Tag: ಕಾಫಿ ವಿಥ್ ಕರಣ್

  • ನನ್ನಿಂದಾದ ತಪ್ಪಿಗೆ ತಂದೆಯನ್ನ ಅಪಹಾಸ್ಯ ಮಾಡಿದ್ದು ಎಷ್ಟು ಸರಿ- ಹಾರ್ದಿಕ್ ಪಾಂಡ್ಯ ಪ್ರಶ್ನೆ

    ನನ್ನಿಂದಾದ ತಪ್ಪಿಗೆ ತಂದೆಯನ್ನ ಅಪಹಾಸ್ಯ ಮಾಡಿದ್ದು ಎಷ್ಟು ಸರಿ- ಹಾರ್ದಿಕ್ ಪಾಂಡ್ಯ ಪ್ರಶ್ನೆ

    ಮುಂಬೈ: ನನ್ನಿಂದಾದ ತಪ್ಪಿಗೆ ತಂದೆಯನ್ನ ಅಪಹಾಸ್ಯ ಮಾಡಿದ್ದು ಎಷ್ಟು ಸರಿ ಎಂದು ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ, ‘ಕಾಫಿ ವಿಥ್ ಕರಣ್’ ವಿವಾದವನ್ನು ಮತ್ತೊಮ್ಮೆ ನೆನೆದಿದ್ದಾರೆ.

    ಪ್ರಸ್ತುತ ಟೀಂ ತಂಡವು ಹೊಂದಿರುವ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರಾಗಿದ್ದಾರೆ. ಆಲ್‍ರೌಂಡರ್ ಹಾರ್ದಿಕ್ ಅಭಿಮಾನಿಗಳಿಗೆ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದರೂ ಟೀಕೆಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಆಫ್-ಫೀಲ್ಡ್ ನಡವಳಿಕೆಯಿಂದಾಗಿ ಟೀಕೆಗೆ ಗುರಿಯಾಗಿದ್ದಾರೆ. ಅಂತಹ ಒಂದು ಘಟನೆಯೆಂದರೆ ‘ಕಾಫಿ ವಿಥ್ ಕರಣ್’ ವಿವಾದ. ಈ ವಿವಾದದಿಂದಾಗಿ ಅವರನ್ನು ಕೆಲ ಕಾಲ ಟೀಂ ಇಂಡಿಯಾದಿಂದ ಅಮಾನತುಗೊಳಿಸಲಾಗಿತ್ತು. ಆ ಸಮಯವನ್ನು ಆಲ್‍ರೌಂಡರ್ ಹಾರ್ದಿಕ್ ಮತ್ತೊಮ್ಮೆ ನೆನೆದಿದ್ದಾರೆ. ಇದನ್ನೂ ಓದಿ: ‘ಕಾಫಿ ತುಂಬಾ ಕಾಸ್ಟ್ಲಿ, ಗ್ರೀನ್ ಟೀ ಮಾತ್ರ ಕುಡಿಯಿರಿ’

    ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಅವರೊಂದಿಗಿನ ಲೈಲ್ ಚಾಟ್‍ನಲ್ಲಿ ಮಾತನಾಡಿದ ಹಾರ್ದಿಕ್ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅಂತಹ ಘಟನೆಯನ್ನು ಪುನರಾವರ್ತಿಸುವುದಿಲ್ಲ ಎಂದು ತಿಳಿಸಿದರು.

    “ನಾನು ಕುಟುಂಬವನ್ನು ಪ್ರೀತಿಸುವ ವ್ಯಕ್ತಿ. ಕುಟುಂಬವಿಲ್ಲದೆ ನಾನು ಏನೂ ಅಲ್ಲ. ಕುಟುಂಬವೇ ನನ್ನ ಬೆನ್ನೆಲುಬು. ನೀವು ನೋಡುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ತೆರೆಮರೆಯಲ್ಲಿರುವ ಜನರು ನೋಡಿಕೊಳ್ಳುತ್ತಿದ್ದಾರೆ. ನಾನು ಮಾನಸಿಕವಾಗಿ ಸ್ಥಿರವಾಗಿದ್ದೇನೆ, ಸಂತೋಷವಾಗಿರುತ್ತೇನೆ ಅಂತ ಅವರು ಯಾವಾಗಲೂ ಖಚಿತಪಡಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

    “ಕಾಫಿ ವಿಥ್ ಕರಣ್ ವಿವಾದವನ್ನು ಒಪ್ಪಿಕೊಳ್ಳಲು ಮತ್ತು ತಪ್ಪನ್ನು ಸರಿಪಡಿಸಲು ಪ್ರಯತ್ನಿಸಲು ಮುಂದಾಗಿದ್ದೆ. ಆಗ ಜನರು ನನ್ನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಘಟನೆ ಬಳಿಕ ನನ್ನ ತಂದೆ ಸಂದರ್ಶನವೊಂದರಲ್ಲಿ ಹೇಳಿದ ಮಾತಿಗೆ ಜನರು ಅಪಹಾಸ್ಯ ಮಾಡಿದರು. ನನ್ನಿಂದಾದ ತಪ್ಪಿಗೆ ಕುಟುಂಬವನ್ನು ದೂರುವುದು, ಅಪಹಾಸ್ಯ ಮಾಡುವುದು ಎಷ್ಟು ಸರಿ? ಅದು ಸ್ವೀಕಾರಾರ್ಹವಲ್ಲ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

  • ‘ಕಾಫಿ ತುಂಬಾ ಕಾಸ್ಟ್ಲಿ, ಗ್ರೀನ್ ಟೀ ಮಾತ್ರ ಕುಡಿಯಿರಿ’

    ‘ಕಾಫಿ ತುಂಬಾ ಕಾಸ್ಟ್ಲಿ, ಗ್ರೀನ್ ಟೀ ಮಾತ್ರ ಕುಡಿಯಿರಿ’

    ಮುಂಬೈ: ಕಾಫಿ ತುಂಬಾ ಕಾಸ್ಟ್ಲಿ ಆಗಿದೆ, ಈಗ ಗ್ರೀನ್ ಟೀ ಮಾತ್ರ ಕುಡಿಯಿರಿ ಎಂದು ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ‘ಕಾಫಿ ವಿಥ್ ಕರಣ್’ ವಿವಾದವನ್ನು ನೆನೆದಿದ್ದಾರೆ.

    ಇನ್‍ಸ್ಟಾಗ್ರಾಮ್ ಚಾಟ್ ಶೋನಲ್ಲಿ ಪಾಂಡ್ಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡುತ್ತಿದ್ದಾಗ 2019ರಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಕಾರ್ತಿಕ್ ಅವರು ಕರಣ್ ವಿಥ್ ಕಾಫಿ ಕಾರ್ಯಕ್ರಮ ಪ್ರಸ್ತಾಪಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಹಾರ್ದಿಕ್, “ಕಾಫಿ ತುಂಬಾ ದುಬಾರಿಯಾಗಿದೆ. ಹೀಗಾಗಿ ಗ್ರೀನ್ ಟೀ ಕುಡಿಯುತ್ತಿದ್ದೇನೆ. ನಾನು ಒಮ್ಮೆ ಮಾತ್ರ ಕಾಫಿ ಕುಡಿದಿದ್ದೇನೆ. ಆ ಕಾಫಿ ತುಂಬಾ ದುಬಾರಿಯಾಗಿತ್ತು. ಸ್ಟಾರ್‌ ಬಕ್ಸ್‌ನಲ್ಲಿ ಅಂತಹ ದುಬಾರಿ ಕಾಫಿ ಕೂಡ ಇಲ್ಲ. ಆ ದಿನದ ನಂತರ, ನಾನು ಕಾಫಿಯನ್ನೇ ತ್ಯಜಿಸಿದೆ” ಎಂದು ಹೇಳಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಟೂರ್ನಿ ನಡೆಸುವ ಕುರಿತು ಕೆಲವು ಸಲಹೆಗಳು ಕೇಳಿಬಂದವು. ಈ ಪೈಕಿ ಖಾಲಿ ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯವನ್ನು ನಡೆಯುವುದು ಒಂದಾಗಿದೆ. ಈ ವಿಚಾರವಾಗಿ ಮಾತನಾಡಿದ ಹಾರ್ದಿಕ್, “ಪ್ರೇಕ್ಷಕರಿಲ್ಲದೆ ಆಡುವುದು ವಿಭಿನ್ನ ಅನುಭವವಾಗಿರುತ್ತದೆ. ಸತ್ಯವೆಂದರೆ ನಮಗೆ ಪ್ರೇಕ್ಷಕರು ತುಂಬಿದ ಕ್ರೀಡಾಂಗಣದಲ್ಲಿ ಆಡುವ ಅಭ್ಯಾಸವಿದೆ. ನಾನು ಪ್ರೇಕ್ಷಕರಿಲ್ಲದೆ ರಂಜಿ ಟ್ರೋಫಿಯನ್ನು ಆಡಿದ್ದೇನೆ. ಅದು ವಿಭಿನ್ನ ಅನುಭವವಾಗಿದೆ. ನಿಜ ಹೇಳಬೇಕೆಂದರೆ, ಪ್ರೇಕ್ಷಕರಿಲ್ಲದೆ ಐಪಿಎಲ್ ಆಡುವುದು ಉತ್ತಮ ಆಯ್ಕೆಯಾಗಿದೆ. ಮನೆಯಲ್ಲಿರುವ ಜನರಿಗೆ ಮನರಂಜನೆ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

    ಖಾಸಗಿ ಟಿವಿ ಚಾನೆಲ್‍ವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ 2018ರಲ್ಲಿ ಭಾಗವಹಿಸಿದ್ದರು. ಈ ವೇಳೆ ಹಾರ್ದಿಕ್ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಇದರಿಂದ ಅವರು ತಾತ್ಕಾಲಿಕ ನಿಷೇಧಕ್ಕೂ ಒಳಗಾಗಿದ್ದರು. ಬಳಿಕ ಅವರಿಗೆ ಬಿಸಿಸಿಐ ದಂಡ ವಿಧಿಸಿತ್ತು.