ಯಾದಗಿರಿ: ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿ 50 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಗವಿರಂಗ ಹನುಮಾನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಬೆಂಚಿಗಡ್ಡಿ ಗ್ರಾಮದ ಗವಿಯಪ್ಪ ಅವರ ಪುತ್ರನ ಜಾವಳ ಕಾರ್ಯಕ್ರಮ ಭಾನುವಾರ ನಡೆದಿತ್ತು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಹೊಳಿಗೆ, ಅನ್ನ ಸಾಂಬರ್ ಹೀಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಾವಳ ಕಾರ್ಯಕ್ರಮ ಮುಗಿದ ನಂತರ ಊಟ ಬಡಿಸಲಾಯ್ತು. ಆದರೆ ಊಟ ಮಾಡಿದವರೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಇದರಿಂದ ಗಾಬರಿಗೊಂಡ ಸ್ಥಳೀಯರು ಊಟವನ್ನು ಅರ್ಧಕ್ಕೆ ಬಿಟ್ಟು, ಅಸ್ವಸ್ಥಗೊಂಡವರನ್ನು ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂದು ತಿಳಿದು ಬಂದಿಲ್ಲ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಈ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

























