Tag: ಕಸ ವಿಲೇವಾರಿ

  • Bengaluru | ಆಟೋಗೆ ಕಸ ನೀಡದ ಮನೆಗಳಿಗೆ ನೋಟಿಸ್

    Bengaluru | ಆಟೋಗೆ ಕಸ ನೀಡದ ಮನೆಗಳಿಗೆ ನೋಟಿಸ್

    ಬೆಂಗಳೂರು: ನಗರದಲ್ಲಿ ಕಸವನ್ನ (Garbage) ಆಟೋಗಳಿಗೆ ನೀಡಬೇಕು ಅಂತ ಘನತ್ಯಾಜ್ಯ ನಿರ್ವಹಣೆ ನಿಗಮ ಆದೇಶ ಮಾಡಿದೆ. ಜೊತೆಗೆ ಮನೆ ಮನೆಗೆ ತೆರಳೋ ಕಸದ ಆಟೋಗಳ ಸಮಯ ಕೂಡ ಬದಲಾವಣೆ ಮಾಡಿದೆ.

    ಮೊದಲೆಲ್ಲ ಬೆಳ್ಳಗ್ಗೆ 6.30ಕ್ಕೆ ಕಸದ ಆಟೋಗಳು ಕಸ ಸಂಗ್ರಹಕ್ಕೆ ಮನೆ ಮುಂದೆ ಬರುತ್ತಾ ಇದ್ದವು ಈಗ ಸಮಯವನ್ನ ಬದಲಾವಣೆ ಮಾಡಿ ಬೆಳ್ಳಗ್ಗೆ 5.30ಕ್ಕೆ ಮನೆ ಮನೆಗೆ ಆಟೋ ತೆರಳುವಂತೆ ಆದೇಶ ಮಾಡಿದೆ. ಆದರೂ ಕೂಡ ಕಸದ ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ಮಾಡ್ತಾ ಇದ್ದಾರೆ ಬೆಂಗಳೂರಿಗರು (Bengalurians). ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ – ಇಂದಿನಿಂದ 3 ದಿನ ಕಾವೇರಿ ನೀರು ಸಿಗಲ್ಲ

    ಕಸದ ಆಟೋಗಳಿಗೆ ಕಸ ನೀಡದ ಮನೆಗಳಿಗೆ ನೋಟಿಸ್ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಿರ್ಧಾರ ಮಾಡಿದೆ. ಕಸ ನೀಡದ ಮನೆಗಳಿಗೆ ನೋಟಿಸ್ ನೀಡಲಿದೆ ಜೊತೆಗೆ ಕಟ್ಟಡ ನಿರ್ಮಾಣದ ಆವಶೇಗಳನ್ನ ಎಲ್ಲೆಂದರಲ್ಲೆ ಬಿಸಾಡುತ್ತಿದ್ದರು. ಈಗ ಕಟ್ಟಡದ ಆವಶೇಷಗಳನ್ನ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ದಿಂದಲೇ ವಿಲೇವಾರಿ ಮಾಡಲು ಚಿಂತಿಸಿದೆ. ವಿಲೇವಾರಿ ವೆಚ್ಚವನ್ನ ಕಟ್ಟಡ ಮಾಲೀಕರು ಭರಿಸಬೇಕಿದೆ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು

  • ಕಸಕ್ಕೂ ಬಂತು ಬಾರ್ ಕೋಡ್

    ಕಸಕ್ಕೂ ಬಂತು ಬಾರ್ ಕೋಡ್

    ಬೆಂಗಳೂರು: ಕಸದ ಆಟೋ, ಟಿಪ್ಪರ್‌ಗಳ ತಪ್ಪು ಲೆಕ್ಕದ ತಲೆನೋವಿನಿಂದ ಪಾರಾಗಲು ಪಾಲಿಕೆ ಹೊಸ ಐಡಿಯಾ ಮಾಡಿದೆ. ಇನ್ನು ರೀಡ್ ಟ್ಯಾಗ್ ಇನ್ ಮಿನಿಟ್ಸ್ ಬಾರ್ ಕೋಡ್‍ಗಳನ್ನ ಆಟೋಗಳಿಗೆ ಅಳವಡಿಸಲು ಪಾಲಿಕೆಯಿಂದ ಸೂಚಿಸಲಾಗಿದೆ.

    ಈ ಪ್ರಕಾರ ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮತ್ತಷ್ಟು ಕಾರ್ಯೋನ್ಮುಖವಾಗಲಿದೆ. ಆಗ ಪ್ರತಿ ರಸ್ತೆಗೂ ಸಹ ಹಾಕಲಾದ ಬಾರ್ ಕೋಡ್‍ಗಳನ್ನು ಆಟೋಗಳು ಸ್ಕ್ಯಾನ್ ಮಾಡುವ ಮೂಲಕ ಕಸ ತೆಗೆಯಲಾಗಿದೆ ಎಂಬ ದೃಢಿಕರಣ ನೀಡಬೇಕಾಗುತ್ತದೆ. ಈ ಮೂಲಕ ಆಟೋ ತಪ್ಪು ಲೆಕ್ಕ ಹಾಗೂ ಮನೆಗಳ ಕಸ ತೆಗೆಯದೇ ಇರುವುದನ್ನ ತಪ್ಪಿಸಬಹುದು ಎಂದು ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಕಸದಿಂದ ವಿದ್ಯುತ್ ಉತ್ಪಾದನೆಗೆ ಕಡೆಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಗರದ ಹೊರವಲಯದ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ.

    ಚಿಕ್ಕನಾಗಮಂಗಲದ ತ್ರೀ ವೇಸ್ಟ್, ಕೆಪಿಸಿಎಲ್‍ನ ಬಿದಡಿ ಸಂಸ್ಥೆ, ದೊಡ್ಡಬಿದಿರೆಕಲ್ಲಿನ ಇಂಡಿಯಂ, ಕನ್ನಹಳ್ಳಿಯ ಸಾತರಾಂ ಸೇರಿದಂತೆ ನಗರದ 4 ಕಡೆ ವಿದ್ಯುತ್ ಉತ್ಪಾದನೆಗೆ ತಯಾರಿ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು. ಈ ಘಟಕಗಳು ಕೆಲಸ ಆರಂಭಿಸಿದರೆ ಮುಂದಿನ ವರ್ಷ ಕಸದಿಂದ ವಿದ್ಯುತ್ ತಯಾರಿಸಲು ಅನುಕೂಲ ಆಗಲಿದೆ. ಮಿಕ್ಸ್ ತ್ಯಾಜ್ಯವನ್ನ ನೀಡಿದರೆ ಟಾರ್ಗೆಟ್ ವಿದ್ಯುತ್ ಉತ್ಪಾದನೆ ಆಗಲಿದೆ.

    ಪಾರ್ಕ್‍ಗಳಲ್ಲಿ ಕಸ ನಿರ್ಹಣೆಗೆ ಚಿಂತನೆ:
    ಬೆಂಗಳೂರಿನ 198 ವಾರ್ಡ್‌ಗಳಲ್ಲೂ ಸಾವಿರಕ್ಕೂ ಹೆಚ್ಚು ಪಾರ್ಕ್‍ಗಳಿದ್ದು, ಹಸಿ ಕಸವನ್ನ ಕಾಂಪೋಸ್ಟ್ ಮಾಡಲು ಆಲೋಚಿಸಲಾಗಿದೆ. ಈಗಾಗಲೇ ಹೆಚ್.ಎಸ್.ಆರ್ ಲೇಔಟ್‍ನಲ್ಲಿ ಯಶಸ್ವಿಯಾಗಿ ಈ ಯೋಜನೆ ನಡೆಯುತ್ತಿದೆ. ಕಸ ನಿರ್ವಹಣೆಗೆ ಪ್ರತ್ಯೇಕ ಕಾರ್ಪೋರೆಷನ್ ಮಾಡಿ, ಬೆಂಗಳೂರಿನ ಕಸ ನಿರ್ವಹಣೆಗಾಗಿ ಪತ್ಯೇಕ ಕಾರ್ಪೋರೆಟರ್ ಮಾಡಲು ಸರ್ಕಾರ ಸೂಚಿಸಿದೆ. ಈ ಸಂಬಂಧ ಬಿಬಿಎಂಪಿ ಸಿದ್ಧತೆ ಕೈಗೊಂಡಿದೆ. ಇದು ಪಾಲಿಕೆಯ ಅಂಗವಾಗಿಯೇ ಉಳಿಯಲಿದ್ದು, ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದರು.

    ಸರ್ಕಾರದಿಂದ ಕ್ವಾರಿಗಳಿಗೆ ಅನುಮತಿ:
    ಇನ್ನು ಮುಂದಿನ 10 ದಿನಗಳಲ್ಲಿ ಬೆಳ್ಳಳಿ ಕ್ವಾರಿಗೆ ಹೋಗುತ್ತಿರುವ ಕಸ ಹಂತ ಹಂತವಾಗಿ ನಿಲ್ಲಿಸಲಾಗುತ್ತದೆ. ಈಗಾಗಲೇ ಬೆಳ್ಳಳಿ ಕ್ವಾರಿ ಭರ್ತಿಯಾಗಿದೆ. ಹೀಗಾಗಿ ಬೆಂಗಳೂರಿನ ಕಸ ಸುರಿಯಲು 15 ಕೋಟಿ ವೆಚ್ಚದಲ್ಲಿ ಮಿಟ್ಟಗಾನಹಳ್ಳಿ ಸಮೀಪ ಕ್ವಾರಿ ಸಿದ್ಧವಾಗಿದ್ದು, ಮುಂದಿನ 4 ತಿಂಗಳು ನಗರದ ಕಸ ಹಾಕಲು ಇಲ್ಲಿ ಅವಕಾಶವಿದೆ. ಸರ್ಕಾರಕ್ಕೆ ಸದ್ಯ ಬಾಗಲೂರು ಹಾಗೂ ಹುಲ್ಲಹಳ್ಳಿಯಲ್ಲೂ ಕ್ವಾರಿ ಪೀಟ್ ತಯಾರು ಮಾಡಲು ಪ್ರಸ್ತಾವನೆ ನೀಡಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.

  • ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

    ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

    ಗದಗ: ಜಿಲ್ಲೆಯ ಸ್ವಚ್ಛತಾ ಯುವಸೇನೆ ತಂಡದ ಯುವಕರು ಪ್ರತಿ ರವಿವಾರ ಸ್ವಚ್ಛತಾ ಆಂದೋಲನಕ್ಕೆ ಮುಂದಾಗಿದ್ದಾರೆ.

    ಬೇರೆ ಬೇರೆ ಕಾಲೇಜಿನ ಸ್ನೇಹಿತರೆಲ್ಲ ಸೇರಿಕೊಂಡು ಈ ಒಂದು ಟೀಮ್ ಮಾಡಿಕೊಂಡಿದ್ದಾರೆ. ಗದಗ ಬೆಟಗೇರಿ ಅವಳಿ ನಗರದ ಸ್ವಚ್ಛ ಹಾಗೂ ಸೌಂದರ್ಯಕ್ಕಾಗಿ ಈ ಯುವಪಡೆ ಸುಂದರ ಕನಸು ಕಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ವಾರಗಳಿಂದ ನಗರದ ಪ್ರಮುಖ ಬೀದಿಗಳು, ಗಾರ್ಡ್‍ಗಳು ಮತ್ತು ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗುತ್ತಿದೆ.

    ಸುಮಾರು 30 ವಿದ್ಯಾರ್ಥಿಗಳು ನಿಸರ್ಗ ಯುವಪಡೆಯಲ್ಲಿ ಇದ್ದಾರೆ. ಪ್ರತಿ ರವಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸ್ವಚ್ಛತೆಯ ಶ್ರಮದಾನ ಮಾಡುತ್ತಿದ್ದಾರೆ. ಸಲಿಕೆ, ಬುಟ್ಟೆ, ಗುದ್ದಲಿ ಹಾಗೂ ಇತರೆ ಸಲಕರಣೆಗಳನ್ನು ಹಿಡಿದು ಕ್ಲೀನ್ ಮಾಡುವ ಮೂಲಕ ಕಸ ವಿಲೇವಾರಿ ಬಗ್ಗೆ ಸ್ಥಳೀಯರಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

    ಜನರು ಸ್ವಚ್ಛವಾಗಿ ಆರೋಗ್ಯವಾಗಿರಬೇಕು, ರೋಗರುಜಿನಗಳಿಂದ ದೂರವಿರಬೇಕು, ನಗರ ಸೌಂದರ್ಯ ಹೆಚ್ಚಿಸಬೇಕೆಂಬ ಉದ್ದೇಶ ನಮ್ಮದಾಗಿದೆ. ನಮ್ಮ ಜೊತೆ ಸ್ಥಳೀಯರು ಕೈಜೋಡಿಸಿ ಪ್ರೋತ್ಸಾಹಿಸಬೇಕು ಎಂದು ಸ್ವಚ್ಛತಾ ಯುವಪಡೆಯ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

  • ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ತಲೆದೂರಿದ ಕಸದ ಸಮಸ್ಯೆ

    ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ತಲೆದೂರಿದ ಕಸದ ಸಮಸ್ಯೆ

    ತುಮಕೂರು: ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ಕಸದ ಸಮಸ್ಯೆ ತಲೆದೂರಿದೆ. ಕಳೆದ 15 ದಿನಗಳಿಂದ ಕಸ ವಿಲೇವಾರಿಯಾಗದೇ ತುಮಕೂರು ತರಕಾರಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ.

    ನಗರದ ಅಂತರಸನಹಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 15 ದಿನಗಳಿಂದ ವಿಲೇವಾರಿಯಾಗದೇ ಮಾರುಕಟ್ಟೆಯಲ್ಲೇ ಕಸ ಬಿದ್ದಿದ್ದು, ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಮೊದಲು ಮಾರುಕಟ್ಟೆ ಪ್ರಾಂಗಣದಲ್ಲಿನ ಕಸ ಪ್ರತಿದಿನ ವಿಲೇವಾರಿಯಾಗುತಿತ್ತು. ಇದೀಗ 15 ದಿನಗಳಿಂದ ಕಸ ಎತ್ತದೇ ಮಾರುಕಟ್ಟೆ ತುಂಬೆಲ್ಲಾ ಕಸದ ಪರ್ವತವೇ ಸೃಷ್ಟಿಯಾಗಿದೆ.

    ವಿಎಂವಿ ಅಸೋಸಿಯೆಟ್ಸ್ ಕಂಪನಿಗೆ ಕಸ ವಿಲೇವಾರಿ ಟೆಂಡರ್ ನೀಡಲಾಗಿದ್ದು ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯ ಸಹ ಮಾರುಕಟ್ಟೆಯಲ್ಲಿ ಒದಗಿಸದೇ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾರುಕಟ್ಟೆ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

    ಕಸದ ವಾಸನೆಯ ಪರಿಣಾಮ ಮಾರುಕಟ್ಟೆಗೆ ಆಗಮಿಸಲು ವ್ಯಾಪಾರಸ್ಥರು, ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ದಿನನಿತ್ಯ ಮೂಗು ಮುಚ್ಚಿಕೊಂಡು ವ್ಯಾಪಾರದಲ್ಲಿ ತೊಡಗುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು: ಬಿಬಿಎಂಪಿ ಬೆಂಗಳೂರಿಗರಿಗೆ ಶಾಕ್ ಕೊಟ್ಟಿದ್ದು, ನಗರದಲ್ಲಿ ಇನ್ಮುಂದೆ ಕಸ ವಿಲೇವಾರಿಗಾಗಿ ಶೇ. 15ರಷ್ಟು ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದೆ.

    ಹೌದು, ಮಹಾನಗರ ಜನರು ಮೇಲೆ ಬಿಬಿಎಂಪಿ ಕೌಸ್ಸಿಲ್ ಆಸ್ತಿಯ ವಿಸ್ತೀರ್ಣ ಆಧರಿಸಿ ತೆರಿಗೆ ಹೆಚ್ಚಳ ಮಾಡುತ್ತಿದೆ. ಕಳೆದ 7 ವರ್ಷಗಳಿಂದ ಘನ ತ್ಯಾಜ್ಯ ನಿರ್ವಹಣೆ ಮೇಲಿನ ತೆರಿಗೆ ಹೆಚ್ಚಳ ಮಾಡಿಲ್ಲ. ಲೆಕ್ಕ ಪರಿಶೋಧಕರ ಆಕ್ಷೇಪವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ಸ್ಥಾಯಿ ಸಮಿತಿ ಸಲಹೆ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳಲಿದೆ ಅಂತಾ ಪಾಲಿಕೆಯ ಅರೋಗ್ಯ ಮತ್ತು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ.

    ಇದುವರೆಗೆ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಸದ ಮೇಲೆ ತೆರಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಆಸ್ತಿ ವಿಸ್ತೀರ್ಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಈ ಕುರಿತು ಕೌನ್ಸಿಲ್ ನಲ್ಲಿ ಚರ್ಚೆ ನಡೆದು ಒಪ್ಪಿಗೆ ಪಡೆದರೆ ಸಾರ್ವಜನಿಕರು ಶೇ.15ರಷ್ಟು ಹೆಚ್ಚಿನ ಕಸದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ತೆರಿಗೆ ಹೆಚ್ಚಳಕ್ಕೆ ವಿರೋಧ: ಬಿಬಿಎಂಪಿ ತೆರಿಗೆ ಹೆಚ್ಚಳ ಪ್ರಸ್ತಾವನೆಗೆ ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆರಿಗೆ ಹೆಚ್ಚಳದಿಂದ ಶಾಲಾ ಕಾಲೇಜುಗಳು, ನರ್ಸಿಂಗ್ ಹೋಂಗಳು, ಕಲ್ಯಾಣ ಮಂಟಪಗಳು, ಕೈಗಾರಿಕೆಗಳು, ಟೆಕ್‍ಪಾರ್ಕ್‍ಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಿಬಿಎಂಪಿ ಈ ನಿರ್ಧಾರ ವಾಪಸ್ ಪಡೆಯದೆ ಹೋದರೆ ಅಹೋರಾತ್ರಿ ಧರಣಿಯ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಬಿಬಿಎಂಪಿ ಕಸ ವಿಲೇವಾರಿ ಮಾಡಲು ಅಧಿಕ ವೆಚ್ಚ ಮಾಡುತ್ತಿದ್ದು, ಪ್ರಸ್ತುತ ಸಾರ್ವಜನಿಕರ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಕಸ ನಿರ್ವಹಣೆ ಸಮಸ್ಯೆ ನಗರದಲ್ಲಿ ಪ್ರಮುಖ ಸಮಸ್ಯೆ ಆಗಿರುವುದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೇ ಇದುವರೆಗೆ ಬಿಬಿಎಂಪಿ ಬಾಡಿಗೆ ನೀಡಿದ ಕಟ್ಟಡಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹೊಸ ಪ್ರಸ್ತಾವನೆಯಲ್ಲಿ ರದ್ದು ಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ರಾಜಸ್ಥಾನ ಮಾದರಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಬಿಬಿಎಂಪಿ ತೆರಿಗೆ ಹೆಚ್ಚಳ ನಿರ್ಧಾರದಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಹೆಚ್ಚಳವಾಗಲಿದೆ. ಅಲ್ಲದೇ ನಗರದಲ್ಲಿ ವಾಸಿಸುತ್ತಿರುವ ಗಣ್ಯರಿಗೂ ತೆರಿಗೆ ಹೆಚ್ಚಳ ಬಿಸಿ ತಟ್ಟಲಿದೆ.

  • ರಾತ್ರಿ ಗ್ರಾಮದ ಮುಂದೆ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಗೆ ಥಳಿತ!

    ರಾತ್ರಿ ಗ್ರಾಮದ ಮುಂದೆ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಗೆ ಥಳಿತ!

    ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಜನರಿಗೆ ಘನ ತ್ಯಾಜ್ಯ ಪದೇ ಪದೇ ತಲೆನೋವಾಗಿ ಕಾಡುತ್ತಿದೆ. ಪಟ್ಟಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪಕ್ಕದ ಹಳ್ಳಿಗಳ ಬಯಲು ಪ್ರದೇಶದಲ್ಲಿ ಕದ್ದುಮುಚ್ಚಿ ಸುರಿಯುವ ಪ್ರಯತ್ನ ನಡೆಯುತ್ತಿದೆ.

    ಮೈಲನಹಳ್ಳಿ ಗ್ರಾಮಕ್ಕೆ ಹಲವು ದಿನಗಳಿಂದ ರಾತ್ರೋ ರಾತ್ರಿ ಕೋಳಿ ಕಸ ಸುರಿಯಲಾಗುತ್ತಿದ್ದು, ಗ್ರಾಮದ ತುಂಬೆಲ್ಲಾ ಗಬ್ಬು ವಾಸನೆ ಹರಡಿ ಜನರ ನೆಮ್ಮದಿ ಹಾಳಾಗಿತ್ತು. ಊರಿನ ಜನ ಬೆಳಗ್ಗೆ ಹೊತ್ತು ಎಷ್ಟೇ ಎಚ್ಚರಿಕೆಯಿಂದ ಕಾದರೂ ರಾತ್ರಿ ವೇಳೆ ಕಸ ಸುರಿದು ಪರಾರಿಯಾಗುತ್ತಿದ್ದರು.

    ಇದರಿಂದ ರೊಚ್ಚಿಗೆದ್ದ ಜನ ಕಾದು ಕುಳಿತು ಕಸ ಸುರಿಯಲು ಬಂದ ವ್ಯಕ್ತಿಯನ್ನ ಹಿಡಿದು ಥಳಿಸಿ ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಷ್ಟಾದ್ರೂ ಕಸ ಎಲ್ಲಿಂದ ತಂದು ಸುರಿತೀವಿ ಅನ್ನೋ ಮಾಹಿತಿಯನ್ನು ಆ ವ್ಯಕ್ತಿ ಹೇಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.