Tag: ಕಾಣೆ

  • 40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

    40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

    ಜೈಪುರ್: ಗ್ರಾಮದಲ್ಲಿ ಕತ್ತೆ ಕಳವಾಗಿವೆ ಹುಡುಕಿ ಕೊಡಿ ಎಂದು ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಕತ್ತೆಗಳ ಕಳವು ಪ್ರಕರಣ ರಾಜಸ್ಥಾನದ ಹನುಮಾನ್‍ಗಢ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

    ಈ ಜಿಲ್ಲೆಯ ಕಾಲುವೆ ಪ್ರದೇಶದಲ್ಲಿರುವ ಗ್ರಾಮಗಳ ಜನರು ಸರಕುಗಳ ಸಾಗಣೆ, ಮಣ್ಣು ಹೊರುವುದಕ್ಕಾಗಿ ಕತ್ತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಿದ್ದರು. ಅವುಗಳ ಕೆಲಸ ಮುಕ್ತಾಯವಾದ ನಂತರ ಬಯಲು ಪ್ರದೇಶಗಳಲ್ಲಿಯೇ ಮೇಯಲು ಬಿಡುತ್ತಿದ್ದರು. ಕೆಲವು ದಿನಗಳ ಹಿಂದೆ ಕತ್ತೆಗಳು ಕಾಣೆಯಾಗಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಕಳೆದ ಕೆಲವು ದಿನಗಳಿಂದ 40 ಕ್ಕೂ ಹೆಚ್ಚು ಕತ್ತೆಗಳು ನಾಪತ್ತೆಯಾಗಿದ್ದು, ಸ್ಥಳೀಯ ಕಾರ್ಯಕರ್ತರು ಹಾಗೂ ಕತ್ತೆಗಳ ಮಾಲಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. 15 ಕತ್ತೆಗಳನ್ನು ಹುಡುಕಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ ಈ ಕತ್ತೆಗಳನ್ನು ಮಾಲೀಕರು ಕರೆದಾಗ ಕತ್ತೆಗಳು ಯಾವುದೇ ಪ್ರತಿಕ್ರಿಯೇ ನೀಡಿಲ್ಲ.

    ಈ ಕತ್ತೆಗಳು ನಮ್ಮವೇ ಆಗಿದ್ದರೆ ಅವುಗಳಿಗೆ ಇಡಲಾಗಿದ್ದ ಹೆಸರನ್ನು ಕೂಗಿದ ತಕ್ಷಣ ಸ್ಪಂದಿಸಬೇಕಿತ್ತು ಇವು ನಮ್ಮ ಕತ್ತೆಗಳಲ್ಲ, ನಮ್ಮ ಕತ್ತೆಗಳು ಮಾತ್ರ ನಮ್ಮ ಕೆಲಸಗಳಿಗೆ ಪಳಗಿದ್ದವು ಬೇರೆ ಕತ್ತೆಗಳನ್ನು ಉಪಯೋಗಿಸುವುದಕ್ಕೆ ಆಗುವುದಿಲ್ಲ ಎಂದು ಮಾಲೀಕರು ತಗಾದೆ ತೆಗೆದಿದ್ದಾರೆ.

    ಯಾವುದೇ ಗುರುತುಗಳಿಲ್ಲದೇ ಕತ್ತೆಗಳನ್ನು ಹುಡುಕುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಠಾಣಾಧಿಕಾರಿ ವಿಜಯೇಂದ್ರ ಶರ್ಮ ಆದರೆ ನಮಗೆ ಬೇರೆ ಕಥೆಗಳಲ್ಲೆಲ್ಲಾ ಬೇಡ ನಮಗೆ ನಮ್ಮದೇ ಕತ್ತೆಗಳು ಬೇಕೆಂದು ಮಾಲಿಕರು ಪಟ್ಟು ಬಿಡದೇ ಪೊಲೀಸರನ್ನು ಕಾಡುತ್ತಿದ್ದಾರೆ. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

    ಚುನಾವಣೆ ಸನಿಹದಲ್ಲೇ ಇರುವುದರಿಂದ ರಾಜಕೀಯ ನಾಯಕರೂ ಕತ್ತೆ ಮಾಲಿಕರಿಗೇ ಬೆಂಬಲವಾಗಿ ನಿಂತಿದ್ದು, ಪೊಲೀಸರಿಗೆ ಇದು ಪೀಕಲಾಟಕ್ಕೆ ಬಂದಿರುವುದರಿಂದ 302, 307, ಎನ್ ಡಿಪಿಎಸ್ ಸೇರಿದಂತೆ ಗಂಭೀರ ಪ್ರಕರಣಗಳನ್ನೂ ಬದಿಗಿರಿಸಿ ಕತ್ತೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇದಕ್ಕಾಗಿ 4-5 ಸದಸ್ಯರನ್ನೊಳಗೊಂಡ ತಂಡವನ್ನೂ ರಚಿಸಲಾಗಿದೆ.  ಇದನ್ನೂ ಓದಿ: ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಬೇಡಿಕೆ

  • ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಮರಳಿ ಮನೆಗೆ

    ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಮರಳಿ ಮನೆಗೆ

    ಕೊಪ್ಪಳ:  ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಮನೆ ಮಂದಿಗೆ ಸಂತೋಷ, ಆಶ್ಚರ್ಯ ಉಂಟಾಗಿದೆ.

    ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಪಾರ್ವತಮ್ಮ ಗಂಡ ಗುರಬಸಪ್ಪ ಮಾಸ್ತರ ದಂಪತಿಯ ಮೂರು ಮಕ್ಕಳಲ್ಲಿಯ ಒರ್ವ ಮಗ ದೇವರಾಜ ಮಾಸ್ತರ ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ. ಈಗ ಕೊರೊನಾ ಭೀತಿಯಲ್ಲಿ ಕಂಪನಿಗೆ ರಜೆಯಿಂದ ಪಕ್ಕದ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದ ಸ್ನೇಹಿತರ ಮೂಲಕವಾಗಿ ಸ್ವಗ್ರಾಮಕ್ಕೆ ಹಿಂತಿರುಗಿ ಬಂದಿದ್ದಾನೆ. ದೇವರಾಜ 2008-09ರಲ್ಲಿ ಬೆಂಗಳೂರಿಗೆ ದುಡಿಯಲೆಂದು ಹೋದವನು ನಾಪತ್ತೆಯಾಗಿದ್ದ. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಇದನ್ನೂ ಓದಿ:  ಆಸ್ಪತ್ರೆಗೆ ಚೆಕಪ್‍ಗೆ ತೆರಳಬೇಕಿದ್ದ ತುಂಬು ಗರ್ಭಿಣಿ ಪರದಾಟ

    ಕಳೆದ ದಿನ ಮಧ್ಯಾಹ್ನ ಜುಮಲಾಪೂರ ಗ್ರಾಮದ ಆರಾಧ್ಯನಾದ ಪಾಂಡುರಂಗ ದೇವಾಲಯಕ್ಕೆ ಬಂದು ನಮಸ್ಕರಿಸುವ ಮುನ್ನ ತನ್ನ ಪರಿಚಯವನ್ನು ಹೇಳಿ ಕೊಂಡಾಗ ಸ್ಥಳದಲ್ಲಿದ್ದವರಿಗೆ ಆಶ್ಚರ್ಯವಾಗಿದೆ. ಮಗ ಹಿಂದಿರುಗಿರೋ ವಿಷಯವನ್ನ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದ ತಾಯಿ ದೇವಮ್ಮ, ಗುರಬಸಪ್ಪ ಮಾಸ್ತರ ದಂಪತಿ, ಮಗನನ್ನು ನೋಡಿ ಆನಂದಭಾಷ್ಪ ಸುರಿಸಿದ್ದಾರೆ.  ಇದನ್ನೂ ಓದಿ: ಕೊಪ್ಪಳದಲ್ಲಿ 50ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ

    ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ ಬೇಸತ್ತು, ಸ್ನೇಹಿತರ ಒಲವಿನಿಂದ ತವರಿಗೆ ಬರುವ ಮನಸ್ಸು ಮಾಡಿದ್ದಾನೆ ಎಂದು ತಂದೆ ಗುರುಬಸಪ್ಪ ತಿಳಿಸಿದ್ದಾರೆ. ಮಗನ ಮರಳಿ ಗೂಡಿಗೆ ಬಂದಿರುವ ಖುಷಿಗೆ ಪಾರವೇ ಇರಲಿಲ್ಲ, ಮನೆಯ ತುಂಬ ಜನವೋ… ಜನ ಸೇರಿ ಸಂತಸದ ಕ್ಷಣಗಳನ್ನು ನೆನಪಿಸಿದರು.

    ಹತ್ತು ವರ್ಷ ಕಾದ ನಮಗೆ ಗುಡದೂರ ದೊಡ್ಡಬವರ್ಯಾ ತಾತ ನಿನ್ನ ಮಗ ಬಂದೆ ಬರುತ್ತಾನೆ ಎನ್ನುವ ವಾಕ್ಯ ನಿಜವಾಯಿತು. ಮಗ ಬಂದಿರುವುದು ನಮ್ಮ ಮನೆಯವರು ಮಾಡಿದ ಪುಣ್ಯ ಕಣ್ರಿ ಎನ್ನುತ್ತಾ ಬಂದವರಿಗೆಲ್ಲ ಸಿಹಿಹಂಚುತ್ತಾ ಲವಲವಿಕೆಯಿಂದ ದೇವರಾಜನ ತಾಯಿ ಮನೆಮಂದಿಗೆಲ್ಲ ಫೋನ್ ಕರೆಮಾಡಿದ್ದಾರೆ.

  • ಇಟ್ಟಿಗೆ ಕೆಲಸಕ್ಕೆ ಹೋಗಿದ್ದ ತಾಯಿ ಇಬ್ಬರು ಮಕ್ಕಳೊಂದಿಗೆ ಕಾಣೆ

    ಇಟ್ಟಿಗೆ ಕೆಲಸಕ್ಕೆ ಹೋಗಿದ್ದ ತಾಯಿ ಇಬ್ಬರು ಮಕ್ಕಳೊಂದಿಗೆ ಕಾಣೆ

    ಹಾವೇರಿ: ಇಟ್ಟಿಗೆ ತಯಾರಿಕೆ ಕೆಲಸಕ್ಕೆ ಹೋಗಿ ಬರೋದಾಗಿ ಇಬ್ಬರು ಮಕ್ಕಳೊಂದಿಗೆ ತೆರಳಿದ್ದ ತಾಯಿ ಕಾಣೆಯಾಗಿರೋ ಪ್ರಕರಣ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ನಡೆದಿದೆ.

    ಕಾಣೆಯಾದವರನ್ನ ತಾಯಿ ರೇಣುಕಾ ಗುಳೇದ್ (28) ಆಗಿದ್ದಾಳೆ. ರೇಣುಕಾ ಜೊತೆಗೆ ಕಾಣೆಯಾದ ಏಳು, ಆರು ವರ್ಷದ ಮಕ್ಕಳಾಗಿದ್ದಾರೆ. ಜನವರಿ 22 ರಂದು ಇಬ್ಬರು ಮಕ್ಕಳೊಂದಿಗೆ ಕೆಲಸಕ್ಕೆ ಅಂತಾ ರೇಣುಕಾ ಮನೆಯಿಂದ ತೆರಳಿದ್ದರು. ಅಂದು ಕೆಲಸಕ್ಕೆ ಹೋದ ತಾಯಿ ಮತ್ತು ಆಕೆಯ ಜೊತೆ ಇದ್ದ ಮಕ್ಕಳು ಮೂವರು ನಾಪತ್ತೆಯಾಗಿದ್ದಾರೆ.

    ಈವರೆಗೂ ತಾಯಿ ಮತ್ತು ಮಕ್ಕಳಿಗಾಗಿ ಹುಡುಕಾಡಿದರೂ ಸುಳಿವು ಸಿಗದಿರೋದಕ್ಕೆ ರೇಣುಕಾ ಸಂಬಂಧಿಕರು ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಶಿಗ್ಗಾಂವಿ ಠಾಣೆ ಪೊಲೀಸರು ತಾಯಿ ಮತ್ತು ಇಬ್ಬರ ಮಕ್ಕಳ ಹುಡುಕಾಟಕ್ಕೆ ಜಾಲ ಬೀಸಿದ್ದಾರೆ.

  • ಹೊಲಕ್ಕೆ ಹೋದಾಗ ಕಾಣೆ- ಇಡೀ ರಾತ್ರಿ ಕಾಡಿನಲ್ಲಿ ಕಳೆದ ಪುಟ್ಟ ಕಂದಮ್ಮ

    ಹೊಲಕ್ಕೆ ಹೋದಾಗ ಕಾಣೆ- ಇಡೀ ರಾತ್ರಿ ಕಾಡಿನಲ್ಲಿ ಕಳೆದ ಪುಟ್ಟ ಕಂದಮ್ಮ

    – 24 ಗಂಟೆ ಬಳಿಕ ಪೋಷಕರ ಮಡಿಲು ಸೇರಿದ ಮಗಳು
    – ದಾರಿ ಅರಸುತ್ತ ಕಾಡಿನಲ್ಲಿ 5 ಕಿ.ಮೀ. ಒಳಗೆ ಸಾಗಿದ್ದ ಬಾಲಕಿ

    ದಾವಣಗೆರೆ: ತಂದೆ, ತಾಯಿ ಜೊತೆ ಹೊಲಕ್ಕೆ ಹೋಗಿದ್ದ ಆರು ವರ್ಷದ ಬಾಲಕಿ ಕಾಣೆಯಾಗಿ, 24 ಗಂಟೆಗಳ ಕಾಲ ಕಾಡಿನಲ್ಲಿ ಕಾಲ ಕಳೆದು ನಂತರ ಪೋಷಕರಿಗೆ ಸಿಕ್ಕಿದ್ದಾಳೆ.

    ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮಲೆಬೆನ್ನೂರಿನ ಇಂದಿರಾನಗರದ ನಿವಾಸಿ ಅಸ್ಗರ್ ಹಾಗೂ ಪಾತಿಮಾ ದಂಪತಿಯ ಆರು ವರ್ಷದ ಜೋಯಾ ಕಾಡಿನಲ್ಲಿ ತಪ್ಪಿಸಿಕೊಂಡಿದ್ದು, 24 ಗಂಟೆಗಳ ಬಳಿಕ ಪೋಷಕರ ಕೈ ಸೇರಿದ್ದಾಳೆ. ಪೋಷಕರು ಕೊಮಾರನಹಳ್ಳಿ ಕಾಡಿನ ಬಳಿ ಇರುವ ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಕಿದ್ದು, ಕಳೆದ ಮೂರು ದಿನಗಳ ಹಿಂದೆ ಅದನ್ನು ಕಟಾವು ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಆರು ವರ್ಷದ ಜೋಯಾ ಕೂಡ ಪೋಷಕರ ಜೊತೆ ಹೋಗಿ ಹೊಲದಲ್ಲಿ ದಾರಿ ತಪ್ಪಿ ಕಾಡಿನೊಳಗೆ ಹೋಗಿದ್ದಳು.

    ಮಗು ಕಾಣೆಯಾಗುತ್ತಿದ್ದಂತೆ ಪೋಷಕರು ಹಾಗೂ ಊರಿನ ಗ್ರಾಮಸ್ಥರು 300 ಜನ ರಾತ್ರಿಯಿಡೀ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಪಾಲಕರು ಮೆಕ್ಕೆಜೋಳದ ತೆನೆ ಮುರಿಯಲು ಹೊಲಕ್ಕೆ ಹೋದಾಗ ಆಡುತ್ತಾ ಅರಣ್ಯ ಹೋಗಿದ್ದ ಬಾಲಕಿ. ದಾರಿ ಗೊತ್ತಾಗದೆ ಸುಮಾರು ಐದು ಕಿಲೋಮೀಟರ್ ಅರಣ್ಯದಲ್ಲಿ ಹೋಗಿದ್ದಳು. ಪಾಲಕರ ನಿರಂತರ ಹುಡುಕಾಟ ಪ್ರಯತ್ನವಾಗಿಯೂ ಸಿಕ್ಕಿರಲಿಲ್ಲ. ಬಳಿಕ ಅರಣ್ಯದಲ್ಲಿ ಅಳುತ್ತ ಕುಳಿತ ಬಾಲಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮುನ್ನಾ ನೋಡಿದ್ದು, ಅದೃಷ್ಟ ವಶಾತ್ ಯಾವುದೇ ಕಾಡು ಪ್ರಾಣಿಗಳ ಕೈಗೆ ಸಿಗದೆ ಬಾಲಕಿ ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾಳೆ.

    ಒಂಟಿಯಾಗಿದ್ದ ಮಗು ಕಾಡಿನಲ್ಲಿ ಬಂಡೆಯ ಪಕ್ಕದಲ್ಲೇ ಕುಳಿತಿದ್ದು, ಅರಣ್ಯಾಧಿಕಾರಿಗಳು ಮಗುವನ್ನು ನೋಡಿ ದರ್ಗಾದ ಬಳಿ ಕರೆದುಕೊಂಡು ಬಂದಿದ್ದರು. 24 ಗಂಟೆಗಳ ಕಾಲ ಒಂದು ರಾತ್ರಿ ಒಂದು ಹಗಲು ಮಗು ಏಕಾಂಗಿಯಾಗಿ ಕಾಡಿನಲ್ಲಿ ಕಳೆದಿದ್ದು, ಕಾಡು ಪ್ರಾಣಿಗಳಿಗೆ ಸಿಗದೆ ಜೀವಂತವಾಗಿ ಬಂದು, ಪೋಷಕರ ಮಡಿಲು ಸೇರಿದೆ. ಇದರಿಂದಾಗಿ ಮಗುವಿನ ಪೋಷಕರು ತಿಂಬಾ ಸಂತಸಗೊಂಡಿದ್ದಾರೆ.

  • ಕಾಣೆಯಾಗಿದ್ದ ಭಾರತದ ಮೂಲದ ಯುವತಿ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಭಾರತದ ಮೂಲದ ಯುವತಿ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆ

    ವಾಷಿಂಗ್ಟನ್: ಕಳೆದ ತಿಂಗಳು ಕಾಣೆಯಾಗಿದ್ದ ಭಾರತದ ಮೂಲದ ಅಮೆರಿಕದಲ್ಲಿ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಅಮೆರಿಕದಲ್ಲಿ ನಡೆದಿದೆ.

    ಸುರೀಲ್ ದಾಬಾವಾಲಾ(34) ಕಾಣೆಯಾದ ಯುವತಿ. ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ ಸುರೀಲ್ 2019, ಡಿ.30ರಂದು ಕಾಣೆಯಾಗಿದ್ದಳು. ಆಕೆಗಾಗಿ ಪೋಷಕರು ಹುಡುಕಾಟ ನಡೆಸಲು ಶುರು ಮಾಡಿದ್ದರು.

    ಹಲವು ದಿನ ಹುಡುಕಾಟ ನಡೆಸಿದ ನಂತರ ಸುರೀಲ್‍ಳ ಮೃತದೇಹ ಬೆಡ್‍ಶೀಟ್‍ನಲ್ಲಿ ಸುತ್ತ ಸ್ಥಿತಿಯಲ್ಲಿ ಆಕೆಯ ಕಾರಿನಲ್ಲಿ ಪತ್ತೆಯಾಗಿತ್ತು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾರನ್ನು ಬಂಧಿಸಿಲ್ಲ. ಸುರೀಲ್ ತಂದೆ ಮೂಲತಃ ಗುಜರಾತಿನವರಾಗಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಸುರೀಲ್ ಕಾಣೆಯಾಗಿದ್ದಾಗ ಅವರ ಕುಟುಂಬದವರು ಹುಡುಕಿ ಕೊಟ್ಟವರಿಗೆ ಅಥವಾ ಮಾಹಿತಿ ನೀಡಿದವರಿಗೆ 7 ಲಕ್ಷ (10,000 ಡಾಲರ್) ನೀಡುವುದಾಗಿ ಘೋಷಿಸಿದ್ದರು.

    ಸುರೀಲ್ ಸಾವಿಗೆ ಕಾರಣ ಏನೂ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ನಾವು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ತಾಯಿ-ಮಗನನ್ನು ಒಂದು ಮಾಡಿದ ಫೇಸ್‍ಬುಕ್

    ತಾಯಿ-ಮಗನನ್ನು ಒಂದು ಮಾಡಿದ ಫೇಸ್‍ಬುಕ್

    -8 ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಪುತ್ರ

    ಹೈದರಾಬಾದ್: 8 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಫೇಸ್‍ಬುಕ್ ಮೂಲಕ ಪತ್ತೆಯಾಗಿ ತನ್ನ ತಾಯಿ ಬಳಿ ಸೇರಿದ ಘಟನೆ ತೆಲಂಗಾಣದ ರಚ್ಚಾಕೊಂದದಲ್ಲಿ ನಡೆದಿದೆ.

    ದಿನೇಶ್ ಜೀನಾ ಕಾಣೆಯಾಗಿದ್ದ ಯುವಕ. 2011ರಲ್ಲಿ ದಿನೇಶ್ ಜೇನಾ ಕಾಣೆಯಾಗಿದ್ದನು. ಈ ಬಗ್ಗೆ ಅವನ ತಾಯಿ ಸುಸಾನಾ ತನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ದಿನೇಶ್‍ನನ್ನು ಹುಡುಕಿದ್ದರು. ಆದರೆ ದಿನೇಶ್ ಎಲ್ಲಿಯೂ ಪತ್ತೆಯಾಗಿರಲಿಲ್ಲ ಎಂದು ಪೊಲೀಸ್ ಕಮಿಷನರ್ ಮಹೇಶ್ ಭಗವಾತ್ ಹೇಳಿದ್ದಾರೆ.

    ಸುಸಾನಾ ಫೇಸ್‍ಬುಕ್ ಬಳಸುವಾಗ ಅದರಲ್ಲಿ ತನ್ನ ಮಗನ ಪ್ರೊಫೈಲ್ ನೋಡಿದ್ದಾರೆ. ಬಳಿಕ ಸುಸಾನಾ ಈ ಬಗ್ಗೆ ರಚ್ಚಾಕೊಂಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ದೂರು ದಾಖಲಿಸಿದರು. ಪೊಲೀಸರು ಐಪಿ ವಿಳಾಸ ಪಡೆದುಕೊಂಡು ದಿನೇಶ್ ಇರುವ ಸ್ಥಳವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಆಗ ದಿನೇಶ್ ಪಂಜಾಬ್‍ನ ಅಮೃತ್‍ಸರ್ ಜಿಲ್ಲೆಯ ರನಾಕಾಲಾದಲ್ಲಿ ಇರುವುದು ತಿಳಿದು ಬಂದಿದೆ.

    ಪೊಲೀಸರು ಒಂದು ತಂಡವನ್ನು ರಚಿಸಿ ದಿನೇಶ್‍ನನ್ನು ಪಂಜಾಬ್‍ಗೆ ಹೋಗಿ ದಿನೇಶ್‍ನನ್ನು ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಿದ್ದಾರೆ. ಸದ್ಯ ಪೋಷಕರು ಹಾಗೂ ಸಂಬಂಧಿಕರು ದಿನೇಶ್‍ನನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • ನಿತ್ಯಾನಂದ ಸ್ವಾಮೀಜಿ ಕಾಣೆಯಾಗಿದ್ದಾನೆ, ಹುಡುಕಿಕೊಡಿ- ಕಾರ್ಯಕರ್ತರಿಂದ ಪ್ರತಿಭಟನೆ

    ನಿತ್ಯಾನಂದ ಸ್ವಾಮೀಜಿ ಕಾಣೆಯಾಗಿದ್ದಾನೆ, ಹುಡುಕಿಕೊಡಿ- ಕಾರ್ಯಕರ್ತರಿಂದ ಪ್ರತಿಭಟನೆ

    ರಾಮನಗರ: ಬಿಡದಿಯ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಕಾಣೆಯಾಗಿದ್ದಾನೆ. ನಿತ್ಯಾನಂದನನ್ನು ಹುಡುಕಿಕೊಡುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಮನಗರದಲ್ಲಿ ಇಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

    ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಐಜೂರು ವೃತ್ತದಲ್ಲಿ ಪ್ರತಿಭಟನಕಾರರು ನಿತ್ಯಾನಂದನನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಕರಪತ್ರಗಳನ್ನು, ಭಿತ್ತಿಪತ್ರಗಳನ್ನು ಗೋಡೆಗಳ ಮೇಲೆ, ವಾಹನಗಳ ಮೇಲೆ ಅಂಟಿಸಿದರು.

    ಅಲ್ಲದೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ನಿತ್ಯಾನಂದ ಕಾಣೆಯಾಗಿದ್ದಾನೆ. ಆತ ಹಲವು ಪ್ರಕರಣಗಳಿಗೆ ಬೇಕಾಗಿರುವ ವ್ಯಕ್ತಿ ಹುಡುಕಿಕೊಡಿ ಎಂದು ಭಿತ್ತಿ ಪತ್ರಗಳನ್ನು ಹಿಡಿದು ಮನವಿ ಮಾಡಿದರು. ಬಂಧನದ ಭೀತಿಯಲ್ಲಿ ಪದೇ ಪದೇ ನ್ಯಾಯಾಲಯಕ್ಕೆ ಗೈರಾಗುತ್ತಿರುವ ನಿತ್ಯಾನಂದ ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಕೂಡಲೇ ಆತನನ್ನ ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳನ್ನು ಮನೆಗೆ ಕರೆದೊಯ್ಯಲೊಪ್ಪದ ತಂದೆ: ಯುವತಿಯ ಜೊತೆ ಪೊಲೀಸರ ಅಮಾನವೀಯತೆ

    ಮಗಳನ್ನು ಮನೆಗೆ ಕರೆದೊಯ್ಯಲೊಪ್ಪದ ತಂದೆ: ಯುವತಿಯ ಜೊತೆ ಪೊಲೀಸರ ಅಮಾನವೀಯತೆ

    ಕಾರವಾರ: ಮೂರು ದಿನಗಳ ಹಿಂದೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿ ಅಮಾನವೀಯವಾಗಿ ಎಳೆದುಕೊಂಡು ಹೋದ ಘಟನೆ ನಗರದಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದ ಚಾಂದಿನಿ (17) (ಹೆಸರು ಬದಲಾಯಿಸಲಾಗಿದೆ) ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿ. ಚಾಂದಿನಿಯ ತಂದೆ ಜಗದೀಶ್ ಆಕೆಯನ್ನು ಸಾಕಲಾಗದೆ ಏಳು ತಿಂಗಳ ಹಿಂದೆಯೇ ಸ್ವೀಕಾರ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಕಾಣೆಯಾಗಿದ್ದ ಮಗಳು ಪತ್ತೆಯಾಗಿದ್ದರೂ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಜಗದೀಶ್ ಹಿಂದೇಟು ಹಾಕಿದ್ದಾರೆ.

    ನಡೆದದ್ದು ಏನು?: ಚಾಂದಿನಿ, ಜಗದೀಶ್ ನ ಮೊದಲ ಪತ್ನಿಯ ಮಗಳು. ಚಾಂದಿನಿ ಚಿಕ್ಕವಳಿದ್ದಾಗ ತಾಯಿ ಮೃತಪಟ್ಟಿದ್ದಳು. ತಂದೆ ಜಗದೀಶ್ ಮತ್ತೊಂದು ಮದುವೆ ಆಗಿದ್ದಾರೆ. ಇದರಿಂದಾಗಿ ಚಾಂದಿನಿ ನಿಷ್ಕಾಳಜಿಗೆ ಒಳಗಾಗಿದ್ದು, ಮಲತಾಯಿ ಧೋರಣೆಗೆ ತುತ್ತಾದ ಅವಳನ್ನು ಜಗದೀಶ್ 9ನೇ ತರಗತಿಯಲ್ಲಿಯೇ ಬೆಂಗಳೂರಿನ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ದೈಹಿಕ ಹಿಂಸೆ ನೀಡುತ್ತಿದ್ದರು ಅಂತಾ ಚಾಂದಿನಿ ತಪ್ಪಿಸಿಕೊಂಡು, ಪುನಃ ಮನೆಗೆ ಬಂದಿದ್ದಾಳೆ.

    ಮನೆಯಲ್ಲಿಯೇ ಇದ್ದು ವ್ಯಾಸಂಗ ಮಾಡುತ್ತಿದ್ದ ಚಾಂದಿನಿ ಜಗದೀಶ್ ನನ್ನು ದ್ವೇಷಿಸಲು ಪ್ರಾರಂಭಿಸಿದ್ದಳು. ನಿತ್ಯವೂ ಮಲತಾಯಿ ಜೊತೆಗೆ ಜಗಳವಾಡುತ್ತಿದ್ದಳು. ಅಷ್ಟೇ ಅಲ್ಲದೆ ಮನೆ ಬಿಟ್ಟು ಸುಮಾರು ದಿನ ಸ್ನೇಹಿತೆಯರ ಮನೆಯಲ್ಲಿ ತಂಗುತ್ತಿದ್ದಳು. ಇದರಿಂದ ಬೇಸತ್ತ ದಂಪತಿ ಆಕೆಗೆ ಮಾನಸಿಕ ಕಾಯಿಲೆಯಿದೆ, ನಮ್ಮಿಂದ ಸಾಕಲು ಆಗುವುದಿಲ್ಲವೆಂದು ಕಾರವಾರದ ಸ್ವೀಕಾರ ಕೇಂದ್ರಕ್ಕೆ ತಂದು ಬಿಟ್ಟಿದ್ದರು. ಪಿಯುಸಿ ಪೂರ್ಣಗೊಳಿಸಿದ್ದು, ಮನೆಯಲ್ಲಿ ಇರುವ ಇಚ್ಛೆಯನ್ನು ತಂದೆಗೆ ಹೇಳಿದ್ದರೂ, ಜಗದೀಶ್ ಆಕೆಯನ್ನು ಮನೆಗೆ ಕರೆದುಕೊಂಡೊಯ್ಯಲು ಒಪ್ಪುತ್ತಿರಲಿಲ್ಲ. ಹೀಗಾಗಿ ಮೂರು ದಿನಗಳ ಹಿಂದೆ ಆಕೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾಳೆ.

    ಚಾಂದಿನಿ ಕಾಣೆಯಾಗಿರುವ ಕುರಿತು ತಂದೆ ಜಗದೀಶ್ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬುಧವಾರ ರಾತ್ರಿ ಕಾರವಾರದ ಎಂ.ಜಿ.ರೋಡ್‍ನಲ್ಲಿ ಚಾಂದಿನಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಬಂದ ಸ್ವೀಕಾರ ಕೇಂದ್ರದ ಅಧಿಕಾರಿಗಳು, ಮಲ್ಲಾಪುರ ಪೊಲೀಸರು ಹಾಗೂ ಜಗದೀಶ್ ಚಾಂದಿನಿಯನ್ನು ಸ್ವೀಕಾರ ಕೇಂದ್ರಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಚಾಂದಿನಿ ಚರಂಡಿಯಲ್ಲಿ ಅರ್ಧ ಗಂಟೆ ಬಚ್ಚಿಟ್ಟುಕೊಂಡಿದ್ದಳು. ಅವಳ ಮನವೊಲಿಕೆಗಾಗಿ ಪೊಲೀಸರು ನಾವು ನಿನ್ನನ್ನು ಸ್ವೀಕಾರ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಜಗದೀಶ್ ಮಾತ್ರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ಧರಿರಲಿಲ್ಲ. ಯುವತಿಯ ಪ್ರತಿರೋಧದ ನಡುವೆಯೇ ಮಳೆಯನ್ನು ಲೆಕ್ಕಿಸದೇ ಸ್ವೀಕಾರ ಕೇಂದ್ರದ ಮಹಿಳಾ ಅಧಿಕಾರಿ ಹಾಗೂ ಮಹಿಳಾ ಪೊಲೀಸ್ ಅಮಾನವೀಯವಾಗಿ ಎಳೆದು ಆಟೋದಲ್ಲಿ ಸ್ವೀಕಾರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಆಧ್ಯಾತ್ಮದ ಕಡೆಗೆ ಟೆಕ್ಕಿ ಚಿತ್ತ!

    ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಆಧ್ಯಾತ್ಮದ ಕಡೆಗೆ ಟೆಕ್ಕಿ ಚಿತ್ತ!

    ಬೆಂಗಳೂರು: ನಗರದ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಬೇಕು ಅಂತಾಲೇ ನಾಪತ್ತೆಯಾಗಿರಬಹುದು ಎಂದು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಮೂಲತಃ ಬಿಹಾರದ ಪಾಟ್ನಾ ಮೂಲದ ಟೆಕ್ಕಿ ಅಜಿತಾಬ್ ಗೆ 25 ವರ್ಷವಾಗಿದ್ದು, ಆಧ್ಯಾತ್ಮ ಕಡೆ ಇನ್ನಿಲ್ಲದ ಒಲವು ಹೊಂದಿದ್ದರು. ಅಲ್ಲದೇ ತಮ್ಮ ಕೆಲ ಸ್ನೇಹಿತರಿಗೆ ಆರ್ ವಿಎಸ್(ರಾಜು ವಿಕಾಸ ಕೇಂದ್ರ)ದ ಚಿಂತನೆಗಳ ಬಗ್ಗೆ ಒಲವು ಬೆಳೆಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಸಿಐಡಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಆರ್ ವಿಎಸ್ ಆಧ್ಯಾತ್ಮ ಕೇಂದ್ರಗಳು ಭಾರತ ಸೇರಿದಂತೆ ವಿದೇಶದ ಹಲವು ಕಡೆಗಳಲ್ಲಿದ್ದು, ಸಾಕಷ್ಟು ಭಾರೀ ವಿದೇಶಗಳಲ್ಲಿರುವ ಆರ್ ವಿಎಸ್ ಆಶ್ರಮಗಳಿಗೆ ಹೋಗಿ ಬಂದಿದ್ದಾರೆ. ಇದಲ್ಲದೇ ಟೆಕ್ಕಿ ಮನೆಯಲ್ಲಿ ಮದುವೆ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾರೆ. ಮೊದಲೇ ಆಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿದ್ದ ಟೆಕ್ಕಿ ಇದರಿಂದ ತಪ್ಪಿಸಿಕೊಳ್ಳಲು ತಾನೇ ಸುವ್ಯವಸ್ಥಿತವಾಗಿ ಪ್ಲಾನ್ ಮಾಡಿ ಮಿಸ್ಸಿಂಗ್ ಆಗಿರಬಹುದು ಎಂದು ಸಿಐಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಿಐಡಿ ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದು, ಕೆಲ ದೇಶಿ ಆರ್ ವಿಎಸ್ ಆಧ್ಯಾತ್ಮ ಕೇಂದ್ರಗಳಲ್ಲಿ ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ದೇಶಿ ಆಧ್ಯಾತ್ಮ ಕೇಂದ್ರಗಳು ಟೆಕ್ಕಿ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲು ನಿರಾಕರಿಸಿವೆ. ಅಲ್ಲದೇ ವಿದೇಶಿ ಆಧ್ಯಾತ್ಮ ಕೇಂದ್ರಗಳಿಗೆ ಹೋಗಿ ತನಿಖೆ ನಡೆಸಲು ಮುಂದಾಗಲು ಅರ್ಥಿಕವಾಗಿ ತೊಂದರೆಯಿದೆ ಎಂದು ಸಿಐಡಿ ತಿಳಿಸಿದೆ.

    ಏನಿದು ಪ್ರಕರಣ?
    ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಬ್ ತನ್ನ ಸಿಯಾಜ್ ಕಾರನ್ನು ಮಾರಾಟ ಸಂಬಂಧ ಓಎಲ್ ಎಕ್ಸ್ ನಲ್ಲಿ ಮಾಹಿತಿ ಹಾಕಿದ್ದರು. ಓಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್ 18 ರಂದು ಅವರ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಅಜಿತಾಬ್, ಕೆಎ 03 ಎನ್‍ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ಹೊರ ಹೋದವರು ಇದೂವರೆಗೂ ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

    ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ನಂತರ ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಕೈಗೊಂಡ ಸಿಐಡಿ ಪೊಲೀಸರು ಸ್ಫೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.

  • ಕಾಣೆಯಾದ ಟೆಕ್ಕಿಯನ್ನು ಹುಡುಕಲು ರೋಡಿಗಿಳಿದ ಬೆಂಗ್ಳೂರು ಟೆಕ್ಕಿಗಳು!

    ಕಾಣೆಯಾದ ಟೆಕ್ಕಿಯನ್ನು ಹುಡುಕಲು ರೋಡಿಗಿಳಿದ ಬೆಂಗ್ಳೂರು ಟೆಕ್ಕಿಗಳು!

    ಬೆಂಗಳೂರು: ಟೆಕ್ಕಿ ಅಜಿತಾಬ್ ಪ್ರಕರಣವನ್ನು ಪೊಲೀಸರು ಭೇದಿಸದೇ ಇರೋದನ್ನ ಖಂಡಿಸಿ ಬೆಂಗಳೂರಿನ ಟೌನ್‍ಹಾಲ್ ಮುಂದೆ ಟೆಕ್ಕಿಗಳು ಪ್ರತಿಭಟನೆ ನಡೆಸಿದರು.

    ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾದ ಬೆಂಗಳೂರು ಪೊಲೀಸರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

    ಏನಿದು ಪ್ರಕರಣ?
    ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಬ್ ತನ್ನ ಸಿಯಾಜ್ ಕಾರನ್ನು ಮಾರಾಟ ಸಂಬಂಧ ಓಎಲ್‍ಎಕ್ಸ್ ನಲ್ಲಿ ಮಾಹಿತಿ ಹಾಕಿದ್ದರು. ಒಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್ 18ರಂದು ಅವರ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಅಜಿತಾಬ್, ಕೆಎ 03 ಎನ್‍ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ಹೊರ ಹೋದವರು ಇದೂವರೆಗೂ ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

    ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ನಂತರ ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ನಾಪತ್ತೆಯಾಗಿ 200 ದಿನ ಕಳೆದರೂ ಅಜಿತಾಬ್ ಸುಳಿವು ಸಿಕ್ಕಿಲ್ಲ.

    ಒಎಲ್ ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು. ಆಗ ಪೊಲೀಸರು ಈ ಪ್ರಕರಣವನ್ನು ಸವಲಾಗಿ ತೆಗೆದುಕೊಂಡು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಿದ್ದರು. ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು. 8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದರು. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸಿದ್ದರು.