Tag: ಕಾರವಾರ

  • ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

    ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಇಲ್ಲಿನ ಭಟ್ಕಳ ಪಟ್ಟಣದ ಸಾಗರ ರಸ್ತೆಯ ಕಿತ್ತರೆ ಬಸ್ ನಿಲ್ದಾಣದ ಬನೀ ಅಪಘಾತ ಸಂಭವಿಸಿದೆ. 18 ವರ್ಷದ ಸೈಫನ್ ಮೃತ ಯುವಕ. ಘಟನೆಯಲ್ಲಿ ಗಾಯಗೊಂಡವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಕಾರಿನಲ್ಲಿದ್ದವರು ಭಟ್ಕಳ ಪಟ್ಟಣದ ಮದೀನಾ ಕಾಲೋನಿ ನಿವಾಸಿಗಳಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಭಟ್ಕಳಕ್ಕೆ ಬರುವಾಗ ಅಪಘಾತ ನಡೆದಿದೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಅಕ್ರಮ ಮರಳು ಸಾಗಾಣಿಕೆ- ಪಿಎಸ್‍ಐ ಲಂಚ ಸ್ವೀಕರಿಸಿದ ವಿಡಿಯೋ ವೈರಲ್

    ಅಕ್ರಮ ಮರಳು ಸಾಗಾಣಿಕೆ- ಪಿಎಸ್‍ಐ ಲಂಚ ಸ್ವೀಕರಿಸಿದ ವಿಡಿಯೋ ವೈರಲ್

    ಕಾರವಾರ: ಅಕ್ರಮವಾಗಿ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಠಾಣೆಯ ಪಿಎಸ್‍ಐ ಲಂಚ ಸ್ವೀಕರಿಸಿ ಮತ್ತೆ ಬೇಡಿಕೆ ಇಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬನವಾಸಿ ಠಾಣಾ ಪಿಎಸ್‍ಐ ಸುರೇಖಾ ಬಾಡ್ಕರ್ ನಾಲ್ಕು ದಿನಗಳ ಹಿಂದೆ ಅಕ್ರಮ ಮರಳು ಸಾಗಿಸುತಿದ್ದ ಲಾರಿಯನ್ನು ಹಿಡಿದು ಲಾರಿ ಮಾಲೀಕನಿಂದ 10 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದರು. ಲಾರಿ ಮಾಲೀಕ 4 ಸಾವಿರ ಹಣ ನೀಡಿ ಉಳಿದ 6 ಸಾವಿರ ಹಣವನ್ನು ಠಾಣೆಯಲ್ಲಿ ನೀಡಿದ್ದಾನೆ.

    ಠಾಣೆಯಲ್ಲಿ ಲಂಚ ನೀಡುವಾಗ ತನ್ನ ಮೊಬೈಲ್‍ನಲ್ಲಿ ದೃಶ್ಯಾವಳಿಯನ್ನು ಸೆರೆ ಹಿಡಿದು ವಾಟ್ಸಪ್ ಮೂಲಕ ಹರಿಬಿಟ್ಟಿದ್ದಾನೆ. ಈಗ ಜಿಲ್ಲೆಯಾದ್ಯಾಂತ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=v8rNFVfckHk&feature=youtu.be

  • ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

    ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

    ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ ನಗರದ ಆಲಿಗದ್ದಾ ಕಡಲ ತೀರದ ಸಮುದ್ರದಲ್ಲಿ ಬಿದ್ದಿತ್ತು.

    ಸಮುದ್ರದಲ್ಲಿ ಸುಮಾರು ಒಂದು ಘಂಟೆಗಳ ಕಾಲ ಕಡವೆ ಈಜುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಿಯ ಮೀನುಗಾರರ ಸಹಾಯದಿಂದ ಕಡವೆಯನ್ನು ರಕ್ಷಿಸಿದ್ದಾರೆ.

    ಮೂರು ವರ್ಷದ ಪ್ರಾಯದ ಕಡವೆಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಅದನ್ನು ಮರಳಿ ಕಾಡಿಗೆ ಬಿಡಲಾಗಿದೆ.

    https://www.youtube.com/watch?v=2jYcc65S2uQ

     

     

  • ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಕಾರವಾರ: ರೈಲ್ವೇ ಎಂಜಿನ್ ನಲ್ಲಿ ಉಂಟಾದ ದೋಷದಿಂದಾಗಿ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದ ಸಮೀಪ ಮಾರ್ಗ ಮಧ್ಯದಲ್ಲೇ ಕೊಂಕಣ ರೈಲು ಕಟ್ಟು ನಿಂತ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

    ಇಂದು ಬೆಳಗ್ಗೆ 6 ಗಂಟೆಗೆ ಕಾರವಾರ ನಿಲ್ದಾಣದಿಂದ ಪೆರ್ಣಕ್ಕೆ ಪ್ಯಾಸೆಂಜರ್ ರೈಲು ತನ್ನ ಪ್ರಯಾಣವನ್ನು ಆರಂಭಿಸಿತ್ತು. ಮಾರ್ಗ ಮಧ್ಯೆ ಅಸ್ನೋಟಿ ಎಂಬಲ್ಲಿ ಎಂಜಿನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ತನ್ನ ಪ್ರಯಾಣವನ್ನು ನಿಲ್ಲಿಸಿತು.

    ಈ ರೈಲು ಪ್ರತಿದಿನ ಕಾರವಾರದಿಂದ ಗೋವಾ ರಾಜ್ಯದ ಪೆರ್ಣಕ್ಕೆ ಸಂಚರಿಸುತ್ತದೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರತಿದಿನ ಸುಮಾರು 600 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಎಂಜಿನ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಈ ಸಂಬಂಧ ಪ್ರಯಾಣಿಕರು ರೈಲ್ವೆ ಇಲಾಖೆಗೆ ದೂರು ನೀಡಿದ್ರೂ ಇಲಾಖೆ ಮಾತ್ರ ಯಾವುದೇ ಕ್ರಮ ಜರುಗಿಸಿರಲಿಲ್ಲ.

    ಇದರಿಂದ ಕೋಪಗೊಂಡ ಜನರು ಕೆಟ್ಟು ನಿಂತಿದ್ದ ರೈಲಿನ ಮುಂದೆ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು ಬದಲಿ ವ್ಯವಸ್ಥೆ ಮಾಡಿದ್ದ ರೈಲನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

     

  • ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ: ವಿಡಿಯೋ ನೋಡಿ

    ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ: ವಿಡಿಯೋ ನೋಡಿ

    ಕಾರವಾರ: ನೀರಿಗಾಗಿ ಹಾಹಾಕಾರ ಕೇವಲ ಜನರಿಗೆ ಮಾತ್ರವಲ್ಲ ಕಾಡಿನಲ್ಲಿರುವ ಉರಗಗಳು ಇದಕ್ಕೆ ಹೊರತಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನೀರನ್ನು ಅರಸಿ ನಾಡಿಗೆ ಹಾವುಗಳು ಲಗ್ಗೆ ಇಡುತ್ತಿದೆ.

    ಇಂದು ನೀರನ್ನು ಅರಸಿ ಕಾಡಿನಿಂದ 12 ಅಡಿ ಉದ್ದದ ಕಾಳಿಂಗ ಸರ್ಪ ವೊಂದು ಕಾರವಾರ ತಾಲೂಕಿನ ಕೈಗಾ ಟೌನ್ ಷಿಪ್ ಗೆ ಬಂದಿದ್ದು ಜನರಲ್ಲಿ ಆತಂಕ ಮೂಡಿಸಿತ್ತು. ಈ ಕಾಳಿಂಗ ಸರ್ಪ ವನ್ನು ಉರಗ ತಜ್ಞರಾದ ರಾಘವೇಂದ್ರ ಹಾಗೂ ಅರಣ್ಯಾಧಿಕಾರಿ ಸಿ.ಎನ್ ನಾಯ್ಕ ರವರು ರಕ್ಷಿಸಿ ಬಾಯಾರಿದ ಕಾಳಿಂಗಕ್ಕೆ ನೀರನ್ನು ಕುಡಿಸಿ ಅಣಶಿ ಅಭಯಾರಣ್ಯಕ್ಕೆ ಬಿಟ್ಟರು.

    ಕರಾವಳಿಯ ಸುತ್ತಮುತ್ತ ಅರಣ್ಯ ಭಾಗದಲ್ಲಿ ನೀರಿನ ಕೊರತೆ ಹೆಚ್ಚಾಗಿವೆ ಹೀಗಾಗಿ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ನೀರನ್ನ ಅರಸಿ ನಾಡಿಗೆ ಕಾಳಿಂಗ ಸರ್ಪ ಗಳು ಸೇರಿದಂತೆ ವಿವಿಧ ಉರಗಗಳು ಬರುತ್ತಿರುವುದು ಸಾಮಾನ್ಯವಾಗಿದೆ.

    https://www.youtube.com/watch?v=5vi5ECBTGl4

  • ಗಂಡನ ಚಿತ್ರಹಿಂಸೆಯಿಂದ ಮನನೊಂದು ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ

    ಗಂಡನ ಚಿತ್ರಹಿಂಸೆಯಿಂದ ಮನನೊಂದು ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ

    ಕಾರವಾರ: ಗಂಡನ ಚಿತ್ರಹಿಂಸೆಯಿಂದ ನೊಂದು ಇಂದು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಮಹಿಳೆಯನ್ನು ಸ್ಥಳೀಯರ ರಕ್ಷಣೆ ಮಾಡಿದ್ದಾರೆ.

    ನಗರದ ಮಾಜಾಳಿಯ ಬಾವಳಾದ ನಿವಾಸಿ ಸರಿತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕಾರವಾರ ನಗರದ ದಿವೇಕರ್ ಕಾಲೇಜು ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.

    ಗುರುವಾರ ಸರಿತಾ ಪತಿ ಏಕನಾಥ್ ಕೋಬ್ರೇಕರ್ ತನ್ನ ಪತ್ನಿಯ ಮೇಲೆ ಮನಸ್ಸೋ ಇಚ್ಚೇ ಥಳಿಸಿದ್ದಾನೆ. ಇಷ್ಟೇ ಅಲ್ಲದೇ ಸಿಗೆರೇಟ್‍ನಿಂದ ಕೈಯನ್ನು ಸುಟ್ಟು ಮನೆಯಿಂದ ಹೊರಹಾಕಿದ್ದಾನೆ. ಇದರಿಂದ ಸರಿತಾ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರ ತೀರಕ್ಕೆ ಬಂದಿದ್ದರು.

    ದಿವೇಕರ್ ಕಾಲೇಜು ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    – ಕಾಳಿಂಗಗಳು ನೀರಿನ ಮೂಲ ಹುಡುಕೋದ್ಯಾಕೆ? ಉರಗ ತಜ್ಞರು ಹೀಗಂತಾರೆ

    ಕಾರವಾರ: ಬರದಿಂದಾಗಿ ಜನ ಕುಡಿಯುವ ನೀರಿಗೂ ಕಷ್ಟಪಡುತ್ತಿದ್ದಾರೆ. ಇದು ಕಾಡಿನಲ್ಲಿರುವ ಉರಗಗಳಿಗೂ ಭಿನ್ನವಾಗಿಲ್ಲ. ಹೀಗೆ ದಾಹದಿಂದ ಬಳಲಿ ಕಾಡಿನಿಂದ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪವೊಂದಕ್ಕೆ ನೀರು ಕುಡಿಸಿ ಕಾಡಿಗೆ ಬಿಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಎಂಬ ಗ್ರಾಮದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಗ್ರಾಮದ ಮಾರುತಿ ಗೌಡ ಎಂಬವರ ಮನೆಗೆ ಆಗಮಿಸಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಹಾಗೂ ಮನೋಹರ್ ನಾಯಕ್ ರಕ್ಷಿಸಿದ್ದಾರೆ. ನೀರಿಲ್ಲದೇ ಬಳಲಿದ್ದ ಕಾಳಿಂಗಕ್ಕೆ ನೀರು ಕುಡಿಸಿ ಅರಣ್ಯ ಇಲಾಖೆಯವರ ಸಹಾಯದಿಂದ ಕಾಡಿಗೆ ಬಿಟ್ಟಿದ್ದಾರೆ.

    ಇದೇನಿದು ಹಾವುಗಳು ನೀರು ಕುಡಿಯುತ್ತಾ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಬಹುದು. ಹೌದು ಮನುಷ್ಯನಂತೆ ಹಾವಿಗೂ ಬಾಯಾರಿಕೆ ಆಗುತ್ತೆ ಅವುಗಳು ನೀರಿನ ಮೂಲ ಅರಸಿ ಕಿಲೋಮೀಟರ್ ಗಟ್ಟಲೆ ಓಡಾಡುತ್ತೆವೆ. ಅದರಲ್ಲೂ ಹೆಚ್ಚಾಗಿ ನಾಗರ ಹಾವು ಮತ್ತು ಕಾಳಿಂಗಗಳು ನೀರಿನ ಮೂಲ ಹುಡುಕುತ್ತವೆ ಅಂತಾರೆ ಉರಗ ತಜ್ಞರು.

    ಹಾವುಗಳಿಗೂ ಬೇಕು ನೀರು: ಜನವರಿ ಯಿಂದ ಮಾರ್ಚ್ ವೇಳೆ ಹಾವುಗಳ ಮಿಲನದ ಸಮಯ. ಹೀಗಾಗಿ ಹೆಣ್ಣು ಕಾಳಿಂಗವನ್ನ ಹುಡುಕಿ ಕಾಡಿನಲ್ಲಿ ಗಂಡು ಕಾಳಿಂಗಗಳು ಅಲೆಯುತ್ತವೆ. ಈ ಸಂದರ್ಭದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಬಾಯಾರಿಕೆಯಾಗಿ ನೀರನ್ನ ಅರಸಿ ತಂಪು ಜಾಗವನ್ನ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ನೀರು ಸಿಗದಿದ್ದಾಗ ನಾಡಿಗೆ ಬಂದು ನೀರನ್ನ ಅರಸುತ್ತವೆ. ಹೆಚ್ಚಾಗಿ ಮನೆಯ ಸುತ್ತಮುತ್ತ ಚರಂಡಿಗಳಲ್ಲಿ ನೀರಿರುವುದರಿಂದ ಇದನ್ನ ಅವುಗಳು ಕುಡಿಯುತ್ತವೆ. ಬೇಸಿಗೆಯಲ್ಲಿ ಕಾಳಿಂಗ ಸರ್ಪಗಳು ಮನೆಗಳ ಆಸುಪಾಸು ಕಾಣುವುದು ಸಾಮಾನ್ಯವಾಗಿರುತ್ತದೆ ಎಂದು ಉರಗ ತಜ್ಞರು ಹೇಳುತ್ತಾರೆ.

    ಉರಗ ತಜ್ಞರು ಹಾವನ್ನ ಹಿಡಿಯಲು ಬಂದಾಗ ಅದರ ದೈಹಿಕ ಸ್ಥಿತಿಯನ್ನ ಮೊದಲು ಗಮನಿಸುತ್ತಾರೆ. ಹೆಚ್ಚಾಗಿ ಈ ಸಂದರ್ಭದಲ್ಲಿ ಕಾಳಿಂಗಗಳು ಹೆಣ್ಣನ್ನು ಅರಸಿ ಬಂದಾಗ ಎರಡು ಗಂಡುಗಳ ಮಧ್ಯೆ ಮಹಾ ಕಾಳಗ ನಡೆಯುತ್ತದೆ. ಇದರಿಂದ ಒಂದು ಗಂಡು ಸೋತು ಪಲಾಯನ ಮಾಡುತ್ತೆ. ಇನ್ನು ಗೆದ್ದ ಮೊತ್ತೊಂದು ಗಂಡು ಕಾಳಿಂಗ ಹಾಗೂ ಹೆಣ್ಣು ಸರ್ಪದ ನಡುವೆ ಮಿಲನವಾಗುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ನಿತ್ರಾಣವಾಗಿ ನೀರನ್ನ ಬಯಸುತ್ತವೆ.

    ಹಾವುಗಳು ಹತ್ತು ಮಿಲಿ ಲೀಟರ್ ನಿಂದ ಹಿಡಿದು ಅರ್ಧ ಲೀಟರ್ ವರೆಗೆ ನೀರನ್ನ ಅನಾಯಾಸವಾಗಿ ಕುಡಿಯುತ್ತವೆ. ಬೇಸಿಗೆಯ ದಿನಗಳಲ್ಲಿ ತಂಪಾಗಿರುವ ಪ್ರದೇಶಗಳನ್ನು ಅಂದರೆ ಬಿದಿರು ಮರಗಳು ಇರುವ ಸ್ಥಳಗಳಲ್ಲಿ ಉದುರಿದ ಎಲೆಗಳನ್ನು ಒಟ್ಟು ಮಾಡಿ ಮೊಟ್ಟೆಯಿಡುತ್ತವೆ. ಮನುಷ್ಯರು ಪ್ರಾಣಿಗಳ ವಾಸಸ್ಥಳವನ್ನು ಆಕ್ರಮಿಸುತ್ತಿರುವ ಕಾರಣ ಕಾಡಿನಿಂದ ನಾಡಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಸಾಮನ್ಯವಾಗಿದೆ.

     

  • ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

    ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

    ಕಾರವಾರ: ಕಳ್ಳತನ ಆಗುತ್ತೆ ಅಂತ ರಕ್ಷಣೆಗೆ ನಾಯಿ ಸಾಕಿದ್ರೆ ಆ ನಾಯಿಯನ್ನೇ ಕಳವು ಮಾಡೋ ಮಂದಿ ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಾಕು ನಾಯಿಗಳು ಕಳ್ಳತನವಾಗುತ್ತಿವೆ.

    ಕಾರವಾರ ನಗರದ ಮುಖ್ಯಭಾಗವಾದ ಎಂಜಿ ರೋಡ್ ಬಳಿ ಇರುವ ಮಹಾಲಕ್ಷ್ಮಿ ಶೂರೂಂ ಬಳಿ ಇರುವ ಮನೆಯೊಂದರಲ್ಲಿ ಸಾಕಿದ್ದ ಲ್ಯಾಬ್ರಡಾರ್ ತಳಿಯ ನಾಯಿ ಮರಿಯನ್ನ ಕಳ್ಳರು ಯಾಮಾರಿಸಿ ಕಳ್ಳತನ ಮಾಡಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ರೀತಿ ಹಲವು ತಳಿಗಳ ನಾಯಿಗಳು ಕಳ್ಳತನವಾಗಿದ್ದು ಕಾರವಾರ ನಗರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ನಾಯಿ ಕಳವು ಮಾಡೋ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://www.youtube.com/watch?v=dkVwpWN8Fqw

  • ಯಕ್ಷಗಾನ ವೇಷ ತೊಟ್ಟು ಶಾಂತಿ ಸಂದೇಶ ಸಾರುತ್ತಿದ್ದಾಳೆ ಶಿರಸಿಯ ತುಳಸಿ!

    ಯಕ್ಷಗಾನ ವೇಷ ತೊಟ್ಟು ಶಾಂತಿ ಸಂದೇಶ ಸಾರುತ್ತಿದ್ದಾಳೆ ಶಿರಸಿಯ ತುಳಸಿ!

    ಕಾರವಾರ: ವಿಶ್ವಶಾಂತಿಗಾಗಿ ಗೆಜ್ಜೆ ಕಟ್ಟಿ ಯಕ್ಷಗಾನ ರೂಪಕದಲ್ಲಿ ವಿಶ್ವಶಾಂತಿ ಸಂದೇಶ ಸಾರುತ್ತಿರುವ ಏಳು ವರ್ಷದ ಪೋರಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶಾಲೆ ಜೊತೆ ಜೊತೆಗೆ ರಾಜ್ಯಾದ್ಯಂತ ಪ್ರದರ್ಶನ ನೀಡಿ ಎಲ್ಲರಿಂದ ಶಹಬ್ಬಾಸ್‍ಗಿರಿ ಗಿಟ್ಟಿಸಿಕೊಂಡಿದ್ದಾಳೆ ಶಿರಸಿಯ ಪುಟ್ಟ ಕಂದಮ್ಮ ತುಳಸಿ.

    ಯಕ್ಷಗಾನ ವೇಷ ತೊಟ್ಟು ವಿಶ್ವಶಾಂತಿ ಸಂದೇಶ ಸಾರುವ ತುಳಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಟಕೊಪ್ಪದ ರಾಘವೇಂದ್ರ ಹಾಗೂ ಗಾಯಿತ್ರಿಯವರ ಮಗಳು. 2ನೇ ತರಗತಿ ಓದುತ್ತಿರುವ ಈ ಬಾಲೆ ಬಡಗುತಿಟ್ಟಿನ ಪ್ರಕಾರದಲ್ಲಿ ಯಕ್ಷಗಾನ ರೂಪಕದ ಪ್ರದರ್ಶನದಲ್ಲಿ ಎತ್ತಿದ ಕೈ. ತನ್ನ ತಾಯಿಯಿಂದ ಪ್ರೇರಣೆಗೊಂಡು ಯಕ್ಷಗಾನದಲ್ಲಿ ದೊಡ್ಡ ಚಾಪು ಮೂಡಿಸುತ್ತಿದ್ದಾಳೆ. ಈ ಸಾಧನೆ ಹಿಂದೆ ಕೇಶವ ಹೆಗಡೆ, ರಮೇಶ್ ಹೆಗಡೆ ಕಾನಗೋಡು ಸೇರಿದಂತೆ ಪ್ರಸಿದ್ಧ ಭಾಗವತರಿದ್ದಾರೆ.

    ಗಂಟೆಗಟ್ಟಲೇ ವಿಶ್ವಶಾಂತಿ ಹಾಗೂ ಶಂಕರಾಕ್ಷರ ರೂಪಕ ಪ್ರದರ್ಶನ ನೀಡಿ ರಾಜ್ಯ ಹಾಗೂ ಹೊರರಾಜ್ಯದಲ್ಲೂ ತುಳಸಿ ಫೇಮಸ್. ವರ್ಷದಲ್ಲಿ 25ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ತುಳಸಿಯ ಹೆಗ್ಗಳಿಕೆ. ಈಕೆಯ ಪ್ರತಿಭೆ ಕಂಡು ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶಗಳು ಹುಡಿಕಿಕೊಂಡು ಬಂದಿವೆ. ಆದರೂ ತುಳಸಿ ಆ ಅವಕಾಶಗಳನ್ನು ನಿರಾಕರಿಸಿ ಯಕ್ಷಗಾನಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದಾಳೆ.

    ಕೃಷ್ಣ, ಚಂದ್ರಹಾಸ, ಮೋಹಿನಿ, ಶಂಕರ ಪಾತ್ರಗಳು ಅತಿಹೆಚ್ಚು ಮೆಚ್ಚಿಗೆ ಗಳಿಸಿವೆ. ಒಂದು ಗಂಟೆಯಲ್ಲಿ ದ್ವಿಪಾತ್ರದಲ್ಲಿ ಏಕವ್ಯಕ್ತಿ ಯಕ್ಷಗಾನವನ್ನ ಮಾಡುವುದು ತುಳಸಿಗೆ ಕರಗತವಾಗಿದೆ. ಇಂತ ವಿಶಿಷ್ಟ ಪ್ರತಿಭೆಗೆ ಸಾಕಷ್ಟು ಬಹುಮಾನ, ಪುರಸ್ಕಾರಗಳು ಹರಿದು ಬಂದಿವೆ. ತುಳಸಿಗೆ ಇನ್ನಷ್ಟು ಯಶಸ್ಸು ಸಿಗಲಿ ಅನ್ನೋದೇ ನಮ್ಮ ಆಶಯ.

    https://www.youtube.com/watch?v=bmfk0crjODo

     

  • ಕರಾವಳಿಯಲ್ಲಿ ಸುಗ್ಗಿ ಕುಣಿತದೊಂದಿಗೆ ನಡೆಯುತ್ತೆ ವಿಭಿನ್ನ ರಂಗು ರಂಗಿನ ಹೋಳಿ

    ಕರಾವಳಿಯಲ್ಲಿ ಸುಗ್ಗಿ ಕುಣಿತದೊಂದಿಗೆ ನಡೆಯುತ್ತೆ ವಿಭಿನ್ನ ರಂಗು ರಂಗಿನ ಹೋಳಿ

    ಕಾರವಾರ: ಹೋಳಿ ಹಬ್ಬ ಬಂತೆಂದರೆ ಉತ್ತರ ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡುತ್ತದೆ. ಹೋಳಿ ಆಚರಣೆಗಾಗಿ ವಾರದಿಂದಲೇ ತಯಾರಾಗುವ ಇಲ್ಲಿನವರು ಬಣ್ಣ ಬಣ್ಣದ ವೇಷ ತೊಟ್ಟು ತಮಟೆ, ನಗಾರಿ, ಗುಮಟೆಗಳ ವಾಧ್ಯದ ಜೊತೆ ಕೋಲಾಟ ವಾಡುತ್ತಾ ಮನೆ ಮನೆಗೆ ತೆರಳಿ ರಂಜಿಸುವ ವಿಶೇಷ ಜನಪದ ಆಚರಣೆ ಇಲ್ಲಿದೆ.

    ಸುಗ್ಗಿಯ ವೇಷ ಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರ ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಪದಗಳನ್ನು ಪದಗಾರರು ಹಾಡುತ್ತಾರೆ. ಹಾಡಿದ ಪದಗಳನ್ನು ಪುನಾರಾವರ್ತನೆಗೊಳಿಸುತ್ತಾ ಕಲಾವಿದರು ಕುಣಿಯುತ್ತಾರೆ. ಹಿಮ್ಮೇಳದ ಲಯಕ್ಕನುಗುಣವಾಗಿ ಕುಣಿಯುವರ ಕುಣಿತ ಹಾಗೂ ಅಂಗಾಂಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ್ದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈಲಿ ಹಿಡಿದಿರುವ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ದವಾಗಿ ಕುಟ್ಟುತ್ತಾರೆ. ವಾದ್ಯಮೇಳಗಳೊಂದಿಗೆ ಸುಗ್ಗಿ ಕುಣಿತ ಹೋಳಿ ಹಬ್ಬದ ವರೆಗೆ ಮನೆ ಮನೆಗೆ ತೆರಳಿ ಹೆಜ್ಜೆ ಗೆ ಹೆಜ್ಜೆ ಹಾಕುತ್ತಾ ಸುಗ್ಗಿ ಕುಣಿತ ಮಾಡುತ್ತಾರೆ.

    ಇತಿಹಾಸ:
    ಒಮ್ಮೆ ಕೈಲಾಸದಲ್ಲಿ ಗಂಗೆ ಮತ್ತು ಗೌರಿಯರ ಮಕ್ಕಳಿಗೆ ಯಾವುದಾದರು ಕಲೆಯನ್ನು ಕಲಿಸಬೇಕೆಂಬ ಮನಸ್ಸಾಗುತ್ತದೆ. ಶಿವ ಅವರಿಷ್ಟದಂತೆ ಗುರುವಿನ ಬಳಿಗೆ ಕಳುಹಿಸುತ್ತಾನೆ. ಗುರು ಮಕ್ಕಳಿಗೆ ಯಾವ ಆಟ ಕಲಿಸಲು ಹೋದರು ಅವರುಗಳು ಎಲ್ಲವನ್ನು ತಿರಸ್ಕರಿಸುತ್ತಾರೆ. ಮಕ್ಕಳು ಗುರುಗಳಿಗೆ ಸುಗ್ಗಿ ಕುಣಿತ ಕಲಿಸ ಬೇಕೆಂದು ಹಠ ಮಾಡುತ್ತಾರೆ. ಕೊನೆಗೆ ಗುರುಗಳು ಮಕ್ಕಳಿಗೆ ಸುಗ್ಗಿ ಕುಣಿತ ಕಲಿಸಲು ಪ್ರಾರಂಭಿಸುತ್ತಾರೆ.

    ನಂತರ ಮಕ್ಕಳು ಊರಿನ ಮನೆಮನೆಯ ಮುಂದೆ ಸುಗ್ಗಿ ಕುಣಿತ ಪ್ರದರ್ಶನ ನೀಡಲು ಹೋರಡುತ್ತಾರೆ. ಇದನ್ನು ಗಮನಿಸಿದ ಶಿವ ನಮ್ಮಂತಹವರಿಗೆ ಇದು ಯೋಗ್ಯವಲ್ಲ ಎಂದು ಹೇಳಿ ಮಕ್ಕಳಿಗೆ ಶಾಪ ನೀಡುತ್ತಾನೆ. ಆಗ ಮಕ್ಕಳ ಕೈಯಲ್ಲಿನ ಕೋಲು ಕುಂಚ ನೆಲಕ್ಕೆ ಬಿದ್ದು ಹೋಗುತ್ತದೆ. ಅಷ್ಟರಲ್ಲಿ ಹಾಲಕ್ಕಿ ಹುಡುಗನೊಬ್ಬ ಅದನ್ನು ಎತ್ತಿಕೊಳ್ಳುತ್ತಾನೆ. ಮೊದಲನೆಯ ಆಟದಲ್ಲೇ ಅಪಶಕುನವಾಯಿತೆಂದು ಹುಡುಗರು ಎಲ್ಲವನ್ನು ಹಾಲಕ್ಕಿ ಹುಡುಗನಿಗೆ ಒಪ್ಪಿಸುತ್ತಾರೆ. ಇದನ್ನು ಗಮನಿಸಿದ ಗುರುಗಳು ಈ ಕಲೆಯನ್ನು ಪ್ರದರ್ಶಿಸಬೇಕೆಂದು ಕರಾರು ಹಾಕುತ್ತಾರೆ. ಅಂದು ಪ್ರಾರಂಭವಾದ ಸುಗ್ಗಿ ಕುಣಿತ ಇಂದಿಗೂ ನಡೆದುಕೊಂಡು ಬಂದಿದೆ. ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲ ಹಾಗೂ ಕಾರವಾರ ಪ್ರದೇಶದ ಕಿರುಗುಡ್ಡ, ಕುರುಚಲು ಕಾಡು, ನದಿಯ ತಿರುವು ಮತ್ತು ಸಮುದ್ರ ಕಿನಾರೆಗಳಲ್ಲಿ ಮನೆಗಳ ಸಮೂಹ ಕೊಪ್ಪಗಳಲ್ಲಿ ಈ ಜನ ವಾಸವಾಗಿದ್ದಾರೆ.

    ವಿಭಿನ್ನ ವೇಷಭೂಷಣ: ಶೀರೋಭೂಷಣವನ್ನು ಬಣ್ಣ ಬಣ್ಣದ ಕಾಗದ ಚೆಂಡುಗಳಿಂದ ತಯಾರಿಸಿರುತ್ತಾರೆ. ಸೀರೆ ಮೊಣಕಾಲಿನವರೆಗೆ ಬರುವಂತೆ ನೆರಿಗೆಯಾಗಿ ಉಟ್ಟು ಇಲ್ಲವೆ ಪೈಜಾಮ ತೊಟ್ಟು ಕೆಂಪು ಹಳದಿ ಬಣ್ಣದ ನಿಲುವಂಗಿ ಹಾಕಿ ಮೇಲೆ ಜಾಕಿಟು ಧರಿಸಿ ಸೊಂಟಕ್ಕೆ ತುಂಡು ವಸ್ತ್ರಗಳನ್ನು ಕಟ್ಟಿಕೊಳ್ಳುತ್ತಾರೆ. ತಲೆಗೆ ರುಮಾಲು ಸುತ್ತಿ ತುರಾಯಿಯನ್ನು ಪೂಜಿಸಿ ಕಟ್ಟಿಕೊಳ್ಳುತ್ತಾರೆ. ತುರಾಯಿಯ ಕೆಳಗೆ ಹಣೆಯ ಮೇಲೆ ಕನ್ನಡಿಯ ಚೂರುಗಳನ್ನು ಒಪ್ಪವಾಗಿ ಕೂಡಿಸಿದ ಕಮಾನಿನಾಕಾರದ ಮುಂಗಟ್ಟು ಕಟ್ಟಿಕೊಂಡು ಮುತ್ತಿನ ಸರಗಳನ್ನು ಇಳಿಬಿಡುತ್ತಾರೆ. ಇದು ಕರಾವಳಿ ಭಾಗದಲ್ಲಿ ಮಾತ್ರ ಕಾಣಸಿಗುವ ವಿಶೇಷ ವೇಷಭೂಷಣವಾಗಿದೆ. ಒಟ್ಟಿನಲ್ಲಿ ಈ ಬಾರಿ ಸುಗ್ಗಿ ಕುಣಿತದೊಂದಿಗೆ ಹೋಳಿಯ ರಂಗು ಕರಾವಳಿಯಲ್ಲಿ ಕಳೆಕಟ್ಟಿದೆ.