Tag: ಕಸ

  • ‘ಭಕ್ತರೇ ಪ್ರಾಣಿಗಳನ್ನ ರಕ್ಷಿಸಿ’- ವನ್ಯಜೀವಿಗಳ ದೇಹ ಸೇರುತ್ತಿದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ತ್ಯಾಜ್ಯ

    ‘ಭಕ್ತರೇ ಪ್ರಾಣಿಗಳನ್ನ ರಕ್ಷಿಸಿ’- ವನ್ಯಜೀವಿಗಳ ದೇಹ ಸೇರುತ್ತಿದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ತ್ಯಾಜ್ಯ

    ಮಂಗಳೂರು: ಪಾಪವನ್ನು ಕಳೆದು ವರವನ್ನು ಕರುಣಿಸಲು ನಾಗನ ರೂಪದಲ್ಲಿ ನಿಂತ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಷಷ್ಠಿ, ಚಂಪಾಷಷ್ಠಿಯಂತಹ ವಿಶೇಷ ದಿನ, ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

    ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತರು ತಾವು ತಂದ ಕಸವನ್ನು ಇಲ್ಲಿ ಎಸೆದು ಹೋಗುತ್ತಾರೆ. ಈ ಕಸ ನೇರವಾಗಿ ಸೇರುವುದು ಇಲ್ಲಿಂದ ಸ್ವಲ್ಪ ದೂರ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ. ಹೌದು ಇಲ್ಲೊಂದು ತ್ಯಾಜ್ಯ ವಿಲೇವಾಗಿ ಘಟಕವಿದೆ. ಈ ಘಟಕದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಮರು ಬಳಕೆಯನ್ನು ಮಾಡಲಾಗುತ್ತೆ. ಆದರೆ ಈ ತ್ಯಾಜ್ಯ ವಿಲೇವಾರಿ ಘಟಕ ಇರೋದು ಅರಣ್ಯದ ಪಕ್ಕದಲ್ಲಿ. ಅರಣ್ಯದ ಸ್ವಲ್ಪ ದೂರದಲ್ಲಿ ಬಿಸಿಲೆ ರಕ್ಷಿತಾರಣ್ಯವಿರೋದ್ರಿಂದ ವನ್ಯಜೀವಿಗಳು ಇಲ್ಲಿಗೆ ನಿತ್ಯ ಆಗಮಿಸುತ್ತವೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಡಲ್ಪಟ್ಟಿರುವ ಕಸವನ್ನು ತಿನ್ನುತ್ತವೆ. ಕಡವೆಗಳು, ಜಿಂಕೆಗಳು, ಮಂಗಗಳು ಹೀಗೆ ವಿವಿಧ ವನ್ಯಜೀವಿಗಳು ಇಲ್ಲಿ ಕಸವನ್ನು ತಿನ್ನವ ಪರಿಸ್ಥಿತಿ ಬಂದಿದೆ.

    ಸುಬ್ರಹ್ಮಣ್ಯ ಪಂಚಾಯತ್‍ನಿಂದ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಿಸಲ್ಪಡುತ್ತದೆ. ಪಂಚಾಯತ್‍ನವರು ಕೂಡ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಈ ವಿಚಾರ ಗೊತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಷ್ಟೇ ಅಲ್ಲದೆ ಅರಣ್ಯಕ್ಕೆ ಫೆನ್ಸಿಂಗ್ ಹಾಕಿದರೆ ವನ್ಯ ಪ್ರಾಣಿಗಳು ಇತ್ತ ಬರಲಾಗದೇ ಕಸವನ್ನು ತಿನ್ನುವುದು ತಪ್ಪಿದಂತಾಗುತ್ತದೆ. ತ್ಯಾಜ್ಯ ಘಟಕಕ್ಕೆ ಒಂದು ಫೆನ್ಸಿಂಗ್ ಹಾಕಿದ್ದರೂ ಸಮಸ್ಯೆ ಬಗೆ ಹರಿಯುತ್ತದೆ ಆ ಕೆಲಸವನ್ನು ಕೂಡ ಪಂಚಾಯತ್ ಅಧಿಕಾರಿಗಳು ಮಾಡಿಲ್ಲ.

    ಈ ಕುರಿತು ಅರಣ್ಯಾಧಿಕಾರಿಗಳನ್ನು ಕೇಳಿದರೆ, ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಅಲ್ಲಿನ ಸ್ಥಳೀಯ ಸಂಸ್ಥೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೇ ಆ ಜಾಗ ವೈಲ್ಡ್ ಲೈಫ್ ಫಾರೆಸ್ಟ್ ನ ಬದಿಯಲ್ಲಿದ್ದು, ಅದು ಅರಣ್ಯ ಜಾಗ ಹೌದಾ ಅಲ್ಲವಾ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುವ ಅವಶ್ಯಕತೆ ಇದೆ. ಮೊದಲಿಗೆ ಅಲ್ಲಿಗೆ ಭೇಟಿ ನೀಡಲು ವಲಯ ಅರಣ್ಯಾಧಿಕಾರಿಯವರಿಗೆ ಸೂಚಿಸುತ್ತೇನೆ ಎನ್ನುತ್ತಾರೆ.

    ಎಲ್ಲಾ ವಿಚಾರಗಳು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳ ಗಮನದಲ್ಲಿ ಇದ್ದರೇ ಕೂಡ ಉತ್ತಮ. ಯಾಕಂದ್ರೆ ಅವರು ತರುವ ಪ್ಲಾಸ್ಟಿಕ್ ಮತ್ತಿತರ ಕಸವನ್ನು ಎಲ್ಲಂದರಲ್ಲಿ ಎಸೆದರೂ ಅದು ವನ್ಯಜೀವಿಗಳ ಹೊಟ್ಟೆ ಸೇರಲಿದೆ. ಆದ್ದರಿಂದ ಆದಷ್ಟು ಕಸವನ್ನು ಹೊರ ಹಾಕದಂತೆ ಎಚ್ಚರ ವಹಿಸಿದರೆ ಒಳ್ಳೆಯದು ಎಂದು ಪರಿಸರ ಪ್ರೇಮಿಗಳ ಮನವಿ ಮಾಡಿಕೊಂಡಿದ್ದಾರೆ.

  • ಎರಡು ಪಾಳಿಯಲ್ಲಿ ಕಸ ಸಂಗ್ರಹಣೆ- ಪಾಲಿಕೆ ಕ್ರಮಕ್ಕೆ ಸಖತ್ ರೆಸ್ಪಾನ್ಸ್

    ಎರಡು ಪಾಳಿಯಲ್ಲಿ ಕಸ ಸಂಗ್ರಹಣೆ- ಪಾಲಿಕೆ ಕ್ರಮಕ್ಕೆ ಸಖತ್ ರೆಸ್ಪಾನ್ಸ್

    – ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹಣೆ ಯಶಸ್ವಿ

    ಬೆಂಗಳೂರು: ನಗರದ ಸ್ವಚ್ಛತೆ ಹೆಚ್ಚಿಸಿ, ಕಸ ವಿಂಗಡಣೆ ಮಾಡಲು ಬಿಬಿಎಂಪಿ ಮಾಡಿರುವ ಪ್ಲಾನ್‍ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇಂದೋರ್ ಮಾದರಿ ಕಸ ಸಂಗ್ರಹಕ್ಕೆ ಫುಲ್ ರೆಸ್ಪಾನ್ಸ್ ಬರುತ್ತಿದೆ.

    ನಿತ್ಯ 2 ಶಿಫ್ಟ್ ಗಳಲ್ಲಿ ಕಸ ಸಂಗ್ರಹಣೆಗೆ ಬಿಬಿಎಂಪಿ ಮುಂದಾಗಿದ್ದು, ಇದನ್ನು ಪ್ರಾಯೋಗಿಕವಾಗಿ 5 ವಾರ್ಡ್‍ಗಳಲ್ಲಿ ಜಾರಿಗೆ ತರಲಾಗಿದೆ. ರಾತ್ರಿ ಪಾಳಿಯಲ್ಲಿ ಕಸ ಸಂಗ್ರಹಣೆಗೆ ಭಾರೀ ಪ್ರತಿಕ್ರಿಯೆ ದೊರೆಯುತ್ತಿದೆ. ಜನರು ಕ್ಯೂ ನಿಂತು ಕಸ ಹಾಕುತ್ತಿದ್ದಾರೆ. ಮನೆ ಕಸ, ವಾಣಿಜ್ಯ ಕಸ ಎಂದು ಎರಡು ಬಗೆಯ ಕಸ ಸಂಗ್ರಹಣೆ ಮಾಡಲಾಗುತ್ತಿದೆ.

    ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹಣೆಗೆ ಸದ್ಯ 5 ವಾರ್ಡ್‍ಗಳ ಆಯ್ಕೆ ಮಾಡಲಾಗಿದೆ. ಈ ಪ್ರಕಾರ ಜೋಗುಪಾಳ್ಯ, ಜಕ್ಕೂರು ವಾರ್ಡ್ ಸೇರಿದಂತೆ 5 ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆಗೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

    ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹಣೆಗೆ ಜನರ ಸ್ಪಂದನೆ ಹೆಚ್ಚಿದೆ. ಜತೆಗೆ ಹಸಿ, ಒಣ ಕಸ ಸಂಗ್ರಹಣೆ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ಬಹುತೇಕ ಪ್ರಾಯೋಗಿಕ ಕಸ ಸಂಗ್ರಹಣೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

  • ರಾಯಚೂರು ಘನತಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ- ನಗರದಾದ್ಯಂತ ಆವರಿಸಿರುವ ದಟ್ಟ ಹೊಗೆ

    ರಾಯಚೂರು ಘನತಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ- ನಗರದಾದ್ಯಂತ ಆವರಿಸಿರುವ ದಟ್ಟ ಹೊಗೆ

    – ನಗರಸಭೆ ದಿವ್ಯ ನಿರ್ಲಕ್ಷ್ಯಕ್ಕೆ ನಿವಾಸಿಗಳ ಪರದಾಟ
    – ಘನತಾಜ್ಯ ವಿಲೇವಾರಿ ವೈಫಲ್ಯದಿಂದ ಘಟಕದಲ್ಲಿ ಬೆಂಕಿ

    ರಾಯಚೂರು: ದೇಶದ ರಾಜಧಾನಿ ದೆಹಲಿಯನ್ನೇ ಮೀರಿಸುವ ಮಟ್ಟಕ್ಕೆ ರಾಯಚೂರು ನಗರ ಬೆಳೆದಿದೆ. ಆದರೆ ಇದು ಅಭಿವೃದ್ಧಿಯಲ್ಲಲ್ಲಾ ಹೊಗೆಯಲ್ಲಿ ಮಾತ್ರ. ಈಗ ರಾಯಚೂರಿನಲ್ಲಿ ಎಲ್ಲಿ ನೋಡಿದ್ರೂ ಹೊಗೆ ತುಂಬಿಕೊಂಡಿದ್ದು ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮನೆಯ ಹತ್ತಿರದಲ್ಲೇ ಇರುವ ಘನತಾಜ್ಯ ಘಟಕದಿಂದ ಹೊಗೆ ಬರುತ್ತಿದೆ. ನಗರದ ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ವೈಫಲ್ಯ ಇದಕ್ಕೆಲ್ಲಾ ಕಾರಣವಾಗಿದೆ.

    ಸುಮಾರು 10 ಎಕರೆ ಪ್ರದೇಶದಲ್ಲಿ ಕಸಕ್ಕೆ ಬೆಂಕಿ ಬಿದ್ದಿರುವುದರಿಂದ ನಗರದಲ್ಲಿ ಹೊಗೆ ತುಂಬಿದೆ. ನಗರದ ಅಶೋಕ್ ಕುಮಾರ್ ಕಾಲೋನಿ, ಡ್ಯಾಡಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ ಹಾಗೂ ಯಕ್ಲಾಸಪುರ ಗ್ರಾಮ ಸಂಪೂರ್ಣ ಹೊಗೆಯಿಂದ ಕೂಡಿದೆ. ನಗರಸಭೆ, ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಹೊಗೆ ತುಂಬಿದೆ. ಆಗಾಗ ಬೆಂಕಿ ಬೀಳುತ್ತಲೇ ಇದ್ದು ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಾರಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.

    ನಗರಪ್ರದೇಶ ಹಾಗೂ ಯಕ್ಲಾಸಪುರ ಗ್ರಾಮಕ್ಕೆ ಹತ್ತಿರದಲ್ಲೇ ಇರುವುದರಿಂದ ಘನತಾಜ್ಯ ವಿಲೆವಾರಿ ಘಟಕವನ್ನು ಸ್ಥಳಾಂತರ ಮಾಡಬೇಕು ಎಂದು ಜನ ಆಕ್ರೋಶಗೊಂಡಿದ್ದಾರೆ. ಜನರ ಆಕ್ರೋಶದಿಂದ ಎಚ್ಚೆತ್ತಿರುವ ಅಧಿಕಾರಿಗಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೊಗೆ ಪ್ರಮಾಣ ಹಾಗೇ ಇರುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿದ್ದು ಜನರಿಗೆ ಮಾಸ್ಕ್ ಗಳನ್ನು ನೀಡಲು ನಗರಸಭೆ ಮುಂದಾಗಿದೆ. ಆದರೆ ಆಸ್ಪತ್ರೆಗಳ ತಾಜ್ಯ, ಮಾಂಸ ಪದಾರ್ಥಗಳ ತ್ಯಾಜ್ಯ,ಪ್ಲಾಸ್ಟಿಕ್ ಸೇರಿ ನಾನಾ ವಸ್ತುಗಳು ಸುಡುತ್ತಿರುವುದರಿಂದ ಅಪಾಯಕಾರಿ ಹೊಗೆ ಜನರನ್ನ ಬಾಧಿಸುತ್ತಿದೆ.

    ತಾಜ್ಯವನ್ನ ಸಮರ್ಪಕವಾಗಿ ವಿಲೇವಾರಿ ಮಾಡಲಾಗದೇ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳೆ ಬೆಂಕಿ ಹಚ್ಚಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ತುಂಬಾ ದಿನಗಳಿಂದ ಕಸ ಉಳಿದಿದ್ದರಿಂದ ಬೆಂಕಿ ತಾನಾಗೇ ಹೊತ್ತಿಕೊಂಡಿದೆ ಎಂದು ಸಮಜಾಯಿಷಿ ಹೇಳುತ್ತಿದ್ದಾರೆ.

    ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಈ ಹಿಂದೆ ಘಟಕವನ್ನು ನವೀಕರಣಗೊಳಿಸಲಾಗಿತ್ತು. ಕ್ಯಾಷೊಟೆಕ್ ಸಂಸ್ಥೆಗೆ ನಿರ್ವಹಣೆಯನ್ನು ನೀಡಲಾಗಿತ್ತು. ಆಗ ಕಸದಿಂದ ರಸ ತೆಗೆಯುವ ಹಾಗೆ ಒಣ ಹಾಗೂ ಹಸಿ ತ್ಯಾಜ್ಯಗಳನ್ನು ಬೇರ್ಪಡಿಸಿ ಗೊಬ್ಬರ ತಯಾರಿಸಲಾಗುತ್ತಿತ್ತು. ಪ್ಲಾಸ್ಟಿಕ್, ಪೇಪರ್ ಪ್ರತ್ಯೇಕಿಸಿ ಇಟ್ಟಿಗೆ ಮಾಡಲಾಗುತ್ತಿತ್ತು. ಜೊತೆಗೆ ಕಸದಿಂದಲೇ ಲಕ್ಷಾಂತರ ರೂ. ಆದಾಯ ಕೂಡ ಬರುತ್ತಿತ್ತು. ಆದರೆ ಈಗ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶ ನಿರ್ವಹಣೆ ಆರಂಭಿಸಿದಾಗಿನಿಂದ ಎಲ್ಲವೂ ಹಳ್ಳ ಹಿಡಿದಿದೆ.

    ಪ್ರತಿನಿತ್ಯ ಸುತ್ತಮುತ್ತಲ ಜನ ನರಕಯಾತನೆ ಅನುಭವಿಸುತ್ತಿದ್ದು ಕೂಡಲೇ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಅಂತ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

  • ಮೂರೂ ಪಾಳಿಯಲ್ಲಿ ಮನೆಗಳಿಂದ ಕಸ ಸಂಗ್ರಹ

    ಮೂರೂ ಪಾಳಿಯಲ್ಲಿ ಮನೆಗಳಿಂದ ಕಸ ಸಂಗ್ರಹ

    ಬೆಂಗಳೂರು: ನಗರದ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಇಂದೋರ್ ಮಾದರಿಯ ಕಸ ನಿರ್ವಹಣೆಯನ್ನು ಜಾರಿಗೆ ತರಲಾಗಿದೆ.

    ರಾತ್ರಿ ವೇಳೆಯಲ್ಲಿ ವಾಣಿಜ್ಯ ಕಟ್ಟಡಗಳಿಂದ ಕಸ ಸಂಗ್ರಹ ಮಾಡುವುದರಿಂದ ಬ್ಲಾಕ್ ಸ್ಪಾಟ್‍ಗಳು ಕಡಿಮೆ ಸೃಷ್ಟಿಯಾಗಲಿವೆ. ಅಲ್ಲದೆ ಇದೇ ರೀತಿಯಲ್ಲಿ ಪ್ರತಿ ಮನೆ ಬಾಗಿಲಿನಿಂದ ರಾತ್ರಿ ಹೊತ್ತು ಹಾಗೂ ಅಗತ್ಯ ಬಿದ್ದೆಡೆ ಮೂರೂ ಪಾಳಿಯಲ್ಲಿ ಕಸ ಸಂಗ್ರಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.


    ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ನೂರು ದಿನದಲ್ಲಿ ಪ್ರಾಯೋಗಿಕ ಯೋಜನೆಯ ಸಂಕ್ಷಿಪ್ತ ಚಿತ್ರಣ ಸಿಗಲಿದೆ. ಬ್ಲಾಕ್ ಸ್ಪಾಟ್‍ಗಳು ಯಾಕೆ ಸೃಷ್ಟಿಯಾಗುತ್ತಿದೆ ಎಂದು ಕಾರಣ ಹುಡುಕಲಾಗುತ್ತಿದೆ. ಮುಂದೆ ಬರುವ ದಿನಗಳಲ್ಲಿ ಅಧ್ಯಯನ ಮಾಡಿ, ಈ ಯೋಜನೆಯ ಲೋಪದೋಷ ಸರಿಪಡಿಸಿ ಎಲ್ಲಾ ವಾರ್ಡ್‌ಗಳಲ್ಲೂ ಯೋಜನೆ ಜಾರಿಗೆ ತರಲಾಗುವುದು ಎಂದರು.

    ಅಲ್ಲದೆ ಕೆಲವೊಂದು ಕಡೆ ಡೇ ಶಿಫ್ಟ್, ನೈಟ್ ಶಿಫ್ಟ್, ಮಧ್ಯಾಹ್ನದ ಶಿಫ್ಟ್ ನಲ್ಲಿ ಕಸ ತೆಗೆದು, ಜನರಿಗೆ ಕಸ ಹೊರಗೆ ಎಸೆಯದಂತೆ ಮಾಡಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಬರುವವರಿಗೆ ಬೆಳಗ್ಗೆ ಬೇಗ ಕಸ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವ ಯಾವ ಪ್ರದೇಶದಲ್ಲಿ ಕಸ ಹೇಗೆ ಸಂಗ್ರಹಿಸಬೇಕು ಎಂಬುದು ಗೊತ್ತಾಗಲಿದೆ ಎಂದು ಗೌತಮ್ ಕುಮಾರ್ ತಿಳಿಸಿದರು.

  • ಎಲ್ಲೆಂದರಲ್ಲಿ ಕಸ ಎಸೆದ್ರೆ ಹುಷಾರ್- 22 ದಿನಗಳಲ್ಲಿ 13 ಲಕ್ಷ ರೂ. ಸಂಗ್ರಹ

    ಎಲ್ಲೆಂದರಲ್ಲಿ ಕಸ ಎಸೆದ್ರೆ ಹುಷಾರ್- 22 ದಿನಗಳಲ್ಲಿ 13 ಲಕ್ಷ ರೂ. ಸಂಗ್ರಹ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನ ತಡೆಯಲು ಮುಂದಾಗಿರುವ ಪಾಲಿಕೆ ಭಾರೀ ಪ್ರಮಾಣದ ವಸೂಲಿಗೆ ಮುಂದಾಗಿದೆ.

    ಬೆಂಗಳೂರಿನಲ್ಲಿ 22 ದಿನಗಳಲ್ಲಿ ಮಾರ್ಷಲ್‍ಗಳು 13 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ. 2019 ಸೆಪ್ಟೆಂಬರ್ ನಿಂದ ಮಾರ್ಷಲ್‍ಗಳು 198 ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ 50.90 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. 2020 ಜನವರಿ 1 ರಿಂದ ಜನವರಿ 22ರವರೆಗೆ ಒಟ್ಟು 1,278 ಪ್ರಕರಣಗಳಿಂದ 13.01 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.

    2019ರ ಸೆಪ್ಟೆಂಬರ್ ನಿಂದ ಇವರೆಗೆ ಪಾಲಿಕೆ ದಂಡದ ರೂಪದಲ್ಲಿ 63.91 ಲಕ್ಷ ರೂಪಾಯಿ ಆದಾಯ ಬಂದಿದೆ. ರಸ್ತೆಗಳಲ್ಲಿ ಕಸ ಎಸೆಯುವವರ ಬಗ್ಗೆ ಪಾಲಿಕೆಯ ಮಾರ್ಷಲ್‍ಗಳು ಪ್ರತಿನಿತ್ಯ ನಿಗಾ ವಹಿಸುತ್ತಿದ್ದಾರೆ. ಪಾಲಿಕೆ ಉದ್ಯಮ ಮಳಿಗೆಯಲ್ಲಿ ಪ್ಲಾಸ್ಟಿಕ್ ಬಳಕೆ, ಹೋಟೆಲ್-ರೆಸ್ಟೋರೆಂಟ್‍ಗಳಲ್ಲಿ ಅನಧಿಕೃತ ಮಧ್ಯಪಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ಕಸ ವಿಂಗಡನೆ ಮಾಡದ ಉದ್ಯಮ ಮತ್ತು ಸಂಸ್ಥೆಗಳ ಮೇಲೆ ದಂಡ ವಿಧಿಸಲಾಗಿತ್ತು.

    ಇತ್ತೀಚೆಗೆ ಮನೆಗಳಿಂದ ಕಸ ಸಂಗ್ರಹಣೆ ಮಾಡುವ ವಾಹನಗಳು, ವಿಂಗಡಿಸದ ಕಸವಿದ್ದರೆ ಕಸ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬ್ಲ್ಯಾಕ್ ಸ್ಪಾಟ್‍ಗಳು ನಿರ್ಮಾಣವಾಗುತ್ತಿದ್ದವು. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರದಲ್ಲಿ ಕಸ ಹಾಕುವ ಬ್ಲ್ಯಾಕ್ ಸ್ಪಾಟ್‍ಗಳನ್ನ ನಿರ್ಮೂಲನೆ ಮಾಡಲು ದಂಡ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

  • ಕಸಕ್ಕೂ ಹೈಟೆಕ್ ಟೆಕ್ನಾಲಜಿ – ಬಿಬಿಎಂಪಿಯಿಂದ ಹೊಸ ಆ್ಯಪ್

    ಕಸಕ್ಕೂ ಹೈಟೆಕ್ ಟೆಕ್ನಾಲಜಿ – ಬಿಬಿಎಂಪಿಯಿಂದ ಹೊಸ ಆ್ಯಪ್

    ಬೆಂಗಳೂರು: ಸಿಲಿಕಾನ್ ಸಿಟಿ ಕಸದ ವಿಚಾರದಲ್ಲಿ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದು, ನಗರದ ಮನೆ ಮನೆಗಳಲ್ಲಿ ಕಸ ಸಂಗ್ರಹಣೆಯ ಇಂಚಿಂಚು ಮಾಹಿತಿ ಕಲೆ ಹಾಕಲು ಹೊಸ ಪ್ಲ್ಯಾನ್ ಸಿದ್ಧಗೊಂಡಿದೆ.

    ಹೌದು. ನಿಮ್ಮ ಮನೆ ಕಸ ವಿಂಗಡಿಸ್ತಾ ಇದ್ದೀರಾ? ಹಸಿ ಕಸ ಎಷ್ಟು? ಒಣ ಕಸ ಎಷ್ಟು ಎಂಬ ಮಾಹಿತಿ ಯಾರಿಗೂ ಇರಲ್ಲ. ಕೆಲವರಂತೂ ಕಸವನ್ನ ಎಲ್ಲೆಂದರಲ್ಲಿ ಬಿಸಾಡ್ತಾರೆ. ಇಂತಹ ಜನರನ್ನು ಕಂಡು ಹಿಡಿಯಲು ಬಿಬಿಎಂಪಿ ಕ್ಯೂಆರ್ ಕೋಡ್ ಕಸ ಎಂಬ ಹೊಸ ಆ್ಯಪ್ ಟೆಕ್ನಾಲಜಿ ಪರಿಚಯಿಸುತ್ತಿದೆ.

    ನಗರದ ಹತ್ತು ವಾರ್ಡಗಳ ಪ್ರತಿ ಮನೆಗೂ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಇದರಿಂದ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪೌರಕಾರ್ಮಿಕರು ಹಾಗೂ ಸಹಾಯಕರು ಯಾವ ಮನೆಯಲ್ಲಿ ಕಸ ಹಾಕಿದ್ರು? ಹಸಿ, ಒಣ ಕಸ ವಿಂಗಡಿಸಿದ್ರಾ? ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಸುಲಭವಾಗಲಿದೆ. ಅಷ್ಟೇ ಅಲ್ಲದೆ ಹೊಸ ಬಿಬಿಎಂಪಿ ಸಿದ್ಧಪಡಿಸೊ ಆ್ಯಪ್‍ನಲ್ಲಿ ಎಲ್ಲಾ ಮಾಹಿತಿಯನ್ನ ಅಪ್ಲೋಡ್ ಮಾಡಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಸ್ಮಾರ್ಟ್ ಸಿಟಿ ಅಡಿಯಲ್ಲಿ ಕ್ಯೂಆರ್ ಕೋಡ್ ಬರಲಿದು, ಪ್ರತಿ ಕೋಡ್ ಅಳವಡಿಕೆಗೂ 4 ರೂಪಾಯಿಂದ 16 ರೂಪಾಯಿ ಆಗೊ ಸಾಧ್ಯತೆಯೂ ಇದೆ. ಈ ಮೂಲಕ ಬಿಬಿಎಂ ಕಸ ವಿಲೇವಾರಿ ವಿಚಾರದಲ್ಲಿ ಸ್ಮಾರ್ಟ್ ಆಗುತ್ತಿದ್ದು, ಸಾರ್ವಜನಿಕರು ಬಿಬಿಎಂಪಿ ಹೊಸ ಪ್ರಯತ್ನಕ್ಕೆ ಸಹಕರಿಸಬೇಕಿದೆ.

  • ಕಸ ಗುಡಿಸುವ ಯಂತ್ರ, ಹೈ ಡೆನ್ಸಿಟಿ ಕಾರಿಡಾರ್ ರಸ್ತೆ ಕಾಮಗಾರಿ ತಪಾಸಣೆ

    ಕಸ ಗುಡಿಸುವ ಯಂತ್ರ, ಹೈ ಡೆನ್ಸಿಟಿ ಕಾರಿಡಾರ್ ರಸ್ತೆ ಕಾಮಗಾರಿ ತಪಾಸಣೆ

    – 17 ಕಸ ಗುಡಿಸೋ ಯಂತ್ರಗಳ ಖರೀದಿ
    – 1 ಯಂತ್ರಕ್ಕೆ 1.36 ಕೋಟಿ ರೂ.

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಸ್ವಚ್ಛವಾಗಿಡಲು ಹೊಸದಾಗಿ ಖರೀದಿಸಿರುವ ಕಸ ಗುಡಿಸುವ ಯಂತ್ರಗಳು ಹಾಗೂ ಅಗರ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಹೈ ಡೆನ್ಸಿಟಿ ಕಾರಿಡಾರ್ ಯೋಜನೆ ಪ್ರಗತಿ ಕಾಮಗಾರಿಯನ್ನು ಇಂದು ಮೇಯರ್ ತಪಾಸಣೆ ನಡೆಸಿದರು. ಈ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಉಪಮೇಯರ್ ರಾಮಮೋಹನ್ ರಾಜು, ವಲಯ ಜಂಟಿ ಆಯುಕ್ತರ ರಾಮಕೃಷ್ಣ ಉಪಸ್ಥಿತರಿದರು.

    ಬಿಬಿಎಂಪಿ ವ್ಯಾಪ್ತಿಯ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹೊಸದಾಗಿ 17 ಯಂತ್ರಗಳನ್ನು ಖರೀದಿಸಲಾಗಿದ್ದು, ಈಗಾಗಲೇ 15 ಯಂತ್ರಗಳು ನಗರಕ್ಕೆ ಬಂದಿವೆ. ಹೆಚ್.ಎಸ್.ಆರ್ ಲೇಔಟ್‍ನಲ್ಲಿ ಹೊಸದಾಗಿ ಖರೀದಿಸಿರುವ 15 ಕಸ ಗುಡಿಸುವ ಯಂತ್ರಗಳನ್ನು ತಪಾಸಣೆ ನಡೆಸಿದರು.

    ಪಾಲಿಕೆ ಎಲ್ಲಾ 8 ವಲಯಗಳಿಗೂ ಅಗತ್ಯಕ್ಕೆ ತಕ್ಕಂತೆ ಹಂಚಿಕೆ ಮಾಡಿ ಪ್ರತಿನಿತ್ಯವೂ ಯಂತ್ರಗಳ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. 1 ಕಸ ಗುಡಿಸುವ ಯಂತ್ರಕ್ಕೆ 1.36 ಕೋಟಿ ರೂ.ಗಳಂತೆ ಒಟ್ಟು 23.28 ಕೋಟಿ ರೂ. ವೆಚ್ಚದಲ್ಲಿ 17 ಯಂತ್ರಗಳನ್ನು ಖರೀದಿಸಲಾಗಿದೆ. ಈಗಾಗಲೇ ನಗರಕ್ಕೆ 15 ಯಂತ್ರಗಳು ಬಂದಿದ್ದು, ಉಳಿದೆರಡು ಯಂತ್ರಗಳು ಶೀಘ್ರ ಬರಲಿವೆ. ಯಾವ್ಯಾವ ರಸ್ತೆಗಳಲ್ಲಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು ಎಂಬ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.

    ನಂತರ ಅಗರ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಹೈ ಡೆನ್ಸಿಟಿ ಕಾರಿಡಾರ್(ಅತೀ ಹೆಚ್ಚು ವಾಹನಗಳು ಓಡಾಡುವ ಮಾರ್ಗ ಅಥವಾ ಸುಗಮ ಸಂಚಾರಕ್ಕೆ ತೊಡಕಾಗುವ ಮಾರ್ಗ) ಪ್ರಗತಿ ಕಾಮಗಾರಿ ತಪಾಸಣೆ ನಡೆಸಲಾಯಿತು.

    ಅಗರ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಈಗಾಗಲೇ ಡಾಂಬರೀಕರಣ ಮಾಡಲಾಗಿದ್ದು, ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ದುರಸ್ತಿ ಕಾಮಗಾರಿಗೆ ವೇಗ ನೀಡಿ ನಿಗದಿತ ಸಮಯದಲ್ಲಿ ಮುಗಿಸಬೇಕು. ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    12 ಹೈ ಡೆನ್ಸಿಟಿ ಕಾರಿಡಾರ್‍ಗಳ ವಿವರ:
    * ಬಳ್ಳಾರಿ ರಸ್ತೆ (ಚಾಲುಕ್ಯ ವೃತ್ತದಿಂದ ಹೆಬ್ಟಾಳ)
    * ಹಳೇ ಮದ್ರಾಸ್ ರಸ್ತೆ (ಟ್ರಿನಿಟಿ ವೃತ್ತದಿಂದ ಕೆ.ಆರ್.ಪುರಂ)
    * ಹಳೇ ಏರ್‍ಪೋರ್ಟ್ ರಸ್ತೆ (ಎಎಸ್‍ಸಿ ಸೆಂಟರ್‍ನಿಂದ ಕಾಡುಗೋಡಿ)
    * ಸರ್ಜಾಪುರ ರಸ್ತೆ (ಹೊಸೂರು ರಸ್ತೆಯ ಸೆಂಟ್ ಜಾನ್ಸ್ ಆಸ್ಪತ್ರೆಯಿಂದ ಕಾರ್ಮೆಲಾರಾಂ ಸೇತುವೆ)
    * ಹೊಸೂರು ರಸ್ತೆ (ವೆಲ್ಲಾರ ಜಂಕ್ಷನ್‍ನಿಂದ ಸಿಲ್ಕ್ ಬೋರ್ಡ್)
    * ಬನ್ನೇರುಘಟ್ಟ ರಸ್ತೆ(ಡೈರಿ ವೃತ್ತದಿಂದ ನೈಸ್ ರಸ್ತೆ)
    * ಕನಕಪುರ ರಸ್ತೆ(ಕೆ.ಆರ್.ರಸ್ತೆಯಿಂದ ನೈಸ್ ರಸ್ತೆ)

    * ಮೈಸೂರು ರಸ್ತೆ (ಹಡ್ಸನ್ ವೃತ್ತದಿಂದ ಜ್ಞಾನಭಾರತಿ ಜಂಕ್ಷನ್)
    * ಮಾಗಡಿ ರಸ್ತೆ (ಹಳೇ ಬಿನ್ನಿ ಮಿಲ್‍ನಿಂದ ಅಚಿಜನಾ ನಗರ-ನೈಸ್ ರಸ್ತೆ)
    * ತುಮಕೂರು ರಸ್ತೆ (ಓಕಳಿಪುರಂನಿಂದ ಗೊರಗುಂಟೆ ಪಾಳ್ಯ)
    * ವೆಸ್ಟ್ ಆಫ್ ಕಾರ್ಡ್ ರಸ್ತೆ (ಸೋಪ್ ಫ್ಯಾಕ್ಟರಿಯಿಂದ ಮೈಸೂರುರಸ್ತೆ)
    * ಹೊರ ವರ್ತುಲ ರಿಂಗ್ ರಸ್ತೆ(ಗೊರಗುಂಟೆ ಪಾಳ್ಯ-ತುಮಕೂರು ರಸ್ತೆ-ಹೆಬ್ಬಾಳ-ಕೆ.ಆರ್.ಪುರಂ-ಮಾರತಹಳ್ಳಿ-ಜೆ.ಡಿ.ಮರ ಜಂಕ್ಷನ್-ನೈಸ್ ರಸ್ತೆ ಜಂಕ್ಷನ್-ನಾಯಂಡಹಳ್ಳಿ ಜಂಕ್ಷನ್-ಕೊಟ್ಟಿಗೆಪಾಳ್ಯ ಜಂಕ್ಷನ್-ಗೊರಗುಂಟೆಪಾಳ್ಯ ರಸ್ತೆಯವರೆಗೆ)ಯನ್ನು ಹೈ ಡೆನ್ಸಿಟಿ ಕಾರಿಡಾರ್ ಎಂದು ಗುರುತಿಸಲಾಗಿದೆ.

  • ಅವಧಿಗೂ ಮುನ್ನವೇ ಭರ್ತಿ- ಕಸದ ಸಮಸ್ಯೆ ಉಲ್ಬಣ ಸಾಧ್ಯತೆ

    ಅವಧಿಗೂ ಮುನ್ನವೇ ಭರ್ತಿ- ಕಸದ ಸಮಸ್ಯೆ ಉಲ್ಬಣ ಸಾಧ್ಯತೆ

    ಬೆಂಗಳೂರು: ನಗರದ ಹಲವೆಡೆ ಕಸದ ರಾಶಿ ಬಿದ್ದಿದೆ. ಇದು ಕಸ ವಿಲೇವಾರಿ ಮಾಡಲು ಇದ್ದ ಏಕೈಕ ಕ್ವಾರಿ ಮಿಟಗಾನಹಳ್ಳಿ ಕಸದ ಪಿಟ್ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಇದರಿಂದ ಬುಧವಾರ ನಗರದಿಂದ ಕಸ ತುಂಬಿಸಿ ಹೊರಟಿದ್ದ ಕಾಂಪ್ಯಾಕ್ಟರ್ ಗಳ ಕಸ ವಿಲೇವಾರಿಯಾಗದೆ ಕ್ವಾರಿ ಬಳಿ ಸಾಲು ಗಟ್ಟಿ ನಿಂತಿದೆ.

    ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಮಿಟಗಾನಹಳ್ಳಿ ಕ್ವಾರಿ ಪಕ್ಕದಲ್ಲೇ ಮತ್ತೊಂದು ಗುಂಡಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಮಧ್ಯಾಹ್ನದ ಬಳಿಕ ಆ ಕ್ವಾರಿ ಕಸ ಸುರಿಯಲು ಸಿದ್ಧವಾಗುತ್ತದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಈ ತಾತ್ಕಾಲಿಕ ಕ್ವಾರಿ ಸಹ ಮೂವತ್ತು ದಿನಕ್ಕೆ ಭರ್ತಿಯಾಗಲಿದೆ. ಈಗಾಗಲೇ ಪಾಲಿಕೆ ಕರೆದಿರುವ ಮಿಟಗಾನಹಳ್ಳಿ ಭೂಭರ್ತಿ ಕೇಂದ್ರದ ವೈಜ್ಞಾನಿಕ ಟೆಂಡರನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ. ಹೀಗಾಗಿ ಸರ್ಕಾರ ಸೂಚಿಸಿದಂತೆ ಅಗತ್ಯ ಬಿದ್ದರೆ ಮರುಟೆಂಡರ್ ಕರೆಯುವುದಾಗಿ ರಂದೀಪ್ ತಿಳಿಸಿದರು.

    ಬಿಬಿಎಂಪಿ ಕರೆದಿದ್ದ ಟೆಂಡರನ್ನು ನಗರಾಭಿವೃದ್ಧಿ ಇಲಾಖೆ ರದ್ದು ಮಾಡಿರುವ ಕಾರಣ ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದೆ. ಇಂದು ಅನೇಕ ಕಡೆಗಳಲ್ಲಿ ಕಸ ವಿಲೇವಾರಿಯಾಗದೆ ಹಾಗೇ ಉಳಿದಿವೆ. ಸರ್ಕಾರ ಆದಷ್ಟು ಬೇಗ ಕ್ರಮಕೈಗೊಳ್ಳದಿದ್ದರೆ ಕಸದ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಾಗಿದೆ.

  • ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಮಂಡ್ಯ: ಕೇರಳದ ಕಸ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ಇದರಿಂದ ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ.

    ಸಕ್ಕರೆ ನಗರಿ ಮಂಡ್ಯಗೆ ಕೇರಳದಿಂದ ಅತೀ ಹೆಚ್ಚು ತ್ಯಾಜ್ಯ ರವಾನೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ತ್ಯಾಜ್ಯ ವಸ್ತುಗಳಾದ ರಬ್ಬರ್, ಬಟ್ಟೆ, ಪ್ಲಾಸ್ಟಿಕ್‍ಗಳು ಲಾರಿ ಮೂಲಕ ಬರುತ್ತಿದೆ. ಆಲೆಮನೆಗಳಲ್ಲಿ ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ.

    ಈ ಕುರಿತು ಎಚ್ಚೆತ್ತಿರುವ ಪೊಲೀಸರು ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿಯನ್ನು ಜಿಲ್ಲೆಯ ಶ್ರೀರಂಗಪಟ್ಣದಲ್ಲಿ ಜಪ್ತಿ ಮಾಡಿದ್ದಾರೆ. ಕೇರಳದಿಂದ ತ್ಯಾಜ್ಯ ತುಂಬಿರುವ 25 ಕ್ಕೂ ಹೆಚ್ಚು ಲಾರಿಗಳು ಕರ್ನಾಟಕಕ್ಕೆ ಬಂದಿವೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣದ ಟೌನ್ ರಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ತುಂಬಿದ ಲಾರಿಗಳನ್ನು ಜಪ್ತಿ ಮಾಡಿದ್ದಾರೆ.

    ಲಾರಿಯಲ್ಲಿ ತಂದ ತ್ಯಾಜ್ಯವನ್ನು ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಲಾರಿ ಚಾಲಕರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಿಸರ ಇಲಾಖೆ ಅಧಿಕಾರಿ ಅಶ್ವಿನಿ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾದ ಕಸ- ಮಾಜಿ ಸೈನಿಕನಿಂದ ಚಾಲಕನಿಗೆ ವಾರ್ನಿಂಗ್

    ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾದ ಕಸ- ಮಾಜಿ ಸೈನಿಕನಿಂದ ಚಾಲಕನಿಗೆ ವಾರ್ನಿಂಗ್

    ನೆಲಮಂಗಲ: ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಸದ ಸಮಸ್ಯೆ ಎದುರಾಗಿದೆ.

    ಹೌದು ಪಟ್ಟಣದಲ್ಲಿ ದಿನನಿತ್ಯದ ಕಸದ ರಾಶಿಯನ್ನ ಸಾಗಿಸುವ ಟ್ರಾಕ್ಟರ್ ಗಳಿಗೆ ಟಾರ್ಪಲ್ ಹೊದಿಸದೆ ಬೇಕಾಬಿಟ್ಟಿ ಸಂಚರಿಸುವುದರಿಂದ ಈ ಸಮಸ್ಯೆ ಎದುರಾಗಿದೆ. ದಿನನಿತ್ಯ ನೆಲಮಂಗಲದಿಂದ ಮೈಲನಹಳ್ಳಿವರಗೂ ಕಸ ಸಾಗಿಸುವ ಟ್ರಾಕ್ಟರ್ ಗಳಲ್ಲಿನ ಕಸ ರಸ್ತೆಯಲ್ಲೇ ಬೀಳುತ್ತಿದ್ದು, ರಸ್ತೆ ತುಂಬೆಲ್ಲಾ ಕಸಮಯವಾಗಿ ಬಿಟ್ಟಿದೆ.

    ರಸ್ತೆಗಳಲ್ಲಿ ಬೀಳುತ್ತಿದ್ದ ಕಸವನ್ನು ನೋಡಿ ಬೇಸತ್ತ ನೆಲಮಂಗಲ ನಿವಾಸಿ ಮಾಜಿ ಸೈನಿಕ ಮೂರ್ತಿ ಅವರು ಕಸ ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕನನ್ನ ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆತನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿ, ಬುದ್ಧಿ ಮಾತನ್ನ ಹೇಳಿ ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ. ಜೊತೆಗೆ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಟ್ರಾಕ್ಟರ್ ಗಳು ಸಾಗುವಾಗ ಹಿಂಬದಿಯಲ್ಲಿ ವಾಹನ ಸವಾರ ಬಂದರಂತೂ ಅವರ ಮೇಲೆಲ್ಲಾ ಕಸ ಬಿದ್ದು, ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದೆ. ಹಾಗೆಯೇ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರೆಲ್ಲರೂ ಮೂಗು ಮುಚ್ಚಿಕೊಂಡು ವಾಹನ ಚಲಾಯಿಸಬೇಕಾದ ದುಸ್ಥಿತಿ ಎದುರಾಗಿದೆ. ಈ ಕಸದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡದ ನೆಲಮಂಗಲ ಪುರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರ ಕಿಡಿಕಾರಿದ್ದಾರೆ.