Tag: ಕಸ್ತೂರಿ ರಾಜಾ

  • ಗಂಡ-ಹೆಂಡ್ತಿ ಜಗಳ ಅಷ್ಟೇ, ವಿಚ್ಛೇದನ ಅಲ್ಲ: ನಟ ಧನುಷ್ ತಂದೆ

    ಗಂಡ-ಹೆಂಡ್ತಿ ಜಗಳ ಅಷ್ಟೇ, ವಿಚ್ಛೇದನ ಅಲ್ಲ: ನಟ ಧನುಷ್ ತಂದೆ

    ನವದೆಹಲಿ: ಇತ್ತೀಚೆಗಷ್ಟೇ ಕಾಲಿವುಡ್ ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ವಿಚ್ಛೇದನ ವಿಚಾರ ಭಾರೀ ಸುದ್ದಿಯಾಗಿತ್ತು. ಬರೋಬ್ಬರಿ 18 ವರ್ಷಗಳ ದಾಂಪತ್ಯದಲ್ಲಿನ ಬಿರುಕು ಕಂಡು ಅಭಿಮಾನಿಗಳೇ ದಂಗಾಗಿದ್ದರು. ಆ ಬಳಿಕ ವಿಚ್ಛೇದನ ವಿಚಾರ ಸಂಬಂಧ ಹಲವಾರು ಊಹಾಪೋಹಗಳು ಹರಿದಾಡತೊಡಗಿದವು. ಇದೀಗ ಸ್ವತಃ ನಟ ಧನುಷ್ ತಂದೆ ಕಸ್ತೂರಿ ರಾಜಾ ಅವರು ಮಗನ ವಿಚ್ಛೇದನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಗನ ವಿಚ್ಛೇದನದ ಕುರಿತು ಹೇಳಿಕೆ ನೀಡಿದರು. ಇದು ಮಾಮೂಲಿ ಗಂಡ-ಹೆಂಡತಿ ನಡುವೆ ನಡೆದ ಜಗಳ ಅಷ್ಟೇ. ಕೆಲವೊಂದು ವಿಚಾರಗಳಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದೆ. ಆದರೆ ಇದು ವಿಚ್ಛೇದನ ಅಲ್ಲ. ಸದ್ಯ ಅವರು ಚೆನ್ನೈನಲ್ಲಿ ಇಲ್ಲ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ವಿಚ್ಛೇದನ ನೀಡಿದ್ದಾರೆ ಎಂಬ ವಿಚಾರ ತಿಳಿದ ಕೂಡಲೇ ನಾನು ಮಗನಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅಲ್ಲದೆ ಕೆಲವೊಂದು ಸಲಹೆಗಳನ್ನು ಕೂಡ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    ಕಳೆದ ಮೂರು ದಿನಗಳ ಹಿಂದೆಯಷ್ಟೇ, ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ, ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ. ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿ ಅಚ್ಚರಿ ಹುಟ್ಟಿಸಿದ್ದರು.

    ಇದೀಗ ಧನುಷ್ ತಂದೆ ನೀಡಿರುವ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಕೊಂಡಿದೆ. ಧನುಷ್- ಐಶ್ವರ್ಯಾ ಮತ್ತೆ ಒಂದಾಗುತ್ತಾರಾ ಹಾಗೂ ಮನೆಯ ಹಿರಿಯರು ಕೂತು ಮಾತುಕತೆ ನಡೆಸಿ ಜೋಡಿಯನ್ನು ಒಂದಾಗಿಸುತ್ತಾರಾ ಎಂಬ ಕ್ಯೂರಿಯಾಸಿಟಿ ಹುಟ್ಟಿದೆ.