Tag: ಕಾಡಾನೆಗಳು

  • ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದ ಕಾಡಾನೆಗಳು

    ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದ ಕಾಡಾನೆಗಳು

    – ನೀರಿನ ದಾಹ ತೀರಿಸಿಕೊಳ್ಳಲು ಕಾಡಾನೆಗಳು ಗ್ರಾಮಕ್ಕೆ ಎಂಟ್ರಿ

    ಹಾಸನ: ಎರಡು ಕಾಡಾನೆಗಳು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೀರನ್ನು ಅರಸಿ ಗ್ರಾಮದೊಳಗೆ ಎಂಟ್ರಿಕೊಟ್ಟಿದ್ದು, ಕಾಫಿ ಎಸ್ಟೇಟ್ ಬಳಿಯ ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದು ದಾಹ ತೀರಿಸಿಕೊಂಡಿವೆ.

    ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ದೇವಿ ಎಸ್ಟೇಟ್ ನಲ್ಲಿರುವ ಕುಮಾರ್ ಅವರ ಮನೆಯ ಆವರಣಕ್ಕೆ ಕಾಡಾನೆಗಳು ಬಂದಿವೆ. ನಂತರ ಮನೆಯ ಸುತ್ತ ಸಾಗಿದ ಆನೆಗಳು, ಮನೆಯ ಹಿಂಭಾಗವಿರುವ ಸಿಮೆಂಟ್ ತೊಟ್ಟಿಯ ಬಳಿ ಬಂದು ನೀರು ಕುಡಿದು ಬಾಯಾರಿಸಿಕೊಂಡಿವೆ. ನೀರು ಕುಡಿದ ನಂತರ ಕಾಫಿ ತೋಟದೊಳಗೆ ಆನೆಗಳು ಸಾಗಿವೆ.

    ಕಾಡಾನೆ ಕಂಡು ಹೆದರಿ ಯುವತಿ ಮನೆಯೊಳಗೆ ಓಡಿದ್ದು, ಬಾಗಿಲು ಹಾಕಿಕೊಂಡಿದ್ದಾರೆ. ನಂತರ ಆನೆ ನೀರು ಕುಡಿಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಮನೆಯ ಸಮೀಪ ಬಂದು ನಿರ್ಭೀತಿಯಿಂದ ನೀರು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಭಾಗದಲ್ಲಿ ಕಾಡಾನೆಗಳ ದಾಳಿ ವಿಪರೀತವಾಗಿದ್ದು, ಹಲವರನ್ನು ತುಳಿದು ಸಾಯಿಸಿವೆ. ಹೀಗಾಗಿ ಆದಷ್ಟು ಬೇಗ ಕಾಡಾನೆಗಳು ಜಮೀನಿಗೆ ಬರದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • 20ಕ್ಕೂ ಹೆಚ್ಚು ಎಕರೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನಾಶ

    20ಕ್ಕೂ ಹೆಚ್ಚು ಎಕರೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನಾಶ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ಪ್ರದೇಶದ ಸುಮಾರು 20ಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶಪಡಿಸಿವೆ.

    ರೈತರಾದ ಅಚ್ಚಯ್ಯ, ಸಣ್ಣಪ್ಪ, ಜವರೇಗೌಡ, ಬಸಪ್ಪ, ಚಿನ್ನಣ್ಣ ಸೇರಿದಂತೆ 25 ಕ್ಕೂ ಹೆಚ್ಚು ರೈತರ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಮಾಡಿವೆ. ಇವಷ್ಟೆ ಅಲ್ಲದೆ ಕೆಸ, ಶುಂಠಿ, ತೆಂಗು, ಬಾಳೆ, ಅಡಿಕೆ ಬೆಳೆಗಳನ್ನು ಕೂಡ ನಾಶ ಪಡಿಸಿವೆ.

    ಹಲವಾರು ಬಾರಿ ಅರಣ್ಯ ಇಲಾಖೆಗೆ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ರೈತರು, ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಒಂದು ಬದಿಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾಯುತ್ತಿದೆ. ಆದರೆ ಮತ್ತೊಂದು ಕಡೆಯಿಂದ ಕಾಡಾನೆ ಹಿಂಡು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಮಗಳತ್ತ ಬರುತ್ತಿವೆ.

    ಹೀಗಾಗಿ ಕಾಡಾನೆ ಹಾವಳಿಯನ್ನು ವಿರೋಧಿಸಿ ನಾಲ್ಕು ಗ್ರಾಮಗಳ ನೂರಾರು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಡಾನೆ ದಾಳಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅರಣ್ಯ ಇಲಾಖೆಗೆ ರೈತರು ಎಚ್ಚರಿಕೆ ನೀಡಿದ್ದಾರೆ.

  • ಆಹಾರ ಅರಸಿ ಕಾಡಿನಿಂದ ನಾಡಿನತ್ತ ತಿರುಗಿದ ಕಾಡಾನೆಗಳು

    ಆಹಾರ ಅರಸಿ ಕಾಡಿನಿಂದ ನಾಡಿನತ್ತ ತಿರುಗಿದ ಕಾಡಾನೆಗಳು

    ರಾಮನಗರ: ಕಾಡಾನೆಗಳ ಹಿಂಡು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಆಗಮಿಸಿದ್ದು, ಮಾಗಡಿ ತಾಲೂಕಿನ ಲಕ್ಷ್ಮೀಪುರದ ಜನರದಲ್ಲಿ ಆತಂಕ ಉಂಟು ಮಾಡಿದೆ.

    ನಾಲ್ಕು ಆನೆಗಳ ಹಿಂಡು ಲಕ್ಷ್ಮೀಪುರದ ಸಮೀಪವಿರುವ ಸಾವನದುರ್ಗ ಅರಣ್ಯ ಪ್ರದೇಶದಿಂದ ಲಕ್ಷ್ಮಿಪುರದ ಸಿದ್ದೇಶ್ವರ ಬೆಟ್ಟದ ಬಳಿ ಕಾಣಿಸಿಕೊಂಡಿವೆ. ಕಾಡಂಚಿನಲ್ಲಿ ಆನೆಗಳನ್ನು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಕಳೆದ ಕೆಲವು ದಿನಗಳಿಂದ ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳು ರೈತರ ಬೆಳೆಯನ್ನು ನಾಶಪಡಿಸುತ್ತಿವೆ. ಅತ್ತಿಂಗೆರೆ ಗ್ರಾಮದ ರಾಮಣ್ಣ ಎಂಬವರ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳು ಹತ್ತಕ್ಕೂ ಹೆಚ್ಚು ಮಾವಿನ ಮರ, ತೆಂಗು ಹಾಗೂ ಅಡಿಕೆ ಸಸಿಗಳನ್ನು ನಾಶಪಡಿಸಿವೆ.

    ಈ ಕುರಿತು ಸ್ಥಳೀಯರು ದೂರು ನೀಡುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.