ಹಾಸನ: ಮಾಜಿ ಸಚಿವ ರೇವಣ್ಣನವರ ಬಗ್ಗೆ ಆಗದವರು ಏನು ಮಾತನಾಡಿಕೊಂಡರು ನಾನು ತಲೆಕೆಡಿಸಿಕೊಳ್ಳಲ್ಲ. ಯಾಕೆಂದರೆ ಊರು ಇದ್ದ ಕಡೆ ಮಾತು ಇದ್ದೇ ಇರುತ್ತವೆ ಎಂದು ರೇವಣ್ಣ ಪತ್ನಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಪತಿ ವಿರುದ್ಧ ಮಾತನಾಡಿದವರಿಗೆ ತಿರುಗೇಟು ನೀಡಿದ್ದಾರೆ. ರೇವಣ್ಣನವರ ಬಗ್ಗೆ ಆಗದವರು ಏನು ಮಾತನಾಡಿಕೊಂಡರು ನಾನು ತಲೆಕೆಡಿಸಿಕೊಳ್ಳಲ್ಲ. ಯಾಕೆಂದರೆ ಊರು ಇದ್ದ ಕಡೆ ಮಾತು ಇದ್ದೇ ಇರುತ್ತವೆ. ಅನುದಾನ ತಂದು ಒಳ್ಳೆಯ ಕೆಲಸ ಮಾಡೋದು ಎಷ್ಟು ಕಷ್ಟ ಗೊತ್ತಾ? ರೇವಣ್ಣ ಅವರು ಒಳ್ಳೆಯ ಕೆಲಸ ಮಾಡಲು ಹೋದರೆ ಆಳಿಗೆ ಒಂದು ಕಲ್ಲು ಎನ್ನುತ್ತಾರೆ. ಏನೇ ಮಾಡಿದರೂ ಮಾತನಾಡುವ ಜನ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದು ಪತಿಯನ್ನು ಟೀಕಿಸಿದವರ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಹಿತ್ತಾಳೆ ಕಿವಿ ಆರೋಪ, ಶಿವರಾಮೇಗೌಡರನ್ನು ಕಸದಬುಟ್ಟಿಗೆ ಹೋಲಿಸಿದ ರೇವಣ್ಣ

ರೇವಣ್ಣ ಅವರು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲ್ಲ. ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿಸಿದ್ದಾರೆ ಎನ್ನುತ್ತಾರೆ. ಆದರೆ ಅನುದಾನ ತರೋದು ಎಷ್ಟು ಕಷ್ಟ ಎಂದು ಗೊತ್ತಿರಲ್ಲ ಸುಮ್ಮನೆ ಮಾತನಾಡುತ್ತಾರೆ. ಹೊಳೆನರಸಿಪುರದಲ್ಲಿ ಭಾರೀ ಮಳೆಯಾದಾಗ 5 ಕೋಟಿ ಅನುದಾನ ತಂದು ತಡೆಗೋಡೆ ನಿರ್ಮಿಸಲಾಯಿತು. ಆಗ ಹಲವರು ಈಗ ತಡೆಗೋಡೆ ಬೇಕಿತ್ತಾ? ಅನುದಾನದ ಹಣ ಲಪಟಾಯಿಸಲು ತಡೆಗೋಡೆ ಮಾಡುತ್ತಿದ್ದಾರೆ ಎಂದು ಮಾತನಾಡಿದ್ದರು. ಆದರೆ ಆ ತಡೆಗೋಡೆ ಕಟ್ಟದ್ದಿದ್ದರೆ ಮಳೆಗೆ ಹೊಳೆನರಸಿಪುರದಲ್ಲಿ ಪ್ರವಾಹ ಪ್ರತಿಸ್ಥಿತಿ ಬರುತ್ತಿತ್ತು. ಅದರ ಬಗ್ಗೆ ಯಾರು ಯೋಚನೆ ಮಾಡಲ್ಲ ಎಂದು ಕಿಡಿಕಾರಿದರು.

ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದಾರೆ. ಅವರ ಕೆಲಸದಿಂದ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿ ನಿಂತಿದೆ. ಶಿಕ್ಷಣಕ್ಕೆ ಅವರು ಹೆಚ್ಚು ಒತ್ತುಕೊಟ್ಟು, ಶಿಕ್ಷಣದಲ್ಲಿ ಜಿಲ್ಲೆಯನ್ನು ಮುಂದೆ ಬರುವಂತೆ ಮಾಡಿದ್ದಾರೆ ಎಂದು ಪತಿಯ ಕಾರ್ಯವೈಖರಿಯನ್ನು ಭವಾನಿ ರೇವಣ್ಣ ಹಾಡಿ ಹೊಗಳಿದರು.


























