Tag: ಕಾಣೆಯಾದ

  • ಕಾಣೆಯಾಗಿ ಬರೋಬ್ಬರಿ 10 ವರ್ಷಗಳ ಬಳಿಕ ತಂದೆ-ತಾಯಿಯನ್ನು ಸೇರಿದ ಮಗ!

    ಕಾಣೆಯಾಗಿ ಬರೋಬ್ಬರಿ 10 ವರ್ಷಗಳ ಬಳಿಕ ತಂದೆ-ತಾಯಿಯನ್ನು ಸೇರಿದ ಮಗ!

    ಚೆನ್ನೈ: ಪವಾಡ ಎಂಬಂತೆ ಕಳೆದು ಹೋಗಿ ಬರೋಬ್ಬರಿ 10 ವರ್ಷಗಳ ಬಳಿಕ ಮಗನೊಬ್ಬ ತಂದೆ-ತಾಯಿಯ ಜೊತೆಯಾದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಶಿವಪ್ರಕಾಶ್(42) ಹೆತ್ತವರ ಮಡಿಲು ಸೇರಿದ ಮಗ. ಲಾಕ್ ಡೌನ್ ಸಮಯದಲ್ಲಿ ಶಿವಪ್ರಕಾಶ್ ಬಸ್ತಾರ್ನ ಜಗದಲ್ಪುರದಲ್ಲಿ ಅಲೆದಾಡುತ್ತಿದ್ದ. ಇದನ್ನು ಗಮನಿಸಿದ ಆರೋಗ್ಯಾಧಿಕಾರಿಗಳು ಶಿವಪ್ರಕಾಶ್ ನನ್ನು ಹಿಡಿದು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಶಿವಪ್ರಕಾಶ್ ಗೆ ಅಲ್ಲಿನ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಶಿವಪ್ರಕಾಶ್ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ.

    ನಾವು ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದ್ದೇವೆ. ಆದರೆ ಆತನಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ನಾವು ಏನೇ ಪ್ರಶ್ನೆಗಳನ್ನು ಕೇಳಿದರೂ ಆತ ಸುಮ್ಮನಾಗುತ್ತಿದ್ದನು. ಆದರೂ ನಾವು ಆತನನ್ನು ಮನವೊಲಿಸಿದೆವು. ಕೆಲವು ತಿಂಗಳು ಕಾಲ ಇಲ್ಲಿಯೇ ಇದ್ದ ಶಿವಪ್ರಕಾಶ್, ಕೊನೆಗೆ ತಮಿಳಿನಲ್ಲಿ ಒಂದೆರಡು ಸಾಲುಗಳನ್ನು ಬರೆದರು. ಹೆಸರು ಶಿವಪ್ರಕಾಶ್ ಆಗಿದ್ದು, ತಿರುವಣ್ಣಾಮಲೈ ಜಿಲ್ಲೆಯ ಚೆಯಾರ್ ನಲ್ಲಿರುವ ಎಚೂರ್ ಗೆ ಸೇರಿದವರು ಎಂಬುದಾಗಿ ತಿಳಿಯಿತು. ಕೂಡಲೇ ಶಿವಪ್ರಕಾಶ್ ಕೊಟ್ಟ ಮಾಹಿತಿಯನ್ನು ಅವರ ಸ್ಥಳೀಯರಿಗೆ ಕಳುಹಿಸಿದ್ದೇವೆ. ಆಗ ಅವರು ಶಿವಪ್ರಕಾಶ್ ನನ್ನು ಗುರುತಿಸಿದರು ಎಂದು ಜಗದಲ್ಪುರ್ ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಅಲೆಕ್ಸಾಂಡರ್ ಎಂ ಚೆರಿಯನ್ ತಿಳಿಸಿದರು.

    ಸಾಂಕ್ರಾಮಿಕ ರೋಗದಿಂದಾಗಿ ಶಿವಪ್ರಕಾಶ್ ಮತ್ತೆ ತಮ್ಮ ತಂದೆ-ತಾಯಿಯನ್ನು ನೋಡುವಂತಾಯಿತು. ಇಲ್ಲವೆಂದರೆ ಅವರು ಇನ್ನೂ ಅಲೆಮಾರಿಯಾಗಿಯೇ ಉಳಿಯುತ್ತಿದ್ದರು ಎಂದು ಬಸ್ತಾರ್ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ. ಬಸ್ತಾರ್ ಜಿಲ್ಲಾಡಳಿತವು ಪ್ರಕಾಶ್ ಅವರ ಹಳ್ಳಿಯ ಸ್ಥಳೀಯರನ್ನು ಸಂಪರ್ಕಿಸಿದಾಗ ಅವರು ಹೆತ್ತವರನ್ನು ಪತ್ತೆಹಚ್ಚಲು ಮತ್ತಷ್ಟು ಸಹಾಯ ಮಾಡಿದರು. ಅವರು ಕಾಣೆಯಾದ ವ್ಯಕ್ತಿಯ ವರದಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಂದು ದಶಕದ ಹಿಂದೆ ದಾಖಲಿಸಿದ್ದರು.

    ಇಷ್ಟು ವರ್ಷ ಎಲ್ಲಿ ಇದ್ದುದಾಗಿ ಶಿವಪ್ರಕಾಶ್ ಬಾಯಿಬಿಟ್ಟಿಲ್ಲ. ಆದರೆ 3-4 ತಿಂಗಳು ಅವರು ಕ್ವಾರಂಟೈನ್ ಆಗಿದ್ದರು. ನಾವು ಆತನನ್ನು ವಾಪಸ್ ಮನೆಗೆ ಸೇರಿಸೋ ಪ್ರಯತ್ನ ಮಾಡಿದ್ದೇವೆ ಹೊರತು, ನಾವು ಅವರ ನಂಬಿಕೆಯನ್ನು ಗೆಲ್ಲುವಲ್ಲಿ ಕೆಲಸ ಮಾಡಿದ್ದೇವೆ ಹೊರತು ಅವರ ಹಿಂದಿನ ಬಗ್ಗೆ ತನಿಖೆ ನಡೆಸಲಿಲ್ಲ. ಜಿಲ್ಲಾಧಿಕಾರಿ ರಜತ್ ಬನ್ಸಾಲ್ ಅವರ ಪ್ರಯತ್ನಕ್ಕೆ ಧನ್ಯವಾದಗಳು, ಪ್ರಕಾಶ್ ಅವರ ಕುಟುಂಬದೊಂದಿಗೆ ಇದ್ದಾರೆ ಎಂದು ಚೆರಿಯನ್ ತಿಳಿಸಿದರು.