Tag: ಕಾಟೇಜ್

  • ಕಾವೇರಿ ನದಿಯಲ್ಲಿ ಅಕ್ರಮವಾಗಿ ಕಾಟೇಜ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ಕಾವೇರಿ ನದಿಯಲ್ಲಿ ಅಕ್ರಮವಾಗಿ ಕಾಟೇಜ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ಮಡಿಕೇರಿ : ಯಾವುದೇ ನದಿದಂಡೆಯಿಂದ 100 ಅಡಿ ದೂರದವರೆಗೆ ಕೃಷಿ ಚಟುವಟಿಕೆಯನ್ನೂ ಮಾಡುವಂತಿಲ್ಲ. ಆದರೆ ಕೊಡಗಿನಲ್ಲಿ ಕಾವೇರಿ ನದಿಯನ್ನೇ ಒತ್ತುವರಿ ಮಾಡಿಕೊಂಡು ರೆಸಾರ್ಟ್ ಗಳನ್ನು ನಿರ್ಮಿಸಿರುವ ಪ್ರಕರಣವೊಂದು ಜಿಲ್ಲೆಯ ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿ ಬೆಳಕಿಗೆ ಬಂದಿದೆ.

    ಅಬ್ದುಲ್ ಸಲಾಂ ಎಂಬವರು ಕಾವೇರಿ ನದಿಗೆ ತಡೆಗೋಡೆಯನ್ನು ನಿರ್ಮಿಸಿ ರೆಸಾರ್ಟಿನ ಕಾಟೇಜ್ ಗಳನ್ನು ನಿರ್ಮಿಸಿದ್ದಾರೆ. ಯಾವುದೇ ನದಿಯ ಹೈಫ್ಲೆಡ್ ಲೆವೆಲ್ ನಿಂದ 100 ಅಡಿಯವರೆಗಿನ ಜಾಗ ನದಿಯ ಬಫರ್ ಝೋನ್ ಆಗಿರುತ್ತದೆ. ಆ ಜಾಗದಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸುವಂತಿಲ್ಲ. ಆದರೆ ಅಬ್ದುಲ್ ಸಲಾಂ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಮ್ಮ 103/3, 104/2 ಮತ್ತು 104/3 ಸರ್ವೇ ನಂಬರ್ ಜಾಗದ ಜೊತೆಗೆ ಕಾವೇರಿ ನದಿಯನ್ನು ಒತ್ತುವರಿ ಮಾಡಿ ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಅದರ ಪಕ್ಕದಲ್ಲೇ ರೆಸಾರ್ಟ್ ಕಟ್ಟಡವನ್ನು ನಿರ್ಮಿಸಿದ್ದಾರೆ. ಇನ್ನು ಕೆಲವು ಕಟ್ಟಡಗಳನ್ನು ನಿರ್ಮಿಸುತ್ತಲೇ ಇದ್ದಾರೆ. ಕಾವೇರಿ ನದಿ ನೀರು ಅಬ್ದುಲ್ ಸಲಾಂ ಅವರು ನಿರ್ಮಿಸಿರುವ ತಡೆಗೋಡೆಗೆ ಇಂದಿಗೂ ಸಂಪೂರ್ಣ ನೀರು ತಾಗಿಕೊಂಡೇ ಹರಿಯುತ್ತಿದೆ.

    ಕಾವೇರಿ ನದಿಯ ಬಫರ್ ಝೋನ್ ಜಾಗವು ಒತ್ತುವರಿಯಾಗಿದೆ ಎಂದು ದೂರು ಬಂದಿರುವುದಾಗಿ 2018 ಕ್ಕೂ ಮೊದಲೇ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಪಿಡಿಓ ಅಧಿಕಾರಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಜೀವನ್ ಎಂಬ ಸರ್ವೇ ಅಧಿಕಾರಿ ಪರಿಶೀಲನೆ ನಡೆಸಿ ಯಾವುದೇ ಜಾಗ ಒತ್ತುವರಿಯಾಗಿಲ್ಲ. ನದಿಯ ಬಫರ್ ಝೋನ್ ಜಾಗ ಹಾಗೆಯೇ ಇದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದಾರೆ. ಬಳಿಕ ತಹಶೀಲ್ದಾರ್ ಅವರು ಕೂಡ ಸ್ಥಳ ಪರಿಶೀಲನೆ ಮಾಡದೆಯೇ ಜಾಗವು ಯಾವುದೇ ಒತ್ತುವರಿಯಾಗಿಲ್ಲ ಎಂದು ದೃಢೀಕರಿಸಿದ್ದಾರೆ. ಕಾವೇರಿ ನದಿಯ ಬಫರ್ ಝೋನ್ ಜಾಗವು ಒತ್ತುವರಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ, ಸರ್ವೇ ಅಧಿಕಾರಿಗಳು ಮತ್ತು ತಹಶೀಲ್ದಾರ್ ಒತ್ತುವರಿಯಾಗಿಲ್ಲ ಎಂದು ವರದಿ ನೀಡಿರುವುದರ ಹಿಂದೆ ದೊಡ್ಡ ಭ್ರಷ್ಟಾಚಾರವೇ ನಡೆದಿದೆ ಎನ್ನೋದು ಹೋರಾಟಗಾರರ ಆಕ್ರೋಶ.

    ಮತ್ತೊಂದೆಡೆ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರವು ರೆಸಾರ್ಟ್ ನಿರ್ಮಾಣ ಯೋಜನೆಗೂ ಒಪ್ಪಿಗೆ ನೀಡಿದೆ. ಇಲ್ಲಿಯೂ ಕೂಡ ಕೊಟ್ಟಿರುವ ಪ್ಲಾನ್ ನಲ್ಲಿ ಬಫರ್ ಝೋನ್ ಜಾಗ ಒತ್ತುವರಿಯಾಗಿಲ್ಲವೆಂದು ಒಪ್ಪಿಗೆ ನೀಡಿದೆ. ಈ ಕುರಿತು ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಆ ಬಳಿಕ ಅಬ್ದುಲ್ ಸಲಾಂ ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕೋರ್ಟ್ ಮೊರೆ ಹೋಗಿ ತಮ್ಮ ಜಾಗಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಎಂಟ್ರಿ ಕೊಡದಂತೆ ಲಾಯರ್ ನೋಟಿಸ್ ಮಾಡಿದ್ದಾರೆ. ಸದ್ಯ ಪ್ರಕರಣ ಈಗಷ್ಟೇ ತಮ್ಮ ಗಮನಕ್ಕೆ ಬಂದಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

  • ಬಂಡೀಪುರ, ಬಿಆರ್‌ಟಿ ಕಾಟೇಜ್ ಹೌಸ್‍ಫುಲ್ – ವನ್ಯಜೀವಿಗಳ ನಡ್ವೆ ವರ್ಷಾಚರಣೆಗೆ ಬ್ರೇಕ್

    ಬಂಡೀಪುರ, ಬಿಆರ್‌ಟಿ ಕಾಟೇಜ್ ಹೌಸ್‍ಫುಲ್ – ವನ್ಯಜೀವಿಗಳ ನಡ್ವೆ ವರ್ಷಾಚರಣೆಗೆ ಬ್ರೇಕ್

    ಚಾಮರಾಜನಗರ: ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಜಿಲ್ಲೆಯಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟವನ್ನ ಬೆಸೆಯುವ ಸೇತುವೆಯಂತಿರುವ, ವನ್ಯಜೀವಿ ಪ್ರಿಯರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಬಂಡೀಪುರದಲ್ಲಿ ವರ್ಚಾಚರಣೆಗೆ ಬ್ರೇಕ್ ಬಿದ್ದಿದೆ.

    ವರ್ಷಾಂತ್ಯದಲ್ಲಿ ಬಂಡೀಪುರ ಅರಣ್ಯದಲ್ಲಿ ಸಮಯ ಕಳೆಯುವ ಕಾರಣ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇರುವ ಕಾಟೇಜ್ಸ್ ಬುಕ್ ಮಾಡುತ್ತಿದ್ದು, ಈಗಾಗಲೇ ಎಲ್ಲಾ ಕಾಟೇಜ್ ಬುಕ್ ಆಗಿದೆ. ಅರಣ್ಯದ ಮಧ್ಯೆ ಹೊಸ ವರ್ಷಾಚರಣೆ ಮಾಡಲು ಆಗಮಿಸುವವರಿಗೆ ಕಠಿಣ ಕಾನೂನು ಎದುರಿಸಬೇಕಾಗದ ಎಚ್ಚರಿಕೆಯನ್ನು ಅರಣ್ಯ ಇಲಾಖೆ ಪ್ರವಾಸಿಗರಿಗೆ ಹೇಳಿದೆ.

    ಹೊಸ ವರ್ಷಾಚರಣೆಗೆ ಇನ್ನೂ 1 ವಾರ ಇರುವಾಗಲೇ ಬಂಡೀಪುರ ಮತ್ತು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರುವ ವಸತಿಗೃಹಗಳು ಹೌಸ್ ಫುಲ್ ಆಗಿವೆ. ಇಡೀ ದೇಶದಲ್ಲಿಯೇ ಒಂದೇ ಜಿಲ್ಲೆಯಲ್ಲಿ 2 ಹುಲಿ ಸಂರಕ್ಷಿತ ಪ್ರದೇಶ, 2 ವನ್ಯಜೀವಿ ವಿಭಾಗಗಳಿದ್ದು, ಹೀಗಾಗಿ ಚಾಮರಾಜನಗರ ಜಿಲ್ಲೆಯ ದೇಶದಲ್ಲಿಯೇ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ.

    ಬಂಡೀಪುರದಲ್ಲಿ ಇರುವ ಕೋಕಿಲ, ವನಸುಮ, ವನಸಿರಿ, ವನ ರಂಜಿನಿ ಮತ್ತು ಅತಿಗಣ್ಯ ವ್ಯಕ್ತಿಗಳಿಗೆ ಮೀಸಲಾಗಿರುವ ಗಜೇಂದ್ರ ವಸತಿಗೃಹ ಕೂಡ ಬುಕ್ಕಿಂಗ್ ಆಗಿದೆ. ಹಸಿರು ಕಾನನದ ಮಧ್ಯೆ ಇರುವ ಕಾಟೇಜ್ಸ್ ಆಕರ್ಷಣೀಯವಾಗಿರುವುದು ಒಂದು ಕಡೆಯಾದರೆ, ಬೆಳಗ್ಗೆ ಮತ್ತು ಸಂಜೆ ವೇಳೆ ವನ್ಯಜೀವಿಗಳನ್ನ ನೋಡುವ ಭಾಗ್ಯ ಪ್ರವಾಸಿಗರಿಗೆ ಸಿಗಲಿದೆ. ಹೀಗಾಗಿ ಕಳೆದ ವರ್ಷ ಕಾಟೇಜ್ ಬುಕ್ ಮಾಡಲು ಹೋಗಿ ಸಿಗದೇ ಇದ್ದವರು ಈ ಬಾರಿ ಒಂದು ತಿಂಗಳ ಮುಂಚೆಯೇ ಬುಕ್ ಮಾಡಿದ್ದಾರೆ.

    ನವೆಂಬರ್ ತಿಂಗಳ ಅಂತ್ಯದವರೆಗೂ ಸುರಿದ ಮಳೆ ಇಡೀ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ಅಲ್ಲದೇ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿಯೇ ಬಂಡೀಪುರ ಇರುವುದರಿಂದ ತಮಿಳುನಾಡಿನ ಊಟಿ, ಕೇರಳ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಸಾಗರೋಪಾದಿ ಬರುತ್ತಿದ್ದಾರೆ. ನೂತನ ವರ್ಷಾಚರಣೆಗೆ ಮಹಾರಾಷ್ಟ್ರ, ಒರಿಸ್ಸಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಲಿದ್ದಾರೆ. ಬರುವ ಪ್ರವಾಸಿಗರಿಗೆ ಸಫಾರಿಗೆ ನಿರಾಸೆಯಾಗಂತೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದೆ.

    ವರ್ಷಾಂತ್ಯದ ವೇಳೆ ಬರುವ ಪ್ರವಾಸಿಗರನ್ನ ಸ್ವಾಗತಿಸಲು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಅದೇ ರೀತಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಬಿಳಿರಿಗಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ಅತೀ ಸೂಕ್ಷ್ಮವಾದ ಪ್ರದೇಶ. ಬಿಆರ್ ಟಿ ಹುಲಿ ಸಂರಕ್ಷಿತ ಮಧ್ಯೆ ಕ್ಯಾತೇ ದೇವರ ಗುಡಿ ಮತ್ತು ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ಅರಣ್ಯ ಇಲಾಖೆ ಸೇರಿದ ವಸತಿ ಗೃಹಗಳಿವೆ. ಒಟ್ಟು 8 ಕಾಟೇಜ್ಸ್ ಇದ್ದು, ಎಲ್ಲವೂ ಕೂಡ ಸಂಪೂರ್ಣವಾಗಿ ಭರ್ತಿಯಾಗಿವೆ. ಬರುವ ಪ್ರವಾಸಿಗರು ಹೊಸ ವರ್ಷ ಸ್ವಾಗತ ಮಾಡುತ್ತೇವೆ. ಬರುವ ಪ್ರವಾಸಿಗರು ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವುದು ಖಚಿತ. ವಸತಿಗೃಹ ಪಡೆದ ಪ್ರವಾಸಿಗರು ಇತಿಮಿತಿಯಲ್ಲಿ ಇರಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.