Tag: ಕಾಬುಲ್

  • ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಕಾಬುಲ್: ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ತನ್ನ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ಶಫಿಕುಲ್ಲಾ ಶಫಾಕ್ ಮೇಲೆ 6 ವರ್ಷ ಅಮಾನತು ಶಿಕ್ಷೆ ವಿಧಿಸಿದೆ.

    ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ 2018ರ ಆವೃತ್ತಿ ಹಾಗೂ 2019ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಶಫಾಕ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ ಪರಿಣಾಮ ಆತನ ವಿರುದ್ಧ ಐಸಿಸಿ ನಿಯಮ 2.1.1ರ ಅನ್ವಯ ನಿಷೇಧ ವಿಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

    ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ವಿವಿಧ ರೀತಿ ಪ್ರಯತ್ನ ನಡೆಸಿದ್ದು ಮಾತ್ರವಲ್ಲದೇ, ಬುಕ್ಕಿಗಳು ಸಂಪರ್ಕ ಮಾಡಿದ್ದರು ಉದ್ದೇಶ ಪೂರ್ವಕವಾಗಿ ಬೋರ್ಡಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಆಟಗಾರ ಫಿಕ್ಸಿಂಗ್‍ನಲ್ಲಿ ಪಾಲ್ಗೊಂಡಿರುವುದಕ್ಕೆ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 30 ವರ್ಷದ ಶಫಾಕ್ ದೇಶದ ಪರ ಅಂತಿಮ ಪಂದ್ಯವನ್ನಾಡಿದ್ದು, ಇದುವರೆಗೂ 24 ಏಕದಿನ, 46 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

    ವಿಶ್ವ ಕ್ರಿಕೆಟ್‍ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ಇಬ್ಬರು ಆಟಗಾರರ ಬಳಿಕ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಶಫಾಕ್ ಸ್ಟಾರ್ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದರು. ದೇಶಿಯ ಕ್ರಿಕೆಟ್‍ನಲ್ಲಿರುವಾಗಲೇ ಟಿ20 ಮಾದರಿಯಲ್ಲಿ ಕೇವಲ 71 ಎಸೆತಗಳಲ್ಲಿ 214 ರನ್ ಸಿಡಿಸಿದ್ದರು.

  • ಕೃತಕ ಕಾಲು ಹಾಕಿದ ಕೂಡಲೇ ಕುಣಿದು ಕುಪ್ಪಳಿಸಿದ ಬಾಲಕ: ವಿಡಿಯೋ ವೈರಲ್

    ಕೃತಕ ಕಾಲು ಹಾಕಿದ ಕೂಡಲೇ ಕುಣಿದು ಕುಪ್ಪಳಿಸಿದ ಬಾಲಕ: ವಿಡಿಯೋ ವೈರಲ್

    ಕಾಬುಲ್: ಕಾಲು ಕಳೆದುಕೊಂಡ ಬಾಲಕನಿಗೆ ವೈದ್ಯರು ಪ್ರಾಸ್ಥೆಟಿಕ್ ಕಾಲು ಜೋಡಣೆ ಮಾಡಿದ್ದಾರೆ. ಕೃತಕ ಕಾಲು ಜೋಡಣೆ ಮಾಡಿದ ತಕ್ಷಣವೇ ಬಾಲಕ ಖುಷಿಯಿಂದ ಕುಣಿದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅಹ್ಮದ್ ಕಾಲು ಕಳೆದುಕೊಂಡ ಬಾಲಕ. ಅಪ್ಘಾನ್‍ನ ಲೋಗರ್ ನಲ್ಲಿ ಆದ ಗಣಿಗಾರಿಕೆಯಲ್ಲಿನ ಸ್ಫೋಟದಿಂದಾದ ಭೂ ಕುಸಿತದಿಂದಾಗಿ ಅಹ್ಮದ್ ತನ್ನ ಕಾಲನ್ನು ಕಳೆದುಕೊಂಡಿದ್ದನು. ಈಗ ಆತನಿಗೆ ಪ್ರಾಸ್ಥೆಟಿಕ್ ಕಾಲು ಹಾಕಿದ್ದು, ಆತ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾನೆ.

    ಈ ವಿಡಿಯೋದಲ್ಲಿ ಬಾಲಕ ಅಹ್ಮದ್ ತನ್ನ ಪ್ರಾಸ್ಥೆಟಿಕ್ ಕಾಲು ಜೋಡಣೆ ಆಗುತ್ತಿದ್ದಂತೆ ಎದ್ದು ಖುಷಿಯಿಂದ ಕುಣಿದಾಡಿದ್ದಾನೆ. ಅಲ್ಲಿದ್ದ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಅಹ್ಮದ್‍ನ ಖುಷಿ ನೋಡಿ ತಾವು ಕೂಡ ಸಂತೋಷಪಟ್ಟಿದ್ದಾರೆ.

    ವೈರಲ್ ಆಗಿರುವ ಈ ವಿಡಿಯೋವನ್ನು ಆಫ್ಘಾನಿಸ್ತಾನದ ಅಂತರಾಷ್ಟ್ರೀಯ ರೆಡ್ ಕ್ರಾಸ್ ಆರ್ಥೋಪೇಡಿಕ್ ಸೆಂಟರ್ ನಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋಗೆ ಇದುವರೆಗೂ ಒಟ್ಟು 3 ಲಕ್ಷಕ್ಕೂ ಹೆಚ್ಚು ವ್ಯೂ ಹಾಗೂ ಶೇರ್ ಬಂದಿದೆ. ಅಲ್ಲದೆ 16,000ಕ್ಕೂ ಹೆಚ್ಚು ಲೈಕ್ಸ್ ಗಳು ಈ ವಿಡಿಯೋಗೆ ಬಂದಿದೆ.

    ಈ ವಿಡಿಯೋ ನೋಡಿದ ಹಲವರು ರೆಡ್ ಕ್ರಾಸ್ ಆಸ್ಪತ್ರೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಕೆಲವರು ಬಾಲಕನ ಖುಷಿ ನೋಡಿ ಆತನನ್ನು ತಬ್ಬಿಕೊಂಡು ಒಂದು ಕೋಣೆಯಲ್ಲಿ ಜೋರಾಗಿ ಅಳಬೇಕು ಎಂದು ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

  • ಕಾಬುಲ್‍ನಲ್ಲಿ ಕಾರ್ ಬಾಂಬ್ ಸ್ಫೋಟ- 65 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಬುಲ್‍ನಲ್ಲಿ ಕಾರ್ ಬಾಂಬ್ ಸ್ಫೋಟ- 65 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಬುಲ್: ಅಫ್ಘಾನಿಸ್ತಾನದ ಕಾಬುಲ್‍ನಲ್ಲಿ ಇಂದು ಬೆಳಿಗ್ಗೆ ಪ್ರಬಲ ಕಾರ್ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ 65 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಗಾಯಾಳುಗಳನ್ನು ಕಾಬುಲ್‍ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಲ್ಲಿನ ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ಹಾಗೂ ವಿವಿಧ ದೇಶಗಳ ರಾಯಭಾರ ಕಚೇರಿಗಳ ಪ್ರದೇಶದಲ್ಲಿಯೇ ಬಾಂಬ್ ಸ್ಫೋಟವಾಗಿದೆ.

    ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಟ್ವೀಟ್ ಮಾಡಿದ್ದು, ದೇವರ ದಯದಿಂದ ಕಾಬುಲ್‍ನಲ್ಲಿ ನಡೆದ ಸ್ಫೋಟದಲ್ಲಿ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಭಾರತೀಯ ರಾಯಭಾರ ಕಚೇರಿಯ ಕಟ್ಟಡದ ಕಿಟಕಿಗಳಿಗೆ ಹಾನಿಯಾಗಿದೆ ಎಂದು ದೆಹಲಿಯ ವಿದೇಶಾಂಗ ವ್ಯವಹಾರ ಸಚಿವಾಲಯದ ಮೂಲಗಳು ತಿಳಿಸಿವೆ.

    ಸದ್ಯ ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕಾಬುಲ್‍ನಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. ಉಗ್ರತ್ವವನ್ನು ಬೆಂಬಲಿಸುವ ಶಕ್ತಿಗಳನ್ನ ಮಣಿಸಬೇಕು ಎಂದಿದ್ದಾರೆ.