Tag: ಕಾಫಿ ಡೇ

  • 5 ಲಕ್ಷ ರೂ. ಹಿಡಿದು ಮುಂಬೈ ಹೋಗಿ, ದೇಶವೇ ನೋಡುವಂತೆ ಬೆಳೆದ್ರು ಸಿದ್ಧಾರ್ಥ್

    5 ಲಕ್ಷ ರೂ. ಹಿಡಿದು ಮುಂಬೈ ಹೋಗಿ, ದೇಶವೇ ನೋಡುವಂತೆ ಬೆಳೆದ್ರು ಸಿದ್ಧಾರ್ಥ್

    – ಕಂಪನಿ ಸಿಬ್ಬಂದಿ ಕಣ್ಣೀರು

    ಚಿಕ್ಕಮಗಳೂರು: ಖ್ಯಾತ ಉದ್ಯಮಿ ಸಿದ್ಧಾರ್ಥ್ ನಿಗೂಢವಾಗಿ ಕಣ್ಮರೆಯಾಗಿರುವುದು ಅವರ ಹುಟ್ಟೂರು ಚಿಕ್ಕಮಗಳೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಅವರ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯುತ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರುದ್ರೇಶ್ ಕಡೂರು ಕೆಲವೊಂದು ವಿಚಾರಗಳನ್ನು ಪಬ್ಲಿಕ್ ಟಿವಿ ಜೊತೆಗೆ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

    ಸಿದ್ಧಾರ್ಥ್ ಅವರ ತಂದೆ ನೀಡಿದ ಮಾಹಿತಿ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು. ಕೆಲ ದಿನಗಳ ಬಳಿಕ ನಾನು ಮುಂಬೈಗೆ ಹೋಗಬೇಕು, 5 ಲಕ್ಷ ರೂ. ಕೊಡಿ ಎಂದು ಪಟ್ಟು ಹಿಡಿದಿದ್ದರು. ಮಗನಿಗೆ ಹಣ ನೀಡಲು ಸಿದ್ಧಾರ್ಥ್ ಅವರ ತಂದೆ ಸ್ವಲ್ಪ ಜಮೀನು, ಜಾಗ ಮಾರಾಟ ಮಾಡಿದ್ದರು ಎಂದು ರುದ್ರೇಶ್ ಕಡೂರು ತಿಳಿಸಿದ್ದಾರೆ.

    ಅಂದು 5 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದ ಸಿದ್ಧಾರ್ಥ್ ಅವರು ಕೆಲವೇ ವರ್ಷಗಳಲ್ಲಿ ಪ್ರಪಂಚವೇ ಅವರತ್ತ ನೋಡುವಂತೆ ಬೆಳೆದರು. ಅವರನ್ನು ನಂಬಿ ಇಂದು ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ದನಿ ನಮ್ಮನ್ನ ಬಿಟ್ಟು ಎಲ್ಲಿಗೆ ಹೋದರು ಎನ್ನುವಷ್ಟು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

    ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂದಾಜು 13 ಸಾವಿರ ಎಕರೆ ಕಾಫಿ ತೋಟ ಹೊಂದಿದ್ದಾರೆ. ಅವರ ವಿವಿಧ ಕಂಪನಿಗಳಲ್ಲಿ ಸುಮಾರು ಒಂದು ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಟಿವಿ ಆನ್ ಮಾಡುತ್ತಿದ್ದಂತೆ ಸಿದ್ಧಾರ್ಥ್ ಅವರು ನಾಪತ್ತೆ ಸುದ್ದಿ ಕೇಳಿ ದುಃಖವಾಯಿತು ಎಂದು ಭಾರವಾದ ಮನಸ್ಸಿನಿಂದ ಹೇಳಿದರು.

    ಸಿದ್ಧಾರ್ಥ್ ಅವರು ಚಿಕ್ಕಮಗಳೂರು, ಕರ್ನಾಟಕದ ಆಸ್ತಿ. ಅನೇಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅವರು ವಾಪಸ್ ಬರಲಿ ಎಂದು ದೇವರಲ್ಲಿ ಪಾರ್ಥಿಸುತ್ತಿದ್ದೇವೆ ಎಂದು ತಿಳಿಸಿದರು.

  • ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ದಾರ್ಥ್ ನಾಪತ್ತೆಯಾಗಿ ಸುಮಾರು 15-16 ಗಂಟೆಯಾದ್ರೂ ಇನ್ನೂ ಯಾವುದೇ ಸುಳಿಯೂ ಪತ್ತೆಯಾಗಿಲ್ಲ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಸತತವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಸಿದ್ಧಾರ್ಥ್ ಅವರು ಒಬ್ಬ ಆಗರ್ಭ ಶ್ರಿಮಂತರಾಗಿದ್ದು, ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದರು. ಸಿದ್ಧಾರ್ಥ್ ಅವರು ಚಿಕ್ಕಮಗಳೂರಿನಲ್ಲಿ ಅಂದಾಜು 25 ಸಾವಿರಕ್ಕೂ ಅಧಿಕ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ. ಜೊತೆಗೆ ಐಷಾರಾಮಿ ಸೆರಾಯ್ ಹೊಟೇಲ್ ಮಾಲೀಕರು ಆಗಿದ್ದಾರೆ. ಅಷ್ಟೇ ಅಲ್ಲದೆ ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಮಾಲೀಕರಾಗಿದ್ದಾರೆ.

    ಎಬಿಸಿ ಕಾಫಿ ಕ್ಯೂರಿಂಗ್ ಮಾಲೀಕರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಅಂದಾಜು 50 ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ನೋಡಲು ತುಂಬಾ ಸರಳವಾಗಿರುತ್ತಿದ್ದ ಸಿದ್ದಾರ್ಥ್ ಅವರ ಸರಳ ಜೀವನ ಶೈಲಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಕೋಟಿಗಳ ಒಡೆಯರಾಗಿದ್ದರು. ಸಿದ್ಧಾರ್ಥ್ ಅವರು ತುಂಬಾ ಸರಳವಾಗಿರುತ್ತಿದ್ದರು. ಹಣವಿದೆ ಎಂದು ದರ್ಪ ತೋರುತ್ತಿರಲಿಲ್ಲ.

    ತಮ್ಮ ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ.

  • ಎಸ್‍ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ

    ಎಸ್‍ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ

    ಮಂಗಳೂರು: ಉದ್ಯಮಿ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಾರಿನ ಡ್ರೈವರ್ ಬಸವರಾಜ್ ಅವರನ್ನು ಕಂಕನಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ನೇತ್ರಾವತಿ ಸೇತುವೆಯ ಬಳಿ ತೀವ್ರ ಆತಂಕ ಎದುರಾಗಿದ್ದು, ಇತ್ತ ಕಂಕನಾಡಿ ಪೊಲೀಸರು ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಒಂದೆ ಕತ್ತಲು ಹಾಗೂ ಇನ್ನೊಂದೆಡೆ ಮಳೆ ಸುರಿಯುತ್ತಿದ್ದರಿಂದ ಹುಡುಕಾಟ ನಡೆಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಸ್ಥಳಕ್ಕೆ ಸಾಕಷ್ಟು ಮಂದಿ ಪೊಲೀಸರು, ಅಗ್ನಿಶಾಮಕ ದಳ, ಹಾಗೂ ಸಾರ್ವಜನಿಕರು ದೌಡಾಯಿಸಿ ಸಿದ್ದಾರ್ಥ್ ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. 2 ಬೋಟ್ ಗಳಲ್ಲಿ ಈಜು ತಜ್ಞರು ಶೋಧ ಕಾರ್ಯ ಕೈಗೊಂಡಿದ್ದಾರೆ.

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಐಟಿ ದಾಳಿ – ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ರೇಡ್

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಐಟಿ ದಾಳಿ – ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ರೇಡ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಐಟಿ ದಾಳಿ ನಡೆದಿದೆ.

    ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕಾಫಿ ಡೇ ಸಮೂಹದ ಮುಖ್ಯಸ್ಥರ ಮನೆ, ಮಲ್ಯ ರಸ್ತೆಯಲ್ಲಿರುವ ಮುಖ್ಯ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸ್ತಿದ್ದಾರೆ. ಬೆಂಗಳೂರು ಮತ್ತು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಐಟಿ ಅಸಿಸ್ಟೆಂಟ್ ಡೈರೆಕ್ಟರ್ ಶರೀಫ್ ನೇತೃತ್ವದಲ್ಲಿ 10 ಅಧಿಕಾರಿಗಳಿಂದ ತಪಾಸಣೆ ನಡೆಯುತ್ತಿದೆ. ಹೋಟೆಲ್ ಸೆರಾಯ್ ಹಾಗೂ ಎಬಿಸಿ ಕಾಫಿ ಡೇ ಗ್ಲೋಬಲ್ ಕಚೇರಿ ಮೇಲೆ ದಾಳಿ ನಡೆದಿದೆ. ಚಿಕ್ಕಮಗಳೂರು ನಗರದ ಮೂಡಿಗೆರೆಯ ರಸ್ತೆಯಲ್ಲಿರುವ ಹೋಟೆಲ್ ಹಾಗೂ ಕಂಪನಿಗಳ ಮೇಲೆ ಪೊಲೀಸ್ ಭದ್ರತೆಯೊಂದಿಗೆ ದಾಳಿ ನಡೆದಿದೆ.