Tag: ಕಸ್ತೂರಿನಗರ

  • ಕಸ್ತೂರಿನಗರ ವಿಭಜನೆ ವಿರೋಧಿಸಿ ಪ್ರತಿಭಟನೆ

    ಕಸ್ತೂರಿನಗರ ವಿಭಜನೆ ವಿರೋಧಿಸಿ ಪ್ರತಿಭಟನೆ

    ಬೆಂಗಳೂರು: ಕಸ್ತೂರಿನಗರ ವಿಭಜಿಸಿ 2 ವಾರ್ಡ್‍ಗಳನ್ನಾಗಿ ವಿಂಗಡಿಸಲು ಬಿಬಿಎಂಪಿ ಹೊರಡಿಸಿರುವ ಅಧಿಸೂಚನೆ ವಿರೋಧಿಸಿ ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

    ಬೈಯಪ್ಪನಹಳ್ಳಿ ವಾರ್ಡ್ ನಂ. 50ನ್ನು ಒಡೆದು 2ನೇ ಮುಖ್ಯ ರಸ್ತೆಯ ಕಳಭಾಗ ಮತ್ತು ಮೇಲ್ಭಾಗವನ್ನು ಎರಡು ಭಾಗವಾಗಿ ವಿಂಗಡಿಸಲು ಬಿಬಿಎಂಪಿ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ನಿವಾಸಿಗಳು ಎರಡನೇ ಮುಖ್ಯ ರಸ್ತೆಯ ಗಣೇಶ ದರ್ಶಿನಿ ಹೋಟೆಲ್‍ನಿಂದ ಬಿಬಿಎಂಪಿ ಆಫೀಸ್ ವಾರ್ಡ್ ನಂ. 50ರವರೆಗೆ ಪ್ರತಿಭಟನೆಯನ್ನು ನಡೆಸಿದರು. ಅಷ್ಟೇ ಅಲ್ಲದೇ ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘವು ಸಹಿ ಸಂಗ್ರಹ ಆಂದೋಲನ ಮಾಡಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ನಮ್ಮ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

    ಈ ಸಂದರ್ಭದಲ್ಲಿ ಪ್ರತಿಭಟನಾಕಾರರು, ಒಂದು ಭಾಗವನ್ನು ಸಿವಿ ರಾಮನ್ ನಗರಕ್ಕೆ (ಈಗಿನ ಹೊಸ ವಾರ್ಡ್ ನಂ 117), ಇನ್ನೊಂದು ಭಾಗವನ್ನು ಲಾಲ್ ಬಹುದ್ದೂರ್ ನಗರಕ್ಕೆ (ಈಗಿನ ಹೊಸ ನಂ. 118) ಸೇರಿಸುವುದಾಗಿ ಬಿಬಿಎಂಪಿ ಯೋಜಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೆ ಟೋಲ್ ಬರೆ- ನೆಲಮಂಗಲ, ಅತ್ತಿಬೆಲೆಯಲ್ಲಿ 5 ರೂ. ಹೆಚ್ಚಳ

    ಒಂದಾಗಿದ್ದ ಕಸ್ತೂರಿನಗರ ಮುಂದಕ್ಕೆ ಎರಡು ವಾರ್ಡ್‍ಗಳಾಗುತ್ತವೆ. ಇದರಿಂದಾಗಿ ಬೆಸ್ಕಾಂ, ನೀರು, ರಸ್ತೆ, ದಾರಿ ದೀಪ, ಒಳಚರಂಡಿ ಇತ್ಯಾದಿ ಸಮಸ್ಯೆಗಳು ಬಂದಾಗ ಇಲ್ಲಿನ ನಿವಾಸಿಗಳು ಸಿ.ವಿ ರಾಮನ್ ನಗರಕ್ಕೆ ಹೋಗಬೇಕು. ಎರಡು ವಾರ್ಡ್‍ಗಳಿಗೆ ಬೇರೆ ಬೇರೆ ಆಫೀಸ್, ಅಧಿಕಾರಿಗಳು ಮತ್ತು ಬೇರೆನೆ ಮಹಾನಗರ ಪಾಲಿಕೆ ಪ್ರತಿನಿಧಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ತೀರಾ ಅನಾನುಕೂಲವಾಗುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಶಾಲೆಗಳಿಗೂ ಸ್ಕೂಲ್ ಬಸ್ ವ್ಯವಸ್ಥೆ

    Live Tv

  • ನುಂಗಿದ್ದು ಸಾಕು ರಸ್ತೆ ನಿರ್ಮಿಸಿ – ಬಿಬಿಎಂಪಿ ವಿರುದ್ಧ ಕಸ್ತೂರಿ ನಗರ ನಿವಾಸಿಗಳ ಪ್ರತಿಭಟನೆ

    ನುಂಗಿದ್ದು ಸಾಕು ರಸ್ತೆ ನಿರ್ಮಿಸಿ – ಬಿಬಿಎಂಪಿ ವಿರುದ್ಧ ಕಸ್ತೂರಿ ನಗರ ನಿವಾಸಿಗಳ ಪ್ರತಿಭಟನೆ

    ಬೆಂಗಳೂರು: “ಬಿಬಿಎಂಪಿಗೆ ಮಾನ ಮರ್ಯಾದೆ ಇದೆಯೇ? ಮುಖ್ಯ ರಸ್ತೆಯನ್ನು ಸರಿ ಮಾಡಲು ಒಂದೂವರೆ ವರ್ಷ ಬೇಕೇ? ನುಂಗಿದ್ದು ಸಾಕು ರಸ್ತೆ ಬೇಕು. ಶಾಸಕರೇ ಸಂಸದರೇ ಎಲ್ಲಿದ್ದೀರಿ?” ಈ ರೀತಿಯ ಘೋಷಣೆ ಕೂಗಿ ಪಾಲಿಕೆ ವಿರುದ್ಧ ಕಸ್ತೂರಿ ನಗರದ ಜನತೆ ಇಂದು ಪ್ರತಿಭಟಿಸಿದ್ದಾರೆ.

    ಕಸ್ತೂರಿನಗರ ಬಡಾವಣೆಯ 2ನೇ ಮುಖ್ಯರಸ್ತೆ ಹಾಗೂ 4ನೇ ಮುಖ್ಯರಸ್ತೆಯಲ್ಲಿಯ ಮೂಲಕ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ರಸ್ತೆಯನ್ನು ಒಂದೂವರೆ ವರ್ಷದ ಹಿಂದೆ ಅಗೆಯಲಾಗಿದೆ. ಅಗೆಯಲಾಗಿದ್ದರೂ ರಸ್ತೆ ಮಾತ್ರ ಸರಿ ಮಾಡಲೇ ಇಲ್ಲ.

    https://twitter.com/Varsit_/status/1176065940821295106

    ಕೆಲ ದಿನಗಳ ಬಳಿಕ ರಸ್ತೆ ಸರಿ ಮಾಡಬಹುದು ಎಂದು ಬಡಾವಣೆಯ ನಿವಾಸಿಗಳು ನಿರೀಕ್ಷಿಸಿದ್ದರು. ದಿನ, ತಿಂಗಳು, ವರ್ಷ ಕಳೆದರೂ ಬಿಬಿಎಂಪಿ ಅಧಿಕಾರಿಗಳು ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಈ ಬಡಾವಣೆಗೆ ಮತ್ತು ನಮಗೆ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ. ಕೊನೆಗೆ ಬಡಾವಣೆಯ ನಿವಾಸಿಗಳು ನಿದ್ದೆ ಮಾಡುತ್ತಿರುವ ಬಿಎಂಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಸಿವಿ ರಾಮನ್ ನಗರದದ ಶಾಸಕ ಎಸ್ ರಘು ಮತ್ತು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಅವರಿಗೆ ದೂರು ನೀಡಿದರೂ ಕೆಲಸ ಮಾತ್ರ ಆಗಲೇ ಇಲ್ಲ.

    ಸಾಕಷ್ಟು ಬಾರಿ ದೂರು ನೀಡಿದರೂ ಕೆಲಸ ಆಗದ ಕಾರಣ ಬಡಾವಣೆಯ ನಿವಾಸಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಹೀಗಾಗಿ ಇಂದು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಸ್ತೂರಿ ನಗರದ ಮುಖ್ಯ ರಸ್ತೆಯಲ್ಲಿರುವ ವಿವೇಕಾನಂದ ಪಾರ್ಕ್ ಬಳಿ ರಸ್ತೆ ತಡೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.

    ಚುನಾವಣೆಯ ಸಮಯದಲ್ಲಿ ಮತ ಕೇಳುವಾಗ ದಾರಿ ಸರಿ ಇಲ್ಲದೇ ಇದ್ದರೂ ನುಗ್ಗಿಕೊಂಡು ಮನೆ ಮನೆಗೆ ಬಂದು ಪ್ರಚಾರ ಮಾಡುತ್ತಾರೆ. ಈಗ ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಹಾಳಾಗಿ ಹೋಗಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ಪರಿಜ್ಞಾನವೇ ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಎಲ್ಲರಿಗೂ ಸಮಸ್ಯೆ ಆಗುತ್ತಲೇ ಇದೆ. ಶಾಸಕ ರಘು ಮತ್ತು ಸಂಸದ ಮೋಹನ್ ಅವರು ಸ್ಥಳಕ್ಕೆ ಬಂದೇ ಇಲ್ಲ. ಮಳೆಗಾಲದಲ್ಲಿ ರಸ್ತೆ ಗದ್ದೆಯಂತಾದರೆ ಮಳೆ ಇಲ್ಲದಾಗ ಧೂಳು ದೇಹದ ಒಳಗಡೆ ಹೋಗಿ ಮಕ್ಕಳು ಮತ್ತು ಹಿರಿಯ ವ್ಯಕ್ತಿಗಳ ಆರೋಗ್ಯ ಕೆಡುತ್ತಿದೆ. ರಸ್ತೆಗಳು ಚೆನ್ನಾಗಿ ಇದ್ದರೂ ಅಲ್ಲಿ ವೈಟ್ ಟಾಪಿಂಗ್ ಮಾಡಲು ಆಸಕ್ತಿ ತೋರಿಸುವ ಬಿಬಿಎಂಪಿ ಅಭಿವೃದ್ಧಿಗಾಗಿ ರಸ್ತೆ ಅಗೆದು ಸರಿ ಯಾಕೆ ಮಾಡುತ್ತಿಲ್ಲ? ರಾಜಕಾರಣಿ, ಅಧಿಕಾರಿಗಳಿರುವ ಕಡೆ ಕೂಡಲೇ ಸಮಸ್ಯೆ ಬಗೆ ಹರಿಸುವ ಬಿಬಿಎಂಪಿ ಜನ ಸಾಮಾನ್ಯರ ಸಮಸ್ಯೆಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.