Tag: ಕಾಫಿ ಬೆಳೆಗಾರರು

  • ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು – ಬಿಜೆಪಿ ನಿಯೋಗದಿಂದ ಸರ್ವೇ ಕಾರ್ಯ

    ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು – ಬಿಜೆಪಿ ನಿಯೋಗದಿಂದ ಸರ್ವೇ ಕಾರ್ಯ

    – ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ಸಮೀಕ್ಷೆ
    – ಬೆಳೆಗಾರರಿಗೆ ಕನಿಷ್ಠ 2 ಲಕ್ಷ ಪರಿಹಾರಕ್ಕೆ ಆಗ್ರಹ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಈ ಬಾರಿ ಮೇ ತಿಂಗಳಿನಿಂದಲ್ಲೇ ನಿರಂತರ ಮಳೆಯಾಗುತ್ತಿರುವುದರಿಂದ (Rainfall) ನಾನಾ ರೀತಿಯ ಅವಾಂತರ ಮುಂದುವರೆದಿದೆ. ಅಲ್ಲದೆ ಸುರಿಯುತ್ತಿರುವ ಮಳೆಯ ಪರಿಣಾಮ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಹಲವಾರು ಭಾಗದಲ್ಲಿ ಕಾಫಿ ಬೆಳೆಗಳು (Coffee Crop) ನೆಲಕಚ್ಚಿದೆ. ಕಾಫಿ ತೋಟಗಳು ಸಂಪೂರ್ಣವಾಗಿ ಹಾಳಾಗಿದ್ದು ಈ ವರ್ಷ ಹಾಗೂ ಮುಂದಿನ ವರ್ಷಕ್ಕೆ ಬೆಳೆಯೇ ಇಲ್ಲದಂತಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.

    ಕಾಫಿ ಬೆಳೆಗಾರರ ಸ್ಥಿತಿಯನ್ನ ಅರಿತ ಕೊಡಗಿನ ಬಿಜೆಪಿ ನಿಯೋಗ ಕಾಫಿ ತೋಟಗಳಲ್ಲಿ ಸರ್ವೇ ಕಾರ್ಯ (Crop Survey) ನಡೆಸಿ ಕೇಂದ್ರ ಹಾಗೂ ರಾಜ್ಯ ‌ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದೆ..

    ಜಿಲ್ಲೆಯಲ್ಲಿ ಈ ಬಾರಿ ದೀರ್ಘಾವಧಿ ಮಳೆ ಆಗಿರುವುದರಿಂದ ಪ್ರಮುಖ ಬೆಳೆ ಕಾಫಿ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳಿಗೂ ಕೊಳೆ ರೋಗದ ಸಮಸ್ಯೆ ಎದುರಾಗಿದೆ. ಅತಿಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈಗಾಗಲೇ ಕಾಫಿ ಉದುರಲಾರಂಭಿಸಿದೆ. ಇದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಫಿ ಉತ್ಪಾದನೆದು ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಜಿಲ್ಲೆಯಲ್ಲಿ ಶೀತಗಾಳಿ ಹೆಚ್ಚಾಗಿರುವ ಪರಿಣಾಮ ತೋಟಗಾರಿಕಾ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಮುಖ್ಯವಾಗಿ ಕಾಫಿ ಬೆಳೆ ಗಾರರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ.

    ಜೊತೆಗೆ ಕಾಳು ಮೆಣಸು, ಅಡಿಕೆ ಸೇರಿದಂತೆ ಎಲ್ಲಾ ರೀತಿಯ ತೋಟಗಾರಿಕಾ ಬೆಳೆಗಳಿಗೆ ಸಮಸ್ಯೆ ಉಂಟಾಗಿದೆ. ಕೊಡಗಿಗೆ ನಿರಂತರವಾಗಿ ಮಳೆ ಬಂದ್ರೆ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರು ಬಂತು ಎಂದು ನಿಟ್ಟುಸಿರು ಬೀಡುತ್ತಾರೆ‌. ಆದರೆ ಇಲ್ಲಿನ ಜನರ ಪರಿಸ್ಥಿತಿಯ ಬಗ್ಗೆ ಯಾರಿಗೂ ಅರಿವು ಅಗೋಲ್ಲ. ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೂ ನಿರಂತರವಾಗಿ 200 ಮೀಮಿ ನಷ್ಟು ಮಳೆ ಆಗಿದೆ. ಇದರಿಂದ ಮುಂದಿನ ವರ್ಷದ ಬೆಳೆ ಪ್ರಮಾಣದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣವೇ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಬಿಜೆಪಿ ನಿಯೋಗದಿಂದ ಸಮೀಕ್ಷೆ
    ಕೊಡಗಿನ ಬಿಜೆಪಿ ನಾಯಕರು ಸೋಮವಾರಪೇಟೆ ತಾಲ್ಲೂಕು ಹಾಗೂ ಮಡಿಕೇರಿ ತಾಲೂಕಿನ ಹಲವಾರು ಗ್ರಾಮೀಣ ಭಾಗದ ಕಾಫಿ ತೋಟಗಳಿಗೆ ತೆರಳಿ ಕಾಫಿ ತೋಟಗಳ ಸರ್ವೇ ಕಾರ್ಯ ನಡೆಸಿದ್ದಾರೆ.

    2 ಲಕ್ಷ ಪರಿಹಾರಕ್ಕೆ ಆಗ್ರಹ
    ಈ ಕುರಿತು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹಾಗೂ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತಾನಾಡಿ, ‘ಅತೀ ಹೆಚ್ಚು ಮಳೆಯಾಗಿರುವ ತೋಳೂರು ಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಹಮ್ಮಿಯಾಲ, ಮುಟ್ಟು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ಬಲ್ಲಮಾವಟಿ, ಕಕ್ಕಬ್ಬೆ ವಿಭಾಗಗಳಿಗೆ ಪಕ್ಷದ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಭಾರೀ ಮಳೆಯಿಂದ ಜಿಲ್ಲೆಯ ಪ್ರಮುಖ ಕೃಷಿಯಾದ ಕಾಫಿಗೆ ಅಪಾರ ಹಾನಿಯಾಗಿದೆ. ಅರೇಬಿಕಾ ಕಾಫಿ ಫಸಲು ಅಧಿಕ ಮಳೆಯಿಂದ ಕೊಳೆತು ಉದುರಿದ್ದರೆ, ರೋಬಸ್ಟಾ ಕಾಫಿಯೂ ಕೊಳೆ ರೋಗದ ಸಮಸ್ಯೆಗೆ ತುತ್ತಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಿದ್ದೂ ಜಿಲ್ಲೆಯ ಶಾಸಕರಾಗಲಿ, ಉಸ್ತುವಾರಿ ಸಚಿವರಾಗಲಿ ಕಾಳಜಿ ವಹಿಸಿಲ್ಲವೆಂದು ಆರೋಪಿಸಿದ್ದಾರೆ. ಪ್ರಸ್ತುತ ಪರಿಸ್ಥಿಗಳ ನಡುವೆ ಬೆಳೆಗಾರಿಗೆ ತಲಾ 2 ಲಕ್ಷ ಪರಿಹಾರವನ್ನಾದರೂ ನೀಡಬೇಕೆಂದು ಆಗ್ರಹಿಸಿದ್ದಾರೆ.

    ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸತತ 3 ವರ್ಷ ಬೆಳೆಗಾರರಿಗೆ ಪರಿಹಾರ ವಿತರಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪರಿಹಾರ ನೀಡಿಲ್ಲ. ಇದೀಗ ಬೆಳೆಹಾನಿ ಸಮೀಕ್ಷಾ ತಂಡವನ್ನು ಜಿಲ್ಲಾಡಳಿತ ರಚಿಸಿದೆ. ಇದು ಸಮೀಕ್ಷೆ ಮಾಡುವುದರ ಒಳಗಾಗಿ ಕೊಳೆತು ಉದುರಿ ಹೋಗಿರುವ ಕಾಫಿ ಕರಗಿ ಹೋಗಿರುತ್ತದೆ. ಆಗ ನಿಖರ ಮಾಹಿತಿ ದೊರೆಯುವುದಿಲ್ಲ. ಆದ್ದರಿಂದ ನಮ್ಮ ಪಕ್ಷದ ನಿಯೋಗ ಸಮೀಕ್ಷೆರ ನಡೆಸುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರಕ್ಕೆ ಸಮೀಕ್ಷೆ ವರದಿ ನೀಡಲಾಗುತ್ತದೆ ಎಂದು ವಿವರಿಸಿದ್ರು.

  • ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

    ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಅಮಾನವೀಯವಾಗಿದೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಟೀಕಿಸಿದರು.

    ಕರ್ಫ್ಯೂ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಈಗ ಕಾಫಿ ಬೆಳೆಗಾರರು ತಮ್ಮ ಫಸಲನ್ನು ಕಟಾವು ಮಾಡುವ ಸಮಯ. ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರು, ರೈತರ ಜೀವನೋಪಾಯಕ್ಕೆ ಮಾರಕವಾದಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಕೃಷಿ ಚಟುವಟಿಕೆಗಳಿಗೆ ಅನ್ವಯ ಆಗದಂತೆ ಈ ಕೂಡಲೇ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲದೆ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಹಾಸ್ಯಾಸ್ಪದವಾದ ಕ್ರಮ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ತಮ್ಮ ವಿವೇಚನೆಯನ್ನು ಬಳಸಿ ಕಾನೂನನ್ನು ಜನರ ಪರವಾಗಿ ಅಳವಡಿಸಬೇಕೇ ಹೊರತು ಜನವಿರೋಧಿ ನೀತಿಗಳಿಗೋಸ್ಕರ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

    ಕೂಡಲೇ ಜಿಲ್ಲಾಧಿಕಾರಿಗಳು ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ಹಾಗೂ ಇತರ ಯಾವುದೇ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಆದೇಶವನ್ನು ಹೊರಡಿಸಿ. ಈ ವೀಕೆಂಡ್ ಕರ್ಫ್ಯೂವನ್ನು ಸಡಿಲಗೊಳಿಸಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

    ಯಾವುದೇ ಕಾನೂನಾತ್ಮಕವಾದಂತಹ ಕ್ರಮಗಳನ್ನು ಕೈಗೊಳ್ಳುವ ಮೊದಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಈ ಒತ್ತಾಯವನ್ನು ಪರಿಗಣಿಸಬೇಕು. ಈ ಒತ್ತಾಯವನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಲುಪಿಸಿ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

  • ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ – ಸೀತಾರಾಮನ್ ಬಳಿ ಕೊಡಗಿನ ನಿಯೋಗ ಮನವಿ

    ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ – ಸೀತಾರಾಮನ್ ಬಳಿ ಕೊಡಗಿನ ನಿಯೋಗ ಮನವಿ

    ಮಡಿಕೇರಿ: ಕಾಫಿ ಕೃಷಿ ಮತ್ತು ಕಾಫಿ ಉದ್ಯಮದ ಸಮಸ್ಯೆಗಳ ಸಂಬಂಧಿತ ಬಜೆಟ್ ಪೂರ್ವಭಾವಿಯಾಗಿ ಕರ್ನಾಟಕದ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿತು.

    ಕರ್ನಾಟಕ ಬೆಳೆಗಾರರ ಒಕ್ಕೂಟ, ರಾಜ್ಯ ಪ್ಲಾಂಟರ್ಸ್ ಅಸೋಸಿಯೇಷನ್, ಜಿಲ್ಲಾ ಪ್ಲಾಂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ನಿಯೋಗ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆಯೊಂದಿಗೆ ಚರ್ಚೆ ನಡೆಸಿತು.

    ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ, ವಲಯವನ್ನು ಪುನಶ್ಚೇತನಗೊಳಿಸಲು ಸಣ್ಣ ಮತ್ತು ದೀರ್ಘಾವಧಿಯ ಕ್ರಮ ಕೈಗೊಳ್ಳುವಂತೆ ಸಚಿವರೊಂದಿಗೆ ಕಾಫಿ ಬೆಳೆಗಾರರ ನಿಯೋಗ ಚರ್ಚಿಸಿತು. ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್, ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿರೀಷ್ ವಿಜಯೇಂದ್ರ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಸಿ.ಕರಿಯಪ್ಪ, ಪ್ರದೀಪ್ ಪೂವಯ್ಯ ಇದ್ದರು. ಇದೇ ಸಂದರ್ಭ ನಿಯೋಗವು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೂ ಕಾಫಿ ಸಮಸ್ಯೆ ಸಂಬಂಧಿತ ಮನವಿಯನ್ನು ಸಲ್ಲಿಸಿದ್ದಾರೆ.

    ನಿಯೋಗದ ಬೇಡಿಕೆಗಳು: ಪ್ರಸ್ತುತ ಕಾಫಿ ಬೆಲೆಯು ಗಣನೀಯವಾಗಿ ಇಳಿಕೆ ಕಂಡಿದ್ದು, ಉತ್ಪಾದನಾ ವೆಚ್ಚವು ಅಧಿಕವಾಗಿದೆ. ಪ್ರತಿ ಎಕರೆಗೆ 30ರಿಂದ 40 ಸಾವಿರ ನಷ್ಟ ಸಂಭವಿಸುತ್ತಿದೆ. 2012 ಮತ್ತು 2016ರಲ್ಲಿ ಉಂಟಾದ ಅನಾವೃಷ್ಟಿಯಿಂದ ಹಾಗೂ 2018 ಮತ್ತು 2019ರಲ್ಲಿ ಉಂಟಾದ ತೀವ್ರ ಅತಿವೃಷ್ಟಿಯಿಂದ ಕಾಫಿ ಉತ್ಪಾದನೆಯೂ ಕುಂಠಿತಗೊಂಡಿದೆ.

    ನಷ್ಟದ ಪರಿಣಾಮ ಕಾಫಿ ಬೆಳೆಗಾರರು ಬ್ಯಾಂಕಿನಲ್ಲಿ ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಅಸಹಾಯಕರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಶೇಷವಾದ ಸಾಲಮನ್ನಾ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಎಲ್ಲಾ ಸಹಕಾರಿ, ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬೆಳೆಗಾರರಿಗೆ ಶೇ.6ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಡಬೇಕು. ಸಿಬಿಎಲ್ಸಿಯಿಂದ ಕೃಷಿ ಸಾಲವನ್ನು ಹೊರಗಿಡಬೇಕು. ಕಾಫಿ ಬೆಳೆಗಾರರ ಸಾಲಗಳನ್ನು ಮರು ಹೊಂದಾಣಿಕೆಗೊಳಿಸುವುದು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಕಾಫಿಯನ್ನು ಸೇರಿಸಬೇಕು ಎಂದು ಕೋರಿದರು.

    ಭತ್ತ, ಕಾಳುಮೆಣಸು, ಅಡಿಕೆ, ಮುಂತಾದ ಬೆಳೆಗಳಿಗೆ ಬೆಳೆವಿಮೆಯನ್ನು ನೀಡಲಾಗುತ್ತಿದ್ದು, ಮುಖ್ಯವಾಗಿ ಈ ಭಾಗದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಆದರೆ, ಬೆಳೆ ವಿಮೆಯಿಂದ ಕಾಫಿ ಬೆಳೆಯನ್ನು ಹೊರಗಿಡಲಾಗಿದೆ. ಹೀಗಾಗಿ ಕಾಫಿಗೂ ಬೆಳೆ ವಿಮೆ ನೀಡುವಂತೆ ಕೇಳಿಕೊಂಡಿದ್ದಾರೆ.