಿರುವುದು ನೋಡಿ ನನಗೆ ಸಾಕಷ್ಟು ಖುಷಿ ಆಗುತ್ತಿದೆ. ದೇವರ ದಯೆಯಿಂದ ಈ ಚಿತ್ರ ಹೊಸ ಪ್ರವೃತ್ತಿಯನ್ನು ಹೊಂದುತ್ತದೆ ಎಂಬ ವಿಶ್ವಾಸ ನನಗೆ ಇದೆ. ರಾನು ಅವರು ಕೂಡ ತುಂಬಾ ಅದ್ಭುತವಾಗಿ ಹಾಡುಗಳನ್ನು ಹಾಡಿದ್ದಾರೆ. ಪ್ರೇಕ್ಷಕರು ಹಾಡನ್ನು ಇಷ್ಟಪಡುತ್ತಾರೆ ಹಾಗೂ ಎಂಜಾಯ್ ಮಾಡುತ್ತಾರೆ ಎಂದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.

  • ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ: ಬಿಗ್-ಬಿ

    ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ: ಬಿಗ್-ಬಿ

    ಮುಂಬೈ: ಬಾಲಿವುಡ್ ಬಿಗ್- ಬಿ ಅಮಿತಾಬ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದಾರೆ.

    ಅಮಿತಾಬ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ 11ನೇ ಸೀಸನ್ ಸೋಮವಾರ ರಾತ್ರಿಯಿಂದ ಶುರುವಾಗಿದೆ. ಈ ವೇಳೆ ಅವರು ತಮ್ಮ ಆರೋಗ್ಯದ ಬಗ್ಗೆ ಬಹಿರಂಗವಾಗಿ ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್, ಜನರು ತಮ್ಮ ದೇಹದ ರೆಗ್ಯೂಲರ್ ಚೆಕಪ್ ಮಾಡಿಸುತ್ತಾನೆ ಇರಬೇಕು ಎಂದರು. ಬಳಿಕ ತಮ್ಮ ಉದಾಹರಣೆ ನೀಡಿ, ನನ್ನ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ ಎಂದು ವಿಷಯ ನನಗೆ ತಿಳಿಯಿತು. ನನಗೆ ಟ್ಯೂಬರ್‌ಕ್ಯೂಲೋಸಿಸ್‌ ಸಮಸ್ಯೆ ಹಾಗೂ ಹಲವು ಸಮಸ್ಯೆಗಳು ಇದೆ. ಸಮಯಕ್ಕೆ ಸರಿಯಾಗಿ ರೋಗಗಳು ಪತ್ತೆಯಾದರೆ ಅವುಗಳ ಚಿಕಿತ್ಸೆ ಸಾಧ್ಯ ಎಂದು ಹೇಳಿದ್ದಾರೆ.

    ಅಮಿತಾಬ್ ಅವರು 76ನೇ ವಯಸ್ಸಿನಲ್ಲೂ ಫಿಟ್ ಆಗಿರುತ್ತಾರೆ. ಅಲ್ಲದೆ ನಿರಂತರವಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಅಮಿತಾಬ್ ಅವರಿಗೆ ಹಲವು ಸಮಸ್ಯೆಗಳು ಇದೆ. ಆದರೆ ಅವರು ತಮ್ಮ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಸದ್ಯ ಅಮಿತಾಬ್ ‘ಬದ್ಲಾ’ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ‘ಗುಲಾಬೋ ಸಿತಾಬೋ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರಗಳನ್ನು ಹೊರತುಪಡಿಸಿ ಅಮಿತಾಬ್, ‘ಬ್ರಹ್ಮಾಸ್ತ್ರ’, ‘ಚೆಹರೆ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ಅನುಷ್ಕಾ ಬಗ್ಗೆ ಮೌನ ಮುರಿದ ಪ್ರಭಾಸ್

    ಅನುಷ್ಕಾ ಬಗ್ಗೆ ಮೌನ ಮುರಿದ ಪ್ರಭಾಸ್

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅವರು ನಟಿ ಅನುಷ್ಕಾ ಶೆಟ್ಟಿ ಜೊತೆಗಿನ ಸ್ನೇಹದ ಬಗ್ಗೆ ಮೌನ ಮುರಿದಿದ್ದಾರೆ.

    ಪ್ರಭಾಸ್ ಅವರು ತಮ್ಮ ಮುಂಬರುವ ‘ಸಾಹೋ’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಆಗ ನಿರೂಪಕರು ಅನುಷ್ಕಾ ಶೆಟ್ಟಿ ಜೊತೆಗಿನ ಸಂಬಂಧದ ಬಗ್ಗೆ ಪ್ರಭಾಸ್ ಅವರನ್ನು ಪ್ರಶ್ನಿಸಿದ್ದರು.

    ನಿರೂಪಕನ ಪ್ರಶ್ನೆಗೆ ಪ್ರಭಾಸ್ ಅವರು, “ನಾನು ಹಾಗೂ ಅನುಷ್ಕಾ ಒಳ್ಳೆಯ ಸ್ನೇಹಿತರು ಅಷ್ಟೇ. ನಮ್ಮಿಬ್ಬರ ನಡುವೆ ಬೇರೆ ಏನಾದರೂ ಇದ್ದಿದ್ದರೆ ಕಳೆದ ಎರಡು ವರ್ಷಗಳಲ್ಲಿ ಯಾರಾದರೂ ನಮ್ಮನ್ನು ಒಟ್ಟಿಗೆ ಗುರುತಿಸುತ್ತಿರಲಿಲ್ಲವೇ?” ಎಂದು ಮರು ಪ್ರಶ್ನೆ ಹಾಕಿದ್ದರು.

    ಈ ಹಿಂದೆ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ನಟ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ನಿರೂಪಕ ಕರಣ್ ಜೋಹರ್ ಅನುಷ್ಕಾ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಭಾಸ್, “ನಾನು ಮತ್ತು ಅನುಷ್ಕಾ ಒಳ್ಳೆಯ ಗೆಳೆಯ-ಗೆಳತಿ ಅಷ್ಟೇ. ಆಕೆ ಜೊತೆ ನಾನು ಯಾವತ್ತೂ ಡೇಟಿಂಗ್ ಮಾಡಿಲ್ಲ. ಬಾಹುಬಲಿಯಲ್ಲಿ ಆಕೆ ನನಗೆ ತಾಯಿಯಾಗಿದ್ದಾಳೆ, ಪ್ರೇಯಸಿಯೂ ಆಗಿದ್ದಾಳೆ. ಈಗ ನೀವೇ ಹೇಳಿ ತಾಯಿಯನ್ನು ಯಾರಾದರೂ ಮದುವೆ ಆಗೋಕೆ ಸಾಧ್ಯನಾ?” ಎಂದು ಹೇಳಿದ್ದರು.

    ಪ್ರಭಾಸ್ ನಟನೆಯ ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳು ಅಗಸ್ಟ್ 30ರಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.

  • ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಭಿಷೇಕ್ ಅಂಬರೀಶ್ ರಕ್ತದಾನ

    ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಭಿಷೇಕ್ ಅಂಬರೀಶ್ ರಕ್ತದಾನ

    ಮಂಡ್ಯ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ರಕ್ತದಾನ ಮಾಡಿದ್ದಾರೆ.

    ಮಂಡ್ಯದ ವಿದ್ಯಾಗಣಪತಿ ದೇವಾಲಯದಲ್ಲಿ ಜೀವಧಾರೆ ಟ್ರಸ್ಟ್ ವತಿಯಿಂದ ಕಾರ್ಗಿಲ್ ವಿಜಯೋತ್ಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರವನ್ನು ಅಯೋಜನೆ ಮಾಡಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಹಲವರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿದ್ದರು. ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಆಗಮಿಸಿದ್ದ ಅಭಿಷೇಕ್  ಅಂಬರೀಶ್ ಈ ವೇಳೆ ತಾವೂ ಕೂಡ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದರು.

  • ದೇಶದ ಮೊದಲ ಕಾರ್ಗಿಲ್ ಸ್ತೂಪದ ಬಳಿ ಹುತಾತ್ಮರಿಗೆ ಗೌರವ

    ದೇಶದ ಮೊದಲ ಕಾರ್ಗಿಲ್ ಸ್ತೂಪದ ಬಳಿ ಹುತಾತ್ಮರಿಗೆ ಗೌರವ

    ಧಾರವಾಡ: ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದ ಗೆಲುವಿನ 20ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಕಾರ್ಗಿಲ್ ಸ್ತೂಪದ ಬಳಿ ವಿಜಯೋತ್ಸವ ಕಾರ್ಯಕ್ರಮ ನಡೆಲಾಯಿತು.

    ನಗರದಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕಾರ್ಗಿಲ್ ಸ್ತೂಪದ ಬಳಿ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವ ಆರಚಣೆ ಮಾಡಲಾಯಿತು. ಇದರಲ್ಲಿ ಎನ್‍ಸಿಸಿ ಮತ್ತು ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

    ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಮಂಡಳಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹೈಕೋರ್ಟ್ ರಿಜಿಸ್ಟ್ರರ್ ಜನರಲ್ ವಿ ಶ್ರೀಶಾನಂದ, ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಕೆವಿಜಿ ಬ್ಯಾಂಕ್ ಮುಖ್ಯಸ್ಥರು ಸೇರಿ ಹಲವರು ಭಾಗವಹಿಸಿದ್ದರು.

  • ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    -ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು

    ಕೋಲಾರ: ಸಮಾಜದಲ್ಲಿ ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಸೇವಾ ಸಮಿತಿ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳತಿಗಾಗಿ ಯಾರು ಅನ್ಯಾಯವನ್ನು ಪ್ರಶ್ನಿಸುತ್ತಾರೋ ಅವರಿಗೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದವರನ್ನ ಕೊಲ್ಲುವುದು, ಬಂಧಿಸುವ ಸ್ಥಿತಿ ಇದೆ. ಸಾಹಿತಿ ಎಂ.ಎಂ ಕಲಬುರ್ಗಿ ಎಂತಹ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋದಾಗ ಧಾರ್ಮಿಕ ವಾದಿಗಳು ಹತ್ಯೆಗೈದಿದ್ದಾರೆ. ಆದರೆ ಅನ್ಯಾಯದ ವಿರುದ್ಧ ಹೋರಾಡಲು ಅಂಬೇಡ್ಕರ್ ಸಂವಿಧಾನ ರಚಿಸಿದರು. ಹೀಗಾಗಿ ಬುದ್ಧ ಹಾಗೂ ಅಂಬೇಡ್ಕರ್ ಅವರ ಸಿದ್ಧಾಂತಗಳು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.

    ಸಂವಿಧಾನ ವಿರೋಧಿಗಳು ಧರ್ಮಗಳನ್ನ ಒಡೆಯುತ್ತಿದ್ದಾರೆ. 300 ವರ್ಷಗಳ ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು ಸುಲ್ತಾನ. ಅಂತಹ ಟಿಪ್ಪು ದೇಶ ರಕ್ಷಣೆ ಮಾಡಿ, ಮಠ ಮಾನ್ಯಗಳನ್ನ ರಕ್ಷಣೆ ಮಾಡಿದ್ದಾರೆ. ಆದ್ರೆ ಇಂದು ಅವರನ್ನು ದೇಶದ್ರೋಹಿಯಂತೆ ಬಿಂಬಿಸುತ್ತಿದ್ದಾರೆ. ಟಿಪ್ಪುವಿಗೆ ದೇಶದ್ರೋಹದ ಪಟ್ಟ ಕಟ್ಟುವವರು ನಿಜಕ್ಕೂ ಇತಿಹಾಸವನ್ನೂ ಅರಿತಿಲ್ಲ ಎಂದು ಕಿಡಿಕಾರಿದರು.

    ಹಾಗೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತಿ ಭಗವಾನ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಮಾನತೆ ಇದೆ, ಆದ್ರೆ ಮನುಸ್ಮೃತಿಯಲ್ಲಿ ಸಮಾನತೆ ಇಲ್ಲ. ಮನುಸ್ಮೃತಿ ಇರುವುದು ಬ್ರಾಹ್ಮಣರು ಶೂದ್ರರ ಮೇಲೆ ದಾಸ್ಯ ಹೇರಲು ಮಾತ್ರ ಇದೆ. ಆದರೆ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಬದಿಗೆ ಸರಿಸಿ ಸಂವಿಧಾನವನ್ನು ತಂದರು ಎಂದು ಸಾಹಿತಿ ಭಗವಾನ್ ತಿಳಿಸಿದರು.

    ಸಂವಿಧಾನವನ್ನ ಯಾರೂ ಓದಿ ಅರ್ಥ ಮಾಡಿಕೊಂಡಿಲ್ಲ, ಸಂವಿಧಾನದಲ್ಲಿ ಸಮಾನತೆ ಇದೆ ದಾಸ್ಯ ಇಲ್ಲ. ಬ್ರಾಹ್ಮಣರು ಬಿಟ್ಟು ಉಳಿದವರೆಲ್ಲಾ ಗುಲಾಮರು ಎಂಬುದು ಮನುಸ್ಮೃತಿ. ಆದ್ದರಿಂದ ಸಂವಿಧಾನವನ್ನ ತೆಗೆಯಲು ಹೊರಟಿದ್ದಾರೆ ಎಂದರು. ಬಳಿಕ ಬ್ರಿಟಿಷರು ಬಂದ ಮೇಲೆ ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಅಲ್ಲಿಯವರೆಗೂ ಎಲ್ಲರೂ ಹೆಬ್ಬಟ್ಟುಗಳೆ ಆಗಿದ್ದರು. ಕೆಲಸಕ್ಕೆ ಬಾರದ ತುಳಿಯುವ, ಕಡಿಯುವ ಇಲ್ಲಸಲ್ಲದ ದೇವರುಗಳನ್ನ ತಂದು ನಮ್ಮ ಮೇಲೆ ಹೇರಿದ್ದಾರೆ. ಇದರಿಂದ ನಾವು ಹೊರಗೆ ಬರಬೇಕು, ಸಂವಿಧಾನವನ್ನು ಅಧ್ಯಯನ ಮಾಡಿ ಅರಿವು ಪಡೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.

  • ಮತ್ತೆ ಜೊತೆಜೊತೆಯಲಿ – ಒಟ್ಟಿಗೆ ಉಪಹಾರ ಸೇವಿಸಿದ ಜಿಟಿಡಿ, ಪ್ರತಾಪ್ ಸಿಂಹ

    ಮತ್ತೆ ಜೊತೆಜೊತೆಯಲಿ – ಒಟ್ಟಿಗೆ ಉಪಹಾರ ಸೇವಿಸಿದ ಜಿಟಿಡಿ, ಪ್ರತಾಪ್ ಸಿಂಹ

    ಮೈಸೂರು: ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಕುಸ್ತಿ ಆಡುವ ಜೆಡಿಎಸ್, ಬಿಜೆಪಿ ನಾಯಕರು ಕಾರ್ಯಕ್ರಮಗಳಲ್ಲಿ ಜೊತೆಯಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

    ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಜಿ.ಟಿ ದೇವೇಗೌಡ ಅವರು ಮತ್ತೆ ಜೊತೆಯಾಗಿ ಕಾಣಿಸಿಕೊಂಡು ಭಾರೀ ಸುದ್ದಿಯಾಗುತ್ತಿದ್ದಾರೆ. ಹೌದು. ಮೈಸೂರು ತಾಲೂಕಿನ ಮರಟಿ ಕ್ಯಾತನಹಳ್ಳಿಯಲ್ಲಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯಲ್ಲಿ ಎರಡೂ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶನ ನೀಡಿದ್ದಾರೆ.

    ಅಷ್ಟೇ ಅಲ್ಲದೆ ತಾಲೂಕು ಪಂಚಾಯತ್ ಜೆಡಿಎಸ್ ಸದಸ್ಯೆ ಮನೆಯಲ್ಲಿ ಉಪಹಾರ ಸೇವನೆ ಮಾಡಿ, ಬಳಿಕ ಜಿಟಿಡಿ, ಪ್ರತಾಪ್ ಸಿಎಂ ಅವರು ಒಂದೇ ಕಾರಿನಲ್ಲಿ ಸಂಚರಿಸಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

    ಈ ಹಿಂದೆ ಒಂದೇ ಕಾರಿನಲ್ಲಿ ಪ್ರತಾಪ್ ಸಿಂಹ, ಜಿ.ಟಿ ದೇವೇಗೌಡ ಹಾಗೂ ಸಚಿವ ಸಾ.ರಾ.ಮಹೇಶ್ ಜೊತೆಯಾಗಿ ಓಡಾಟ ನಡೆಸಿ ಅಚ್ಚರಿ ಮೂಡಿಸಿದ್ದರು.

    ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಜಿಟಿಡಿ ಹಾಗೂ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ ಅವರು ಸಹ ನಾಯಕರಿಗೆ ಸಾಥ್ ನೀಡಿದ್ದರು.

    ಲೋಕಸಭಾ ಚುನಾವಣೆಯ ಸಮಯದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಾಂಗ್ರೆಸ್ಸಿನ ವಿಜಯಶಂಕರ್ ಕಣಕ್ಕೆ ಇಳಿದಾಗ ಸಿಂಹ ವಿರುದ್ಧ ಜೆಡಿಎಸ್ ನಾಯಕರು ಪ್ರಚಾರ ನಡೆಸಿದ್ದರು. ಆದರೆ ಈಗ ಪದೇ ಪದೇ ಬಿಜೆಪಿ ನಾಯಕನ ಜೊತೆ ಜೆಡಿಎಸ್ ನಾಯಕರು ಓಡಾಡುತ್ತಿರುವ ವಿಚಾರ ರಾಜಕೀಯ ವಲಯದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಿಯಾಂಕ ಚೋಪ್ರಾರನ್ನು ನೋಡಿ ಮೋದಿ ಎಂದ ಜನರು

    ಪ್ರಿಯಾಂಕ ಚೋಪ್ರಾರನ್ನು ನೋಡಿ ಮೋದಿ ಎಂದ ಜನರು

    ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರನ್ನು ನೋಡಿ ಅಲ್ಲಿದ್ದ ಜನರು ಜೋರಾಗಿ ಮೋದಿ ಮೋದಿ ಎಂದು ಕಿರುಚಲು ಶುರು ಮಾಡಿದ್ದಾರೆ.

    ಪ್ರಿಯಾಂಕ ಡೇಟಿಂಗ್ ವೆಬ್‍ಸೈಟ್ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಅವರು ಸಂಪೂರ್ಣ ಕೇಸರಿ ಬಣ್ಣದ ಉಡುಪು ಧರಿಸಿದರು. ಇದನ್ನು ನೋಡಿದ ಜನರು ಜೋರಾಗಿ ಮೋದಿ ಮೋದಿ ಎಂದು ಕಿರುಚಲು ಶುರು ಮಾಡಿದ್ದಾರೆ.

    ಮುಂಬೈನ ಜೂಹು ತಾರಾ ರೋಡಿನಲ್ಲಿ ಇರುವ ಹೋಟೆಲಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕ ಕೆಲವು ಆಯ್ದ ಪ್ರಭಾವಿ ಮಹಿಳೆಯರ ಜೊತೆ ಡಿನ್ನರ್ ಮಾಡಿದ್ದಾರೆ. ಪ್ರಿಯಾಂಕ ಈ ಡೇಟಿಂಗ್ ವೆಬ್‍ಸೈಟ್‍ನ ನಿರ್ವಹಣೆಯಲ್ಲಿ ಪಾಲುದಾರರಾಗಿ ಆಗಮಿಸಿದ್ದರು.

    ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಮ್ಯಾಗಜಿನ್‍ವೊಂದಕ್ಕೆ ಬ್ಲೌಸ್ ಹಾಕದೇ ಸೀರೆ ಧರಿಸಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಪ್ರಿಯಾಂಕಾ ಗೋಲ್ಡನ್ ಬಣ್ಣದ ಸೀರೆ ಧರಿಸಿ ತಮ್ಮ ಬೆನ್ನನ್ನು ಎಕ್ಸ್ ಪೋಸ್ ಮಾಡಿದ್ದರು. ಈ ಫೋಟೋ ನೋಡಿ ಜನರು ಪ್ರಿಯಾಂಕ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

  • ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಕಾರವಾರ: ಯಾವುದೇ ಕಾರ್ಯಕ್ರಮವಿರಲಿ ಬಂದ ಅಥಿತಿಗಳಿಗೆ ಸಿಹಿ ನೀಡಿ ಮೃಷ್ಟಾನ್ನ ಭೋಜನ ನೀಡುವ ಮೂಲಕ ಅತಿಥಿ ಸತ್ಕಾರ ಮಾಡುವುದು ಸಂಪ್ರದಾಯ .

    ಯಲ್ಲಾಪುರ ತಾಲೂಕಿನ ಚಂದಗುಳಿಯಲ್ಲಿ ಬುಧವಾರ ನಡೆದ ಉಪನಯನವೊಂದರಲ್ಲಿ ವಿತರಿಸಿದ ವಿಭಿನ್ನ ಉಂಡೆ ಅತಿಥಿಗಳನ್ನು ಮೆಚ್ಚಿಸುವಂತೆ ಮಾಡಿತ್ತು. ಅಲ್ಲಿ ವಿತರಿಸಿದ್ದು ಯಾವುದೇ ಸಿಹಿಯಾದ ಉಂಡೆಯಾಗಿರದೇ ಪ್ಯಾಕ್ ಮಾಡಿದ ಬೀಜದುಂಡೆಯಾಗಿತ್ತು. ವೀಣಾ ಹಾಗೂ ರಾಮಚಂದ್ರ ವೈದ್ಯ ದಂಪತಿಗಳ ಪುತ್ರನಾದ ಆದಿತ್ಯ (ಜಯಶೀಲ)ನ ಉಪನಯನವನ್ನು ತಾಲೂಕಿನ ಚಂದಗುಳಿ ಗಂಟೆ ಗಣಪತಿ ದೇವಾಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ನಮ್ಮ ಮಗನ ಉಪನಯನ ವಿಭಿನ್ನವಾಗಿರಬೇಕು ಮತ್ತು ಈ ಶುಭಕಾರ್ಯದ ಸವಿನೆನಪು ಚಿರಸ್ಥಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಈ ದಂಪತಿ ಆಯ್ಕೆ ಮಾಡಿಕೊಂಡಿದ್ದು ಪರಿಸರ ಜಾಗೃತಿ. ಮಗನ ಉಪನಯನದ ಹೆಸರಿನಲ್ಲಿ ನೂರಾರು ಗಿಡಗಳು ಅಲ್ಲಲ್ಲಿ ಬೆಳೆದು ನಿಲ್ಲಲಿ, ಈ ಮೂಲಕ ಹಸಿರು ಪರಿಸರ ಹೆಚ್ಚಾಗಲಿ ಎಂಬ ಉದ್ದೇಶದಿಂದ ಬೀಜದುಂಡೆಗಳನ್ನು ತಯಾರಿಸಿ, ಬಂದಂತಹ ಅತಿಥಿಗಳಿಗೆ ಆದಿತ್ಯನ ಆಧ್ಯಾತ್ಮಿಕ ಪಯಣಕ್ಕೆ ಸಾಕ್ಷಿಯಾಗಿ ಹರಸಿ. ಪ್ರೀತಿಯಿಂದ ನಾವು ನೀಡುವ ಜೀವಗಾಳು ಪಸರಿಸಿ ಎಂಬ ಸಂದೇಶದೊಂದಿಗೆ ವಿತರಿಸಿದ್ದಲ್ಲದೇ, ಇದನ್ನು ನಿಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ಹಾಕುವುದರ ಮೂಲಕ ಹಸಿರು ಪರಿಸರ ಹೆಚ್ಚಾಗಲು ಕೈಜೋಡಿಸಿ ಎಂಬ ಮನವಿಯನ್ನೂ ಮಾಡಿಕೊಳ್ಳಲಾಯಿತು.

    ಈ ವಿಚಾರದ ಬಗ್ಗೆ ಮಾತನಾಡಿರುವ ಈ ಬೀಜದುಂಡೆ ವಿತರಣೆಯ ರೂವಾರಿ ಆದಿತ್ಯನ ಕುಟುಂಬದವರಾದ ವಾನಳ್ಳಿಯ ನಾಗವೇಣಿ ಹೆಗಡೆ, ಅತಿಥಿಗಳಿಗೆ ವಿತರಿಸಲು ಎರಡು ಜಾತಿಯ ಮರಗಳಾದ ನೇರಳೆ, ಹಲಸು ಮುಂತಾದ ಬೀಜಗಳುಳ್ಳ ಸುಮಾರು 1200 ಹೆಚ್ಚು ಬೀಜದುಂಡೆಗಳನ್ನು ತಯಾರಿಸಿ ವಿತರಿಸಿದ್ದೇವೆ. ಅವುಗಳಲ್ಲಿ ನೂರು ಗಿಡಗಳು ಹುಟ್ಟಿ, ಮರವಾಗಿ ಬೆಳೆದು ನಿಂತರೆ ಪರಿಸರಕ್ಕೊಂದು ಕೊಡುಗೆ ನೀಡಬೇಕೆಂದ ನಮ್ಮ ಅಭಿಲಾಶೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಈ ರೀತಿ ಶುಭ ಕಾರ್ಯಗಳಲ್ಲಿ ಸಾಮಾಜಿಕ ಸಂದೇಶವನ್ನು, ಪರಿಸರ ಜಾಗೃತಿಯನ್ನು ಮೂಡಿಸುವಂತಾದರೆ ಶುಭ ಕಾರ್ಯ ಸಾಮಾಜಿಕ ಕಾರ್ಯವಾಗುವುದರಲ್ಲಿ ಸಂಶಯವಿಲ್ಲ.