Tag: ಕಾರುಗಳು

  • ಬಹುಮಹಡಿ ಕಟ್ಟಡದ ಪಾರ್ಕಿಂಗ್‌ ಸ್ಥಳದಲ್ಲಿ ಹೊತ್ತಿ ಉರಿದ ಬೆಂಕಿ – 21 ಕಾರುಗಳು ಭಸ್ಮ

    ಬಹುಮಹಡಿ ಕಟ್ಟಡದ ಪಾರ್ಕಿಂಗ್‌ ಸ್ಥಳದಲ್ಲಿ ಹೊತ್ತಿ ಉರಿದ ಬೆಂಕಿ – 21 ಕಾರುಗಳು ಭಸ್ಮ

    ನವದೆಹಲಿ: ಬಹುಮಹಡಿ ಕಟ್ಟಡವೊಂದರಲ್ಲಿ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, 21 ಕಾರುಗಳು (Cars) ಸುಟ್ಟು ಭಸ್ಮವಾಗಿರುವ ಘಟನೆ ಪಶ್ಚಿಮ ದೆಹಲಿಯ ಸುಭಾಷ್ ನಗರದಲ್ಲಿ ನಡೆದಿದೆ.

    ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ದುರ್ಘಟನೆಗೆ ಕಾರಣ ತಿಳಿಯಲು ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕನ ಬಂಗಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

    ಮುಂಜಾನೆ 4 ಗಂಟೆ ಸುಮಾರಿಗೆ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಬೆಳಗ್ಗೆ 6:10ರ ವೇಳೆಗೆ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯಲ್ಲಿ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ, ವ್ಯಕ್ತಿಯೊಬ್ಬ ಘಟನೆಗೂ ಮುನ್ನ ಪಾರ್ಕಿಂಗ್‌ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 26ನೇ ವಯಸ್ಸಿಗೆ 13 ಜಿಲ್ಲೆಗಳಲ್ಲಿ 21 ಮದುವೆ ಮಾಡಿಕೊಂಡ ರಣಧೀರನಿಗೆ ಕಂಟಕ!

    Live Tv
    [brid partner=56869869 player=32851 video=960834 autoplay=true]

  • ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ

    ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ

    ಚಿಕ್ಕಬಳ್ಳಾಪುರ: ಟೋಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕರ್ನಾಟಕ ಆಂಧ್ರ ಗಡಿಭಾಗದ ಬಾಗೇಪಲ್ಲಿ ಟೋಲ್ ಪ್ಲಾಜಾದಲ್ಲಿ ಅಪಘಾತ ನಡೆದಿದೆ. ಬೆಂಗಳೂರು ಕಡೆಯಿಂದ ಬಂದ ಸ್ಕಾರ್ಪಿಯೋ ಕಾರು, ಸರದಿ ಸಾಲಿನಲ್ಲಿದ್ದ ಸ್ವಿಫ್ಟ್ ಡಿಜೈರ್ ಹಾಗೂ ಹುಂಡೈ ವೆನ್ಯೂ ಕಾರಿಗೆ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ನಂತರ ಸ್ಕಾರ್ಪಿಯೋ ಕಾರು ಪಲ್ಟಿಯಾಗಿದೆ.

    ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂರು ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಹಾಗೆ ಸ್ಕಾರ್ಪಿಯೋ ಕಾರು ಚಾಲಕ ವೈಭವ್ ಕುಮಾರ್ ಕಾರು ಚಲಾಯಿಸುತ್ತಿದ್ದು, ಕಾರಿನಲ್ಲಿ ಬೆಂಗಳೂರಿನ ಪದ್ಮನಾಭನಗರದ ನಿವಾಸಿಗಳಾದ ಚಂದ್ರಕಲಾ ಹಾಗೂ ನಾಗ ಇದ್ದರು.

    ಕಾರಿನಲ್ಲಿ ಕದಿರಿಗೆ ಪ್ರಯಾಣ ಮಾಡುತ್ತಿದ್ದರು. ಸಿನಿಮಾ ಸ್ಟೈಲ್‍ನಲಿ ಸ್ಕಾರ್ಪಿಯೋ ಕಾರು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸದ್ಯ ಬಾಗೇಪಲ್ಲಿ ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

  • ಈಗ ಕೊರೊನಾದಿಂದ ನಷ್ಟವಾದ್ರೂ ಮುಂದೆ ದೇಶದ ಅಟೋಮೊಬೈಲ್ ಕಂಪನಿಗಳಿಗೆ ಲಾಭ

    ಈಗ ಕೊರೊನಾದಿಂದ ನಷ್ಟವಾದ್ರೂ ಮುಂದೆ ದೇಶದ ಅಟೋಮೊಬೈಲ್ ಕಂಪನಿಗಳಿಗೆ ಲಾಭ

    ನವದೆಹಲಿ: ಕೋವಿಡ್ 19 ನಿಂದಾಗಿ ವಿಶ್ವಾದ್ಯಂತ ಸಮಸ್ಯೆಗಳು ಸೃಷ್ಟಿಯಾಗಿವೆ. ಅಟೋಮೊಬೈಲ್ ಕಂಪನಿಗಳಿಗೆ ಕಾರುಗಳು ಮಾರಾಟವಾಗದ ಕಾರಣ ಬಹಳ ನಷ್ಟ ಅನುಭವಿಸಿದೆ. ಆದರೆ ಈಗ ಅಟೋ ವಲಯ ನಷ್ಟ ಅನುಭವಿಸಿದ್ರೂ ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಸಿಗುವ ಲಕ್ಷಣ ಕಾಣಿಸಲಾರಂಭಿಸಿದೆ.

    ಹೌದು. ಕೋವಿಡ್ 19 ತಡೆಗಟ್ಟಲು ಸದ್ಯಕ್ಕೆ ಸಾಮಾಜಿಕ ಅಂತರವೇ ‘ಔಷಧಿ’ ಯಾಗಿದೆ. ಲಾಕ್‍ಡೌನ್ ತೆರವಾಗಿ ಸಾರ್ವಜನಿಕ ಸಾರಿಗೆ ಆರಂಭಗೊಂಡರೂ ಜನ ಈ ಸೇವೆ ಬಳಸಲು ಹಿಂದೇಟು ಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಂತ ವಾಹನ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

    ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಿದರೆ ರಿಸ್ಕ್ ಜಾಸ್ತಿ. ಹೀಗಾಗಿ ಪ್ರಯಾಣಕ್ಕೆ ವಾಹನವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕಾರುಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.

    ಮಾರಾಟವಾಗುವ ಕಾರುಗಳ ಪೈಕಿ ಕಡಿಮೆ ಬೆಲೆಯ ಕಾರುಗಳಿಗೆ ಹೆಚ್ಚಿನ ಬೇಡಿಕೆ ಸಿಗುವ ನಿರೀಕ್ಷೆಯಿದೆ ಎಂದು ಮಾರುತಿ ಸುಜುಕಿ ಇಂಡಿಯಾ(ಎಂಎಸ್‍ಐ) ಹೇಳಿದೆ.

    ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವತ್ಸವ್ ಪ್ರತಿಕ್ರಿಯಿಸಿ, ನಾವು ನಡೆಸಿದ ಗ್ರಾಹಕರ ಸಮೀಕ್ಷೆಯಲ್ಲಿ ಜನರು ಸಾರ್ವಜನಿಕ ಸಾರಿಗೆಗಿಂತ ಹೆಚ್ಚು ವೈಯಕ್ತಿಕ ವಾಹನಗಳತ್ತ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಈ ಪೈಕಿ ಮೊದಲ ಬಾರಿಗೆ ಖರೀದಿ ಮಾಡುವ ಗ್ರಾಹಕರು ಸಣ್ಣ ಕಾರುಗಳತ್ತ ಒಲವು ತೋರಿಸಿದ್ದಾರೆ. 1,800 ಡೀಲರ್ ಶಿಪ್ ಗಳಿಂದಾಗಿ ನಮಗೆ ಈ ಟ್ರೆಂಡ್ ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಸ್ವಾಮೀಜಿ ಸೇರಿ ನಾಲ್ವರು ಸಾವು

    ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಸ್ವಾಮೀಜಿ ಸೇರಿ ನಾಲ್ವರು ಸಾವು

    ಧಾರವಾಡ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ವಾಮೀಜಿಯೊಬ್ಬರು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಧಾರವಾಡ ಹೊರವಲಯದ ಯರಿಕೊಪ್ಪ ಮನಸೂರ ಗ್ರಾಮ ಬೈಪಾಸ್ ಬಳಿ ಸಂಭವಿಸಿದೆ.

    ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ, ಕಾರು ಚಾಲಕ ಶಂಕರಗೌಡ ಪಾಟೀಲ ಹಾಗೂ ಎದುರಿನ ಕಾರಿನಲ್ಲಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಹಾದೇವ ಕಾಡೇಶಗೋಳ ಮತ್ತು ಮಾರುತಿ ಕುಕನೂರ ಇಬ್ಬರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಸ್ವಾಮೀಜಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್‍ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಸ್ವಾಮೀಜಿ ಕಾರಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ ಸೋಮರಾವ್ ದೇಸಾಯಿ ಹಾಗೂ ಸಿದ್ದಪ್ಪ ಇಂಗಳಹಳ್ಳಿ ಮತ್ತು ಬಸಪ್ಪ ಪೂಜಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆಯಷ್ಟೇ ಮಠದ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸ್ವಾಮೀಜಿ ಧಾರವಾಡದ ಭಕ್ತರೊಬ್ಬರ ಕುಟುಂಬದ ಮದುವೆ ಸಮಾರಂಭಕ್ಕೆ ಆಗಮಿಸುತ್ತಿದ್ದಾಗ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಸ್ವಾಮೀಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಪ್ರಮಾಣದ ಭಕ್ತರು ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದು ಕಣ್ಣೀರು ಹಾಕಿದರು.

    ಇದೇ ವೇಳೆ ಮಾಜಿ ಸಚಿವ ಎಂ.ಎಸ್. ಅಕ್ಕಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಂಬನಿ ಮಿಡಿದರು. ಸ್ವಾಮೀಜಿ ಕಳೆದುಕೊಂಡಿದ್ದು ತುಂಬಾ ದುಃಖವಾಗಿದ್ದು, ಈ ರಸ್ತೆಯಲ್ಲಿ ಹಲವು ಘಟನೆ ನಡೆದರೂ ರಸ್ತೆ ಅಗಲಿಕರಣ ನಡೆದಿಲ್ಲವೆಂದು ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಬೈಪಾಸ್ ನಂದಿ ಹೈವೆಯವರಾದ ಅಶೋಕ್ ಖೇಣಿಗೆ ಸಂಬಂಧಿಸಿದ್ದು, ಈ ಸಂಬಂಧ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಗಾಯಗೊಂಡವರನ್ನು ನೋಡಲು ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಗಾಂಧಿನಗರ: ಭಾನುವಾರ ಗುಜರಾತಿನ ಜುನಾಗಢದ ಮಲಂಕಾ ಗ್ರಾಮದಲ್ಲಿ ಭಾರೀ ಮಳೆಗೆ ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ವಾಹನಗಳು ಕುಸಿದ ಸೇತುವೆ ಮಧ್ಯೆ ಸಿಲುಕಿದ್ದು, ಅದರಲ್ಲಿದ್ದ ಪ್ರಾಯಾಣಿಕರು ಗಾಯಗೊಂಡಿದ್ದರು. ಈ ಮಧ್ಯೆ ಸೇತುವೆಯ ಕುಸಿದ ಭಾಗದಿಂದ ವಾಹನಗಳನ್ನು ಜನರು ಹೊರತಗೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಸೇತುವೆ ಮಧ್ಯ ಭಾಗ ಕುಸಿದು ಬಿದ್ದ ತಕ್ಷಣ ಅದರ ಮೇಲೆ ಸಂಚರಿಸುತ್ತಿದ್ದ ವಾಹನಗಳು ಸೇತುವೆ ಮಧ್ಯೆ ಸಿಲುಕಿಕೊಂಡಿದೆ. ಮಳೆಗೆ ಸೇತುವೆ ಬಿರುಕು ಬಿಟ್ಟುಕೊಂಡಿತ್ತು. ಆದರೆ ಯಾರು ಕೂಡ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಭಾನುವಾರ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ಅದು ಕುಸಿದು ಬಿದ್ದಿದೆ. ಈ ಘಟನೆ ನಡೆಯುತ್ತಿದ್ದಂತೆ ಸೇತುವೆ ಆಸು-ಪಾಸಿನಲ್ಲಿದ್ದ ಇತರೆ ವಾಹನ ಸವಾರರು ಹಾಗೂ ಸ್ಥಳೀಯರು ಸೇತುವೆ ಮಧ್ಯೆ ಸಿಲುಕಿದ್ದ ಜನರ ರಕ್ಷಣೆ ಮಾಡಿದರು.

    ಜೊತೆಗೆ ಸೇತುವೆ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರುಗಳನ್ನು ಹಗ್ಗ ಕಟ್ಟಿ ಎಳೆದು ಮೇಲಕ್ಕೆ ಎತ್ತಿದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸದ್ಯ ಗಾಯಗೊಂಡವರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸೇತುವೆ ಕುಸಿದ ಹಿನ್ನೆಲೆ ಜುನಾಗಢ ಹಾಗೂ ಮಂಡ್ರಾ ಪ್ರದೇಶದ ಸಂಚಾರ ಸ್ಥಗಿತಗೊಂಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಡಳಿತ, ಮಳೆಗೆ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು. ಹಾಗೆಯೇ ಹಲವು ಕಾರುಗಳು ಸೇತುವೆ ಮಧ್ಯೆ ಸಿಲುಕಿಕೊಂಡಿತ್ತು, ಸುಮಾರು 4 ಕಾರು ನದಿಗೆ ಬಿದ್ದಿದೆ ಎಂದು ತಿಳಿಸಿದರು.

    ಸೇತುವೆ ಸುತ್ತಮುತ್ತಲ ಪ್ರದೇಶದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು, ನಾವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಜೋರಾದ ಶಬ್ದ ಬಂತು. ಆಗ ನಾವು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ, ಸೇತುವೆ ಕುಸಿದು ಬಿದ್ದಿತ್ತು. ಕೆಲವು ಕಾರುಗಳು ಅದರಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ನಾವೆಲ್ಲಾ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರುಗಳಲ್ಲಿ ಇದ್ದ ಜನರನ್ನು ರಕ್ಷಣೆ ಮಾಡಿದೆವು. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಟ್ಟೆವು ಎಂದು ಹೇಳಿದರು.

  • ಕಾರುಗಳ ಮೇಲೆ ಚೌಕಿದಾರ್ ಸ್ಟಿಕ್ಕರ್- ಉಡುಪಿಯಲ್ಲಿ ಜೋರಾಗಿದೆ ಎಲೆಕ್ಷನ್ ವಾರ್

    ಕಾರುಗಳ ಮೇಲೆ ಚೌಕಿದಾರ್ ಸ್ಟಿಕ್ಕರ್- ಉಡುಪಿಯಲ್ಲಿ ಜೋರಾಗಿದೆ ಎಲೆಕ್ಷನ್ ವಾರ್

    ಉಡುಪಿ: ಲೋಕಸಭಾ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಣ ರಂಗೇರುತ್ತಿದೆ. ಪ್ರಚಾರದ ಅಬ್ಬರ ಜಾಸ್ತಿಯಾಗುತ್ತಿದ್ದಂತೆ ಕಾರ್ಯಕರ್ತರ ನಡುವೆ ಸ್ಟಿಕ್ಕರ್ ವಾರ್ ಶುರುವಾಗಿದೆ.

    ರಾಜ್ಯದಲ್ಲಿ ಬಿಜೆಪಿ “ಮೆ ಬೀ ಚೌಕಿದಾರ್” ಅಂದರೆ, ಮೈತ್ರಿ ಪಕ್ಷಗಳು “ಚೌಕಿದಾರ್ ಚೋರ್ ಹೇ” (ಕಾವಲುಗಾರ ಕಳ್ಳ) ಅಂತ ಪ್ರಚಾರ ಶುರು ಮಾಡಿದೆ. ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಾನು ದೇಶದ ಚೌಕಿದಾರ, ದೇಶದಲ್ಲಿ ಭ್ರಷ್ಟಾಚಾರ ನಡೆಯದಂತೆ ಹಾಗೂ ಶತ್ರುರಾಷ್ಟ್ರಗಳಿಂದ ದೇಶವನ್ನು ಕಾವಲುಗಾರನಂತೆ ರಕ್ಷಣೆ ಮಾಡುತ್ತೇನೆ ಎಂದಿದ್ದರು. ಅಂದಿನಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕಿದಾರ್ ಶಬ್ದವನ್ನು ಫೋಕಸ್ ಮಾಡಿ ಮೋದಿ ವಿರುದ್ಧ ಪ್ರಚಾರಕ್ಕೆ ಹೋದಲ್ಲಿ ಬಂದಲ್ಲಿ “ಚೌಕಿದಾರ್ ಚೋರ್ ಹೇ” ಎಂದಿದ್ದರು. ಅಲ್ಲದೆ ರಫೇಲ್, ನೀರವ್ ಮೋದಿ ಬ್ಯಾಂಕ್ ಗೋಲ್ ಮಾಲ್, ಅದಾನಿ ಅಂಬಾನಿ ವಿಚಾರದ ಪ್ರತಿಭಟನೆಗಳಲ್ಲಿ ಚೌಕಿದಾರ್ ಚೋರ್ ಎಂಬ ಘೋಷವಾಕ್ಯ ಬಳಸಲಾಗಿತ್ತು.

    ಆದರೇ 2019 ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಮುಂದಾಗಿದೆ. ದೇಶಾದ್ಯಂತ “ಮೇ ಬಿ ಚೌಕಿದಾರ್” ಹೆಸರಲ್ಲೇ ಅಭಿಯಾನ ನಡೆಸುತ್ತಿದೆ. ಈ ನಡುವೆ ಉಡುಪಿಯಲ್ಲಿ ಬಿಜೆಪಿ ನಾಯಕರು “ಮೆ ಬೀ ಚೌಕಿದಾರ್” ಸ್ಟಿಕ್ಕರನ್ನು ಕಾರಿಗೆ ಅಂಟಿಸಿ ಪ್ರಚಾರ ಮಾಡುತ್ತಿದ್ದರು. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಾಹನಗಳಲ್ಲಿ ಚೌಕಿದಾರ್ ಸ್ಟಿಕ್ಕರ್ ಹಾಕಿ ಓಡಾತ್ತಿರುವುದನ್ನು ನೋಡಿದ ಮೈತ್ರಿ ಕಾರ್ಯಕರ್ತರು ಈ ಕ್ಯಾಂಪೇನ್‍ಗೆ ಟಾಂಗ್ ನೀಡಲು ಮುಂದಾಗಿದೆ.

    “ಚೌಕಿದಾರ್ ಚೋರ್ ಹೇ” ಸ್ಟಿಕ್ಕರ್‍ಗಳನ್ನು ಕಾರಿಗೆ ಅಂಟಿಸಿ ಮೈತ್ರಿ ಪಕ್ಷದ ಕಾರ್ಯಕರ್ತರು ಓಡಾಡುತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಸ್ಟಿಕ್ಕರ್ ಮೂಲಕವೇ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. ಈ ಬಗ್ಗೆ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ, ಚೌಕಿದಾರ ಕೊಳ್ಳೆ ಹೊಡೆಯಲು ಬಿಡುತ್ತಿದ್ದಾನೆ. ರಫೇಲ್ ಡೀಲ್ ಮಾಡಿ ಅಂಬಾನಿಯ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಗುಳುಂ ಮಾಡಿದ್ದಾನೆ. ಬ್ಯಾಂಕ್ ಅವ್ಯವಹಾರ ನಡೆಯುತ್ತಿದ್ದರೂ ಕಾವಲುಗಾರ ಕಳ್ಳರನ್ನು ಹಿಡಿಯಲಿಲ್ಲ ಎಂದು ಆರೋಪಿಸಿದರು.

    ಚೌಕಿದಾರ್ ಚೋರ್ ಅಂದಿರುವ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಕಮಲ ಪಕ್ಷ ಗರಂ ಆಗಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ಜನ ಬೆಂಬಲ, ಬಿಜೆಪಿಯ ಅಬ್ಬರದ ಪ್ರಚಾರಕ್ಕೆ ಮೈತ್ರಿ ಪಕ್ಷ ನಲುಗಿದೆ. ನಮ್ಮ ಪ್ರಚಾರ ವಾಕ್ಯ, ಘೋಷ ವಾಕ್ಯದ ವಿರುದ್ಧ ಪ್ರಚಾರ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಇದನ್ನೆಲ್ಲ ಬಿಟ್ಟು ತೋರ್ಪಡಿಕೆಗಾದರೂ ಮೈತ್ರಿಯ ಬಗ್ಗೆ, ಪಕ್ಷದ ಚಿಹ್ನೆಯ ಬಗ್ಗೆ, ಅಭ್ಯರ್ಥಿಯ ಬಗ್ಗೆ ಪ್ರಚಾರ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

  • 70 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    70 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    ನವದೆಹಲಿ: ಭಾರತದ ಮೂಂಚೂಣಿ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಕಂಪೆನಿಯು ತನ್ನ ಕಾರುಗಳ ಮೇಲೆ 70 ಸಾವಿರ ರೂಪಾಯಿ ವರೆಗಿನ ವಿಶೇಷ ರಿಯಾಯಿತಿಯನ್ನು ಪ್ರಕಟಿಸಿದೆ.

    ಈ ವಿಶೇಷ ಆಫರ್ ಕೇವಲ ಸೆಪ್ಟೆಂಬರ್ ತಿಂಗಳಲ್ಲಿ ಕಾರು ಖರೀದಿ ಮಾಡುವ ಗ್ರಾಹಕರಿಗೆ ಮಾತ್ರ ಸಿಗಲಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ ಹಾಗೂ ಎಕ್ಸ್‌ಚೇಂಜ್ ಡಿಸ್ಕೌಂಟ್‍ಗಳು ಸೇರಿ ಒಟ್ಟು 70 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಗ್ರಾಹಕರಿಗೆ ಕಂಪೆನಿ ನೀಡಿದೆ. ತನ್ನ ನೂತನ ಮಾದರಿಗಳಾದ ಸ್ವಿಫ್ಟ್, ಎರ್ಟಿಗಾ, ಡಿಜೈರ್, ಸೆಲಿರಿಯೋ, ಆಲ್ಟೊ ಹಾಗೂ ಆಲ್ಟೊ ಕೆ 10 ಕಾರುಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ. ಗ್ರಾಹಕರು ಯಾವುದೇ 7 ವರ್ಷದ ಒಳಗಿನ ಕಾರುಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

    ಯಾವೆಲ್ಲಾ ಕಾರುಗಳಿಗೆ ಎಷ್ಟೆಷ್ಟು ರಿಯಾಯಿತಿ?
    1. ಎರ್ಟಿಗಾ:

    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಎರ್ಟಿಗಾ ಪೆಟ್ರೋಲ್ ಮಾದರಿಗೆ 15,000 ರೂಪಾಯಿ, ಡೀಸೆಲ್ ಮಾದರಿಗೆ 20,000 ರೂಪಾಯಿ ಹಾಗೂ ಸಿಎನ್‍ಜಿ ಮಾದರಿಗೆ 10,000 ರೂಪಾಯಿಯನ್ನು ನೀಡಿದೆ. ಎಕ್ಸ್‌ಚೇಂಜ್ ಡಿಸ್ಕೌಂಟ್‍ನಲ್ಲಿ ಪೆಟ್ರೋಲ್ ಹಾಗೂ ಸಿಎನ್‍ಜಿ ಮಾದರಿಗೆ 20,000 ದಿಂದ 30,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 25,000 ದಿಂದ 35,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ.

    2. ಡಿಜೈರ್:

    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಡಿಜೈರ್ ಪೆಟ್ರೋಲ್ ನ ಸಾಮಾನ್ಯ ಮಾದರಿಗೆ 20,000 ಹಾಗೂ ವಿಶೇಷ ಮಾದರಿಗೆ 27,000 ರೂಪಾಯಿ ರಿಯಾಯಿತಿ ನೀಡಿದ್ದರೆ, ಡೀಸೆಲ್ ಮಾದರಿಗೆ 10,000 ರೂಪಾಯಿಗಳು. ಎಕ್ಸ್‌ಚೇಂಜ್ ಡಿಸ್ಕೌಂಟ್‍ಗಳಲ್ಲಿ ಪೆಟ್ರೋಲ್ ಮಾದರಿ ಮೇಲೆ 10,000 ದಿಂದ 20,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 10,000 ರೂಪಾಯಿ ರಿಯಾಯಿತಿ ನೀಡಿದೆ.

    3. ಸ್ವಿಫ್ಟ್:


    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಸ್ವಿಫ್ಟ್ ಪೆಟ್ರೋಲ್ ನ ಸಾಮಾನ್ಯ ಮಾದರಿಗೆ 20,000 ರೂಪಾಯಿ, ವಿಶೇಷ ಮಾದರಿಗೆ 27,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 10,000 ರೂಪಾಯಿ ನೀಡಿದೆ. ಎಕ್ಸ್‌ಚೇಂಜ್ ಡಿಸ್ಕೌಂಟ್‍ಗಳಲ್ಲಿ ಪೆಟ್ರೋಲ್ ಮಾದರಿ ಮೇಲೆ 10,000 ದಿಂದ 20,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 25,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ.

    4. ಸೆಲಿರಿಯೋ:


    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಸೆಲಿರಿಯೋದ ಎಂಟಿ (ಮ್ಯಾನುವಲ್ ಟ್ರಾನ್ಸ್‌ಮಿಷನ್) ಹಾಗೂ ಎಎಂಟಿ (ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಮಾದರಿ ಮೇಲೆ ಒಟ್ಟು 25,000 ದಿಂದ 30,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ. ಎಕ್ಸ್‌ಚೇಂಜ್ ಡಿಸ್ಕೌಂಟ್‍ನಲ್ಲಿ ಸೆಲಿರಿಯೋ ಎಂಟಿ ಮಾದರಿಗೆ 25,000 ರೂಪಾಯಿ ಹಾಗೂ ಎಎಂಟಿ ಮಾದರಿಗೆ 30,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ.

    5. ಆಲ್ಟೊ/ಆಲ್ಟೊ-ಕೆ10:


    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಆಲ್ಟೊ ಪೆಟ್ರೋಲ್ ಹಾಗೂ ಸಿಎನ್‍ಜಿ ಮಾದರಿಗೆ 25,000 ರೂಪಾಯಿ, ಆಲ್ಟೋ ಕೆ10 ಎಂಟಿಗೆ 22,000 ರೂಪಾಯಿ, ಎಎಂಟಿಗೆ 27,000 ಸಾವಿರ ರೂಪಾಯಿಗಳು. ಎಕ್ಸ್‌ಚೇಂಜ್ ಡಿಸ್ಕೌಂಟ್‍ನಲ್ಲಿ ಆಲ್ಟೋ ಹಾಗೂ ಆಲ್ಟೋ ಕೆ10 ನ ಎಲ್ಲಾ ಮಾದರಿಗಳ ಮೇಲೆ ಒಟ್ಟು 30,000 ರೂಪಾಯಿಯ ರಿಯಾಯಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv