Tag: ಕಳ್ಳಸಾಗಣೆ

  • ಕೋಟ್ಯಂತರ ಮೌಲ್ಯದ ಚಿನ್ನವನ್ನು ಬೆಲ್ಟ್‌ನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಖತರ್ನಾಕ್ ಕಳ್ಳ ಅಂದರ್!

    ನವದೆಹಲಿ: ಕೋಟ್ಯಂತರ ಮೌಲ್ಯದ ಚಿನ್ನವನ್ನು ಬೆಲ್ಟ್‌ನಲ್ಲಿಟ್ಟುಕೊಂಡು ಕಳ್ಳಸಾಗಣಿಕೆ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದುಬೈಯಿಂದ ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಯಾಣಿಕನೊಬ್ಬ ಲೆದರ್ ಬೆಲ್ಟ್‌ನಲ್ಲಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಶನಿವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಜರ್ಮನಿಯಿಂದ ಭಾರತಕ್ಕೆ ಬಂತು ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ – ಏನಿದರ ವಿಶೇಷತೆ?

    ಶನಿವಾರ ಬೆಳಗ್ಗೆ ದುಬೈಯಿಂದ ಆಗಮಿಸಿದ್ದ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಪಾಸಣೆಯ ಸಂರ್ಭದಲ್ಲಿ ಪ್ರಯಾಣಿಕ ಲೆದರ್ ಬೆಲ್ಟ್‌ನಲ್ಲಿ ಬಚ್ಚಿಟ್ಟಿದ್ದ ಸರದ ರೂಪದ 2.330 ಕೆ.ಜಿ. ಚಿನ್ನವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಠ ಮಾಡುವ ಗುರುಗಳಿಗೆ ಇನ್ಮುಂದೆ ಸರ್, ಮೇಡಂ ಎನ್ನುವಂತಿಲ್ಲ!

    ವಿಚಾರಣೆ ವೇಳೆ ಆರೋಪಿ ಈ ಹಿಂದೆ 4 ಬಾರಿ ಇದೇ ರೀತಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಒಟ್ಟು 2.6 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ

    ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ

    – ಸೈದಾಪುರ ಪಿಎಸ್‍ಐ ಭೀಮರಾಯ ಕಾರ್ಯಾಚರಣೆ

    ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಜೊಳದಡಗಿ ಗ್ರಾಮದಿಂದ ಸೈದಾಪುರ ಮೂಲಕ ಹೈದರಾಬಾದ್ ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಜಿಲ್ಲೆಯಿಂದ ಟ್ರಕ್ ಮೂಲಕ 18 ಗೋವುಗಳನ್ನು ಹೈದರಾಬಾದ್ ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೈದಾಪುರ ಪೊಲೀಸರು, ವಾಹನವನ್ನು ಮಾರ್ಗ ಮಧ್ಯೆ ತಡೆಗಟ್ಟಿ ಗೋವುಗಳ ರಕ್ಷಣೆ ಮಾಡಿದ್ದಾರೆ.

    ರಕ್ಷಣೆಯಾದ ಗೋವುಗಳನ್ನು ಗುರು ರಾಘವೇಂದ್ರ ಗೋ ಶಾಲೆಗೆ ಒಪ್ಪಿಸಲಾಗಿದೆ. ಪಿಎಸ್‍ಐ ಭೀಮರಾಯ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಗೋಹತ್ಯೆ ನಿಷೇಧ ಕಾನೂನಿನಡಿ ಪ್ರಕರಣ ದಾಖಲು ಮಾಡಲಾಗಿದೆ.

  • ಕಸಾಯಿಖಾನೆಗೆ ಅಕ್ರಮವಾಗಿ ಗೋ ಸಾಗಾಟ – ಸ್ಥಳೀಯರಿಂದ ಬಿತ್ತು ಗೂಸ

    ಕಸಾಯಿಖಾನೆಗೆ ಅಕ್ರಮವಾಗಿ ಗೋ ಸಾಗಾಟ – ಸ್ಥಳೀಯರಿಂದ ಬಿತ್ತು ಗೂಸ

    – 11 ಗೋವುಗಳನ್ನು ರಕ್ಷಿಸಿದ ಗ್ರಾಮಸ್ಥರು

    ಕಾರವಾರ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಗ್ರಾಮಸ್ಥರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಿಳಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಿದ್ದಾಪುರದ ಮಂಜುನಾಥ ಗೌಡ, ಮಂಜು ನೀರಾ ಗೌಡ, ಹಾನಗಲ್ಲಿನ ಚನ್ನಬಸಪ್ಪ ಚಂದ್ರಶೇಖರ ಗುಜ್ಜಣ್ಣನವರ್, ಮಹಮ್ಮದ್ ಗೌಸ್ ಸಲೀಮ್ ಪಾಶಾ ಬಂಧಿತ ಆರೋಪಿಗಳು.

    ಕಸಾಯಿಖಾನೆಗೆ ಸಾಗಿಸುತ್ತಿದ್ದ 11 ಜಾನುವಾರಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದ ಬಗ್ಗೆ ಸ್ಥಳೀಯರಿಗೆ ತಿಳಿದು ವಾಹನ ಅಡ್ಡಗಟ್ಟಿ ವಿಚಾರಿಸಿದಾಗ ಸುಳ್ಳು ಮಾಹಿತಿ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ಆರೊಪಿಗಳನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಹೊನ್ನಾವರದಿಂದ ಹಾನಗಲ್ಲಿನ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತಿತ್ತು ಎಂದು ಆರೋಪಿಸಲಾಗಿದೆ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!

    ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!

    ಮುಂಬೈ: ವಿದೇಶಕ್ಕೆ ಮಕ್ಕಳನ್ನು ಮಾರಾಟ ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯು ಗುಜರಾತ್‍ನ ರಾಜುಭಾಯ್ ಗಮ್ಳೆವಾಲಾ ಅಲಿಯಾಸ್ ರಾಜುಭಾಯ್ ಆಗಿದ್ದಾನೆ. ಆರೋಪಿಯು 2007 ರಿಂದಲೂ ಮಕ್ಕಳ ಮಾರಾಟ ದಂಧೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾನೆ. ಒಂದು ಮಗುವನ್ನು ಅಮೆರಿಕಕ್ಕೆ 45 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

    ಭಾರತದಿಂದ ಅಮೆರಿಕಕ್ಕೆ ಸುಮಾರು 300 ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯರನ್ನು ತಲಾ 45 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಹೆಚ್ಚಿನವರು ಗುಜರಾತ್ ಮೂಲದ ಮಕ್ಕಳಾಗಿದ್ದಾರೆ. ಗುಜರಾತಿನ ಬಡ ಕುಟುಂಬಗಳು ತಮ್ಮ 11 ರಿಂದ 16 ವರ್ಷದ ಮಕ್ಕಳನ್ನು ಸಾಕಲಾಗದೇ ರಾಜುಭಾಯ್‍ನಿಗೆ ಮಾರಾಟ ಮಾಡಿದ್ದಾರೆ. ಆದರೆ ಮಾರಾಟವಾದ ನೂರಾರು ಮಕ್ಕಳ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಾರಾಟ ಹೇಗೆ ನಡೆಯುತ್ತಿತ್ತು? ಹೇಗೆ ಅಮೆರಿಕಕ್ಕೆ ಕಳುಹಿಸುತ್ತಿದ್ದರು?
    ಅಮೆರಿಕದಿಂದ ಮಕ್ಕಳನ್ನು ಕೊಂಡುಕೊಳ್ಳಲು ಗಿರಾಕಿಗಳು ಆರ್ಡರ್ ಮಾಡಿದ ಕೂಡಲೇ ರಾಜುಭಾಯ್ ಹಾಗೂ ಆತನ ಸಹಚರರು ಬಡ ಕುಟುಂಬದ ಮಕ್ಕಳನ್ನು ಹುಡುಕುತ್ತಿದ್ದರು. ಹೆಚ್ಚಾಗಿ ಇವರಿಗೆ ಗುಜರಾತಿನ ಮೂಲದವರು ತಮ್ಮ ಹೆತ್ತಮಕ್ಕಳನ್ನೇ ಮಾರಾಟ ಮಾಡುತ್ತಿದ್ದರು. ಮಗುವನ್ನು ಪಡೆದುಕೊಂಡ ಬಳಿಕ, ಮಗುವಿನ ಹೋಲಿಕೆಯನ್ನೇ ಹೋಲುವ ಪಾಸ್‍ಪೋರ್ಟ್ ಹೊಂದಿರುವ ಮಕ್ಕಳ ಪೋಷಕರನ್ನು ಸಂಪರ್ಕಿಸುತ್ತಿದ್ದರು. ಅವರಿಂದ ಅಸಲಿ ಪಾಸ್‍ಪೋರ್ಟ್ ಪಡೆದುಕೊಂಡು ಮಕ್ಕಳಿಗೆ ಪಾಸ್‍ಪೋರ್ಟ್‍ನಲ್ಲಿರುವಂತೆಯೇ ಮೇಕ್‍ಅಪ್ ಮಾಡಿಸುತ್ತಿದ್ದರು. ನಂತರ ಮಗುವನ್ನು ಅಮೆರಿಕಕ್ಕೆ ಕಳುಹಿಸಿ, ಅಸಲಿ ಪಾಸ್‍ಪೋರ್ಟ್‍ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುತ್ತಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಬಾಲಿವುಡ್ ನಟಿ ಪ್ರೀತಿ ಸೂದ್‍ರವರು ಇದೇ ತಿಂಗಳ ಮಾರ್ಚ್ ನಲ್ಲಿ ನಗರದ ಸಲೂನ್‍ಗೆ ಹೋಗಿದ್ದಾರೆ. ಈ ವೇಳೆ ಸಲೂನ್‍ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೇಕಪ್ ಮಾಡುತ್ತಿದ್ದನ್ನು ಕಂಡು ಪ್ರಶ್ನಿಸಿದ್ದಾರೆ. ಮಕ್ಕಳ ಜೊತೆ ಬಂದಿದ್ದ ಮೂವರು ವ್ಯಕ್ತಿಗಳು, ಇವರು ಅಮೆರಿಕ ದೇಶದವರಾಗಿದ್ದು, ಅವರ ಪೋಷಕರ ಬಳಿ ಕಳುಹಿಸಿ ಕೊಡಲು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ನಟಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮೂವರು ವ್ಯಕ್ತಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳ ಕಳ್ಳ ಸಾಗಾಣಿಕೆ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಿವೃತ್ತ ಪೊಲೀಸ್ ಇನ್ಸ್‍ಫೆಕ್ಟರ್ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

    ಆದರೆ ಪ್ರಕರಣದ ಕಿಂಗ್‍ಪಿನ್ ರಾಜುಭಾಯ್ ತಲೆಮರೆಸಿಕೊಂಡಿದ್ದ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ವಾಟ್ಸಪ್ ಮೂಲಕ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಈ ಮೊದಲು 2007ರಲ್ಲಿ ಪಾಸ್‍ಪೋರ್ಟ್ ನಕಲು ಮಾಡಿದ್ದ ಆರೋಪದ ಮೇರೆಗೆ ಶಿಕ್ಷೆ ಅನುಭವಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 34 ಹಾಗೂ 373ರಡಿ ಪ್ರಕರಣ ದಾಖಲಾಗಿದ್ದು, ಆಗಸ್ಟ್ 18ರವರೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಪರಮ್‍ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv