Tag: ಕಾರ್ಯಕ್ರಮಗಳು

  • ಹೊಳೆ ಆಂಜನೇಯಸ್ವಾಮಿ ದೇಗುಲದೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಪೇಜಾವರ ಶ್ರೀಗಳು

    ಹೊಳೆ ಆಂಜನೇಯಸ್ವಾಮಿ ದೇಗುಲದೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಪೇಜಾವರ ಶ್ರೀಗಳು

    ಮಂಡ್ಯ: ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಉಡುಪಿಯ ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವೇಶತೀರ್ಥ ಶ್ರೀಗಳಿಗೂ ಅವಿನಾಭಾವ ಸಂಬಂಧವಿದ್ದು, ಹಲವು ವರ್ಷಗಳಿಂದ ಹೊಳೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದರು.

    ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಹೊರ ವಲಯದಲ್ಲಿ ವ್ಯಾಸರಾಜರು ಮತ್ತು ಶ್ರೀಪಾದ ರಾಜರು ಪ್ರತಿಷ್ಠಾಪಿಸಿರುವ ಹೊಳೆ ಆಂಜನೇಯಸ್ಬಾಮಿ ದೇವಾಲಯವಿದೆ. ಈ ದೇಗುಲಕ್ಕೆ ಪೇಜಾವರ ಶ್ರೀಗಳು ಹಲವು ಬಾರಿ ಭೇಟಿ ನೀಡಿದ್ದರು. 2004ರಲ್ಲಿ ಶ್ರೀಗಳು ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ 2014 ದೇವಾಲಯದ ಸಮೀರ ರಥ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿ ಭಕ್ತರಿಗೆ ಆಶೀರ್ವದಿಸಿದ್ದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ

    2015ರಲ್ಲಿ ತುಲಾಭಾರ ಕಾರ್ಯಕ್ರಮದಲ್ಲಿ ಹಾಗೂ 2018ರಲ್ಲಿ ಸೋಂದೇ ಶ್ರೀಗಳ ಜೊತೆ ಹೊಳೆ ಆಂಜನೇಯಸ್ವಾಮಿ ದರ್ಶಕ್ಕೆ ಶ್ರೀಗಳು ಆಗಮಿಸಿದ್ದರು. ದೇವಾಲಯಕ್ಕೆ ಭೇಟಿ ನೀಡಿದ್ದಾಗಲೆಲ್ಲ ಸ್ವತಃ ತಾವೇ ಆಂಜನೇಯನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ಪೇಜಾವರಿ ಶ್ರೀಗಳು ಪೂಜೆ ಸಲ್ಲಿಸುತ್ತಿದ್ದರು. ಹೀಗಾಗಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಪೇಜಾವರ ಶ್ರೀಗಳಿಗೆ ಬೆಳ್ಳಿ ಸಿಂಹಾಸನ ಕೊಡಬೇಕೆಂದು ದೇವಾಲಯದ ಸಿಬ್ಬಂದಿ ನಿಶ್ಚಯಿಸಿದ್ದರು. ಆದರೆ ಈ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಶ್ರೀಗಳು ಎಲ್ಲರನ್ನು ಅಗಲಿ ಕೃಷ್ಣೈಕ್ಯರಾಗಿದ್ದಾರೆ.

  • ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಮೈಸೂರು: ವಿಶ್ವ ವಿಖ್ಯಾತ ದಸರಾದ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ಮಾಡಿದರು.

    ಬೆಳಗ್ಗೆ 10:15 ರಿಂದ 10:45 ರ ವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಸರಸ್ವತಿ ಪೂಜಾ ಪ್ರಧಾನವಾದ ಆಚರಣೆಯಾಗಿದೆ. ಇಂದು ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ, ಮಹಿಷಾಸುರನ ಸಂಹಾರ ನಡೆಯಲಿದೆ.

    ದಸರಾದ ಪ್ರಮುಖ ಅಕರ್ಷಣೆಯಾದ ಏರ್ ಶೋವನ್ನು ಸಚಿವ ಜಿಟಿ ದೇವೇಗೌಡ ಹಾಗೂ ಸಾರಾ ಮಹೇಶ್ ಉದ್ಘಾಟಿಸಿದರು. ನಗರದ ಬನ್ನಿ ಮಂಟಪದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.

    ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಲರವದಿಂದ ಕೂಡಿದ್ದು, ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜ ಮೂಡಿತು. ಆಗಸದಲ್ಲಿ ಯೋಧರಿಂದ ಸ್ಕೈ ಡೈವಿಂಗ್, ಸರ್ಜಿಕಲ್ ಆಪರೇಷನ್ ಸೇರಿದಂತೆ ನಾನಾ ಸಾಹಸ ಪ್ರದರ್ಶನ ನಡೆಯಿತು. ಬಾನೆತ್ತರದ ಸ್ಕೈಡೈವಿಂಗ್ ನೆರೆದಿದ್ದ ಪ್ರವಾಸಿಗರ ಮೈ ನವಿರೇಳಿಸಿತು. ಹೆಲಿಕಾಪ್ಟರ್ ನಿಂದ 115 ಅಡಿ ಎತ್ತರದಿಂದ ಯೋಧರು ಪುಷ್ಪಾರ್ಚನೆ ಮಾಡಿದರು.

    ಮೈಸೂರಿನ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಾಕು ಪ್ರಾಣಿಗಳು ಪ್ರದರ್ಶನ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿತು. ಈ ಪ್ರದರ್ಶನದಲ್ಲಿ ಡಾಬರ್ ಮನ್, ಜರ್ಮನ್ ಶೆಫರ್ಡ್, ಮುದೋಳ, ಡ್ಯಾಷೆಂಡ್, ಲ್ಯಾಬ್ರಡಾರ್, ರಾರಯಟ್, ವ್ಹೀಲರ್, ಪಿಟ್‍ಬುಲ್, ಸೇಂಟ್ ಬರ್ನಾಟ್, ಸೈಬೀರಿಯನ್ ಹಸ್ಕಿ ಸೇರಿದಂತೆ 21 ಜಾತಿಯ ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಾಣಿ ಪ್ರೀಯರ ಮನಸ್ಸು ಗೆದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ 2018- ಎರಡನೇ ದಿನವೂ ರಂಗೇರಿದ ಹತ್ತು ಹಲವು ಕಾರ್ಯಕ್ರಮಗಳು

    ಮೈಸೂರು ದಸರಾ 2018- ಎರಡನೇ ದಿನವೂ ರಂಗೇರಿದ ಹತ್ತು ಹಲವು ಕಾರ್ಯಕ್ರಮಗಳು

    ಮೈಸೂರು: ಜಿಲ್ಲೆಯ ದಸರಾ ಮಹೋತ್ಸವಕ್ಕೆ ಇಂದು ಎರಡನೇ ದಿನವಾಗಿದ್ದು, ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

    ಎರಡನೇ ದಿನದ ಕಾರ್ಯಕ್ರಮಕ್ಕೆ ಪಾರಂಪರಿಕ ಉಡುಗೆಯಲ್ಲಿ ಸಚಿವ ಸಾ.ರಾ ಮಹೇಶ್ ಅವರಿಂದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದ್ದಾರೆ. ಬಾಲಕರಿಂದ ವೃದ್ಧರವರೆಗೆ ಪಾರಂಪರಿಕ ಉಡುಗೆ-ತೊಡುಗೆಯ ಮೂಲಕ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೈಸೂರಿನ ನಾಗರೀಕರು ಮೈಸೂರು ಪೇಟ, ಸಿಲ್ಕ್ ಪಂಚೆ, ಸೀರೆ ತೊಟ್ಟು ಮಿಂಚಿದ್ದಾರೆ.

    ಮೈಸೂರಿನ ಪುರಭವನದಿಂದ ನಡಿಗೆ ಪ್ರಾರಂಭವಾಗಿದ್ದು, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಲಾಗುತ್ತಿದೆ. ಕೆ.ಆರ್ ವೃತ್ತ, ಕೆ.ಆರ್.ಆಸ್ಪತ್ರೆ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳ ಮಾರ್ಗದಿಂದ ಪ್ರವಾಸಿಗರಿಗೆ ಮೈಸೂರಿನ ಪರಂಪರೆಯ ಬಗ್ಗೆ ಮಾಹಿತಿ ನೀಡುವ ಈ ನಡಿಗೆ ಕಾರ್ಯಕ್ರಮ ಮಾಡಲಾಗಿದೆ. ಇದನ್ನು ಓದಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳಾ ರಂಗೋಲಿ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ರಂಗೋಲಿ ಸ್ಪರ್ಧೆಗೆ ಸಚಿವೆ ಜಯಮಾಲಾ ಚಾಲನೆ ನೀಡಿದರು. ಚಾಲನೆ ಬಳಿಕ ಸಚಿವೆ ಜಯಮಾಲ ಮಾತನಾಡಿ ರಂಗೋಲಿ ದೇವರಿಗೆ ಪ್ರಿಯ, ರಂಗೋಲಿಯಲ್ಲೂ ದೇವರಿದ್ದಾನೆ. ಬ್ಯಾಡ್ ಎನರ್ಜಿ ಹೊರ ಹಾಕುವ ಶಕ್ತಿ ರಂಗೋಲಿಗೆ ಇದೆ. ದಸರಾ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳು ಭಾಗಿಯಾಗಿದ್ದಾರೆ. ನಾನು ರಂಗೋಲಿ ಬಿಡಿಸುತ್ತೇನೆ. ರಂಗೋಲಿ ಹಾಕೋದು ನನಗೆ ಇಷ್ಟ. ರಥಸಪ್ತಮಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ನಾನು ರಂಗೋಲಿ ಬಿಡಿಸ್ತೇನೆ. ಇಂದು ರಂಗೋಲಿಯಲ್ಲಿ ಯಾರು ಪ್ರಥಮ ಬಹುಮಾನ ಪಡೀತಾರೋ ಅನ್ನೋ ಕೂತೂಹಲ ಇದೆ ಅಂತ ಹೇಳಿ ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಕೋರಿದರು.

    ದಸರಾ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ನಾಯಕರ ಗೈರು ವಿಚಾರಕ್ಕೆ ಸಂಬಂಧಪಟ್ಟಂತೆ ದಸರಾ ಇನ್ನು 10 ದಿನ ಬಾಕಿ ಇದೆ. ಕೊನೆ ದಿನದವರೆಗೆ ಕಾಯಿರಿ ಉತ್ತರ ಕೊಡುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಚುನಾವಣೆ ಕೆಲಸ, ಮಂಡ್ಯ, ಚಾಮರಾಜನಗರದ ದಸರಾದಲ್ಲಿ ಭಾಗಿಯಾಗಿದ್ದರಿಂದ ಮೈಸೂರಿನಲ್ಲಿ ಭಾಗಿಯಾಗಿಲ್ಲ. ಈಗಷ್ಟೇ ದಸರಾ ಪ್ರಾರಂಭವಾಗಿದೆ. ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ದಸರಾ ನಡೆಸುತ್ತಿದ್ದೇವೆ. ಪುಟ್ಟರಂಗಶೆಟ್ಟಿ ಬೇಡಿಕೆಯನ್ನ ಈಡೇರಿಸಿದ್ದೇವೆ. ಪ್ರಮೋದಾ ದೇವಿ ಅವರನ್ನು ಆಹ್ವಾನ ಮಾಡಲು ಬಂದಿದ್ದರು ಎಂದು ಕಾಂಗ್ರೆಸ್ ನಾಯಕರ ಗೈರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿತ್ತು. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ನಿನ್ನೆ ಬೆಳಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv