Tag: ಕಸ

  • ಬೆಂಗ್ಳೂರಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದ್ರೆ ಕ್ರಿಮಿನಲ್ ಕೇಸ್ ಹಾಕಿ – ಬಿಬಿಎಂಪಿಗೆ ಹೈಕೋರ್ಟ್ ಕಟ್ಟಪ್ಪಣೆ

    ಬೆಂಗ್ಳೂರಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದ್ರೆ ಕ್ರಿಮಿನಲ್ ಕೇಸ್ ಹಾಕಿ – ಬಿಬಿಎಂಪಿಗೆ ಹೈಕೋರ್ಟ್ ಕಟ್ಟಪ್ಪಣೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಿಚಾರ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಹೈಕೋರ್ಟ್ ಎಲ್ಲೆಂದರಲ್ಲಿ ಕಸ ಹಾಕಿದರೆ ಅಂತಹವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಆದೇಶಿಸಿದೆ.

    ಪಿಐಎಲ್ ಅರ್ಜಿ ವಿಚಾರಣೆ ನಡೆಸಿ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಲಯಕ್ಕೆ ಇಂದು ಬಿಬಿಎಂಪಿ ಪರ ವಕೀಲರು ಕಸ ವಿಲೇವಾರಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 48 ಗಂಟೆಗಳ ಹಿಂದಿನವರೆಗಿನ ಕಸ ವಿಲೇವಾರಿ ಮಾಡಿದ್ದೇವೆ. ಆದರೆ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದ ಸ್ಥಳದಲ್ಲೂ ಕೆಲ ಮಂದಿ ಮತ್ತೆ ಕಸ ಹಾಕಿದ್ದಾರೆ. ಇಂತಹ ಸ್ಥಳಗಳಲ್ಲಿ ಕಸ ಹಾಕುವ 50 ಜನರಿಗೆ ದಂಡ ಹಾಕಿದ್ದೇವೆ ಎಂದು ತಿಳಿಸಿದ್ದರು.

    ವಕೀಲರ ಮಾಹಿತಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾ.ಎಸ್.ಸುಜತಾ ಅವರಿದ್ದ ಪೀಠ ಕಸ ಹಾಕುವ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಕಸ ಹಾಕಿದವರನ್ನು ಗುರುತಿಸಿದ್ದೀರಾ? ಬೀಟ್ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ನ್ಯಾಯಾಲಯ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಹಾಗೂ ನಗರ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿತು. ಅಷ್ಟೇ ಅಲ್ಲದೇ ಪೌರಕಾಯ್ದೆಯ ಅನ್ವಯ ಕಸ ಹಾಕಿದವರ ವಿರುದ್ಧ ದೂರು ದಾಖಲಿಸಲು ಸೂಚನೆ ನೀಡಿತು.

    ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಕೇವಲ ಉತ್ತರ ನೀಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ನಿಮ್ಮ ಸಹಾಯಕ್ಕೆ ಬೇಕಾದರೆ ಪೋಲೀಸರನ್ನು ಸಹ ತೆಗೆದುಕೊಳ್ಳಿ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಪೀಠ ನವೆಂಬರ್ 15ಕ್ಕೆ ಮುಂದೂಡಿತು.

    ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಡಳಿತ ಪಕ್ಷ ನಾಯಕ ಶಿವರಾಜ್, ಪಾಲಿಕೆ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದು, ಬ್ಲಾಕ್ ಸ್ಟಾಟ್ ನಲ್ಲಿ ಕಸ ಹಾಕಿದವರ ಮಾಹಿತಿ ಪೊಲೀಸರಿಗೆ ನೀಡುತ್ತೇವೆ. ಹೈಕೋರ್ಟ್ ನಿರ್ದೇಶನದ ಕಸ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆಗೆ ಸಹಾಯ ಆಗಲಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆಯಲ್ಲಿ ಕಸ ಬಿಸಾಕಿದ್ದ ಡ್ರೈವರ್‌ಗೆ ತಕ್ಕ ಪಾಠ ಕಲಿಸಿದ್ಳು ಯುವತಿ: ವಿಡಿಯೋ ನೋಡಿ

    ರಸ್ತೆಯಲ್ಲಿ ಕಸ ಬಿಸಾಕಿದ್ದ ಡ್ರೈವರ್‌ಗೆ ತಕ್ಕ ಪಾಠ ಕಲಿಸಿದ್ಳು ಯುವತಿ: ವಿಡಿಯೋ ನೋಡಿ

    ಬೀಜಿಂಗ್: ರಸ್ತೆಯಲ್ಲಿ ಕಸ ಬಿಸಾಕಿದ್ದ ಮಹಿಳೆಗೆ ಬೈಕ್ ಸವಾರೆ ಒಬ್ಬಳು ತಕ್ಕ ಪಾಠ ಕಲಿಸಿದ ಘಟನೆ ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ನಲ್ಲಿ ನಡೆದಿದೆ.

    ಈ ಘಟನೆ ಸೆಪ್ಟಂಬರ್ 17 ರಂದು ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಗಳು ಹಿಂದುಗಡೆ ನಿಂತಿದ್ದ ಕಾರಿನ ಡ್ಯಾಶ್ ಕ್ಯಾಮ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ನೆಟ್ಟಿಗರು ಬೈಕ್ ಸವಾರೆಯ ಸಾಮಾಜಿಕ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ರಸ್ತೆಯ ಸಿಗ್ನಲ್ ನಲ್ಲಿ ಕಾರು ನಿಂತಿರುತ್ತದೆ. ಈ ವೇಳೆ ಕಾರಿನ ಚಾಲಕಿ ತನ್ನ ಬಲ ಭಾಗದ ಕಾರಿನ ವಿಂಡೋದಿಂದ ಮನೆಯ ಕಸವನ್ನು ರಸ್ತೆ ಮೇಲೆ ಎಸೆದಿದ್ದಾಳೆ. ಅದನ್ನು ಕಂಡ ಬೈಕ್ ಸವಾರೆ ಕಾರಿನ ಬಳಿ ಬಂದು ಎಸೆದ ಕಸವನ್ನು ಮತ್ತೆ ಆ ಕಾರಿನ ಒಳಗೆ ಎಸೆದು ಹೋಗಿದ್ದಾಳೆ.

    ಇದರಿಂದ ಕೋಪಗೊಂಡು ಚಾಲಕಿ ಬೈಕ್ ಸವಾರೆ ಹೋದ ನಂತರ ಕಾರಿನಿಂದ ಇಳಿದು ಕೈತೋರಿಸಿ ಬೈದಿದ್ದಾಳೆ.

    ಈ ಹಿಂದೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಕೂಡ ರಸ್ತೆಯಲ್ಲಿ ಕಸವನ್ನು ಬಿಸಾಡಿದ ವ್ಯಕ್ತಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=B2yBmWaOMIs

  • ಆದೇಶ ಪಾಲಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ

    ಆದೇಶ ಪಾಲಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ

    ನವದೆಹಲಿ: ಆದೇಶ ಪಾಲನೆ ಮಾಡದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ ಆಗಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲಸ ಆರಂಭಿಸುವಂತೆ ಖಡಕ್ ಎಚ್ಚರಿಕೆ ನೀಡಿದೆ.

    ನಗರದ ಬಾಗಲೂರು ಬಳಿ ಕಸ ವಿಲೇವಾರಿ ಮಾಡುತ್ತಿದ್ದ ಬಿಬಿಎಂಪಿ ವಿರುದ್ಧ ನ್ಯಾಯಾಲಯಕ್ಕೆ ಸ್ಥಳೀಯರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ಅಧಿಕಾರಿಗಳ ನಡೆಯನ್ನು ಹಸಿರು ನ್ಯಾಯಾಧಿಕರಣ ಪ್ರಶ್ನಿಸಿ ತರಾಟೆಗೆ ತಗೆದುಕೊಂಡಿದೆ.

    ಬಾಗಲೂರಿನಲ್ಲಿ ಬಿಬಿಎಂಪಿ ಡಂಪ್ (ವಿಲೇವಾರಿ) ಮಾಡಿದ್ದ ಎಲ್ಲ ಕಸವನ್ನು ಹೊರ ತೆಗೆದು, ಬೇರೆಡೆ ಸ್ಥಳಾಂತರ ಮಾಡುವಂತೆ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಸೂಚಿಸಿತ್ತು. ಆದರೆ ಬಿಬಿಎಂಪಿ ಮಾತ್ರ ಇದುವರೆಗೂ ಏನು ಕ್ರಮ ಕೈಗೊಂಡಿಲ್ಲ ಅಂತಾ ಅರ್ಜಿದಾರ ಶ್ರೀನಿವಾಸ ಪರ ವಕೀಲರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪರ ವಕೀಲರು ಈಗಾಗಲೇ ಬಾಗಲೂರಿನಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ಐದು ತಿಂಗಳಿನಿಂದ ಕಸ ತೆಗೆಯುವ ಕೆಲಸ ಮಾಡಲಾಗುತ್ತಿದ್ದು, ಶೀಘ್ರವೇ ಬಯೋ ಮೈನಿಂಗ್ ಮುಗಿಸುತ್ತೇವೆ ಅಂತಾ ವಾದ ಮಂಡಿಸಿದರು.

    ಬಿಬಿಎಂಪಿ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ.ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠವು ಪರಿಗಣಿಸಲಿಲ್ಲ. ‘ನೀವು ಪದೇ ಪದೇ ಇದನ್ನೇ ಹೇಳುತ್ತಿರುವಿರಿ. ನಿಮಗೆ ಕೆಲಸ ಮಾಡಿ ಅಂತಾ ಎಷ್ಟು ಸಲ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿತು.

    ಕಸದ ರಾಶಿಯಿಂದ ಮಿಥೇನ್ ಉತ್ಪತ್ತಿಯಾಗಿ ಬೆಂಕಿ ತಗಲುವ ಸಾಧ್ಯತೆ ಇದೆ. ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣ ಬಯೋ ಮೈನಿಂಗ್ ಆಗಬೇಕು ಎಂದು ಬಿಬಿಎಂಪಿಗೆ ಆದೇಶಿಸಿದ ನ್ಯಾ.ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠವು ಅಕ್ಟೋಬರ್ 8ಕ್ಕೆ ವಿಚಾರಣೆ ಮುಂದೂಡಿತು.

  • ಅರ್ಹಾನ್ ಸಿಂಗ್‍ನಿಂದ ಅನುಷ್ಕಾ- ವಿರಾಟ್‍ಗೆ ಲೀಗಲ್ ನೋಟಿಸ್

    ಅರ್ಹಾನ್ ಸಿಂಗ್‍ನಿಂದ ಅನುಷ್ಕಾ- ವಿರಾಟ್‍ಗೆ ಲೀಗಲ್ ನೋಟಿಸ್

    ಮುಂಬೈ: ರಸ್ತೆ ಮೇಲೆ ಕಸ ಎಸೆದ ಎಂದು ಆರೋಪಿಸಿ ನಟ ಅರ್ಹಾನ್‍ ಗೆ ತರಾಟೆಗೆ ತೆಗೆದುಕೊಂಡ ನಟಿ ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಅರ್ಹಾನ್ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

    ಈ ಹಿಂದೆ ಸುದ್ದಿ ಮಾಧ್ಯಮದೊಂದಿಗೆ ಮೊಬೈಲ್ ಸಂದೇಶದ ಮೂಲಕ ಮಾತನಾಡಿದ ನಟ ಅರ್ಹಾನ್, ನನ್ನ ವಕೀಲರು ಕೊಹ್ಲಿ ದಂಪತಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಈಗ ಚೆಂಡು ಕೋರ್ಟ್ ಅಂಗಳದಲ್ಲಿದೆ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ವ್ಯಕ್ತಿಯೊಬ್ಬನಿಗೆ ಅನುಷ್ಕಾ ಶರ್ಮಾ ತರಾಟೆ – ಪತ್ನಿಯ ಕ್ಲಾಸ್ ನೋಡಿ ಹೆಮ್ಮೆಗೊಂಡ ವಿರಾಟ್

    ಜುಲೈ 17 ರಂದು ವಿರಾಟ್ ಹಾಗೂ ಅನುಷ್ಕಾ ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ರಸ್ತೆ ಮೇಲೆ ಕಸ ಎಸೆದ್ರು. ಇದನ್ನು ನೋಡಿದ ಅನುಷ್ಕಾ ಕಸ ಎಸೆದಿದ್ದ ಆರ್ಹಾನ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದರು. ಆ ವಿಡಿಯೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡು ಐಷಾರಾಮಿ ಕಾರಿನಲ್ಲಿ ಒಡಾಡುವ ಇವರು ನಮ್ಮ ದೇಶವನ್ನ ಸ್ವಚ್ಛವಾಗಿ ಇಡುತ್ತಾರಾ..? ಎಂದು ಬರೆದು ಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನೂ ಓದಿ: ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ವಾರ್ನಿಂಗ್ ನೀಡಿದ ಅನುಷ್ಕಾಗೆ ಆ ವ್ಯಕ್ತಿಯಿಂದ ಕ್ಲಾಸ್!

    ಅವಮಾನಕ್ಕೆ ಒಳಗಾದ ಅರ್ಹಾನ್ ಹಾಗೂ ಅವರ ತಾಯಿ ಗೀತಾಂಜಲಿ ಸ್ವಚ್ಛತೆಯ ಬಗ್ಗೆ ಪಾಠ ಮಾಡಿದ ವಿರಾಟ್-ಅನುಷ್ಕಾ ಜೋಡಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಕಾನೂನಿನ ರೀತಿಯಲ್ಲಿ ವಿರಾಟ್ ಅನುಷ್ಕಾ ಜೋಡಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

  • ಕಪ್ಪು ಬಣ್ಣಕ್ಕೆ ತಿರುಗಿದೆ ಕಾರವಾರ ಸಮುದ್ರದ ನೀರು!

    ಕಪ್ಪು ಬಣ್ಣಕ್ಕೆ ತಿರುಗಿದೆ ಕಾರವಾರ ಸಮುದ್ರದ ನೀರು!

    ಕಾರವಾರ: ಮಳೆಯಿಂದಾಗಿ ಟನ್ ಗಟ್ಟಲೆ ಕಸದರಾಶಿ ಕಾರವಾರದ ಸಮುದ್ರಕ್ಕೆ ಸೇರಿ ಸಮುದ್ರದ ನೀರು ಕಪ್ಪಾಗಿದ್ದು, ಆತಂಕ ಮನೆ ಮಾಡಿದೆ.

    ನಗರದ ಬಳಿಯಿರುವ ರವೀಂದ್ರನಾಥ ಟಾಗೋರ್ ಕಡಲತೀರ ನದಿ ಹಾಗೂ ನಗರದ ಕೊಚ್ಚೆ, ಮರದ ಕಸಕಡ್ಡಿಗಳಿಂದ ತುಂಬಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಸ್ಥಳೀಯ ಜನರು ಭಯಗೊಂಡು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

    ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ನಗರ ಹಾಗೂ ಕಾಳಿನದಿ ಸುತ್ತಮುತ್ತಲಿನ ಹಳ್ಳಿಗಳ ಗದ್ದೆಗಳಲ್ಲಿ ಸುಟ್ಟ ಮರಗಿಡಗಳು ತೇಲಿ ಸಮುದ್ರಕ್ಕೆ ಸೇರಿ ತೀರದ ನೂರು ಮೀಟರ್ ಪ್ರದೇಶದಲ್ಲಿ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಇದರಿಂದ ಯಾವುದೇ ಅಪಾಯವಿಲ್ಲ, ಇನ್ನೆರೆಡು ದಿನ ಇದೇ ರೀತಿ ಸಮುದ್ರದ ನೀರು ಕಪ್ಪಾಗಿರುತ್ತದೆ ಎಂದು ಜೀವಶಾಸ್ತ್ರ ವಿಭಾಗದ ವಿಜ್ಞಾನಿ ಎಲ್.ಎನ್ ರಾಥೋಡ್ ರವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಕಳೆದ ನಾಲ್ಕು ತಿಂಗಳಿಂದೆ ಓಖಿ ಚಂಡಮಾರುತದಿಂದಾಗಿ ಇಲ್ಲಿನ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿತ್ತು. ಆದರೆ ಯಾವುದೇ ಜಲಚರಗಳಿಗೆ ಹಾನಿಯಾಗಿರಲಿಲ್ಲ. ಈಗ ಕೊಚ್ಚೆ ನೀರು ಹಾಗೂ ಸುಟ್ಟ ಮರದ ಕಾಂಡಗಳು ಸಮುದ್ರಕ್ಕೆ ಸೇರಿ ದಡದ ಭಾಗಕ್ಕೆ ಬರುತಿದ್ದು, ಯಾವುದೇ ಹಾನಿಯಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕಿದೆ.

  • ಹಿಂದೂ ಸ್ಮಶಾನದ ಜಾಗದಲ್ಲಿ ಕಸ- ಪುರಸಭೆ ವಾಹನಗಳ ಮುಂದೆ ಮಲಗಿ ಸ್ಥಳೀಯರಿಂದ ಆಕ್ರೋಶ

    ಹಿಂದೂ ಸ್ಮಶಾನದ ಜಾಗದಲ್ಲಿ ಕಸ- ಪುರಸಭೆ ವಾಹನಗಳ ಮುಂದೆ ಮಲಗಿ ಸ್ಥಳೀಯರಿಂದ ಆಕ್ರೋಶ

    ಮಂಡ್ಯ: ಹಿಂದೂ ಸ್ಮಶಾನದ ಜಾಗದಲ್ಲಿ ಕಸ ಸುರಿದು ಗಲೀಜು ಮಾಡುತ್ತಿದ್ದಾರೆ ಎಂದು ಪುರಸಭೆ ವಾಹನಗಳ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆಆರ್ ಪೇಟೆ ವ್ಯಾಪ್ತಿಯ ಸರ್ವೆ ನಂಬರ್ 362 ರ ಜಾಗವನ್ನು ಸ್ಮಶಾನಕ್ಕೆಂದು ನಿಗದಿ ಪಡಿಸಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ನಿರಂತರವಾಗಿ ಸ್ಮಶಾನದ ಜಾಗದಲ್ಲಿ ಪಟ್ಟಣದ ಕಸವನ್ನು ತಂದು ಸುರಿಸುತ್ತಿದ್ದಾರೆ. ಇದ್ರಿಂದ ಸ್ಮಶಾನ ಸಂಪೂರ್ಣ ಗಲೀಜಾಗಿದ್ದು ಅಂತ್ಯ ಸಂಸ್ಕಾರ ಮಾಡಲು ಕಷ್ಟವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲದೆ ಸ್ಮಶಾನಕ್ಕೆ ಕಸ ಸುರಿಯಲು ಬಂದ ಪುರಸಭೆ ವಾಹನಗಳ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಹೆದರಿದ ಪುರಸಭೆ ನೌಕರರು ಕಸದ ಸಮೇತ ವಾಹನ ತೆಗೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮತ್ತೆ ಸ್ಮಶಾನದಲ್ಲಿ ಕಸ ಸುರಿದರೆ ಉಗ್ರ ಹೋರಾಟ ನಡೆಸೋದಾಗಿ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ದಾರೆ.

  • ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

    ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

    ಬೆಂಗಳೂರು: ಸ್ಟೇಜ್ ಮೇಲೆ ಸ್ವಚ್ಛ ಭಾರತದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡೋ ಬಿಜೆಪಿ ಸ್ವಚ್ಛತೆಯನ್ನೇ ಮರೀತಾ ಅನ್ನೋ ಪ್ರಶ್ನೆ ಎದ್ದಿದೆ.

    ಭಾನುವಾರದಂದು ಅರಮನೆ ಮೈದಾನದಲ್ಲಿ ಬಿಜೆಪಿ ಪರಿರ್ವತನಾ ಸಮಾರೋಪ ಸಮಾರಂಭ ನಡೆಸಿದ್ದು, ಸಮಾವೇಶ ಮುಗಿಸಿದ ನಂತರ ಬಿಜೆಪಿ ನಾಯಕರು ಸ್ವಚ್ಛ ಭಾರತ ಮರೆತು ಹೊರಟಿದ್ದಾರೆ. ಅರಮನೆ ಮೈದಾನದ ತುಂಬಾ ರಾಶಿ ರಾಶಿ ಕಸ ಬಿದ್ದಿದೆ. ಮೈದಾನದ ತುಂಬಾ ಎಲ್ಲಿ ನೋಡಿದ್ರೂ ಕಸವೋ ಕಸ.

    ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನ ಸಂಪೂರ್ಣ ಕೇಸರಿಮಯವಾಗಿತ್ತು. ಮೈದಾನದಾದ್ಯಂತ ಜನಸಾಗರವೇ ಸೇರಿತ್ತು. ಆದ್ರೆ ಪ್ರಧಾನಿ ಮೋದಿ ರ್ಯಾಲಿಯಿಂದಾಗಿ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ದಂಪತಿಯೊಬ್ಬರ ಬೀಗರೂಟ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

    ಅರಮನೆ ಮೈದಾನದ ದಿ ರಾಯಲ್ ಸೆನೆಟ್‍ನಲ್ಲಿ ನಿನ್ನೆ ಬೀಗರೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ ಮೋದಿ ಸಮಾವೇಶ ಹಿನ್ನೆಲೆಯಲ್ಲಿ ಬೀಗರ ಊಟವನ್ನು ಫೆಬ್ರವರಿ 11ಕ್ಕೆ ಮುಂದೂಡಿದ್ದಾರೆ.

    ಈ ಬಗ್ಗೆ ದಿ ರಾಯಲ್ ಸೆನೆಟ್ ಮುಂದೆ ಬೋರ್ಡ್ ಕೂಡಾ ಹಾಕಿದ್ದಾರೆ. ಆಹ್ವಾನದ ಮೇರೆಗೆ ಬೀಗರ ಊಟಕ್ಕೆ ಬಂದಿದ್ದ ಸಂಬಂಧಿಕರು ಬೇರೆ ದಾರಿ ಇಲ್ಲದೇ ವಾಪಸ್ ಹೋದ್ರು.

  • ಕಸದ ಮುಸುರಿ ಚೆಲ್ಲುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

    ಕಸದ ಮುಸುರಿ ಚೆಲ್ಲುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

    ಬಾಗಲಕೋಟೆ: ಕಸದ ಮುಸುರಿ ಚೆಲ್ಲುವ ವಿಷಯಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕಟಗಿನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡವಾಗಿ ಬೆಳಕಿಗೆ ಬಂದ ಈ ಘಟನೆಯಲ್ಲಿ ಮೂಶೆಪ್ಪ ವಿಗ್ನೇಶಪ್ಪ ಗೌಡರ (60) ಮೃತಪಟ್ಟಿದ್ದಾರೆ. ಕಳೆದ ಶುಕ್ರವಾರ ರಾತ್ರಿ ಮೃತ ಮೂಶೆಪ್ಪ ಅದೇ ಗ್ರಾಮದ ಧಾಮಸಪ್ಪ ಗೌಡ ಹಾಗೂ ಚವರಪ್ಪ ಗೌಡ ನಡುವೆ ಕಸದ ಮುಸುರಿ ಚೆಲ್ಲುವ ವಿಚಾರದಲ್ಲಿ ಜಗಳವಾಗಿದೆ.

    ಜಗಳ ಕೈ ಕೈ ಮಿಲಾಯಿಸುವ ಹಂತ ತಲುಪಿ, ವಿಕೋಪಕ್ಕೆ ತಿರುಗಿದ ಪರಿಣಾಮ ಗಲಾಟೆಯಲ್ಲಿ ಮೂಶೆಪ್ಪ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಮೃತಪಟ್ಟಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಮಸಪ್ಪ ಹಾಗೂ ಚವರಪ್ಪ ಎಂಬವರನ್ನು ಬಂಧಿಸಿ, ತನಿಖೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಪಿಎಸ್‍ಐ ಬಸವರಾಜ ಲಮಾಣಿ ತಿಳಿಸಿದ್ದಾರೆ.

  • ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

    ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

    ಬೆಂಗಳೂರು: ಕಸ ಎಸೆದ ಯುವಕನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಹನುಮಂತನಗರ ಬಳಿಯ ಪಿಇಎಸ್ ಕಾಲೇಜ್ ಬಳಿ ನೆಡೆದಿದೆ.

    ತುಮಕೂರು ಮೂಲದ ದೇವರಾಜ್ 29 ಮೃತ ಯುವಕ. ಮೃತ ದೇವರಾಜ್ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ನಂತರ ಮನೆ ಮೇಲಿನಿಂದ ಕಸದ ಕವರನ್ನು ಕೆಳಕ್ಕೆ ಎಸೆದಿದ್ದಾನೆ. ಈ ಸಂದರ್ಭದಲ್ಲಿ ದೇವರಾಜ್ ಮನೆಯ ಮುಂದೆ ರಸ್ತೆಯಲ್ಲಿ ನಿಂತಿದ್ದ ಮೂವರು ಯುವಕರು ಕಸ ಎಸೆದಿದ್ದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ.

    ಅಲ್ಲದೇ ಮೂವರು ಯುವಕರು ದೇವರಾಜ್ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕಸ ವಿಚಾರವಾಗಿ ಗಲಾಟೆ ತಾರಕಕ್ಕೇರಿ  ಯುವಕರು  ದೇವರಾಜ್ ನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಪರಾರಿಯಾಗಿದ್ದಾರೆ. ಇತ್ತ ಬಿಲ್ಡಿಂಗ್ ಮೇಲಿನಿಂದ ಬಿದ್ದ ದೇವರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

  • ಸ್ವಚ್ಛಗೊಳಿಸಿದ್ದ ಜಾಗದಲ್ಲಿ ಎಸೆದ ಕಸವನ್ನು ಮತ್ತೆ ಅಂಗಡಿಯೊಳಗೆ ಸುರಿದು ಜಾಗೃತಿ ಮೂಡಿಸಿದ ಮಂಗ್ಳೂರು ಯುವಕ!

    ಸ್ವಚ್ಛಗೊಳಿಸಿದ್ದ ಜಾಗದಲ್ಲಿ ಎಸೆದ ಕಸವನ್ನು ಮತ್ತೆ ಅಂಗಡಿಯೊಳಗೆ ಸುರಿದು ಜಾಗೃತಿ ಮೂಡಿಸಿದ ಮಂಗ್ಳೂರು ಯುವಕ!

    ಮಂಗಳೂರು: ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಸಿಟ್ಟಾದ ಯುವಕನೊಬ್ಬ ಅದೇ ಕಸವನ್ನು ಬಟ್ಟೆ ಅಂಗಡಿ ಒಳಗೆ ಸುರಿದ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.

    ರಾಮಕೃಷ್ಣ ಮಿಷನ್ ವತಿಯಿಂದ ಪ್ರತಿ ಆದಿತ್ಯವಾರ ನೂರಾರು ಸ್ವಯಂ ಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುತ್ತಾರೆ. ಆದ್ರೆ ಮಾರನೇ ದಿನ ಮತ್ತೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕುತ್ತಿದ್ದರು. ಮಂಗಳೂರಿನ ಕರಂಗಲ್ಪಾಡಿಯಲ್ಲೂ ಡಿ.31 ರ ಆದಿತ್ಯವಾರ ಸ್ವಯಂಸೇವಕರು ಸ್ವಚ್ಛಗೊಳಿಸಿದ್ದು, ಅದೇ ದಿನ ಸ್ಥಳೀಯ ಶಾಪ್ ನ ಸಿಬ್ಬಂದಿ ಅದೇ ಜಾಗದಲ್ಲಿ ಕಸ ಎಸೆದಿದ್ದಾರೆ.

    ಇದರಿಂದ ಕೋಪಗೊಂಡ ಸೌರಜ್ ಮಂಗಳೂರು ಎಂಬ ಯುವಕ ಶಾಪ್ ನ ಸಿಬ್ಬಂದಿ ಎಸೆದ ಕಸವನ್ನು ರಸ್ತೆ ಬದಿಯಿಂದ ಸಂಗ್ರಹಿಸಿ ಶಾಪ್ ಒಳಗೆ ಸುರಿದಿದ್ದಾರೆ. ಸ್ವಚ್ಛಗೊಳಿಸಿದ ಸ್ಥಳದಲ್ಲೇ ಕಸ ಸುರಿದ ಶಾಪ್ ನ ಸಿಬ್ಬಂದಿ ಒಂದು ಕ್ಷಣ ವಿಚಲಿತರಾದ್ರೂ ಸೌರಜ್ ನ ಕೋಪದ ಮುಂದೆ ತಣ್ಣಗಾಗಿದ್ದಾರೆ. ಸೌರಜ್ ಫೇಸ್ ಬುಕ್ ಲೈವ್ ಮೂಲಕ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಹಿಂದೆ ಮೋರ್ಗನ್ಸ್ ಗೇಟ್ ಬಳಿಯೂ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಅಕ್ಕಪಕ್ಕದ ಮನೆಯವರು ಕಸ ಸುರಿದಿದ್ದು, ಸೌರಜ್ ಅದೇ ಕಸವನ್ನು ಸಂಗ್ರಹಿಸಿ ಮನೆಯೊಳಗೆ ಹಾಕಿದ್ದರು. ಆ ನಂತರವಾಗಿ ಮನೆಯವರು ಎಚ್ಚೆತ್ತು ಕಸವನ್ನು ತೊಟ್ಟಿಯಲ್ಲಿ ಹಾಕಲು ಆರಂಭಿಸಿದ್ರು. ಇನ್ಮುಂದೇ ಇದೇ ರೀತಿಯ ಅಭಿಯಾನ ಮಾಡಲು ರಾಮಕೃಷ್ಣ ಮಿಷನ್ ನ ಸ್ವಯಂ ಸೇವಕರು ನಿರ್ಧರಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ.

    https://www.youtube.com/watch?v=SX_4fh8j_rk