ಸಾಹಿತಿ ಎಸ್.ಎಲ್.ಭೈರಪ್ಪ (S.L.Bhyrappa) ಅವರು ಬಾಲ್ಯದಲ್ಲೇ ಕಡುಕಷ್ಟದ ಜೀವನ ಕಂಡವರು. ಒಪ್ಪೊತ್ತಿನ ಊಟ ಮತ್ತು ಶಿಕ್ಷಣಕ್ಕೆ ಯಾರ ನೆರವೂ ಇಲ್ಲದಂತಹ ಪರಿಸ್ಥಿತಿ. ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು.
ಭೈರಪ್ಪ ಅವರು ಬಾಲ್ಯದಲ್ಲೇ ಮಾರಕ ಪ್ಲೇಗ್‌ಗೆ ಅಣ್ಣ-ಅಕ್ಕ, ತಾಯಿ, ತಂಗಿ, ತಮ್ಮನನ್ನು ಕಳೆದುಕೊಂಡರು. ಇದು ಬದುಕಿನಲ್ಲಿ ಅವರಿಗೆ ದೊಡ್ಡ ಆಘಾತ ನೀಡಿತು. ಅಕ್ಷರಶಃ ಬದುಕು ಬೀದಿಗೆ ಬಿದ್ದಿತು. ಆರಂಭದಲ್ಲಿ ಶಿಕ್ಷಣಕ್ಕಾಗಿ ಸೋದರ ಮಾವನನ್ನು ಅವಲಂಬಿಸಬೇಕಾಯಿತು. ಬಳಿಕ ಅಲ್ಲಿಂದ ನುಗ್ಗೆಹಳ್ಳಿಗೆ ಬಂದು ಸ್ವಾಮಿ ಮೇಷ್ಟ್ರು ಮತ್ತು ಶ್ರೀನಿವಾಸ ಅಯ್ಯಂಗಾರ್ ಅವರಿಂದ ಶಿಕ್ಷಣ ಕಲಿತರು. ಈ ಮಧ್ಯೆ ಸ್ವಾಮಿ ಮೇಷ್ಟ್ರಿಗೆ ಗೊರೂರಿಗೆ ವರ್ಗವಾಯಿತು. ಆಗ ಎಸ್.ಎಲ್.ಭೈರಪ್ಪ ಅವರು ಚನ್ನರಾಯಪಟ್ಟಣಕ್ಕೆ ಹಿಂತಿರುಗಿ ಬಂದರು. ಇದನ್ನೂ ಓದಿ: ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ
ಊಟ ಮತ್ತು ಶಿಕ್ಷಣಕ್ಕಾಗಿ ತುಂಬಾ ಕಡೆ ಅಲೆದಾಡಿದರು. ಬದುಕಿನ ಹೋರಾಟ ನಡೆಸಿದರು. ಚನ್ನರಾಯಪಟ್ಟಣದಲ್ಲಿ ನಿತ್ಯದ ಖರ್ಚು ಹುಟ್ಟಿಸಿಕೊಳ್ಳಲು ತಿಂಗಳಿಗೆ 5 ರೂಪಾಯಿ ಸಂಬಳದ ಮೇಲೆ ಸಿನಿಮಾ ಟಾಕಿಸ್ ಗೇಟ್ ಕೀಪರ್ ಆಗಿ ಕೂಡ ಭೈರಪ್ಪ ಅವರು ಕೆಲಸ ಮಾಡಿದ್ದಾರೆ.
ಜೀವನಕ್ಕಾಗಿ ಹಲವು ಕಡೆ ಅಲೆದಾಟ ಕೂಡ ನಡೆಸಿದ್ದರು. ಹಾಸನ, ಮೈಸೂರು, ಮುಂಬೈಗೆ ನಿರಂತರವಾಗಿ ಅಲೆದಿದ್ದರು. ಮುಂಬೈನಲ್ಲಿ ರೈಲ್ವೆ ಪೋರ್ಟರ್ ಆಗಿ ಕೂಡ ಕೆಲಸ ಮಾಡಿದ್ದರು. ಬಳಿಕ ಸಾಧು-ಸಂತರ ಗುಂಪು ಸೇರಿಕೊಂಡು ಅಧ್ಯಾತ್ಮದ ಕಡೆ ಆಸಕ್ತಿ ಬೆಳೆಸಿಕೊಂಡರು. ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್ ಭಾವುಕ




