Tag: ಕಾಣಿಕೆ

  • ದೇವರ ದುಡ್ಡಲ್ಲಿ ಕದಂಬೋತ್ಸವ- ಕಲಾವಿದರನ್ನು ಕರೆಸಲು ಕಾಣಿಕೆ ಹಣ ಕೇಳಿದ ಜಿಲ್ಲಾಡಳಿತ!

    ದೇವರ ದುಡ್ಡಲ್ಲಿ ಕದಂಬೋತ್ಸವ- ಕಲಾವಿದರನ್ನು ಕರೆಸಲು ಕಾಣಿಕೆ ಹಣ ಕೇಳಿದ ಜಿಲ್ಲಾಡಳಿತ!

    ಕಾರವಾರ: ಪಂಪನ ನಾಡು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ತಲಾ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡುವಂತೆ ತನ್ನ ಇಲಾಖೆಗೆ ಒಳಪಡುವ ಎ ಮತ್ತು ಬಿ ವರ್ಗದ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ.

    ಮುಜರಾಯಿ ಇಲಾಖೆಯ ಈ ಸೂಚನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಉತ್ಸವ ನಡೆಸಲು ಭಕ್ತರ ಹಣವೇಕೇ ಎಂಬ ಮಾತುಗಳು ಕೇಳಿ ಬರುತ್ತಿದ್ದರೆ ಕೆಲವು ದೇವಸ್ಥಾನಗಳು ಈಗಾಗಲೇ ಒಂದು ಲಕ್ಷ ಮೊತ್ತದ ಚೆಕ್ ಗಳನ್ನು ನೀಡಿವೆ.

    ಪ್ರತಿ ವರ್ಷ ಕದಂಬೋತ್ಸವ ಹಾಗೂ ಕರಾವಳಿ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಿಂದ ಹಾಗೂ ಖಾಸಗಿ ಉದ್ಯಮಿಗಳ ದೇಣಿಗೆ ಸಂಗ್ರಹಿಸಿ ಮಾಡಲಾಗುತಿತ್ತು. ಆದರೆ ಈ ಬಾರಿ ಕರಾವಳಿ ಉತ್ಸವಕ್ಕೆ ಅನುದಾನದ ಕೊರತೆ ಹಾಗೂ ಪ್ರವಾಹದ ತೊಂದರೆಯಿಂದಾಗಿ ರದ್ದು ಮಾಡಲಾಗಿದೆ.

    ಕದಂಬೋತ್ಸವ ಕಾರ್ಯಕ್ರಮವನ್ನು ಮಾತ್ರ ಮಾಡಲು ಜಿಲ್ಲಾಡಳಿತ ಮುಂದೆ ಬಂದಿದ್ದು ಇದಕ್ಕಾಗಿ ಸರ್ಕಾರದಿಂದ ಅನುದಾನ ಬಂದಿದೆ. ಈ ಅನುದಾನವು ಸದ್ಯ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಲ್ಪದ್ದಾಗಿದೆ. ಉದ್ಯಮಿಗಳು ಹಾಗೂ ದಾನಿಗಳ ಸಹಕಾರ ಪಡೆಯಬಹುದಾಗಿತ್ತು. ಆದರೆ ಈ ಹಿಂದೆ ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರೇ ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ದೇಣಿಗೆ ಸಂಗ್ರಹ ಮಾಡುತ್ತಿದ್ದರು. ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವೆ ನೆಪ ಮಾತ್ರಕ್ಕೆ ಎಂಬಂತಾಗಿದ್ದು ಅವರಿಗು ಕೂಡ ಆಸಕ್ತಿ ಇಲ್ಲದಂತಾಗಿದೆ. ಹೀಗಾಗಿ ಕದಂಬೋತ್ಸವ ಕಾರ್ಯಕ್ರಮ ನಿಗದಿಯಾದರೂ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಣೆ ಮಾಡಲು ತಡವಾಗಿದ್ದು ಇನ್ನೂ ಘೋಷಣೆಯಾಗಿಲ್ಲ.

    ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು ದೊಡ್ಡ ದೊಡ್ಡ ಕಲಾವಿದರನ್ನು ಕರೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಕೋಟಿ ಹಣದ ಖರ್ಚಾಗಲಿದೆ. ಎರಡು ದಿನ ಪಂಪನ ನಾಡಾದ ಬನವಾಸಿಯಲ್ಲಿ ಕದಂಬೋತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಸಹ ನೀಡಲಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ದೇಣಿಗೆ ಸಂಗ್ರಹ ಅನಿವಾರ್ಯವಾಗಿದೆ.

    ಈಗಿನ ಪರಿಸ್ಥಿತಿಯಲ್ಲಿ ಉದ್ಯಮಿಗಳಾಗಲಿ, ರಾಜಕಾರಣಿಗಳಾಗಲಿ ದೇಣಿಗೆ ನೀಡಲು ಮುಂದಾಗದ ಕಾರಣ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ತನ್ನದೇ ಇಲಾಖೆಯ ಸುಪರ್ದಿಯಲ್ಲಿರುವ ಮುಜರಾಯಿ ದೇವಸ್ಥಾನದ ಹುಂಡಿಗೆ ಕೈಹಾಕಿದೆ. ಜನವರಿ 30ರಂದು ಮುಜರಾಯಿ ಇಲಾಖೆಯಿಂದ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೆ ನೋಟಿಸ್ ನೀಡಿದ್ದು ಹಲವರು ಹಣವನ್ನು ದೇಣಿಗೆ ರೂಪದಲ್ಲಿ ನೀಡಿದರೆ ಇನ್ನೂ ಕೆಲವು ದೇವಸ್ಥಾನದ ಕಮಿಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇದಕ್ಕೆ ಈ ಹಣ ಬಳಸಲಿ ಅದನ್ನು ಬಿಟ್ಟು ದೇವಸ್ಥಾನ ಹಣ ಮನೋರಂಜನೆಗೆ ಹೋಗುತ್ತಿರುವುದಕ್ಕೆ ಮುಜರಾಯಿ ದೇವಸ್ಥಾನದ ಹಲವು ಕಮಿಟಿಯವರು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಕೂಡ ನಾವು ಬಲವಂತವಾಗಿ ಆದೇಶಿಸಿಲ್ಲ, ಹಣದ ಕೊರತೆ ಇದೆ ದೇಣಿಗೆ ನೀಡಿ ಎಂದಷ್ಟೇ ಸೂಚನೆ ನೀಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಕಡ್ಡಾಯವಾಗಿ ನೀಡಲೇಬೇಕು ಎಂದು ಒತ್ತಡ ಕೇಳಿಬಂದಿದೆ ಎಂಬ ಆರೋಪ ಕೇಳಿಬಂದಿದ್ದು ಈಗ ವಿವಾದ ಉಂಟುಮಾಡಿದೆ.

  • ಮಲೆಮಹದೇಶ್ವರ ದೇವಾಲಯದ ಹುಂಡಿ ಏಣಿಕೆ – 28 ದಿನಗಳಲ್ಲಿ 1.25 ಕೋಟಿ ನಗದು ಸಂಗ್ರಹ

    ಮಲೆಮಹದೇಶ್ವರ ದೇವಾಲಯದ ಹುಂಡಿ ಏಣಿಕೆ – 28 ದಿನಗಳಲ್ಲಿ 1.25 ಕೋಟಿ ನಗದು ಸಂಗ್ರಹ

    ಚಾಮರಾಜನಗರ: ಕರ್ನಾಟಕದಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮಲೆ ಮಹೇಶ್ವರ ದೇವಾಲಯದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಹುಂಡಿ ಹಣ ಸಂಗ್ರಹವಾಗಿದೆ.

    ಮೇ ತಿಂಗಳ ಹುಂಡಿ ಎಣಿಕೆ ಕಾರ್ಯ ಗುರುವಾರ ತಡ ರಾತ್ರಿ ಮುಗಿದಿದ್ದು, 28 ದಿನಗಳಲ್ಲಿ ಬರೋಬ್ಬರಿ 1 ಕೋಟಿ 28 ಲಕ್ಷ 50 ಸಾವಿರ 373 ರೂಪಾಯಿ ನಗದು ಹಣ ಸಂಗ್ರಹವಾಗಿದೆ. ನಗದು ಹೊರತುಪಡಿಸಿ 70 ಗ್ರಾಂ ಚಿನ್ನ, 1 ಕೆಜಿ 100 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

    ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆನಂದ್ ಮತ್ತು ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಸಮ್ಮುಖದಲ್ಲಿ ನೂರಾರು ಸಿಬ್ಬಂದಿಗಳು ಹುಂಡಿ ಕಾರ್ಯ ನಡೆಸಿದರು. ಪ್ರತಿ ತಿಂಗಳಿಗೊಮ್ಮೆ ಹುಂಡಿ ಎಣಕೆ ಕಾರ್ಯ ನಡೆಯುತ್ತಿದೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಇದಾಗಿದ್ದು, ಕಳೆದ ಬಾರಿ 32 ದಿನಕ್ಕೆ 1.60 ಕೋಟಿ ರೂ. ಸಂಗ್ರಹವಾಗಿತ್ತು. ಈಗ ದಿನದಿಂದ ದಿನಕ್ಕೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ದೇವಸ್ಥಾನದ ಹುಂಡಿಯಲ್ಲಿ ಕಾಣಿಕೆ ಕೂಡ ಹೆಚ್ಚಾಗಿದೆ.

    ದೇವಾಲಯಕ್ಕೆ ಇಷ್ಟು ಅದಾಯ ಬಂದರೂ ಮೂಲಭೂತ ಸೌಕರ್ಯ ಮಾಡಲಿಲ್ಲ ಎಂದು ಜನರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ದೇವಾಲಯದಲ್ಲಿ ಕುಡಿಯುವ ನೀರು, ರಸ್ತೆಯ ಸೌಲಭ್ಯ ಇಲ್ಲ. ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

  • ಮಾದಪ್ಪನ ಹುಂಡಿಯಲ್ಲಿ 2.13 ಕೋಟಿ ರೂ. ಸಂಗ್ರಹ!

    ಮಾದಪ್ಪನ ಹುಂಡಿಯಲ್ಲಿ 2.13 ಕೋಟಿ ರೂ. ಸಂಗ್ರಹ!

    – 55ಗ್ರಾಂ ಚಿನ್ನ, 1ಕೆ.ಜಿ 800ಗ್ರಾಂ ಬೆಳ್ಳಿ

    ಚಾಮರಾಜನಗರ: ರಾಜ್ಯದ ಅತೀ ಹೆಚ್ಚು ಆದಾಯ ತರುವ ದೇವಸ್ಥಾನಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ ಒಂದು ತಿಂಗಳಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ನೀಡಿದ ಹಣ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 2 ಕೋಟಿ, 13 ಲಕ್ಷದ 93 ಸಾವಿರ ರೂ. ಹಾಗೂ 55 ಗ್ರಾಂ ಚಿನ್ನ ಹಾಗೂ 1 ಕೆ.ಜಿ 800 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗಾಯಿತ್ರಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆದಿದ್ದು, ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ.

    ಈ ಹಿಂದೆ ಅಂದರೆ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮಲೆಮಹದೇಶ್ವರಬೆಟ್ಟದ ಹುಂಡಿಯಲ್ಲಿ ಮೂರೇ ದಿನದಲ್ಲಿ 1.44 ಕೋಟಿ ರೂ. ಹಣ ಸಂಗ್ರವಾಗಿತ್ತು. ದೀಪಾವಳಿ ಹಬ್ಬದ ಸಮಯದಲ್ಲಿ ಮೂರು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರಬೆಟ್ಟದಲ್ಲಿ ನಡೆದ ದೊಡ್ಡ ರಥೋತ್ಸವ ಜಾತ್ರೆಯ ವೇಳೆ ಭಕ್ತರಿಂದ ಇಷ್ಟು ಮೊತ್ತದ ಹಣ ಸಂಗ್ರಹವಾಗಿತ್ತು.

    ವರ್ಷದಿಂದ ವರ್ಷಕ್ಕೆ ಜಾತ್ರಾ ಮಹೋತ್ಸವದ ವೇಳೆ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರವಾಗುತ್ತಿತ್ತು. ಮೂರು ದಿನದ ಅವಧಿಯಲ್ಲಿ 2.42 ಲಕ್ಷದಷ್ಟು ಲಡ್ಡುಗಳನ್ನು ಭಕ್ತರು ತೆಗೆದುಕೊಂಡಿದ್ದರು.

  • ಹಾಸನಾಂಭಾ ದೇವಾಲಯದ ಕಾಣಿಕೆ ಹಣಕ್ಕೆ ಭಾರೀ ಖೋತಾ

    ಹಾಸನಾಂಭಾ ದೇವಾಲಯದ ಕಾಣಿಕೆ ಹಣಕ್ಕೆ ಭಾರೀ ಖೋತಾ

    ಹಾಸನ: ನವೆಂಬರ್ 1 ರಿಂದ 9 ರ ವರೆಗೆ ನಡೆದ ಹಾಸನಾಂಭೆ ದರ್ಶನೋತ್ಸವದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಈ ಬಾರಿ 2.64 ಕೋಟಿ ರೂ. ನೀಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯಕ್ಕೆ ಒಂದೂವರೆ ಕೋಟಿ ರೂ. ಕಡಿಮೆ ಆಗಿದೆ.

    ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಭೆಗೆ ಪ್ರತಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಆದಾಯ ಹರಿದು ಬರುತ್ತಿತ್ತು. ಅಲ್ಲದೇ ವರ್ಷದಿಂದ ವರ್ಷಕ್ಕೆ ದೇವಾಲಯದ ಆದಾಯ ಪ್ರಮಾಣ ಏರಿಕೆಯಾಗುತ್ತಲೇ ಇತ್ತು. ಇದಕ್ಕೆ ಪುಷ್ಟಿ ಎಂಬಂತೆ 2013 ರಲ್ಲಿ 1,21 ಕೋಟಿ ರೂ., 2014 ರಲ್ಲಿ 1,27 ಕೋಟಿ ರೂ, 2015 ರಲ್ಲಿ 1.46 ಕೋಟಿ ರೂ, 2016 ರಲ್ಲಿ 2.67 ಕೋಟಿ ರೂ. ಮತ್ತು 2017 ರಲ್ಲಿ 4.14 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

    ಈ ಬಾರಿ ಕಾಣಿಕೆ ರೂಪದ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದೂವರೆ ಕೋಟಿ ರೂ. ಕಡಿಮೆ ಆಗಿದೆ. ನವೆಂಬರ್ 1 ರಿಂದ 9 ರವರೆಗೆ ನಡೆದ ದರ್ಶನ ಅವಧಿಯಲ್ಲಿ ಹರಕೆಯ ಕಾಣಿಕೆ, ಟಿಕೆಟ್, ಲಾಡು ಮತ್ತು ಸೀರೆ ಮಾರಾಟದಿಂದ ಒಟ್ಟು 2,64,14,911 ರೂ. ಹಣ ಸಂಗ್ರಹವಾಗಿದೆ. ಈ ಪೈಕಿ 1 ಸಾವಿರ ರೂ. ಬೆಲೆಯ ಟಿಕೆಟ್ ಮಾರಾಟದಿಂದ 90.87.400 ಲಕ್ಷ ರೂ., 300 ರೂ. ಟಿಕೆಟ್ ಮಾರಾಟದಿಂದ 53,78,400 ರೂ., ಲಾಡು ಪ್ರಸಾದ ಮಾರಾಟದಿಂದ 13,39,440 ರೂ. ಮತ್ತು ಸೀರೆ ಮಾರಾಟದಿಂದ 56,200 ರೂ. ಸಂಗ್ರಹವಾಗಿದೆ.

    ದೇವಾಲದಯ ಆದಾಯ ಕಡಿಮೆ ಆಗಲು ಜಿಲ್ಲಾಡಳಿತದ ಬೇಜವಾಬ್ದಾರಿ ನಡೆ ಕಾರಣ ಎಂದು ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ಆರೋಪಿಸಿದ್ದಾರೆ. ಕಳೆದ ಆರೇಳು ವರ್ಷಗಳಿಂದ ದೇವಾಲಯ ಖಾತೆಗೆ ವಿವಿಧ ಮೂಲಗಳಿಂದ ಕೋಟಿ ಕೋಟಿ ರೂ. ಆದಾಯ ಬರುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ದೇಗುಲ ಪ್ರಾಂಗಣ ಅಭಿವೃದ್ಧಿಯಾಗಿಲ್ಲ. ಇದಕ್ಕೆ ಒತ್ತು ನೀಡುವುದರ ಜೊತೆಗೆ ವರ್ಷ ವರ್ಷ ಬರುವ ಭಕ್ತರಿಗೆ ಬೇಕಾದ ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕಿತ್ತು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಅವರು, ಜನಪ್ರತಿನಿಧಿಯಾದ ನನ್ನನ್ನೇ ಹಾಸನಾಂಭೆ ಉತ್ಸವದ ಸಭೆಗೆ ಆಹ್ವಾನಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಾಸನಾಂಭೆ ಮಹಿಮೆ, ವಿಶೇಷತೆ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ನೀಡಿದ್ದ ಮಾಧ್ಯಮಗಳನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಈ ರೀತಿಯ ಹಲವು ಗೊಂದಲಗಳಿಂದಾಗಿ ಭಕ್ತರ ಸಂಖ್ಯೆ ಕಡಿಮೆಯಾಗಿ, ಆದಾಯವೂ ಕುಗ್ಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.

    ಅಪಾರ ಪ್ರಮಾಣದಲ್ಲಿ ಹಾಸನಾಂಭ ದೇವಾಲಯಕ್ಕೆ ಭಕ್ತರು ಹಣ ನೀಡಿದ್ದರು, ದೇವಾಲಯ ಹಾಗೂ ಸುತ್ತಮುತ್ತಲಿನ ವಾತಾವರಣದ ಅಂದ ಹೆಚ್ಚಿಸಲು ಬಳಕೆಯಾಗುತ್ತಿಲ್ಲ. ಹಾಸನಾಂಭೆ ದೇಗುಲ ನಗರದ ಹೃದಯ ಭಾಗದಲ್ಲಿದ್ದು, ಆದರೆ ದೇವಾಲಯದ ಸುತ್ತಮುತ್ತ ಇರುವ ಹಳೆಯ ಕಾಲದ ಮನೆಗಳನ್ನು ತೆರವು ಗೊಳಿಸಿ ವಿಶಾಲಗೊಳಿಸಬೇಕು ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ. ಅಲ್ಲದೇ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಶಾಶ್ವತ ಕುಡಿಯುವ ನೀರು, ಶೌಚಾಲಯ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂಬ ಒತ್ತಡ ಕೇಳಿ ಬಂದಿತ್ತು.

    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ. ಈ ಬಾರಿಯ ಕಾಣಿಕೆ ಹಣವೂ ಸೇರಿ ದೇವಾಲಯ ಖಾತೆಯಲ್ಲಿ ಬರೋಬ್ಬರಿ 10 ಕೋಟಿ ಹಣವಿದ್ದು, ಅದನ್ನು ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಲೆಕ್ಷನ್ ಎಫೆಕ್ಟ್: ಬನಶಂಕರಿ ದೇಗುಲದ ಹುಂಡಿಯಲ್ಲಿ ಭರ್ಜರಿ ದುಡ್ಡು

    ಎಲೆಕ್ಷನ್ ಎಫೆಕ್ಟ್: ಬನಶಂಕರಿ ದೇಗುಲದ ಹುಂಡಿಯಲ್ಲಿ ಭರ್ಜರಿ ದುಡ್ಡು

    ಬೆಂಗಳೂರು: ಚುನಾವಣೆ ಬಂದಿದ್ದೇ ಬಂದಿದ್ದು, ರಾಜ್ಯದಲ್ಲಿ ಚುನಾವಣಾ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ನಾಯಕ ಗೆಲ್ಲಲಿ ಅಂತಾ ದೇವರ ಮೊರೆ ಹೋಗ್ತಿದ್ದಾರೆ.

    ಬನಶಂಕರಿ ದೇಗುಲದ ಹುಂಡಿ ಎಲೆಕ್ಷನ್ ಕೃಪೆಯಿಂದ ತುಂಬಿ ತುಳುಕಿದ್ದು ಮಗದೊಂದು ದಾಖಲೆಯ ಮೊತ್ತ ಹುಂಡಿಯಲ್ಲಿ ಸಂಗ್ರಹವಾಗಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಹುಂಡಿ ತೆರೆದಾಗ 20 ಲಕ್ಷ ದಿಂದ 22 ಲಕ್ಷದಷ್ಟು ದುಡ್ಡು ಸಂಗ್ರಹವಾಗುತ್ತಿತ್ತು. ಒಂದೇ ತಿಂಗಳಿಗೆ ಎಂಟು ಲಕ್ಷ ಆದಾಯ ಹೆಚ್ಚಾಗಿದೆ.

    ಈ ಬಾರಿ ಬರೋಬ್ಬರಿ 30 ಲಕ್ಷದಷ್ಟು ಹಣ ಸಂಗ್ರಹವಾಗಿದ್ದು ಮುಜರಾಯಿ ಇಲಾಖೆಯವರು ಫುಲ್ ಖುಷ್ ಆಗಿದ್ದಾರೆ. ಸಚಿವ ರಾಮಲಿಂಗರೆಡ್ಡಿ ಮಗಳು ಸೌಮ್ಯ ರೆಡ್ಡಿ ಸೇರಿದಂತೆ ಜಯನಗರ, ಬಿಟಿಎಂ ಲೇಔಟ್ ಹಾಗೂ ಬೆಂಗಳೂರು ವಿಧಾನಸಭಾ ಕ್ಷೇತ್ರದ ಬಹುತೇಕ ಅಭ್ಯರ್ಥಿಗಳು, ಕಾರ್ಯಕರ್ತರು ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವರಿಗೆ ಪೂಜೆ ಮಾಡಿಸಿದ್ದರು.

  • ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 1 ಕೋಟಿ 11 ಲಕ್ಷದ 25 ಸಾವಿರದ 636 ರುಪಾಯಿ ನಗದು ಕಾಣಿಕೆಯಾಗಿ ದೊರತಿದೆ.

    ಇದರ ಜೊತೆಗೆ 25 ಗ್ರಾಂ ಚಿನ್ನ ಮತ್ತು 1 ಕೆ.ಜಿ 382 ಗ್ರಾಂ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ. ಜನವರಿ 31ರ ತಡರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಇಷ್ಟೊಂದು ಕಾಣಿಕೆ ಭಕ್ತರಿಂದ ಬಂದಿದೆ.

    ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ ರೂಪ ಅಧ್ಯಕ್ಷತೆಯಲ್ಲಿ, ಸಾಲೂರು ಮಠದ ಗುರುಸ್ವಾಮಿ ಸಮ್ಮಖದಲ್ಲಿ ಮತ್ತು ಎಸ್‍ಬಿಐ ಬ್ಯಾಂಕ್ ಸಿಬ್ಬಂದಿಗಳು ಸಿಸಿ ಕ್ಯಾಮಾರಾದ ಕಣ್ಗಾವಲಿನಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಸಿದರು.

    ಹುಂಡಿ ಎಣಿಕೆ ಕಾರ್ಯ ಪ್ರತಿ ತಿಂಗಳ ಕೊನೆಯ ದಿನದಂದು ನಡೆಯುತ್ತದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತರುವ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ 2ನೇ ಸ್ಥಾನವನ್ನ ಮಲೆ ಮಹದೇಶ್ವರ ದೇವಾಲಯದ ಪಡೆದುಕೊಂಡಿದೆ.

  • ದೇವಾಲಯದ ಮುಂದೆ ಭಿಕ್ಷೆ ಬೇಡಿ 2.30 ಲಕ್ಷ ರೂ. ಕಾಣಿಕೆ ನೀಡಿದ ಮಹಿಳೆ

    ದೇವಾಲಯದ ಮುಂದೆ ಭಿಕ್ಷೆ ಬೇಡಿ 2.30 ಲಕ್ಷ ರೂ. ಕಾಣಿಕೆ ನೀಡಿದ ಮಹಿಳೆ

    ಮೈಸೂರು: ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ವಯೋವೃದ್ಧ ಭಿಕ್ಷುಕಿ ಅದೇ ದೇವಸ್ಥಾನದಲ್ಲಿನ ದೇವರಿಗೆ 2.30 ಲಕ್ಷ ರೂ. ಹಣವನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ.

    ಮೈಸೂರಿನ ಪಡುವಾರಹಳ್ಳಿಯಲ್ಲಿನ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಎಂ.ವಿ. ಸೀತಾ ಎಂಬವರು ಹಲವು ವರ್ಷದಿಂದ ಭಿಕ್ಷೆ ಬೇಡುತ್ತಿದ್ದು, ಹಾಗೇ ಭಿಕ್ಷೆ ಬೇಡಿ ಸಂಪಾದಿಸಿದ 2.30 ಲಕ್ಷ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಹನುಮ ಜಯಂತಿ ದಿನ ಅನ್ನಸಂತರ್ಪಣೆಗಾಗಿ ಕಾಣಿಕೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ತನ್ನವರೂ ಅಂತಾ ಯಾರು ಇಲ್ಲದ ಸೀತಮ್ಮ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ಮಲಗುತ್ತಾರೆ. ದಿನವೂ ಭಿಕ್ಷೆ ಬೇಡಿ ಅದರಲ್ಲಿ ಸಿಕ್ಕ ಹಣವನ್ನು ವಾರಕೊಮ್ಮೆ ತನ್ನ ಬ್ಯಾಂಕ್ ಅಕೌಂಟ್ ಗೆ ಹಾಕುತ್ತಿದ್ದರು. ಈಗ ತಮ್ಮ ಅಕೌಂಟ್ ನಲ್ಲಿದ್ದ ಎಲ್ಲಾ ಹಣವನ್ನು ಯಾವ ದೇವರ ಮುಂದೆ ಕೂತು ಭಿಕ್ಷೆ ಬೇಡಿ ಸಂಪಾದಿಸಿದ್ದರೋ ಅದೇ ದೇವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

    ಮೊದಲು ಮನೆ ಕೆಲಸ ಮಾಡುತ್ತಿದ್ದೆ. ನಂತರ ಭಿಕ್ಷೆ ಬೇಡಿ ಹಣವನ್ನು ಸಂಗ್ರಹಿಸಲು ಆರಂಭಿಸಿದೆ. ದೇವರು ನನಗೆ ಉಸಿರು ಬದುಕು ಕೊಟ್ಟಿದ್ದಾನೆ. ಅವನಿಂದ ಪಡೆದಿದ್ದನ್ನು ಅವನಿಗೆ ವಾಪಸ್ ಕೊಡುತ್ತಿದ್ದೇನೆ. ನನಗೆ ಇದರಲ್ಲಿ ತೃಪ್ತಿ ಇದೆ ಎಂದು ಸೀತಮ್ಮ ಹೇಳಿದ್ದಾರೆ.

    ಮೂಲತಃ ಮದ್ರಾಸ್ ಮೂಲದ ಅವರು ತಮ್ಮ ಪೋಷಕರದ ವೀರ ರಾಘವಮೂರ್ತಿ ಹಾಗೂ ಉನ್ನವೇಲಮ್ಮ ರವರ 12 ಮಕ್ಕಳ ಪೈಕಿ ಎಂಟನೆಯವರು. ಮೈಸೂರಿನ ರಾಜಮನೆತನದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಇವರ ತಂದೆ ವೀರರಾಘವಮೂರ್ತಿ ಸುಮಾರು 1930 ರಲ್ಲಿ ಕುಟುಂಬ ಸಮೇತ ಮದ್ರಾಸ್ ಗೆ ಹಿಂತಿರುಗಿದ್ದರು. ಮದ್ರಾಸ್ ಗೆ ಹಿಂತಿರುಗುವ ವೇಳೆ ಸೀತಮ್ಮ ರನ್ನು ಮೈಸೂರಿನಲ್ಲೇ ಬಿಟ್ಟು ಹೋಗಿದ್ದಾರೆ. ಬಾಲ್ಯದಲ್ಲೇ ಹೆತ್ತವರಿಂದ ದೂರವಾದ ಸೀತಮ್ಮ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಕೈಯಲ್ಲಿ ಶಕ್ತಿ ಇರುವ ವರೆಗೂ ದುಡಿದು ತಿಂದ ಸೀತಮ್ಮ ವೃದ್ಧಾಪ್ಯ ಸಮೀಪಿಸಿದಾಗ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಳಿತು ಹತ್ತಾರು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದಾರೆ.

     

    https://www.youtube.com/watch?v=XPd_L8-OBJE

     

  • ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನ: ಭಾನುವಾರ ಬೆಳಗ್ಗೆ ಆರಂಭಗೊಂಡಿದ್ದ ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ ಸಂಜೆ ವೇಳೆ ಮುಕ್ತಾಯಗೊಂಡಿದ್ದು, ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿವೆ.

    ಒಂದು ಸಾವಿರ ಬೆಲೆಯ ಟಿಕೆಟ್‍ನಿಂದ 1.3 ಕೋಟಿ ರೂಪಾಯಿ, 300 ರೂಪಾಯಿ ಟಿಕೆಟ್‍ನಿಂದ 1.2ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಪ್ರಸಾದದ ಆದಾಯ 70 ಲಕ್ಷ ರೂಪಾಯಿ ಬಂದಿದೆ. ಒಟ್ಟು ಈ ಬಾರಿಯ ಜಾತ್ರೆಯಲ್ಲಿ 4.14 ಕೋಟಿ ರೂ. ಆದಾಯ ಬಂದಿದೆ.

    ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನ ಹುಂಡಿ ಎಣಿಕೆ ಮಾಡಿದ್ದರು. 4 ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾ ಕಾರ್ಯ ಮುಕ್ತಾಯವಾಗಿದೆ. ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಈ ಬಾರಿ ಸುಮಾರು 5 ಕೋಟಿ ರೂ. ಅಧಿಕ ಆದಾಯವನ್ನು ನಿರೀಕ್ಷಿಸಲಾಗಿತ್ತು.

    ಕಳೆದ ವರ್ಷ ಹಾಸನಾಂಬೆ ಜಾತ್ರೆಯಲ್ಲಿ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

    ವಿಶೇಷವಾಗಿ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿದ್ದು, ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು. ನನ್ನ ಮುಖದ ಮೊಡವೆಗಳನ್ನ ನಿವಾರಣೆ ಮಾಡು. ನನ್ನ ಸೌಂದರ್ಯವನ್ನ ಹೆಚ್ಚಿಸು. ಅತ್ತೆ ಮನೆ ಕಿರುಕುಳದಿಂದ ಪಾರು ಮಾಡು. ನನ್ನ ರೋಗ ನಿವಾರಿಸು ಎಂಬ ನಾನಾ ಕೋರಿಕೆಗಳನ್ನು ದೇವಿ ಬಳಿ ಭಕ್ತರು ಕೇಳಿಕೊಂಡಿದ್ದಾರೆ.

  • ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ತಿರುಪತಿ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯದದಲ್ಲಿ ಶನಿವಾರ ಒಂದೇ ದಿನ ಹುಂಡಿಯಲ್ಲಿ 3 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

    93 ಸಾವಿರಕ್ಕೂ ಹೆಚ್ಚು ಭಕ್ತರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ವಿಪರೀತ ಜನ ದಟ್ಟನೆ ಇತ್ತು. ಶನಿವಾರ ಒಂದೇ ದಿನ 3 ಕೋಟಿ ರೂ. ಹಣ ಹುಂಡಿಗೆ ಬಿದ್ದಿದ್ದು, ಎಣಿಕೆ ಕಾರ್ಯ ಮುಂದುವರಿಯುತ್ತಿದೆ ಎಂದು ಟಿಟಿಡಿ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ರೈಲ್ವೇ ಮುಂಗಡ ಬುಕ್ಕಿಂಗ್, ಬಸ್ ಬುಕ್ಕಿಂಗ್, ವಿಚರಣೆ ಕೊಠಡಿಯಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಸಂಖ್ಯೆ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಪೊಲೀಸರು ಹರಸಾಹಸ ಪಟ್ಟಿದ್ದರು. ದೀರ್ಘ ರಜೆ ರುವ ಹಿನ್ನೆಲೆಯಲ್ಲಿ ಭಕ್ತರು ಜಾಸ್ತಿ ಸಂಖ್ಯೆಯಲ್ಲಿ ಬರುವ ಮಾಹಿತಿ ಇದ್ದರೂ ಭಾರತೀಯ ರೈಲ್ವೇ ಯಾವುದೇ ವಿಶೇಷ ರೈಲನ್ನು ಓಡಿಸದ್ದಕ್ಕೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಬೆಂಗಳೂರು ಮತ್ತು ಚೆನ್ನೈ ಕಡೆಯಿಂದ ಜಾಸ್ತಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಡೆಯಲ್ಲಿ ಹೆಚ್ಚುವರಿ ಬಸ್ ಗಳನ್ನು ಹಾಕಲಾಯಿತು. ಬಹಳಷ್ಟು ಪ್ರಯಾಣಿಕರು ಸ್ಥಳದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಬಂದಿದ್ದರು ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆಯ ಟ್ರಾಫಿಕ್ ಮ್ಯಾನೇಜರ್ ಭಾಸ್ಕರ್ ರೆಡ್ಡಿ ತಿಳಿಸಿದರು.

    ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಾಗಿತ್ತು.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?