Tag: ಕಾಂಗ್ರೆಸ್ ಪ್ರಣಾಳಿಕೆ

  • ಭೇಟಿಗೆ ಸಮಯ ಕೇಳಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

    ಭೇಟಿಗೆ ಸಮಯ ಕೇಳಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

    – 2 ಪುಟಗಳ ಪತ್ರದಲ್ಲಿ ಏನಿದೆ?

    ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಭೇಟಿ ಮಾಡಲು ಸಮಯ ಕೇಳಿದ್ದಾರೆ.

    ಸುಮಾರು 2 ಪುಟಗಳ ಪತ್ರ ಬರೆದಿರುವ ಖರ್ಗೆ (Mallikarjun Kharge), ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಕಾಂಗ್ರೆಸ್ ಗ್ಯಾರಂಟಿಗಳನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಅವರಿಗೆ ತಪ್ಪು ಮಾಹಿತಿಯನ್ನ ನೀಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವುದಾಗಿದೆ. ಹೀಗಾಗಿ ನಿಮ್ಮ ಭೇಟಿಗೆ ಅವಕಾಶ ಸಿಕ್ಕರೆ, ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಿಳಿಸಿ ಹೇಳುತ್ತೇನೆ ಎಂದಿದ್ದಾರೆ.

    ಪ್ರಧಾನಿ ಮೋದಿ ನಮ್ಮ ಪ್ರಣಾಳಿಕೆ (Congress Manifesto) ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದು ಬೇಡ. ಕಾಂಗ್ರೆಸ್‌ನ ‘ನ್ಯಾಯ ಪತ್ರ’ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಎಲ್ಲಾ ಜಾತಿಗಳು ಮತ್ತು ಸಮುದಾಯಗಳ ಅಂಚಿನಲ್ಲಿರುವ ಜನರಿಗೆ ನ್ಯಾಯ ಒದಗಿಸುವ ಗುರಿಯನ್ನು ಹೊಂದಿದೆ. ಕೋಮು ವಿಭಜನೆಯನ್ನು ಸೃಷ್ಟಿಸುವುದು ನಿಮಗೆ ಅಭ್ಯಾಸವಾಗಿದೆ. ನೀವು ಈ ರೀತಿ ಮಾತನಾಡುವ ಮೂಲಕ ಕುರ್ಚಿಯ ಘನತೆಯನ್ನು ಕಡಿಮೆ ಮಾಡುತ್ತಿದ್ದೀರಿ ಎಂದು ಅವರು ಹೇಳಿದರು. ಇದನ್ನೂ ಓದಿ: ಮುಸ್ಲಿಮರ 4% ಮೀಸಲಾತಿ ಮುಂದುವರಿಸೋದಾಗಿ ಬಿಜೆಪಿ ಸುಪ್ರೀಂಗೆ ಹೇಳಿತ್ತು: ಸಿದ್ದರಾಮಯ್ಯ ತಿರುಗೇಟು

    ಪ್ರಧಾನಿಯವರು ತಮ್ಮ ಇತ್ತೀಚಿನ ಭಾಷಣಗಳಲ್ಲಿ ಬಳಸಿದ ಭಾಷೆಯಿಂದ ನನಗೆ ಆಘಾತವಾಗಲೀ ಅಥವಾ ಆಶ್ಚರ್ಯವಾಗಲೀ ಆಗಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನವನ್ನು ನೋಡಿದ ನಂತರ ನೀವು ಮತ್ತು ನಿಮ್ಮ ಪಕ್ಷದ ಇತರ ನಾಯಕರು ಈ ರೀತಿ ಮಾತನಾಡಲು ಪ್ರಾರಂಭಿಸುತ್ತೀರಿ ಎಂದು ನಿರೀಕ್ಷಿಸಲಾಗಿತ್ತು ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

  • ತಾಲಿಬಾನ್‍ಗಳ ಪ್ರೇರಣೆ, ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದೆ: ಸಿಟಿ ರವಿ

    ತಾಲಿಬಾನ್‍ಗಳ ಪ್ರೇರಣೆ, ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದೆ: ಸಿಟಿ ರವಿ

    – ಚುನಾವಣೆ ನಂತ್ರ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತ್ತಾರೆ

    ಮೈಸೂರು: ಲೋಕಸಭಾ ಚುನಾವಣೆಯ (Loksabha Elections 2024) ಬಳಿಕ ದೇಶದ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತ್ತಾರೆ. ತಾಲಿಬಾನ್ ಗಳ ಪ್ರೇರಣೆ ಹಾಗೂ ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ಹೇಳಿಕೆ ಕೊಟ್ಟಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಅತೀ ಹೆಚ್ಚು ಅನುದಾನ, ತೆರಿಗೆ ಪಾಲು ಕೊಟ್ಟಿರುವುದು ಮೋದಿ ಸರ್ಕಾರ. ಚರ್ಚೆ ಬೇಕಾದರೆ ಕಾಂಗ್ರೆಸ್ ನಡೆಸಲಿ. ನಾವು ಕಾಂಗ್ರೆಸ್‍ನ ದೃಷ್ಟಿದೋಷ ನಿವಾರಿಸುತ್ತೇವೆ. ಕಾಂಗ್ರೆಸ್ ಗೆ ವಿಭಜನೆ ರೋಗ ಆವರಿಸಿದೆ. ದೇಶ ವಿಭಜಿಸುವ ರೋಗ ಕಾಂಗ್ರೆಸ್‍ಗೆ ಬಹು ಹಿಂದಿನಿಂದ ಇದೆ, ಈಗಲೂ ಇದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

    ಕಾಂಗ್ರೆಸ್‍ಗೆ ಸವಾಲು: ಕಾಂಗ್ರೆಸ್ ಈ ಚುನಾವಣೆಯಲ್ಲಿ ಡಬಲ್ ಡಿಜಿಟ್ ಕೂಡ ದಾಟಲ್ಲ. ಹೀಗಾಗಿ ಇವರ ವಿಭಜನೆಯ ಯೋಚನೆ ಪ್ರಣಾಳಿಕೆಯಲ್ಲಿಯೇ ಸತ್ತು ಹೋಗುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ನಡೆದ ಹಗರಣಗಳಿಗೆ ಕಾರಣರು ಯಾರು? ಮೋದಿ ರಾಜ್ಯಕ್ಕೆ ಕೊಟ್ಟ ತೆರಿಗೆ ಹಣ, ಅನುದಾನ ಎಷ್ಟು? ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಎಷ್ಟು ಚರ್ಚೆಗೆ ಬನ್ನಿ. ನಾವು ಸಿದ್ಧ ಎಂದು ಸಿಟಿ ರವಿ ಸವಾಲೆಸೆದರು.

    ಸಿಎಂ ವಿರುದ್ಧ ಕಿಡಿ: ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದೇವೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರನ್ನೋ ಕರೆದುಕೊಂಡು ಬಂದು ಇವನು ಒಕ್ಕಲಿಗ ಅಂದರೆ ಹೇಗೆ? ಸಂಸ್ಕಾರ ಇಲ್ಲದವರನ್ನು ಒಕ್ಕಲಿಗರು ನಾಯಕ ಅಂತಾ ಒಪ್ಪಿಕೊಳ್ಳಲ್ಲ. ಕಾಂಗ್ರೆಸ್ ನವರೇ ನಿಮ್ಮ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಲೂಸ್ ಟಾಕರ್ ಅಂತಾ ಹೇಳುತ್ತಿದ್ದಾರೆ. ನಿಮಗೆ ಗತಿ ಇಲ್ಲದೇ ನಾಲ್ಕು ಚುನಾವಣೆ ಸೋತವರನ್ನು ಮೈಸೂರು ಅಭ್ಯರ್ಥಿ ಮಾಡಿದ್ದೀರಿ. ಮಂತ್ರಿಗಳು ಬರಗೆಟ್ಟವರ ಥರ ಯಾವುದನ್ನು ಬಿಡದೆ ಎಲ್ಲದಕ್ಕೂ ಬಾಯಿ ಹಾಕುತ್ತಾ ಇರೋದು ಈ ಚುನಾವಣೆಯಲ್ಲಿ ಚರ್ಚೆ ಆಗುತ್ತೆ ಎಂದು ಸಿಟಿ ರವಿ ಹೇಳಿದರು.

  • ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ: ಹಿಮಂತ್ ಶರ್ಮಾ

    ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ: ಹಿಮಂತ್ ಶರ್ಮಾ

    ಅಸ್ಸಾಂ: ‌ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯು ಪಾಕಿಸ್ತಾನದ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ವಾಗ್ದಾಳಿ ನಡೆಸಿದ್ದಾರೆ.

    ಜೋರ್ಹತ್ ಕ್ಷೇತ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್‌ ಪ್ರಣಾಳಿಕೆ (Congress Manifesto) ಬಗ್ಗೆ ಪ್ರತಿಕ್ರಿಯಿಸಿದರು. ಭಾರತಕ್ಕಿಂತ ಪಾಕಿಸ್ತಾನದಲ್ಲಿ (Pakistan) ನಡೆಯುವ ಚುನಾವಣೆಗಳಿಗೆ ಹೆಚ್ಚು ಸೂಕ್ತವೆಂದು ಆರೋಪಿಸಿದ್ದಾರೆ. ಪ್ರಣಾಳಿಕೆಯು ಅಧಿಕಾರಕ್ಕೆ ಬರಲು ಸಮಾಜವನ್ನು ಒಡೆಯುವ ಗುರಿಯನ್ನು ಹೊಂದಿದೆ ಎಂದು ಅವರು ಕಿಡಿಕಾರಿದರು.

    ಇದು ತುಷ್ಟೀಕರಣದ ರಾಜಕೀಯ ಮತ್ತು ನಾವು ಇದನ್ನು ಖಂಡಿಸುತ್ತೇವೆ. ಪ್ರಣಾಳಿಕೆಯು ಭಾರತದಲ್ಲಿ ಚುನಾವಣೆಗಾಗಿ ಅಲ್ಲ ಪಾಕಿಸ್ತಾನಕ್ಕೆ ಎಂದು ಭಾಸವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

    ಹಿಂದೂ ಅಥವಾ ಮುಸ್ಲಿಂ ಯಾವುದೇ ವ್ಯಕ್ತಿ ತ್ರಿವಳಿ ತಲಾಖ್, ಬಹುಪತ್ನಿತ್ವ ಹಾಗೂ ಬಾಲ್ಯ ವಿವಾಹವನ್ನು ಬೆಂಬಲಿಸುವುದಿಲ್ಲ. ಸಮಾಜವನ್ನು ಒಡೆದು ಅಧಿಕಾರಕ್ಕೆ ಬರುವುದು ಕಾಂಗ್ರೆಸ್‌ನ ಮನಸ್ಥಿತಿಯಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದೇಶಾದ್ಯಂತ ಜಾತಿಗಣತಿ, ಯುವಕರಿಗೆ ಉದ್ಯೋಗದ ಜೊತೆ 1 ಲಕ್ಷ ವೇತನ – ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ಇದೇ ವೇಳೆ ಬಿಜೆಪಿಯು ರಾಜ್ಯದ ಎಲ್ಲಾ 14 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶರ್ಮಾ, ಬಿಜೆಪಿಯು ದೇಶವನ್ನು ‘ವಿಶ್ವ ಗುರು ‘ (ವಿಶ್ವ ನಾಯಕ) ಮಾಡುವ ‘ಆಂದೋಲನ ‘ (ಆಂದೋಲನ) ರೂಪವನ್ನು ತೆಗೆದುಕೊಂಡಿದೆ ಎಂದು ಹೇಳಿದರು .

    ಅಸ್ಸಾಂನಲ್ಲಿ ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.

  • ಆನೆ ಗಾತ್ರದ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್‌ ಖರ್ಗೆ ಮಾತಾಡಿದ್ದಾರೆ – ಈಶ್ವರಪ್ಪ ಲೇವಡಿ

    ಆನೆ ಗಾತ್ರದ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್‌ ಖರ್ಗೆ ಮಾತಾಡಿದ್ದಾರೆ – ಈಶ್ವರಪ್ಪ ಲೇವಡಿ

    ಹುಬ್ಬಳ್ಳಿ: ಆನೆ ಗಾತ್ರದ ಮೋದಿ (Narendra Modi) ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್‌ ಖರ್ಗೆ (Priyank Kharge) ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ಲೇವಡಿ ಮಾಡಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರು ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿದಾಗ, ಖರ್ಗೆ ಜೀವನದ ಸಾಧನೆ ಮಣ್ಣುಪಾಲಾಯ್ತು. ಆನೆ ಗಾತ್ರದ ಮೋದಿಯವರ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ‌ ಎಂದು ತಂದೆ ಹಾಗೂ ಮಗ ಇಬ್ಬರ ವಿರುದ್ಧವೂ ಗರಂ ಆದರು.

    ಕಾಂಗ್ರೆಸ್‌ ಪ್ರಣಾಳಿಕೆ (Congress Manifesto) ಕುರಿತು ಮಾತನಾಡಿ, ಮುಸಲ್ಮಾನರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್ ಕೆಲಸವಾಗಿದೆ. ಬಜರಂಗದಳವನ್ನು ನಿಷೇಧ ಮಾಡುವ ವಿಚಾರದಲ್ಲಿ ಅವರಲ್ಲೇ ಗೊಂದಲವಿದೆ. ಭಾರತ ಸಂಸ್ಕೃತಿಯ ರಕ್ಷಣೆಗಿರುವ ಸಂಘಟನೆ ಬಜರಂಗದಳ. ಪಿಎಫ್‌ಐಗೆ ಹೋಲಿಸಿದ್ದು, ದೊಡ್ಡ ದುರಂತ. ಹಿಂದೂಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.

    ಜಗದೀಶ್ ಶೆಟ್ಟರ್ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಅನಿಸುತ್ತಿದೆ. ಆರ್‌ಎಸ್‌ಎಸ್‌, ಹಿಂದುತ್ವ ವಿಧಾನಸಭೆಯಲ್ಲಿ ಮಾತನಾಡಿದ್ದ ಶೆಟ್ಟರ್ ಸ್ವಾಭಿಮಾನವನ್ನು ನಾನು ನಿರೀಕ್ಷಿಸುತ್ತಿದ್ದೆ. ಟಿಕೆಟ್‌ಗಾಗಿ ಶೆಟ್ಟರ್ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆ. ಶೆಟ್ಟರ್ ಬಹಿರಂಗವಾಗಿ ಕಾಂಗ್ರೆಸ್ ನಿಲುವನ್ನು ಖಂಡಿಸಲಿ ಎಂದು ಹೇಳಿದರು.

    ಶೆಟ್ಟರ್ ಎಂದೂ ಸಿದ್ಧಾಂತವನ್ನು ಬಿಟ್ಟು ಹೋಗಿಲ್ಲ. ಶೆಟ್ಟರ್ ಪ್ರಧಾನಿ ಫೋಟೋ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಯಾರೋ ಒಬ್ಬ ವ್ಯಕ್ತಿಯ ನಡೆಯ ಕಾರಣ ಪಕ್ಷ ತೊರೆದಿದ್ದಾಗಿ ಅವರೇ ಹೇಳುತ್ತಿದ್ದಾರೆ. ಇದು ರಾಷ್ಟ್ರೀಯವಾದಿಗಳಿಗೂ, ರಾಷ್ಟ್ರ ವಿರೋಧಿಗಳಿಗೂ ನಡುವೆ ನಡೆಯುತ್ತಿರುವ ಚುನಾವಣೆ ಎಂದು ತಿಳಿಸಿದರು. ಇದನ್ನೂ ಓದಿ: ನೀಟ್ ಅಭ್ಯರ್ಥಿಗಳಿಗೆ ಸಂಚಾರದ ಆತಂಕ – ಬೆಂಗಳೂರಲ್ಲಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ

    ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಾತಿವಾದಿ ರಾಜಕಾರಣಿಗಳು. ಕೆಪಿಸಿಸಿ ಅಧ್ಯಕ್ಷ ಒಕ್ಕಲಿಗರೆಲ್ಲಾ ನನ್ನ ಹಿಂದೆ ಬನ್ನಿ ಅಂತಾರೆ. ಇವನಿಗಿಂತ ಬೇರೆ ಜಾತಿವಾದಿ ಬೇರೆಯವರು ಬೇಕಾ? ಡಿ.ಕೆ.ಶಿವಕುಮಾರ್ ಹೆಸರು ಯಾಕೆ. ಕೆಡಿ ಶಿವಕುಮಾರ್ ಅಂತಾ ಇಟ್ಕೊ. ಕರ್ನಾಟಕದಲ್ಲಿ ಜಾತಿ ಹೆಸರಲ್ಲಿ ಬೆಂಕಿ ಹಚ್ಚಿದ್ದೀರಿ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ತೀರಿ ಎಂದು ವಾಗ್ದಾಳಿ ನಡೆಸಿದರು.

    ವೀರಪ್ಪ ಮೊಯ್ಲಿ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಧರ್ಮ ವಿರೋಧಿ, ದೇಶ ವಿರೋಧಿ. ಕೂಡಲೆ ಕಾಂಗ್ರೆಸ್‌ನವರು ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಎಚ್ಚರಿಸಿದರು. ಇದನ್ನೂ ಓದಿ: ಬಜರಂಗದಳ ನಿಷೇಧ ವಿಚಾರಕ್ಕೆ ಕೈ ಹಾಕಿದ್ರೆ ಹುಷಾರ್: ಸಿದ್ದಲಿಂಗ ಶ್ರೀಗಳಿಂದ ಡಿಕೆಶಿಗೆ ಎಚ್ಚರಿಕೆ

  • ಅತ್ತೆ-ಸೊಸೆ ಜಗಳವಾಡುವ ಕೆಲಸವನ್ನು ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ: ಸಿಎಂ ಇಬ್ರಾಹಿಂ

    ಅತ್ತೆ-ಸೊಸೆ ಜಗಳವಾಡುವ ಕೆಲಸವನ್ನು ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ: ಸಿಎಂ ಇಬ್ರಾಹಿಂ

    ರಾಮನಗರ: ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಅತ್ತೆ-ಸೊಸೆ ಜಗಳವಾಡುವ ಕೆಲಸ ಮಾಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಡಿದ್ದಾರೆ.

    ಚನ್ನಪಟ್ಟಣ (Channapatna) ದ ಶೇರು ಸರ್ಕಲ್ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ (Bajarangdal) ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಜರಂಗದಳ ನೆನಪಾಗಲಿಲ್ವಾ.? ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು ಅಂದ್ರೆ ಅದು ಜೆಡಿಎಸ್ (JDS) ನಿಂದ ಮಾತ್ರ ಸಾಧ್ಯ ಎಂದರು.

    ಕಾಂಗ್ರೆಸ್ ಪ್ರಣಾಳಿಯಲ್ಲಿ ಜೆಡಿಎಸ್ ಪ್ರಣಾಳಿಕೆ ಅಂಶ ಕಾಪಿಮಾಡಿರುವ ವಿಚಾರಕ್ಕೆ ರಿಯಾಕ್ಟ್ ಮಾಡಿ, ಅದು ನೂರಕ್ಕೆ ನೂರರಷ್ಟು ಸತ್ಯ. ಅವರು ನಮ್ಮನ್ನೇ ಅನುಕರಣೆ ಮಾಡಬೇಕು. ಅದನ್ನ ಬಿಟ್ರೆ ಹೇಳೋಕೆ ಬೇರೆ ಏನಿದೆ?. ಎಕರೆಗೆ 10 ಸಾವಿರ, ಒಂದು ಮನೆಗೆ 2 ಸಾವಿರ ಕೊಡ್ತೀನಿ ಅಂತ ಹೇಳಿ ಅತ್ತೆ ಸೊಸೆಗೆ ಗಲಾಟೆ ತಂದಿಡ್ತಿದ್ದಾರೆ. ಅತ್ತೆಗೆ ಕೊಡ್ತಾರೋ, ಸೊಸೆಗೆ ಕೊಡ್ತಾರೋ. ಈಗ ನಾವು 65 ವರ್ಷ ವಯಸ್ಸಾದ ಮೇಲೆ 5 ಸಾವಿರ ಕೊಡ್ತೀವಿ ಅಂತ ಅಂದರು.

    ಜೆಡಿಎಸ್‍ಗೆ ವೋಟ್ ಹಾಕಿದ್ರೆ ಅದು ಕಾಂಗ್ರೆಸ್ ಗೆ ವೋಟ್ ಹಾಕಿದ ಹಾಗೆ ಎಂಬ ಮೋದಿ ಹೇಳಿಕೆ ಕುರಿತು ಮಾತನಾಡಿ, ಬಿಜೆಪಿ-ಕಾಂಗ್ರೆಸ್ ಇಬ್ರೂ ದಾಯಾದಿಗಳ ಮಕ್ಕಳು. ಜನಕ್ಕೆ ಎಲ್ಲವೂ ಗೊತ್ತಾಗುತ್ತೆ. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಕನ್ನಡ ನಾಡಿನ ಕನ್ನಡಿಗರು. ಕನ್ನಡಿಗರ ಸ್ವಾಭಿಮಾನ ಉಳಿಯಬೇಕು ಎಂದು ಹೇಳಿದರು. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

    ಚನ್ನಪಟ್ಟಣಕ್ಕೆ ನೀರು ಕೊಟ್ಟಿದ್ದು ಯಾರು?, ಬೆಂಗಳೂರಿಗೆ ಕಾವೇರಿ ನೀರು ಕೊಟ್ಟಿದ್ದು ಯಾರು..?, 92 ವರ್ಷ ವಯಸ್ಸಾದರೂ ರಾಜ್ಯದ ಜನತೆಗೆ ಇಂದಿಗೂ ಹೋರಾಡುತ್ತಿದ್ದಾರೆ. ಚನ್ನಪಟ್ಟಣ ಕುಮಾರಸ್ವಾಮಿ ಕ್ಷೇತ್ರ. ಚನ್ನಪಟ್ಟಣ ಮತ್ತೊಮ್ಮೆ ಕರ್ನಾಟಕದ ಕಿರೀಟ ಆಗಬೇಕು. ದೇಶದ ಭೂಪಟದಲ್ಲಿ ಚನ್ನಪಟ್ಟಣ ರಾರಾಜಿಸಬೇಕು. ಅತ್ತೆ ಸೊಸೆ ಜಗಳವಾಡು ಕೆಲವಸನ್ನ ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ. ಯೋಗೇಶ್ವರ್ (Yogeshwar) ನೀನು ಯಾವ ಪಾರ್ಟಿಯಲ್ಲಿರು ಆದರೆ ಗೌಡರಿಗೆ ಗೌರವ ಕೊಡುವುದನ್ನ ಕಲಿ. ಮೋದಿ ರೀತಿ ನಾವು ರೋಡ್ ಶೋ ಮಾಡಲು ಸಾಧ್ಯವಿಲ್ಲ. ಹಳ್ಳಿ ಹಳ್ಳಿಯಲ್ಲೂ ನಾನು ಕುಮಾರಸ್ವಾಮಿ ಸುತ್ತಾಡಿದ್ದೇವೆ. ಮುಸ್ಲಿಮರು ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.

    ಕುಮಾರಸ್ವಾಮಿ (HD Kumaraswamy) ಯನ್ನ ಬೆಂಬಲಿಸದರೆ ಮುಸ್ಲಿಂ ಪರ ನಿಲ್ಲಲಿದ್ದಾರೆ. ಮುಸ್ಲಿಮರಿಗೆ 4% ಮೀಸಲಾತಿ ಕೊಟ್ಟಿದ್ದು, ಹುಬ್ಬಳ್ಳಿ ಈದ್ಗಾ ಮೈದಾನ (Hubballi Idgha Maidan) ವಿವಾದ ಬಗ್ಗೆ ಹರಿಸಿದ್ದು ದೇವೇಗೌಡ್ರು. ಮೀಸಲಾತಿ, ಹಿಜಬ್, ಹಲಾಲ್ ನಿಷೇಧ ಹೇರುವುದನ್ನ ವಿರೋಧಿಸಿದ್ದು ಕುಮಾರಸ್ವಾಮಿ ಎಂದರು.

  • ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

    ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

    ಬೆಂಗಳೂರು: ನಿಮಗೆ ತಾಕತ್‌ ಇದ್ರೆ ಭಜರಂಗದಳ (Bajrang Dal) ನಿಷೇಧ ಮಾಡಿ ನೋಡಿ ಎಂದು ಕಾಂಗ್ರೆಸ್‌ (Congress) ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸವಾಲು ಹಾಕಿದ್ದಾರೆ.

    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಅದರಲ್ಲಿ ಭಜರಂಗದಳ ನಿಷೇಧಿಸುವ ಕುರಿತು ಪ್ರಸ್ತಾಪಿಸಿತ್ತು. ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಶೋಭಾ ಕರಂದ್ಲಾಜೆ ಕೆಂಡಾಮಂಡಲರಾಗಿದ್ದಾರೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

    ವಿನಾಶಕಾಲ ವಿಪರೀತ ಬುದ್ಧಿ ಅನ್ನುವಂತೆ ಇದೆ ಕಾಂಗ್ರೆಸ್ ನಡೆ. ಕಾಂಗ್ರೆಸ್‌ನ ವಿನಾಶ ಕಾಲ‌ ಸಮೀಪಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದೆ. ಇವತ್ತು ಕಾಂಗ್ರೆಸ್‌ನವರು ಪಿಎಫ್ಐ ನಿಷೇಧ ಮಾಡ್ತೀವಿ. ಜತೆಗೆ ಭಜರಂಗದಳ ನಿಷೇಧ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ನವರ ಟಾರ್ಗೆಟ್ ಇರೋದು ಪಿಎಫ್ಐ ಅಲ್ಲ, ಅವರ ಟಾರ್ಗೆಟ್ ಭಜರಂಗದಳ ಎಂದು ವಾಗ್ದಾಳಿ ನಡೆಸಿದ್ದಾರೆ.

    ಆರ್‌ಎಸ್ಎಸ್‌ನ ಒಂದು ಭಾಗ ಬಿಜೆಪಿ. ಆರ್‌ಎಸ್ಎಸ್‌ನ ಯುವಕರ ದಳ ಭಜರಂಗದಳ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟಿದೆ ಕಾಂಗ್ರೆಸ್. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಭಜರಂಗದಳ ನಿಷೇಧ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

    ನೀವು PFIನ್ನು ಭಜರಂಗದಳದ ಜೊತೆ ಹೋಲಿಕೆ ಮಾಡ್ತೀರಾ? ಭಜರಂಗದಳ ಬ್ಯಾನ್ ಮಾಡುವ ನಿಮ್ಮ ಶಕ್ತಿ ತೋರಿಸಿ. ಆಗ ನಾವೂ ದೇಶಾದ್ಯಂತ ತೋರಿಸುತ್ತೇವೆ. ಭಜರಂಗದಳದ ನಿಷೇಧವನ್ನು‌ ಹಿಂದೂ ಸಮಾಜ ಒಪ್ಪಲ್ಲ. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಅಂತ ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

    ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಗುಡುಗಿದ್ದಾರೆ.

  • ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ಮಂಗಳೂರು: ಮುಂದಿನ ಐದು ವರ್ಷಗಳಿಗೆ ಕಾಂಗ್ರೆಸ್ ನ ಭರವಸೆ ಮತ್ತು ಮುನ್ನೋಟಗಳನ್ನು ಇಂದು ನಗರದ ಟಿಎಂಎಪೈ ಹಾಲ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕರು ಸೇರಿ ಪ್ರಣಾಳಿಕೆ ಬಿಡುಗಡೆ ಮಾಡಿದ್ರು.
    2013ರ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದ ಶೇಕಡಾ 95ರಷ್ಟು ಕೆಲಸಗಳನ್ನು ಮಾಡಿದ್ದೇವೆ. ಎಲ್ಲ ಪಕ್ಷಗಳು ಕೂಡ ಚುನಾವಣೆ ಪೂರ್ವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಆದ್ರೆ ಎಲ್ಲ ಪಕ್ಷಗಳಿಗಿಂತೂ ಕಾಂಗ್ರೆಸ್ ಸಂಪೂರ್ಣ ಭಿನ್ನವಾಗಿದೆ. ನಾವು ಬಜೆಟ್ ಮಂಡಿಸುವಾಗ ಪ್ರಣಾಳಿಕೆಯನ್ನು ಪಕ್ಕದಲ್ಲಿಟ್ಟುಕೊಂಡು ರಚಿಸುತ್ತೇವೆ. ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಪ್ರಣಾಳಿಕೆಯನ್ನು ಕಸದ ಬುಟ್ಟಿಗೆ ಹಾಕುತ್ತವೆ ಅಂತಹ ಘಟನೆಗಳನ್ನು ನಾನು ನೋಡಿದ್ದೇನೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು.
    ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು:
    1. ಪ್ರತಿ ಮೂರು ಜಿಲ್ಲೆಗೂಂದು  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
    2. ಮುಂದಿನ 5 ವರ್ಷಗಳಲ್ಲಿ ಕೃಷಿಗೆ 1.25 ಕೋಟಿ ಹಣ ಮೀಸಲು.
    3. ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ.
    4. 75 ಟಿಎಂಸಿ ಕಾವೇರಿ ನೀರು ಸದ್ಬಳಕೆಗೆ ನೀಲ ನಕ್ಷೆ ರಚನೆ.
    5. ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಒತ್ತು.
     6. 2 ಸಾವಿರ ಜನಸಂಖ್ಯೆಯುಳ್ಳ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ.
    7. ತಾಲೂಕು, ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲಿ ಹೆಚ್ಚಿನ ಅನುದಾನ ಮೀಸಲು.
    8. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ.
    9. ಪ್ರತಿ ಹಳ್ಳಿಗೂ 24 ಗಂಟೆ ವಿದ್ಯುತ್ ಪೂರೈಕೆಯ ಭರವಸೆ.
     10. ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ,ಪುನರ್ವಸತಿ ಭರವಸೆ.
    11. ಮುಂದಿನ 10 ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲಿ 10 ಲಕ್ಷ ಮನೆಗಳ ನಿರ್ಮಾಣದ ಗುರಿ.
    12. 2025ರೊಳಗೆ ನವಕರ್ನಾಟಕ ನಿರ್ಮಾಣಕ್ಕೆ ಒತ್ತು.
    13. ತಮಿಳುನಾಡು ಮಾದರಿಯಲ್ಲಿಯೇ ಕನ್ನಡಿಗರಿಗೆ ಉಚಿತ ಮಾಂಗಲ್ಯ ಭಾಗ್ಯ.
    14. ಚುನಾವಣೆಯಲ್ಲಿ ಗೆದ್ದರೆ 18 ವರ್ಷಗಳ ಕಾಲ ಉಚಿತ ಶಿಕ್ಷಣ ಭಾಗ್ಯ, ಈ ಮೊದಲು 10 ವರ್ಷಗಳಿಗೆ ಮಾತ್ರ ಆಗಿತ್ತು.
    15. ರಾಜ್ಯದಲ್ಲಿ  ಕೃಷಿ ಕಾರಿಡಾರ್ ನಿರ್ಮಾಣ