Tag: ಕಾರ್ನಿ

  • ಕತ್ತಲು ತುಂಬಿದ್ದರೂ ಕುತೂಹಲಕ್ಕೆ ಕೊನೆಯಿಲ್ಲ!

    ಕತ್ತಲು ತುಂಬಿದ್ದರೂ ಕುತೂಹಲಕ್ಕೆ ಕೊನೆಯಿಲ್ಲ!

    ಕೆಲವೊಮ್ಮೆ ಭಾರೀ ಪ್ರಚಾರದ ಒಡ್ಡೋಲಗದಲ್ಲಿ ತೆರೆ ಕಾಣೋ ಚಿತ್ರಗಳು ನಿರಾಸೆಯನ್ನು ಹೊತ್ತು ತಂದಿರುತ್ತವೆ. ಹೇಳಿಕೊಳ್ಳುವಂಥಾ ಯಾವ ಪ್ರಚಾರವೂ ಇಲ್ಲದೆ ತಣ್ಣಗೆ ತೆರೆ ಕಾಣುವ ಚಿತ್ರಗಳು ಎಲ್ಲರನ್ನು ಆವರಿಸಿಕೊಂಡು ಏಕಾಏಕಿ ಸದ್ದು ಮಾಡುತ್ತವೆ. ಇಮದು ಬಿಡುಗಡೆಯಾಗಿರೋ `ಕಾರ್ನಿ’ ಚಿತ್ರ ನಿಸ್ಸಂದೇಹವಾಗಿ ಎರಡನೇ ಕೆಟಗರಿಗೆ ಸೇರೋ ಅರ್ಹತೆ ಹೊಂದಿದೆ!

    ದುನಿಯಾ ರಶ್ಮಿ ಬಹು ಕಾಲದ ನಂತರ ಈ ಚಿತ್ರದ ಮೂಲಕ ವಾಪಾಸಾಗಿದ್ದಾರೆ. ಈ ವಿಚಾರವಾಗಿಯೇ ಕಡೇ ಘಳಿಗೆಯಲ್ಲಿ ಗಮನ ಸೆಳೆದಿದ್ದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವಲ್ಲಿ ಯಶ ಕಂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂದ ಮೇಲೆ ಕುಂತಲ್ಲೇ ಅದುರುವಂಥಾ ಹಿನ್ನೆಲೆ ಸಂಗೀತ, ಪ್ರತೀ ಸೀನಿಗೂ ಬಿಲ್ಡಪ್ಪುಗಳು ಮಾಮೂಲಿ. ಈ ಚಿತ್ರವನ್ನು ನಿರ್ದೇಶಕ ವಿನೀ ಸಿದ್ಧ ಸೂತ್ರಗಳಾಚೆಗೆ ಕಟ್ಟಿ ಕೊಟ್ಟಿದ್ದಾರೆ. ತಣ್ಣಗಿನ ವಾತಾವರಣದಲ್ಲಿಯೇ ದೃಷ್ಯಗಳಿಂದಲೇ ಎಲ್ಲ ಭಾವಗಳನ್ನೂ ಹೊಮ್ಮಿಸಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಅವರು ಗೆದ್ದಿದ್ದಾರೆ.

    ಕಾದಂಬರಿಗಾರ್ತಿಯೊಬ್ಬಳ ಸುತ್ತಾ ಈ ಕಥೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಪ್ರಸಿದ್ಧ ಕಾದಂಬರಿಕಾರ್ತಿಯಾದ ಈ ಕೆ ಬರೆದು ಕಾದಂಬರಿಯ ಪಾತ್ರಗಳು ರಿಯಲ್ ಆಗಿಯೇ ಕಾಣೆಯಾಗುತ್ತಾ ಸಾಗುತ್ತಾರೆ. ಇಂಥಾ ರಿಯಲ್ ಕಾಣೆ ಪ್ರಸಂಗದ ಬೆಂಬಿದ್ದ ಪೊಲೀಸರು ಅತ್ತ ತನಿಖೆಗಿಳಿಯುವ ಸಂದರ್ಭದಲ್ಲಿಯೇ ಈ ಕಾದಂಬರಿಕಾರ್ತಿ ಎರನೇ ಆವೃತ್ತಿಯ ಕಾದಂಬರಿ ರಚನೆಗೆ ಚಿಕ್ಕಮಗಳೂರಿಗೆ ಧಾವಿಸುತ್ತಾಳೆ. ಅಲ್ಲಿಂದಾಚೆಗೆ ಇಡೀ ಚಿತ್ರದ ದಿಕ್ಕೇ ಬದಲಾಗುತ್ತೆ.

    ಹಾಗೆ ಚಿಕ್ಕ ಮಗಳೂರಿಗೆ ಬರೆಯಲು ಬಂದ ಕಾದಂಬರಿಕಾರ್ತಿಯ ಮೇಲೆ ಅನಾಮಿಕನ ಅಟ್ಯಾಕ್, ನಿಜವಾದ ಕಾಣೆ ಪ್ರಸಂಗಗಳಿಗೂ ಈಕೆಗೂ ಸಂಬಂಧವಿದೆಯಾ ಎಂಬ ನಿಗೂಢದೊಂದಿಗೆ ಇಡೀ ಕಥೆ ಕ್ಷಣ ಕ್ಷಣವೂ ಕುತೂಹಲ ಉಳಿಸಿಕೊಂಡು ಮುಂದುವರೆಯುತ್ತದೆ.

    ಇಡೀ ಚಿತ್ರದ ಬಹು ಭಾಗ ಕತ್ತಲಲ್ಲಿಯೇ ನಡೆಯುತ್ತದೆ. ಇದರಿಂದಾಗಿ ಕೆಲ ದೃಶ್ಯಗಳೂ ಮಾಸಲಾದಂತೆ, ಮಬ್ಬು ಮಬ್ಬು ಭಾವ ಪ್ರೇಕ್ಷಕರನ್ನು ಆವರಸಿಕೊಳ್ಳುತ್ತದೆಯಾದರೂ ಇದರ ಹೊಸ ಪ್ರಯೋಗಗಳು ಎಲ್ಲವನ್ನೂ ಮರೆಸಲು ಶಕ್ತವಾಗಿವೆ. ಅರಿಂದಂ ಗೋಸ್ವಾಮಿ ವಿಭಿನ್ನ ಪ್ರಯೋಗದ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿನಯ್ ಆಲೂರ್ ಸಂಕಲನದಲ್ಲಿಯೂ ನವೀನ ಪ್ರಯೋಗ ಮಾಡಿದ್ದಾರೆ.

    ಒಟ್ಟಾರೆಯಾಗಿ ಕಾರ್ನಿ ಚಿತ್ರ ಕುತೂಹಲದೊಂದಿಗೆ ಮನಸು ಗೆಲ್ಲುತ್ತೆ. ಬಹಳಷ್ಟು ಕಾಲದಿಂದ ಮತ್ತೆ ವಾಪಾಸಾಗಿರುವ ರಶ್ಮಿಯ ಪಾತ್ರ ಮತ್ತು ನಟನೆ ಇಷ್ಟವಾಗುವಂತೆದೆ. ಎಲ್ಲ ಪಾತ್ರಗಳಿಗೂ ಮಹತ್ವ ಇದೆ. ಅದನ್ನೆಲ್ಲ ಆಯಾ ಕಲಾವಿದರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರ್ನಿ ಚಿತ್ರದ ಮೂಲಕ ಅಚ್ಚರಿ ಹುಟ್ಟಿಸಲಿದ್ದಾರೆ ದುನಿಯಾ ರಶ್ಮಿ!

    ಕಾರ್ನಿ ಚಿತ್ರದ ಮೂಲಕ ಅಚ್ಚರಿ ಹುಟ್ಟಿಸಲಿದ್ದಾರೆ ದುನಿಯಾ ರಶ್ಮಿ!

    ಬೆಂಗಳೂರು: ದುನಿಯಾ ಚಿತ್ರದ ಸಾದಾ ಸೀದಾ ಹುಡುಗಿಯಾಗಿ ಚಿತ್ರರಂಗಕ್ಕೆ ಪರಿಚಯವಾದವರು ರಶ್ಮಿ. ಈ ಚಿತ್ರದ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದ್ದ ರಶ್ಮಿ ಆ ಬಳಿಕವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರಾಗಿದ್ದರು. ಆದರೆ ಅದ್ಯಾಕೋ ಸುದೀರ್ಘ ಅವಧಿಯಲ್ಲಿ ಚಿತ್ರರಂಗದಿಂದ ದೂರವೇ ಉಳಿದಿದ್ದ ರಶ್ಮಿ ಇದೀಗ ಕಾರ್ನಿ ಚಿತ್ರದ ಮೂಲಕ ಪಕ್ಕಾ ಡಿಫರೆಂಟ್ ಲುಕ್ಕಿನಲ್ಲಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ. ಈ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

    ಗೋವಿಂದರಾಜ್ ನಿರ್ಮಾಣದ ಕಾರ್ನಿ ಚಿತ್ರ ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಡಿದೆ. ವಿನೋದ್ ಕುಮಾರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕಾರ್ನಿ ಎಂಬ ಹೆಸರೇ ನಿಗೂಢವಾದುದೇನನ್ನೋ ಧ್ವನಿಸುವಂತಿದೆ. ದುರ್ಗಾ ಮಾತೆಯ ಕೈಲಿರುವ ದುಷ್ಟ ಸಂಹಾರ ಮಾಡೋ ಅಸ್ತ್ರಕ್ಕೆ ಕಾರ್ನಿ ಎಂಬ ಹೆಸರಿದೆ. ಈ ಪದ ಈ ಚಿತ್ರದ ಕಥೆಗೆ ಪಕ್ಕಾ ಸೂಟ್ ಆಗೋದರಿಂದ ಶೀರ್ಷಿಕೆಯಾಗಿಡಲಾಗಿದೆಯಂತೆ.

    ಇದುವರೆಗೂ ದುನಿಯಾ ರಶ್ಮಿ ಪಕ್ಕದ ಮನೆ ಹುಡುಗಿಯಂಥಾ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲವರು ಸಂಪೂರ್ಣ ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಚಿತ್ರ ತಂಡದ ಭರವಸೆ. ನಿರ್ದೇಶಕರು ಈ ಚಿತ್ರದಲ್ಲಿನ ಮುಖ್ಯ ಪಾತ್ರಕ್ಕೆ ಆರಂಭದಲ್ಲಿಯೇ ರಶ್ಮಿಯವರನ್ನು ಆಯ್ಕೆ ಮಾಡಿದ್ದರಂತೆ, ಈ ಪಾತ್ರದ ಬಗ್ಗೆ ತಿಳಿದುಕೊಂಡ ರಶ್ಮಿ ಕಷ್ಟಪಟ್ಟು ಸ್ಲಿಂ ಆಗಿ ಇಡೀ ಪಾತ್ರವನ್ನು ನಿರ್ವಹಿಸಿದ್ದಾರಂತೆ.

    ಕಾರ್ನಿ ಮಹಿಳಾ ಪ್ರಧಾನ ಚಿತ್ರ, ಹಾರರ್ ಚಿತ್ರ ಅಂತೆಲ್ಲ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಇದು ಪಕ್ಕಾ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಖಂಡಿತಾ ಇದು ಹಾರರ್ ವೆರೈಟಿಯ ಚಿತ್ರವಲ್ಲವಂತೆ. ಆದರೆ ಇಡೀ ಕಥೆ ಮಲೆನಾಡು ವಾತಾವರಣದ ಕಾಡೊಳಗೆ ನಡೆಯುತ್ತೆ. ಐವರು ಹುಡುಗೀರು ನಾಪತ್ತೆಯಾಗಿ ಅದರ ಸುತ್ತಾ ಬಿಚ್ಚಿಕೊಳ್ಳೋ ರೋಚಕ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv