Tag: ಕಾಡು ಆನೆ

  • ರೈಲಿಗೆ ಸಿಲುಕಿ ತಾಯಿ, ಮರಿಯಾನೆ ಸಾವು

    ರೈಲಿಗೆ ಸಿಲುಕಿ ತಾಯಿ, ಮರಿಯಾನೆ ಸಾವು

    ಮಂಗಳೂರು: ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆ ಮತ್ತು ಮರಿ ಆನೆ ದುರ್ಮರಣಕ್ಕೀಡಾದ ಘಟನೆ ಶಿರಾಡಿಘಾಟ್‍ನ ಎಡಕುಮರಿ ಸಮೀಪದಲ್ಲಿ ನಡೆದಿದೆ.

    ಮಂಗಳೂರು-ಬೆಂಗಳೂರು ರೈಲು ಮಾರ್ಗವು ಕಾಡಿನ ಮಧ್ಯದಲ್ಲಿಯೇ ಹಾದು ಹೋಗಿದ್ದು, ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯದಲ್ಲಿರುವ ಎಡಕುಮರಿ ಸಮೀಪದಲ್ಲಿ ಈ ಘಟನೆ ನಡೆದಿದೆ. ತಾಯಿ ಆನೆ ಹಾಗೂ ಅದರ ಮರಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿವೆ.

    ಎಂದಿನಂತೆ ಸೋಮವಾರ ರೈಲ್ವೆ ಸಿಬ್ಬಂದಿ ಹಳಿಗಳ ಪರಿಶೀಲನೆ ನಡೆಸುವ ವೇಳೆ ಆನೆಗಳ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರ ತಡರಾತ್ರಿಯೇ ಘಟನೆ ನಡೆದಿದ್ದು, ರಾತ್ರಿ ಮಂಜಿನ ವಾತಾವರಣದಿಂದ ಲೊಕೊ ಪೈಲೆಟ್ ಗೆ (ರೈಲು ಚಾಲಕ) ಆನೆಗಳು ಹಳಿ ದಾಟುತ್ತಿರುವುದು ಕಾಣಿಸಿರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

  • ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವು

    ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವು

    ಮಡಿಕೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

    ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ ಮಳೆಯಿಂದಾಗಿ ತುಂಡಾಗಿ ಬಿದ್ದಿದ ವಿದ್ಯುತ್ ಲೈನ್ ತುಳಿದ ಕಾಡಾನೆಗಳು ಧಾರುಣವಾಗಿ ಸಾವನ್ನಪ್ಪಿದೆ. ಅಂದಾಜು 36 ಹಾಗೂ 28 ವರ್ಷದ 2 ಆನೆಗಳು ಮತ್ತು 2 ವರ್ಷ ಮತ್ತು 6 ವರ್ಷದ ಮರಿಯಾನೆಗಳು ಮೃತಪಟ್ಟಿವೆ.

    ಇನ್ನು ಇದೇ ಜೂನ್ 14 ರಂದು ಇದೇ ಗ್ರಾಮದಲ್ಲಿ ಎರಡು ಕಾಡಾನೆಗಳು ವಿದ್ಯುತ್ ಶಾಕ್ ನಿಂದ ಸಾವಿಗೀಡಾಗಿದ್ದವು. 15 ದಿನಗಳ ಅಂತರದಲ್ಲಿ ಒಟ್ಟು 6 ಅನೆಗಳು ವಿದ್ಯುತ್ ಶಾಕ್ ಗೆ ಬಲಿಯಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.