– ಕನಿಕಾ ಕಪೂರ್ಗೆ ಕೊರೊನಾ ಸೋಂಕು
– ಸಂಸತ್ತಿನಲ್ಲಿ ಹಲವು ಸದಸ್ಯರನ್ನು ಸಂಪರ್ಕಿಸಿದ್ದ ದುಶ್ಯಂತ್
ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಸುಂಧರಾ ರಾಜೇ ಮತ್ತು ಪುತ್ರ ಸಂಸದ ದುಶ್ಯಂತ್ ಸಿಂಗ್ ಈಗ ಜನಸಂಪರ್ಕದಿಂದ ಪ್ರತ್ಯೇಕಗೊಂಡಿದ್ದಾರೆ.
41 ವರ್ಷದ ಕನಿಕಾ ಕಪೂರ್ ಮಾರ್ಚ್ 9 ರಂದು ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದರು. ಬಳಿಕ ಲಕ್ನೋದಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ 200ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ವಸುಂಧರ ರಾಜೇ ಮತ್ತು ಅವರ ಪುತ್ರ ದುಶ್ಯಂತ್ ಮತ್ತು ಅವನ ಮಾವ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾದ ಬಳಿಕ ದುಶ್ಯಂತ್ ಸಿಂಗ್ ಸಂಸತ್ ಕಲಾಪಕ್ಕೆ ಹಾಜರಾಗಿದ್ದು ಹಲವು ಸದಸ್ಯರು ಇವರ ಸಂಪರ್ಕಕ್ಕೆ ಬಂದಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ವಸುಂಧರಾ ರಾಜೇ ಅವರು, ಲಖನೌದಲ್ಲಿ ಒಂದು ಡಿನ್ನರ್ ಪಾರ್ಟಿಗೆ ನಾನು ನನ್ನ ಮಗ ದುಶ್ಯಂತ್ ಮತ್ತು ಅವನ ಮಾವ ರಾತ್ರಿ ಹೋಗಿದ್ದೆವು. ದುರದೃಷ್ಟವಶಾತ್ ಇಂದು ಕೊರೊನಾ ಇರುವುದು ದೃಢಪಟ್ಟಿರುವ ಗಾಯಕಿ ಕನಿಕಾ ಸಹ ಅಲ್ಲಿಗೆ ಅತಿಥಿಯಾಗಿ ಬಂದಿದ್ದರು. ವಿಷಯ ತಿಳಿದ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ಸ್ವತಃ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅಂದು ಕನಿಕಾ ಕಪೂರ್ ಅತಿಥಿಯಾಗಿದ್ದ ಕಾರ್ಯಕ್ರಮಕ್ಕೆ ಲಕ್ನೋದ ಪ್ರಮುಖ ವ್ಯಕ್ತಿಗಳು, ಸಚಿವರು ಹಾಗೂ ಅಧಿಕಾರಿಗಳು ಬಂದಿದ್ದರು. ಮೂಲಗಳ ಪ್ರಕಾರ ಸುಮಾರು 200 ಜನರು ಕಾರ್ಯಕ್ರಮದಲ್ಲಿ ಸೇರಿದ್ದರು. ಮಾರ್ಚ್ 9ರಂದು ಕನಿಕಾ ಲಂಡನ್‍ನಿಂದ ಮುಂಬೈಗೆ ಬಂದಿದ್ದರು. ಇದಾದ ಎರಡು ದಿನಗಳ ನಂತರ ಲಕ್ನೋಗೆ ತೆರಳಿದ್ದರು. ಲಕ್ನೋದಲ್ಲಿ ಮಾರ್ಚ್ 15ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ವಸುಂಧರಾ ರಾಜೇ, ದುಶ್ಯಂತ್ ಸಿಂಗ್ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ದುಶ್ಯಂತ್ ಸಿಂಗ್ ಉತ್ತರ ಪ್ರದೇಶ ಮತ್ತು ರಾಜಸ್ತಾನದ ಸಂಸದರ ನಿಯೋಗದ ಅಂಗವಾಗಿ ಬುಧವಾರ ರಾಷ್ಟ್ರಪತಿಯನ್ನು ಭೇಟಿಯಾಗಿದ್ದರು. ಶುಕ್ರವಾರ ಅವರನ್ನು ಭೇಟಿಯಾದ ಮಾಜಿ ಕೇಂದ್ರ ಸಚಿವ ಅನುಪ್ರಿಯಾ ಪಟೇಲ್, ಕಾಂಗ್ರೆಸ್ಸಿನ ಜಿತಿನ್ ಪ್ರಸಾದ್ ಮತ್ತು ದೀಪಿಂದರ್ ಹೂಡಾ ಅವರು ಅವರ ಮನೆಯಲ್ಲೇ ಐಸೋಲೇಟೆಡ್ ಆಗಿದ್ದಾರೆ.

ಲಕ್ನೋ ಕಾರ್ಯಕ್ರಮ ಮುಗಿದ ನಂತರ ದುಶ್ಯಂತ್ ಸಿಂಗ್ ಅವರು ಸಂಸತ್ತಿಗೆ ಹೋಗಿದ್ದರು. ಈ ವಿಚಾರವಾಗಿ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಡೆರಿಕ್ ಓಬ್ರೀನ್, ಸ್ವತಃ ಪ್ರತ್ಯೇಕವಾಗಿ ಎಚ್ಚರಿಕೆಯ ನಡೆ ಅನುಸರಿಸುವಂತೆ ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ದೇಶದಲ್ಲಿ ಸಂಸತ್ತು ಕಾರ್ಯನಿರ್ವಹಿಸುತ್ತಿದೆ. ಸಂಸತ್ ಅಧಿವೇಶನವನ್ನು ಮುಂದೂಡಬೇಕು. ನಾನು ಒಂದು ದಿನ ದುಶ್ಯಂತ್ ಪಕ್ಕದಲ್ಲಿ ಎರಡೂವರೆ ಗಂಟೆ ಕುಳಿತಿದ್ದೆ. ಹಾಗಾಗಿ ನಾನು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಲಕ್ನೋದಲ್ಲಿ ಕಾರ್ಯಕ್ರಮ ಮುಗಿದ ನಂತರ ದುಶ್ಯಂತ್ ಸಿಂಗ್ ಗುರುವಾರ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಿಶಿಕಾಂತ್ ಮತ್ತು ಮನೋಜ್ ತಿವಾರಿ ಅವರೊಂದಿಗೆ ಕುಳಿತಿದ್ದರು. ಅವರು ಅಂದು ಯಾರನ್ನೆಲ್ಲ ಸಂಪರ್ಕಿಸಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ಕನಿಕಾ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಇದ್ದ ಎಲ್ಲರೂ ಸ್ವಯಂ ಪ್ರೇರಿತವಾಗಿ ಪ್ರತ್ಯೇಕವಾಗಿ ವಾಸಿಸುವಂತೆ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಸೂಚಿಸಿದೆ. ಸೋಂಕಿನ ಲಕ್ಷಣಗಳು ಕಂಡು ಬಂದರೆ ವರದಿ ಮಾಡುವಂತೆ ತಿಳಿಸಿದೆ.
https://www.instagram.com/p/B98tXqnFqE2/
ನಾನು ಲಂಡನ್‍ನಿಂದ ಬಂದಾಗ 10 ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ಕ್ಯಾನಿಂಗ್‍ಗೆ ಒಳಪಡಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ರೋಗದ ಗುಣ ಕಂಡು ಬಂದಿರಲಿಲ್ಲ. ಆದರೆ ನಾನು ಮನೆಗೆ ಬಂದ ನಂತರದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಜ್ವರ, ನೆಗಡಿಯ ಲಕ್ಷಣಗಳು ಕಾಣಿಸಿಕೊಂಡಿತು. ತಕ್ಷಣ ನಾನು ವೈದ್ಯರ ಬಳಿ ಬಂದು ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಿಮಗೂ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಾಣಿಸಿಕೊಂಡರೆ, ಪ್ರತ್ಯೇಕವಾಗಿ ಉಳಿದು ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಕನಿಕಾ ಕಪೂರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.