Tag: ಕಾಮನ್ ವೆಲ್ತ್ ದೇಶಗಳು

  • ಭಾರತದ ಕ್ಷಮೆಯಾಚಿಸಿದ ಬ್ರಿಟೀಷ್ ವಿದೇಶಾಂಗ ಕಚೇರಿ

    ಭಾರತದ ಕ್ಷಮೆಯಾಚಿಸಿದ ಬ್ರಿಟೀಷ್ ವಿದೇಶಾಂಗ ಕಚೇರಿ

    ಲಂಡನ್: ಇಂಗ್ಲೆಂಡಿನ ಲಂಡನ್ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಇಂಗ್ಲೆಂಡ್ ವಿದೇಶಾಂಗ ಕಚೇರಿ ಕ್ಷಮೆಯಾಚಿಸಿದೆ.

    ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿದ್ದ ಕೆಲ ಸದಸ್ಯರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ರಾಯಭಾರಿ ಯಶ್‍ವರ್ಧನ್ ಕುಮಾರ್ ಸಿನ್ಹಾ ಅವರೊಂದಿಗೆ ಮಾತುಕತೆ ಮಾಡಿದ್ದೇವೆ ಎಂದು ಲಂಡನ್ ವಿದೇಶಾಂಗ ಕಚೇರಿ ಮತ್ತು ಕಾಮನ್ ವೆಲ್ತ್ ಕಚೇರಿ ತಿಳಿಸಿದೆ.

    ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಮತ್ತೆ ಭಾರತದ ತ್ರಿವರ್ಣ ಧ್ವಜ ಹಾರಿಸಲು ಬ್ರಿಟೀಷ್ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಯಿಂದ ಭಾರತದೊಂದಿನ ಸಂಬಂಧ ಮತ್ತಷ್ಟು ಉತ್ತಮವಾಗಿದೆ. ಮತ್ತಷ್ಟು ಹತ್ತಿರದಿಂದ ಜೊತೆಯಾಗಿ ಕಾರ್ಯನಿರ್ವಹಿಸಲು ನಾವು ಬಯಸಿದ್ದೇವೆ ಎಂದು ಬ್ರಿಟೀಷ್ ವಿದೇಶಾಂಗ ಕಚೇರಿ ತಿಳಿಸಿದೆ.

    53 ಕಾಮನ್ ವೆಲ್ತ್ ದೇಶಗಳ ಧ್ವಜಗಳ ಮಧ್ಯೆ ಹಾರುತ್ತಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಸುಟ್ಟಿರುವ ಗುಂಪಿನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಇಂಗ್ಲೆಂಡ್ ಸರ್ಕಾರವನ್ನು ಆಗ್ರಹಿಸಿದೆ.

    ಏನಿದು ಘಟನೆ?
    ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿ ಇಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದರು. ಭಾರತದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಖಂಡಿಸುವ ಉದ್ದೇಶದಿಂದ ಸೇರಿದ್ದರು. ಪಾರ್ಲಿಮೆಂಟ್ ಸ್ಕ್ವೇರ್ ಮೇಲೆ ಹಾರಾಡುತ್ತಿದ್ದ ಭಾರತೀಯ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವ ಪಾಕ್ ಹಾಗೂ ಖಲೀಸ್ತಾನದ ಕೆಲ ಪ್ರತಿನಿಧಿಗಳು ಅದನ್ನು ಸುಟ್ಟು ಹಾಕಿದ್ದಾರೆ. ಭಾರತದ ಧ್ವಜವನ್ನು ಕೆಳಗಿಳಿಸಿದ ಬಳಿಕ ಅದೇ ಜಾಗದಲ್ಲಿ ಪಾಕ್ ಧ್ವಜನ್ನು ಹಾರಿಸಿದ್ದಾರೆ. ಭದ್ರತಾ ಸಿಬ್ಬಂದಿ ಮುಂದುಗಡೆಯೇ ಪ್ರತಿಭಟನಾಕಾರರು ತ್ರಿವರ್ಣ ಧ್ಚಜವನ್ನು ಸುಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಇಂಗ್ಲೆಂಡ್ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.