Tag: ಕಾರ್ತಿಕ ಮಾಸ

  • ಕಾರ್ತಿಕ ದೀಪೋತ್ಸವಂದು ದೀಪ ಬೆಳಗುವುದು ಯಾಕೆ? ಮಹತ್ವ ಏನು?

    ಕಾರ್ತಿಕ ದೀಪೋತ್ಸವಂದು ದೀಪ ಬೆಳಗುವುದು ಯಾಕೆ? ಮಹತ್ವ ಏನು?

    ದೇವಸ್ಥಾನಗಳಲ್ಲಿ (Temple) ದೀಪ ಬೆಳಗುವ ಕಾರ್ತಿಕ ಮಾಸ ನವೆಂಬರ್‌ 14 ರಿಂದ ಆರಂಭವಾಗಿದೆ. ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ (Karthika Masa) ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ (Karthika Deepotsava) ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

    ಕಾರ್ತಿಕ ನಕ್ಷತ್ರ ನವೆಂಬರ್‌/ಡಿಸೆಂಬರ್‌ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರಕ್ಕೆ ಬರುತ್ತದೆ. ಈ ಕಾರಣಕ್ಕೆ ಹಿಂದೂ ಪಂಚಾಂಗದ ಎಂಟನೇ ತಿಂಗಳಿಗೆ ಕಾರ್ತಿಕ ಮಾಸ ಎಂದು ಕರೆಯಲಾಗುತ್ತದೆ. ಪರಿಣಾಮವಾಗಿ ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಾನೆ. ಅದು ನೋಡುಗರಿಗೂ ಸುಂದರ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ಪ್ರತಿ ಮಾಸಕ್ಕೆ ಒಬೊಬ್ಬ ದೇವರು ಇರುವಂತೆ ಕಾರ್ತಿಕ ಮಾಸದ ಅಧಿಪತಿ ಶಿವ. ಈ ಮಾಸದಲ್ಲಿ ಶಿವನಿಗೆ (Shiva) ದೀಪೋತ್ಸವ ನಡೆಯುವಂತೆ ವಿಷ್ಣುವಿಗೆ ತುಳಸಿ ಜೊತೆ ಕಲ್ಯಾಣವೂ ನಡೆಯುತ್ತದೆ. ಈ ಕಾರಣಕ್ಕೆ ಶಿವ ಸೇರಿದಂತೆ ವಿವಿಧ ದೇವರ ಪೂಜೆ ಮಾಡುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.  ಇದನ್ನೂ ಓದಿ: ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?

    ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ೦ದು ಮಹಾವಿಷ್ಣುವು ಶಯನವನ್ನು ಪ್ರಾರ೦ಭಿಸುತ್ತಾನೆ. ನ೦ತರ ಕಾರ್ತಿಕ ಮಾಸದ ಏಕಾದಶಿಯ೦ದು ನಿದ್ದೆಯಿ೦ದ ಏಳುತ್ತಾನೆ. ಈ ದಿನವನ್ನು ʼಪ್ರಬೋಧಿನಿ ಏಕಾದಶಿʼ ಎಂದು ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ವಿಷ್ಣುವು ನಿದ್ರೆಯಿಂದ ಎಚ್ಚರಗೊಂಡು ಇಡೀ ಸೃಷ್ಟಿಯ ಮೇಲೆ ಸಂತೋಷ ಮತ್ತು ಅನುಗ್ರಹವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ. ಇದರೊಂದಿಗೆ ಲಕ್ಷ್ಮಿ ಕೂಡ ಈ ತಿಂಗಳು ಭೂಮಿಗೆ ಭೇಟಿ ನೀಡುತ್ತಾಳೆ. ಈ ಮಾಸದಲ್ಲಿ ಕೈಗೊಳ್ಳುವ ವ್ರತ, ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಶ್ರೇಷ್ಠತೆಯಿಂದ ಕೂಡಿದ್ದು ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ನಿಯಮ ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿದಿನ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿದರೆ ಶುಭ. ಕಾರ್ತಿಕ ಮಾಸದಲ್ಲಿ ಜ್ಯೋತಿ ಬೆಳಗುವ ಮೂಲಕ ಮನಸ್ಸಿನಲ್ಲಿರುವ ಅಂಧಕಾರವನ್ನು ದೂರ ಮಾಡಿಕೊಳ್ಳಬಹುದು. ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

    ದೇವತೆಗಳನ್ನು ಗೆದ್ದು ಪೀಡಿಸುತ್ತಿದ್ದ ತ್ರಿಪುರಾಸುರನನ್ನು ಶಿವನು ಸ೦ಹರಿಸಿ ತ್ರಿಪುರಾರಿ ಎಂದು ಕರೆಸಿಕೊಂಡ ದಿನ. ಶಿವನು ಒಂದು ಬಾಣದಿಂದ ತ್ರಿಪುರಾಸುರನನ್ನು ಸಂಹಾರ ಮಾಡಿದಾಗ ದೇವತೆಗಳು ದೀಪೋತ್ಸವ ಮಾಡಿದ್ದರು ಎಂದು ಪುರಾಣ ಕಥೆ ಹೇಳುತ್ತದೆ. ಕಾರ್ತಿಕ ಮಾಸದಲ್ಲಿ ಭೂಮಿಯ ನೀರಿಗೆ ವಿಶೇಷ ಅಯಸ್ಕಾ೦ತೀಯ ಶಕ್ತಿಯು ಬರುತ್ತದೆ. ಪ್ರಾತಃಕಾಲದಲ್ಲಿ ನದಿ, ಸಮುದ್ರ, ತೀರ್ಥ ಸ್ನಾನ ಮಾಡುವುದರಿ೦ದ ಹಲವಾರು ಕಾಯಿಲೆಗಳು ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.

     

  • ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್ಲ: ಡಿಸಿ

    ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್ಲ: ಡಿಸಿ

    ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶೀ ಕ್ಷೇತ್ರವೆಂದೇ ಪ್ರತೀತಿಯಾಗಿರೋ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇಗುಲ ಹಾಗೂ ಆವರಣದಲ್ಲಿ ಈ ಬಾರಿ ದೀಪ ಹಚ್ಚುವಂತಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

    ನಾಳೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀಭೋಗನಂದೀಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಸೋಮವಾರದ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಭೀತಿ ಆತಂಕದಿಂದ ಜಿಲ್ಲಾಡಳಿತ ಕೆಲ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ನಾಳೆ ಬೆಳಗ್ಗೆ 5 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಒಂದು ಬಾರಿಗೆ ದೇವಾಲಯದೊಳಗೆ ಕೇವಲ 300 ಮಂದಿಗಷ್ಟೇ ಪ್ರವೇಶಕ್ಕೆ ಅನುಮತಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರು ದೇವರ ದರ್ಶನ ಪಡೆಯಬೇಕಿದ್ದು, ಮಾಸ್ಕ್ ಹಾಕಿದರೆ ಮಾತ್ರ ದೇವಾಲಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.

    ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪ್ರವೇಶ ಕಲ್ಪಿಸಲಾಗುವುದು. ಮತ್ತೊಂದೆಡೆ ಪ್ರತಿ ವರ್ಷ ಕಾರ್ತಿಕ ಸೋಮವಾರದಂದು ದೇವಾಲಯಕ್ಕೆ ಬರುವ ಭಕ್ತರು ದೇವಾಲಯದೊಳಗೆ ಹಾಗೂ ಕಳೆದ ವರ್ಷದಿಂದ ದೇವಾಲಯದ ಹೊರಭಾಗದಲ್ಲಿ ದೀಪ ಹಚ್ಚಿ ದೇವರಿಗೆ ಆರತಿ ಬೆಳಗಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಭಕ್ತರು ದೇವರ ದರ್ಶನ ಪಡೆಯಬಹುದು. ದೀಪದಾರತಿ ಮಾಡಲು ಅವಕಾಶವಿಲ್ಲ ಅಂತ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಭಕ್ತರನ್ನ ನಿಯಂತ್ರಿಸುವ ಸಲುವಾಗಿ ಬ್ಯಾರಿಕೇಡ್, ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುವುದಾಗಿ ಅಂತ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.