Tag: ಕಾಂಗ್ರೆಸ್ ನಾಯಕರು

  • ಸತ್ಯ ಹೇಳುವ ಧೈರ್ಯವಿಲ್ಲದ ಕೈ ನಾಯಕರಿಂದ ಅಖಂಡಗೆ ನ್ಯಾಯ ಸಿಗಲು ಸಾಧ್ಯವೇ – ಸುಧಾಕರ್ ಪ್ರಶ್ನೆ

    ಸತ್ಯ ಹೇಳುವ ಧೈರ್ಯವಿಲ್ಲದ ಕೈ ನಾಯಕರಿಂದ ಅಖಂಡಗೆ ನ್ಯಾಯ ಸಿಗಲು ಸಾಧ್ಯವೇ – ಸುಧಾಕರ್ ಪ್ರಶ್ನೆ

    ಬೆಂಗಳೂರು: ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಕಾಂಗ್ರೆಸ್ ನಾಯಕರಿಗೆ ಅದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಕಾಂಗ್ರೆಸ್ ನಾಯಕರಿಂದ ನ್ಯಾಯ ಸಿಗಲು ಸಾಧ್ಯವೇ? ಎಂದು ಶಿಕ್ಷಣ ಸಚಿವ ಸುಧಾಕರ್ ಪ್ರಶ್ನಿಸಿದರು.

    ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್‌ಗಳ ವಿಚಾರಣೆ ವಿಚಾರವಾಗಿ ಸಚಿವ ಸುಧಾಕರ್ ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ. ಮೊದಲಿಗೆ “ತನುವಿನ ಕೋಪ ತನ್ನ ಹಿರಿಯತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ?” ಎಂಬ ಗಾದೆಯ ಮಾತನ್ನು ಹೇಳಿದ್ದಾರೆ.

    ಬೆಂಗಳೂರು ಗಲಭೆ ಕಾರಣ ಯಾರು? ಎಂಬ ಸತ್ಯ ಹೊರ ಬರುತ್ತಿದೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳ ಸಂಪತ್‍ರಾಜ್, ಜಾಕೀರ್ ಅವರು ಇಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿದ್ದು, “ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಕಾಂಗ್ರೆಸ್ ನಾಯಕರಿಗೆ ಅದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಕಾಂಗ್ರೆಸ್ ನಾಯಕರಿಂದ ನ್ಯಾಯ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈ ಜಗತ್ತಿನಲ್ಲಿ ಚಿರಕಾಲ ಉಳಿಯುವಂಥದ್ದು ನಯ-ವಿನಯವೇ ಹೊರತು ಮೃಗೀಯತೆಯೂ ಅಲ್ಲ, ದೇಹಬಲವೂ ಅಲ್ಲ. ಸತ್ಯಕ್ಕೆ ಸಾವಿಲ್ಲ” ಎಂದು ಕಾರ್ಪೊರೇಟರ್‌ಗಳ ವಿಚಾರಣೆ ವಿಚಾರವಾಗಿ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

  • ಐವಾನ್ ಡಿಸೋಜಾಗೆ ಕೊರೊನಾ ಸೋಂಕು- ಡಿಕೆಶಿ, ಖಾದರ್‌ಗೂ ಆತಂಕ

    ಐವಾನ್ ಡಿಸೋಜಾಗೆ ಕೊರೊನಾ ಸೋಂಕು- ಡಿಕೆಶಿ, ಖಾದರ್‌ಗೂ ಆತಂಕ

    – ಶುಕ್ರವಾರ ಡಿಕೆಶಿ, ಖಾದರ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಐವಾನ್

    ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಕುರಿತು ಅವರು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ನನಗೆ ಹಾಗೂ ನನ್ನ ಪತ್ನಿ ಡಾ.ಕವಿತಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಸ್ವಯಂಪ್ರೇರಿತರಾಗಿ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡೆವು. ಈ ವೇಳೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು ಹಾಗೂ ಬೆಂಬಲಿಗರು ನಮ್ಮನ್ನು ಭೇಟಿಯಾಗಲು ಬರಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರಾರ್ಥನೆ, ಹಾರೈಕೆಯೇ ನಮಗೆ ಶಕ್ತಿ ಎಂದು ಬರೆದುಕೊಂಡಿದ್ದಾರೆ.

    Myself and my wife Dr.Kavitha have been tested Corana positive.There are no symptoms but we have voluntarily gone and…

    Posted by Dr.Ivan D’Souza on Saturday, August 1, 2020

    ಐವಾನ್ ಡಿಸೋಜಾ ಪತ್ನಿ ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿದ್ದು, ಅವರಿಗೂ ಸೋಂಕು ತಗುಲಿದೆ. ಇಷ್ಟೇ ಅಲ್ಲದೆ ಇನ್ನೂ ಭಯಾನಕ ವಿಚಾರವೆಂದರೆ ನಿನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಜೊತೆಗೆ ಐವಾನ್ ಡಿಸೋಜಾ ಸಹ ಭಾಗವಹಿಸಿದ್ದರು. ಹೀಗಾಗಿ ಇದೀಗ ಹಲವು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ತಗುಲುವ ಆತಂಕ ಎದುರಾಗಿದೆ.

    ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಹ ಐವಾನ್ ಡಿಸೋಜಾ ಅವರು ಡಿಕೆಶಿ ಜೊತೆಗಿದ್ದರು. ಅಲ್ಲದೆ ಯು.ಟಿ.ಖಾದರ್ ಪಕ್ಕದಲ್ಲಿಯೇ ನಿಂತಿದ್ದರು. ಹೀಗಾಗಿ ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರಂಟೈನ್ ಟೆನ್ಷನ್ ಕಾಡುತ್ತಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರಿಗೆ ಆತಂಕ ಎದುರಾಗಿದೆ.

  • ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

    ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

    – ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೊದಲಿಗೆ “ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್ಸಿನ ಅತಿರಥ ಮಹಾರಥರು ಪಕ್ಷದ ಟ್ವಿಟ್ಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ” ಎಂದಿದ್ದಾರೆ.

    ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ಸಿ ನೈತಿಕತೆ ಎಲ್ಲಿತ್ತು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    “ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ. ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ” ಎಂದಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ಸಿನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ಸಿಗೆ ಸಲಹೆ ನೀಡಿ ಖರ್ಗೆ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು. ಆ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು” ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್ಸಿನ ನಾಯಕರು ಪಕ್ಷದ ಟ್ವಿಟ್ವರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರ್ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ಸಿನ ಟ್ವಿಟರ್ ಖಾತೆಗೆ ಸೀಮಿತವೋ? ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

    “ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಶ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ, ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ. ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ” ಎಂದರು.

    “ತನ್ನರಿದೆ ಅರಿವೆಂತುಂಟೊ?, ತನ್ನ ಮರೆದ ಮರೆಹೆಂತಂಟೊ?, ಅರೆದು ಮರೆದವರು, ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ, ಗುಹೇಶ್ವರಾ” ಎಂದು ಕುಮಾರಸ್ವಾಮಿ ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ – ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾದ ಕಾಂಗ್ರೆಸ್ ನಾಯಕರು

    ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ – ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾದ ಕಾಂಗ್ರೆಸ್ ನಾಯಕರು

    ನವದೆಹಲಿ: ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾದ ಹಿನ್ನೆಲೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿರುವ ನಾಯಕರು ಶೀಘ್ರ ನೇಮಕಕ್ಕೆ ಒತ್ತಾಯಿಸಲಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ಸ್ಥಾನ ಆಕಾಂಕ್ಷಿ ಹೆಚ್.ಕೆ ಪಾಟೀಲ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ದೆಹಲಿಯಲ್ಲಿ ಇರುವ ಹೆಚ್.ಕೆ ಪಾಟೀಲ್ ಸೋನಿಯಾ ಗಾಂಧಿ ಸೇರಿ ಹಲವು ವರಿಷ್ಠ ನಾಯಕರ ಭೇಟಿಗೆ ಸಮಯ ಕೇಳಿದ್ದಾರೆ.

    ಬೈ ಎಲೆಕ್ಷನ್ ಬಳಿಕ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ, ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಹೈಕಮಾಂಡ್ ಇನ್ನೂ ಅಂಗಿಕರಿಸಿಲ್ಲ. ರಾಜ್ಯಕ್ಕೆ ಸಮಿತಿಯೊಂದು ಬಂದು ಹೊಸ ನಾಯಕರ ಆಯ್ಕೆಗೆ ಅಭಿಪ್ರಾಯ ಕೂಡ ಸಂಗ್ರಹಿಸಿದೆ. ಆದರೆ ಹೈಕಮಾಂಡ್ ಇದುವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಪಾಟೀಲ್ ಹೈಕಮಾಂಡ್ ಮನವರಿಕೆ ಮಾಡಲು ಇಚ್ಛಿಸಿದ್ದಾರೆ.

    ಸಿಎಎ ಸೇರಿ ಹಲವು ಜ್ವಲಂತ ವಿಚಾರಗಳಿವೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್‍ನಲ್ಲಿ ನಾಯಕತ್ವದ ಪ್ರಶ್ನೆ ಹುಟ್ಟಿಕೊಳ್ಳುವುದು ಸರಿಯಲ್ಲ. ಹೈಕಮಾಂಡ್ ಶೀಘ್ರವಾಗಿ ನೇಮಕ ಮಾಡಲು ಹೆಚ್.ಕೆ ಪಾಟೀಲ್ ಒತ್ತಾಯಿಸಲಿದ್ದಾರೆ.

    ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಅವರು, ಇಂದು ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ. ಕೆಪಿಸಿಸಿ-ವಿಪಕ್ಷ, ಸಿಎಲ್‍ಪಿ ನಾಯಕನ ಸ್ಥಾನದ ತಡವಾಗಿದೆ. ವಿಳಂಬದಿಂದ ಪಕ್ಷಕ್ಕೆ ಹಾನಿಯುಂಟಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಬೇಗ ನಿರ್ಣಯ ಆಗಬೇಕು ಎಂದು ಮನವಿ ಮಾಡಿಕೊಳ್ಳಲಿದ್ದೇನೆ. ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಜೊತೆಗೆ ಚರ್ಚಿಸಲಿದ್ದೇನೆ ಎಂದರು.

  • ಕಾಂಗ್ರೆಸ್‍ನ 134ನೇ ಸಂಸ್ಥಾಪನಾ ದಿನಾಚರಣೆ – ನಗರದ ಹಲವೆಡೆ ಆಗಲಿದೆ ಟ್ರಾಫಿಕ್ ಜಾಮ್

    ಕಾಂಗ್ರೆಸ್‍ನ 134ನೇ ಸಂಸ್ಥಾಪನಾ ದಿನಾಚರಣೆ – ನಗರದ ಹಲವೆಡೆ ಆಗಲಿದೆ ಟ್ರಾಫಿಕ್ ಜಾಮ್

    ಬೆಂಗಳೂರು: ಇಂದು ಕಾಂಗ್ರಸ್‍ನ 134ನೇ ಸಂಸ್ಥಾಪನಾ ದಿನ. ಈ ಐತಿಹಾಸಕ ದಿನದ ಆಚರಣೆ ಮಾಡಲು ರಾಜ್ಯ ಕಾಂಗ್ರಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ನಾಯಕರು ಸದ್ಭಾವನ ನಡಿಗೆ ಹಮ್ಮುಕೊಂಡಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಆ ನಂತರ ಕಾಂಗ್ರೆಸ್ ನಾಯಕರುಗಳು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಫ್ರೀಡಂ ಪಾರ್ಕ್‍ವರೆಗೆ ಸದ್ಭಾವನ ನಡಿಗೆ ಪಾದಯಾತ್ರೆ ನಡೆಸಲಿದ್ದಾರೆ.

    ಫ್ರೀಡಂ ಪಾರ್ಕಿನಲ್ಲಿ 12 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರುಗಳು ಸಧ್ಬಾವನ ಯಾತ್ರೆ ಹಾಗೂ ಸಂಸ್ಥಾಪನಾ ದಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

    ಕೆಪಿಸಿಸಿ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ನಡೆಯುವ ಪಾದಯಾತ್ರೆಯಲ್ಲಿ ಸಾವಿರಾರು ಜನ ಸೇರಲಿದ್ದಾರೆ. ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್ ರೋಡ್, ವಿಧಾನಸೌಧದ ರೋಡ್ ಮತ್ತು ನೃಪತುಂಗ ರೋಡ್ ಮೂಲಕ ಫ್ರೀಡಂ ಪಾರ್ಕ್ ಗೆ ರ‍್ಯಾಲಿ  ಸಾಗಿಬರಲಿದೆ.

    ಬೆಳಗ್ಗೆ 9:30 ರಿಂದ 12 ಗಂಟೆಯವರೆಗೆ ಮೆರವಣಿಗೆ ಸಾಗಲಿದ್ದು, ಇಲ್ಲಿನ ರಸ್ತೆಗಳು ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜ್ಯಾಮ್ ಆಗಲಿದೆ.

  • ಸಾಲ ಪಡೆದು ಹಣ ನೀಡಿಲ್ಲ – ಕಾಂಗ್ರೆಸ್ ನಾಯಕರ ಹೆಸರು ಬಿಚ್ಚಿಟ್ಟ ಎಂಟಿಬಿ

    ಸಾಲ ಪಡೆದು ಹಣ ನೀಡಿಲ್ಲ – ಕಾಂಗ್ರೆಸ್ ನಾಯಕರ ಹೆಸರು ಬಿಚ್ಚಿಟ್ಟ ಎಂಟಿಬಿ

    – ಮೋದಿ ಇರುವವರೆಗೂ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ
    – ಕೈ ಹೈಕಮಾಂಡ್ ಸತ್ತು ಹೋಗಿದೆ

    ಬೆಂಗಳೂರು: ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ತನ್ನ ಬಳಿ ಸಾಲ ಪಡೆದ ಕಾಂಗ್ರೆಸ್ ನಾಯಕ ಹೆಸರನ್ನು ಹೇಳಿದ್ದಾರೆ.

    ಇಂದು ಹೊಸಕೋಟೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮ ಮಾಡುತ್ತಿರುವ ಅವರು ಭಾಷಣದ ವೇಳೆ ಮಾತನಾಡಿ, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಲೋಕಸಭಾ ಚುನಾವಣೆಯಲ್ಲಿ ಹಣವನ್ನು ಸಾಲ ತೆಗೆದುಕೊಂಡಿದ್ದ. ಆದರೆ ಮತ್ತೆ ಅವನು ವಾಪಸ್ ಮಾಡಿದ. ಬೈರೇಗೌಡ ಬಿಟ್ಟರೆ ಬೇರೆ ಯಾರು ಹಣ ವಾಪಸ್ ಮಾಡಿಲ್ಲ. ನಾನು ಮಂಜುನಾಥ್ ಸ್ವಾಮಿ ಭಕ್ತ ಸುಳ್ಳು ಹೇಳಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ಸಿನ ಕೆಲ ನಾಯಕರು ಇದ್ದಾರೆ. ನನ್ನ ಬಳಿ ಹಣ ಪಡೆದು ವಾಪಸ್ ಮಾಡದೆ ಈಗ ನನ್ನನ್ನೇ ಸೋಲಿಸಲು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಿಡಿಕಾದರು.

    ನನ್ನ ಬಳಿ 1,200 ಕೋಟಿಗೂ ಅಧಿಕ ಹಣ ಇದೆ. ನಾನು ಅಷ್ಟು ಆಸ್ತಿಯ ಒಡೆಯ. ಆದರೆ ಇದೆಲ್ಲಾ ನ್ಯಾಯವಾಗಿ ಸಂಪಾದನೆ ಮಾಡಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ನಾವು ಪಕ್ಷ ಬಿಡುವುದಕ್ಕೆ ಸಿದ್ದರಾಮಯ್ಯ ಕಾರಣ. ಸಿಎಂ ಜತೆ ಮಾತನಾಡಿ ಶಾಸಕರ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದೆವು. ಆದರೆ ಅವರು ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವೇ ಮಾಡಿಕೊಡಿತ್ತಿಲ್ಲ ಅಂತ ನಮ್ಮ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.

    ಮೈತ್ರಿ ಮುರಿದುಕೊಂಡು ವಿಪಕ್ಷದಲ್ಲಿ ಕೂರೋಣ ಎಂದು ನಾವು ಸಿದ್ದರಾಮಯ್ಯಗೆ ಸಲಹೆ ಕೊಟ್ಟಿದ್ದೆವು. ಆದರೆ ಅವರು ಹೈಕಮಾಂಡ್ ಕಡೆ ಬೆರಳು ತೋರಿಸಿದರು. ಎಲ್ಲಿದೆ ಹೈಕಮಾಂಡ್, ಅದು ಈಗ ಲೋಕಮಾಂಡ್ ಆಗಿದೆ. ನಾನು ಅಷ್ಟು ಕೆಲಸ ಮಾಡಿದರು 12 ಸಾವಿರ ಮತ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬಂತು. ನೆಹರು ಮಾಡದಿರುವ ಕೆಲಸವನ್ನು ಮೋದಿ ಮಾಡಿದ್ದಾರೆ. ಮೋದಿ ಇರುವವರೆಗೂ ನಿಮ್ಮ ಕಾಂಗ್ರೆಸ್ ಮತ್ತು ಪ್ರದೇಶಿಕ ಪಕ್ಷಗಳಿಗೆ ಉಳಿಗಾಲ ಇಲ್ಲ ಎಂದು ಹೇಳಿದ್ದಾರೆ.

  • ಎಲ್ಲರ ಎದುರೇ ಶಿಷ್ಯನ ಕೆನ್ನೆಗೆ ಬಾರಿಸಿದ ಸಿದ್ದರಾಮಯ್ಯ

    ಎಲ್ಲರ ಎದುರೇ ಶಿಷ್ಯನ ಕೆನ್ನೆಗೆ ಬಾರಿಸಿದ ಸಿದ್ದರಾಮಯ್ಯ

    ಮೈಸೂರು: ಜಿಲ್ಲೆಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ತೆರೆಳುತ್ತಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನಿಗೆ ಎಲ್ಲರ ಎದುರೇ ಕೆನ್ನೆಗೆ ಬಾರಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ ವಾಪಸ್ ಹೋಗುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗ ಯಾರಿಗೋ ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದೊಯ್ದಿದ್ದಾರೆ. ಕೈ ಮುಖಂಡರ ಸಮ್ಮುಖದಲ್ಲೇ, ವಿಮಾನ ನಿಲ್ದಾಣದ ಆವರಣದಲ್ಲೇ ಬೆಂಬಲಿಗನ ಕೆನ್ನೆಗೆ ಸಿದ್ದರಾಮಯ್ಯ ಹೊಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.

    ನಾಲ್ಕನೇ ದಿನ ತನಿಖೆ ಮಾಡಿ ಅರೆಸ್ಟ್ ಮಾಡುವುದು ಕಾನೂನು ಬಾಹಿರ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ. ನನ್ನ ಪ್ರಕಾರ ಬಂಧನ ಮಾಡುವುದೇ ದೊಡ್ಡ ಅಪರಾಧವಾಗಿದೆ. ಕೊಲೆ, ದರೋಡೆ ಮಾಡಿದವರು ಸಾಕ್ಷಿ ನಾಶ ಮಾಡುತ್ತಾರೆ ಎಂದು ಬಂಧಿಸುತ್ತಾರೆ. ಈ ಬಂಧನ ರಾಜಕೀಯ ಪ್ರೇರಿತವಾಗಿದೆ. ಚಿದಂಬರಂ ಹಾಗೂ ಡಿಕೆಶಿ ಇಬ್ಬರ ಬಂಧನವೂ ರಾಜಕೀಯ ಪ್ರೇರಿತವಾಗಿದ್ದು, ಇದು ಒಳ್ಳೆಯದಲ್ಲ ಎಂದು ಕಿಡಿಕಾರಿದರು.

    ರಾಜಕೀಯ ಪ್ರೇರಿತ, ದ್ವೇಷದಿಂದ ಕೂಡಿದೆ. ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಮನ್ಸ್ ಕೊಟ್ಟು ಅಟೆಂಡ್ ಆಗದೇ ಹೋದರೆ ಅರೆಸ್ಟ್ ಮಾಡಲಿ. ಆದರೆ ಡಿಕೆಶಿ ಕರೆದಾಗೆಲ್ಲ ಹೋಗಿದ್ದಾರೆ. ಹಬ್ಬದ ದಿನವೂ ಬಿಟ್ಟಿಲ್ಲ. ಪಾಪ ಡಿಕೆಶಿ ಕಣ್ಣೀರೇ ಹಾಕಿಬಿಟ್ಟರು. ಎಷ್ಟು ಅಮಾನವೀಯ ಇದು ಎಂದು ಪ್ರಶ್ನಿಸಿದ್ದಾರೆ. ನಾಲ್ಕು ದಿನವೂ ಇಡಿ ವಿಚಾರಣೆಗೆ ಡಿಕೆಶಿ ಹೋಗಿದ್ದಾರೆ. ಸಂಪೂರ್ಣ ರಾಜಕೀಯ ಸೇಡಿನ ಕ್ರಮ ಇದು. ಕಾಂಗ್ರೆಸ್ ಪಕ್ಷ ಇದನ್ನು ಸಹಿಸುವುದಿಲ್ಲ. ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ. ನಾವೆಲ್ಲ ಡಿಕೆಶಿ ಜೊತೆಗಿದ್ದೇವೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಮತ್ತಷ್ಟು ಕೈ ಮುಖಂಡರನ್ನ ಕೇಂದ್ರ ಟಾರ್ಗೆಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಾಡಲಿ, ಕಾಂಗ್ರೆಸ್ ಅದಕ್ಕೆಲ್ಲ ಹೆದರಲ್ಲ. ಇದು ಜನರಿಗೆ ಅರ್ಥವಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯದಲ್ಲೂ ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದರು. ಇದೇ ವೇಳೆ 7 ರಂದು ಪ್ರಧಾನಿ ಮೋದಿ ಬರುತ್ತಿದ್ದಾರೆ. ಅವತ್ತಾದರೂ ಎಲ್ಲ ಮಂತ್ರಿಗಳು, 25 ಸಂಸದರು ಹೋಗಿ ಇಲ್ಲೇ ಮೋದಿಯವರನ್ನ ಭೇಟಿ ಮಾಡಲಿ. ಹಾಗೂ ನೆರೆ ಪರಿಹಾರವನ್ನ ಯಡಿಯೂರಪ್ಪನವರು ಕೇಳಲಿ ಎಂದರು.

  • ಕೈ ಶಾಸಕರ ರೆಸಾರ್ಟ್ ವಾಸ್ತವ್ಯ ಬದಲಾವಣೆ

    ಕೈ ಶಾಸಕರ ರೆಸಾರ್ಟ್ ವಾಸ್ತವ್ಯ ಬದಲಾವಣೆ

    ರಾಮನಗರ: ಒಂದು ಕಡೆ ಸದನದಲ್ಲಿ ವಿಶ್ವಾಸ ಮತಯಾಚನೆ ಬಗ್ಗೆ ವಾದ ಪ್ರತಿವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರು ತಮ್ಮ ರೆಸಾರ್ಟ್ ವಾಸ್ತವ್ಯವನ್ನು ಬದಲಾವಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

    ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಿಂದ ಈಗಲ್ ಟನ್ ರೆಸಾರ್ಟಿಗೆ ಕಾಂಗ್ರೆಸ್ ನಾಯಕರು ಶಿಫ್ಟ್ ಆಗುವ ಸಾಧ್ಯತೆಯಿದೆ. ಕೈ ಶಾಸಕರು ಇಲ್ಲಿವರೆಗೂ ದೇವನಹಳ್ಳಿ ಸಮೀಪದಲ್ಲಿನ ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಲ್ಲಿದ್ದರು. ಇದೀಗ ರಾಮನಗರ ತಾಲೂಕಿನ ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.

    ಕೆಪಿಸಿಸಿ ವತಿಯಿಂದ ಈಗಾಗಲೇ ಈಗಲ್ ಟನ್ ರೆಸಾರ್ಟಿನಲ್ಲಿ 14 ರೂಮ್‍ಗಳನ್ನು ವೇಯ್ಟಿಂಗ್ ಲೀಸ್ಟ್ ನಲ್ಲಿ ಇಡಲಾಗಿದೆ. ಇಂದು ಸಂಜೆ ವೇಳೆಗೆ ಕಾಂಗ್ರೆಸ್ಸಿನ ಕೆಲ ಶಾಸಕರು ಈಗಲ್ ಟನ್ ರೆಸಾರ್ಟಿಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಸದ್ಯಕ್ಕೆ 14 ರೂಂಗಳು ಮಾತ್ರವೇ ಈಗಲ್ ಟನ್ ರೆಸಾರ್ಟಿನಲ್ಲಿ ಖಾಲಿ ಇವೆ. ಹೀಗಾಗಿ ರೆಸಾರ್ಟಿನಲ್ಲಿ ಖಾಲಿಯಿರುವ ರೂಮ್‍ಗಳನ್ನು ಬುಕ್ ಮಾಡಲಾಗಿದೆ. ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಲ್ಲಿ ಕಾಂಗ್ರೆಸ್ ನಾಯಕರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಈಗಲ್ ಟನ್ ರೆಸಾರ್ಟಿನಲ್ಲಿ ಭದ್ರತೆ ಇರುತ್ತದೆ ಎನ್ನುವ ಕಾರಣಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

     

  • ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    – ಬಿಜೆಪಿ ವಿರುದ್ಧ ಸಂಸತ್ತಿನ ಮುಂದೆ ಕೈ ಸಂಸದರ ಪ್ರತಿಭಟನೆ

    ನವದೆಹಲಿ: ಕರ್ನಾಟಕ ಹಾಗೂ ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮವನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ಸಿನ ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣವೆಂದು ಆರೋಪಿಸಿ ಸಂಸತ್ತಿನ ಮುಂದೆ ಕೈ ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಈ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಕೈ ಸಂಸದರು ಭಾಗಿಯಾಗಿದ್ದರು. ಸಂಸತ್ತಿನ ಸಂಕೀರ್ಣದ ಮುಂದಿರುವ ಗಾಂಧೀಜಿ ಪುತ್ಥಳಿಯ ಎದುರು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಫಲಕಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಈ ತಂತ್ರಗಾರಿಕೆ ನಡೆಸುತ್ತಿದೆ. ಮೈತ್ರಿ ಪಕ್ಷಗಳ ಶಾಸಕರನ್ನು ರಾಜೀನಾಮೆ ನೀಡುವಂತೆ ಮಾಡಿ, ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಕೆಡವುದು ಬಿಜೆಪಿಯ ಪ್ಲಾನ್. ಅಲ್ಲದೆ ಸರ್ಕಾರದ ಸಂಖ್ಯಾಬಲ ಕಡಿಮೆಯಾಗಿದೆ, ಹೀಗಾಗಿ ಸಿಎಂ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು.

    ಇನ್ನೊಂದೆಡೆ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಕೈತಪ್ಪಿ ಹೋಗಿದ್ದಾರೆ. ಒಟ್ಟು 15 ಮಂದಿ ಶಾಸಕರಲ್ಲಿ 10 ಮಂದಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಅತಂತ್ರ ಸ್ಥಿತಿ ತಲುಪಲು ಕೇಸರಿ ಪಕ್ಷವೇ ಕಾರಣ. ಅವರಿಂದಲೇ ನಮ್ಮ ಪಕ್ಷಕ್ಕೆ ಈ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.

  • ಶಾಸಕರನ್ನು ನೆಗ್ಲೆಕ್ಟ್ ಮಾಡಿದ್ದಕ್ಕೆ ಇಂದು ಈ ಸ್ಥಿತಿ: ಸಿಎಂ ವಿರುದ್ಧ `ಕೈ’ ನಾಯಕರ ಅಸಮಾಧಾನ

    ಶಾಸಕರನ್ನು ನೆಗ್ಲೆಕ್ಟ್ ಮಾಡಿದ್ದಕ್ಕೆ ಇಂದು ಈ ಸ್ಥಿತಿ: ಸಿಎಂ ವಿರುದ್ಧ `ಕೈ’ ನಾಯಕರ ಅಸಮಾಧಾನ

    ಬೆಂಗಳೂರು: ಶಾಸಕರನ್ನು ನೆಗ್ಲೆಕ್ಟ್ ಮಾಡಿದ ಪರಿಣಾಮ ಇಂದು ಈ ಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಭಾನುವಾರ ಕಾಂಗ್ರೆಸ್ – ಜೆಡಿಎಸ್ ನಾಯಕರ ಸಭೆ ನಡೆಯಿತು. ಈ ವೇಳೆ ಕಾಂಗ್ರೆಸ್ ನಾಯಕರು ಸಿಎಂ ಕಾರ್ಯವೈಖರಿ ಬಗ್ಗೆ ಅಸಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಎಂ ವಿರುದ್ಧ ಕಾಂಗ್ರೆಸ್ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

    ಭಾನುವಾರ ನಡೆದ ಕಾಂಗ್ರೆಸ್ – ಜೆಡಿಎಸ್ ನಾಯಕರ ಸಭೆಯ ಇನ್ ಸೈಡ್ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕರು, ಶಾಸಕರನ್ನು ನೆಗ್ಲೆಕ್ಟ್ ಮಾಡಿದ ಪರಿಣಾಮ ಇಂದು ಈ ಸ್ಥಿತಿ ಬಂದಿದೆ. ನೀವು ನಿಮ್ಮ ಶಾಸಕರನ್ನು ಬಿಟ್ಟರೆ ಯಾವ ಶಾಸಕರ ಒಂದು ಕೆಲಸವಾದ್ರೂ ಮಾಡಿಕೊಟ್ಟಿದ್ದೀರಾ ಎಂದು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

    ಅಲ್ಲದೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟಿರೋದು ಬಿಡಿ. ನಿಮ್ಮ ಮನೆ ಮಗನಂತೆ ಇದ್ದ ಗೋಪಾಲಯ್ಯ ನಿಮ್ಮನ್ನು ಬಿಟ್ಟು ಹೋಗಿದ್ದಾರೆ ಇದರ ಅರ್ಥ ಏನು?. ಇಂದು ಕಾಂಗ್ರೆಸ್‍ನಿಂದ ಸರ್ಕಾರ ಹೋಗುತ್ತಿದೆ ಎಂದು ಹೇಳುವುದು ಎಷ್ಟು ಸರಿ ಹೇಳಿ. ಎಲ್ಲವನ್ನು ನೀವೇ ಮಾಡಿಕೊಂಡು ಈಗ ಸರ್ಕಾರ ಉಳಿಸಿ ಕೊಡಿ ಎಂದು ಕೇಳಿದ್ರೆ ನಾವು ಏನ್ ಮಾಡೋದು. ಕಾಂಗ್ರೆಸ್ ಹೈಕಮಾಂಡ್‍ಗೂ ನಿಮ್ಮ ವರ್ತನೆ ಬಗ್ಗೆ ಬೇಸರ ಇದೆ ಎಂದು ಕಾಂಗ್ರೆಸ್ ನಾಯಕರು ಕಿಡಕಾರಿದ್ದಾರೆ.

    ಬೇಸರಗೊಂಡಿರುವ ಶಾಸಕರನ್ನು ಅದ್ಯಾವ ವಿಶ್ವಾಸದಲ್ಲಿ ಮನವೊಲಿಕೆ ಮಾಡುವುದಕ್ಕೆ ಆಗುತ್ತದೆ ಎಂದು ಕಾಂಗ್ರೆಸ್ ನಾಯಕರು ಸಿಎಂ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರ ಮಾತಿಗೆ ಸಿಎಂ ಮೌನವಾಗಿಯೇ ಇದ್ದರು. ಬಳಿಕ ಮುಂದೆ ಎಲ್ಲ ಸರಿಪಡಿಸಿಕೊಳ್ಳುತ್ತೇನೆ. ಈ ಬಾರಿ ಸರ್ಕಾರ ಉಳಿಸಿ ಎಂದು ಸಿಎಂ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ನೋಡೋಣಾ ಪ್ರಯತ್ನ ಮಾಡುತ್ತೀವಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.