Tag: ಕಾಡಾನೆ ದಾಳಿ

  • ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

    ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

    ಮೈಸೂರು: ಕಾಡಾನೆಯೊಂದು ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಸಾಯಿಸಿದ ಘಟನೆ ಎಚ್.ಡಿ.ಕೋಟೆಯ ಹೈರಿಗೆ-ಮಾದಾಪುರ ಸಮೀಪದಲ್ಲಿ ನಡೆದಿದೆ.

    ರಾಯಚೂರಿನ ಕಕ್ಕೇರಿ ಮೂಲದ ಹನುಮಂತಪ್ಪ(50) ಮೃತ ದುರ್ದೈವಿ. ನಾಲೆ ಕೆಲಸಕ್ಕಾಗಿ ಮೈಸೂರಿಗೆ 8 ಮಂದಿ ಕೂಲಿ ಕಾರ್ಮಿಕರು ಬಂದಿದ್ದರು. ಅವರಲ್ಲಿ ಹನುಮಂತಪ್ಪ ಕೂಡ ಒಬ್ಬರು. ಬೇರೆ ಊರಿನಿಂದ ಜೀವನ ನಡೆಸಲು ಕೆಲಸಕ್ಕೆಂದು ಬಂದ ಹನುಮಂತಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇಂದು ಮುಂಜಾನೆ ಕಾರ್ಮಿಕರೆಲ್ಲ ನಾಲೆ ಕೆಲಸದಲ್ಲಿ ತೊಡಗಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕಾಲಿನಿಂದ ಕಾರ್ಮಿಕನನ್ನು ತುಳಿದಿದೆ. ಪರಿಣಾಮ ಸ್ಥಳದಲ್ಲೇ ಹನುಮಂತಪ್ಪ ಸಾವನ್ನಪ್ಪಿದ್ದಾರೆ.

    ಶುಕ್ರವಾರ ರಾತ್ರಿ ಹೈರಿಗೆ-ಮಾದಾಪುರ ಸಮೀಪದ ಜಮೀನಿಗೆ ಕಾಡಾನೆಗಳು ನುಗ್ಗಿದ್ದವು. ಈ ವೇಳೆ ರೈತರು ಆನೆಯನ್ನ ಓಡಿಸಲು ಮುಂದಾಗಿದ್ದು, ಜಮೀನಿಂದ ನಾಲೆಯತ್ತ ಬಂದ ಕಾಡಾನೆ ಕಾರ್ಮಿಕನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.

    ಇದೀಗ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 9 ಕಾಡಾನೆಗಳ ಹಿಂಡಿನಿಂದ ಆನೆಯೊಂದು ದಾಳಿ- ವ್ಯಕ್ತಿಯ ಸ್ಥಿತಿ ಗಂಭೀರ

    9 ಕಾಡಾನೆಗಳ ಹಿಂಡಿನಿಂದ ಆನೆಯೊಂದು ದಾಳಿ- ವ್ಯಕ್ತಿಯ ಸ್ಥಿತಿ ಗಂಭೀರ

    ಮಡಿಕೇರಿ: ಕಾಡಾನೆ ದಾಳಿಯಿಂದಾಗಿ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕೆಳಕೊಡ್ಲಿ ಗ್ರಾಮದಲ್ಲಿ ನಡೆದಿದೆ.

    ಸತೀಶ್ ಗಂಭೀರ ಗಾಯಗೊಂಡ ವ್ಯಕ್ತಿ. ಇಂದು ಬೆಳಗ್ಗೆ 7 ಗಂಟೆಗೆ ಎಂದಿನಂತೆ ತಮ್ಮ ತೋಟಕ್ಕೆ ತಮ್ಮ ಮೋಟರ್ ಬೈಕಿನಲ್ಲಿ ತೆರಳುತ್ತಿದ್ದಾಗ 9 ಕಾಡಾನೆಗಳ ಹಿಂಡಿನಿಂದ ಬಂದ ಆನೆಯೊಂದು ದಾಳಿ ಮಾಡಿದೆ. ಹಿಂಬದಿಯಲ್ಲಿ ಬರುತ್ತಿದ್ದ ಜನರು ಕೂಗಾಡಿದ್ದರಿಂದ ಕಾಡಾನೆಗಳು ಕಾಡಿನೊಳಗೆ ಸೇರಿದೆ.

    ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸತೀಶ್ ಅವರಿಗೆ ಕೂಡಲೇ ಕೊಡ್ಲಿಪೇಟೆ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ. ಯಸಳೂರು ಭಾಗದಿಂದ ಕಟ್ಟೆಪುರ ಅರಣ್ಯದೆಡೆಗೆ ಈ ಕಾಡಾನೆ ಹಿಂಡು ಬಂದಿದೆ.

    ಕಳೆದ ಎರಡು ದಿನದ ಹಿಂದೆ ಯಸಳೂರು ಭಾಗದಲ್ಲಿ ಮರಿಯಾನೆಯೊಂದು ಮೃತಪಟ್ಟಿತ್ತು. ಇದರಿಂದ ಈ ಭಾಗಕ್ಕೆ ಬಂದಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಸ್ಥಳಕ್ಕೆ ಶನಿವಾರ ಸಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv