Tag: ಕಾಣೆ

  • ಬೆಳ್ತಂಗಡಿಯಿಂದ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ!

    ಬೆಳ್ತಂಗಡಿಯಿಂದ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ!

    ಮಂಗಳೂರು: ಎಂಟು ದಿನಗಳ ಹಿಂದೆ ನಿಗೂಢ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ತಾಲೂಕಿನ ಶಂಭೂರಿನ ಎಎಂಆರ್ ಡ್ಯಾಮ್ ಬಳಿ ನದಿ ಕಿನಾರೆಯಲ್ಲಿ ಶವ ಸಿಕ್ಕಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ರಮೇಶ್ ಗೌಡ(45) ಕಳೆದ ಜೂನ್ 2ರ ಬಳಿಕ ನಾಪತ್ತೆಯಾಗಿದ್ದರು.

    ಅಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಯಾರೋ ಆತ್ಮೀಯರು ಕರೆದಿದ್ದಾರೆಂದು ಹೇಳಿ ತುರ್ತಾಗಿ ಮನೆಯಿಂದ ತೆರಳಿದ್ದ ರಮೇಶ್ ಗೌಡ, ಆ ಬಳಿಕ ಕಾಣೆಯಾಗಿದ್ದರು. ಹೀಗಾಗಿ ಎರಡು ದಿನಗಳ ಬಳಿಕ ಅವರ ಪತ್ನಿ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಇದೀಗ ರಮೇಶ್ ಗೌಡರ ಶವ ಬಂಟ್ವಾಳ ಬಳಿಯ ಜಲಾಶಯ ಪಕ್ಕದಲ್ಲಿ ಪತ್ತೆಯಾಗಿದ್ದು, ಕೊಲೆಗೈದು ಬಿಸಾಕಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

    ಶವದ ತಲೆಯ ಭಾಗಕ್ಕೆ ಗಾಯ ಆಗಿರುವುದು ರಮೇಶ್ ಕೊಲೆ ನಡೆದಿದೆಯೇ ಅನ್ನುವ ಬಗ್ಗೆ ಶಂಕೆಗೆ ಕಾರಣವಾಗಿದೆ. ಬಂಟ್ವಾಳ ಮತ್ತು ಉಪ್ಪಿನಂಗಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ರು ಕಾಣೆಯಾಗಿದ್ದ ನಾಲ್ವರು ಬಾಲಕರು!

    ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ರು ಕಾಣೆಯಾಗಿದ್ದ ನಾಲ್ವರು ಬಾಲಕರು!

    ಬೆಂಗಳೂರು: ಶನಿವಾರ ಸಂಜೆ ಆನೇಕಲ್ ತಾಲೂಕಿನ ಮಂಚನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದ ಬಾಲಕರು ಇದೀಗ ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ದಾರೆ.

    ಗ್ರಾಮದ ಚಂದನ್(12), ವಿಕಾಸ್(12), ನಂದನ್(12) ಹಾಗೂ ಕಾರ್ತಿಕ್(14) ಶನಿವಾರ ಸಂಜೆ ಆಟವಾಡಿ ಬಳಿಕ ಪೋಷಕರಿಗೆ ತಿಳಿಸದೆ ಹೊಸೂರು ಬೆಟ್ಟಕ್ಕೆ ತೆರಳಿ ಅಲ್ಲಿ ಇದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ. ನಂತರ ಮನೆಗೆ ಬರಲು ಹಣವಿಲ್ಲದೆ ಹೊಸೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಇವರನ್ನು ಗಮನಿಸಿದ ಹೊಸೂರು ಪೊಲೀಸರು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ ಹೊಸೂರು ಪೊಲೀಸರು ಕಳೆದ ರಾತ್ರಿ ಒಂದು ಗಂಟೆ ಸುಮಾರಿಗೆ ಮಕ್ಕಳನ್ನು ಅತ್ತಿಬೆಲೆ ಪೊಲೀಸರಿಗೆ ನೀಡಿದ್ದಾರೆ. ಬಳಿಕ ಮಕ್ಕಳು ಪೋಷಕರ ಮಡಿಲು ಸೇರಿದ್ದು, ಈ ಮೂಲಕ ಮಕ್ಕಳ ಕಳ್ಳರ ವದಂತಿಗೆ ಬ್ರೇಕ್ ಬಿದ್ದಂತಾಗಿದೆ.

    ಶನಿವಾರ ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಬಳಿಕ ನಾಪತ್ತೆಯಾಗಿದ್ದರಿಂದ ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ್ಕಕೀಡಾಗಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

  • ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

    ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

    ಚಿಕ್ಕಬಳ್ಳಾಪುರ: ಚುನಾವಣೆಗೆ ಸ್ವತಂತ್ರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ನಡೆದಿದೆ.

    ಗಂಗನಹಳ್ಳಿ ಗ್ರಾಮದ ಮೋಹನ್ ನಾಪತ್ತೆಯಾದ ಅಭ್ಯರ್ಥಿ. ಮೋಹನ್ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.

    ನಾಮಪತ್ರ ಪರಿಶೀಲನೆ ದಿನವಾದ ಏಪ್ರಿಲ್ 27 ರಂದು ಮನೆಯಿಂದ ಹೊರ ಹೋದ ಮೋಹನ್ ಮತ್ತೆ ಮನಗೆ ಬಂದಿಲ್ಲ. ತೋಟದ ಬಳಿ ಮೋಟಾರ್ ರಿಪೇರಿ ಮಾಡಿಸಿ ಬರ್ತೀನಿ ಅಂತ ಸ್ಕೂಟರ್ ನಲ್ಲಿ ಹೋದ ಮೋಹನ್ ಮತ್ತೆ ಮನಗೆ ವಾಪಾಸ್ಸಾಗಿಲ್ಲ.

    ಈ ಸಂಬಂಧ ಭಯಬೀತರಾದ ಮೋಹನ್ ತಂದೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

  • ನಿಗೂಢವಾಗಿ ಕಣ್ಮರೆಯಾದ ಟೆಕ್ಕಿಗಾಗಿ ಡ್ರೋಣ್ ಕ್ಯಾಮೆರಾ ಬಳಸಿ ಪೊಲೀಸರ ಹುಡುಕಾಟ

    ನಿಗೂಢವಾಗಿ ಕಣ್ಮರೆಯಾದ ಟೆಕ್ಕಿಗಾಗಿ ಡ್ರೋಣ್ ಕ್ಯಾಮೆರಾ ಬಳಸಿ ಪೊಲೀಸರ ಹುಡುಕಾಟ

    ಬೆಂಗಳೂರು: ಓಎಲ್‍ಎಕ್ಸ್ ಆ್ಯಪ್ ಮುಖಾಂತರ ಕಾರು ಮಾರಾಟಕ್ಕಿಟ್ಟು ಗ್ರಾಹಕರನ್ನು ಭೇಟಿಯಾಗಲು ಹೊರಟ ಟೆಕ್ಕಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ 23 ದಿನಗಳ ಕಳೆದಿದ್ದು, ಪೊಲೀಸರು ಟೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಕಳೆದ ಡಿಸೆಂಬರ್ 18 ರಂದು ಕುಮಾರ್ ಅಜಿತಾಬ್(30) ಎಂಬ ಟೆಕ್ಕಿ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿದ್ದರು. ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿರುವ ಪೊಲೀಸರು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಅಜಿತಾಬ್ ಮೂಲತಃ ಬಿಹಾರದವರಾಗಿದ್ದು, ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಬ್ರಿಟೀಷ್ ಟೆಲಿಕಾಂ ಕಂಪನಿಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡಿಕೊಂಡು ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್‍ವೊಂದರಲ್ಲಿ ಸ್ನೇಹಿತರ ಜೊತೆ ನೆಲೆಸಿದ್ದರು. ತನ್ನ ಬಳಿಯಿದ್ದ ಸಿಯಾಜ್ ಕಾರನ್ನು ಮಾರಲು ಒಎಲ್‍ಎಕ್ಸ್ ನಲ್ಲಿ ಪ್ರಕಟಿಸಿದ್ದರು. ಕಾರನ್ನು ಬೇರೆಯವರಿಗೆ ತೋರಿಸಲೆಂದು ಡಿಸೆಂಬರ್ 18ರಂದು ತನ್ನ ಫ್ಲಾಟ್ ನಿಂದ ಹೊರಟವರು ಮತ್ತೆ ವಾಪಸ್ಸಾಗದೆ ಕಣ್ಮರೆಯಾಗಿದ್ದಾರೆ.

    ಅಜಿತಾಬ್ ಕಾರನ್ನು ಕೊಳ್ಳುವವರು ಆತನಿಗೆ ಕರೆ ಮಾಡಿದ್ದರಿಂದ ಅಂದು ತನ್ನ ಕೆಎ03 ಓಚಿ1751 ಕಾರಿನಲ್ಲಿ ಮನೆಯಿಂದ ಹೊರಹೋಗಿದ್ದರು. ಆದ್ರೆ ಅಜಿತಾಬ್ ಮನೆಗೆ ವಾಪಸ್ಸಾಗದ ಕಾರಣ ಎಲ್ಲೆಡೆ ಹುಡುಕಾಟ ನಡೆಸಿದ ಕುಟುಂಬದವರು ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಜಿತಾಬ್ ಗಾಗಿ ಕರ್ನಾಟಕ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದು ಯಾವುದೇ ಪ್ರಯೋಜನವಾಗಿಲ್ಲ.

    ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. 8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ದೂರವಾಣಿ ಮೂಲಕ ತಿಳಿಸಿದ್ದಾರೆ.

    ಒಟ್ಟಾರೆ ಅಜಿತಾಬ್ ರನ್ನು ಕಾರು ಕೊಳ್ಳುವ ನೆಪದಲ್ಲಿ ಯಾರಾದರು ಕರೆಸಿಕೊಂಡು ಕಿಡ್ನಾಪ್ ಮಾಡಿದ್ದಾರೋ? ಇಲ್ಲವೇ ಬೇರೆ ಯಾವುದೇ ಕಾರಣದಿಂದ ಕಣ್ಮರೆಯಾಗಿದ್ದಾರೋ ಎಂಬ ಅನುಮಾನಗಳು ಕಾಡತೊಡಗಿದೆ. ತಮ್ಮ ಮಗ ಮನೆಗೆ ವಾಪಸ್ಸಾಗುವ ನಿರೀಕ್ಷೆಯಲ್ಲಿ ಅಜಿತಾಬ್ ತಂದೆ ಜೀವಿಸುತ್ತಿದ್ದು, ಪೊಲೀಸರ ಕಾರ್ಯಾಚರಣೆ ಯಾವ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • ಗಂಡನ ಫೋಟೋ ಹಿಡಿದು 17 ವರ್ಷದಿಂದ ಅವರ ಬರುವಿಕೆಗಾಗಿ ಕಾದು ಕುಳಿತ ಮಹಿಳೆ

    ಗಂಡನ ಫೋಟೋ ಹಿಡಿದು 17 ವರ್ಷದಿಂದ ಅವರ ಬರುವಿಕೆಗಾಗಿ ಕಾದು ಕುಳಿತ ಮಹಿಳೆ

    ಬಾಗಲಕೋಟೆ: ಅದೊಂದು ಸಾಧಾರಣ ಬಡತನದ ಕುಟುಂಬ. ಆ ವೃದ್ಧೆಗೆ ಮಕ್ಕಳಿರಲಿಲ್ಲ. ಇದ್ದೊಬ್ಬ ಗಂಡನೂ ಅಂಗವಿಕಲನಾಗಿದ್ರು. ಗಂಡ ಇದ್ದಾಗ ಆಕೆಯನ್ನ ಹೇಗಾದರೂ ಮಾಡಿ ಸಾಕುತ್ತಿದ್ದರು. ಆದರೆ ಅದ್ಯಾಕೋ ಏನೋ ಗೊತ್ತಿಲ್ಲ ಏಕಾಏಕಿ ಗಂಡ ಕಾಣೆಯಾಗಿದ್ದಾರೆ. ಇದ್ದೊಂದು ಮನೆಯೂ ಮಳೆಗೆ ಬಿದ್ದೋಗಿದೆ. ಇದರಿಂದ ಅತಂತ್ರರಾದ ವೃದ್ಧ ಮಹಿಳೆ ಬರೋಬ್ಬರಿ 17 ವರ್ಷದಿಂದ ಗಂಡನಿಗಾಗಿ ಕಾದು ಕುಳಿತಿದ್ದಾರೆ.

    ಗಂಡನ ಫೋಟೋ ಕೈಯಲ್ಲಿ ಹಿಡಿದು ಕಣ್ಣೀರಿಡುತ್ತಾ 17 ವರ್ಷದಿಂದ ಆತನ ಬರುವಿಕೆಗಾಗಿ ಕಾದು ಕುಳಿತಿರೋ ಮಹಿಳೆಯ ಹೆಸರು ರತ್ನವ್ವ ಕೇಸನೂರ. ಮೂಲತ: ಬಾಗಲಕೋಟೆ ಜಿಲ್ಲೆಯ ಕಡ್ಲಿಮಟ್ಟಿ ಗ್ರಾಮದ ನಿವಾಸಿ. ಇವರ ಪತಿ ಹನುಮಂತ ಕೇಸನೂರ. ಪತಿ ಅಂಗವಿಕಲನಾಗಿದರೂ ಆಕೆಯನ್ನ ಚೆನ್ನಾಗಿ ನೋಡಿಕೊಂಡಿದ್ದರು. ಆದರೆ ಹೊಲವೊಂದರ ವಿಚಾರ ಎಂದು ಬಂದಾಗ ಏಕಾಏಕಿ ಹನಮಂತ ಕಾಣೆಯಾಗಿಬಿಟ್ಟಿದ್ದರು.

    ಇದರಿಂದ ನಿರಂತರ 5 ವರ್ಷ ಗಂಡನನ್ನ ಹುಡುಕಿದ ರತ್ನವ್ವ ಕೊನೆಗೆ ಪೊಲೀಸ್ ಠಾಣೆಗೆ ಕಾಣೆಯಾಗಿರೋ ಬಗ್ಗೆ ದೂರು ನೀಡಿದರು. ಇವುಗಳ ಮಧ್ಯೆ ಊರೂರು ಸುತ್ತಿ ಹೋದ ಕಡೆಗೆಲ್ಲಾ ಬಸ್ ನಿಲ್ದಾಣ, ಮನೆ, ಮಠ, ಮಂದಿರ, ಮದುವೆ ಮುಂಜಿ ಹೀಗೆ ಎಲ್ಲೆಂದರಲ್ಲಿ ಹುಡುಕಿ ಹುಡುಕಿ ಸುಸ್ತಾದರು. ಇವುಗಳ ಮಧ್ಯೆ ಇದ್ದೊಂದು ಮನೆಯೂ ಮಳೆಗೆ ಬಿದ್ದೋಯ್ತು. ಇದರಿಂದ ಅತಂತ್ರರಾದ ರತ್ನವ್ವ 17 ವರ್ಷ ಗತಿಸಿದರೂ ಗಂಡನ ನಿರೀಕ್ಷೆಯಲ್ಲಿದ್ದಾರೆ.

    ಇನ್ನು ಇತ್ತ ಗಂಡ ಹನುಮಂತ ಜೀವಂತವಿದ್ದಾಗ ಖಾಸಗಿ ಬ್ಯಾಂಕ್ ನಲ್ಲಿ ರತ್ನವ್ವ ಮತ್ತು ತನ್ನ ಹೆಸರಿನಲ್ಲಿ ಹಣವನ್ನ ಇಟ್ಟಿದ್ದರಂತೆ. ಹಣ ಇಟ್ಟ ಬಗ್ಗೆ ದಾಖಲೆಗಳಿದ್ದು, ಆದರೆ ಮಳೆ ಬಂದು ಮನೆ ಬಿದ್ದು ಹೋದಾಗ ದಾಖಲೆಗಳು ಸಹ ಕಳೆದು ಹೋಗಿವೆ. ಇದರಿಂದ ಇತ್ತ ಬ್ಯಾಂಕ್ ನಲ್ಲಿ ಹಣ ಕೇಳೋಕೆ ಹೋದರೂ ಕ್ಯಾರೆ ಅನ್ನುತ್ತಿಲ್ಲ ಮತ್ತು ಡಾಕ್ಯೂಮೆಂಟ್ ಕೇಳುತ್ತಾರೆ. ಇದರಿಂದ ಇತ್ತ ಗಂಡನೂ ಇಲ್ಲ ಅತ್ತ ಹಣವೂ ಇಲ್ಲದೆ ಮಹಿಳೆ ಅತಂತ್ರವಾಗಿದ್ದು, ಕಣ್ಣೀರಿಡುತ್ತಿದ್ದಾರೆ.

    ಒಟ್ಟಿನಲ್ಲಿ ಇವರು ಕಳೆದ 17 ವರ್ಷಗಳಿಂದ ಗಂಡನಿಗಾಗಿ ಜಾತಕಪಕ್ಷಿಯಂತೆ ಕಾದು ಕುಳಿತಿದ್ದು, ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

  • ಕರವೇ ಕಾರ್ಯಕರ್ತನ ಹತ್ಯೆಗೆ ಅನ್ಸಾರಿ ಬಂಟನ ಸುಪಾರಿ

    ಕರವೇ ಕಾರ್ಯಕರ್ತನ ಹತ್ಯೆಗೆ ಅನ್ಸಾರಿ ಬಂಟನ ಸುಪಾರಿ

    ಕೊಪ್ಪಳ: ಜೀವ ಭಯದಿಂದ ವ್ಯಕ್ತಿಯೊಬ್ಬ ನಾಪತ್ತೆಯಾದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಬೂದಗುಂಪಾ ನಿವಾಸಿ ಮುದಿಯಪ್ಪ ಡಂಬಾಳ ಎಂಬ ಯುವಕ ಕಳೆದ ಮೂರು ದಿನದಿಂದ ಕಾಣೆಯಾಗಿದ್ದು, ಮುದಿಯಪ್ಪ ಕುಟುಂಬ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಮುದಿಯಪ್ಪ ಕುಟುಂಬ ಭಯಪಡಲು ಮುಖ್ಯ ಕಾರಣ ಅದೇ ಗ್ರಾಮದ ಪ್ರಭಾವಿ ಮುಖಂಡ ಮತ್ತು ಗಂಗಾವತಿ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಬಂಟ ಫಕೀರಪ್ಪ ಎಮ್ಮಿ ಎನ್ನಲಾಗಿದೆ. ಈತ ಮುದಿಯಪ್ಪನನ್ನು ಕೊಲ್ಲಲು ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ.

    ಸುಪಾರಿ ತೆಗೆದುಕೊಂಡ ವ್ಯಕ್ತಿ ಬಾಯಿಬಿಟ್ಟ ವಿಡಿಯೋ ಕೂಡ ಲಭ್ಯವಾಗಿದ್ದು, ನನ್ನ ಗಂಡನಿಗೆ ಜೀವ ಭಯವಿದೆ. ಇದರಿಂದ ಕಳೆದ ಮೂರು ದಿನಗಳಿಂದ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಮುದಿಯಪ್ಪ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮುದಿಯಪ್ಪ ಡಂಬಾಳ ಮತ್ತು ಫಕೀರಪ್ಪ ಎಮ್ಮಿ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಫಕೀರಪ್ಪ ಅನ್ಸಾರಿ ಬೆಂಬಲಿಗನಾಗಿದ್ದಾನೆ. ಮುದಿಯಪ್ಪ ಕರವೇ ಕಾರ್ಯಕರ್ತನಾಗಿದ್ದಾನೆ.

    ಗ್ರಾಮದಲ್ಲಾಗುತ್ತಿರುವ ಅಕ್ರಮದ ಬಗ್ಗೆ ಮುದಿಯಪ್ಪ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಬೇಸತ್ತ ಫಕೀರಪ್ಪ ಈತ ನಮಗೆ ಮುಳುವಾಗುತ್ತಾನೆ ಎಂದು ಅದೇ ಗ್ರಾಮದ ಯುವಕನಿಗೆ ಮುದಿಯಪ್ಪನನ್ನು ಹೊಡೀಬೇಕು, ಕೊಲೆ ಮಾಡಿ ಎಂದು 50 ಸಾವಿರ ರೂ. ನೀಡಿ ಸುಪಾರಿ ನೀಡಿದ್ದಾನೆ.

    ಇದಕ್ಕೆ ಸಾಕ್ಷಿ ಎಂಬಂತೆ ಸುಪಾರಿ ತೆಗೆದುಕೊಂಡ ವ್ಯಕ್ತಿಯೇ ಈ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಇದರಿಂದ ಮುದಿಯಪ್ಪ ಕುಟುಂಬ ಜೀವ ಭಯದಲ್ಲಿದ್ದಾರೆ. ನನ್ನ ಪತಿಗೆ ಏನಾಗಿದೆ ಎಂದು ಭಯ ಪಡುವಂತಾಗಿದೆ. ನಮಗೆ ರಕ್ಷಣೆ ಬೇಕು ಎಂದು ಮುದಿಯಪ್ಪ ಪತ್ನಿ ಬೇಡಿಕೊಳ್ಳುತ್ತಿದ್ದಾರೆ.

  • ಪ್ರೀತಿಸಿ ಮದ್ವೆಯಾದ ಪತ್ನಿಗೆ ಕೈ ಕೊಟ್ಟು ನರ್ಸ್ ಜೊತೆ ಪತಿ ಪರಾರಿ!

    ಪ್ರೀತಿಸಿ ಮದ್ವೆಯಾದ ಪತ್ನಿಗೆ ಕೈ ಕೊಟ್ಟು ನರ್ಸ್ ಜೊತೆ ಪತಿ ಪರಾರಿ!

    ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಕೈ ಕೊಟ್ಟ ಪತಿ ಮಹಾಶಯನೊರ್ವ ಪ್ರಿಯತಮೆಯ ಜೊತೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ನಾಗಮಣಿ ಜೊತೆ ಅದೇ ಖಾಸಗಿ ಆಸ್ಪತ್ರೆಯಲ್ಲೇ ಸಿಸ್ಟಮ್ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಾಥ್ ಪರಾರಿಯಾಗಿದ್ದಾನೆ.

    ಕಳೆದ 10 ವರ್ಷಗಳ ಹಿಂದೆ ಪದ್ಮಾಳನ್ನ ಪ್ರೀತಿಸಿ ಮದುವೆಯಾಗಿದ್ದ ಶ್ರೀನಾಥ್ ದಂಪತಿಗೆ 8 ವರ್ಷದ ಮಗನಿದ್ದಾನೆ. ಶ್ರೀನಾಥ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದ ನಾಗಮಣಿ ಜೊತೆ ಪ್ರೀತಿ ಪ್ರೇಮ ಅಂತ ಸುತ್ತಾಡಿ ಕೊನೆಗೆ ಈಗ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಪದ್ಮಾ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಅತ್ತ ನರ್ಸ್ ನಾಗಮಣಿ ಸಹೋದರ ರಮೇಶ್ ಕೂಡ ತನ್ನ ತಂಗಿ ಕಾಣೆಯಾಗಿದ್ದಾಳೆ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿ 20 ದಿನಗಳು ಕಳೆದರೂ ಕಾಣೆಯಾದವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

  • ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಕೋಲಾರ: ಅದೊಂದು ಊರಾದರೂ ಗ್ರಾಮ ಇದೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಬ್ರಿಟೀಷ್ ರೆವಿನ್ಯೂ ದಾಖಲೆಗಳಲ್ಲಿರುವ ಊರನ್ನು ತೋರಿಸುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ, ಮನೆಗಳು ಇವೆಲ್ಲಾ ಇದೆ ಅಂದಮೇಲೆ ಅದೊಂದು ಊರು ಅಲ್ವಾ. ಆದರೆ ಮಾಹಿತಿ ಹಕ್ಕು ಹೋರಾಟಗಾರ ರವಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಧ್ವನಿ ಎತ್ತಿದ್ದಾರೆ. ಇದಕ್ಕೆ ಕಾರಣ ದಾಖಲಾತಿ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳ ಗ್ರಾಮ ಭೌಗೋಳಿಕವಾಗಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಹೀಗೆ ಯಾವ ವ್ಯಾಪ್ತಿಯಲ್ಲೂ ದಾಖಲೆಗಳನ್ನೇ ಹೊಂದಿಲ್ಲ. ಹೀಗಾಗಿ ಈ ಊರಿಗೆ ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ.

    ಮಾರೇನಹಳ್ಳಿ ಕಂದಾಯ ಇಲಾಖೆ ಸರ್ವೆ ನಂಬರ್ ನಲ್ಲಿರುವುದರಿಂದ ಗ್ರಾಮ ನಂದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿ ಒಬ್ಬರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಗ್ರಾಮದಲ್ಲಿನ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ದರ್ಬಾರ್ ನಲ್ಲಿದೆ. ಈ ಬಗ್ಗೆ ಕಂದಾಯ ಇಲಾಖೆಯವರನ್ನು ಕೇಳಿದರೆ ಬ್ರಿಟೀಷ್ ರೆವಿನ್ಯೂ ದಾಖಲೆ ತೋರಿಸಿ ಮೈಸೂರು ರಾಜ್ಯದ ನಕ್ಷೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಒಟ್ಟಿನಲ್ಲಿ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಮಸ್ಥರು ಪರಿತಪಿಸುವಂತಾಗಿದೆ.

     

  • ನಾಪತ್ತೆಯಾಗಿದ್ದ ಐಸಿಎಐ ಅಧ್ಯಕ್ಷರ ಮಗಳು ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಐಸಿಎಐ ಅಧ್ಯಕ್ಷರ ಮಗಳು ಶವವಾಗಿ ಪತ್ತೆ

    ಮುಂಬೈ: ನಾಪತ್ತೆಯಾಗಿದ್ದ ಕಾನೂನು ವಿದ್ಯಾರ್ಥಿನಿಯ ಮೃತದೇಹ ಮುಂಬೈಯ ಪ್ಯಾರೆಲ್ ಮತ್ತು ಕರ್ರೆ ರೋಡ್ ರೈಲು ನಿಲ್ದಾಣದ ಬಳಿ ದೊರೆತಿದೆ.

    ಭಾರತೀಯ ಚಾರ್ಟೆಡ್ ಅಕೌಂಟಂಟ್‍ಗಳ ಸಂಸ್ಥೆ(ಐಸಿಎಐ) ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಮಗಳು ಪಲ್ಲವಿ(21) ಬುಧವಾರ ನಾಪತ್ತೆಯಾಗಿದ್ದಳು. ಆದರೆ ಈಗ ಪಲ್ಲವಿ ಮೃತ ದೇಹ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪಲ್ಲವಿ ಬುಧವಾರ ಸಂಜೆ 5 ಗಂಟೆಗೆ ಕಚೇರಿಯಿಂದ ಮನೆಗೆ ಹೋಗುವುದಾಗಿ ತಿಳಿಸಿದ್ದಳು. ಆದರೆ ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ರಾತ್ರಿ 10.30ಕ್ಕೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು.

    ಬುಧವಾರ ಸಂಜೆ 6:30ರ ವೇಳೆಯಲ್ಲಿ ರೈಲ್ವೆ ಪೊಲೀಸರಿಗೆ ಯುವತಿಯ ಮೃತದೇಹ ಸಿಕ್ಕಿತ್ತು. ಮೃತದೇಹದ ಫೋಟೋ ಅನ್ನು ರೈಲು ನಿಲ್ದಾಣಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ಫೋಟೋವನ್ನು ನೋಡಿದ ಪಲ್ಲವಿಯ ಕುಟುಂಬದವರು ಮೃತದೇಹವನ್ನು ಗುರುತಿಸಿದ್ದಾರೆ.

    ಪಲ್ಲವಿಯ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ನಾವು ಆಕಸ್ಮಿಕ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ಎಂದು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಬೊಬಡೆ ತಿಳಿಸಿದ್ದಾರೆ.

  • ನಾಪತ್ತೆಯಾಗಿದ್ದ 2 ವರ್ಷದ ಬಾಲಕಿ ನೀರಿನ ಸಂಪ್‍ನಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ 2 ವರ್ಷದ ಬಾಲಕಿ ನೀರಿನ ಸಂಪ್‍ನಲ್ಲಿ ಶವವಾಗಿ ಪತ್ತೆ

    – ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಕೊಪ್ಪಳ: ಕಳೆದರೆಡು ದಿನಗಳಿಂದ ನಿಗೂಢವಾಗಿ ಕಾಣೆಯಾಗಿದ್ದ 2 ವರ್ಷದ ಬಾಲಕಿ ಶವ ಎದುರಿನ ಮನೆಯ ನೀರಿನ ಸಂಪ್‍ನಲ್ಲಿ ಪತ್ತೆಯಾಗಿದೆ.

    ಕೊಪ್ಪಳದ ಯಲಬುರ್ಗಾ ಪಟ್ಟಣದ ಮೆಹಬೂಬ ನಗರದಲ್ಲಿ ಕಳೆದ ಜೂನ್ 28 ರಂದು ಬಾಲಕಿ ಕಾಣೆಯಾಗಿದ್ದಳು. ಬಾಬುಸಾಬ್ ವಣಗೇರಿ ದಂಪತಿಯ 2ನೇ ಪುತ್ರಿ ಉಸ್ನಾ ಪಕ್ಕದ ಮನೆಯಲ್ಲಿ ಆಟವಾಡಲು ಹೋಗಿ ಕಾಣೆಯಾಗಿದ್ದಳು.

    ಜೂನ್ 28 ರಂದು ಪಕ್ಕದ ಮನೆಯಲ್ಲಿದ್ದ ಬಾಲಕಿಯನ್ನ ಕರೆದುಕೊಂಡು ಹೋಗಲು ಬಾಲಕಿ ತಾಯಿ ಹೋಗಿದ್ದರು. ಆದ್ರೆ ಆ ಮನೆಯವರು ನಿಮ್ಮ ಬಾಲಕಿ ಆವಾಗ್ಲೆ ಮನೆಗೆ ಹೋಗಿದ್ದಾಳೆ ಅಂತಾ ಹೇಳಿದ್ದರು. ಅಂದಿನಿಂದಲೇ ಬಾಲಕಿ ನಾಪತ್ತೆ ಆಗಿದ್ದಳು. ಆ ಬಳಿಕ ಬಾಲಕಿ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.

    ಬಾಲಕಿ ಕಾಣೆಯಾಗಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ವೈರಲ್ ಆಗಿತ್ತು. ಆದ್ರೆ ಇಂದು ಬೆಳಗ್ಗೆ ಸಂಪ್ ತೆಗೆದು ನೋಡಿದಾಗ ನೀರಿನಲ್ಲಿ ಬಾಲಕಿ ಶವ ತೇಲುತ್ತಿರುವುದನ್ನು ಕಂಡಿದ್ದಾರೆ. ಸದ್ಯ ಬಾಲಕಿಯ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆ ಮಾಡಿ ಸಂಪ್‍ನಲ್ಲಿ ಬಿಸಾಡಿ ಹೋಗಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.