Tag: ಕಾರ್ತಿಕ ಪೂರ್ಣಮಿ

  • ಕಾಶಿ ವಿಶ್ವನಾಥನಿಗೆ ಮೋದಿ ಕಾರ್ತಿಕ ಪೂಜೆ – ಗಂಗಾ ತಟದಲ್ಲಿ ದೇವ ದೀಪಾವಳಿ ಸಂಭ್ರಮ

    ಕಾಶಿ ವಿಶ್ವನಾಥನಿಗೆ ಮೋದಿ ಕಾರ್ತಿಕ ಪೂಜೆ – ಗಂಗಾ ತಟದಲ್ಲಿ ದೇವ ದೀಪಾವಳಿ ಸಂಭ್ರಮ

    – ಯೋಗಿ ಆದಿತ್ಯನಾಥ್ ಜೊತೆ ದೀಪೋತ್ಸವಕ್ಕೆ ಚಾಲನೆ
    – ಹಲವು ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ವಾರಾಣಸಿಯ ರಾಜ್‍ಘಾಟ್‍ನಲ್ಲಿ ದೇವ ದೀಪಾವಳಿಯಲ್ಲಿ ಪಾಲ್ಗೊಂಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆ ಮೊದಲ ದೀಪವನ್ನು ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದ್ದಾರೆ.

    ಕಾರ್ತಿಕ ಪೌರ್ಣಮಿಯ ಅಂಗವಾಗಿ ದೀಪೋತ್ಸವ ಆಯೋಜಿಸಿದ್ದು, ಗಂಗಾ ಘಾಟ್ ಪ್ರದೇಶದಲ್ಲಿ ಸುಮಾರು 15 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪೋತ್ಸವದ ಅಂಗವಾಗಿ ಶಾಸ್ತ್ರೀಯ ನೃತ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

    ದೀಪಾವಳಿಯ ಬಳಿಕ ಕಾರ್ತಿಕ ಪೌರ್ಣಮಿಯನ್ನು ಆಚರಿಸಲಾಗುತ್ತದೆ. ನದಿಗಳ ದಡಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇತ್ತೀಚೆಗೆ ದೀಪಾವಳಿಯನ್ನು ಯೋಧರೊಂದಿಗೆ ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಕಾರ್ತಿಕ ಪೌರ್ಣಮಿಯನ್ನು ಉತ್ತರ ಪ್ರದೇಶದ ವಾರಾಣಸಿಯ ತಮ್ಮ ಸ್ವ ಕ್ಷೇತ್ರದಲ್ಲಿ ಆಚರಿಸುತ್ತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಾರತ ಸಾಧನೆಯ ಶಿಖರವನ್ನೇರಿದ ಸಮಯದಲ್ಲಿ ಪ್ರಧಾನಿ ಮೋದಿ ಕಾಶಿಗೆ ಆಗಮಿಸಿದ್ದಾರೆ. ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಮತ್ತೊಮ್ಮೆ ಪವಿತ್ರ ಸ್ಥಳಕ್ಕೆ ಆಗಮಿಸಿರುವ ಪ್ರಧಾನಿಯನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

    ದೇವ ದೀಪಾವಳಿ ಹಾಗೂ ಗುರು ನಾನಕ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದಾರೆ. ಪ್ರಯಾಗ್‍ರಾಜ್-ವಾರಾಣಸಿಯ ಸಂಪರ್ಕ ಕಲ್ಪಿಸುವ ಆರು ಪಥದ ರಾಷ್ಟ್ರೀಯ ಹೆದ್ದಾರಿ 19ನ್ನು ಉದ್ಘಾಟಿಸಿದರು. ಸುಮಾರು 73 ಕಿ.ಮೀ.ರಸ್ತೆಯನ್ನು ಆರು ಪಥಗಳಿಗೆ ಅಭಿವೃದ್ಧಿಪಡಿಸಲಾಗಿದ್ದು, ಇದರಿಂದಾಗಿ ಪ್ರಯಾಗ್‍ರಾಜ್ ಹಾಗೂ ವಾರಾಣಸಿ ನಡುವಿನ ಪ್ರಯಾಣ ಕೇವಲ 1 ಗಂಟೆಗೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಹೊಸ ಕೃಷಿ ಕಾನೂನು ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ. ಹೆಚ್ಚು ಆಯ್ಕೆಗಳು ಹಾಗೂ ಕಾನೂನಿನ ರಕ್ಷಣೆಯನ್ನು ನೀಡುತ್ತದೆ. ಮುಂಬರುವ ದಿನಗಳಲ್ಲಿ ಇದರ ಲಾಭವನ್ನು ಅನುಭವಿಸುತ್ತೀರಿ ಎಂದು ತಿಳಿಸಿದರು.