Tag: ಕಾಯಕ

  • ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ

    ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ

    ಮೈಸೂರು: ಹಾವು ಹಿಡಿಯುವುದರ ಮೂಲಕ ಸ್ನೇಕ್ ಶ್ಯಾಂ ದಾಖಲೆ ಬರೆದಿದ್ದಾರೆ. ಮೈಸೂರಿನ ಈ ಉರಗ ಪ್ರೇಮಿಗೆ ಹಾವು ಸಂರಕ್ಷಣೆ ಮಾಡುವುದೇ ಕಾಯಕ. ಈ ಕಾಯಕವನ್ನು ಶ್ಯಾಂ ಬಹಳ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡುತ್ತಿದ್ದಾರೆ. ಹೀಗಾಗಿ ಶ್ಯಾಂ ಹಾವು ಹಿಡಿಯುವುದರಲ್ಲಿ ಈಗ ಹೊಸ ದಾಖಲೆ ಬರೆದಿದ್ದಾರೆ.

    35 ಸಾವಿರ ಹಾವನ್ನು ಸಂರಕ್ಷಣೆ ಮಾಡಿದ ದಾಖಲೆ ಶ್ಯಾಂ ಮುಡಿಗೇರಿದೆ. ಮೈಸೂರಿನ ಹೆಬ್ಬಾಳ ಬಡಾವಣೆಯ ಇನ್ಫೋಸಿಸ್ ಆವರಣದಲ್ಲಿ ಮಂಡಲದ ಹಾವು ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಬಂದ ಶ್ಯಾಂ ಆ ಹಾವನ್ನು ಕ್ಷಣ ಮಾತ್ರದಲ್ಲಿ ಹಿಡಿದರು. ಈ ಹಾವು ಶ್ಯಾಂ ಹಿಡಿದ 35ನೇ ಸಾವಿರದ ಹಾವಾಗಿ ಅವರ ರಿಜಿಸ್ಟರ್ ನಲ್ಲಿ ದಾಖಲಾಯಿತು.

    1981ರಿಂದ ಹಾವು ಹಿಡಿಯುವುದನ್ನು ಕಾಯಕ ಮಾಡಿಕೊಂಡಿರುವ ಶ್ಯಾಂ 1997ರಿಂದ ಹೀಗೆ ತಾವು ಹಿಡಿದ ಹಾವುಗಳನ್ನು ರಿಜಿಸ್ಟರ್ ನಲ್ಲಿ ದಾಖಲು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈಗ 35 ಸಾವಿರ ಹಾವು ಹಿಡಿದು ಸಂರಕ್ಷಿಸಿದ ಬಹು ಅಪರೂಪದ ದಾಖಲೆ ಮಾಡಿದ್ದಾರೆ.

    ಹಾವು ಕಂಡರೆ ಬೆಚ್ಚಿ ಬೀಳುವ ಮಂದಿಗೆ ಧೈರ್ಯ ಹೇಳಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬರುವ ಶ್ಯಾಂ ಬಗ್ಗೆ ಮೈಸೂರಿಗರಿಗೆ ಅಪಾರ ಪ್ರೀತಿ ಇದೆ. ಯಾವುದೇ ಪ್ರತಿಫಲ ಬಯಸದೇ ಹಾವು ಹಿಡಿಯುವ ಕಾಯಕ ಮಾಡುತ್ತಿರುವ ಸ್ನೇಕ್ ಶ್ಯಾಂಗೆ ಸರ್ಕಾರದಿಂದ ಹೆಚ್ಚಿನ ನೆರವು ಸಿಕ್ಕಿಲ್ಲ.

    ಮಕ್ಕಳನ್ನು ಶಾಲೆಗೆ ಬಿಡುವ ಕೆಲಸವೇ ಇವರ ಜೀವನಕ್ಕೆ ಆಧಾರ. ಜೊತೆಗೆ ಹಾವು ಹಿಡಿಯಲು ಹೋದಾಗ ಮನೆಯವರು ಕೊಡುವ ಅಲ್ಪಸ್ವಲ್ಪ ಹಣ ಇವರ ಜೀವನಕ್ಕೆ ಆಧಾರವಾಗಿದೆ. 35 ಸಾವಿರ ಹಾವು ಹಿಡಿದಿರುವ ಶ್ಯಾಂ ಈಗ ತಮ್ಮ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ತವಕದಲ್ಲಿದ್ದಾರೆ.

  • ಸ್ವ ಉದ್ಯೋಗಕ್ಕೆ ‘ಕಾಯಕ’, ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು’..!

    ಸ್ವ ಉದ್ಯೋಗಕ್ಕೆ ‘ಕಾಯಕ’, ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು’..!

    – ಮೀನುಗಾರಿಕೆ ಹಾಗೂ ಸಹಕಾರಿ ಇಲಾಖೆಗೆ ಸಿಎಂ ಕೊಟ್ಟಿದ್ದೇನು..?

    ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಮೀನುಗಾರಿಕೆ ಹಾಗೂ ಸಹಕಾರಿ ಇಲಾಖೆಗೆ ಕುಮಾರಸ್ವಾಮಿ ಅವರು ಹಲವು ಕೊಡುಗೆಗಳನ್ನು ನೀಡಿದ್ದಾರೆ.

    ಮೀನುಗಾರಿಕೆ: ರಾಜ್ಯದ 20,000 ಹೆಕ್ಟೇರ್ ಜಲ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 2000 ಬಲಿತ ಬಿತ್ತನೆ ಮೀನುಮರಿಗಳನ್ನು ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಉಚಿತವಾಗಿ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು ‘ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ’ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ 4 ಕೋಟಿ ಮೀನು ಮರಿಗಳನ್ನು ಬಿತ್ತನೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

    ಸಹಕಾರ: ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆಯನ್ನು ವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸಿ, ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ‘ಕಾಯಕ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ಸ್ವ-ಸಹಾಯ ಗುಂಪುಗಳು ಸಮೂಹ ಮಾದರಿಯಲ್ಲಿ ಅಥವಾ ವೈಯಕ್ತಿಕವಾಗಿ ಸ್ವಂತ ಉದ್ಯೋಗ ಕೈಗೊಳ್ಳಲು ಸಹಕಾರ ಸಂಸ್ಥೆಗಳ ಮೂಲಕ ಪ್ರತಿ ಗುಂಪಿಗೆ ಗರಿಷ್ಟ 10 ಲಕ್ಷ ರೂ. ಗಳವರೆಗೆ ಸಾಲ ನೀಡಲಾಗುವುದು.

    ‘ಕಾಯಕ’ ಯೋಜನೆಯಡಿ 5 ಲಕ್ಷ ರೂ. ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ ಹಾಗೂ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ದರ ನಿಗದಿಪಡಿಸಿದ್ದಾರೆ. ಈ ಯೋಜನೆಯಡಿ ಪ್ರಾರಂಭಿಕವಾಗಿ ಒಟ್ಟು 3000 ಸ್ವ ಸಹಾಯ ಗುಂಪುಗಳಿಗೆ ಸಾಲ ಇದಗಿಸಲು 5 ಕೋಟಿ ರೂ. ಅನುದಾನ ನೀಡಲಾಗಿದೆ.

    45. ಬೀದಿ ವ್ಯಾಪಾರಿಗಳು/ ಸಣ್ಣ ವ್ಯಾಪಾರಿಗಳು ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದಲ್ಲಿದ್ದು. ಇವರಿಗೆ ಸಾಂಸ್ಥಿಕ ಹಣಕಾಸು ವ್ಯವಸ್ಥೆ ಇಲ್ಲದೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಇವರ ಕಷ್ಟಗಳಿಗೆ ಸರ್ಕಾರವು ಸ್ಪಂದಿಸಿದ್ದು, ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು / ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ‘ಬಡವರ ಬಂಧು’ ಸಂಚಾರಿ ಸೇವೆಯನ್ನು ಪ್ರಾರಂಭಿಸಲಾಗುವುದು.