Tag: ಕಾಫಿನಾಡು

  • ಕಾಫಿನಾಡಲ್ಲಿ ಮನೆ-ಮನೆಗೆ ತೆರಳಿ ಸಿ.ಟಿ.ರವಿ ಭಿಕ್ಷಾಟನೆ

    ಕಾಫಿನಾಡಲ್ಲಿ ಮನೆ-ಮನೆಗೆ ತೆರಳಿ ಸಿ.ಟಿ.ರವಿ ಭಿಕ್ಷಾಟನೆ

    ಚಿಕ್ಕಮಗಳೂರು: ದತ್ತಜಯಂತಿ (Datta Jayanti) ಹಿನ್ನೆಲೆ ಶಾಸಕ, ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T Ravi) ಮನೆ-ಮನೆಗೆ ತೆರಳಿ ಭಿಕ್ಷಾಟನೆ (Ritual Begging) ನಡೆಸಿದ್ದಾರೆ.

    ನಗರದ ನಾರಾಯಣಪುರ, ರಾಘವೇಂದ್ರ ಮಠ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಸಾರ್ವಜನಿಕರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ ಅಡಿಕೆ-ಬೆಲ್ಲ ನೀಡಿದರು. ಇಂದು ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ನಾಳೆ ಇರುಮುಡಿ ರೂಪದಲ್ಲಿ ಅದನ್ನು ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: 108 ಅಂಬುಲೆನ್ಸ್ ಸಿಬ್ಬಂದಿ ಉದ್ಧಟತನ – ಗಾಯಾಳುವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಾಪಸ್

    ಪಡಿ ಸಂಗ್ರಹಕ್ಕೆ ಶಾಸಕ ಸಿ.ಟಿ. ರವಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳು ಸಾಥ್ ನೀಡಿದ್ದಾರೆ. ದತ್ತಪೀಠಕ್ಕೆ ಸಚಿವ ಸುನಿಲ್ ಕುಮಾರ್ (Sunil Kumar) ಭೇಟಿ ನೀಡಿ ದತ್ತಪಾದುಕೆ ದರ್ಶನ ಮಾಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷದ ದತ್ತಜಯಂತಿ ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಕೂಡಿದೆ. ಇಷ್ಟು ದಿನ ದತ್ತಾತ್ರೇಯರ ಪಾದುಕೆ ದರ್ಶನ ಮಾಡಿಕೊಂಡು ಹೋಗುತ್ತಿದ್ದೇವು. ಆದರೆ, ಈ ವರ್ಷ ದತ್ತಪಾದುಕೆ ದರ್ಶನದ ಜೊತೆ ಹಿಂದೂ ಅರ್ಚಕರಿಂದ ಪೂಜೆ, ಮಂಗಳಾರತಿಯನ್ನು ನೋಡುವ ಭಾಗ್ಯ ಲಭಿಸಿದೆ. ಹಾಗಾಗಿ, ಈ ವರ್ಷದ ದತ್ತಜಯಂತಿ ಹಿಂದೂ ಸಮುದಾಯ ಮತ್ತು ದತ್ತಭಕ್ತರಿಗೆ ಅತ್ಯಂತ ಸಂತಸದ ದಿನ. ಹಲವು ವರ್ಷಗಳಿಂದ ನಮ್ಮ ಬೇಡಿಕೆ ಇದ್ದದ್ದೆ ದತ್ತಾತ್ರೇಯರ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜೆ ಜೊತೆ, ತ್ರಿಕಾಲ ಪೂಜೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದೆವು. ಅದರಿಂದ ಬಿಜೆಪಿ ಸರ್ಕಾರ ಇಂದು ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಿಸಿ ಹಿಂದೂ ಅರ್ಚಕರಿಂದ ಪೂಜೆ ನೋಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಹಿಂದೂ ಹುಲಿನೇ, ಮುಲ್ಲಾ ಅಂತ ಕರೆಯೋಕ್ಕಾಗಲ್ಲ: ಸಿ.ಟಿ ರವಿ

    ಇದು ಹಿಂದೂಬಾಂಧವರಿಗೆ ಅತ್ಯಂತ ಸಂಭ್ರಮದ ದಿನ. ಇಂದು ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಪಾರ್ಕಿಂಗ್ ಕ್ಯಾನ್ಸಲ್ ಮಾಡಿದ್ದು, ಬೆಳಗ್ಗೆಯಿಂದಲೂ ಪೊಲೀಸರು ಕಾವಲಿದ್ದು, ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಮಾರ್ಟ್ ಸ್ಟೆತಸ್ಕೋಪ್ ಆವಿಷ್ಕಾರ – ಕಾಫಿನಾಡ ಯುವಕನ ಸಾಧನೆ

    ಸ್ಮಾರ್ಟ್ ಸ್ಟೆತಸ್ಕೋಪ್ ಆವಿಷ್ಕಾರ – ಕಾಫಿನಾಡ ಯುವಕನ ಸಾಧನೆ

    ಚಿಕ್ಕಮಗಳೂರು: ವೈದ್ಯರು ಕುಳಿತ ಜಾಗದಿಂದಲೇ ಮೊಬೈಲ್, ಲ್ಯಾಪ್‍ಟಾಪ್‍ನಿಂದ ಹೃದಯ ಬಡಿತ ಹಾಗೂ ಶ್ವಾಸಕೋಶದಲ್ಲಿನ ಉಸಿರಾಟದ ಶಬ್ದವನ್ನು ಗಮನಿಸಬಹುದಾದ ಸ್ಮಾರ್ಟ್ ಸ್ಟೆತಸ್ಕೋಪನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಯ ತಂಡ ಸಂಶೋಧಿಸಿದ್ದು, ಈ ಸ್ಮಾರ್ಟ್ ಸ್ಟೆತಸ್ಕೋಪ್ ಸಂಶೋಧನೆಯ ತಂಡದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಯುವಕ ಆದರ್ಶ್ ಕೂಡ ಇದ್ದಾರೆ.

    2015ರಿಂದ ಬಾಂಬೆಯ ಐಐಟಿ ಸಂಸ್ಥೆಯಲ್ಲಿ ಲ್ಯಾಬ್ ರಿಸರ್ಚರ್ ಆಗಿ ಸೇರಿಕೊಂಡ ಆದರ್ಶ್ ಅವರು ಎರಡು ವರ್ಷಗಳ ಕಾಲ ಸ್ಮಾರ್ಟ್ ಸ್ಟೆತಸ್ಕೋಪ್ ಬಗ್ಗೆ ಅಧ್ಯಯನ ಮಾಡಿದ್ದಾರೆ. ಐಐಟಿ ಸಂಸ್ಥೆಯ ಹಿರಿಯ ವೈದ್ಯರ ಸಲಹೆ ಮೇರೆಗೆ ಡಾ.ರವಿ, ಕೆ.ಆದರ್ಶ್, ರೂಪೇಶ್, ತಪಸ್ವಿ, ಡಾ.ಪೀಂಟೋರನ್ನ ಒಳಗೊಂಡ ತಂಡ ಈ ಸಾಧನೆ ಮಾಡಿದೆ.

    ಚಿಕ್ಕಮಗಳೂರಿನ ಯುವಕ ಸಂಶೋಧನೆ ನಡೆಸಿರೋ ಈ ಸ್ಮಾರ್ಟ್ ಸ್ಟೆತಸ್ಕೋಪ್‍ನಿಂದ ಕೊರೊನ ಸೋಂಕಿತರ ಪರೀಕ್ಷೆ ಈಗ ಇನ್ನಷ್ಟು ಸುಲಭವಾಗಿದೆ. ಇದರಿಂದ ವೈದ್ಯರು ಕುಳಿತಲ್ಲೇ ಎಲ್ಲೋ ಇರುವ ರೋಗಿಯನ್ನು ಪರೀಕ್ಷೆ ಮಾಡಬಹುದು. ಈ ಸ್ಮಾರ್ಟ್ ಸ್ಟೆತಸ್ಕೋಪ್‍ನಲ್ಲಿ ಬ್ಲೂಟೂತ್‍ನಿಂದಲೂ ವೈದ್ಯರು ಕುಳಿತಲ್ಲೇ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮೂಲಕ ಎದೆಬಡಿತ ಹಾಗೂ ಉಸಿರಾಟದ ಪರೀಕ್ಷೆ ಮಾಡಬಹುದು. ಮುಂಬೈನಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಮುಂಬೈ ವೈದ್ಯರು ಈ ಸ್ಮಾರ್ಟ್ ಸ್ಟೆತಸ್ಕೋಪ್ ಬಳಕೆಗೆ ಮುಂದೆ ಬಂದಿದ್ದಾರೆ. ಈ ಸ್ಟೆತಸ್ಕೋಪ್ ಬಾಂಬೆ ಐಐಟಿಯಲ್ಲಿ 2018ರಲ್ಲಿ ಬಿಡುಗಡೆಯಾಗಿ, ಸಾವಿರಕ್ಕೂ ಹೆಚ್ಚು ಮಾರಾಟವಾಗಿದೆ.

    ಕೊರೊನಾ ರೋಗಿಗಳನ್ನು ವೈದ್ಯರು ಪರೀಕ್ಷಿಸುವಾಗ ದೇಹದ ತುಂಬಾ ಪಿಪಿಟಿ ಕಿಟ್ ಧರಿಸಿರುತ್ತಾರೆ. ಆಗ ಸ್ಟೆತಸ್ಕೋಪ್‍ನಲ್ಲಿ ಸೋಂಕಿತರ ಎದೆಬಡಿತ ಹಾಗೂ ಉಸಿರಾಟದ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ. ಕೊರೊನ ಸೋಂಕಿದ್ದರೆ ಶ್ವಾಸಕೋಶದಲ್ಲಿ ನಿಮೋನಿಯ ಹೆಚ್ಚಾಗುತ್ತದೆ. ಆಗ ಉಸಿರಾಟದ ಗ್ರಹಿಕೆಯೂ ಕಷ್ಟಕರವಾಗುತ್ತದೆ. ಆದರೆ ಈ ಹೊಸ ಸ್ಮಾರ್ಟ್ ಸ್ಟೆತಸ್ಕೋಪ್‍ನಲ್ಲಿ ಬ್ಲೂಟೂತ್ ಕನೆಕ್ಷನ್ ಇರುವುದರಿಂದ ವೈದ್ಯರು ಕುಳಿತಲ್ಲೇ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಸಹಾಯದಿಂದ ಎದೆಬಡಿತ ಹಾಗೂ ಉಸಿರಾಟ ಪರೀಕ್ಷೆ ನಡೆಸಬಹುದು ಎಂದು ಆದರ್ಶ್ ಹೇಳಿದ್ದಾರೆ.

    ಜಿಲ್ಲೆಯ ಕೊಪ್ಪದಲ್ಲಿ ಜನಿಸಿದ ಆದರ್ಶ್, ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಕೊಪ್ಪದಲ್ಲಿ ಮುಗಿಸಿ, ಶಿವಮೊಗ್ಗದ ಡಿವಿಎಸ್‍ನಲ್ಲಿ ಪಿಯುಸಿ ಓದಿದ್ದಾರೆ. ಬಳಿಕ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ವ್ಯಾಸಂಗದ ಬಳಿಕ ಮುಂಬೈನ ಎಲ್‍ಎಲ್‍ಟಿಯಲ್ಲಿ ಸಾಫ್ಟ್‍ವೇರ್ ಇಂಜಿಯರ್ ಹಾಗೂ ಮುಂಬೈನ ಐಐಟಿಯಲ್ಲಿ ಲಾಬ್ ರಿಸರ್ಚರ್ ಆಗಿ ಸೇವೆ ಸಲ್ಲಿಸಿದ್ದರು.

  • ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

    ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

    ಚಿಕ್ಕಮಗಳೂರು: ಕಾಫಿನಾಡಿನ ಶೃಂಗೇರಿಯಲ್ಲಿ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳ ಮಧ್ಯೆ ನಡೆಯುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್ ಬಿದ್ದಿದ್ದು, ಎರಡನೇ ದಿನದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದೂಡಿದೆ.

    ಪೊಲೀಸರ ಅನುಮತಿ ಇಲ್ಲದ ಕಾರಣ ಕಾರ್ಯಕ್ರಮವನ್ನು ಮುಂದೂಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ಸಮ್ಮೇಳನ ಅಧ್ಯಕ್ಷರ ವಿರುದ್ಧ ತೀವ್ರವಾದ ವಿರೋಧದ ಮಧ್ಯೆಯೂ ಶುಕ್ರವಾರ ಸಮ್ಮೇಳನ ಆರಂಭಗೊಂಡಿತ್ತು. ಮೆರವಣಿಗೆಗೆ ಪೊಲೀಸರ ಅನುಮತಿ ನೀಡದ ಕಾರಣ ಅಧ್ಯಕ್ಷರ ಮೆರವಣಿಗೆ ಇಲ್ಲದೆ ನೇರವಾಗಿ ವೇದಿಕೆ ಕಾರ್ಯಕ್ರಮದ ಮೂಲಕ ಸಮ್ಮೇಳನ ಆರಂಭವಾಗಿತ್ತು. ಆದರೆ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ, ನಕ್ಸಲ್ ವಿರೋಧಿ ಹೋರಾಟ ಸಮಿತಿ, ಶ್ರೀರಾಮಸೇನೆ ಸೇರಿದಂತೆ ಕೆಲವರು ಅಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು.

    ಕಳೆದೊಂದು ತಿಂಗಳಿಂದಲೂ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದ ಸಂಘಟನೆಗಳು ಶುಕ್ರವಾರ ಕೂಡ ಸಮ್ಮೇಳನದ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದ ಕಾರಣ ಮಧ್ಯಾಹ್ನದ ಕಾರ್ಯಕ್ರಮವನ್ನು ಮೊಟಕುಗೊಳಿಸುವಂತೆ ಪೊಲೀಸರು ಸಾಹಿತ್ಯ ಪರಿಷತ್‍ಗೆ ಸೂಚಿಸಿದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ನಿಲ್ಲಿಸಲು ಮೀನಾಮೇಶ ಎಣಿಸಿತ್ತು. ಅಷ್ಟೇ ಅಲ್ಲದೆ ಕಸಾಪ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸಿತ್ತು.

    ಶುಕ್ರವಾರ ಕಾರ್ಯಕ್ರಮಕ್ಕೂ ಪೊಲೀಸರು ಅನುಮತಿ ನೀಡದ ಹಿನ್ನೆಲೆ ಕಸಾಪ ಜನವರಿ 11ರಂದು ಸಮ್ಮೇಳನದ ಎರಡನೇ ದಿನ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದೆ. ಮುಂದಿನ ದಿನಾಂಕವನ್ನು ನಿರ್ಧರವಾಗಿಲ್ಲ. ಸರ್ಕಾರದ ವಿರುದ್ಧ ಕಾರ್ಯಕ್ರಮ ಮಾಡಿ ಕಸಾಪ ಗೆದ್ದಿದೆ. ಸರ್ಕಾರದ ಸಹಕಾರವಿಲ್ಲದ ಕಾರಣ ಕಾರ್ಯಕ್ರಮ ನಿಲ್ಲಿಸಿ ಸರ್ಕಾರವೂ ಗೆದ್ದಿದೆ. ಅಧ್ಯಕ್ಷರ ವಿರುದ್ಧ ಶೃಂಗೇರಿ ಬಂದ್ ಮಾಡಿ ಸಂಘಟನೆಗಳು ಗೆದ್ದವು. ಆದರೆ ಸರ್ಕಾರ ಹಾಗೂ ಕಸಾಪ ಮಧ್ಯೆ ಹೈರಾಣಾಗಿದ್ದು ಮಾತ್ರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಂಬ ಮಾತುಗಳು ಕೇಳಿ ಬಂದಿವೆ.

  • ಕಾಫಿನಾಡಲ್ಲಿ ಮಳೆಯ ಜೊತೆ ಭೂಮಿಯೊಳಗಿಂದ ಬರ್ತಿದೆ ವಿಚಿತ್ರ ಶಬ್ಧ – ಭಯದಲ್ಲಿದ್ದಾರೆ ಜನ

    ಕಾಫಿನಾಡಲ್ಲಿ ಮಳೆಯ ಜೊತೆ ಭೂಮಿಯೊಳಗಿಂದ ಬರ್ತಿದೆ ವಿಚಿತ್ರ ಶಬ್ಧ – ಭಯದಲ್ಲಿದ್ದಾರೆ ಜನ

    – ಹಾಸನದಲ್ಲೂ ಅಬ್ಬರಿಸುತ್ತಿರುವ ವರಣುದೇವ

    ಚಿಕ್ಕಮಗಳೂರು/ಹಾಸನ: ಕಾಫಿನಾಡಿನಲ್ಲಿ ಮತ್ತೆ ಮಳೆಯ ಅರ್ಭಟ ಶುರುವಾಗಿದ್ದು, ಮಳೆಯ ಜೊತೆ ಭೂಮಿಯೊಳಗಿಂದ ಬರುತ್ತಿರುವ ವಿಚಿತ್ರ ಶಬ್ಧ ಅಲ್ಲಿನ ಜನರು ಭಯಭೀತಾರನ್ನಾಗಿ ಮಾಡಿದೆ.

    ಮೂಡಿಗೆರೆ ತಾಲೂಕಿನಾದ್ಯಂತ ಬೈರಾಪುರ, ಊರುಬಗೆ ಮತ್ತು ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಊರುಬಗೆಯಲ್ಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಗದ್ದೆಗಳು ಜಲಾವೃತವಾಗಿವೆ. ಅಲೇಖಾನ್ ಹೊರಟ್ಟಿ, ಬಾಳೂರು, ಸುಂಕಸಾಲೆ, ದುರ್ಗದಹಳ್ಳಿಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ದುರ್ಗದಹಳ್ಳಿಯಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿರುವುದು ಜನರನ್ನು ಅತಂಕಕ್ಕೆ ಕಾರಣವಾಗಿದೆ. ಎನ್.ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲೂ ಮಳೆ ಮುಂದುವರಿದಿದೆ.

    ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಳಸ ಹೊರನಾಡಿನ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದೇ ಒಂದು ಅಡಿಯಷ್ಟು ಮಾತ್ರ ಬಾಕಿ ಉಳಿದಿದೆ. ದಿನ ಪೂರ್ತಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು. ಮತ್ತೆ ಮಲೆನಾಡಿನ ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

    ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರಿಸಿ ಹೋಗಿದೆ. ಧಾರಾಕಾರ ಮಳೆಗೆ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು, ಸಂಚಾರಕ್ಕೆ ವ್ಯತ್ಯಯವಾಗಿದೆ. ಹಲವಡೆ ವಿದ್ಯತ್ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಹೇಮಾವತಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಂದ ಜನರು ಹೊರಬರುತ್ತಿದ್ದಾರೆ. ಈ ನಡುವೆ ಮಳೆಯ ಕಾರಣದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶಾಲೆಗೆ ಹೋಗಲು ಪರದಾಡುವ ಸ್ಥಿತಿ ಉಂಟಾಗಿದೆ.

    ಹಾಸನ ಜಿಲ್ಲೆಯಲ್ಲಿ ಕಳೆದ ಆಗಸ್ಟ್ ಆರಂಭದಲ್ಲಿ ಆರ್ಭಟಿಸಿದ ಮಳೆಯಾಘಾತದಿಂದ ಇನ್ನೂ ಸಂತ್ರಸ್ತರು ಸುಧಾರಿಸಿಕೊಂಡಿಲ್ಲ. ಮಳೆಯಿಂದ ತತ್ತರಿಸಿರುವ ಸಕಲೇಶಪುರ, ಅರಕಲಗೂಡು, ಆಲೂರು ಸೇರಿದಂತೆ ಜನ ಜಾನುವಾರು ಸುಭದ್ರ ನೆಲೆಗಾಗಿ ಹುಡುಕಾಟ ಮುಂದುವರಿಸಿದ್ದು, ಹೊಸ ಜೀವನದ ಕನಸಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆಯೇ ಕಳೆದ ಹದಿನೈದು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಆರಂಭವಾಗಿರುವುದರಿಂದ ಮಲೆನಾಡು ಭಾಗದ ಜನರಲ್ಲಿ ಮತ್ತೆ ಮುಳುಗಡೆ ಭೀತಿ ಎದುರಾಗಿದೆ.

    ಈ ಹಿಂದೆ ಆಗಿರುವ ನಷ್ಟಕ್ಕೇ ಯಾವುದೇ ಪರಿಹಾರ ಈವರೆಗೂ ಸಿಕ್ಕಿಲ್ಲ. ಈಗ ಪುನಃ ಮಳೆಯಾದರೆ ನಮ್ಮ ಗತಿ ಏನು ಎಂದು ಜನರು ಆತಂಕದಲ್ಲಿ ದಿನದೂಡುವಂತಾಗಿದೆ. ಸಕಲೇಶಪುರ ಪಟ್ಟಣದ ಆಝಾದ್ ರಸ್ತೆಯಲ್ಲಿ ಕಳೆದಬಾರಿ ಮಳೆಯಲ್ಲಿ ನಲುಗಿದ್ದ ಸ್ಥಳೀಯರು ಈ ಭಾರಿಯೂ ನೀರು ಒಳನುಗ್ಗಬಹುದು ಎಂಬ ಅತಂಕದಲ್ಲಿದ್ದಾರೆ. ಬೆಂಗಳೂರು ಮಂಗಳೂರು ನಡುವಿನ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಶಿರಾಡಿಯಲ್ಲಿಯೂ ಕೂಡ ಆತಂಕದಲ್ಲಿ ವಾಹನ ಸವಾರರ ಪ್ರಯಾಣ ನಡೆಸುವಂತಾಗಿದೆ.

    ಕಾಫಿ ಬೆಳೆ, ಭತ್ತ, ಮೆಣಸು ಸೇರಿದಂತೆ ಹಲವು ಬೆಳೆ ನಷ್ಟವಾಗಿದ್ದು, ಈಗ ಮತ್ತೆ ಬರುತ್ತಿರುವ ಮಳೆ ರೈತರಿಗೆ ಆತಂಕವನ್ನುಂಟು ಮಾಡಿದೆ. ಕಳೆದ ಬಾರಿಯ ನೆರೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ಥರು ಕೂಡ ಪರಿಹಾರ ಸಿಗದೆ ಪರದಾಡುವ ಪರಿಸ್ಥಿತಿಯಲ್ಲಿದ್ದು ಮತ್ತೆ ಮಳೆಯಿಂದಾಗಿ ಆತಂಕದಲ್ಲಿದ್ದಾರೆ.