– ಮಹಿಳೆಯರಿಗೆ ಸುರಕ್ಷತೆಯಿಲ್ಲವೆಂದು ಕಿಡಿ
– ಮಹಿಳಾ ಆಯೋಗದ ಮುಖ್ಯಸ್ಥೆ ಗರಂ
ನವದೆಹಲಿ: ಮಾನವೀಯತೆ ಇದೆಯಾ..? ಇಲ್ಲವೋ..? ಎಂಬ ಪ್ರಶ್ನೆ ಹುಟ್ಟುಹಾಕುವಂತಹ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ. ಕಾಮುಕರು ತಮ್ಮ ಕಾಮತೃಷೆ ತೀರಿಸಿಕೊಳ್ಳುವ ಸಲುವಾಗಿ ವೃದ್ಧರನ್ನೂ ಬಿಡುತ್ತಿಲ್ಲ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ.

ಹೌದು. ಇಷ್ಟು ದಿನ ನಾವು ಪುಟ್ಟ ಕಂದಮ್ಮಗಳು, ಅಪ್ರಾಪ್ತೆ ಹಾಗೂ ಯುವತಿಯರ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಇದೀಗ 90 ವರ್ಷದ ಅಜ್ಜಿಯ ಮೇಲೂ ಕಾಮುಕರು ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಈ ಘಟನೆ ದೆಹಲಿಯ ನಜಾಫ್‍ಗರ್ ಎಂಬಲ್ಲಿ ಮಂಗಳವಾರ ನಡೆದಿದೆ.
ಸಂಜೆ 5 ಗಂಟೆ ಸುಮಾರಿಗೆ ವೃದ್ಧೆ ಹಾಲು ತರುವವನಿಗಾಗಿ ಮನೆಯ ಹೊರಡಗೆ ನಿಂತು ಕಾಯುತ್ತಿದ್ದರು. ಈ ವೇಳೆ ಅಪರಿಚತನೊಬ್ಬ ಅಲ್ಲಿಗೆ ಧಾವಿಸಿ, ಹಾಲಿನವನ ಬಳಿಗೆ ಕರೆದೊಯ್ಯುವುದಾಗಿ ನಂಬಿಸಿದ್ದಾನೆ. ವ್ಯಕ್ತಿಯ ಮಾತನ್ನು ನಂಬಿದ ವೃದ್ಧೆ ಆತನ ಜೊತೆ ಹೊರಟಿದ್ದಾರೆ. ಆದರೆ ಆತ ವೃದ್ಧೆಯನ್ನು ಹಾಲಿನವನ ಬಳಿಗೆ ಕರೆದೊಯ್ಯುವ ಬದಲು ರೇವ್ಲಾ ಖಾನ್ಪುರದಲ್ಲಿರುವ ಜಮೀನಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇತ್ತ ತನ್ನ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ವೃದ್ಧೆ ವಿರೋಧಿಸಿದಾಗ ಆತ ತನ್ನ ಮೇಲೆ ಹಲ್ಲೆ ಮಾಡಿದನು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ನಿನ್ನ ಅಜ್ಜಿಯಷ್ಟು ವಯಸ್ಸಾಗಿದೆ. ದಯವಿಟ್ಟು ನನ್ನ ಬಿಟ್ಟುಬಿಡು ಎಂದು ಗೋಗರೆದರೂ ಆತ ಕ್ಯಾರೇ ಎಂದಿಲ್ಲ. ಈ ಮಧ್ಯೆ ವೃದ್ಧೆಯ ಚೀರಾಟ ಗ್ರಾಮಸ್ಥರ ಕಿವಿಗೆ ಬಿದ್ದಿದೆ. ಕೂಡಲೇ ಗ್ರಾಮಸ್ಥರು ವೃದ್ಧೆಯ ರಕ್ಷಣೆಗೆ ಧಾವಿಸಿದರು. ಅಲ್ಲದೆ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ವೃದ್ಧೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವರದಿಯ ಪ್ರಕಾರ, ವೃದ್ಧೆಯ ದೇಹ ಮತ್ತು ಖಾಸಗಿ ಭಾಗಗಳಿಗೆ ಅನೇಕ ಗಾಯಗಳಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿಯನ್ನು ಸೋನು ಎಂದು ಗುರುತಿಸಲಾಗಿದ್ದು, ಈತ ದೆಹಲಿಯ ರೆವ್ಲಾ ಖಾನ್ಪುರ್ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡುವ ಮೂಲಕ ಮರುಕ ವ್ಯಕ್ತಪಡಿಸಿದರು. ಈ ಸಂಬಂಧ ವೃದ್ಧೆಯ ಜೊತೆ ಮಾತನಾಡಿದಾಗ ಅವರು, ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಹೇಳಿದರು. ಮಹಿಳೆಯ ಸುರಕ್ಷತೆ ಎಂಬ ನಿರ್ಣಾಯಕ ಪ್ರಶ್ನೆಯನ್ನು ಎತ್ತಿದ ಮಾಲಿವಾಲ್, 90 ವರ್ಷದ ಮಹಿಳೆಯಿಂದ 6 ತಿಂಗಳ ಹುಡುಗಿಯವರೆಗೆ ಇಂದು ಯಾರೂ ಸರಕ್ಷಿತವಾಗಿಲ್ಲ ಎಂದು ಕಿಡಿಕಾರಿದರು.