Tag: ಕಾನ್ ಚಿತ್ರೋತ್ಸವ

  • ಕಾನ್ ಫೆಸ್ಟಿವಲ್‌ನಲ್ಲಿ ಮೊದಲ ಬಹುಮಾನ ಗೆದ್ದ ಕನ್ನಡಿಗನ ಸಾಧನೆಯನ್ನು ಹಾಡಿ ಹೊಗಳಿದ ಯಶ್

    ಕಾನ್ ಫೆಸ್ಟಿವಲ್‌ನಲ್ಲಿ ಮೊದಲ ಬಹುಮಾನ ಗೆದ್ದ ಕನ್ನಡಿಗನ ಸಾಧನೆಯನ್ನು ಹಾಡಿ ಹೊಗಳಿದ ಯಶ್

    ಕಾನ್ ಫಿಲ್ಮ್ ಫೆಸ್ಟಿವೆಲ್‌ಗೆ (Cannes Film Festival 2024) ಮೈಸೂರಿನ ಹುಡುಗ ಚಿದಾನಂದ ನಾಯ್ಕ್ (Chidananda S Naik) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ ಕಿರುಚಿತ್ರ ಆಯ್ಕೆಯಾಗಿತ್ತು. ಈ ಫೆಸ್ಟಿವೆಲ್‌ಗೆ ಆಯ್ಕೆಯಾದ ಮೊದಲ ಕನ್ನಡಿಗರ ಕಿರುಚಿತ್ರ ಇದಾಗಿದ್ದು, ಇದೀಗ ಮೊದಲ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿರುವ ಚಿದಾನಂದ ಸಾಧನೆಗೆ ನ್ಯಾಷನಲ್ ಸ್ಟಾರ್ ಯಶ್ (Actor Yash) ಹಾಡಿ ಹೊಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘ಕೆಜಿಎಫ್‌ 2’ ನಟ (KGF 2 Actor) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿದಾನಂದ ನಾಯಕ್‌ಗೆ ಅಭಿನಂದನೆಗಳು. ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರಕ್ಕಾಗಿ ‘ಲಾ ಸಿನೆಫ್’ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ (Sunflowers Were The First Ones To Know) ಚಿತ್ರಕ್ಕೆ ಅಭಿನಂದನೆಗಳು ಎಂದು ಯಶ್ ಶುಭಕೋರಿದ್ದಾರೆ. ನೀವು ಕನ್ನಡ ಜಾನಪದವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವುದನ್ನು ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಹೊಂದಿಸುವುದನ್ನು ನೋಡಲು ಹೆಮ್ಮೆಪಡುತ್ತೇನೆ ಎಂದು ಚಿದಾನಂದಗೆ ಯಶ್ ಎಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನಾನು ಸಿಂಗಲ್‌, ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ ಎಂದು ಬ್ರೇಕಪ್‌ ಬಗ್ಗೆ ತಿಳಿಸಿದ ‘ಸಲಾರ್‌’ ನಟಿ


    ರಚನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಚಿದಾನಂದ ಹೊತ್ತಿದ್ದರೆ, ವಿ. ಮನೋಜ್ ಅವರ ಸಂಕಲನವಿದೆ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅಲ್ಲದೇ ಕನ್ನಡದ ಅನೇಕ ಕಲಾವಿದರು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.

    ಕಾನ್ ಚಿತ್ರೋತ್ಸವಕ್ಕೆ ತಮ್ಮ ಕಿರುಚಿತ್ರ ಆಯ್ಕೆಯಾಗಿರುವುದು ಸಹಜವಾಗಿಯೇ ಚಿದಾನಂದ್ ಅವರಿಗೆ ಸಂಭ್ರಮ ತಂದಿತ್ತು. ಕಾನ್ ನೋಡುಗರು ಈ ಕಿರುಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಕೊನೆಗೂ ಕನ್ನಡದ ಹುಡುಗ ಗೆದ್ದಿದ್ದಾನೆ. ಈ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾನೆ.

  • ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ

    ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ

    ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉಕ್ರೇನಿಯಲ್ ಹೋರಾಟಗಾರ್ತಿ ಬಟ್ಟೆಯನ್ನು ಕಿತ್ತೆಸೆದು ಸೆಲೆಬ್ರಿಟಿ ಮತ್ತು ಜನರ ನಡುವೆ ಬೆತ್ತಲಾಗಿ ನಮ್ಮ ಮೇಲೆ ದೌರ್ಜನ್ಯ ನಿಲ್ಲಿಸಿ ಎಂದು ಪ್ರತಿಭಟಿಸಿದ್ದಾಳೆ.

    ಉಕ್ರೇನಿ ಮಹಿಳೆ ಕಾನ್ ಚಿತ್ರೋತ್ಸವದಲ್ಲಿ ತನ್ನ ದೇಹದ ಮೇಲೆ ಉಕ್ರೇನ್ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಸಂದೇಶವನ್ನು ಬರೆದುಕೊಂಡು ಬಂದಿದ್ದಾಳೆ. ಈ ವೇಳೆ ಎಲ್ಲರೂ ಚಿತ್ರೋತ್ಸವಕ್ಕೆ ಬರುತ್ತಿರುವುದನ್ನು ಗಮನಿಸಿ ತನ್ನ ಮೈ ಮೇಲಿದ್ದ ಬಟ್ಟೆಯನ್ನು ಬಿಚ್ಚಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ ಎಂದು ಕಿರುಚುತ್ತ ಓಡಾಡಿದ್ದಾಳೆ.

    ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‍ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಉಕ್ರೇನಿಯನ್ ಮಹಿಳೆ ಈ ರೀತಿ ಪ್ರತಿಭಟನೆ ಮಾಡಿದ್ದಾಳೆ. ಈ ಮಹಿಳೆಯೂ ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿದ್ದಾಳೆ. ಈ ವೇಳೆ ಎಲ್ಲರಿಗೂ ಕೇಳಿಸುವಂತೆ ಕೂಗಾಡಲು ಪ್ರಾರಂಭಿಸಿದ್ದಾಳೆ. ಇದನ್ನೂ ಓದಿ:  ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ? 

    ಸಂದೇಶಗಳೇನು?
    ಮಹಿಳೆಯೂ ಆಕೆಯ ಎದೆಯ ಮೇಲೆ ಉಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣದಲ್ಲಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾಳೆ. ಕಾಲು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಚಿತ್ರೀಸಿಕೊಂಡಿದ್ದಾಳೆ. ಮಹಿಳೆ ಕೂಗಾಡಲು ಪ್ರಾರಂಭ ಮಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‍ಗಳು ಆಕೆಯನ್ನು ಸುತ್ತಿಕೊಂಡು ರೆಡ್ ಕಾರ್ಪೆಟ್‍ನಿಂದ ಕೆಳಗೆ ಇಳಿಸಿದ್ದಾರೆ.

    ಈ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್-ರಷ್ಯಾ ಯುದ್ಧ ಎಲ್ಲರ ಗಮನ ಸೆಳೆದಿದೆ. ಈ ಕಾರ್ಯಕ್ರಮದಲ್ಲಿ ಉಕ್ರೇನ್ ನಿರ್ಮಾಪಕರು ಹಲವು ಉಕ್ರೇನ್ ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದರು.

  • ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ದೇವರ ಕನಸು’

    ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ದೇವರ ಕನಸು’

    ಬೆಂಗಳೂರು: ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ತಯಾರಾದ ಕನ್ನಡ ಚಿತ್ರ ದೇವರ ಕನಸು ಸಿನಿಮಾ ಪ್ರತಿಷ್ಠಿತ 74ನೇ ಕಾನ್ ಸಿನಿಮೋತ್ಸದ ವೇಳೆ ಮಾರುಕಟ್ಟೆ ವಿಭಾಗದ ಮಾರ್ಷ್ ಡು ಫಿಲಂನಲ್ಲಿ ಆನ್ಲೈನ್ ಸ್ಕ್ರೀನಿಂಗ್/ ಪ್ರದರ್ಶನ ಕಂಡಿದೆ. ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್ ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆಯಾಗಿದೆ.

    ಈ ಸಿನಿಮೋತ್ಸವದ ಮಾರುಕಟ್ಟೆ ವಿಭಾಗದಲ್ಲಿ ಚಿತ್ರತಂಡ ಪಾಲ್ಗೊಳ್ಳಲು ಅವಕಾಶ ಇತ್ತಾದರೂ, ಕೋವಿಡ್ ಹಿನ್ನೆಲೆಯಲ್ಲಿ ಅದು ಈಡೇರಿರಲಿಲ್ಲ. ಮಾರುಕಟ್ಟೆ ವಿಭಾಗದ ಚಿತ್ರಗಳು ಆನ್‍ಲೈನ್ ಮೂಲಕ ಪ್ರದರ್ಶನ ಕಾಣುತ್ತಿವೆ. 2019ರಲ್ಲಿ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಪಾದಾರ್ಪಣೆ ಮಾಡಿದೆ.

    ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ದೇವರ ಕನಸು ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿದ್ದು, ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್, ಸಂಕಲನ ಜಿಸ್ನು ಸೇನ್ ಪಶ್ಚಿಮ ಬಂಗಾಳದವರಾಗಿದ್ದಾರೆ. ಅದೇ ರೀತಿ ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್ ಅವರ ಸಂಗೀತ ನೀಡಿದ್ದಾರೆ.

    ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮತ್ತೋರ್ವ ಮನೋಜ್ ಅಂಗಮಾಲಿ ಮೇಕಪ್ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದು, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ.

    ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.ಮೊದಲ ಚಿತ್ರವಾಗಿ ದೇವರ ಕನಸು ಬತ್ತಳಿಕೆಯಿಂದ ಹೊರಬಂದಿದ್ದು, ಮಕ್ಕಳ ಸಿನಿಮಾ ಮೂಲಕ ಸ್ವತಂತ್ರವಾಗಿ ಕೆಲಸ ಆರಂಭಿಸಿದ್ದಾರೆ.

    ಈ ಚಿತ್ರದಲ್ಲಿ ಕಲಾವಿದರಾಗಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ಪಾತ್ರವರ್ಗದಲ್ಲಿದಲ್ಲಿದ್ದಾರೆ.