Tag: ಕಾಗೆ

  • ಮನೆಯಿಂದ ಹೊರಗೆ ಬಂದ್ರೆ ಕಾಗೆಗಳ ದಾಳಿ- ಮೂರು ವರ್ಷದಿಂದ ಕಾಡುತ್ತಿದೆ ಸಮಸ್ಯೆ

    ಮನೆಯಿಂದ ಹೊರಗೆ ಬಂದ್ರೆ ಕಾಗೆಗಳ ದಾಳಿ- ಮೂರು ವರ್ಷದಿಂದ ಕಾಡುತ್ತಿದೆ ಸಮಸ್ಯೆ

    ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸುಮೆಲಾ ಗ್ರಾಮದ ಶಿವ ಕೇವಟ್ ಎಂಬವರು ಕಾಗೆಗಳ ದಾಳಿಯಿಂದ ಬೇಸತ್ತಿದ್ದಾರೆ. ಶಿವ ಮನೆಯಿಂದ ಹೊರಗೆ ಬಂದರೆ ಸಾಕು ಕಾಗೆಗಳು ದಾಳಿ ನಡೆಸುತ್ತವೆ. ಕೆಲವೊಮ್ಮೆ ಗುಂಪಾಗಿ ಬಂದು ಶಿವ ಮೇಲೆ ಕಾಗೆಗಳು ದಾಳಿ ನಡೆಸಿ ಗಾಯಗೊಳಿಸುತ್ತವೆ.

    ಕಳೆದ ಮೂರು ವರ್ಷಗಳಿಂದ ಕಾಗೆಗಳು ಈ ರೀತಿ ಶಿವ ಮೇಲೆ ದಾಳಿ ನಡೆಸುತ್ತಿವೆ. ಕಾಗೆಗಳು ತಮ್ಮ ಬಲವಾದ ರೆಕ್ಕೆ ಮತ್ತು ಕೊಕ್ಕಿನಿಂದ ಕುಕ್ಕಿ ಗಾಯಗೊಳಿಸುತ್ತಿವೆ. ಹೀಗಾಗಿ ಶಿವ ಮನೆಯಿಂದ ಹೊರ ಬಂದ್ರೆ ತಲೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ಬರುತ್ತಾರೆ. ಕಾಗೆಗಳು ಇಷ್ಟೆಲ್ಲ ದಾಳಿ ನಡೆಸಿದ್ರೂ ಶಿವ ಪಕ್ಷಿಗೆ ಯಾವುದೇ ಹಾನಿಯುಂಟು ಮಾಡಿಲ್ಲ. ಕೇವಲ ಕೋಲು ತೋರಿಸಿ ಬೆದರಿಸುತ್ತಾರೆ. ಕಾಗೆಗಳು ಶಿವ ಮನೆಯಿಂದ ಹೊರ ಬರೋದನ್ನು ಕಾಯುತ್ತಿರುತ್ತಿವೆ.

    ಮೂರ ವರ್ಷದ ಕಥೆ: ಮೂರು ವರ್ಷಗಳ ಹಿಂದೆ ಶಿವ ಬಲೆ ಯಲ್ಲಿ ಸಿಲುಕಿದ್ದ ಕಾಗೆ ಮರಿಯ ರಕ್ಷಣೆಗೆ ಮುಂದಾಗಿದ್ದರು. ಗಾಯಗೊಂಡಿದ್ದ ಕಾಗೆ ಮರಿ ಶಿವ ಕೈಯಲ್ಲಿಯೇ ಪ್ರಾಣ ಬಿಟ್ಟಿತ್ತು. ನಾನು ಕಾಗೆಗಳಿಗೆ ನಾನು ನಿಮ್ಮ ಕಂದನನ್ನ ಸಾಯಿಸಿಲ್ಲ. ಬದಲಾಗಿ ರಕ್ಷಣೆ ಮಾಡಲು ಹೋಗಿದ್ದೆ ಎಂದು ಹೇಗೆ ಅರ್ಥ ಮಾಡಿಸಲಿ ಎಂದು ಶಿವ ಬೇಸರ ವ್ಯಕ್ತಪಡಿಸುತ್ತಾರೆ.

    ಶಿವನ ಮೇಲೆ ಕಾಗೆಗಳು ದಾಳಿ ನಡೆಸೋದು ಗ್ರಾಮಸ್ಥರಿಗೆ ಒಂದು ರೀತಿಯ ಮನರಂಜನೆ ಆಗಿದೆ. ಕಾಗೆಗಳು ದೀರ್ಘವಧಿ ಜ್ಞಾಪಕ ಶಕ್ತಿಯನ್ನು ಹೊಂದಿದ್ದು, ತಮ್ಮ ಶತ್ರುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

  • ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

    ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

    – ಕಾಗೆಯನ್ನ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

    ಬೆಂಗಳೂರು: ಉಪಾಯ ಇದ್ದರೆ ಯಾವುದು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಉಡುಪಿಯ ನಿವಾಸಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ.

    ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸುವ ಸಂದರ್ಭದಲ್ಲಿ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸುತ್ತೇವೆ. ಆದರೆ ಈ ವೇಳೆ ಕಾಗೆ ಅನ್ನ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಯುವಕರೊಬ್ಬರು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.

    ಉಡುಪಿ ಜಿಲ್ಲೆಯ ಪ್ರಶಾಂತ್ ಪೂಜಾರಿ ಎಂಬವರು ಈ ಕಾರ್ಯದಲ್ಲಿ ತೊಡಗಿದ್ದು, ಶ್ರಾದ್ಧ, ತಿಥಿ ಕಾರ್ಯಕ್ರಮಗಳಿಗೆ ಕಾಗೆ ಬೇಕಾದರೆ ಬಾಡಿಗೆಗೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ಸದ್ಯ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಚಿಂತನೆಗೆ ಸಾಕಷ್ಟು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

    ಸಾಂದರ್ಭಿಕ ಚಿತ್ರ

    ಕಾಗೆ ಸಿಕ್ಕಿದ್ದು ಹೇಗೆ?
    ಪ್ರಶಾಂತ್ ಪೂಜಾರಿ ಅವರಿಗೆ ಪ್ರಾಣಿ, ಪಕ್ಷಿಗಳು ಎಂದರೆ ತುಂಬಾ ಇಷ್ಟ. ಒಂದು ದಿನ ಇವರ ಮನೆಯ ಸಮೀಪ ಮೂರು ಕಾಗೆ ಮರಿಗಳು ಅನಾಥವಾಗಿ ಬಿದ್ದಿದ್ದವು. ಇದನ್ನು ಗಮನಿಸಿದ್ದ ಪ್ರಶಾಂತ್, ಅವುಗಳ ಆರೈಕೆ ಮಾಡಲು ಮುಂದಾಗಿದ್ದರು. ಆದರೆ 3ರಲ್ಲಿ 2 ಮರಿಗಳು ಸಾವನ್ನಪ್ಪಿದ್ದು, ಒಂದು ಮಾತ್ರ ಬದುಕುಳಿದಿತ್ತು.

    ಈ ಸಂದರ್ಭದಲ್ಲಿ ಅವರಿಗೆ ಶ್ರಾದ್ಧಾ ಕಾರ್ಯಕ್ರಮಗಳಲ್ಲಿ ಕಾಗೆ ಆಹಾರ ತಿನ್ನದೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಿದ್ದರ ಬಗ್ಗೆ ಮಾಹಿತಿ ಲಭಿಸಿತ್ತು. ತಮ್ಮ ಬಳಿ ಕಾಗೆ ಇರುವುದಿರಿಂದ ಇದನ್ನೇ ಉಪಾಯ ಮಾಡಿದ್ದ ಪ್ರಶಾಂತ್, ಕಾಗೆ ಸೇವೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

    ಸಾಂದರ್ಭಿಕ ಚಿತ್ರ

    ಅರಣ್ಯ ಅಧಿಕಾರಿಗಳಿಂದ ಕ್ರಮ:
    ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಅವರ ಪೋಸ್ಟ್ ವೈರಲ್ ಆಗುತ್ತಿದಂತೆ ಎಚ್ಚೆತ್ತ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಶಾಂತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿ ಕಾಗೆಯನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುವಕ ಪ್ರಶಾಂತ್, ನನಗೆ ಕಾಗೆಯನ್ನು ಇಟ್ಟುಕೊಂಡು ಬ್ಯುಸಿನೆಸ್ ಮಾಡುವ ಯೋಚನೆ ಇರಲಿಲ್ಲ. ತಾನು ಸಾಕಿರುವ ಕಾಗೆಗೆ ರೆಕ್ಕೆ ಸರಿ ಇರಲಿಲ್ಲ. ಆದ್ದರಿಂದ ಅದು ಚೇತರಿಕೆ ಕಂಡ ಮೇಲೂ ಆಹಾರ ನೀಡಿ ಆರೈಕೆ ಮಾಡುತ್ತಿದ್ದೆ. ಈಗ ಕಾಗೆಯನ್ನ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೆ ಈ ಹಿಂದೆ ಗಾಯಗೊಂಡಿದ್ದ ಉಡವನ್ನು ಕೂಡ ರಕ್ಷಣೆ ಮಾಡಿದ್ದೆ ಎಂದು ಹೇಳಿದ್ದಾರೆ.

  • ಪ್ರಸಾದಕ್ಕೆ ಮನುಷ್ಯರಷ್ಟೇ ಅಲ್ಲ 50ಕ್ಕೂ ಹೆಚ್ಚು ಪಕ್ಷಿಗಳು ಸಾವು!

    ಪ್ರಸಾದಕ್ಕೆ ಮನುಷ್ಯರಷ್ಟೇ ಅಲ್ಲ 50ಕ್ಕೂ ಹೆಚ್ಚು ಪಕ್ಷಿಗಳು ಸಾವು!

    ಚಾಮರಾಜನಗರ: ಮನುಷ್ಯ ತನಗೆ ಆಗುವ ನೋವನ್ನು ವ್ಯಕ್ತಪಡಿಸಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಪಕ್ಷಿಗಳು ಹಾಗೂ ಪ್ರಾಣಿಗಳು ಮೂಕ ವೇದನೆಯಲ್ಲಿಯೇ ಪ್ರಾಣ ಬಿಡುತ್ತವೆ. ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

    ವಿಷ ಬೆರೆಸಿದ್ದ ಆಹಾರ ಸೇವನೆ ಮಾಡಿದ್ದ 80ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ವಿಷಯುಕ್ತ ಆಹಾರ ಸೇವಿಸಿದ ಪಕ್ಷಿಗಳ ಸಾವಿನ ಸಂಖ್ಯೆ 50ರ ಗಡಿ ದಾಟುತ್ತಿದೆ. ಅವುಗಳು ನರಳಿ ನರಳಿ ಪ್ರಾಣಬಿಟ್ಟ ದೃಶ್ಯ ಮನಕಲಕುವಂತಿದೆ.

    ರಾಸಾಯನಿಕ ಅಥವಾ ಕ್ರಿಮಿನಾಶಕದ ವಾಸನೆ ಬಂದಿದ್ದರಿಂದ ಕೆಲವರು ಅಲ್ಲಿಯೇ ಪ್ರಸಾದ (ರೈಸ್‍ಬಾತ್) ಬೀಸಾಡಿದ್ದಾರೆ. ಪರಿಣಾಮ ಅದನ್ನು ತಿಂದ ಪಕ್ಷಿಗಳು ಕೂಡ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿವೆ. ಕಾಗೆ, ಗೊರವಂಕಗಳು ಸೇರಿದಂತೆ ವಿವಿಧ ಪಕ್ಷಿಗಳ ಸಾವಿನ ಸಂಖ್ಯೆ 50ರ ಗಡಿ ದಾಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಅನೇಕ ಪಕ್ಷಿಗಳು ದೇವಸ್ಥಾನ ಹೊರಗಿನ ಆವರಣದಲ್ಲಿ, ಮರದ ಕೆಳಗೆ, ಪೊದೆಯ ಒಳಗೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಿದ್ದು ಪ್ರಾಣ ಬಿಟ್ಟಿವೆ. ಪ್ರಸಾದದಲ್ಲಿ ವಿಷ ಬೆರೆಸಿರುವುದು ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪಕ್ಷಿಗಳು ತಟ್ಟಿದೆ. ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುವುದಕ್ಕೂ ಮುನ್ನ ದೇವಸ್ಥಾನದ ಸುತ್ತಲೂ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆರವು ಮಾಡುವ ಕೆಲಸ ಆಗಬೇಕಾಗಿದೆ.

    ವಿಷ ಬೆರೆಸಿದ್ದ ಆಹಾರವನ್ನು ತೆಗೆದು ಹಾಕದೇ ಇದ್ದರೆ ಮತ್ತಷ್ಟು ಪಕ್ಷಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಗಳಿದೆ. ಹೀಗಾಗಿ ಸ್ಥಳೀಯ ಆಡಳಿತಾಧಿಕಾರಿಗಳು, ನಾಯಕರು ದೇವಸ್ಥಾನದ ಸುತ್ತಮುತ್ತ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆಗೆದು ಹಾಕಲು ಮುಂದಾಗಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

    https://youtu.be/lmYrOGtYaKE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

    ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

    ರಾಂಚಿ: ಜಾರ್ಖಂಡ್‍ನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ರಿಮ್ಸ್ ಆಸ್ಪತ್ರೆಯಲ್ಲಿ ಶವಗಾರದ ಮುಂದೆ ಇರಿಸಿದ್ದ ಶವವನ್ನು ಕಾಗೆಯೊಂದು ಕುಕ್ಕಿ ಕುಕ್ಕಿ ತಿಂದಿದೆ.

    ಮಂಗಳವಾರ ಬೆಳಗ್ಗೆ ರಾಂಚಿಯ ಮಾರ್ಕೆಟ್ ಬಳಿಯ ಛಾಂದ್ರಿ ಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಆ ಶವವನ್ನು ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ತಂದಿದ್ದರು. ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಮುಗಿಸಿ ಬರಲು ಪೊಲೀಸರು ಶವವನ್ನು ಶವಗಾರದ ಮುಂದೆ ಇರಿಸಿ ತೆರಳಿದ್ದಾರೆ. ಈ ವೇಳೆ ಕಾಗೆಯೊಂದು ಶವದ ಮೇಲೆ ಕೂತು ಮೃತನ ತಲೆ ಭಾಗದ ಮಾಂಸವನ್ನು ಕುಕ್ಕಿ ಕುಕ್ಕಿ ತಿಂದಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ರಿಮ್ಸ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಈ ತರಹದ ಘಟನೆಗಳು ಮುಂದೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಆಸ್ಪತ್ರೆಯಲ್ಲಿ ಕಾಗೆ ಶವವನ್ನು ತಿನ್ನುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಗೆ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿ ಜನ ಎಂಥಾ ಕಾಲ ಬಂತಪ್ಪಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೋಡಲು ಕಾಗೆ, ಆದ್ರೆ ಇದು ಕಾಗೆ ಅಲ್ಲ!

    ನೋಡಲು ಕಾಗೆ, ಆದ್ರೆ ಇದು ಕಾಗೆ ಅಲ್ಲ!

    ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಈಗ ನೋಡಲು ಕಾಗೆ ರೀತಿ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಫೋಟೋವನ್ನು ಅಕ್ಟೋಬರ್ 27 ರಂದು ಸಂಶೋಧಕ ನಿರ್ದೇಶಕ ರಾಬರ್ಟ್ ಮ್ಯಾಕ್ಗುಯಿರ್ ಎಂಬವರು ತನ್ನ  ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ “ಕಾಗೆಯ ಈ ಫೋಟೋ ಕುತೂಹಲಕಾರಿಯಾಗಿದೆ. ಆದರೆ ಇದು ನಿಜಕ್ಕೂ ಕಾಗೆಯಲ್ಲ, ಬೆಕ್ಕು” ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋವನ್ನ ನೋಡಿದರೆ ನಿಮಗೂ ಕಾಗೆಯ ರೀತಿಯೇ ಕಾಣಿಸುತ್ತದೆ. ಆದರೆ ಇದು ನಿಜವಾಗಿಯೂ ಕಾಗೆಯಲ್ಲ. ಕಾಗೆ ರೀತಿ ಕಾಣುವ ಕಪ್ಪು ಬೆಕ್ಕಾಗಿದೆ. ರಾಬರ್ಟ್ ಅವರು ಈ ಫೋಟೋ ಪೋಸ್ಟ್ ಮಾಡಿದ ತಕ್ಷಣ ಅನೇಕರು ರೀಟ್ವೀಟ್ ಮಾಡಿದ್ದಾರೆ. ಕೆಲವು ಆಶ್ಚರ್ಯವಾಗಿ ಮಾಡಿದರೆ, ಇನ್ನು ಕೆಲವರು ಕಾಮಿಡಿ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಇದುವರೆಗೂ ಈ ಫೋಟೋವನ್ನು 1.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದು, 52 ಸಾವಿರಕ್ಕೂ ಅಧಿಕ ಮಂದಿ ಈ ಫೋಟೋವನ್ನು ರೀಟ್ವೀಟ್ ಮಾಡಿದ್ದಾರೆ. ಈ ಫೋಟೊವನ್ನು ಗಮನಿಸಿದರೆ ಬೆಕ್ಕು ನೆಲದ ಮೇಲೆ ಕುಳಿತ್ತಿದ್ದು, ಹಿಂದೆಯಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಹಾಗೆ ಕಾಣುತ್ತಿದೆ.

    ಬೆಕ್ಕು ಫೋಟೋ ತೆಗೆಯುವಾಗ ತನ್ನ ತಲೆಯನ್ನ ಸ್ವಲ್ಪ ಹಿಂದೆ ತಿರುಗಿಸಿರುವ ಕಾರಣ ಅದರ ಕಣ್ಣುಗಳು ಕಾಣುತ್ತವೆ. ಆದರೆ ಒಂದು ಕಣ್ಣು ಮಾತ್ರ ಲೈಟ್ ಬೆಳಕಿನಿಂದ ಫೋಟೋದಲ್ಲಿ ಕಾಣಿಸುತ್ತದೆ. ಜೊತೆಗೆ ಅದರ ಒಂದು ಕಿವಿಯೇ ಕೊಕ್ಕಿನ ರೀತಿ ಕಾಣುತ್ತದೆ. ಆದ್ದರಿಂದ ಇದು ನೋಡಲು ಕಾಗೆ ರೀತಿ ಕಾಣಿಸುತ್ತದೆ. ಒಟ್ಟಿನಲ್ಲಿ ಈಗ ಈ ಬೆಕ್ಕಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/RobertMaguire_/status/1056365216009740289

  • ಕೋಲಾರದಲ್ಲಿ ಟೀ ಕುಡಿದು, ಬೋಂಡಾ ಸೇವಿಸುತ್ತೆ ಕಾಗೆ..!

    ಕೋಲಾರದಲ್ಲಿ ಟೀ ಕುಡಿದು, ಬೋಂಡಾ ಸೇವಿಸುತ್ತೆ ಕಾಗೆ..!

    ಕೋಲಾರ: ಕಾಗೆ ಕುಕ್ಕಿದರೆ ಅಪಶಕುನ ಅಂತಾರೆ, ಹಾಗಂತ ಸತ್ತಾಗ ನಾನಾ ಭಕ್ಷ್ಯಗಳನ್ನ ಮಾಡಿ ಮೊದಲಿಗೆ ಕಾಗೆಗಳಿಗೆ ಎಡೆ ಹಾಕುತ್ತೀವಿ. ಇದು ಜನರು ನಂಬಿಕೆಯಾಗಿದೆ. ಆದರೆ ಇಲ್ಲೊಂದು ವಿಚಿತ್ರ ಕಾಗೆ ಪ್ರತಿನಿತ್ಯ ಟೀ ಅಂಗಡಿ ಬಳಿಗೆ ಬಂದು ಟೀ ಕುಡಿದು ಬೋಂಡಾ ಸೇವಿಸಿ ಹೋಗುತ್ತದೆ.

    ಕೋಲಾರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ವಾರ್ತಾ ಇಲಾಖೆ ಬಳಿ ಈ ರೀತಿಯ ಕಾಗೆ ಕಂಡು ಬಂದಿದೆ. ಪ್ರಭಾಕರ್ ಟೀ ಅಂಗಡಿ ಬಳಿ ಪ್ರತಿದಿನ ಕಾಗೆ ಬಂದು ಟೀ ಕೊಟ್ಟರೆ ಸೇವಿಸಿ ವಾಪಸ್ ಹೋಗುತ್ತದೆ. ಒಂದು ವೇಳೆ ತಡ ಮಾಡಿದ್ದೇ ಆದಲ್ಲಿ ಕಾವ್ ಕಾವ್ ಎಂದು ಬೇಡಿಕೊಳ್ಳುತ್ತದೆ.

    ಅಷ್ಟೇ ಅಲ್ಲದೇ ಈ ವಿಚಿತ್ರ ಕಾಗೆ ಬೋಂಡವನ್ನು ಸವಿದು ಹೋಗುತ್ತದೆ. ಸಾಮಾನ್ಯವಾಗಿ ಗಿರಾಕಿಗಳು ಹೆಚ್ಚಾಗಿ ಬರಲಿ ಅಂತ ಸಾಕಷ್ಟು ಜನ ಅಂಗಡಿ ಮಾಲೀಕರು ಕಾಗೆಗಳಿಗೆ ಆಹಾರ ಕೊಡುತ್ತಾರೆ. ಇಲ್ಲಿ ಮಾತ್ರ ಕಾಗೆ ಅದಾಗೆ ಬಂದು ಟೀ ಮತ್ತು ಬೊಂಡಾ ಕೊಟ್ಟರೆ ಸೇವಿಸಿ ಹೊರಡುತ್ತದೆ. ಕಾಗೆ ಈ ರೀತಿ ಬಂದು ಟೀ ಕುಡಿದು ಹೋಗುತ್ತಿರುವುದಕ್ಕೆ ಹಿಂದಿನ ಜನ್ಮದಲ್ಲಿ ಬೊಂಡ ಟೀ-ಕಾಫಿ ಕುಡಿಯುತ್ತಿದ್ದ ಯಾವುದಾದರು ವ್ಯಕ್ತಿನಾ ಎಂದು ಸುತ್ತಮುತ್ತಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯ ಆಯ್ತು, ಈಗ ರಾಹುಲ್ ಗಾಂಧಿಗೂ ಕಾಗೆ ಕಾಟ!

    ಸಿದ್ದರಾಮಯ್ಯ ಆಯ್ತು, ಈಗ ರಾಹುಲ್ ಗಾಂಧಿಗೂ ಕಾಗೆ ಕಾಟ!

    ಬೆಂಗಳೂರು: ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕೂತು ಸುದ್ದಿಯಾಗಿತ್ತು. ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಕೂಡ ಕಾಗೆ ಕಾಟ ಶುರುವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಎಚ್‍ಎಎಲ್ ನೌಕರರ ಜೊತೆಗಿನ ಸಂವಾದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಇಂದು ರಾಹುಲ್ ಗಾಂಧಿ ಆಗಮಿಸಲಿದ್ದು, ಕುಮಾರ ಕೃಪ ಗೆಸ್ಟ್ ಹೌಸ್‍ನಲ್ಲಿ ತಂಗಲಿದ್ದಾರೆ. ಆದರೆ ರಾಹುಲ್ ಬರುವ ದಿನವೇ ಕೆಕೆ ಗೆಸ್ಟ್ ಹೌಸ್‍ನಲ್ಲಿ ಕಾಗೆಯೊಂದು ಸತ್ತಿದ್ದು, ಮರದ ಬಳಿ ನೇತಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಸತ್ತ ಕಾಗೆಯನ್ನು ತೆರವುಗೊಳಿಸುವಂತೆ ಎಸ್‍ಪಿಜಿ ಅವರು ಸಿಬ್ಬಂದಿಗೆ ಸೂಚಿಸಿದ್ದಾರೆ.

    ಕಾಗೆ ಕಾರಿನ ಮೇಲೆ ಕುಳಿತ ಬಳಿಕ ಸಿದ್ದರಾಮಯ್ಯನವರು ಕಾರನ್ನು ಬದಲಾಯಿಸಿದ್ದರು. ಕಾಗೆ ಕುಳಿತ ಬಳಿಕ ಕಾರನ್ನು ಬದಲಾಯಿಸಿದ್ದೇ ಎಂದು ಪ್ರಶ್ನೆ ಮಾಡಿದ್ದಕ್ಕೆ ಸಿದ್ದರಾಮಯ್ಯ, ನಾನು ಈ ಮೌಢ್ಯಗಳನ್ನು ನಂಬುವುದಿಲ್ಲ. ಕಾರು ಬಹಳ ಕಿ.ಮೀ ಸಂಚರಿಸಿತ್ತು. ಹೀಗಾಗಿ ಕಾಗೆ ಕುಳಿತುಕೊಳ್ಳುವ ಮೊದಲೇ ಹೊಸ ಕಾರು ಖರೀದಿಗೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಉತ್ತರಿಸಿದ್ದರು.

    ಈಗ ರಾಹುಲ್ ಗಾಂಧಿ ಬರುವ ದಿನವೇ ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ಸತ್ತ ಕಾಗೆ ಕಾಣಿಸಿಕೊಂಡಿದೆ. ಹೀಗಾಗಿ ಈ ದೃಶ್ಯವನ್ನು ನೋಡಿದವರು ರಾಹುಲ್ ಗಾಂಧಿಗೆ ಅಪಶಕುನವಾಗುತ್ತಾ? ಕಾಂಗ್ರೆಸ್ ಪಕ್ಷಕ್ಕೆ ಏನೋ ಅಪಶಕುನ ಕಾದಿದ್ಯಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕುಮಾರ ಕೃಪ ಗೆಸ್ಟ್ ಗೌಸ್ ಮುಂದೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ಈಗ ಸತ್ತಿರುವ ಕಾಗೆಯನ್ನು ಪೊಲೀಸರು ತೆರವುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv