ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿದ್ದ ಏರ್ ಶೋ ಉತ್ತರಪ್ರದೇಶದ ಲಕ್ನೋಗೆ ಶಿಫ್ಟ್ ಆಗಿದೆ. ಅಧಿಕೃತವಾಗಿ ರಕ್ಷಣಾ ಸಚಿವಾಲಯದಿಂದ ಘೋಷಣೆಯಾಗದೇ ಇದ್ದರೂ ಶೋ ಲಕ್ನೋಗೆ ಶಿಫ್ಟ್ ಆಗುವುದು ಬಹುತೇಕ ಖಚಿತವಾಗಿದೆ.
1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತಿತ್ತು. 2019ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ ಶೋ ನಡೆಸಲು ಈಗಾಗಲೇ ಸಮಯ ನಿಗದಿಯಾಗಿದೆ. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಲಕ್ನೋದಲ್ಲಿರುವ ಭಕ್ಷಿ ಕಾ ತಲಾಬ್ ವಾಯುನೆಲೆಯಲ್ಲಿ ಅಕ್ಟೋಬರ್ 27 ನವೆಂಬರ್ 4ರ ಮಧ್ಯೆ ನಡೆಸಲು ಸಿದ್ಧತೆ ನಡೆಸುತ್ತಿದೆ.

ಸ್ಥಳಾಂತರಕ್ಕೆ ಕಾರಣವೇನು?
ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಎರಡು ರಕ್ಷಣಾ ಕಾರಿಡರ್ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು. ಒಂದು ತಮಿಳುನಾಡಿನಲ್ಲಿ ನಿರ್ಮಾಣವಾಗಲಿದ್ದರೆ ಇನ್ನೊಂದು ಉತ್ತರ ಪ್ರದೇಶದಲ್ಲಿ ಆಲಿಘರ್ ನಲ್ಲಿ ನಿರ್ಮಾಣವಾಗುತ್ತಿದೆ. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಜಾಗತಿಕ ಮಟ್ಟದ ಮಿಲಿಟರಿ ಉಪಕರಣಗಳನ್ನು ತಯಾರಿಸಲು ರಕ್ಷಣಾ ಕಾರಿಡರ್ ಸ್ಥಾಪಿಸಲಾಗುತ್ತಿದೆ. ಶನಿವಾರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಲಿಘರ್ ಕಾರಿಡರ್ ಅನ್ನು ಉದ್ಘಾಟಿಸಿದ್ದರು. ಈ ರಕ್ಷಣಾ ಕಾರಿಡರ್ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ವೈಮಾನಿಕ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ವಿಶೇಷ ಏನೆಂದರೆ ಈ ಕಾರ್ಯಕ್ರಮದಲ್ಲೇ ಯೋಗಿ ಆದಿತ್ಯನಾಥ್ ಅವರು ಏರೋ ಇಂಡಿಯಾವನ್ನು ಉತ್ತರ ಪ್ರದೇಶದಲ್ಲಿ ನಡೆಸುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಉತ್ತರ ಪ್ರದೇಶ ರಕ್ಷಣಾ ಕಾರಿಡರ್ ನಲ್ಲಿ ಎಚ್‍ಎಎಲ್ 1,200 ಕೋಟಿ ರೂ. ಹೂಡಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ.
ಅಧಿಕೃತ ಘೋಷಣೆಯಾಗಿಲ್ಲ:
ಬೆಂಗಳೂರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಏರ್ ಶೋ ನಡೆಸಲು ವಿವಿಧ ರಾಜ್ಯಗಳಿಂದ ಪ್ರಸ್ತಾಪ ಬಂದಿದೆ. ಆದರೆ ಅಂತಿಮವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಏರ್ ಶೋವನ್ನು ಗೋವಾದಲ್ಲಿ ನಡೆಸಲು ಉತ್ಸುಕರಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕನ್ನಡಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಮನೋಹರ್ ಪರಿಕ್ಕರ್ ಅವರೇ ಗೋವಾದಲ್ಲಿ ಏರ್ ಶೋ ನಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿ ವಿಚಾರವನ್ನು ತಣ್ಣಗೆ ಮಾಡಿದ್ದರು.
ಕೈ ನಾಯಕರ ವಿರೋಧ:
ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಈಗಾಗಲೇ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಟ್ವೀಟ್ ಮಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರು ಟ್ವೀಟ್ ಮಾಡಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿತಾಸಕ್ತಿಯನ್ನು ತೋರಿಸಬೇಕಿತ್ತು. ಆದರೆ ಅವರು ರಾಜ್ಯದ ಹಿತಾಸಕ್ತಿಯನ್ನು ಬಿಟ್ಟಿದ್ದಾರೆ. ಬಿಜೆಪಿ ಆಳ್ವಿಕೆ ಅವಧಿಯಲ್ಲಿ ಹಲವಾರು ರಕ್ಷಣಾ ಯೋಜನೆಗಳು ಬೆಂಗಳೂರಿನಿಂದ ಕೈ ತಪ್ಪುತ್ತಿದೆ ಎಂದು ಬರೆದು ಕಿಡಿಕಾರಿದ್ದಾರೆ.
ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, 21 ವರ್ಷಗಳಿಂದ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನವನ್ನು ಕೇಂದ್ರ ಸರ್ಕಾರ ಏಕಾಏಕಿ ಉತ್ತರಪ್ರದೇಶದ ಲಕ್ನೋಗೆ ಸ್ಥಳಾಂತರಿಸುವುದಕ್ಕೆ ನಮಗೆ ತೀವ್ರ ಅಸಮಾಧಾನವಾಗಿದೆ. ಅಲ್ಲದೇ ಈ ಮೊದಲು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರ ಜೊತೆ ವೈಮಾನಿಕ ಪ್ರದರ್ಶನ ಸ್ಥಳಾಂತರಗೊಳ್ಳದಂತೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದರು.
ಬಿಜೆಪಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವರಾದ ಅನಂತಕುಮಾರ್ ರವರು ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಗಮನಹರಿಸಬೇಕು. ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು ಏರ್ ಶೋ ಕರ್ನಾಟಕಕ್ಕೆ ಮರಳಿ ಬರುವಂತೆ ಆಗ್ರಹಿಸಬೇಕು. ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏರ್ ಶೋ ನಡೆಯುತ್ತ ಬಂದಿತ್ತು, 2019ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ವ್ಯಾಪಕ ವ್ಯವಸ್ಥೆಯನ್ನು ಸಹ ಈಗಾಗಲೇ ಕಲ್ಪಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ದಿಢೀರ್ ನಿರ್ಧಾರದಿಂದ ತೀವ್ರ ಬೇಸರವಾಗಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews