– ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು ಹೇಳಿದ್ದೇನು?
ನವದೆಹಲಿ: ಇತ್ತೀಚೆಗೆ ಕಾರವಾರದಲ್ಲಿ ಕೆಲವು ಮಹಿಳೆಯರು ನಮಗೆ ಗ್ಯಾರಂಟಿ ಯೋಜನೆಗಳು ಬೇಡ, ಅದು ಬಡವರಿಗೆ ತಲುಪಲಿ ಎಂದು ಹೇಳಿದರು. ಇದೇ ರೀತಿ ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರಿಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಾವು ಜನರಿಗೆ ಗ್ಯಾರಂಟಿ ಜಾರಿ ಮಾಡುವ ಭರವಸೆ ನೀಡಿದ್ದೆವು. ಸರ್ಕಾರ ರಚನೆಯಾದ ಬೆನ್ನಲ್ಲೇ ಮೊದಲ ಸಂಪುಟದಲ್ಲೇ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ. ಎಲ್ಲ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿವೆ. ಗೃಹಲಕ್ಷ್ಮಿ ಯೋಜನೆ ಅಡಿ ಮೂರು ತಿಂಗಳು ಹಣ ಪಾವತಿ ಆಗಿರಲಿಲ್ಲ. ಈಗ ಅದಕ್ಕೂ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವವರು, ಉಳ್ಳವರು ಮತ್ತು ಬಿಜೆಪಿ ನಾಯಕರು, ಬಡವರಿಗೆ ಬಾಯಿ ಇಲ್ಲ. ಹೀಗಾಗಿ, ಮಾತನಾಡಲ್ಲ. ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿ ಹೆಚ್ಚಿಸಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಮೊದಲು ಗುಜರಾತ್ ಮಾದರಿ ಅಂತಾ ಇದ್ದರು. ಈಗ ಕರ್ನಾಟಕ ಮಾದರಿ ಆಗುತ್ತಿದೆ. ಬ್ಲಡ್ ಮತ್ತು ದುಡ್ಡು ಎರಡೂ ಚಲಾವಣೆಯಲ್ಲಿ ಇದ್ದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.
ವೀರಪ್ಪ ಮೊಯ್ಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತೆ. ಖರ್ಗೆ ಅವರು ಯಾರೂ ಮಾತಾಡಬೇಡಿ ಎಂದಿದ್ದಾರೆ. ಹಾಗಾಗಿ ಮಾತಾಡಲ್ಲ. ಸದ್ಯ ಎರಡು ಕುರ್ಚಿಗಳು ಭರ್ತಿ ಇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿಯವರಿಗೆ (BJP) ಈ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಬಾರದು. ಹೇಗಾದರೂ ಮಾಡಿ ಇದನ್ನು ಹತ್ತಿಕ್ಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಸಿಟ್ಟು ಹೊರ ಹಾಕಿದ್ದಾರೆ.
ದಲಿತರ ಹಣ ಗ್ಯಾರಂಟಿಗೆ ಬಳಸಿದ ವಿಚಾರಕ್ಕೆ ಬಿಜೆಪಿ ಜನಾಂದೋಲನ ಮಾಡಲು ಮುಂದಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿಗಳನ್ನ ಬಡವರಿಗೆ ನೀಡಲಾಗುತ್ತಿದೆ. ಬಡವರಿಗೆ (Poor) ಹಣ ಕೊಡಲು ಇವರಿಗೆ ಮನಸ್ಸಿಲ್ಲ ಅಂದರೆ ಬಿಜೆಪಿಯ ಸಿದ್ಧಾಂತ ಬಡವರ ಪರ ಇಲ್ಲ ಎಂದಾಯಿತು. ಅದನ್ನು ಅವರು ಪಬ್ಲಿಕ್ ಆಗಿ ಹೇಳಲು ಹೊರಟಿದ್ದಾರೆ. ಜನ ಇದನ್ನೆಲ್ಲಾ ಗಮನಿಸುತ್ತಾರೆ ಎಂದರು.
ಬಡವರಿಗೆ ಕೊಡುವ ಹಣಕ್ಕೂ ನೀವು ಅಡ್ಡ ಬರುತ್ತೀರಿ. ಬಿಜೆಪಿ ಬಗ್ಗೆ ಜನ ಸಮುದಾಯ ಏನು ಯೋಚನೆ ಮಾಡುತ್ತದೆ? ದಲಿತರಿಗೆ (Dalits) ಮೀಸಲಿಟ್ಟ ಹಣವನ್ನು ದಲಿತರಿಗೆ ಕೊಡುತ್ತೇವೆ. ಶಕ್ತಿ ಯೋಜನೆಯಲ್ಲಿ ದಲಿತರು ಹೋಗಲ್ವಾ? ನಾನು ಅದನ್ನ ಸಮರ್ಥನೆ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!
ಸರ್ಕಾರದಲ್ಲಿ ಇಂಥ ಯೋಜನೆಗಳು ಮಾಡುವಾಗ ಯೋಚನೆ ಮಾಡುತ್ತೇವೆ. ಬಡವರಿಗೆ ಕೊಡುವ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಅದನ್ನೇ ದೊಡ್ಡದು ಮಾಡುತ್ತಿದ್ದಾರೆ. ನಾವು ಏನು ಹಣ ಕೊಳ್ಳೆ ಹೊಡೆದಿದ್ದೇವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಸಾಲು ಸಾಲು ಟೀಕೆ, ಆಕ್ರೋಶದ ನಂತರ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಮೂರು ತಿಂಗಳಿಂದ ಬಂದ್ ಆಗಿದ್ದ ಗೃಹಲಕ್ಷ್ಮಿ ಜಮೆ ಪ್ರಕ್ರಿಯೆಗೆ ನಾಳೆ ಮರು ಚಾಲನೆ ಸಿಗಲಿದೆ.
ನಾಳೆ ನವೆಂಬರ್ ತಿಂಗಳ ದುಡ್ಡು ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಡಿಸೆಂಬರ್ ತಿಂಗಳ ದುಡ್ಡನ್ನು ಮುಂದಿನ ಸೋಮವಾರ ಫಲಾನುಭವಿಗಳ ಖಾತೆಗೆ ಹಾಕುವ ಕೆಲಸ ಆಗಲಿದೆ.
ಗೃಹಲಕ್ಷ್ಮಿ ಹಣ ಸ್ಥಗಿತವಾದ ಬಗ್ಗೆ ‘ಪಬ್ಲಿಕ್ ಟಿವಿ’ ಸತತವಾಗಿ ವರದಿ ಬಿತ್ತರಿಸಿತ್ತು. ಅಂದ ಹಾಗೇ, ಹಣ ಜಮೆ ಮಾಡುವ ಪ್ರಕ್ರಿಯೆಯನ್ನು ಬದಲಾವಣೆ ಮಾಡಿದ ಕಾರಣ ಸ್ವಲ್ಪ ವಿಳಂಬ ಆಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿಕೊಂಡಿದೆ.
ಇನ್ಮುಂದೆ ಗೃಹಲಕ್ಷ್ಮಿ ಹಣ ತಾಲೂಕು ಪಂಚಾಯತ್ ಇಓಗಳ ಮೂಲಕ ಬಿಡುಗಡೆ ಆಗಲಿದೆ.
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಹಾಲಿನ ದರವನ್ನು ಪ್ರತಿ ಲೀಟರಿಗೆ 5 ರೂ. ಹೆಚ್ಚಿಸುವುದಾಗಿ ಸರಕಾರ ಹೇಳುತ್ತಿದೆ. ಯಾವಾಗ ಮಾಡುತ್ತಾರೋ ಗೊತ್ತಿಲ್ಲ; ಕೇಂದ್ರದಿಂದ 5 ಕೆಜಿ ಅಕ್ಕಿ ಸಿಗುತ್ತಿದೆ. ಆದರೆ, ರಾಜ್ಯ ಸರಕಾರದ 5 ಕೆಜಿ ಪಡಿತರ ಅಕ್ಕಿ ಸಂಬಂಧ ಫಲಾನುಭವಿಯ ಖಾತೆಗೆ ಹಣ ವರ್ಗಾಯಿಸಿಲ್ಲ ಎಂದು ಮಾಹಿತಿ ಇರುವುದಾಗಿ ತಿಳಿಸಿದರು.
ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ದುಡಿಯುವವರಿಗೆ ಐದಾರು ತಿಂಗಳಿಂದ ವೇತನ ಕೊಡುತ್ತಿಲ್ಲ; ಮೆಟ್ರೋ ದರ ಹೆಚ್ಚಿಸಿದ್ದು, ಹಾಲು, ವಿದ್ಯುತ್ ದರ ಏರಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಎರಡನೇ ಅವಧಿಯ ಆಡಳಿತ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದೆ ಎಂದು ಟೀಕಿಸಿದರು. ಗ್ಯಾರಂಟಿ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ; ಈ ಸರಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರವಿಕುಮಾರ್ ಆರೋಪಿಸಿದರು.
ವಿವಿ ಬಂದ್ ಮಾಡುವ ನಿರ್ಧಾರ ಮೂರ್ಖತನದ ಪರಮಾವಧಿ..
ಕಾಂಗ್ರೆಸ್ ಸರಕಾರವು ಹಿಂದುಳಿದ ಜಿಲ್ಲೆಗಳ ಹೊಸ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುತ್ತಿದೆ. ಕೊಪ್ಪಳ, ಹಾವೇರಿ, ಚಾಮರಾಜನಗರ, ಬೀದರ್- ಈ ಥರದ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬರೆ ಹಾಕುವ ಈ ಸರಕಾರದ ನಿರ್ಧಾರ ಮೂರ್ಖತನದ ಪರಮಾವಧಿ ಎಂದು ಎನ್.ರವಿಕುಮಾರ್ ಆಕ್ಷೇಪಿಸಿದರು.
ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗಬೇಕೆಂಬ ಉದ್ದೇಶದಿಂದ ಹೊಸ ವಿಶ್ವವಿದ್ಯಾಲಯ ತೆರೆಯಲಾಗಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆಮಾತಿನಂತೆ ಸರಕಾರದ ಬಳಿ ವೇತನ ಕೊಡಲು ಹಣ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಬರೆ ಹಾಕುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಸರಕಾರ ತನ್ನ ನಿರ್ಧಾರವನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದರು.
2016-17ರಲ್ಲಿ ಉನ್ನತ ಶಿಕ್ಷಣಕ್ಕೆ ಬಜೆಟ್‍ನ ಶೇ 6 ಹಣವನ್ನು ಕೊಡಲಾಗಿತ್ತು. ಈ ಸರಕಾರ ಕೇವಲ ಶೇ 1.76 ಹಣವನ್ನಷ್ಟೇ ಕೊಟ್ಟಿದೆ. ವಿವಿ, ಕಾಲೇಜುಗಳಿಗೆ ಹಣವನ್ನೇ ಕೊಡದೆ ಇದ್ದರೆ ಶಿಕ್ಷಣ ಸಂಸ್ಥೆಗಳು ನಡೆಯುವುದಾದರೂ ಹೇಗೆ ಎಂದು ಕೇಳಿದರು. ಬಿಜೆಪಿ ಇದ್ದಾಗ ತೆರೆದ ಯೂನಿವರ್ಸಿಟಿ ಎಂದು ರಾಜಕೀಯ ದ್ವೇಷದಿಂದ ಬಂದ್ ಮಾಡಿದರೆ, ಇದು ರಾಜ್ಯಕ್ಕೆ ಮಾಡುವ ಅಪಮಾನ ಎಂದು ರವಿಕುಮಾರ್ ತಿಳಿಸಿದರು.
ಕಾಂಗ್ರೆಸ್ ಸರಕಾರ ಇದೆಯೇ ಅಥವಾ ಸತ್ತುಹೋಗಿದೆಯೇ?
ಉದಯಗಿರಿ ಘಟನೆ ಕುರಿತು ಪ್ರಸ್ತಾಪಿಸಿದ ಅವರು, ನಿನ್ನೆ ಬಿ.ಕೆ.ಹರಿಪ್ರಸಾದ್ ಅವರು ಇದರೊಳಗೆ ಆರೆಸ್ಸೆಸ್ ಕಾರ್ಯಕರ್ತರ, ನಾಯಕರ, ಸ್ವಯಂಸೇವಕರ ಕೈವಾಡ ಇದೆ; ಬುರ್ಖಾ ಹಾಕಿ ಬಂದು ಆರೆಸ್ಸೆಸ್ಸಿನವರು ಗಲಾಟೆ ಮಾಡಿದ್ದಾರೆ; ಕಲ್ಲೆಸೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಥರ ಹೇಳುವ ಬಿ.ಕೆ.ಹರಿಪ್ರಸಾದ್ ಮತ್ತಿತರ ಕಾಂಗ್ರೆಸ್ ನಾಯಕರಿಗೆ ನಿಮ್ಮ ಸರಕಾರ ಇದೆಯೇ ಅಥವಾ ಸತ್ತು ಹೋಗಿದೆಯೇ ಎಂಬ ಪ್ರಶ್ನೆ ಕೇಳಲು ಬಯಸುವುದಾಗಿ ತಿಳಿಸಿದರು.
ಪೊಲೀಸರು ಇದ್ದಾರಾ ಇಲ್ಲವೇ? ಪೊಲೀಸರು ಏನು ಮಾಡುತ್ತಿದ್ದರು? ಚಳ್ಳೆ ಹಣ್ಣು ತಿನ್ನುತ್ತ ಇದ್ದರೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಇದರಲ್ಲಿ ಆರೆಸ್ಸೆಸ್ ಭಾಗಿ ಎನ್ನಲು ಏನಾದರೂ ತನಿಖೆ ಮಾಡಿದ್ದೀರಾ? ತನಿಖಾ ವರದಿ ಇದೆಯೇ? ಎಂದು ಕೇಳಿದರು. ಆಧಾರರಹಿತ ಬುದ್ಧಿಗೇಡಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಬಿ.ಕೆ.ಹರಿಪ್ರಸಾದ್ ಅವರಿಗೆ ತಿಳಿಸಲು ಬಯಸುವುದಾಗಿ ಹೇಳಿದರು.
ಕೆಲವು ಅಲ್ಪಸಂಖ್ಯಾತರು ಗೂಂಡಾಗಳಂತೆ ವರ್ತಿಸಲು ನಿಮ್ಮ ಸರಕಾರ ಕಾರಣ. ಶಿವಮೊಗ್ಗ ಮತ್ತಿತರ ಕಡೆ ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಂಡಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು.
– 5 ತಿಂಗಳಿನಿಂದ ಅನ್ನ ಭಾಗ್ಯದ ದುಡ್ಡು ಬಂದಿಲ್ಲ – 3 ತಿಂಗಳಿನಿಂದ ಮಹಿಳೆಯರ ಖಾತೆಗೆ 2 ಸಾವಿರ ಜಮೆಯಾಗಿಲ್ಲ
ಬೆಂಗಳೂರು: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಘೋಷಿಸಿದ ಎರಡು ಮಹತ್ವಾಕಾಂಕ್ಷಿ ಗ್ಯಾರಂಟಿ ಸ್ಕೀಂ (Congress Guarantee) ಯೋಜನೆಗಳಾದ ಅನ್ನಭಾಗ್ಯ (Anna Bhagya) ಮತ್ತು ಗೃಹಲಕ್ಷ್ಮಿ ಯೋಜನೆಯ (Gruhalakshmi) ಫಲಾನುಭವಿಗಳಿಗೆ ನೀಡುತ್ತಿದ್ದ ಹಣ ಸ್ಥಗಿತಗೊಂಡಿದೆ.
ಅನ್ಯಭಾಗ್ಯದಡಿ ಬಿಪಿಎಲ್ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣ 5 ತಿಂಗಳಿನಿಂದ ಸ್ಥಗಿತಗೊಂಡಿದ್ದರೆ ಗೃಹಲಕ್ಷ್ಮಿ ಹಣ 3 ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ.
ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೇ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು.
ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 20 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಈ ವಿಚಾರದ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣದ ಬದಲಿಗೆ ಅಕ್ಕಿಯನ್ನೇ ನೀಡಲಾಗುವುದು ಅಂತ ಹೇಳುತ್ತಿದ್ದಾರೆ. ಇದನ್ನೂ ಓದಿ: ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್ ಮಾಡಿ ಹೇಳಿದ್ದ ಚೇತನ್
ಕುಟುಂಬದ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿಂದ ಪಾವತಿಯಾಗಿಲ್ಲ. ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡಿ ಸರಿಯಾದ ಸಮಯಕ್ಕೆ ಪಾವತಿ ಆಗುತ್ತಿರಲಿಲ್ಲ. ಈಗ ಯಾವ ಕಾರಣಕ್ಕೆ ಪಾವತಿಯನ್ನು ನಿಲ್ಲಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹಿಳೆಯರು, ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ದುಡ್ಡು ಕೊಡುತ್ತೇವೆ ಅಂತ ಹೇಳಿದ್ರು. 10 ಕೆಜಿ ಅಕ್ಕಿ ಸಿಗುತ್ತೆ ಎಂದಿದ್ದರು. ಚುನಾವಣಾ ಸಮಯದಲ್ಲಿ ಮನೆಗೆ ಮನೆಗೆ ಬಂದು ಕಾರ್ಡ್ ಹಂಚಿ ಹೋಗಿದ್ದರು. ಈಗ ಅಕ್ಕಿಯೂ ಇಲ್ಲ, ದುಡ್ಡು ಇಲ್ಲ. ಈ ರೀತಿ ಅನ್ಯಾಯ ಮಾಡುವುದು ಸರಿಯೇ? ಕೂಡಲೇ ಸರ್ಕಾರ ಘೋಷಣೆ ಮಾಡಿದಂತೆ ಹಣ್ ಮತ್ತು ಅಕ್ಕಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ತಾಲೂಕು ಪಂಚಾಯಿತಿಯಿಂದ ಬಿಡುಗಡೆಯಾಗಲಿದೆ ಗೃಹಲಕ್ಷ್ಮಿ ಹಣ!
– ಗ್ಯಾರಂಟಿ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ
ಬೆಂಗಳೂರು: ಯುವಕರು ಪದವಿ ಪಡೆದರೆ ಯುವನಿಧಿ (Yuva Nidhi) ಕೊಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ (Congress Government) 8 ವಿಶ್ವವಿದ್ಯಾಲಯಗಳನ್ನು (University) ಮುಚ್ಚಲು ಮುಂದಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಭಾರೀ ಖತರ್ನಾಕ್‌ಗಳು. ಮೊದಲು ಮಂಡ್ಯ ವಿವಿ ಮುಚ್ಚುತ್ತಿದ್ದಾರೆ. ಮಂಡ್ಯ ಗಂಡು ನಾಡು. ಅಲ್ಲೇ ವಿವಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ ಕೊಡುತ್ತಿದೆ. ಮಾರಿ ಕಣ್ಣು ಹೋರಿ ಮೇಲೆ ಅನ್ನುವಂತೆ ಸಿದ್ದರಾಮಯ್ಯ ಕಣ್ಣು ವಿವಿಗಳ ಮೇಲೆ ಬಿದ್ದಿದೆ. 9 ವಿವಿಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸ್ಥಾಪಿಸಿದ್ದ 9 ವಿಶ್ವವಿದ್ಯಾಲಯಗಳಿಗೆ ಬೀಗ
ಕೆಆರ್‌ಎಸ್ ಪಕ್ಕ ಅಮ್ಯೂಸ್ಮೆಂಟ್ ಪಾರ್ಕ್ ಮಾಡುತ್ತಾರಂತೆ. ಇದಕ್ಕೆ 1000 ಸಾವಿರ ಕೋಟಿ ರೂ. ಕೊಡುತ್ತಿದ್ದಾರೆ. ಜಲಕ್ರೀಡೆಗೆ ಹಣ ನೀಡುತ್ತಾರೆ ಆದರೆ ವಿಶ್ವವಿದ್ಯಾಲಯ ಮುಚ್ಚಿಸುತ್ತಾರೆ. ಈ ಕಾಂಗ್ರೆಸ್‌ನವರು ಅಪರೂಪದ ಪೀಸ್‌ಗಳು ಎಂದು ವಾಗ್ದಾಳಿ ನಡೆಸಿದರು.
ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲ. ಕೆಪಿಎಸ್‌ಸಿಯಲ್ಲಿ ತಪ್ಪಿಲ್ಲದೇ ಸರಿಯಾಗಿರುವ ಪ್ರಶ್ನೆ ಪತ್ರಿಕೆ ಕೊಡುವ ಯೋಗ್ಯತೆ ಇಲ್ಲ. ಈಗ ನಾಲ್ಕು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್ ಗಳನ್ನು ಮುಚ್ಚಿ ನೊಡೋಣ. ಇದೇ ಕಾಂಗ್ರೆಸ್ ನೀತಿ. ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರ ರಾಜ್ಯಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
ಬೆಂಗಳೂರು: ಪಂಚ ಗ್ಯಾರಂಟಿಗಳ (Congress Guarantee) ಮೂಲಕವೇ ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದೆ. ಆದ್ರೆ, ಇದೀಗ ಉಚಿತಗಳ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಬೇಸರದ ಮಾತುಗಳನ್ನು ಆಡಿರೋದು ಚರ್ಚೆಗೆ ಗ್ರಾಸವಾಗಿದೆ.
ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು ಎಂದು ಪ್ರಶ್ನಿಸಿದ್ದಾರೆ. ಜಲಮಂಡಳಿ ಸಭೆ ಬಳಿಕ ಮಾತಾಡಿದ ಅವರು, ಇನ್ಮೇಲೆ ಕಾವೇರಿ ನೀರನ್ನು ಫ್ರೀಯಾಗಿ ಕೊಡೋಕೆ ಆಗಲ್ಲ.. ಒಂದು ಪೈಸೆಯಾದರೂ ಬಿಲ್ ಕಟ್ಟಬೇಕು. ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ. ಹೀಗಾಗಿ ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ ಅಂತ ಕೇಳಿದ್ದಾರೆ.
ಈ ಮೂಲಕ ನೀರಿನ ದರ ಹೆಚ್ಚಿಸುವ ಸುಳಿವು ನೀಡಿದ್ದಾರೆ. ಇನ್ನೂ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆಯೂ ಕಂಡುಬರ್ತಿದೆ. ವಿದ್ಯುತ್ ದರ ಏರಿಕೆಗೆ 5 ವಿದ್ಯುತ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. 3 ವರ್ಷದ ದರ ಏರಿಕೆಯನ್ನು ಈಗಲೇ ಪ್ರಕಟಿಸಿ ಎಂದು ಮೊರೆ ಇಟ್ಟಿವೆ. ಪ್ರತಿ ಯೂನಿಟ್‌ಗೆ 2025-26ರ ಸಾಲಿನಲ್ಲಿ 67 ಪೈಸೆ, 2026-27ರಲ್ಲಿ 74 ಪೈಸೆ ಮತ್ತು 2027-28ರಲ್ಲಿ 91 ಪೈಸೆ ಹೆಚ್ಚಳಕ್ಕೆ ಈಗಲೇ ಅನುಮೋದನೆ ನೀಡಿ ಎಂದು ಕೋರಿವೆ.
ಈ ಮಧ್ಯೆ, ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಮೆಟ್ರೋ ನೌಕರರಿಂದಲೇ ವಿರೋಧ ವ್ಯಕ್ತವಾಗಿವೆ. ದರ ಏರಿಕೆ ಬದಲು ಸೋರಿಕೆ ತಪ್ಪಿಸಿದ್ರೆ, ಅದ್ರಿಂದಲೇ 60-70ಕೋಟಿ ಉಳಿಸಬಹುದು ಎಂಬ ಸಲಹೆ ನೀಡಿದ್ದಾರೆ.
ನವದೆಹಲಿ: ವಿಧಾನಸಭೆ ಚುನಾವಣೆ (Delhi Election) ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ತನ್ನ ಎರಡನೇ ಗ್ಯಾರಂಟಿ ಘೋಷಿಸಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೆಹಲಿ ನಿವಾಸಿಗಳಿಗೆ ಕಾಂಗ್ರೆಸ್ ಜೀವನ್ ರಕ್ಷಾ ಹೆಸರಿನಲ್ಲಿ 25 ಲಕ್ಷ ರೂ. ರೂಪಾಯಿಯ ವಿಮೆ ನೀಡಲಾಗುವುದು ಎಂದು ಮಾಜಿ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಜೀವನ ರಕ್ಷಾ ಯೋಜನೆಯಡಿ (Jeevan Raksha Yojana) ದೆಹಲಿಯ ಎಲ್ಲಾ ನಾಗರಿಕರು 25 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ಪಡೆಯುತ್ತಾರೆ ಅಂದರೆ 25 ಲಕ್ಷದವರೆಗೆ ಉಚಿತ ಚಿಕಿತ್ಸೆ ಇರುತ್ತದೆ. ಈ ಹಿಂದೆ ದೆಹಲಿಯ ಮಹಿಳೆಯರಿಗೆ ಪ್ಯಾರಿ ದೀದಿ ಯೋಜನೆಯಡಿ ಪ್ರತಿ ತಿಂಗಳು 2,500 ರೂ. ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
ಪ್ಯಾರಿ ದೀದಿ ಯೋಜನೆ ಕುರಿತು ಮಾಹಿತಿ ನೀಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸಂಪೂರ್ಣ ವಿಶ್ವಾಸವಿದೆ ಮತ್ತು ಮಹಿಳೆಯರಿಗೆ 2,500 ರೂ.ಗಳನ್ನು ನೀಡುತ್ತೇವೆ ಇದನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಕರ್ನಾಟಕದ ಮಾದರಿಯಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದರು.
ಆಪ್ ಈಗಾಗಲೇ ಸಂಜೀವಿನಿ ಹೆಸರಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆಯ ಭರವಸೆ ನೀಡಿದೆ, ಮಹಿಳಾ ಸಮ್ಮಾನ್ ಹೆಸರಿನಲ್ಲಿ 2,100 ರೂ. ನೀಡುವುದಾಗಿ ಹೇಳಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಗ್ಯಾರಂಟಿ ಘೋಷಿಸುತ್ತಿದೆ. ಕಾಂಗ್ರೆಸ್ ಇನ್ನಷ್ಟು ಗ್ಯಾರಂಟಿ ಘೋಷಿಸುವ ಸಾಧ್ಯತೆ ಇದೆ. ಫೆ.5 ರಂದು 70 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಫೆ.8 ರಂದು ಫಲಿತಾಂಶ ಪ್ರಕಟವಾಗಲಿದೆ.
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ (Delhi Elections) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ `ಗೃಹಲಕ್ಷ್ಮಿ’ ಮಾದರಿಯಲ್ಲಿ `ಪ್ಯಾರಿ ದೀದಿ ಯೋಜನೆ’ (Pyari Didi Yojan) ಮೂಲಕ ದೆಹಲಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವ ಗ್ಯಾರಂಟಿ ಭರವಸೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಸೋಮವಾರ ಪ್ರಕಟಿಸಿದರು.
ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಇಂದು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡೆ. ಈ ವೇಳೆ ಮಹಿಳೆಯರಿಗೆ ಮಾಸಿಕ 2.500 ರೂಪಾಯಿ ನೀಡಲಿರುವ ಮಹತ್ವಾಕಾಂಕ್ಷೆಯ “ಪ್ಯಾರಿ ದೀದಿ” ಯೋಜನೆಯನ್ನು ಘೋಷಿಸಲಾಯಿತು. ದಿಲ್ಲಿಯಲ್ಲಿ… pic.twitter.com/KoOyfc65k4
ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೊದಲ ದಿನವೇ ʻಪ್ಯಾರಿ ದೀದಿʼ ಯೋಜನೆ ಜಾರಿ ಮಾಡಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡಲಾಗುವುದು. ಉಳಿದ ಗ್ಯಾರಂಟಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ನಮ್ಮ ನಾಯಕರು ತಿಳಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನಾನಿಂದು ಇಲ್ಲಿ ಪ್ರಮುಖ ಯೋಜನೆಯ ಭರವಸೆ ನೀಡುತ್ತಿದ್ದೇನೆ. ನೂರು ವರ್ಷಗಳ ಹಿಂದೆ ಅಂದರೆ 1924ರ ಡಿ.26 ರಂದು ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಅದರ ಶತಮಾನೋತ್ಸವವನ್ನು ನಾವು ಇತ್ತೀಚೆಗಷ್ಟೇ ಆಚರಿಸಿದ್ದೇವೆ. ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಾಗದಲ್ಲಿ ಇರುವ ಬಾವಿಯಲ್ಲಿನ ನೀರು ತೆಗೆದುಕೊಂಡು ಸಿದ್ದರಾಮಯ್ಯ ಅವರು ಸೇರಿದಂತೆ ನಮ್ಮ ಪಕ್ಷದ ನಾಯಕರು ಅಲ್ಲಿನ ಜಾಗವನ್ನು ಸ್ವಚ್ಛ ಮಾಡಿ ಕರ್ನಾಟಕ ರಾಜ್ಯವನ್ನು ಭ್ರಷ್ಟ ಸರ್ಕಾರದಿಂದ ಮುಕ್ತಗೊಳಿಸುವ ಪಣತೊಟ್ಟೆವು. ಇದನ್ನೂ ಓದಿ: 60% ಕಮೀಷನ್ ಆರೋಪಕ್ಕೆ ಹೆಚ್‌ಡಿಕೆ ದಾಖಲಾತಿ ಕೊಟ್ಟಿದ್ದಾರಾ? – ಸಿಎಂ ಪ್ರಶ್ನೆ
ಇದೇ ಸಂದರ್ಭದಲ್ಲಿ ನಮ್ಮ ಪಕ್ಷದ ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿಯನ್ನು ಘೋಷಣೆ ಮಾಡಲಾಯಿತು. ನಂತರ ಗೃಹಲಕ್ಷ್ಮಿ ಯೋಜನೆಯನ್ನು ಪ್ರಿಯಾಂಕಾ ಗಾಂಧಿ ಅವರು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಇದು ಕೇವಲ ಭರವಸೆಯಾಗಬಾರದು. ಈ ಯೋಜನೆ ಜಾರಿ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಬೇಕು ಎಂದು ಹೇಳಿದರು. ಹೀಗಾಗಿ ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್‌ಗೆ ಸಹಿ ಹಾಕಿದೆವು. ನಂತರ ಸರ್ಕಾರ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಲಾಯಿತು. ಮೊದಲ 3 ತಿಂಗಳಲ್ಲಿ ಎಲ್ಲಾ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಉಚಿತ ಸರ್ಕಾರಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಡವರಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ ಎಂದು ವಿವರಿಸಿದರು.
ಮಾಸಿಕ 4-5 ಸಾವಿರ ಉಳಿತಾಯ:
ಈ ಯೋಜನೆಗಳಿಗಾಗಿ 56 ಸಾವಿರ ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. 1.22 ಕೋಟಿ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ಹಣ ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆರ್ಥಿಕ ಬದಲಾವಣೆ ತರಲಾಗಿದೆ. ಪ್ರತಿ ತಿಂಗಳು 4-5 ಸಾವಿರ ಉಳಿತಾಯವಾಗುತ್ತಿದೆ. ಇದರಿಂದ ರಾಜ್ಯದ ಆರ್ಥಿಕತೆ ಪ್ರಗತಿ ಸಾಧಿಸುತ್ತಿದೆ. ಸಮಾಜದ ಪ್ರತಿ ವರ್ಗದ ಹಿತವನ್ನು ಕಾಯಬೇಕು ಎಂಬುದು ಮಹಾತ್ಮಾ ಗಾಂಧಿ ಅವರ ಸಂದೇಶವಾಗಿತ್ತು. ಹೀಗಾಗಿ ನಮ್ಮ ಸರ್ಕಾರ ಈ ಯೋಜನೆ ಜಾರಿ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಟಾರ ಸ್ವಚ್ಛತೆಗೆ 200 ರೂ. ಕೇಳಿದ ಪಂಚಾಯತ್ – ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ ವೃದ್ಧ ದಂಪತಿ
ಇದೇ ವೇಳೆ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳ ಕುಟುಂಬಗಳಲ್ಲಿ ಆಗಿರುವ ಬದಲಾವಣೆ, ನೆರವಿನ ಕುರಿತ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು. ನಾವು ಇಲ್ಲಿ ತೋರಿಸಿರುವ ವಿಡಿಯೋಗಳು ನಾವು ಮಾಡಿರುವುದಲ್ಲ. ಮಾಧ್ಯಮಗಳು ವರದಿ ಮಾಡಿರುವ ವಿಡಿಯೋಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಯಾವುದೇ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ರವಾನಿಸಲಾಗುತ್ತಿದೆ ಎಂದರು.
ಟೀಕಿಸಿದವರಿಂದಲೇ ನಮ್ಮ ಯೋಜನೆ ನಕಲು:
ನಾವು ಈ ಯೋಜನೆ ಘೋಷಣೆ ಮಾಡಿದಾಗ, ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರ ದಿವಾಳಿಯಾಗಲಿದೆ ಎಂದು ಮಧ್ಯಪ್ರದೇಶದಲ್ಲಿ ಹೇಳಿದರು. ನಂತರ ಮಹಾರಾಷ್ಟ್ರದಲ್ಲೂ ನಮ್ಮ ಯೋಜನೆ ವಿರುದ್ಧ ಅಪಪ್ರಚಾರ ಮಾಡಿದರು. ಅಂತಿಮವಾಗಿ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಅವರೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕಲ್ಯಾಣಕ್ಕಾಗಿ, ರಕ್ಷಣೆಗಾಗಿ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಮೋದಿ ಅವರ ಸರ್ಕಾರ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿತ್ತು. ಆದರೆ ಬೆಲೆಗಳನ್ನು ಡಬಲ್ ಮಾಡಿತು. ಜನಧನ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದಂತೆ ಭರವಸೆ ಈಡೇರಿಸಲಿಲ್ಲ. ಬಿಜೆಪಿ ಸರ್ಕಾರಗಳು ಕೊಟ್ಟ ಮಾತನ್ನು ಎಂದಿಗೂ ಉಳಿಸಿಕೊಂಡಿಲ್ಲ. ಆದರೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿವೆ.
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು, ಗ್ರಾಮೀಣ ಉದ್ಯೋಗ ಖಾತರಿ, ಮಾಹಿತಿ ಹಕ್ಕು ಸೇರಿದಂತೆ ಸಂವಿಧಾನಿಕ ತಿದ್ದುಪಡಿ ಮೂಲಕ ಗ್ಯಾರಂಟಿ ಯೋಜನೆ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷ ಸುದೀರ್ಘ ಅವಧಿಗಳ ಕಾಲ ದೇಶವನ್ನು ಆಳಿದೆ. ಮತ್ತೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಒಳ್ಳೆಯ ದಿನಗಳು ಮತ್ತೆ ಬರಲಿವೆ. ದೆಹಲಿ ಹಾಗೂ ಇಲ್ಲಿನ ಜನರ ಬದುಕಿನಲ್ಲಿ ಬದಲಾವಣೆ ತರಲು ಜನರು ನಮಗೆ ಮತ್ತೊಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಬೆಂಗಳೂರು: ಪಂಚ ಗ್ಯಾರಂಟಿಗಳ (Congress Guarantee) ಭಾರದಿಂದ ಹೈರಾಣಾದಂತೆ ಕಾಣುತ್ತಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ ನಿರೀಕ್ಷೆಯಂತೆಯೇ ರಾಜ್ಯದ ಜನತೆಗೆ ಹೊಸ ವರ್ಷದಲ್ಲಿ ಮೊದಲ ಶಾಕ್ ನೀಡಿದೆ. ಹಾಲು, ನೀರು, ವಿದ್ಯುತ್ ಜೊತೆಗೆ ಬಸ್ ಪ್ರಯಾಣ (KSRTC Bus Fare) ತುಟ್ಟಿ ಆಗಬಹುದು ಎಂದು ಬುಧವಾರ ನಿಮ್ಮ ಪಬ್ಲಿಕ್ ಟಿವಿ ಹೇಳಿತ್ತು. ಅದೀಗ ನಿಜವಾಗ್ತಿದೆ. ಮೊದಲ ಹಂತದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಲು ಇಂದಿನ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಡೀಸೆಲ್ ಬೆಲೆ ಹೆಚ್ಚಳ, ಮತ್ತಿತರೆ ಕಾರಣಗಳನ್ನು ನೀಡಿ, ಬಿಎಂಟಿಸಿ 42%, ಕೆಎಸ್‌ಆರ್‌ಟಿಸಿ 28%, ಕೆಕೆಆರ್‌ಟಿಸಿ 28% ಮತ್ತು ವಾಯುವ್ಯ ಸಾರಿಗೆ 25% ಪ್ರಯಾಣ ದರ ಹೆಚ್ಚಿಸಬೇಕು ಎಂಬ ಪ್ರಸ್ತಾವನೆ ಮಂಡಿಸಿದ್ದವು. ಈ ನಾಲ್ಕು ಪ್ರಸ್ತಾವನೆಯನ್ನು ಅಳೆದುತೂಗಿದ ಸಂಪುಟ 15% ರಷ್ಟು ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಜನವರಿ 5 ರಿಂದಲೇ ಇದು ಜಾರಿ ಆಗಲಿದೆ. ಇದನ್ನೂ ಓದಿ: ಬಾಣಂತಿಯರಿಗೆ ಬದುಕುವ ಗ್ಯಾರಂಟಿ ನೀಡಿ: ಅಶೋಕ್ ಕಿಡಿ
ನಿರೀಕ್ಷೆಯಂತೆಯೇ ಇದಕ್ಕೆ ಜನಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರಿಗೆ ಫ್ರೀ ಕೊಟ್ಟು ಪುರುಷರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಕೆಲವರು ಹೇಳಿದರೆ ನಾವು ಆಯ್ಕೆ ಮಾಡಿದ್ದಕ್ಕೆ ಇದನೇಲ್ಲ ಅನುಭವಿಸಬೇಕು ಅಂತಾ ಇನ್ನೊಬ್ರು ಕಿಡಿಕಾರಿದ್ದಾರೆ. ಇದು ಗ್ಯಾರಂಟಿ ಎಫೆಕ್ಟ್ ಎಂದು ಬಿಜೆಪಿಗರು ಗರಂ ಆಗಿದ್ದಾರೆ. ಇದನ್ನೂ ಓದಿ: ಜ.4ಕ್ಕೆ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಗೋವಿಂದ ಕಾರಜೋಳ
ಶಕ್ತಿ ಯೋಜನೆಗೆ (Shakti Scheme) ಹಣ ಒದಗಿಸಲು ವಿಫಲವಾಗಿರುವ ನೀವು ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಇದನ್ನು ಕೂಡಲೇ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಕನ್ನಡಿಗರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯ ಆಗುತ್ತೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಬಿಜೆಪಿಯವರು ಸಾಲ ಹೊರೆಸಿ ಹೋದ ಪರಿಣಾಮವಿದು ಎಂದು ವ್ಯಾಖ್ಯಾನಿಸಿದ್ದಾರೆ.. ಜನರ ಆಕ್ರೋಶವನ್ನು ಸಹಜ ಎಂದಿದ್ದಾರೆ.
ದರ ಏರಿಕೆ ಸರ್ಕಾರದ ಕಾರಣ ಏನು?
ಐದು ವರ್ಷದಿಂದ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಹೆಚ್ಚಿಸಿಲ್ಲ. ಹತ್ತು ವರ್ಷದಿಂದ ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಿಲ್ಲ. ಈ ಅವಧಿಯಲ್ಲಿ ಲೀಟರ್ ಡಿಸೇಲ್ ಬೆಲೆ 100 ರೂ. ಆಗಿದೆ. ತುಟ್ಟಿ ಭತ್ಯೆ ಹೆಚ್ಚಳವಾಗಿದೆ, ನಿರ್ವಹಣಾ ವೆಚ್ಚ ಏರಿಕೆಯಾಗಿದೆ.
4 ಸಾರಿಗೆ ನಿಗಮಗಳು ಭಾರೀ ನಷ್ಟದಲ್ಲಿದ್ದು 5,527 ಕೋಟಿ ರೂ. ಹಿಂಬಾಕಿ ಪಾವತಿಸಬೇಕಿದೆ. 6,330 ಕೋಟಿ ರೂ.ಹೆಚ್ಚುವರಿ ಹೊಣೆಗಾರಿಕೆ ಬಾಕಿಯಿದೆ. ಸದ್ಯ 15% ಪ್ರಯಾಣ ದರ ಹೆಚ್ಚಿಸಿದರೂ 1,800 ಕೋಟಿ ರೂ. ನಷ್ಟ ಆಗಲಿದೆ.