Tag: ಕಾಂಗ್ರೆಸ್ ಮುಖಂಡರು

  • ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್‌ ಮುಖಂಡರು, ವಕೀಲರ ಆಕ್ರೋಶ

    ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್‌ ಮುಖಂಡರು, ವಕೀಲರ ಆಕ್ರೋಶ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಪರ ವಕಾಲತು ವಹಿಸಲು ಮುಂದಾಗಿ ವಕೀಲರು ಹಾಗೂ ತಮ್ಮ ಪಕ್ಷದ ಕಾರ್ಯಕರ್ತರಿಂದಲೇ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮುಖಭಂಗ ಅನುಭವಿಸಿದ ಘಟನೆ ನಡೆದಿದೆ.

    ನೀವು ಮಮತಾ ಬ್ಯಾನರ್ಜಿ ಅವರ ಏಜೆಂಟ್‌. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಿಮ್ಮ ಕಳಪೆ ಪ್ರದರ್ಶನದಿಂದಾಗಿಯೇ ಕಾಂಗ್ರೆಸ್‌ ನೆಲಕಚ್ಚಿತು. ವಾಪಸ್‌ ಹೋಗಿ ಎಂದು ಚಿದಂಬರಂ ವಿರುದ್ಧ ಘೋಷಣೆ ಕೂಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ರಕ್ಷಾಕವಚ ಭೇದಿಸುತ್ತಿವೆ ಭಯೋತ್ಪಾದಕರ ಬುಲೆಟ್‌ – ಹೊಸ ಬುಲೆಟ್‌ಪ್ರೂಫ್‌ ಜಾಕೆಟ್‌ ಬೇಕೆಂದ ಭಾರತೀಯ ಸೇನೆ

    ಪಶ್ಚಿಮ ಬಂಗಾಳ ಸರ್ಕಾರದ ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ನಿರ್ಧಾರದ ವಿರುದ್ಧ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ಚೌಧರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಚಿದಂಬರಂ ಅವರು ತಮ್ಮದೇ ಪಕ್ಷದ ಚೌಧರಿ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರದ ಪರ ವಾದಿಸುತ್ತಿದ್ದಾರೆ. ಸ್ವತಃ ವಕೀಲರೂ ಆಗಿರುವ ಚಿದಂಬರಂ ಅವರು ಲಾಯರ್ ಕೋಟ್‌ ಧರಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದ್ದರು.‌ ವಾದ ವಿವಾದ ಬಳಿಕ ಕೋರ್ಟ್‌ನಿಂದ ನಿರ್ಗಮಿಸುವ ವೇಳೆ ಕಾಂಗ್ರೆಸ್‌ ವಕೀಲರು ಹಾಗೂ ನಾಯಕರು ಚಿದಂಬರಂ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೂಟಿ ಮಾಡಿದೆ. ನೀವು ಟಿಎಂಸಿಯನ್ನು ಉಳಿಸುತ್ತಿದ್ದೀರಿ. ನಿಮ್ಮಂತಹ ನಾಯಕರಿಂದ ನಾವು ಪಶ್ಚಿಮ ಬಂಗಾಳದಲ್ಲಿ ಬಳಲುತ್ತಿದ್ದೇವೆ. ನಿಮ್ಮಂತಹ ಜನರಿಂದ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು ನರಳುತ್ತಿದೆ. ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ ಎಂದು ಚಿದಂಬರಂ ವಿರುದ್ಧ ಪ್ರತಿಭಟನಾಕಾರರು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ಬಂಧಿಸುವುದು ಸರ್ಕಾರದ ಮುರ್ಖತನ: ಫಡ್ನವೀಸ್

    ಇದೊಂದು ಸ್ವತಂತ್ರ ದೇಶ. ನನ್ನ ಬಳಿ ಯಾವುದೇ ಕಾಮೆಂಟ್‌ಗಳಿಲ್ಲ. ನಾನು ಈ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು ಎಂದು ಪ್ರತಿಭಟನೆ ಕುರಿತು ಚಿದಂಬರಂ ಅವರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

  • ಕಾಂಗ್ರೆಸ್ ಮುಖಂಡರ ಮನೆ ಮುಂದೆ ಪ್ರತಿಭಟನೆ ಮಾಡಿದವರ ಮೇಲೆ FIR ದಾಖಲು

    ಕಾಂಗ್ರೆಸ್ ಮುಖಂಡರ ಮನೆ ಮುಂದೆ ಪ್ರತಿಭಟನೆ ಮಾಡಿದವರ ಮೇಲೆ FIR ದಾಖಲು

    ಬೆಂಗಳೂರು: ಕಾಂಗ್ರೆಸ್ ಮುಖಂಡ ಮನೆ ಮುಂದೆ ಪ್ರತಿಭಟನೆ ಮಾಡಿದ ಪ್ರತಿಭಟನಕಾರರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.

    ಇದೇ ತಿಂಗಳ 14 ರಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಗೋವಾ ಕಾಂಗ್ರೆಸ್ ಗೋವಾ ಚುನಾವಣಾ ಪ್ರಣಾಳಿಕೆಯಲ್ಲಿ ಮಹಾದಾಯಿ ನೀರು ಕರ್ನಾಟಕಕ್ಕೆ ಕೊಡದೇ ಇರುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಕರ್ನಾಟಕ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮನೆ ಮುಂದೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೆಂದೂರು, ನಾಗಮಂಗಲದ ಕುಮಾರ್, ಕೆ.ಎನ್. ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಇದನ್ನೂ ಓದಿ: ಬೊಮ್ಮಾಯಿ ಹೇಳಿದ್ದೆ ವೇದ ವಾಕ್ಯನಾ? ಬೊಮ್ಮಾಯಿಗಿಂತ ಹಿರಿಯ ನಾನು: ಸಿದ್ದರಾಮಯ್ಯ

    ಪ್ರತಿಭಟನಕಾರರು ಪ್ರತಿಭಟನೆಗೆ ಅನುಮತಿ ಇಲ್ಲದೇ ಕಾಂಗ್ರೆಸ್ ನಾಯಕರ ಮನೆ ಮುಂದೆ ಏಕಾಏಕಿ ಪ್ರತಿಭಟನೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವ ಆರೋಪದ ಮೇಲೆ ದೂರು ದಾಖಲಾಗಿದೆ. ಸದಾಶಿವ ನಗರದ ಮುಖ್ಯ ಪೇದೆ ಮಂಜುನಾಥ್ ಕೊಟ್ಟ ದೂರಿನ ಆಧಾರದ ಮೇಲೆ ಒಟ್ಟು ಆರು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ ಬೆನ್ನಲ್ಲೇ ಶುರುವಾಯ್ತು ಸಿಂಧೂರ ಚಳುವಳಿ

  • ಅಂಗವಿಕಲ ಮಗಳ ಆರೈಕೆಗಾಗಿ ತಾಯಿಯನ್ನು ಕರೆತಂದ ಕಾಂಗ್ರೆಸ್ ಮುಖಂಡರು

    ಅಂಗವಿಕಲ ಮಗಳ ಆರೈಕೆಗಾಗಿ ತಾಯಿಯನ್ನು ಕರೆತಂದ ಕಾಂಗ್ರೆಸ್ ಮುಖಂಡರು

    ಹುಬ್ಬಳ್ಳಿ: ಅಂಗವಿಕಲ ಮಗಳ ಆರೈಕೆಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಸಿಲುಕಿಕೊಂಡಿದ್ದ ತಾಯಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬರುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದ ಅಗೆನೆಸ್ಟ್ ಕೋವಿಡ್-19 ಸಹಾಯ ಗುಂಪು ಮಾನವೀಯತೆ ಮೆರೆದಿದ್ದಾರೆ.

    ಅಂಗವಿಕಲೆ ಪೂಜಾ ಮಲಕಾಪುರ ತಾಯಿ ಶಾಂತಾ ಮಲಕಾಪುರ ಒಂದು ದಿನದ ಲಗ್ನದ ಕಾರ್ಯಕ್ರಮ ನಿಮಿತ್ತ ಅಂಗವಿಕಲೆ ಮಗಳನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಬೆಳಗಾವಿ ಸಂಬಂಧಿಕರ ಮದುವೆಗಾಗಿ ಹೋಗಿದ್ದರು. ಆದರೆ ದೀರ್ಘ ಅವಧಿಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಬೆಳಗಾವಿಯಲ್ಲಿಯೇ ಉಳಿಯಬೇಕಾಯಿತು. ಆದರೆ ಅಂಗವಿಕಲ ಮಗುವಿನ ಊಟೋಪಚಾರ ಮತ್ತು ಆರೈಕೆಯನ್ನು ಕಳೆದ 20 ದಿನಗಳಿಂದ ಸ್ಥಳೀಯ ಜೈನ ಸಮಾಜದವರು ಮಾಡುತ್ತಿದ್ದರು.

    ಆದರೆ ಪುನಃ ದೀರ್ಘ ಅವದಿಯ ಲಾಕಡೌನ್ ಘೋಷಿಸಿದ್ದರಿಂದ ಅಂಗವಿಕಲ ಮಗಳು ಮತ್ತು ತಾಯಿ ತುಂಬಾ ಆತಂಕಕ್ಕೆ ಒಳಗಾಗಿದ್ದು, ಕಳೆದ ಎಂಟು ದಿನಗಳಿಂದ ಬಹಳಷ್ಟು ಪ್ರಯತ್ನ ಮಾಡಿದರು ಬರಲು ಆಗಿರಲಿಲ್ಲ. ನಂತರ ಈ ವಿಚಾರವನ್ನು ಸ್ಥಳೀಯರು ಸಹಾಯ ಗುಂಪು ಅಗೆನೆಸ್ಟ್ ಕೋವಿಡ್-19 ಗಮನಕ್ಕೆ ತಂದರು. ನಂತರ ಕಾಂಗ್ರೆಸ್ ಮುಖಂಡರಾದ ಶಾಕಿರ್ ಸನದಿ ಮತ್ತು ರಾಜಶೇಖರ್ ಮೆಣಸಿನಕಾಯಿ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ರವರ ಗಮನಕ್ಕೆ ತಂದು ಘಟನೆಯ ಸಂಪೂರ್ಣ ವಿವರಣೆ ನೀಡಿದರು.

    ಆಗ ಅವರು ಈ ವಿಷಯವನ್ನು ಪೊಲೀಸರಿಗೆ ಹೇಳಿದರು. ಬೆಳಗಾವಿಯಲ್ಲಿ ಸಿಲುಕಿರುವ ಅಂಗವಿಕಲೆಯ ತಾಯಿಯನ್ನು ಕರೆತರುವುದು ಅನಿವಾರ್ಯವಾಗಿದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಆಡಳಿತ ಯಂತ್ರದ ಮುಖ್ಯಸ್ಥರನ್ನು ಸಂಪರ್ಕಿಸಿ ಬೆಳಗಾವಿಯಿಂದ ಈ ಅಂಗವಿಕಲೆಯ ತಾಯಿಯನ್ನು ಕರೆತರಲು ವಾಹನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದಾರೆ.

  • ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈಡ್ರಾಮಾ – ಕೈ ಮುಖಂಡರು ಪೊಲೀಸರ ವಶಕ್ಕೆ

    ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈಡ್ರಾಮಾ – ಕೈ ಮುಖಂಡರು ಪೊಲೀಸರ ವಶಕ್ಕೆ

    ಮಂಗಳೂರು: ಜಿಲ್ಲೆಯಲ್ಲಿ ನಡೆದ ಗೋಲಿಬಾರಿನಲ್ಲಿ ಮೃತಪಟ್ಟವರ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ಕೊಡಲು ಬಂದಿದ್ದರು. ಆದರೆ ಈ ವೇಳೆ ಪೊಲೀಸರು ಬಜ್ಪೆ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಉಗ್ರಪ್ಪ, ಎಂ.ಬಿ,ಪಾಟೀಲ್, ಮಾಜಿ ಸಚಿವ ಸೀತಾರಾಮ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆದಿದೆ.

    ಕಾಂಗ್ರೆಸ್ ನಿಯೋಗ ಇಂದು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಭೇಟಿ ಕೊಡಲು ಹಾಗೂ ಆಸ್ಪತ್ರೆಯಲ್ಲಿ ಇರುವವರಿಗೆ ಸಾಂತ್ವನ ಹೇಳಲು ಮಂಗಳೂರಿಗೆ ಆಗಮಿಸಿತ್ತು. ಅವರನ್ನು ಪೊಲೀಸರು ವಿಮಾನ ನಿಲ್ದಾಣದಿಂದಲೇ ಬೆಂಗಳೂರಿಗೆ ವಾಪಸ್ ಕಳುಹಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ವಾಪಸ್ ಹೋಗಲು ನಿರಾಕರಿಸಿದ್ದಾರೆ. ಆಗ ಪೊಲೀಸರು ನಿಮ್ಮನ್ನು ವಶಕ್ಕೆ ಪಡೆಯುತ್ತೇವೆ ಎಂದಾಗ ಹೈಡ್ರಾಮಾ ಸೃಷ್ಟಿಯಾಗಿತ್ತು.

    ಈ ವೇಳೆ ರಮೇಶ್ ಕುಮಾರ್ ಪೊಲೀಸರ ಮೇಲೆ ಕಿರುಚಾಡಿದ್ದಾರೆ. ನಾವು ಕಾನೂನುಬಾಹಿರ ಕೆಲಸವನ್ನು ಮಾಡಲು ಬಂದಿಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ. ನೀವು ನಮ್ಮನ್ನು ಬಂಧಿಸಬಾರದು ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಎಳೆದಾಟವಾಗಿದೆ. ಕೊನೆಗೆ ಪೊಲೀಸರು ಅವರನ್ನು ಬಿಡದೆ ತಮ್ಮ ಜೀಪ್‍ನಲ್ಲಿ ಕರೆದುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಕರೆದಕೊಂಡು ಹೋಗಿದ್ದಾರೆ.

    ಇಂದು ಸಂಜೆ ವೇಳೆ ಅವರನ್ನು ಪೊಲೀಸ್ ಠಾಣೆಯಿಂದ ನೇರವಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು  ಬಂದು ಬಿಡಲಾಗುತ್ತದೆ. ಅಲ್ಲಿಂದಲೇ ಬೆಂಗಳೂರಿಗೆ ವಾಪಸ್ ಕಳುಹಿಸುವ ಸಾಧ್ಯತೆ ಇದೆ. ಕರ್ಫ್ಯೂ ಇರುವುದರಿಂದ ಮಂಗಳೂರಿನಲ್ಲಿ ಯಾರಿಗೂ ಓಡಾಡಲು ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ.

     

  • ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡ್ರಾ ಮಾಜಿ ಸಚಿವ?

    ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡ್ರಾ ಮಾಜಿ ಸಚಿವ?

    ದಾವಣಗೆರೆ: ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಕಾಂಗ್ರೆಸ್ ಮಾಜಿ ಸಚಿವರು ಎನ್ನುವಂತಹ ಪ್ರಶ್ನೆ ಇಲ್ಲಿ ಉದ್ಭವಿಸಿದೆ. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರಚಾರಕ್ಕೂ ಸಹ ಬರಲಿಲ್ಲ.

    ಇದೇ ತಿಂಗಳ 12ರಂದು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿದು, ಮನೆ ಮನೆ ಪ್ರಚಾರ ಮುಗಿಯುತ್ತಾ ಬಂದರು ಸಹ ಮಲ್ಲಿಕಾರ್ಜುನ್ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಒಂದು ದಿನ ಕೂಡ ಪ್ರಚಾರಕ್ಕೆ ಬರಲಿಲ್ಲ. ಇದರಿಂದ ಪಾಲಿಕೆ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸೋಲಿಗೆ ಪಾಲಿಕೆ ಸದಸ್ಯರೇ ಕಾರಣ ಎಂದು ಬಹಿರಂಗವಾಗಿ ಎಸ್‍ಎಸ್‍ಎಂ ಅಭಿಮಾನಿಗಳು ಕಿಡಿಕಾರಿದರು. ಅಲ್ಲದೆ ಸ್ವತಃ ಮಲ್ಲಿಕಾರ್ಜುನ್ ಕೂಡ ಜೊತೆಯಲ್ಲಿ ಇದ್ದ ನಮ್ಮ ಮುಖಂಡರೇ ನಮ್ಮನ್ನು ಸೋಲಿಸಿದ್ದು ಎಂದ ಹಲವು ವೇದಿಕೆ ಕಾರ್ಯಕ್ರಮಗಳಲ್ಲಿ ನೋವನ್ನು ಹೊರಹಾಕಿದ್ದರು. ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ನನ್ನ ಮುಖಂಡರೇ ನಮ್ಮನ್ನು ಸೋಲಿಸಿದರು ಎನ್ನುವ ನೋವಿನಿಂದ ಎಸ್‍ಎಸ್ ಮಲ್ಲಿಕಾರ್ಜುನ್ ಹೊರ ಬರುತ್ತಿಲ್ಲ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

  • ಶ್ರೀರಾಮುಲು ವಿರುದ್ಧ ದೂರು ದಾಖಲು

    ಶ್ರೀರಾಮುಲು ವಿರುದ್ಧ ದೂರು ದಾಖಲು

    ಧಾರವಾಡ: ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಮತ್ತು ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ.

    ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಧಾರವಾಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಶ್ರೀರಾಮುಲು ಶಿವಳ್ಳಿ ನಿಧನಕ್ಕೆ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಜಾಪ್ರತಿನಿಧಿ ಕಾಯ್ದೆಯ ಅಡಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

    ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿಸಿ ದೀಪಾ ಚೋಳನ್ ಅವರಿಗೆ ಛಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಬಿಡ್ನಾಳ ಹೆಸರಿನಲ್ಲಿ ದೂರು ಸಲ್ಲಿಸಲಾಗಿದೆ. ದೂರು ನೀಡುವ ವೇಳೆ ಸಂಸದ ವಿ.ಎಸ್. ಉಗ್ರಪ್ಪ ಮತ್ತು ಇತರರು ಭಾಗಿಯಾಗಿದ್ದರು. ದೂರಿನ ಜೊತೆಗೆ ಕೈ ಮುಂಖಡರು ಶ್ರೀರಾಮುಲು ಹೇಳಿಕೆಯ ಪೆನ್‍ಡ್ರೈವ್ ಸಹ ನೀಡಿದ್ದಾರೆ.

    ಶ್ರೀರಾಮುಲು ವಿರುದ್ಧ ಡಿಸಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಉಗ್ರಪ್ಪ, ಕಾಂಗ್ರೆಸ್ ನಿಯೋಗದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ದೂರಿನ ಜೊತೆಗೆ ಡಿಸಿಗೆ ರಾಮುಲು ಆಡಿದ ಮಾತಿನ ಪೆನ್‍ಡ್ರೈವ್ ಕೂಡ ಕೊಟ್ಟಿದ್ದೇವೆ. ರಾಮುಲು ಹೇಳಿಕೆಯಲ್ಲಿ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂದಿರುವುದು ಸ್ಪಷ್ಟವಾಗಿದೆ. ಕಿರುಕುಳ ನೀಡಿ ಮೃತಪಟ್ಟಿರುವುದು ಗೊತ್ತಿದ್ದರೆ ಸುಮ್ಮನೆ ಯಾಕೆ ಇದ್ದರು. ಕೃತ್ಯದ ಮಾಹಿತಿ ಗೊತ್ತಿದ್ದು ಮುಚ್ಚಿಡುವ ಕಾರ್ಯ ಮಾಡಿದರೆ ಅದು ಕೂಡ ಒಂದು ಅಪರಾಧ. ಅದನ್ನು ಕೂಡ ನಾವು ದೂರಿನಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಶ್ರೀರಾಮುಲು, ಕುಂದಗೋಳ ಅಭ್ಯರ್ಥಿ ಚಿಕ್ಕನಗೌಡರ ಹಾಗೂ ಬಿಜೆಪಿ ಕೂಡ ಇದಕ್ಕೆ ಹೊಣೆಗಾರರಾಗಿದ್ದಾರೆ. ರಾಮುಲು ರಾಜಕೀಯ ಮತಕ್ಕಾಗಿ ಸಾವನ್ನು ಬಳಸಿಕೊಳ್ಳುವ ಸಣ್ಣತನ ತೋರಿದ್ದಾರೆ. ನಾನು ರಾಮುಲು ಕ್ಷಮೆಯಾಚಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಮುಲು ನನ್ನ ಕ್ಷೇತ್ರದ ಮತದಾರ, ಹೀಗಾಗಿ ಅವರ ಹೇಳಿಕೆಗೆ ನಾನು ಕ್ಷಮೆ ಕೇಳುವೆ. ಚುನಾವಣಾ ಆಯೋಗ ಅವರ ಮೇಲೆ ಕೇಸ್ ದಾಖಲಿಸಬೇಕು. ಬಿಎಸ್‍ವೈ, ಅಮಿತ್ ಶಾ ತಮ್ಮ ನಾಯಕರ ಮಾತಿನ ಬಗ್ಗೆ ಅರಿತುಕೊಳ್ಳಬೇಕು ಈ ಹೇಳಿಕೆಗೆ ಪಕ್ಷವಾದರೂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

  • ಬಿಜೆಪಿಗರ ಜೊತೆ ಊಟ – ದೇಶಪಾಂಡೆ ಉಚ್ಚಾಟನೆಗೆ ಕೈ ಮುಖಂಡರ ಪಟ್ಟು

    ಬಿಜೆಪಿಗರ ಜೊತೆ ಊಟ – ದೇಶಪಾಂಡೆ ಉಚ್ಚಾಟನೆಗೆ ಕೈ ಮುಖಂಡರ ಪಟ್ಟು

    ಬಾಗಲಕೋಟೆ: ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರು ಕಾಂಗ್ರೆಸ್ ನಾಯಕರಾಗಿ ಬಿಜೆಪಿಯವರ ಜೊತೆ ಊಟ ಮಾಡಿ ಪಕ್ಷದ ಮರ್ಯಾದೆ ಹಾಳು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

    ಬರ ಅಧ್ಯಯನ ಮಾಡಲು ಕಂದಾಯ ಸಚಿವ ಆರ್.ವಿ ದೇಶಪಾಂಡೆ ನೇತೃತ್ವದಲ್ಲಿ ತಂಡವೊಂದು ಜಿಲ್ಲೆಗೆ ಬಂದಿತ್ತು. ಈ ವೇಳೆ ಸಚಿವರು ಮತ್ತು ಬರ ಅಧ್ಯಯನ ತಂಡ ಬಿಜೆಪಿ ಪಕ್ಷದ ನಾಯಕರ ಜೊತೆ ಊಟ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರಿದ್ದರೂ ಎಲ್ಲರನ್ನು ಕಡೆಗಣಿಸಿ ಬಿಜೆಪಿ ಸದಸ್ಯರ ಜೊತೆ ಊಟ ಮಾಡಿದ್ದಾರೆ. ಇದು ಪಕ್ಷಕ್ಕೆ ಮಾಡಿದ ಅವಮಾನ. ಪಕ್ಷದ ಹಿರಿಯ ನಾಯಕನಾಗಿ ಬಿಜೆಪಿ ಜೊತೆ ಹೋಗಿದ್ದು ತಪ್ಪು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರಿಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಸಚಿವರು ಬರ ಅಧ್ಯಯನವನ್ನು ವೀಕ್ಷಿಸಿದ್ದಾರೆ. ಇದು ಕಾಟಾಚಾರದ ಬರ ಅಧ್ಯಯನ ಎಂದು ಜಿ.ಪಂ ಕಾಂಗ್ರೆಸ್ ಸದಸ್ಯ ಹಾಗೂ ಬೀಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆರ್ ವಿ ದೇಶಪಾಂಡೆ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಗಣನೆಗೆ ತೆಗೆದುಕೊಂಡಿಲ್ಲ. ಜೊತೆಗೆ ಪ್ರತಿಪಕ್ಷ ಬಿಜೆಪಿ ಕಚೇರಿಯಲ್ಲಿ ಊಟ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv