Tag: ಕಾರ್ಗಿಲ್ ವಿಜಯ್ ದಿವಸ್

  • ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

    ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

    ವಿಜಯಪುರ: ನಮ್ಮ ದೇಶಕ್ಕೆ ಪಾಕಿಸ್ತಾನಕ್ಕಿಂತ ಅಪಾಯ ಇರುವುದು ದೇಶದ ಬುದ್ಧಿಜೀವಿಗಳಿಂದ. ಅವರಿಂದ ದೇಶ ಹಾಳಾಗಿದ್ದು ನಾನು ಗೃಹ ಮಂತ್ರಿಯಾದರೆ ಅವರಿಗೆ ಗುಂಡು ಹಾರಿಸಿ ಅಂತಾ ಆದೇಶ ನೀಡುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟನೆ ನಂತರ ಮಾತನಾಡಿದ ಶಾಸಕರು, ಜಮ್ಮು ಮತ್ತು ಕಾಶ್ಮೀರ ಜನರು ನಮ್ಮ ದೇಶದ ಗಾಳಿ, ನೀರು, ಅನ್ನ ಸೇವಿಸುತ್ತಾರೆ. ನಾವು ಕಟ್ಟುವ ತೆರಿಗೆಯ ಹಣದಲ್ಲಿ ಹೆಚ್ಚಿನ ಪ್ರಮಾಣವನ್ನು ಅವರಿಗೆ ಖರ್ಚು ಮಾಡಲಾಗುತ್ತದೆ. ಆದರೆ ಬುದ್ಧಿಜೀವಿಗಳು ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ, ಸೈನಿಕರ ಮೇಲೆ ಕಲ್ಲು ಎಸೆಯುತ್ತಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ದೇಶ ವಿರೋಧಿ ಜಟುವಟಿಕೆ ಮಾಡುವವರ ಮೇಲೆ ಹಲ್ಲೆ ಮಾಡಿದಾಗ ಮಾನವ ಹಕ್ಕು ಸಮಿತಿ ಮಧ್ಯೆ ಪ್ರವೇಶಿಸಿ ಅವರನ್ನು ರಕ್ಷಿಸುತ್ತಾರೆ. ಹಾಗಾದರೆ ಸೈನಿಕರ ಮೇಲೆ ಆಗುವ ಷೋಷಣೆಯನ್ನು ತಡೆಯಲು ಯಾವುದೇ ಸಮಿತಿ ಮುಂದೆ ಬರುವುದಿಲ್ಲ. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇದ್ದಿದ್ದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ಜಾರಿ ಆಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಿಧಿಯನ್ನು ತೆಗೆದು ಹಾಕಲಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ಎಂದಿಗೂ ಗೆಲ್ಲುವುದಿಲ್ಲ ಎಂದು ನುಡಿದರು.

    ಯೋಧರು -60 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾವು 3 ಕಿ.ಮೀ. ಹೋಗುವುದಕ್ಕೆ ಪರದಾಡುತ್ತೇವೆ. ಇದು ನಮ್ಮ ದೇಶದ ದುರಂತವಾಗಿದೆ. ಇಸ್ರೇಲ್ ನಲ್ಲಿ ಹುಟ್ಟಿದ ಮಗುವು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇಂತಹ ವ್ಯವಸ್ಥೆ ನಮ್ಮ ದೇಶದಲ್ಲಿ ಬರಬೇಕು ಎಂದ ಶಾಸಕರು, ಪಾಕಿಸ್ತಾನ ಭೂಪಟದಲ್ಲಿ ಇಲ್ಲದಂತೆ ಮಾಡುವ ಶಕ್ತಿ ನಮ್ಮ ಸೈನ್ಯಕ್ಕಿದೆ. ಪಾಕಿಸ್ತಾನ ಸೈನಿಕರು ಏನೂ ಗೆಲ್ಲದೆ ಎದೆಯ ಮೇಲೆ ಮೆಡಲ್‍ಗಳನ್ನ ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ಸೈನಿಕರು ಸಾಯುವುದಕ್ಕೆ ಗಡಿಗೆ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸದೆ, ಭಾರತದ ಗಡಿಗೆ ಭೇಟಿ ನೀಡಿ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.

  • 800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    ಚಿಕ್ಕಮಗಳೂರು: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳು ಸುಮಾರು 800 ಅಡಿ ಉದ್ದದ ಧ್ವಜವನ್ನು ಹಿಡಿದು ನಗರದಾದ್ಯಂತ ಮೆರವಣಿಗೆ ನಡೆಸಿದ್ದಾರೆ.

    ಇಂದು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು 800 ಅಡಿ ಉದ್ದದ ಧ್ವಜವನ್ನ ಮೆರವಣಿಗೆ ಮಾಡಿದ್ದಾರೆ. ನಗರದ ಹನುಮಂತಪ್ಪ ವೃತ್ತದಿಂದ ಮೆರವಣೆಗೆ ಹೊರಟ ವಿದ್ಯಾರ್ಥಿಗಳು ಎಂ.ಜಿ.ರಸ್ತೆ ಹಾಗೂ ಐ.ಜಿ. ರಸ್ತೆ ಮೂಲಕ ಸಾಗಿ ಕುವೆಂಪು ಕಲಾಮಂದಿರದವರೆಗೂ ಮೆರವಣಿಗೆ ನಡೆಸಿದ್ದಾರೆ.

    ಮೆರವಣಿಗೆಯುದ್ದಕ್ಕೂ ಸೈನಿಕರ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಮೆರವಣಿಗೆಯ ಬಳಿಕ ಕುವೆಂಪು ಕಲಾಮಂದಿರದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಮಾಡಿದ್ದಾರೆ. ಸಮಾರಂಭದಲ್ಲಿ ಸೈನಿಕರು ತಮ್ಮ ವೃತ್ತಿ ಜೀವನದ ರೋಚಕ ಮಾಹಿತಿಗಳನ್ನು ವಿದ್ಯಾರ್ಥಿಗಳ ಬಳಿ ಹಂಚಿಕೊಂಡಿದ್ದಾರೆ.

  • 19ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    19ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    ಬೆಂಗಳೂರು: ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾರತೀಯರು ಗೌರವ ಸಲ್ಲಿಸುತ್ತಿದ್ದಾರೆ.

    ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ `ಕಾರ್ಗಿಲ್ ವಿಜಯ್ ದಿವಸ್’ ಆಚರಣೆಮಾಡಲಾಗುತ್ತಿದೆ.

    ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

    ಭಾರತ ಸರ್ಕಾರ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ, ಧೈರ್ಯ ಮತ್ತು ಸಾಹಸಗಳಿಂದ `ಆಪರೇಷನ್ ವಿಜಯ್’ಗೆ ಯಶಸ್ವಿಗೊಳಿಸಿದ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ನಯಿಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮತ್ತು ವಿಕ್ರಮ್ ಬಾತ್ರಾರವರಿಗೆ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ಪುರಸ್ಕಾರವನ್ನು ನೀಡಿ ಗೌರವಿಸಿತ್ತು.

    ಏನಿದು ಕಾರ್ಗಿಲ್ ವಿಜಯ್ ದಿವಸ್?
    1999ರ ಮೇ ಮತ್ತು ಜುಲೈನ 2 ತಿಂಗಳುಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು.

    ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ `ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಸೈನಿಕರು ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡಿಕೊಳ್ಳುತ್ತಾ ಸೇನೆ ಬರುತ್ತಿದೆ.

    ಇಂದು ಜಮ್ಮು-ಕಾಶ್ಮೀರದ ದ್ರಾಸ್‍ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕದಲ್ಲಿ ಅಂದು ಭಾರತೀಯ ಸೈನಿಕರು ಯುದ್ಧಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.