Tag: ಕಾರವಾರ: ದಾಂಡೇಲಿ

  • ದಾಂಡೇಲಿ-ಧಾರವಾಡ ರೈಲು ಕ್ರೆಡಿಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಫೈಟ್

    ದಾಂಡೇಲಿ-ಧಾರವಾಡ ರೈಲು ಕ್ರೆಡಿಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಫೈಟ್

    ಕಾರವಾರ: ದಾಂಡೇಲಿ-ಧಾರವಾಡ ಪ್ರಯಾಣಿಕರ ರೈಲು ಸಂಚಾರಕ್ಕೆ ಕ್ರೆಡಿಟ್‌ಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡ ಪ್ರಸಂಗ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆಯಿತು.

    ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ದಾಂಡೇಲಿ-ಧಾರವಾಡ ನೂತನ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿ ರೈಲು ತಂದ ಕ್ರೆಡಿಟ್ ಪಡೆದುಕೊಳ್ಳಲು ಪ್ರಯತ್ನಿಸಿದರು. ಇದನ್ನೂ ಓದಿ: 100 ವರ್ಷಗಳ ಇತಿಹಾಸದ ರೈಲು ಮಾರ್ಗಕ್ಕೆ ಚಾಲನೆ

    ತಾಲೂಕಿನ ಅಂಬೇವಾಡಿಯಿಂದ ಅಳ್ನಾವರ ಮೂಲಕ ಸಂಚರಿಸುವ ನೂತನ ರೈಲ್ವೆಗೆ ಭಾನುವಾರ ಅಂಬೇವಾಡಿಯ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಕರಾಗಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಇನ್ನಿತರ ನಾಯಕರು ವೇದಿಕೆ ಏರಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಆರ್.ವಿ. ದೇಶಪಾಂಡೆ ಪರ ಘೋಷಣೆ ಕೂಗಿದರು. ಇನ್ನೊಂದು ಬದಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪರ ಘೋಷಣೆ ಕೂಗಿದರು.

    ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಅವರು ಭಾಷಣ ಮಾಡುವಾಗ ರೈಲ್ವೆ ತರಲು ಪ್ರಯತ್ನಿಸಿದ ದೇಶಪಾಂಡೆ ಅವರನ್ನು ನೆನೆದರು. ಆದರೆ ಈ ವೇಳೆ ಮತ್ತೆ ಕಲಮ ಪಡೆಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಘೋಷಣೆ ಕೂಗಿದರು. ಇದು ಹೀಗೆ ಕೆಲ ಕಾಲ ಮುಂದುವರಿದಾಗ ಪ್ರಹ್ಲಾದ್ ಜೋಶಿ ಅವರು ಮಧ್ಯ ಪ್ರವೇಶಿಸಿ ಎಲ್ಲರೂ ರೈಲು ತರಲು ಶ್ರಮಿಸಿದ್ದಾರೆ. ಇದು ಒಬ್ಬರಿಂದಾದ ಕೆಲಸವಲ್ಲ. ಇದಕ್ಕೆ ಎಲ್ಲ ಪಕ್ಷಗಳ ನಾಯಕರು ಶ್ರಮಿಸಿದ್ದಾರೆ ಎಂದು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಬಳಿಕ ಮಾಜಿ ಸಚಿವ ದೇಶಪಾಂಡೆ ಅವರು, ಕೆಲಸ ಯಾರು ಮಾಡಿದ್ದರೂ ಅದನ್ನು ಶ್ಲಾಘಿಸಬೇಕು. ಚುನಾವಣೆ ಸಂದರ್ಭದಲ್ಲಿನ ರಾಜಕೀಯ ಬೇರೆ ಎಂದರು.