Tag: ಕಳ್ಳ ಸಾಗಾಣೆ

  • ರನ್ಯಾ ರಾವ್ ಬಂಧನ – ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ: ಪರಮೇಶ್ವರ್

    ರನ್ಯಾ ರಾವ್ ಬಂಧನ – ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ: ಪರಮೇಶ್ವರ್

    ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಅಂತಾ ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ಅವರು ಚಿನ್ನದ ಕಳ್ಳ ಸಾಗಾಣಿಕೆ (Gold Smuggling Case) ತನಿಖೆ ಮಾಡುತ್ತಿರುವ ಬಗ್ಗೆ ವರದಿ ಬರುತ್ತಿದೆ. ನಮ್ಮ ಡಿಜಿಪಿ ಅವರ ಮಗಳು ಭಾಗಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರ ಬಗ್ಗೆ ಡಿಆರ್‌ಐ ಅವರು ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡುವ ತನಕ ನಮಗೆ ಯಾವುದೇ ಮಾಹಿತಿ ನೀಡಲ್ಲ. ಹಾಗಾಗಿ ಡಿಆರ್‌ಐ ಅವರು ಯಾವುದೇ ಮಾಹಿತಿ ನಮಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ

     

    ನಮ್ಮ ಪೊಲೀಸ್‌ ಅವರು ತೆಗೆದುಕೊಂಡ ಮಾಹಿತಿ ಆಧಾರದ ಮೇಲೆ‌ ಮಾತನಾಡುತ್ತಿದ್ದೇನೆ. ಪ್ರಕರಣದ ತನಿಖೆ ಆದ ಬಳಿಕ ನಾವು ಪ್ರತಿಕ್ರಿಯೆ ಕೊಡಬಹುದು ಎಂದು ಹೇಳಿದರು.

  • ಬೆಲೆ ಬಾಳುವ ಕಲ್ಲುಗಳ ಕಳ್ಳಸಾಗಣೆ – ತಾಲಿಬಾನ್‌ನಿಂದ ಚೀನಿ ಪ್ರಜೆಗಳು ಅರೆಸ್ಟ್‌

    ಬೆಲೆ ಬಾಳುವ ಕಲ್ಲುಗಳ ಕಳ್ಳಸಾಗಣೆ – ತಾಲಿಬಾನ್‌ನಿಂದ ಚೀನಿ ಪ್ರಜೆಗಳು ಅರೆಸ್ಟ್‌

    ಕಾಬೂಲ್‌: ಆರ್ಥಿಕ ಸಂಬಂಧ ಬೆಳೆಸುವ ಹೆಸರಿನಲ್ಲಿ ಆ ದೇಶವನ್ನೇ ಲೂಟಿ ಮಾಡುವ ಚಾಳಿ ಬೆಳೆಸಿಕೊಂಡಿರುವ ಚೀನಾಗೆ (China) ಈಗ ಅಫ್ಘಾನಿಸ್ತಾನ (Afghanistan) ಬಿಸಿ ಮುಟ್ಟಿಸಿದೆ.

    ಕಳ್ಳಸಾಗಣೆಯಲ್ಲಿ (Smuggling Precious Stones) ತೊಡಗಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಾಲಿಬಾನ್‌ ಆಡಳಿತ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಿದೆ. 1,000 ಮೆಟ್ರಿಕ್ ಟನ್‌ ಲಿಥಿಯಂ-ಒಳಗೊಂಡಿರುವ ಬಂಡೆಗಳನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಚೀನಿ ಪ್ರಜೆಗಳು ಸೇರಿದಂತೆ ಐವರನ್ನು ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪಟ್ಟಣದಲ್ಲಿ ಬಂಧಿಸಲಾಗಿದೆ.

    ಚೀನಾ ಪ್ರಜೆಗಳು ಅಫ್ಘಾನ್‌ ವ್ಯಕ್ತಿಗಳ ಜೊತೆ ಸೇರಿ ಪಾಕಿಸ್ತಾನದ ಮೂಲಕ ಬೆಲೆಬಾಳುವ ಕಲ್ಲುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ

    ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಧ್ಯೆ ಹೋಗಿರುವ ಡ್ಯುರಾಂಡ್ ಗಡಿ ರೇಖೆಯ ಉದ್ದಕ್ಕೂ ಇರುವ ಅಫ್ಘಾನ್ ಪ್ರಾಂತ್ಯಗಳಾದ ನುರಿಸ್ತಾನ್ ಮತ್ತು ಕುನಾರ್‌ನಿಂದ ಅಕ್ರಮವಾಗಿ ಈ ಬಡೆಯನ್ನು ಹೊರತೆಗೆಯಲಾಗಿದೆ. ವಶಪಡಿಸಿಕೊಳ್ಳಲಾದ ಬಂಡೆಗಳಲ್ಲಿ 30 ಪ್ರತಿಶತದಷ್ಟು ಲಿಥಿಯಯಂ ಇದೆ ತಾಲಿಬಾನ್ ಗುಪ್ತಚರ ಅಧಿಕಾರಿಗಳು ಅಫ್ಘಾನ್‌ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದ್ದಾರೆ.

    ಅಸ್ಥಿರತೆಯಿಂದಾಗಿ ಚೀನಾ ಅಫ್ಘಾನಿಸ್ತಾನದೊಂದಿಗೆ ಎಚ್ಚರಿಕೆಯಿಂದ ವ್ಯವಹಾರ ನಡೆಸುತ್ತಿದೆ. ಅಗ್ಗದ ಸರಕುಗಳ ಸೀಮಿತ ವ್ಯಾಪಾರವನ್ನು ಹೊರತುಪಡಿಸಿ ಚೀನಿಯರು ಅಫ್ಘಾನಿಸ್ತಾನದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗ್ಳೂರು ಪೊಲೀಸರಿಂದ ಮಿಲಿಟರಿ ಮಾದರಿಯಲ್ಲಿ ಕಾರ್ಯಾಚರಣೆ

    ಬೆಂಗ್ಳೂರು ಪೊಲೀಸರಿಂದ ಮಿಲಿಟರಿ ಮಾದರಿಯಲ್ಲಿ ಕಾರ್ಯಾಚರಣೆ

    – ಭರ್ಜರಿ ಬೇಟೆಯಾಡಿ 35 ಲಕ್ಷ ರೂ. ಹಣ, 500 ಗ್ರಾಂ ಚಿನ್ನಾಭರಣ, ರಕ್ತ ಚಂದನ ವಶ

    ಬೆಂಗಳೂರು: ಚಂದನವನ ಎಂದೇ ಪ್ರಖ್ಯಾತಿ ಪಡೆದಿರುವ ಕನ್ನಡ ನಾಡಿನಲ್ಲಿ ರಕ್ತ ಚಂದನ ಹಾಗೂ ಶ್ರೀಗಂಧ ಮರ ಕಳ್ಳ ಸಾಗಾಣೆಯಲ್ಲಿ ತೊಡಗಿದ್ದ ಕುಖ್ಯಾತ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲು ಬೆಂಗಳೂರು ಸೆಂಟ್ರಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ತಂದೆ ರಿಯಾಸ್, ಮಗ ಬಾಬಾ ಎಂಬ ನಟೋರಿಯಸ್ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಕೋಲಾರ ಜಿಲ್ಲೆ ಮಲೂರು ಬಳಿಯ ಕಟ್ಟಿಗೇನಹಳ್ಳಿ ಗ್ರಾಮದವರಾಗಿದ್ದಾರೆ. ಕಾರ್ಯಾಚರಣೆ ವೇಳೆ ಸುಮಾರು 35 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಹಾಗೂ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ.

    ಏನಿದು ಪ್ರಕರಣ?
    ಕೋಲಾರ ಜಿಲ್ಲೆಯ ಕಟ್ಟಿಗೇನಹಳ್ಳಿ ಗ್ರಾಮದ ಈ ಇಬ್ಬರು ಆರೋಪಿಗಳು ಶ್ರೀಗಂಧ ಕಳ್ಳ ಸಾಗಾಣೆ ದಂಧೆಯಲ್ಲಿ ಕುಖ್ಯಾತಿ ಪಡೆದಿದ್ದು, ದಂಧೆಗೆ ಇಡೀ ಗ್ರಾಮವೇ ಸಾಥ್ ನೀಡುತ್ತಿತ್ತು. ಪೊಲೀಸರು ದಂಧೆಕೋರರ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಿದರೆ ಮಹಿಳೆಯರು, ಹೆಣ್ಣು ಮಕ್ಕಳನ್ನು ಮುಂದೇ ಬಿಟ್ಟು ಹೈಡ್ರಾಮಾ ಸೃಷ್ಟಿಸಿದ್ದರು. ಅಲ್ಲದೇ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಸ್ಥಳದಿಂದ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಇದೇ ದಂಧೆಯನ್ನು ನಡೆಸುತ್ತಿದ್ದ ಖದೀಮರು ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧ ಕಳ್ಳಸಾಗಾಣೆ ಮಾಡುತ್ತಿದ್ದರು. ಅಲ್ಲದೇ ಯಾರೇ ಶ್ರೀ ಗಂಧ ಕಳ್ಳತನ ಮಾಡಿದ್ದರು ಇಲ್ಲಿಂದಲೇ ಮಾರಾಟವಾಗುತ್ತಿತ್ತು. ಈ ಗ್ಯಾಂಗ್ ಶ್ರೀಗಂಧ ಕಳ್ಳತನ ಮಾಡಲು ಪ್ರೇರಣೆ ನೀಡಿ ಸಹಾಯ ಮಾಡುತ್ತಿದ್ದರು. ಕಳ್ಳತನ ಮಾಡಲು ತಮಿಳುನಾಡಿನ ಇಳಯರಾಜ ಎಂಬ ಗ್ಯಾಂಗ್ ಕರೆಯಿಸಿ ಡೀಲ್ ಮಾಡುತ್ತಿದ್ದರು. ಸರ್ಕಾರಿ ಕಚೇರಿಯ ಬಳಿ ಇರುತ್ತಿದ್ದ ಮರಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ 2010 ರಿಂದಲೇ ಇದರಲ್ಲಿ ತೊಡಗಿದ್ದರು.

    ಮಿಲಿಟರಿ ಮಾದರಿಯಲ್ಲಿ ಕಾರ್ಯಾಚರಣೆ: ಕೆಲ ಪ್ರಕರಣಗಳಲ್ಲಿ ಇವರ ವಿರುದ್ಧ ದೂರು ದಾಖಲಿಸಿ ಬಂಧನ ಮಾಡಲು ತೆರಳಿದ ಪೊಲೀಸರ ಮೇಲೆ ಊರಿನ ಗ್ರಾಮಸ್ಥರು ಕಲ್ಲು ತೂರಾಟ ನಡೆಸುತ್ತಿದ್ದರು. ಆದ್ದರಿಂದ ಕಳೆದ 3 ವರ್ಷಗಳಿಂದ ಈ ಗ್ರಾಮಕ್ಕೆ ಪೊಲೀಸರು ಹೋಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಸುಮಾರು 200 ಅಧಿಕಾರಿ ಸಿಬ್ಬಂದಿ, 3 ಕೆಎಸ್‍ಆರ್‍ಪಿ ವಾಹನ ಸೇರಿ ಇಡೀ ಗ್ರಾಮವನ್ನೇ ಸುತ್ತುವರೆದು ದಾಳಿ ನಡೆಸಿದ್ದರು. ತಡರಾತ್ರಿ 2 ಗಂಟೆ ಅವಧಿಯಲ್ಲಿ ದಾಳಿ ನಡೆಸಿದ್ದು, 3 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲು ಅವರ ಮನವೊಲಿಕೆ ಮಾಡಲು ಪೊಲೀಸರು ಯತ್ನಿಸಿದ್ದರು. ಆದರೆ ಆರೋಪಿಗಳು ಒಪ್ಪದ ಕಾರಣ ಮನೆ ಬಾಗಿಲು ಮುರಿದು ಕಾರ್ಯಾಚರಣೆ ನಡೆಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಶ್ರೀಗಂಧ ಕಳ್ಳತನಕ್ಕೆ ಸಹಾಯ: ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಶ್ರೀಗಂಧ ಕಳ್ಳತನ ನಡೆಸುತ್ತಿರುವ ಈ ಆರೋಪಿಗಳು ಸುಮಾರು ವಾಹನಗಳ ನಂಬರ್ ಪ್ಲೇಟ್ ಹೊಂದಿದ್ದರು. ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಕಳ್ಳತನ ಮಾಡಲು ವ್ಯಕ್ತಿಗಳನ್ನು ಕರೆಸುತ್ತಿದ್ದರು. ಕಳ್ಳತನ ಮಾಡುವ ವೇಳೆ ಓಎಲ್‍ಎಕ್ಸ್ ತಾಣದಲ್ಲಿ ಮಾರಾಟ ಮಾಡುತ್ತಿದ್ದ ವಾಹನ ನಂಬರ್ ಗಳನ್ನು ನಮೂದಿಸಿ ವಾಹನ ನೀಡುತ್ತಿದ್ದರು.

    ಬೆಂಗಳೂರು ಕೇಂದ್ರ ಪೊಲೀಸರಾದ ಡಿಸಿಪಿ ದೇವರಾಜ್, ಡಿಸಿಪಿ ಅಹ್ಮದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 5 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಈ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ (ಕೋಕಾ) ಕಾಯ್ದೆಯಲ್ಲಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ ಶ್ರೀಗಂಧ ಕಳ್ಳತನ ಮಾಡಿ ರಾಜ್ಯದ ವಿವಿಧ ಶ್ರೀಗಂಧ ಕಾರ್ಖಾನೆಗಳು ಮಾರಾಟ ಮಾಡುತ್ತಿದ್ದ ಬಗ್ಗೆ ಡೈರಿ ಕೂಡ ಲಭ್ಯವಾಗಿದ್ದು, ಯಾರಿಗೆ, ಎಷ್ಟು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದ್ದರಿಂದ ಶ್ರೀಗಂಧ ಖರೀದಿ ಮಾಡುತ್ತಿದ್ದ ಕಂಪೆನಿಯ ಮಾಲೀಕರನ್ನು ಕೋಕಾ ಕಾಯ್ದೆಯಲ್ಲಿ ತರುವ ಕಾರ್ಯವನ್ನ ಪೊಲೀಸರು ಮಾಡಿದ್ದಾರೆ.

    ಇತ್ತೀಚೆಗೆ ಅರ್ಧ ಲೈಫ್ ಎಂಬ ಕಂಪೆನಿ ಅರ್ಧ ಟನ್ ರಕ್ತ ಚಂದನಕ್ಕೆ ಈ ಗ್ಯಾಂಗಿಗೆ ಭೇಟಿಗೆ ಇಟ್ಟಿತ್ತು. ಈ ಮಾಲ್ ಸಿದ್ಧಪಡಿಸಲು ಆರೋಪಿಗಳು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ತಮಿಳುನಾಡಿನ ಇಳಯರಾಜ್ ಗ್ಯಾಂಗ್ ಬಂಧನ ಆಗಿದೆ. ಅವರಿಂದ ಪಡೆದ ಮಾಹಿತಿ ಮೇರೆಗೆ ನ್ಯಾಯಾಲಯ ಹಾಗೂ ಉನ್ನತ ಅಧಿಕಾರಿಗಳ ಅನುಮತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈಗಾಗಲೇ ಈ ದಂಧೆಯಲ್ಲಿ ತೊಡಗಿದ್ದ ಮತ್ತೊಂದು ಗ್ಯಾಂಗನ್ನು ಬಂಧಿಸಲಾಗಿದೆ. ಇದರಲ್ಲಿ ಮತ್ತೊಬ್ಬ ಆರೋಪಿ ಬಂಧನ ಬಾಕಿ ಇದೆ. ಮುಂದಿನ ಹಂತದ ಕಾರ್ಯಾಚರಣೆಯಲ್ಲಿ ಎಲ್ಲರ ಬಂಧನ ಮಾಡಲಾಗುತ್ತದೆ. ಗ್ಯಾಂಗ್ ಬಂಧನದಿಂದ ರಾಜ್ಯದಲ್ಲಿ ನಡೆದ ಹಲವು ಶ್ರೀಗಂಧ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ಬಂಧಿತ ಇಬ್ಬರು ಆರೋಪಿಗಳು ಈ ಹಿಂದೆ ಒಮ್ಮೆ ಮಾತ್ರ ಬಂಧನವಾಗಿದ್ದರು. ಆ ಬಳಿಕ ಇವರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1,125 ನಕ್ಷತ್ರ ಆಮೆ ಕಳ್ಳಸಾಗಾಣೆ – ಮೂವರ ಬಂಧನ

    1,125 ನಕ್ಷತ್ರ ಆಮೆ ಕಳ್ಳಸಾಗಾಣೆ – ಮೂವರ ಬಂಧನ

    ಹೈದರಾಬಾದ್: ಅಕ್ರಮವಾಗಿ 1,125 ನಕ್ಷತ್ರ ಆಮೆಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ 3 ಆರೋಪಿಗಳನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ಈ ಆಮೆಗಳನ್ನು ಅಕ್ರಮವಾಗಿ 3 ಆರೋಪಿಗಳು ಕಳ್ಳಸಾಗಾಣೆ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

    ಆರೋಪಿಗಳಿಂದ ಸದ್ಯ ವಶಕ್ಕೆ ಪಡೆದ ಆಮೆಗಳನ್ನು ಅರಣ್ಯ ಇಲಾಖೆ ಗೆ ವಶಕ್ಕೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಸಂಪೂರ್ಣ ತನಿಖೆ ನಡೆದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

    ಸ್ಟಾರ್ ಆಮೆ ಭಾರತದಲ್ಲಿ ದೊರೆಯುವ ಅಪರೂಪದ ಜಾತಿಗೆ ಸೇರಿದಾಗಿದ್ದು, ಕಾಳಸಂತೆಯಲ್ಲಿ ಇವುಗಳಿಗೆ ಹೆಚ್ಚಿನ ಲಕ್ಷ ರೂ.ಗಳಲ್ಲಿ ಬೆಲೆ ಇರುವುದರಿಂದ ಇತ್ತೀಚೆಗೆ ಇವುಗಳ ಕಳ್ಳಸಾಗಾಣೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆಮೆಗಳನ್ನು ಮನೆಯಲ್ಲಿ ಸಾಕಾಣೆ ಮಾಡಿದರೆ ಅದೃಷ್ಟ ಬರುತ್ತದೆ ಎಂಬ ಮೂಢ ನಂಬಿಕೆಯೂ ಕಳ್ಳಸಾಗಾಣೆಗೆ ಕಾರಣವಾಗಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಯಲ್ಲೂ ನಕ್ಷತ್ರ ಆಮೆಗಳಿಗೆ ಭಾರೀ ಬೇಡಿಕೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವಿದೇಶಿಗರ ಹೊಟ್ಟೆ ಸೇರಿದ ಕಾರವಾರದ ಕಪ್ಪೆಗಳು – ಅಪಾಯದ ಅಂಚಿನಲ್ಲಿ ಕಪ್ಪೆ ಜೀವ ಸಂಕುಲ

    ವಿದೇಶಿಗರ ಹೊಟ್ಟೆ ಸೇರಿದ ಕಾರವಾರದ ಕಪ್ಪೆಗಳು – ಅಪಾಯದ ಅಂಚಿನಲ್ಲಿ ಕಪ್ಪೆ ಜೀವ ಸಂಕುಲ

    ನವೀನ್ ಸಾಗರ್
    ಕಾರವಾರ: ಮಾನವನ ಆಹಾರ ಸರಪಳಿಯಲ್ಲಿ ಮಾಂಸಹಾರ, ಸಸ್ಯಹಾರ ಪದ್ಧತಿಗಳಿದ್ದು, ಹಾಗೆಯೇ ಪ್ರಾಣಿ ಪಕ್ಷಿಗಳಿಗೂ ಪರಿಸರವೇ ನಿರ್ಮಿಸಿದ ಆಹಾರ ಸರಪಳಿ ಪರಿಸರವನ್ನು ಸಮತೋಲನದಲ್ಲಿಟ್ಟಿವೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಎಂಬುವುದಕ್ಕೆ ಕಾರವಾರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಪ್ಪೆ ಸಾಗಣಿಕೆಯೇ ಸಾಕ್ಷಿಯಾಗಿದೆ.

    ಆಹಾರದ ನೆಪದಲ್ಲಿ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಅವುಗಳ ಸಂತತಿಯ ಅವನತಿಗೆ ನೇರ ಕಾರಣವಾಗಿದ್ದು, ಮಾನವನ ದಾಹಕ್ಕೆ ಅದೆಷ್ಟೋ ಪ್ರಾಣಿ, ಪಕ್ಷಿಗಳು ಅಳಿವಿನಂಚಿಗೆ ತಲುಪಿವೆ. ಈಗ ನಮ್ಮ ದಾಹಕ್ಕೆ ಉಭಯವಾಸಿ ಜೀವಿಯಾದ ಕಪ್ಪೆಗಳು ಕೂಡ ಬಲಿಯಾಗುತ್ತಿದೆ. ಚೀನಾ, ರಷ್ಯಾದಂತ ಹೊರದೇಶಗಳಲ್ಲಿ ಕಪ್ಪೆ ಭಕ್ಷಣೆ ಸರ್ವೇ ಸಾಮಾನ್ಯವಾಗಿದ್ದು ಈಗ ಕರ್ನಾಟಕದ ಗಡಿ ಜಿಲ್ಲೆಯಾದ ಕಾರವಾರದಂತ ನಿಸರ್ಗ ಕಾಶಿಗೂ ಇದರ ಬಿಸಿ ತಟ್ಟಿದೆ.

    ಹೌದು, ಇದೇನಿದು ಕಾರವಾರದ ಜನ ಮೀನು ತಿನ್ನುವುದು ಬಿಟ್ಟು ಕಪ್ಪೆ ತಿನ್ನಲು ಹೊರಟಿದ್ದಾರೆಯೇ ಎಂದು ನೀವು ಯೋಚಿಸಬಹುದು. ಖಂಡಿತಾ ಇಲ್ಲ, ಆದರೆ ಹಣದ ಆಸೆಗೆ ಅಕ್ರಮ ದಂಧೆಕೋರರು ಗಡಿನಾಡಿನ ಕಾರವಾರ ದಿಂದ ಗೋವಾದ ಐಷಾರಾಮಿ ಹೋಟಲ್ ಗಳಿಗೆ ಕಪ್ಪೆಗಳನ್ನು ಹಿಡಿದು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಿದ್ದಾರೆ. ಕಪ್ಪೆಗಳು ಈ ಹಿಂದೆ ವಿಜ್ಞಾನಿಗಳ ಪ್ರಯೋಗಕ್ಕಾಗಿ ಬಲಿಯಾಗುತ್ತಿದ್ದವು, 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ದೇಶದಲ್ಲಿ ಕಠಿಣವಾಗಿ ಜಾರಿಯಾದ ನಂತರ ಇದಕ್ಕೆ ಬ್ರೇಕ್ ಬಿದ್ದಿದೆ. ಆದರೆ ಗೋವಾದಂತ ಪ್ರವಾಸೋದ್ಯಮವನ್ನ ನಂಬಿರುವ ರಾಜ್ಯಗಳಲ್ಲಿ ವಿದೇಶಿ ಗ್ರಾಹಕರನ್ನು ಸೆಳೆಯಲು ಅವರ ಬಯಕೆಗಳನ್ನು ಈಡೇರಿಸಲು ಹೋಟೆಲ್ ಮಾಲೀಕರು ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ.

    ಭಕ್ಷಕ್ಕೆ ಕಪ್ಪೆ ಬಳಕೆ
    ಗೋವಾಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳನ್ನು ನೀಡುವ ಜೊತೆಯಲ್ಲಿ ಚೀನಾ, ರಷ್ಯಾದಿಂದ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಕಪ್ಪೆ ಗಳ ಭಕ್ಷವನ್ನು ನೀಡುವ ಮೂಲಕ ಹಣಗಳಿಸುತ್ತಿದ್ದಾರೆ. ಅಷ್ಟಕ್ಕೂ ಕಾರವಾರದ ಕಪ್ಪಗಳೇ ಏಕೆ ಅಕ್ರಮವಾಗಿ ಗೋವಾಕ್ಕೆ ಸರಬರಾಜುಮಾಡಲಾಗುತ್ತದೆ ಎಂಬ ಪ್ರಶ್ನೆ ಬಹುತೇಕ ಓದುಗರಲ್ಲಿ ಏಳುವುದು ಸಹಜ. ಹೌದು ಗೋವಾದಲ್ಲಿ ಕೂಡ ಕಾರವಾರದಲ್ಲಿ ಸಿಗುವಂತೆ ದೊಡ್ಡ ದೊಡ್ಡ ಕಪ್ಪೆಗಳು ಕಾಣಸಿಗುತ್ತವೆ. ಆದರೆ ಗೋವಾ ಸರ್ಕಾರದ ಅರಣ್ಯ ಇಲಾಖೆ ಹಾಗೂ ಅಲ್ಲಿನ ಎನ್‍ಜಿಒ ಗಳು ಇಲ್ಲಿನ ಕಪ್ಪೆ ಗಳನ್ನು ಹಿಡಿಯದಂತೆ ಜಾಗೃತಿ ವಹಿಸಿವೆ. ಜೊತೆಗೆ ಕಠಿಣ ಕ್ರಮಗಳನ್ನು ಕೈಗೊಂಡು ಸ್ಥಳೀಯ ಜನರಲ್ಲಿ ಅರಿವು ಮೂಡಿಸಿದೆ. ಹೀಗಾಗಿ ಗೋವಾದಲ್ಲಿ ಕಪ್ಪೆಗಳನ್ನು ಹಿಡಿಯುವ ಜಾಲ ನಿಧಾನವಾಗಿ ತಮ್ಮ ಕಾಯಕವನ್ನು ಬಿಟ್ಟಿದ್ದಾರೆ. ಇದರಿಂದಾಗಿ ಗೋವಾ ಗಡಿಗೆ ಹೊಂದಿಕೊಂಡಿರುವ ಕಾರವಾರದಲ್ಲಿ ಈ ಜಾಲ ವಿಸ್ತಾರಗೊಂಡಿದ್ದು ಬಹು ಲಾಭದಾಯಕವಾಗಿ ಮಾರ್ಪಟ್ಟಿದೆ.

    ಬುಲ್ ಫ್ರಾಗ್ ಗೆ ಹೆಚ್ಚಿನ ಬೇಡಿಕೆ: ಬುಲ್ ಫ್ರಾಗ್ ಎಂಬ ಪ್ರಬೇಧದ ದೊಡ್ಡ ಗಾತ್ರದ ಕಪ್ಪೆಗಳನ್ನು ಮಾಂಸ ಭಕ್ಷಣೆಗಾಗಿ ಉಪಯೋಗಿಸುತ್ತಾರೆ. ಈ ಕಪ್ಪೆಯು ಹೆಚ್ಚಾಗಿ ಕರಾವಳಿ ಭಾಗದ ಕಾರವಾರ, ಅಂಕೋಲ, ಹೊನ್ನಾವರ ಹಾಗೂ ಮಲೆನಾಡು ಭಾಗದ ಜೋಗ ಗಳಲ್ಲಿ ಅತಿಹೆಚ್ಚು ಕಾಣಸಿಗುತ್ತವೆ. ಜೂನ್ ತಿಂಗಳ ಮೊದಲ ಮಳೆಹನಿಗೆ ಹೊಲಗದ್ದೆಯತ್ತ ಮುಖಮಾಡುವ ಈ ಕಪ್ಪೆಗಳು ಗಾತ್ರದಲ್ಲಿ ಬಲು ದೊಡ್ಡದಿರುತ್ತವೆ. ಸುಮಾರು ನಾಲ್ಕು ವರ್ಷ ಬದುಕುತ್ತದೆ. ಜೂನ್ ತಿಂಗಳಲ್ಲಿ ಗಂಡು ಕಪ್ಪೆಯು ಹಳದಿ ಬಣ್ಣಕ್ಕೆ ತನ್ನ ದೇಹವನ್ನು ಪರಿವರ್ತಿಸಿಕೊಂಡು ಹೆಣ್ಣಿನೊಂದಿಗೆ ಮಿಲನ ಹೊಂದಿ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಸಮಯದಲ್ಲಿಯೇ ಈ ಕಪ್ಪೆಗಳನ್ನು ಅಕ್ರಮ ದಂಧೆಕೋರರು ಜೀವಂತ ಹಿಡಿದು ಬೇಡಿಕೆ ಇರುವ ಗೋವಾದ ಹೋಟಲ್ ಗಳಿಗೆ ಕಾಡಿನ ದಾರಿ ಮೂಲಕ ಸಾಗಿಸುತ್ತಾರೆ.

    ಭಾರೀ ಬೆಲೆ: ಗೋವಾ ದಲ್ಲಿ ಈ ಕಪ್ಪೆಗಳಿಗೆ ಅತೀ ಹೆಚ್ಚು ಬೇಡಿಕೆ ಹುಟ್ಟಿಕೊಂಡಿದೆ. ಕಪ್ಪೆಗಳ ಗಾತ್ರಕ್ಕೆ ಅನುಗುಣವಾಗಿ ಒಂದು ಕೆಜಿಗೆ ನಾಲ್ಕು ಸಾವಿರದಿಂದ ಏಳು ಸಾವಿರದವರೆಗೆ ಬೆಲೆ ಸಿಗುತ್ತದೆ. ಜೀವಂತವಾಗಿಯೇ ತರುವ ಈ ಕಪ್ಪೆಗಳ ಹೆಚ್ಚು ಮಾಂಸವಿರುವ ಹಿಂಭಾಗದ ಕಾಲುಗಳನ್ನು ಮಾತ್ರ ತುಂಡರಿಸಿ ತೂಕ ಹಾಕಲಾಗುತ್ತದೆ. ಒಂದು ಕೆಜಿ ಮಾಂಸಕ್ಕಾಗಿ ಕನಿಷ್ಟ 200 ಕಪ್ಪೆಗಳು ಬಲಿಯಾಗುತ್ತವೆ.

    ಜೀವಂತ ಕಪ್ಪೆಗಳಿಗಷ್ಟೇ ಬೇಡಿಕೆ: ಈ ದಂಧೆಯಲ್ಲಿ ಭಾಗಿಯಾಗಿ ಜೈಲುವಾಸ ಮಾಡಿದ ವ್ಯಕ್ತಿಯೊಬ್ಬರು ಹೇಳುವಂತೆ ಗೋವಾದಲ್ಲಿ ಬುಲ್ ಫ್ರಾಗ್ ಕಪ್ಪೆಗಳ ಹಿಂಭಾಗದ ಕಾಲುಗಳನ್ನು ಮಾತ್ರ ಸೂಪ್ ಹಾಗೂ ಫ್ರೈ ಮಾಡಲು ಬಳಸುತ್ತಾರೆ. ಜೀವಂತವಿರುವ ಕಪ್ಪೆಯ ಕಾಲನ್ನು ಮಾತ್ರ ಬಳಸಲಾಗುತ್ತದೆ, ಸತ್ತ ಕಪ್ಪೆಗೆ ಬೆಲೆ ಇರುವುದಿಲ್ಲ. ಹೀಗಾಗಿ ಜೀವಂತ ಕಪ್ಪೆಗಳನ್ನೇ ನೀಡಬೇಕು. ಗೋವಾಕ್ಕೆ ಬರುವ ವಿದೇಶಿಯರಲ್ಲಿ “ಜಂಪಿಂಗ್ ಚಿಕನ್” ಎಂದೇ ಕಪ್ಪೆಗಳ ಖಾದ್ಯ ಪ್ರಸಿದ್ಧವಾಗಿದೆ. ಐಷಾರಾಮಿ ಹೋಟೆಲ್ ಗಳಲ್ಲಿ, ಕೆಲವು ಡೇರಾಗಳಲ್ಲಿ ಮಾತ್ರ ಇವು ಸಿಗುತ್ತವೆ. ವಿದೇಶಿಯರಲ್ಲಿ ಅದರಲ್ಲೂ ರಷ್ಯಾ ಪ್ರವಾಸಿರು ಮದ್ಯ ಹಾಗೂ ಅಮಲು ಪದಾರ್ಥ ಸೇವಿಸುವಾಗ ಇದನ್ನು ಬಳಸುತ್ತಾರೆ. ಅವರಿಗೆ ಅತೀ ಇಷ್ಟವಾದ ಖಾದ್ಯವಾಗಿದೆ. ಹೀಗಾಗಿ ಎಷ್ಟು ಹಣ ಕೊಟ್ಟು ಬೇಕಾದರೂ ಕೊಂಡುಕೊಳ್ಳುತ್ತಾರೆ. ಹಿಂದೆ ಒಂದು ಕೆ.ಜಿಗೆ 500 ರಿಂದ ಹೆಚ್ಚು ಎಂದರೆ ಸಾವಿರ ಬೆಲೆ ಇರುತಿತ್ತು, ಗೋವಾದಲ್ಲಿನ ಸ್ಥಳೀಯ ಪೊಲೀಸರ ಹಾಗೂ ಎನ್‍ಜಿಒ ಗಳು ಸಕ್ರೀಯವಾಗಿ ಇವುಗಳ ರಕ್ಷಣೆಗೆ ನಿಂತಿದ್ದರಿಂದ ಬೇಡಿಕೆ ಜೊತೆ ಬೆಲೆಯೂ ದುಪ್ಪಟ್ಟಾಗಿದೆ. ಹೀಗಾಗಿ ಗೋವಾದ ಹೋಟೆಲ್ ನವರು ವಿದೇಶಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹೆಚ್ಚು ಕಪ್ಪೆಗಳ ಸಂತತಿ ಇರುವ ಕಾರವಾರದತ್ತ ಮುಖಮಾಡಿದ್ದಾರೆ ಎಂದು ಜನ ಹೇಳಿದ್ದಾರೆ.

    ವಿನಾಶದ ಅಂಚಿನತ್ತ ಪ್ರಭೇದಗಳು: ಉತ್ತರ ಕನ್ನಡ ಜಿಲ್ಲೆಯಲ್ಲಿ 35 ವಿವಿಧ ಜಾತಿಯ ಕಪ್ಪೆ ಪ್ರಭೇದಗಳಿವೆ. ಇವುಗಳಲ್ಲಿ ಮಲಬಾರ್ ಟ್ರೀಥೋಡ್, ಅಂಬೂಲಿ ಬುಷ್ ಫ್ರಾಗ್, ಕರಾವಳಿ ಚಿಮ್ಮುವ ಕಪ್ಪೆ, ಕೆಂಪುಳೆ ನೈಟ್ ಫ್ರಾಗ್ ಎಂಬ ನಾಲ್ಕು ಪ್ರಭೇದಗಳ ಕಪ್ಪೆಗಳು ಅಳಿವಿನಂಚಿನಲ್ಲಿವೆ. ಕರಾವಳಿ ಭಾಗದ ಸರ್ವೇಸಾಮಾನ್ಯವಾಗಿ ಬುಲ್ ಫ್ರಾಗ್ ಹಾಗೂ ಪಂಗಲ್ ಫ್ರಾಗ್ ಗಳು ಹೇರಳವಾಗಿವೆ. ಕೇರಳದ ಸಂಶೋಧನಾ ತಂಡವೊಂದು ಪಂಗಲ್ ಫ್ರಾಗ್ ಕಪ್ಪೆಯ ಮೇಲೆ ಸಂಶೋಧನೆ ನಡೆಸಿ ಈ ಕಪ್ಪೆಯ ದೇಹದ ಮೇಲ್ಭಾಗದಲ್ಲಿರುವ URVMI ಎಂಬ ರಾಸಾಯನಿಕ ದ್ರವವನ್ನು ಪರೀಕ್ಷೆಗೊಳಪಡಿಸಿ ಈ ರಾಸಾಯನಿಕದಿಂದ ಹೆಚ್ 1 ಎನ್1 ರೋಗವನ್ನು ಗುಣಪಡಿಸುವ ಶಕ್ತಿ ಇದೆ ಎಂದು ಕಂಡುಹಿಡಿದಿದೆ. ಬುಲ್ ಫ್ರಾಗ್ ಗಳು ಪ್ರತಿ ವರ್ಷ ಮಾಂಸಕ್ಕಾಗಿ ಭೇಟೆ ನಡೆಯುತ್ತಿದೆ.

    ಅರಣ್ಯ ಇಲಾಖೆ ಕಠಿಣ ಕ್ರಮ ಅಗತ್ಯ: ಸದ್ಯ ಕರ್ನಾಟಕ ಇಲಾಖೆ ಕಪ್ಪೆಗಳ ಬೇಟೆ ಹತ್ತಿಕ್ಕಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಕಳ್ಳಹಾದಿಯಲ್ಲಿ ಇವುಗಳನ್ನು ಗೋವಾಕ್ಕೆ ಸಾಗಾಣೆ ಮಾಡಲಾಗುತ್ತಿದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳ ಒಳಗಡೆ ಹೆಚ್ಚು ಸಾಗಾಣಿಕೆಯಾಗುತ್ತದೆ. ಗೋವಾ ಅರಣ್ಯ ಅಧಿಕಾರಿಗಳ ಸಹಕಾರ ಸಿಕ್ಕಲ್ಲಿ ಸಂಪೂರ್ಣವಾಗಿ ಬಂದ್ ಮಾಡಬಹುದು.

    ಜಾಗೃತಿ ಕೊರತೆ: ಕಪ್ಪೆಗಳ ಬಗ್ಗೆ ನಮ್ಮಲ್ಲಿ ಅಧ್ಯಯನದ ಕೊರತೆಯಿದೆ, ಜನರಲ್ಲಿ ಜಾಗೃತಿ ಮೂಡಿಸುವುದು ಅತಿ ಮುಖ್ಯ. ಕಪ್ಪೆಗಳು ಜನರಲ್ಲಿ ನಿರ್ಲಕ್ಷಿತ ಉಭಯಜೀವಿಗಳಾಗಿವೆ. ಹೀಗಾಗಿ ಇವುಗಳ ಬಗ್ಗೆ ಯಾರೂ ತಲೆಕೆಡೆಸಿಕೊಳ್ಳದಿರುವುದೇ ಇವುಗಳ ನಾಶಕ್ಕೆ ಮೂಲಕಾರಣವಾಗಿದೆ. ಅರಣ್ಯ ಇಲಾಖೆಯಲ್ಲಿ ಆಸಕ್ತ ಯುವ ಅಧಿಕಾರಿಗಳಿದ್ದಾರೆ ಇವರಿಗೆ ಇಲಾಖೆಯಿಂದ ಪ್ರೋತ್ಸಾಹ ನೀಡಿದಲ್ಲಿ ಕಪ್ಪೆಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ. ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನವಾಗಬೇಕು ಎನ್ನುತ್ತಾರೆ ಇವುಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಉರಗ ತಜ್ಞರು ಹಾಗೂ ಕಾಳಿ ರಕ್ಷಿತಾರಣ್ಯ ವಿಭಾಗದ ಕುಳಗಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಿ.ಆರ್.ನಾಯಕ್.

    ಗೋಕರ್ಣಕ್ಕೂ ವ್ಯಾಪಿಸಿದ ದಂಧೆ: ಇನ್ನು ನೆರೆಯ ಗೋವಾ ಅಲ್ಲದೇ ವಿದೇಶಿಯರು ಹೆಚ್ಚು ಆಗಮಿಸುವ ಗೋಕರ್ಣದಂತಹ ಧಾರ್ಮಿಕ ಕ್ಷೇತ್ರಕ್ಕೂ ಈ ದಂಧೆ ಅಂಟಿಕೊಂಡಿದೆ. ಗಾಂಜಾ, ಅಫೀಮು ಸುಲಭವಾಗಿ ಸಿಗುವಂತೆ ಇಲ್ಲಿಯೂ ಕೂಡ ಬುಲ್ ಫ್ರಾಗ್ ಭಕ್ಷಣೆ ನಡೆಯುತ್ತಿದೆ. ಕೇವಲ ವಿದೇಶಿಯರಿಗೆ ಮಾತ್ರ ಈ ಮಾಂಸವನ್ನು ನೀಡಲಾಗುತ್ತಿದೆ. ಅಕ್ರಮ ಸಾಗಾಣೆದಾರರು ಕೈತುಂಬಾ ಹಣ ಗಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ ಅಕ್ರಮ ಕಪ್ಪೆ ಸಾಗಾಟದಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿದೆ. ಇದನ್ನು ಬಿಟ್ಟರೇ ಅರಣ್ಯ ಇಲಾಖೆ ನಿರ್ಲಕ್ಷ ಎದ್ದು ತೋರುತ್ತಿದ್ದು ಪ್ರಾಣಿಗಳ ರಕ್ಷಣೆಗೆ ಗಮನ ಹರಿಸಿದ ಒಂದು ಭಾಗದಷ್ಟಾದರೂ ಗಮನಹರಿಸಿದಲ್ಲಿ ಅವನತಿಯಲ್ಲಿರುವ ಕಪ್ಪೆಗಳ ರಕ್ಷಣೆಯಾದಂತಾಗುತ್ತದೆ.