Tag: ಕಾಂಗ್ರೆಸ್ ಮುಖಂಡ

  • ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ನಿಧನ

    ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ನಿಧನ

    ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ (93) ಅವರು ನಿಧನರಾಗಿದ್ದಾರೆ.

    ಎಂ.ವಿ.ರಾಜಶೇಖರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಎಂ.ವಿ.ರಾಜಶೇಖರನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಅವರು ಪತ್ನಿ ಗಿರಿಜಾ ರಾಜಶೇಖರನ್, ಇಬ್ಬರು ಗಂಡು ಮತ್ತು ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಕೃಷಿಕ ಮತ್ತು ಗ್ರಾಮೀಣಾಭಿವೃದ್ಧಿ ಸಲಹೆಗಾರರಾದ ರಾಜಶೇಖರನ್ 1928ರ ಸೆಪ್ಟೆಂಬರ್ 12 ರಂದು ರಾಮನಾಗರ ಜಿಲ್ಲೆಯ ಮರಲವಾಡಿಯಲ್ಲಿ ಜನಿಸಿದ್ದರು. ಎಂಎಲ್‍ಸಿ, ಸಂಸದ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ರಾಜಶೇಖರನ್ ಅವರು ಸರಳತೆ, ನಮ್ರತೆ ಮತ್ತು ದೊಡ್ಡ ಪ್ರಬುದ್ಧತೆ ಹೊಂದಿರುವ ರಾಜಕಾರಣಿಯಾಗಿದ್ದರು.

    ಕೇಂದ್ರದ ಮಾಜಿ ಸಚಿವ ಎಂವಿ ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಂವಿಆರ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣಾಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆ ಸ್ಥಾಪಿಸಿದ್ದರು ಎಂದು ಸ್ಮರಿಸಿದ್ದಾರೆ.

    ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಡಾ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.

    ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಅವರ ನಿಧನ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.

    “ಆತ್ಮೀಯರು, ಕೇಂದ್ರದ ಮಾಜಿ ಸಚಿವರಾಗಿದ್ದ ಎಂ ವಿ ರಾಜಶೇಖರನ್ ಅವರ ನಿಧನ ದುಃಖಕರವಾಗಿದೆ. ಸರಳ, ಸಜ್ಜನಿಕೆಗಳ ಎಂ.ವಿ.ಆರ್ ಅವರ ಅಗಲಿಕೆಯಿಂದ ಮೌಲ್ಯಾಧಾರಿತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ.

  • ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

    ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

    -ಸಿಎಎ, ಎನ್‌ಆರ್‌ಸಿ ದಾಖಲೆ ಕೇಳಲು ಬಂದಿದ್ದೀರಾ ಎಂದು ಹಲ್ಲೆ

    ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಆಪ್ತ ವಿದ್ಯುತ್ ಬಿಲ್ ಪಾವತಿಸದೇ, ಮೀಟರ್‍ನಲ್ಲೂ ಗೋಲ್ ಮಾಲ್ ಮಾಡಿದ್ದಾನೆಂದು ಮಾಹಿತಿ ತಿಳಿದಿದ್ದ ಮೆಸ್ಕಾಂ ಸಿಬ್ಬಂದಿ ಪರಿಶೀಲಿಸಲು ಮನೆಗೆ ಹೋದಾಗ ಲೈನ್‍ಮ್ಯಾನ್ ಮೇಲೆಯೇ ಆತ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದಿದೆ.

    ಯು.ಟಿ ಖಾದರ್ ಆಪ್ತ, ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ಲೈನ್‍ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ. ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಅಮೀರ್ ತುಂಬೆ ಮನೆಯಿದ್ದು, ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಕ್ಕೆ ಹಾಗೂ ಮೀಟರ್ ನಲ್ಲೂ ಗೋಲ್ ಮಾಲ್ ನಡೆಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೀಟರ್ ಪರಿಶೀಲಿಸಲು ಮೆಸ್ಕಾಂ ಲೈನ್ ಮ್ಯಾನ್ ಅಮೀರ್ ಮನೆಗೆ ಬಂದಿದ್ದರು. ಅಲ್ಲದೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಫ್ಯೂಸ್ ತೆಗೆಯಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಅಮೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಕಾಂ ಸಿಬ್ಬಂದಿ ರಂಗನಾಥ್ ಮುಖಕ್ಕೆ ಉಗುಳಿದ್ದು, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

    ಮನೆಗೆ ಬಂದಿದ್ದ ಮೂರು ಸಿಬ್ಬಂದಿಗೂ ಕುತ್ತಿಗೆ ಹಿಡಿದು ಹೊರಕ್ಕೆ ದೂಡಿದ್ದಾನೆ. ಕಾಂಗ್ರೆಸ್ ಮುಖಂಡನ ರೌಡಿಸಂ ಬಗ್ಗೆ ಹಲ್ಲೆಗೊಳಗಾದ ಸಿಬ್ಬಂದಿ ಮಧು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಜಾಮೀನು ರಹಿತ ಎಫ್‍ಐಆರ್ ದಾಖಲಾಗಿದೆ. ಸಚಿವರ ಆಪ್ತನೆಂಬ ಕಾರಣಕ್ಕೆ ಅಮೀರ್ ರೌಡಿಸಂ ತೋರಿದ್ದಾನೆ ಎನ್ನಲಾಗುತ್ತಿದ್ದು, ಅಮೀರ್ ತುಂಬೆ ಹಲ್ಲೆ ಮಾಡಿದ ದೃಶ್ಯವನ್ನು ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಇತ್ತೀಚೆಗೆ ಮಂಗಳೂರಿನ ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಸಿಎಎ ವಿರೋಧಿಸಿ ನಡೆದ ಪ್ರತಿಭಟನಾ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಅಮೀರ್, ಇನ್ನೂ ಅದೇ ಗುಂಗಿನಲ್ಲಿದ್ದು ಮುಸ್ಲಿಂ ಅನ್ನುವ ಕಾರಣಕ್ಕೆ ಮೆಸ್ಕಾಂ ಲೈನ್‍ಮ್ಯಾನ್ ತನ್ನನ್ನು ಟಾರ್ಗೆಟ್ ಮಾಡಿದ್ದಾರೆಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ. ಸಿಎಎ ಹಾಗೂ ಎನ್‌ಆರ್‌ಸಿಯ ದಾಖಲೀಕರಣಕ್ಕೆ ಬಂದು ಮುಸ್ಲಿಂಮರನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ.

    ಇದೀಗ ಈತ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮೀರ್ ತುಂಬೆ ಬಂಧನಕ್ಕೆ ಬಲೆ ಬೀಸಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

  • ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ಹಾಡಹಗಲೇ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಳೆದ ಡಿಸೆಂಬರ್ 9 ರಂದು ಉಪಚುನಾವಣೆ ಫಲಿತಾಂಶ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಕೈ ಮುಖಂಡ ಸಯ್ಯದ್ ರಿಯಾಜ್ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಸಯ್ಯದ್ ರಿಯಾಜ್ ಹಾಲಿ ಶಿವಾಜಿ ನಗರ ಕ್ಷೇತ್ರದ ಶಾಸಕರಾಗಿರುವ ರಿಜ್ವಾನ್ ಆರ್ಷದ್ ಉಪಚುನಾಣೆಯಲ್ಲಿ ಜಯಗಳಿಸಿದ್ದರಿಂದ ಸಿದ್ದಾಪುರದಲ್ಲಿ ಬೆಂಬಲಿಗರಿಗೆ ಪಾರ್ಟಿ ಆರೆಂಜ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

    ಅಷ್ಟರಲ್ಲಿ ದುಷ್ಕರ್ಮಿಗಳು ಬೈಕಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಸಿದ್ದಾಪುರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚನೆ ಮಾಡಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಕಾಂಗ್ರೆಸ್ ಮುಖಂಡನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಕಾಂಗ್ರೆಸ್ ಮುಖಂಡನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಬೆಂಗಳೂರು: ಕಾಂಗ್ರೆಸ್ ಮುಖಂಡ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಸೋಮೇಶ್ವರ ನಗರದಲ್ಲಿ ನಡೆದಿದೆ.

    ಸಿದ್ದಾಪುರ ನಿವಾಸಿ ಆಗಿರುವ ಸಯ್ಯದ್ ರಿಯಾಜ್ ಚಿಕ್ಕಪೇಟೆ ಕಾಂಗ್ರೆಸ್ ಕಮಿಟಿ ಕಾಯದರ್ಶಿಯಾಗಿದ್ದಾರೆ. ರಿಯಾಜ್ ಉಪಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಿಜ್ವಾನ್ ಪರ ಕೆಲಸ ಮಾಡಿ ಫಲಿತಾಂಶದ ಬಳಿಕ ಸಿದ್ದಾಪುರದ ಕಚೇರಿಗೆ ಬಂದಿದ್ದರು.

    ರಿಜ್ವಾನ್ ಜಯದ ಸಂಭ್ರಮಾಚರಣೆ ಹುಡುಗರ ಬಳಿ ಹಂಚಿಕೊಳ್ಳಲು ರಿಯಾಜ್ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಡಿಯೋ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ರಿಯಾಜ್ ಮೇಲೆ ಮಚ್ಚು-ಲಾಂಗುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಘಟನೆಯಲ್ಲಿ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ರಿಯಾಜ್ ಸೋಮೇಶ್ವರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಸಿದ್ದಾರೆ.

  • ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರ್‌ನಿಂದ ದಾಳಿ

    ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರ್‌ನಿಂದ ದಾಳಿ

    ಮಂಗಳೂರು: ಕಾಂಗ್ರೆಸ್ ಮುಖಂಡ, ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ತಲ್ವಾರ್‌ನಿಂದ ದಾಳಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಹಲ್ಲೆಗೊಳಗಾದವರು. ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ದಾಳಿ ಮಾಡಿ, ಪರಾರಿಯಾಗಿದ್ದಾರೆ.

    ಅನಾರೋಗ್ಯದಿಂದಾಗಿ ರಝಾಕ್ ಕುಕ್ಕಾಜಿ ಅವರು ಮಂಚಿ ಗ್ರಾಮದ ಆಸ್ಪತ್ರೆಗೆ ಶನಿವಾರ ಹೋಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಮೂವರಿದ್ದ ತಂಡವು ರಝಾಕ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕೈಗೆ ಏಟು ಬಿದ್ದ ಕೂಡಲೇ ಓಡಿ ತಪ್ಪಿಸಿಕೊಂಡಿದ್ದರಿಂದ ರಝಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ದಾಳಿಯಲ್ಲಿ ರಝಾಕ್ ಕೈಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಕ್ಕಾಜೆ ಮಸೀದಿಯಲ್ಲಿ ಆಗಿರುವ ಗಲಾಟೆ ಹಿನ್ನೆಲೆಯಲ್ಲೆ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

  • ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ – ಎರಡು ತಂಡಗಳ ನಡುವೆ ಮಾರಾಮಾರಿ

    ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ – ಎರಡು ತಂಡಗಳ ನಡುವೆ ಮಾರಾಮಾರಿ

    ಮಂಗಳೂರು: ಎರಡು ತಂಡಗಳ ನಡುವೆ ಮಾರಾಮಾರಿ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಶೂಟೌಟ್ ನಡೆಸಿದ ಘಟನೆ ಮಂಗಳೂರು ನಗರ ಹೊರವಲಯದ ಉಳ್ಳಾಲದ ಮಕ್ಕಚ್ಚೇರಿ ಕಿಲೇರಿಯಾ ನಗರದಲ್ಲಿ ನಡೆದಿದೆ.

    ಇರ್ಷಾದ್(17) ಗುಂಡೇಟಿನಿಂದ ಗಾಯಗೊಂಡ ಸ್ಥಳೀಯ ನಿವಾಸಿ. ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದು, ಈ ಕಾರಣದಿಂದಾಗಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆಯುತ್ತಿತ್ತು.

    ಈ ವೇಳೆ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಏಳು ಮಂದಿ ಸಹಚರರೊಂದಿಗೆ ಆಗಮಿಸಿದ್ದಾನೆ. ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸುಹೈಲ್ ಕಂದಕ್ ತಂಡದ ಮೇಲೆ 5 ಸುತ್ತು ಫೈರ್ ಮಾಡಿದ್ದಾನೆ. ಸುಹೈಲ್ ಫೈರಿಂಗ್ ಮಾಡುತ್ತಿದ್ದಂತೆ ಸ್ಥಳೀಯರು ಆತನ ಕಾರನ್ನು ಪುಡಿಗಟ್ಟಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

    ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

    ಬೆಂಗಳೂರು: ಕಾಂಗ್ರೆಸ್ ಮುಖಂಡ ನೇಣಿಗೆ ಶರಣಾದ ಘಟನೆಯೊಂದು ಬೆಂಗಳೂರಿನ ಯಲಹಂಕ ನ್ಯೂಟೌನ್‍ನಲ್ಲಿ ನಡೆದಿದೆ.

    ವೀರಣ ಗೌಡ(50) ಆತ್ಮಹತ್ಯೆ ಮಾಡಿಕೊಂಡ ಮುಖಂಡ. ವೀರಣ್ಣ ಗೌಡ ಅವರು ಮೂಲತಃ ಹೆಸರುಘಟ್ಟ ನಿವಾಸಿಯಾಗಿದ್ದು, ಮಂಗಳವಾರ ರಾತ್ರಿ 7:30ರ ಸುಮಾರಿಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಹಲವು ವರ್ಷಗಳಿಂದ ವೀರಣ್ಣ ಗೌಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ವೀರಣ್ಣ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಉದ್ಯಮಿ ಆಗಿದ್ದರು. ವೀರಣ್ಣ ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

    ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕೈ ಮುಖಂಡ ಅರೆಸ್ಟ್

    ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕೈ ಮುಖಂಡ ಅರೆಸ್ಟ್

    ಶಿವಮೊಗ್ಗ: ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕಾಂಗ್ರೆಸ್ ಮುಖಂಡನ ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ಕಲೀಂವುಲ್ಲಾ ಬಂಧಿತ ಆರೋಪಿ. ಈತ ಕಾಂಗ್ರೆಸ್ ಸೇರುವ ಮುನ್ನ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದನು. ಉದ್ಯಮಿ ಹಬೀಬ್ ಎಂಬವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಲೀಂ ತೊಡಗಿದ್ದನು. ಈ ವ್ಯವಹಾರದ ಹಣಕಾಸಿನ ವಿಷಯದಲ್ಲಿ ಕಲೀಂ ಹಾಗೂ ಹಬೀಬ್ ಇಬ್ಬರ ನಡುವೆ ವಿವಾದ ತಲೆದೋರಿತ್ತು.

    ಇದೇ ಕಾರಣದಿಂದ ಹಬೀಬ್ ಅವರನ್ನು ಮುಗಿಸಲು ಕಲೀಂವುಲ್ಲಾ ರೌಡಿಶೀಟರ್ ಸಾತು ಎಂಬಾತನಿಗೆ ಸುಪಾರಿ ನೀಡಿದ್ದ. ಸುಪಾರಿ ಪಡೆದ ಸಾತು, ಹಬೀಬ್ ಸಾಗುವ ಮಾರ್ಗದಲ್ಲಿ ಅವರ ಕಾರಿನಲ್ಲೇ ಮುಗಿಸಲು ವಿಫಲ ಯತ್ನ ನಡೆಸಿದ್ದ. ಈ ಬಗ್ಗೆ ಹಬೀಬ್ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಸಾತುನನ್ನು ಬಂಧಿಸಿದಾಗ ಕಲೀಂ ಸುಪಾರಿ ಕೊಟ್ಟದ್ದಲ್ಲದೆ ರಿವಾಲ್ವರ್ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಸುಪಾರಿ ಕೊಲೆ ಮಾಡಲು ನೀಡಿದ್ದ ಹಣ ಹಾಗೂ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾರಿಂದಿಳಿದು ರಾಹುಲ್ ಜಿಂದಾಬಾದ್ ಅಂದ್ರು ಬೇಳೂರು!

    ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾರಿಂದಿಳಿದು ರಾಹುಲ್ ಜಿಂದಾಬಾದ್ ಅಂದ್ರು ಬೇಳೂರು!

    ಶಿವಮೊಗ್ಗ: ಲೋಕಸಭಾ ಚುನಾವಣೆ ಮುಗಿದರೂ ಮೋದಿ ಘೋಷಣೆಯ ಅಬ್ಬರ ಮುಗಿಯಲಿಲ್ಲ. ಸಾಗರದಲ್ಲಿ ಕಾಂಗ್ರೆಸ್ ಮುಖಂಡ ಕಾರಿಗೆ ಅಡ್ಡ ಹಾಕಿ ಮೋದಿ ಎಂದು ಘೋಷಣೆ ಕೂಗಲಾಗಿದೆ.

    ಶುಕ್ರವಾರ ರಾತ್ರಿ ಸಾಗರದ ಅಣಲೆಕೊಪ್ಪ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಕಾರಿಗೆ ಅಡ್ಡಹಾಕಿ ಮೋದಿ ಮೋದಿ ಎಂದು ಘೋಷಣೆ ಕೂಗಲಾಗಿತ್ತು. ಈ ವೇಳೆ ಬೇಳೂರು ಗೋಪಾಲಕೃಷ್ಣ ಕಾರಿಂದ ಇಳಿದು, ರಾಹುಲ್ ಜಿಂದಾಬಾದ್, ಕಾಂಗ್ರೆಸ್ ಪಾರ್ಟಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ.

    ಗೋಪಾಲಕೃಷ್ಣ ಅವರು ರಾಹುಲ್ ಜಿಂದಾಬಾದ್ ಹೇಳುತ್ತಿದ್ದಂತೆ ಮೋದಿ ಪರ ಘೋಷಣೆ ಇನ್ನಷ್ಟು ಜಾಸ್ತಿ ಆಗಿದೆ. ಘೋಷಣೆ ಜಾಸ್ತಿ ಆಗುತ್ತಿದ್ದಂತೆ ಬೆಂಬಲಿಗರು ಬೇಳೂರು ಅವರನ್ನು ಒತ್ತಾಯದಿಂದ ಕಾರತ್ತಿಸಿದ್ದಾರೆ. ಬೇಳೂರು ಜೊತೆಗಿದ್ದವರ ಒತ್ತಾಯಕ್ಕೆ ಕಾರು ಹತ್ತಿ ತೆರಳಿದ್ದರು.

    ಗೋಪಾಲಕೃಷ್ಣ ಅವರು ಹೋದ ಮೇಲೂ ಮುಂದುವರಿದ ಮೋದಿ ಮೋದಿ ಎಂಬ ಘೋಷಣೆ ಕೂಗಲಾಯಿತು.